ಈ ದೇಶದ ದಲಿತ ಹಾಗೂ ಅಸಹಾಯಕ ಸಮುದಾಯಗಳ ಪಾಲಿಗೆ ಅಂಬೇಡ್ಕರ್ ಒಂದು ಶಕ್ತಿ ಹಾಗೂ ಸ್ಫೂರ್ತಿ. ವ್ಯಕ್ತಿಗತವಾಗಿ ಹಾಗೂ ಸಾಮಾಜಿಕವಾಗಿ ‘ತಮ್ಮತನ’ ಕಂಡುಕೊಳ್ಳಲು ಹಂಬಲಿಸುವ ಯುವ ಸಮುದಾಯಕ್ಕೆ ಅಂಬೇಡ್ಕರ್ ಜೀವನ–ಸಾಧನೆಯೇ ಪ್ರೇರಣೆ. ವಿಚಾರಗಳ ಮಟ್ಟಿಗೆ ಮಾತ್ರವಲ್ಲದೆ, ಗುರು–ಗೆಳೆಯನ ರೂಪದಲ್ಲಿ, ಅಂತರಂಗದ ಮಿಡಿತದ ರೂಪದಲ್ಲಿ ಅಂಬೇಡ್ಕರ್ ಕೋಟ್ಯಂತರ ಯುವ ಮನಸ್ಸುಗಳಲ್ಲಿ ಭೀಮರಾಯರು ಜೀವಂತವಾಗಿದ್ದಾರೆ. ಇಂಥ ಅಮೃತರೂಪಿ ಅಂಬೇಡ್ಕರ್ ದೈನಿಕದ ಯಾವುದೋ ಸವಾಲು ಅಥವಾ ಸಮಸ್ಯೆಯ ಸಂದರ್ಭದಲ್ಲಿ ಧುತ್ತನೆ ಎದುರಾಗಿ, ನಮ್ಮ ಧ್ವನಿಯಾಗಿ ಜೀವದ್ರವ್ಯವಾಗಿ ಭೀಮಬಲವಾಗಿ ಜೊತೆಯಾಗುತ್ತಾರೆ.

ಹೀಗೆ ಅಂಬೇಡ್ಕರ್ ತಮ್ಮ ಬದುಕಿನಲ್ಲಿ ಇದ್ದಕ್ಕಿದ್ದಂತೆ ಹೆಚ್ಚು ಜಾಗೃತಗೊಂಡ ಅಪೂರ್ವ ಕ್ಷಣಗಳ ಕುರಿತು ನಾಡಿನ ವಿವಿಧ ಕ್ಷೇತ್ರಗಳ ಸೃಜನಶೀಲ ಮನಸ್ಸುಗಳ ಕಿರು ಟಿಪ್ಪಣಿಗಳು ಇಲ್ಲಿವೆ. ಏಪ್ರಿಲ್ 14ರ ‘ಅಂಬೇಡ್ಕರ್ ಜಯಂತಿ’ ಸಂದರ್ಭದಲ್ಲಿ ಈ ಬರಹಗಳು ‘ನಮ್ಮೊಳಗಿನ ಅಂಬೇಡ್ಕರ್’ ಅವರನ್ನು ಒಮ್ಮೆ ತಡವಿಕೊಳ್ಳಲು ಪ್ರೇರೇಪಿಸುವಂತಿವೆ.

1) ಪಂಚಾಯ್ತಿಗೆ ಪ್ರತಿರೋಧ–ಆಲೂರು ದೊಡ್ಡನಿಂಗಪ್ಪ, ರಂಗಾಯಣ, ಮೈಸೂರು

ನಮ್ಮ ಊರಿನಲ್ಲಿ ಹಳ್ಳಿಕಟ್ಟೆ ಪಂಚಾಯ್ತಿಗಳು ನಡೆಯುತ್ತಿದ್ದವು. ಆ ಪಂಚಾಯ್ತಿಗೆ ತಪ್ಪಿಸಿಕೊಂಡರೆ ₹ 5 ದಂಡ ವಿಧಿಸುತ್ತಿದ್ದರು. ಇದು 20–25 ವರ್ಷಗಳ ಹಿಂದಿನ ಮಾತು. ಕೂಲಿಯ ರೂಪದಲ್ಲಿ ದೊರೆಯುತ್ತಿದ್ದ 5 ರೂಪಾಯಿ ಆಗ ಬಹುಪಾಲು ಮೊತ್ತ. ಈ ಪಂಚಾಯ್ತಿಗಳು ನನಗೆ ನಮ್ಮ ಸಮುದಾಯದ ವಿರುದ್ಧವಾಗಿ ಕಾಣುತ್ತಿದ್ದವು. ಬಡತನದಲ್ಲಿ ನಮ್ಮಂತಹವರು ಬೆಳಿಗ್ಗೆ ಎದ್ದು ಬೇರೆ ಊರಿಗೆ ಅನ್ನ ಅರಸಿ ಹೋಗಬೇಕಿತ್ತು. ಆದರೆ ಪಂಚಾಯ್ತಿಗಳನ್ನು ಅವರು ತಮಗೆ ಬೇಕಾದ ಸಮಯಕ್ಕೆ ಮಾಡುತ್ತಿದ್ದರು. ಇದರಿಂದ ನಮ್ಮ ದುಡಿಮೆಗೆ ಪೆಟ್ಟು ಬೀಳುತ್ತಿತ್ತು. ಇದು ತಪ್ಪು ಅನ್ನಿಸಿತು. ಆಗ ಪೊಲೀಸ್ ಠಾಣೆಗೆ, ಆಕಾಶವಾಣಿಗೆ ಇದರ ವಿರುದ್ಧ ಅರ್ಜಿ ಬರೆದೆ.

ನನ್ನಲ್ಲಿ ಆಗ ಹಳೇ ಲೂನಾ ಇತ್ತು. ಆ ಪಂಚಾಯ್ತಿ ವ್ಯವಸ್ಥೆಯನ್ನು ವಿರೋಧಿಸಲು ಲೂನಾ ಚಲಾಯಿಸಿಕೊಂಡು ಬಂದು, ಗಾಡಿಯ ಬೆಳಕನ್ನು ಪಂಚಾಯ್ತಿ ನಡೆಸುತ್ತಿದ್ದ ಪಂಚರ ಮೇಲೆ ಬಿಡುತ್ತಿದ್ದೆ. ಪ್ರತಿರೋಧದ ಆ ಶಕ್ತಿ ಮತ್ತು ಕೆಚ್ಚು ನೀಡಿದ್ದು ಅಂಬೇಡ್ಕರ್. ಪಂಚಾಯ್ತಿ ವ್ಯವಸ್ಥೆಯನ್ನು ವಿರೋಧಿಸುವ ಮೂಲಕ ನನ್ನೊಳಗೆ ಅಂಬೇಡ್ಕರ್ ಪ್ರವಹಿಸಿದರು. ನಮಗೆ ಒಂದು ಸಂವಿಧಾನ ಇದೆ. ಅದರಲ್ಲಿ ಇಂತಹ ಫ್ಯೂಡಲ್ ಪಂಚಾಯ್ತಿಗಳಿಗೆ ಅವಕಾಶ ಇಲ್ಲ ಎನ್ನುವುದರ ಅರಿವು ಉಂಟಾಯಿತು. ಈ ರೀತಿಯಲ್ಲಿ ನಾನು ಅಂಬೇಡ್ಕರ್ ಅವರನ್ನು ಕಂಡುಕೊಂಡೆ.

ಪ್ರಭಾವಿ ವ್ಯಕ್ತಿಗಳು ಮಾಡಿದ ಕೆಲಸಗಳು ದೀರ್ಘಕಾಲ ಜೀವಂತಿಕೆಯಿಂದ ಬಾಳುತ್ತವೆ. ಅಂಬೇಡ್ಕರ್ ಅವರು ಇಲ್ಲದಿದ್ದರೆ ನಮ್ಮಂತಹ ಸಮುದಾಯಗಳ ಬದುಕೇ ದುರ್ಬರ ಆಗುತ್ತಿತ್ತು.

2) ನಾನು ಬರೆದ ಮೊದಲ ಚಿತ್ರ–ಗುರುಪ್ರಸಾದ್ ಕಂಟಲಗೆರೆ, ಕಥೆಗಾರ, ಚಿಕ್ಕನಾಯಕನಹಳ್ಳಿ

ನಾನು ಒಂದನೇ ಇಲ್ಲ ಎರಡನೇ ತರಗತಿ ಓದುತ್ತಿದ್ದೆ. ನಮ್ಮೂರಿಗೆ ನಮ್ಮ ಮಾವ ತನ್ನ ಬಳಗದೊಂದಿಗೆ ಹೆಗಲಿಗೆ ಬ್ಯಾಗ್ ನೇತಾಕಿಕೊಂಡು ಬರುತ್ತಿತ್ತು. ಮಾವನೆಂದರೆ, ಅಸ್ಪೃಶ್ಯರು ಕುಂದೂರು ಕೆರೆ ನೀರು ಮುಟ್ಟಿದ ಹೋರಾಟದ ಮೂಲಕ ಬೆಳಕಿಗೆ ಬಂದಿದ್ದ ತುಮಕೂರು ದಸಂಸ ಜಿಲ್ಲಾ ಸಂಚಾಲಕರಾಗಿದ್ದ ಕುಂದೂರು ತಿಮ್ಮಯ್ಯ.

ಚಳವಳಿ ಸಂಗಾತಿಗಳೊಂದಿಗೆ ಬರುತ್ತಿದ್ದ ಮಾವ ಹಗಲು ರಾತ್ರಿ ಎನ್ನದೆ ಹೋರಾಟದ ಹಾಡುಗಳನ್ನು ಹಾಡುತ್ತಿತ್ತು. ಹಬ್ಬ ಜಾತ್ರೆ ಯಾವುದಿದ್ದರೂ ಅಷ್ಟೆ, ಊಟವೆಲ್ಲ ಮುಗಿದ ನಂತರ ಹಟ್ಟಿಮುಂದೆ ಮಲಗಿಕೊಂಡು ಕಂಜ್ರ ಬಡಿಯುತ್ತ ಅವರು ಹಾಡುತ್ತಿದ್ದರೆ ನಾವು ಆ ಹಾಡಿನ ಸಾಲುಗಳಲ್ಲಿನ ಕರುಣಾಜನಕ ಕಥನವನ್ನು ಕೇಳಿಸಿಕೊಂಡು ನಿದ್ರೆಗೆ ಜಾರುತ್ತಿದ್ದೆವು. ಹೀಗೆ ಮಾವನ ದಸಂಸ ಹೋರಾಟದ ಸಾಲುಗಳಲ್ಲಿದ್ದ ಅಂಬೇಡ್ಕರ್ ಬೇರೆ ಯಾವ ರಾಷ್ಟ್ರನಾಯಕನ ಹೆಸರು ಕೇಳುವ ಮುಂಚಿತವಾಗಿಯೇ ಕುಟುಂಬದ ಸದಸ್ಯರಂತೆ ನಮ್ಮ ಮನೆ ಮನ ತುಂಬಿಕೊಂಡರು.

ನಮ್ಮ ಮನೆಯ ಮುರುಕು ಗೋಡೆಯ ಕ್ಯಾಲೆಂಡರ್‌ನಲ್ಲಿ ನೇತಾಡುತ್ತಿದ್ದ ಅಂಬೇಡ್ಕರ್ ಅವರನ್ನು ನೋಡಿ ನಾನು ಅದರಂತೆ ಚಿತ್ರ ಬರೆಯಲು ಪ್ರಯತ್ನಿಸಿ ಮುಖಕ್ಕೆ ಕೆಂಪು, ಕೋಟಿಗೆ ಕಡು ನೀಲಿ, ತಲೆಗೆ ಕಪ್ಪು ಬಣ್ಣ ಬಳಿದು ಮಾವ ಬಂದಾಗ ತೋರಿಸುತ್ತಿದ್ದೆ. ಮಾವ ಅದನ್ನು ದಿಟ್ಟಿಸಿ ನೋಡಿ ಶಭಾಷ್‌ಗಿರಿ ಕೊಡುತ್ತಿತ್ತು. ಈ ಬಾಲ್ಯದ ಅನುಭವವನ್ನೇ ಕವಿತೆಯಾಗಿಸಿ ಬರೆದ ’ಕಪ್ಪು ಕೆಂಪು ನೀಲಿ’ ಕವಿತೆಗೆ ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಸ್ಪರ್ಧೆಯಲ್ಲಿ ಬಹುಮಾನ ಬಂದದ್ದು ಇನ್ನೊಂದು ಸೋಜಿಗ.

ಇದೇ ವಯಸ್ಸಿನಲ್ಲಿ ಸಿಕ್ಕ ‘ಬಾಲಕ ಅಂಬೇಡ್ಕರ್’ ಪುಸ್ತಕ ನನ್ನಿಂದ ಇನ್ನಿಲ್ಲದಂತೆ ಓದಿಸಿಕೊಂಡಿತು. ಬಹುಶಃ ನಾನು ಓದಿದ ಮೊದಲ ಗ್ರಂಥವೂ ಇದೇ ಇರಬೇಕು. ಅದರಲ್ಲಿದ್ದ ಭೀಮನಿಗೆ ಕಟಿಂಗ್ ನಿರಾಕರಣೆ ಮಾಡಿದ್ದು, ಎತ್ತಿನ ಗಾಡಿಯಿಂದ ಉರುಳಿಸಿದ್ದು, ಈ ಎಲ್ಲ ಘಟನೆಗಳು ನನ್ನ ಮನಸ್ಸಿನಲ್ಲಿ ಆಗಿನಿಂದಲೇ ಅಚ್ಚಳಿಯದ ‘ನೋವಿನ ಮತ್ತು ಸ್ಫೂರ್ತಿ’ಯ ಚಿತ್ರವಾಗಿ ಉಳಿದುಬಿಟ್ಟವು.

ಹೀಗೆ ಅಂಬೇಡ್ಕರ್ ನನ್ನ ಬದುಕಿನಲ್ಲಿ ನಾನು ಬರೆದ ಮೊದಲ ಚಿತ್ರವಾಗಿಯೂ, ಓದಿದ ಮೊದಲ ಗ್ರಂಥವಾಗಿಯೂ, ಮೊದಲು ಆರಾಧಿಸಿದ ರಾಷ್ಟ್ರನಾಯಕನಾಗಿಯೂ ಉಳಿದು ಇವತ್ತಿನ ನನ್ನ ಎಲ್ಲ ನಡೆ ನುಡಿ ನಿರ್ದೇಶಿಸಿ ಬೆಳೆಸಿದ ಎರಡನೇ ಅಪ್ಪ ಅಮ್ಮನಂತಿದ್ದಾರೆ.

3)ಚಟ್ನಿಯಿಂದ ಚಿಂತನೆಯವರೆಗೆ...–ಕೊಟ್ಟ ಶಂಕರ್, ಉಪನ್ಯಾಸಕ, ತುಮಕೂರು

ಅದು 2001ನೇ ಇಸವಿ. ನಾನು ದ್ವಿತೀಯ ಪಿಯುಸಿ ಓದುತ್ತಿದ್ದೆ. ನಮಗೆ ಸರ್ಕಾರಿ ಹಾಸ್ಟೆಲ್ ಸೌಲಭ್ಯ ಇತ್ತು. ಅದರ ಹೆಸರು ಬಾಪೂಜಿ ಹಾಸ್ಟೆಲ್. ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಒಂದೇ ಹಾಸ್ಟೆಲ್. ಆ ವರ್ಷದ ಅಂಬೇಡ್ಕರ್ ಜಯಂತಿಗೆ ಕೆಲವೇ ದಿನಗಳು ಉಳಿದಿದ್ದವು. ಆ ಸಮಯದಲ್ಲಿ ವಾರ್ಡನ್ ಹಾಗೂ ವಿದ್ಯಾರ್ಥಿಗಳಿಗೆ ಒಂದು ಸಣ್ಣ ಜಗಳ ಆಯಿತು. ನಾವು ಅದನ್ನು ಪ್ರತಿಭಟನೆ ಎಂದು ಸಂಭ್ರಮಿಸಿಕೊಂಡೆವು. ಜಗಳಕ್ಕೆ ಕಾರಣ ದೋಸೆಗೆ ಕೊಡಬೇಕಿದ್ದ ಚಟ್ನಿ ನೀರಾಗಿತ್ತು.

ನೀರು ನೀರಾಗಿದ್ದ ಚಟ್ನಿ ತುಂಬಿದ್ದ ಬಕೆಟ್ ಅನ್ನು ಭಟ್ಟರ ಮೇಲಿಟ್ಟು ಸಮಾಜ ಕಲ್ಯಾಣ ಇಲಾಖೆ ಕಚೇರಿವರೆಗೆ ನಡೆದುಕೊಂಡು ಬಂದಿದ್ದೆವು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಾರ್ಡನ್‌ನನ್ನು ಬೈದ ಪರಿಣಾಮ, ವಾರ್ಡನ್ ಎಲ್ಲ ವಿದ್ಯಾರ್ಥಿಗಳಿಗೂ ಚಿಕನ್ ಊಟ ಕೊಡಿಸಿದ್ದರು. ನಂತರದ್ದು ಏಪ್ರಿಲ್ 14ರ ‘ಅಂಬೇಡ್ಕರ್ ಜಯಂತಿ’ ಕಾರ್ಯಕ್ರಮ. ಸಮಾಜ ಕಲ್ಯಾಣ ಅಧಿಕಾರಿ ಮುಖ್ಯ ಅತಿಥಿಯಾಗಿದ್ದರು. ಅಂದಿನ ಭಾಷಣದಲ್ಲಿ ಅಂಬೇಡ್ಕರ್ ವಿಚಾರಗಳನ್ನು ಹೇಳುತ್ತ, ‘ಬರಿ ಊಟದ ಕಾರಣಕ್ಕೆ ಪ್ರತಿಭಟನೆ ಮಾಡಬಾರದು. ಅಕ್ಷರ ಕಲಿತು ವಿದ್ಯಾವಂತರಾಗಿ. ನೀವು ಕಲಿತ ಶಿಕ್ಷಣ ನಿಮ್ಮನ್ನು ಸಮುದಾಯದಿಂದ ದೂರ ಮಾಡಬಾರದು’ ಎನ್ನುವ ಬಾಬಾ ಸಾಹೇಬರ ಮಾತುಗಳನ್ನು ಉಲ್ಲೇಖಿಸಿದರು. ಆ ಮಾತುಗಳು ನನ್ನ ಮೇಲೆ ಪರಿಣಾಮ ಬೀರಿ ಅಂಬೇಡ್ಕರ್ ಅವರನ್ನು ಓದುವಂತೆ ಮಾಡಿತು.

ಪದವಿ ಮುಗಿಸಿದ ನಂತರ ಅದೇ ಹಾಸ್ಟೆಲ್‌ನವರು ಅಂಬೇಡ್ಕರ್ ಜಯಂತಿಗೆ ನನ್ನ ಆಹ್ವಾನಿಸಿದರು. ಅದೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅತಿಥಿ ಆಗಿದ್ದರು. ನಾನು ಮುಖ್ಯ ಭಾಷಣಕಾರ.

ಅಂಬೇಡ್ಕರ್ ವಿಚಾರಗಳು ಮನುಷ್ಯ ಸಂಬಂಧವನ್ನು, ಪ್ರೀತಿಸುವುದನ್ನು ಹೇಳಿಕೊಟ್ಟಿವೆ. ಅಂಬೇಡ್ಕರ್ ವಿಚಾರಗಳ ಸ್ಫೂರ್ತಿಯಿಂದಲೇ ಪಿಯುಸಿಯಲ್ಲಿ ಅನುತ್ತೀರ್ಣನಾಗಬೇಕಾದ ನಾನು ಮತ್ತು ನನ್ನಂತಹವರು ಪದವಿ ಪಡೆದು ಸಮುದಾಯಗಳ ಜೊತೆ ಇರಲು ಸಾಧ್ಯವಾಯಿತು.

4)ನೈತಿಕ ಸ್ಥೈರ್ಯದ ಬುನಾದಿ–ಬಿ.ಎಂ. ಗಿರಿರಾಜ್, ಚಲನಚಿತ್ರ ನಿರ್ದೇಶಕ, ಬೆಂಗಳೂರು

ನಾನು ಓದುವುದಕ್ಕೆ ಆರಂಭಿಸಿದಾಗ ಸಾಮಾನ್ಯವಾಗಿ ಸಮಾಜದಲ್ಲಿ ಮೀಸಲಾತಿ, ಅಸ್ಪೃಶ್ಯತೆ ವಿಚಾರದಲ್ಲಿ ಮಾತ್ರ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುತ್ತಿದ್ದರು. ದ್ವಿತೀಯ ಪಿಯುಸಿ ಓದುವಾಗ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಸ್ಥಾಪಕರು ಅಂಬೇಡ್ಕರ್ ಎನ್ನುವುದು ತಿಳಿಯಿತು. ಅವರ ಆರ್ಥಿಕ ವಿಚಾರಗಳನ್ನು ತಿಳಿದುಕೊಂಡೆ. ಆಗ ಅಂಬೇಡ್ಕರ್ ಬಗ್ಗೆ ಬೇರೆಯವರು ಬರೆದಿದ್ದನ್ನು ಓದುವುದಕ್ಕಿಂತ ಅವರೇ ಬರೆದಿದ್ದನ್ನು ಓದಬೇಕು ಎನಿಸಿತು. ಆಗ ಅವರು ಬರೆದ ಪುಸ್ತಕಗಳನ್ನು ಓದಿದೆ. ಅದು ನಾನು ಓದಿಗೆ ಮುಕ್ತವಾಗಿ ತೆರೆದುಕೊಳ್ಳುತ್ತಿದ್ದ ಹೊತ್ತು.

ಮಾನವ ಹಕ್ಕು, ಮಹಿಳಾ ಸಮಾನತೆ ಹೀಗೆ ಬೇರೆ ಬೇರೆ ವಿಚಾರಗಳ ಬಗ್ಗೆ ಅಂಬೇಡ್ಕರ್ ಅವರ ನೋಟವನ್ನು ಗ್ರಹಿಸಿದೆ. ಅವರನ್ನು ಒಂದು ವಿಚಾರಕ್ಕೆ ಸೀಮಿತಗೊಳಿಸುವುದು ಸಾಧ್ಯವಾಗುವುದಿಲ್ಲ ಎನ್ನುವುದರ ಅರಿವಾಯಿತು. ಅಂಬೇಡ್ಕರ್ ಅವರನ್ನು ಓದಿದಂತೆ – ಅವರು ಧರ್ಮ, ಲಿಂಗ ಇತ್ಯಾದಿ ವಿಷಯಗಳ ಬಗ್ಗೆ ಜನರಲ್ಲಿರುವ ಇಗೋವನ್ನು ಮೊದಲು ಒಡೆದು ಹಾಕುವರು. ನೂರಕ್ಕೆ ನೂರರಷ್ಟು ಅವರನ್ನು ಪಾಲಿಸುತ್ತೇನೆ ಎಂದು ಹೇಳಲು ಯಾರಿಗೂ ಸಾಧ್ಯವಿಲ್ಲ. ಅಂಬೇಡ್ಕರ್ ಅವರ ಬಗ್ಗೆ ಓದಿಕೊಂಡಾಗ ಮತ್ತು ಓದುವಾಗ ಅವರಲ್ಲಿನ ಮಾನಸಿಕ ಮತ್ತು ನೈತಿಕ ಸ್ಥೈರ್ಯವನ್ನು ಶೇ. 10ರಷ್ಟು ರೂಢಿಸಿಕೊಳ್ಳಬೇಕು ಎನಿಸಿತು.

ಯಾವುದೇ ವಿಚಾರದಲ್ಲಿ ಅವರಿಗೆ ಅದರ ಬಗ್ಗೆ ಶೇ. 100 ರಷ್ಟು ಸ್ಪಷ್ಟತೆ ದೊರಕಿದ ನಂತರವೇ ಅವರು ಮುಂದುವರಿಯುತ್ತಿದ್ದರು. ಅವರಿಗೆ ಕೊಂಚವೂ ದ್ವಂದ್ವಗಳು ಇರಲಿಲ್ಲ.

5)ಅಧ್ಯಾತ್ಮ ನಾಯಕ–ಮಹದೇವ ಹಡಪದ್, ರಂಗಕರ್ಮಿ, ಧಾರವಾಡ

ದ್ವಿತೀಯ ಪಿಯುಸಿ ಓದುವಾಗ ‘ಸಂವಾದ’ ಪತ್ರಿಕೆಯಲ್ಲಿ ಕಮ್ಯುನಿಸಂ ಬಗ್ಗೆ ಓದುತ್ತಿದ್ದೆ. ಅದೇ ವೇಳೆಯಲ್ಲಿ ಅಂಬೇಡ್ಕರ್ ಸಹ ನನಗೆ ಅಲ್ಲಿ ಸಿಕ್ಕರು. ಆ ಮೇಲೆ ಅವರ ಪುಸ್ತಕಗಳನ್ನು ಓದಲು ಆರಂಭಿಸಿದೆ.

ಹೈಸ್ಕೂಲ್‌ನಲ್ಲಿ ಇದ್ದಾಗ ಹೊಸಮನಿ ಮಾಸ್ಟರ್ ಎಂಬುವವರು ಸಮಾಜ ಸುಧಾರಕರ ಬಗ್ಗೆ ಪಾಠ ಮಾಡುತ್ತಿದ್ದರು. ಅಂಬೇಡ್ಕರ್ ಬಗ್ಗೆ ಅಲ್ಪಸ್ವಲ್ಪ ತಿಳಿಸಿದ್ದರು. ಒಮ್ಮೆ ಜ್ಯೋತಿ ಬಾ ಪುಲೆ ಬಗ್ಗೆ ಓದುವಾಗ ಅಂಬೇಡ್ಕರ್ ಅವರ ಮೇಲೆ ಪುಲೆ ಪ್ರಭಾವ ಬೀರಿದ್ದನ್ನು ತಿಳಿದೆ. ಹೀಗೆ ಅಂಬೇಡ್ಕರ್ ಬಗ್ಗೆ ಓದುತ್ತಾ ಹೋದಂತೆ ಅವರ ಶಕ್ತಿ ಮತ್ತು ಹೋರಾಟಗಳ ಅರಿವು ಸ್ಪಷ್ಟವಾಯಿತು.

ನಾನು ಓದುವ ಸಮಯದಲ್ಲಿ ನಮ್ಮ ಊರಲ್ಲಿ ಅಂಬೇಡ್ಕರ್ ಬಗ್ಗೆ ಯಾರಿಗೂ ಹೆಚ್ಚು ತಿಳಿದಿರಲಿಲ್ಲ ಎನಿಸುತ್ತದೆ. ನಮ್ಮಲ್ಲಿ ದಸಂಸ ಆಗಿನ್ನೂ ಆರಂಭ ಆಗಿರಲಿಲ್ಲ. ಅಂಬೇಡ್ಕರ್ ವಿಚಾರಗಳನ್ನು ಹಳ್ಳಿಗಳಿಗೆ ಮುಟ್ಟಿಸಬೇಕು ಎನಿಸಿತು. ‘ಚೋಟಾ ಭೀಮ್’ನಂತೆ ‘ಭಡಾ ಭೀಮ್’ ಎಂದು ಮಕ್ಕಳಿಗಾಗಿಯೇ ಪುಸ್ತಕ ಬರೆಯಬೇಕು ಎನಿಸಿದೆ.

ಅಂಬೇಡ್ಕರ್ ಪ್ರಭಾವದ ಕುರಿತ ಒಂದು ಸನ್ನಿವೇಶವನ್ನು ಪತ್ರಿಕೆಯಲ್ಲಿ ಓದಿದ್ದೆ. ಒಂದು ಹಳ್ಳಿಯ ಮೇಲ್ಜಾತಿಯ ಮನೆಯ ಎದುರು ಒಬ್ಬ ಕ್ಷೌರದ ಅಂಗಡಿ ಇಟ್ಟುಕೊಂಡಿದ್ದ. ಬೆಳಿಗ್ಗೆ ಎದ್ದು ಆತನ ಮುಖ ನೋಡಿದರೆ ಕೆಟ್ಟದಾಗುತ್ತದೆ ಎನ್ನುವ ಕಾರಣಕ್ಕೆ ಆ ಮನೆಯವರು ಅಂಗಡಿಯನ್ನು ತಿರುಗಿಸುತ್ತಿದ್ದರು. ಈತ ಮರು ದಿನ ಬಂದು ಮತ್ತೆ ಅಂಗಡಿಯನ್ನು ಸರಿ ಮಾಡುತ್ತಿದ್ದ. ಹಲವು ದಿನ ಹೀಗೆಯೇ ನಡೆಯಿತು. ಕ್ಷೌರಿಕನಿಗೆ ಒಬ್ಬರು, ‘ಅಂಬೇಡ್ಕರ್ ಫೋಟೊ ತಂದಿಡು’ ಅಂದರು. ಫೋಟೊ ಇಟ್ಟು ಪೂಜೆ ಮಾಡಿದ. ಆ ಮನೆಯವರು ಅವನ ಸಹವಾಸಕ್ಕೆ ಬರಲಿಲ್ಲ. ಇದನ್ನು ಓದಿದ ನನಗೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಎಂತಹ ಶಕ್ತಿ ಇದೆ ಎನಿಸಿತು.

ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಹಳ್ಳಿಗಳಲ್ಲಿ ಪೂಜೆ ಮಾಡುವರು. ಇದನ್ನು ವೈಚಾರಿಕರು ಒಪ್ಪುವುದಿಲ್ಲ. ಅಂಬೇಡ್ಕರ್ ಅವರನ್ನು ಬುದ್ಧ, ಬಸವಣ್ಣ ಅವರಂತೆ ಒಬ್ಬ ಅಧ್ಯಾತ್ಮ ನಾಯಕನಾಗಿಯೂ ನೋಡಬೇಕು. ನಾನು ಅವರನ್ನು ಅಧ್ಯಾತ್ಮ ನಾಯಕರಾಗಿಯೂ ನೋಡುವೆ.

6) ಮಹಾಬೋಧಿ ವೃಕ್ಷದ ನೆರಳಲ್ಲಿ...–ಮಂಜುಳಾ ಹುಲಿಕುಂಟೆ, ಕವಯಿತ್ರಿ, ದೊಡ್ಡಬಳ್ಳಾಪುರ

ಅಂಬೇಡ್ಕರ್ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಿದ್ದಾರೆ ಎನ್ನುವ ಪ್ರಶ್ನೆ ಎದುರಾದಾಗ ನಾನು ನನ್ನ ಬದುಕಿನ ಜೊತೆ ಇಪ್ಪತ್ತು ವರ್ಷಗಳ ಹಿಂದಕ್ಕೆ ಹೋಗ್ತೀನಿ. ಮತ್ತದೇ ಬದುಕಿನ ದಾರಿಯನ್ನು ನೆನಪು ಮಾಡ್ಕೊಂತೀನಿ.

ಹುಟ್ಟಿಗಂಟಿದ್ದ ಜಾತಿ, ಕಿತ್ತು ತಿನ್ನುವ ಬಡತನ, ಅದೇ ಅವಮಾನ, ಅಪಮಾನಗಳ ಬದುಕು. ಈ ಬದುಕು ಒಂದು ನೆಲೆಕಂಡಿದ್ದು, ನಾವು ನೋವು ತಿಂದೋರು ನಮ್ಮ ದನಿ ನಿಮಗಿಂತ ಗಟ್ಟಿಯಾಗಿ ಇರುತ್ತದೆ ಅಂತ ಸಿಡಿದು ನಿಲ್ಲೋಕೆ ಸಾಧ್ಯ ಆಗಿದ್ದು, ಅದೇ ಅಂಬೇಡ್ಕರ್ ಎನ್ನುವ ಮಹಾವೃಕ್ಷದ ನೆರಳಿನಿಂದ.

ಜಾತಿ, ಬಡತನದ ಕಾರಣಕ್ಕೆ ನನ್ನ ಪ್ರಾಥಮಿಕ ಶಿಕ್ಷಣ ಒಂದು ರೀತಿಯ ನೋವು, ಅವಮಾನಗಳಿಂದ ಮೊದಲಾಯ್ತು. ಆರು, ಏಳನೇ ತರಗತಿಗೆ ಬರುವ ಹೊತ್ತಿಗೆ ನನ್ನೂರಿನ ದಲಿತ ಯುವಕರು, ಜೊತೆಗೆ ನನ್ನಣ್ಣ ಅಂಬೇಡ್ಕರ್ ಸಂಘಟನೆಯನ್ನು ಕಟ್ಟಿ, ಅಂಬೇಡ್ಕರ್ ಅರಿವನ್ನು ಬಿತ್ತೋಕೆ ಶುರುಮಾಡಿದ್ರು. ಜಾತಿ ಭೂತದಿಂದ ಬೆದರಿ ಶಾಲೆ ಬಿಡ್ಬೇಕು ಅಂದ್ಕೊಳ್ವಾಗ್ಲೆ ನನಗೆ ಅಂಬೇಡ್ಕರ್ ಅನ್ನೋ ಆಲದ ಮರದ ಆಶ್ರಯ ಸಿಕ್ಕಿತ್ತು. ಜಾತಿ ಹೆಸರು ಹೇಳೋಕಾಗ್ದೆ ನರಳ್ತಿದ್ದೋಳು ನನ್ನ ಜಾತಿಯನ್ನ ಗಟ್ಟಿಯಾಗಿ ಕೂಗಿ ಹೇಳೋದನ್ನ ಕಲಿತೆ. ಅಸಹಾಯಕತೆಯಿಂದ ಅಪರಿಚಿತ ಅನ್ನಿಸ್ತಿದ್ದ ನೆಲ ನಮ್ಮದೇ ಅನ್ನೋ ಆಪ್ತತೆ ಹುಟ್ಟಿದ್ದೇ ಅಲ್ಲಿಂದ. ಯಾವುದರಿಂದ ಅವಮಾನ ಎದುರಿಸ್ತಿದ್ನೋ ಅದರಿಂದ್ಲೇ ಗೌರವದ ಬದುಕು ಸಿಗೋತರ ಬೆಳೆದೆ. ನಮ್ಮನ್ನ ಮುಟ್ಟಿಸಿಕೊಳ್ಳೋಕೆ ಅಸಹ್ಯ ಪಡೋ ಈ ಜನ ಸಂವಿಧಾನದ ಅಡಿಯಲ್ಲೆ ಬದುಕಬೇಕು. ಅದನ್ನು ಬರೆದವರು ನಮ್ಮ ಅಂಬೇಡ್ಕರ್. ನಾವು ಯಾರ ಆಳ್ವಿಕೆಯಲ್ಲೂ ಬದುಕಬೇಕಿಲ್ಲ. ಈ ನೆಲ ನಮ್ಮದು ಅನ್ನೋ ಅರಿವು ಅಂಬೇಡ್ಕರ್ ಅವ್ರನ್ನ ಮತ್ತೆ ಮತ್ತೆ ಓದೋ ಹಾಗೆ ಮಾಡ್ತು.

ಪ್ರತಿಯೊಬ್ಬರಿಗೂ ಗೌರವಯುತ ಬದುಕು ಸಿಗಬೇಕು. ನಿನಗೆ ಗೌರವ ಇಲ್ಲದ ಜಾಗದಲ್ಲಿ ನಿನ್ನ ಚಪ್ಪಲಿಯನ್ನೂ ಬಿಡಬೇಡ ಎನ್ನುವ ಅಂಬೇಡ್ಕರ್ ಮಾತುಗಳೇ ನನ್ನ ಬದುಕಿನ ಸಿದ್ಧಾಂತವಾಗಿ, ಯಾರ ಎದುರೂ ತಲೆತಗ್ಗಿಸದ ರೀತಿ ಬದುಕುವುದನ್ನು ಕಲಿತೆ. ಗೌರವಯುತ ಬದುಕು, ಸ್ವಾಭಿಮಾನ ಈ ಎರಡೂ ನನ್ನನ್ನು ರೂಪಿಸಿದವು. ಇದನ್ನು ನನಗೆ ಪರಿಚಯಿಸಿದ್ದು, ಇದೇ ನಿನ್ನ ಬದುಕಿನ ದಾರಿ ಎಂದು ಬೆರಳು ಮಾಡಿ ತೋರಿಸಿದ್ದು ಅದೇ ಅಂಬೇಡ್ಕರ್ ಅನ್ನೋ ಮಹಾಬೋಧಿ ವೃಕ್ಷ. ಹಾಗಾಗೇ ಅಂಬೇಡ್ಕರ್ ಯಾವತ್ತಿಗೂ ನನ್ನೊಳಗಿನ ಅರಿವು.

7) ಹೆಸರಲ್ಲ, ಉಸಿರು...–ಕಾವ್ಯಶ್ರೀ ಎಚ್. ಕವಯಿತ್ರಿ, ಬೆಂಗಳೂರು

ಸಮಸಮಾಜದ ಕನಸು, ಕಲ್ಪನೆ ಸಾಕಾರಗೊಳ್ಳದೇ ಇರಲು ತೊಡಕಾಗಿರುವುದು ಲಿಂಗಭೇದ ಮತ್ತು ಜಾತಿಭೇದ. ಹೆಣ್ಣಾಗಿ ಹುಟ್ಟಿ ಲಿಂಗಭೇದದ ಅನುಭವ ಮತ್ತು ಅರಿವು ಎರಡೂ ದಕ್ಕಿದೆ. ನಮ್ಮಲ್ಲಿ ಮಧ್ಯಮ ವರ್ಗ ಇರುವಂತೆಯೇ ಮಧ್ಯಮ ಜಾತಿಗಳೂ ಇವೆ. ಅಂತಹ ಪರಿಸರದಲ್ಲಿ ಹುಟ್ಟಿ ಬೆಳೆದ ನನ್ನಂತಹವರಿಗೆ ಅಂಬೇಡ್ಕರ್ ತಲುಪಿದ್ದು ಬಹಳ ತಡವಾಗಿ. ಇನ್ನೂ ತಲುಪದವರೂ ಇದ್ದಾರೆ.

ಶಾಲಾ ದಿನಗಳಲ್ಲಿ ಮೀಸಲಾತಿ ವಿರೋಧಿಸುವ ಗುಂಪಿಗೆ ನಾನು ಕೂಡ ಸೇರಿದ್ದೆ. ಕಾಲಕ್ರಮೇಣ ಓದು ಮತ್ತು ಅನುಭವಗಳು ಅರಿವನ್ನು ವಿಸ್ತರಿಸಿದಂತೆ ಸ್ತ್ರೀವಾದದ ತತ್ವ ಸಿದ್ಧಾಂತಗಳು ನನ್ನ ವ್ಯಕ್ತಿತ್ವ ರೂಪಿಸಿಕೊಳ್ಳುವುದರಲ್ಲಿ ಬಹುಮುಖ್ಯ ಪಾತ್ರ ವಹಿಸಿದವು. ನಿಜವಾಗಿ ಶೋಷಣೆ ಅನುಭವಿಸಿಯೂ ಅದನ್ನು ಪರರು ನಂಬುವಂತೆ ಮಾಡುವುದು ಅಸಾಧ್ಯ. ಶೋಷಣೆಯ ಪದರಪದರಗಳನ್ನು ಬಿಡಿಸಿ ಅರ್ಥಮಾಡಿಸುವುದು ಎಷ್ಟು ಕಷ್ಟ ಎನ್ನುವುದು ಗೊತ್ತಾಗುತ್ತಿತ್ತು.

ಸ್ವತಃ ಅನುಭವಿಸದೆ ಇರುವುದನ್ನು ಬಹಳ ಜನ ಒಪ್ಪಿಕೊಳ್ಳುವುದೇ ಇಲ್ಲ. ಅಂತಹುದೇ ಒಂದು ಗಳಿಗೆಯಲ್ಲಿ ನನಗೆ ಜಾತೀಯತೆ ಮತ್ತು ಅಸ್ಪೃಶ್ಯತೆಗಳೂ ಕೂಡ ಹೀಗೆ ಅಲ್ಲವೆ ಎಂಬ ಜ್ಞಾನೋದಯವಾಯಿತು. ಅಂದಿನಿಂದ ಜಾತಿವ್ಯವಸ್ಥೆ, ಸಂವಿಧಾನ, ಮೀಸಲಾತಿ ಇವೆಲ್ಲದರ ಬಗೆಗಿನ ನನ್ನ ಮನೋಭಾವ ಬದಲಾಯಿತು. ಇಡೀ ಜಗತ್ತನ್ನೇ ಪ್ರಭಾವಿಸಿ ಇಂತಹ ವ್ಯವಸ್ಥೆಯನ್ನು ಸರಿದಾರಿಗೆ ತರಲು ಯತ್ನಿಸಿದ ಅಂಬೇಡ್ಕರ್ ಗೋಡೆಯ ಮೇಲಿನ ಭಾವಚಿತ್ರದಿಂದ ಹೊರಬಂದು ಮನಸ್ಸನ್ನು ಮುಟ್ಟಿದ್ದು ಹೀಗೆ.

ಮಗದೊಮ್ಮೆ ಹಲವು ವರ್ಷಗಳ ವೈಯಕ್ತಿಕ ಹೋರಾಟವೊಂದು ಅಂತ್ಯ ಕಂಡಿದ್ದು ಕಾನೂನಾತ್ಮಕವಾಗಿ. ಸಮಸ್ಯೆಗೆ ಪರಿಹಾರ ದೊರಕುವುದರೊಂದಿಗೆ ಆ ಘಟನೆ ನನ್ನನ್ನು ಅಭದ್ರತೆಯಿಂದ ಪಾರುಮಾಡಿ, ಆರ್ಥಿಕವಾಗಿ ಸಬಲಳನ್ನಾಗಿಸಿ ಆತ್ಮಸ್ಥೈರ್ಯ ತುಂಬಿತು. ಮತ್ತೆ ಹೊಸದಾಗಿ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಟ್ಟಿದ್ದು ಇದೇ ಸಂವಿಧಾನ. ಇದೇ ಕಾನೂನು. ಇದೇ ಮಹಿಳಾ ಸಮಾನತೆಯ ಹಕ್ಕುಗಳು. ಅಂಬೇಡ್ಕರ್ ಮತ್ತೊಮ್ಮೆ ನನ್ನನ್ನು ತಟ್ಟಿದ್ದು ಹೀಗೆ. ಅಂದಿನಿಂದ ಅಂಬೇಡ್ಕರ್ ನನ್ನ ಅಧ್ಯಯನ ಮತ್ತು ಬದುಕಿನ ಅವಿಭಾಜ್ಯ ಅಂಗವಾದರು. ಅಂಬೇಡ್ಕರ್ ಇಂದು ಕೇವಲ ಹೆಸರಲ್ಲ, ಬಹುಜನರ ಉಸಿರು.

8) ಸಮುದಾಯಪ್ರಜ್ಞೆಯ ಪಾಠ–ಎಚ್.ಕೆ. ಶರತ್, ಉಪನ್ಯಾಸಕ, ಹಾಸನ

ಅಂಬೇಡ್ಕರ್ ಅವರ ಎರಡು ಆಶಯಗಳು ನನ್ನ ಪ್ರಜ್ಞೆಯ ಭಾಗವಾಗಿ ನೆಲೆಯೂರಿವೆ.ವ್ಯಕ್ತಿಪೂಜೆಯ ಅಪಾಯಗಳನ್ನು ಮನಗಂಡಿದ್ದ ಅವರು, ಯಾವುದು ಘಟಿಸಬಾರದೆಂದು ಆಶಿಸಿದ್ದರೋ ಅದು ನಡೆದು, ಇಂದು ಎಲ್ಲವನ್ನೂ ಆಪೋಶನ ತೆಗೆದುಕೊಂಡು ಮುನ್ನುಗ್ಗುತ್ತಿದೆ. ಅಂಬೇಡ್ಕರ್ ಅವರು ಆಡಿದ ‘ಪ್ರಜಾಪ್ರಭುತ್ವ ತಮಗೆ ನೀಡಿದ ಹಕ್ಕುಗಳನ್ನು ದೇಶದ ಜನರು ಯಾವ ಕಾರಣಕ್ಕೂ ಒಬ್ಬ ವ್ಯಕ್ತಿಗೆ ನೀಡಕೂಡದು. ಆ ವ್ಯಕ್ತಿಯ ಬಗೆಗೆ ನಮಗೆಷ್ಟೇ ಗೌರವ ಇರಲಿ, ನಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ಅವರ ಪಾದಾರವಿಂದಗಳಲ್ಲಿ ಅರ್ಪಿಸಿ ಬಿಡಬಾರದು. ರಾಜಕೀಯದಲ್ಲಿ ವ್ಯಕ್ತಿಪೂಜೆಗೆ ಅವಕಾಶ ಇರಕೂಡದು. ಅದು ಬಂದದ್ದೇ ಆದಲ್ಲಿ ಪ್ರಜಾಪ್ರಭುತ್ವ ಅರ್ಥಹೀನವಾಗುತ್ತದೆ’ ಎಂಬ ಮಾತನ್ನು ನಾವು ಈಗಲಾದರೂ ಮನದಟ್ಟು ಮಾಡಿಕೊಳ್ಳದೆ ಹೋದಲ್ಲಿ, ಅದರ ಗಂಭೀರ ಪರಿಣಾಮವನ್ನು ಮುಂಬರುವ ದಿನಗಳಲ್ಲಿ ಎದುರಿಸಬೇಕಾಗುತ್ತದೆ.

ಕಡೆಯ ದಿನಗಳಲ್ಲಿ ತಮ್ಮ ಆಪ್ತ ಸಹಾಯಕ ನಾನಕ್ ಚಂದ್ ರತ್ತು ಅವರ ಬಳಿ ಅಂಬೇಡ್ಕರ್ ಅವರು ಹೇಳಿದ ‘ಎಷ್ಟೆಷ್ಟೋ ಕಷ್ಟ, ಅಡೆತಡೆಗಳ ಹೊರತಾಗಿಯೂ ನಾನು ಹೋರಾಟದ ಕ್ಯಾರವಾನ್ ಅನ್ನು ಇಲ್ಲಿಯ ತನಕ ಎಳೆದು ತಂದು ನಿಲ್ಲಿಸಿರುವೆ. ಅದು ಮುಂದೆ ಸಾಗಬೇಕು. ನನ್ನ ಉತ್ತರಾಧಿಕಾರಿಗಳು ಈ ಕ್ಯಾರವಾನನ್ನು ಮುಂದೆ ತೆಗೆದುಕೊಂಡು ಹೋಗಲು ಸಾಧ್ಯವಾಗದಿದ್ದರೂ ಅಡ್ಡಿಯಿಲ್ಲ, ಅದನ್ನು ಇದ್ದಲ್ಲಿಯೇ ನಿಲ್ಲಿಸಬೇಕೆ ಹೊರತು ಹಿಂದೆಳೆಯಬಾರದು. ಇದು ನನ್ನ ಕೊನೆಯ ಪ್ರಾರ್ಥನೆ’ ಎಂಬ ಮಾತು ಕೂಡ ಇರಿಯುತ್ತಲೇ ಇರುತ್ತದೆ.

ವ್ಯಕ್ತಿಪೂಜೆಯನ್ನು ತಿರಸ್ಕರಿಸಬೇಕಿರುವ ಅಗತ್ಯ ಮತ್ತು ತುಳಿತಕ್ಕೊಳಗಾಗುವ ಸಮುದಾಯಗಳು ಅಳವಡಿಸಿಕೊಳ್ಳಬೇಕಿರುವ ಸಮುದಾಯ ಪ್ರಜ್ಞೆ ಹೇಗಿರಬೇಕೆಂಬುದನ್ನು ಅಂಬೇಡ್ಕರ್ ಅವರಂತೆ ಪರಿಣಾಮಕಾರಿಯಾಗಿ ನನಗೆ ಇನ್ಯಾರೂ ಮನದಟ್ಟು ಮಾಡಿಕೊಟ್ಟಿಲ್ಲ.

9)ಅರಿವಿನ ಅಂತರ್ಜಲ–ಅಕ್ಷತಾ ಹುಂಚದಕಟ್ಟೆ, ಕವಯಿತ್ರಿ–ಪ್ರಕಾಶಕಿ, ಶಿವಮೊಗ್ಗ

ಅಂಬೇಡ್ಕರ್ ನನ್ನೊಳಗೆ ಮೊದಲ ಬಾರಿಗೆ ಇಳಿದದ್ದು ನಾನು ಪದವಿ ಓದುವಾಗ; ಅದೂ ಒಂದು ಸಂದಿಗ್ಧ ಸನ್ನಿವೇಶದಲ್ಲಿ. ನನ್ನ ಅಪ್ಪ ಅಮ್ಮನದು ಅಂತರ್ಜಾತಿ ವಿವಾಹವಾದ್ದರಿಂದ ಅಮ್ಮ ಶಾಲೆಗೆ ಸೇರಿಸುವಾಗ ‘ನನಗೆ ಜಾತಿ ಇಲ್ಲ’ ಎಂದು ಅರ್ಜಿಯಲ್ಲಿ ನಮೂದಿಸಿದ್ದಳು. ನಾನು ಪಿಯುಸಿಯವರೆಗೆ ಹಳ್ಳಿಯ ಶಾಲಾ ಕಾಲೇಜುಗಳಲ್ಲಿ ಓದಿದ್ದರೂ ಆ ಅಂಶ ಯಾವತ್ತೂ ನನಗೊಂದು ಸಮಸ್ಯೆಯಾಗಿರಲಿಲ್ಲ. ಮೇಷ್ಟ್ರುಗಳೂ ಅಪ್ಪಅಮ್ಮನಿಗೆ ಪರಿಚಿತರೇ ಆಗಿದ್ದು, ಅವರ ಬಗ್ಗೆ ಗೌರವವಿದ್ದುದರಿಂದ ಜಾತಿ ಇಲ್ಲದವಳೆಂದು ಯಾವತ್ತೂ ಕ್ಯಾತೆ ತೆಗೆಯುತ್ತಿರಲಿಲ್ಲ. ಬದಲಿಗೆ ಹೆಚ್ಚಿನ ಗೌರವದಿಂದಲೇ ನಡೆಸಿಕೊಳ್ಳುತ್ತಿದ್ದರು. ಆದರೆ ಶಿವಮೊಗ್ಗೆಯಲ್ಲಿ ಪದವಿ ಓದುವಾಗ ಅದೊಂದು ಸಮಸ್ಯೆ ಎನ್ನುವ ಹಾಗೆ ಆಯಿತು.

ಕಾಲೇಜಿನ ಕ್ಲರ್ಕ್ ಕರೆದು, ‘ನೋಡು, ಜಾತಿ ಕಾಲಂ ತುಂಬದಿದ್ದರೆ ತುಂಬಾ ಸಮಸ್ಯೆಯಾಗುತ್ತದೆ. ನಾಳೆ ಟಿಸಿ ಕೊಡಲು ಬರುವುದಿಲ್ಲ, ಸರಕಾರಿ ಕೆಲಸಕ್ಕೂ ನೀನು ಅರ್ಜಿ ಹಾಕುವಂತಿಲ್ಲ’ ಎಂದು ಹೆದರಿಸತೊಡಗಿದರು. ನಾನು ಯಾವುದೇ ಕಾರಣಕ್ಕೂ ಅಪ್ಪ ಅಮ್ಮನ ಎರಡು ಜಾತಿಯಲ್ಲಿ ಒಂದನ್ನು ಕೊಡಲು ತಯಾರಿರಲಿಲ್ಲ. ಆ ಕ್ಲರ್ಕ್ ಕಾಟ ತಪ್ಪಲಿಲ್ಲ. ಅವರು ಮಾತಾಡುವುದು ನೋಡಿದರೆ ಪರೀಕ್ಷೆಯನ್ನೇ ಬರೆಯಲು ಕೊಡುತ್ತಾರೋ ಇಲ್ಲವೋ ಎಂಬ ಭಯ ಹುಟ್ಟಿಸುವಂತಿತ್ತು.

ಆ ವರುಷ ನಮಗೆ ಅಂಬೇಡ್ಕರ್ ಅವರ ಪಾಠವಿತ್ತು. ಅದರಲ್ಲಿ ಅಂಬೇಡ್ಕರ್ ಭಾರತೀಯ ಸಮಾಜದ ಸ್ವಾಸ್ಥಕ್ಕೆ ಅಂತರ್ಜಾತೀಯ ಮದುವೆಗಳು ಅತ್ಯವಶ್ಯಕ ಮತ್ತು ಅಂತರ್ಜಾತೀಯ ವಿವಾಹದಿಂದ ಪ್ರತಿಭಾನ್ವಿತ ಮಕ್ಕಳು ಜನಿಸುತ್ತಾರೆ ಎಂದು ವಿವರಿಸಿದ್ದರು. ನಾನೆಷ್ಟು ಪ್ರತಿಭಾನ್ವಿತೆಯೋ ಗೊತ್ತಿಲ್ಲ. ಆದರೆ ಆ ಪಾಠ ಓದಿದ ನಂತರ ನಾನು ಹೋಗಿ ಕ್ಲರ್ಕ್‍ಗೆ ಸ್ಪಷ್ಟವಾಗಿ ಹೇಳಿಬಂದೆ – ‘ಅದೇನಾಗುತ್ತದೆಯೋ ಆಗಲಿ. ನಾನಂತೂ ನನಗಿಲ್ಲದ ಜಾತಿಯನ್ನು ಇಲ್ಲಿ ಕೊಡಲಾರೆ.’

ಅದಾಗಿ ಇಷ್ಟು ವರುಷದ ನಂತರ ಅಂಬೇಡ್ಕರ್ ಅವರನ್ನು ಅಲ್ಪಸ್ವಲ್ಪ ಓದಿದ್ದೇನೆ, ಅರಿತಿದ್ದೇನೆ. ಆದರೆ ಅವರು ಹೇಳಿದ ದಾರಿಯಲ್ಲಿ ಪೂರ್ತಿ ನಡೆದಿದ್ದೇನೆಂದು ಹೇಳಲಾರೆ. ಅದೊಂದು ಪಯಣ. ಅಲ್ಲಿ ನುಡಿ ಸುಲಭ, ನಡೆ ಕಷ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.