ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Paralympics ಸೆಮಿಫೈನಲ್‌ನಲ್ಲಿ ಮನೀಷಾ vs ತುಳಸಿಮತಿ: ಭಾರತಕ್ಕೆ ಪದಕ ಖಚಿತ

Published : 1 ಸೆಪ್ಟೆಂಬರ್ 2024, 9:54 IST
Last Updated : 1 ಸೆಪ್ಟೆಂಬರ್ 2024, 9:54 IST
ಫಾಲೋ ಮಾಡಿ
Comments

ಪ್ಯಾರಿಸ್: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಬ್ಯಾಡ್ಮಿಂಟನ್ ಪಟು ಮನೀಷಾ ರಾಮದಾಸ್, ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ಮಹಿಳೆಯರ ಸಿಂಗಲ್ಸ್ ಎಸ್‌ಯು5 ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿರುವ ಮನೀಷಾ, ಸೆಮಿಫೈನಲ್‌ಗೆ ಪ್ರವೇಶಿಸಿ ಪದಕದ ನಿರೀಕ್ಷೆ ಮೂಡಿಸಿದ್ದಾರೆ.

19 ವರ್ಷದ ಮನೀಷಾ ಅವರು ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಜಪಾನ್‌ನ ಮಾಮಿಕೊ ಟೊಯೊಡಾ ವಿರುದ್ಧ 21-13, 21-16ರ ಅಂತರದ ಗೆಲುವು ಗಳಿಸಿದರು.

ಎರಡನೇ ಶ್ರೇಯಾಂಕ ಪಡೆದಿರುವ ಮನೀಷಾ, 30 ನಿಮಿಷಗಳಲ್ಲಿ ಪಂದ್ಯ ವಶಪಡಿಸಿಕೊಂಡರು.

ಭಾರತಕ್ಕೆ ಮತ್ತೊಂದು ಪದಕ ಖಚಿತ...

ಪ್ಯಾರಾ ಬ್ಯಾಡ್ಮಿಂಟನ್ ಎಸ್‌ಯು5 ವಿಭಾಗದ ಸೆಮಿಫೈನಲ್‌ನಲ್ಲಿ ಭಾರತೀಯರೇ ಸ್ಪರ್ಧಿಸಲಿದ್ದು, ಮಗದೊಂದು ಪದಕ ಸಿಗುವುದು ನಿಚ್ಚಳವೆನಿಸಿದೆ.

ಮಹಿಳೆಯರ ಸಿಂಗಲ್ಸ್ ಎಸ್‌ಯು5 ವಿಭಾಗದ ಸೆಮಿಫೈನಲ್‌ನಲ್ಲಿ ಮನೀಷಾ ರಾಮದಾಸ್ ಅವರು ಮುರುಗೇಶನ್ ತುಳಸಿಮತಿ ಸವಾಲನ್ನು ಎದುರಿಸಲಿದ್ದಾರೆ. ಈ ಪಂದ್ಯವು ಸೆಪ್ಟೆಂಬರ್ 2ರಂದು ನಡೆಯಲಿದೆ.

ಮತ್ತೊಂದೆಡೆ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ಎಸ್‌ಎಲ್3 ವಿಭಾಗದಲ್ಲಿ ಮನದೀಪ್ ಕೌರ್ ಮತ್ತು ಎಸ್‌ಎಲ್4 ವಿಭಾಗದಲ್ಲಿ ಪಲಕ್ ಕೊಹ್ಲಿ ಸೋಲು ಅನುಭವಿಸಿದ್ದು ನಿರ್ಗಮಿಸಿದ್ದಾರೆ.

ರ‍್ಯಾಕೆಟ್ ಹಿಡಿಯುವ ಅಥವಾ ಇನ್ನೊಂದು ತೋಳಿನ ಮೇಲೆ ಅಥವಾ ಕೆಳಭಾಗ ಊನವಾಗಿರುವ ಕ್ರೀಡಾಪಟುಗಳು ಎಸ್‌ಯು5 ವಿಭಾಗಕ್ಕೆ ಸೇರುತ್ತಾರೆ. ಮನೀಷಾ ಅವರು ಜನ್ಮಜಾತವಾಗಿ ‘ಅರ್ಬ್ಸ್‌ ಪಾಲ್ಸಿ’ (ತೋಳಿನ ನರಕ್ಕೆ ಸಂಬಂಧಿಸಿದ)ಗೆ ಒಳಗಾದವರು.

ಎಸ್‌ಎಲ್‌3 ವಿಭಾಗದಲ್ಲಿ ಕಣದಲ್ಲಿರುವ ಮನ್‌ದೀಪ್ ಅವರು ನೈಜೀರಿಯಾದ ಬೊಲಾಜಿ ಮರಿಯಮ್ ಎಂಜೋಲಾ ಅವರಿಗೆ ಹೆಚ್ಚು ಪೈಪೋಟಿಯೊಡ್ಡಲಿಲ್ಲ. ಮೂರನೇ ಶ್ರೇಯಾಂಕದ ಬೊಲಾಜಿ 21–8, 21–9 ರಲ್ಲಿ ಗೆಲ್ಲು 23 ನಿಮಿಷ ಬಳಸಿಕೊಂಡರು. ಗುಂಪುಹಂತದಲ್ಲೂ ಮನದೀಪ್‌, ಇದೇ ಎದುರಾಳಿಗೆ ಸೋತಿದ್ದರು.

ಎಸ್‌ಎಲ್ 3 ವಿಭಾಗದಲ್ಲಿ ಕಾಲಿನ ಕೆಳಭಾಗದ ಊನ ಇರುವವರು ಆಡುತ್ತಾರೆ. ಇದರಲ್ಲಿ ಅಂಕಣದ ಅಗಲ ಮಾಮೂಲಿಗಿಂತ ಅರ್ಧದಷ್ಟು ಕಡಿಮೆಯಿರುತ್ತದೆ.

ಎಸ್‌ಎಲ್‌ 4 ವಿಭಾಗದಲ್ಲಿ, ವಿಶ್ವ ಪ್ಯಾರಾ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತೆ ಪಲಕ್ 19–21, 15–21ರಲ್ಲಿ ಇಂಡೊನೇಷ್ಯಾದ ಖಾಲಿಮತುಸ್‌ ಸದಿಯಾ ಅವರಿಗೆ 28 ನಿಮಿಷಗಳಲ್ಲಿ ಮಣಿದರು. ಈ ವಿಭಾಗದಲ್ಲಿ ಸ್ಪರ್ಧಿಸುವವರಿಗೆ ಎಸ್‌ಎಲ್3 ವಿಭಾಗಕ್ಕಿಂತ ಕಡಿಮೆ ಊನವಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT