ಭಾನುವಾರ, 7 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಂಬಲ್ಡನ್‌ ಟೆನಿಸ್‌ ಚಾಂಪಿಯನ್‌ಷಿಪ್: ಪೆಗುಲಾಗೆ ಸೋಲುಣಿಸಿದ ವಾಂಗ್‌ ಷಿನ್ಯು

Published 4 ಜುಲೈ 2024, 21:38 IST
Last Updated 4 ಜುಲೈ 2024, 21:38 IST
ಅಕ್ಷರ ಗಾತ್ರ

ಲಂಡನ್‌: ಅಮೆರಿಕದ ಜೆಸ್ಸಿಕಾ ಪೆಗುಲಾ ವಿಂಬಲ್ಡನ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಿಂದ ಹೊರಬಿದ್ದ ಅತಿ ಹೆಚ್ಚಿನ ಶ್ರೇಯಾಂಕದ ಆಟಗಾರ್ತಿ ಎನಿಸಿದರು. ಚೀನಾದ ವಾಂಗ್‌ ಷಿನ್ಯು ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಪೆಗುಲಾ ಅವರನ್ನು 6–4, 6–7 (7/9), 6–1 ರಿಂದ ಹಿಮ್ಮೆಟ್ಟಿಸಿದರು.

ವಿಶ್ವ ಕ್ರಮಾಂಕದಲ್ಲಿ ಐದನೇ ಸ್ಥಾನ ದಲ್ಲಿರುವ ಪೆಗುಲಾ ಮೊದಲ ಸೆಟ್‌ ಸೋತ ನಂತರ ಕೆಲಕಾಲ ಹೋರಾಟ ತೋರಿದರು. ಎರಡನೇ ಸೆಟ್‌ ಟೈಬ್ರೇಕರ್‌ನಲ್ಲಿ ಮ್ಯಾಚ್‌ ಪಾಯಿಂಟ್‌ ಉಳಿಸಿಕೊಂಡ ಅವರು ಸೆಟ್‌ ಪಡೆದು 1–1 ಸಮ ಮಾಡಿದರು. ಆದರೆ 42ನೇ ಕ್ರಮಾಂಕದ ಚೀನಾ ಆಟಗಾರ್ತಿ ಮೂರನೇ ಸೆಟ್‌ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿ 5–0 ಲೀಡ್‌ ಪಡೆದರಲ್ಲದೇ ಪಂದ್ಯವನ್ನೂ ಗೆದ್ದರು. ಇದು ‘ಟಾಪ್‌ ಟೆನ್‌’ ಆಟಗಾರ್ತಿಯೊಬ್ಬರ ವಿರುದ್ಧ ಷಿನ್ಯು ಅವರಿಗೆ ಸಂದ ಮೊದಲ ಜಯ ಎನಿಸಿತು.

‘ಹುಲ್ಲಿನಂಕಣದಲ್ಲಿ ಜೆಸ್ಸಿಕಾ ಎದುರು ಏಗುವುದು ಕಷ್ಟ. ಅವರು ಕೆಳಮಟ್ಟದಲ್ಲಿ ಚೆಂಡನ್ನು ಹೊಡೆದಟ್ಟುತ್ತಿದ್ದರು. ಕೊನೆಗೂ ಗೆದ್ದುದರಿಂದ ಸಂತಸವಾಗಿದೆ’ ಎಂದು 22 ವರ್ಷದ ಚೀನಾ ಆಟಗಾರ್ತಿ ಹೇಳಿದರು.

ವಾಂಗ್ ಷಿನ್ಯು ಅವರು ಮುಂದಿನ ಸುತ್ತಿನಲ್ಲಿ ಬ್ರಿಟನ್‌ನ ಹ್ಯಾರಿಯಟ್ ಡಾರ್ಟ್ ಎದುರು ಆಡಲಿದ್ದಾರೆ. ಹ್ಯಾರಿ ಯಟ್ ಎರಡನೇ ಸುತ್ತಿನಲ್ಲಿ ಸ್ವದೇಶದ ಕೇಟಿ ಬೌಲ್ಟರ್ ಎದುರು 4–6, 6–1, 7–6 (10/8) ರಿಂದ ಜಯಗಳಿಸಿದರು.

ಈ ಮೊದಲು, ಮರ್ಕೆತಾ ವೊಂಡ್ರುಸೋವಾ ಅವರು ಕಳೆದ 30 ವರ್ಷಗಳಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದ ಮೊದಲ ಹಾಲಿ ಚಾಂಪಿಯನ್ ಎನಿಸಿದ್ದರು. ವೊಂಡ್ರುಸೋವಾ ಈ ಬಾರಿ ಆರನೇ ಶ್ರೇಯಾಂಕ ಪಡೆದಿದ್ದರು.

ಹುರ್ಕಾಝ್ ನಿರ್ಗಮನ: ಪುರುಷರ ಸಿಂಗಲ್ಸ್‌ನಲ್ಲಿ ಏಳನೇ ಶ್ರೇಯಾಂಕದ ಹ್ಯೂಬರ್ಟ್‌ ಹುರ್ಕಾಝ್‌ ಮೊಣಕಾಲು ನೋವಿನಿಂದಾಗಿ ಫ್ರಾನ್ಸ್‌ನ ಅರ್ಥರ್‌ ಫಿಲ್ಸ್‌ ವಿರುದ್ಧದ ಪಂದ್ಯವನ್ನು ಅರ್ಧದಲ್ಲೇ ಬಿಟ್ಟುಕೊಟ್ಟರು. ಆಗ ಹ್ಯೂಬರ್ಟ್‌ 7–6 (2), 6–4, 2–6, 6–6 ರಲ್ಲಿ ಮುಂದಿದ್ದರು. ನಾಲ್ಕನೇ ಸೆಟ್‌ ಟೈಬ್ರೇಕರ್‌ನಲ್ಲಿ ಫಿಲ್ಸ್ 9–8 ಮುಂದಿದ್ದರು.

ಹೊಡೆತವೊಂದನ್ನು ಹಿಂತಿರುಗಿಸಲು ಡೈವ್‌ ಮಾಡುವ ಯತ್ನದಲ್ಲಿ ಜಾರಿಬಿದ್ದು ಹುರ್ಕಾಝ್ ಅವರ ಬಲಮೊಣಗಂಟಿಗೆ ನೋವು ಉಂಟಾಯಿತು. ಕೆಲಹೊತ್ತಿನಲ್ಲೇ ಅವರು ಪಂದ್ಯದಿಂದ ನಿವೃತ್ತರಾದರು.

ಜೊಕೊವಿಚ್‌ ಮುನ್ನಡೆ: ಬಲ ಮೊಣಗಂಟಿನ ನೋವಿದ್ದರೂ, ಎರಡನೇ ಶ್ರೇಯಾಂಕದ ನೊವಾಕ್ ಜೊಕೊವಿಚ್‌ ನಾಲ್ಕು ಸೆಟ್‌ಗಳ ಹೋರಾಟದಲ್ಲಿ ಬ್ರಿಟನ್‌ನ ಜೇಕಬ್ ಫಿರ್ನ್‌ಲಿ ಅವರನ್ನು ಸೋಲಿಸಿ ಮೂರನೇ ಸುತ್ತಿಗೆ ಮುನ್ನಡೆದರು.

ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲ್ಲುವ ಕಡೆ ಚಿತ್ತಹರಿಸಿರುವ ಸರ್ಬಿಯಾದ ಆಟಗಾರ 6–3, 6–4, 5–7, 7–5 ರಿಂದ ವೈಲ್ಡ್‌ಕಾರ್ಡ್‌ ಎಂಟ್ರಿ ಪಡೆದಿದ್ದ ಜೇಕಬ್ ಅವರ ಸವಾಲನ್ನು ಬದಿಗೊತ್ತಿದರು.

ಭಾಂಬ್ರಿ–ಒಲಿವೆಟ್ಟಿ ಮುನ್ನಡೆ

ಲಂಡನ್‌: ಭಾರತದ ಯೂಕಿ ಭಾಂಬ್ರಿ ಮತ್ತು ಫ್ರಾನ್ಸ್‌ನ ಅಲ್ಬಾನೊ ಒಲಿವೆಟ್ಟಿ ಜೋಡಿ ಬುಧವಾರ ನಡೆದ ಪುರುಷರ ಡಬಲ್ಸ್‌ ಮೊದಲ ಸುತ್ತಿನಲ್ಲಿ 6–4, 6–4 ರಿಂದ ಕಜಕಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ಮತ್ತು ಅಲೆಕ್ಸಾಂಡರ್ ಶೆವ್ಚೆಂಕೊ ಅವರನ್ನು ಸೋಲಿಸಿತು.

ಭಾಂಬ್ರಿ–ಒಲಿವೆಟ್ಟಿ ಜೋಡಿ ಮುಂದಿನ ಸುತ್ತಿನಲ್ಲಿ ಎಂಟನೇ ಶ್ರೇಯಾಂಕದ ಕೆವಿನ್ ಕ್ರಾವಿಯೆಟ್ಜ್ ಮತ್ತು ಟಿಮ್ ಪ್ಯೂಟ್ಜ್ (ಜರ್ಮನಿ) ಅವರನ್ನು ಎದುರಿಸಲಿದೆ.

ಇದಕ್ಕೆ ಮೊದಲು ಭಾರತದ ರೋಹನ್‌ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಅವರ ಜೊತೆಗಾರ ಮ್ಯಾಥ್ಯೂ ಎಬ್ಡೆನ್‌ ಕೂಡ ಎರಡನೇ ಸುತ್ತು ಪ್ರವೇಶಿಸಿ ದ್ದರು. ಈ ಜೋಡಿ 7-5, 6-4ರಿಂದ ನೆದರ್ಲೆಂಡ್ಸ್‌ನ ರಾಬಿನ್‌ ಹಾಸೆ ಹಾಗೂ ಸ್ಯಾಂಡರ್‌ ಅರೆಂಡ್ಸ್‌ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿತು. ಪಂದ್ಯ 1 ಗಂಟೆ 11 ನಿಮಿಷ ನಡೆಯಿತು.

ಶ್ರೀರಾಮ್ ಬಾಲಾಜಿ ಮತ್ತು ಇಂಗ್ಲೆಂಡ್‌ನ ಲ್ಯೂಕ್ ಜಾನ್ಸನ್‌ ಜೋಡಿ 4-6, 5-7 ರಲ್ಲಿ ನಾಲ್ಕನೇ ಶ್ರೇಯಾಂಕದ ಸಾಲ್ವಡಾರ್‌ನ ಮಾರ್ಸೆಲೊ ಅಲೆವಾರೊ ಮತ್ತು ಕ್ರೊವೇಷಿಯಾದ ಮ್ಯಾಟ್ ಪಾವಿಕ್ ಎದುರು ಸೋಲು ಅನುಭವಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT