ಬುಧವಾರ, 26 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌: ಸವಾಲು ಮುನ್ನಡೆಸಲಿರುವ ಪೃಥ್ವಿರಾಜ್

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಭಾರತ ಶಾಟ್‌ಗನ್‌ ತಂಡ ಪ್ರಕಟ
Published 18 ಜೂನ್ 2024, 14:51 IST
Last Updated 18 ಜೂನ್ 2024, 14:51 IST
ಅಕ್ಷರ ಗಾತ್ರ

ನವದೆಹಲಿ: ಅನುಭವಿ ಟ್ರ್ಯಾಪ್‌ ಶೂಟರ್‌ ಪೃಥ್ವಿರಾಜ್ ತೊಂಡೈಮನ್ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತ ಶಾಟ್‌ಗನ್ ತಂಡದ ಸವಾಲನ್ನು ಮುನ್ನಡೆಸಲಿದ್ದಾರೆ. ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ), ಒಲಿಂಪಿಕ್ಸ್‌ಗೆ ಐದು ಮಂದಿಯ ಭಾರತ ತಂಡವನ್ನು ಮಂಗಳವಾರ ಪ್ರಕಟಿಸಿತು.

ಎಲ್ಲ ಐದೂ ಮಂದಿಗೆ ಇದು ಮೊದಲ ಒಲಿಂಪಿಕ್ಸ್‌ ಆಗಲಿದೆ. ಜುಲೈ 26 ರಿಂದ ಆಗಸ್ಟ್‌ 11ರವರೆಗೆ ಪ್ಯಾರಿಸ್‌ನಲ್ಲಿ ಈ ಕೂಟ ನಡೆಯಲಿದೆ.

ತೊಂಡೈಮನ್ ಪುರುಷರ ಟ್ರ್ಯಾಪ್‌ ವಿಭಾಗದಲ್ಲಿ, ರಾಜೇಶ್ವರಿ ಕುಮಾರಿ ಮಹಿಳೆಯರ ಟ್ರ್ಯಾಪ್‌ ಸ್ಪರ್ಧೆಯಲ್ಲಿ ಗುರಿಯಿಡಲಿದ್ದಾರೆ. ಅನಂತಜೀತ್‌ ಸಿಂಗ್ ನರುಕಾ ಅವರು ಪುರುಷರ ವಿಭಾಗದ ಏಕೈಕ ಸ್ಕೀಟ್‌ ಶೂಟರ್‌ ಆಗಿದ್ದಾರೆ. ಮಹಿಳೆಯರ ಸ್ಕೀಟ್‌ನಲ್ಲಿ ರೈಝಾ ಧಿಲ್ಲೋನ್ ಮತ್ತು ಮಹೇಶ್ವರಿ ಚೌಹಾನ್‌ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ನಡೆಸಲಾಗುವ ಸ್ಕೀಟ್‌ ಮಿಶ್ರ ವಿಭಾಗದ ಸ್ಪರ್ಧೆಯಲ್ಲಿ ಮಹೇಶ್ವರಿ ಮತ್ತು ಅನಂತಜೀತ್ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.

‘ತಂಡದಲ್ಲಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಇತ್ತು. ಲೊನಾಟದಲ್ಲಿ (ಇಟಲಿ) ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಶ್ವಕಪ್‌ನಲ್ಲಿ ಯಾರಾದರೂ ಪದಕ ಗೆದ್ದಿದ್ದಲ್ಲಿ ಬದಲಾವಣೆ ಅಗತ್ಯವಾಗುತಿತ್ತು’ ಎಂದು ಎನ್‌ಆರ್‌ಎಐ ಮಹಾ ಪ್ರಧಾನ ಕಾರ್ಯದರ್ಶಿ ಸುಲ್ತಾನ್ ಸಿಂಗ್ ಹೇಳಿದರು.

ಮಹಿಳಾ ಟ್ರ್ಯಾಪ್ ಶೂಟರ್‌ ಶ್ರೇಯಸಿ ಸಿಂಗ್ ಅವರ ಹೆಸರನ್ನು ಆಯ್ಕೆ ಸಮಿತಿ ಅನುಮೋದಿಸಿದ್ದು, ಕೋಟಾಕ್ಕಾಗಿ ಎನ್‌ಆರ್‌ಎಐ, ಅಂತರರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್ಸ್‌ ಫೆಡರೇಷನ್‌ಗೆ ಪತ್ರ ಬರೆದಿದೆ. ಅವರಿಂದ ಒಪ್ಪಿಗೆ ದೊರೆತರೆ ಅವರ ಹೆಸರನ್ನೂ ಸೇರ್ಪಡೆ ಮಾಡಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT