ರೋಬಾಟುಗಳು ಆಧುನಿಕ ಜೀವನಶೈಲಿಯ ಅವಿಭಾಜ್ಯ ಅಂಗವಾಗಿವೆ. ಈ ಹಿಂದೆ ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ ಯಾವುದೇ ಅಪಾಯವಿಲ್ಲದೆಯೇ ಸುಲಭವಾಗಿ ಯಾಂತ್ರಿಕ ಕೆಲಸಗಳನ್ನು ನಿರ್ವಹಿಸಲು ಈ ರೊಬಾಟುಗಳನ್ನು ನಿಯೋಜಿಸಿಕೊಳ್ಳಲಾಗುತ್ತಿತ್ತು. ಉದಾಹರಣೆಗೆ, ಭಾರೀ ವಾಹನಗಳ ತಯಾರಿಕಾ ಕಂಪೆನಿಗಳು. ಈಗ ಮುಂದುವರೆದು ಆಸ್ಪತ್ರೆ, ಶಿಕ್ಷಣ, ಲಾಜಿಸ್ಟಿಕ್ಸ್, ದೂರಸಂಪರ್ಕ, ಇತ್ಯಾದಿ ಕ್ಷೇತ್ರಗಳಲ್ಲಿ ರೋಬಾಟುಗಳ ಪ್ರವೇಶವಾಗಿರುವುದು ನಮ್ಮೆಲ್ಲರಿಗೂ ತಿಳಿದಿದೆ. ಇನ್ನೂ ಕೆಲವೆಡೆ ಸಿರಿವಂತರಂತೂ ರೋಬಾಟುಗಳನ್ನೇ ತಮ್ಮ ಮನೆಯ ಸದಸ್ಯರೆಂದು ಭಾವಿಸಿಕೊಂಡು ಜೀವಿಸುವುದುಂಟು. ಅರ್ಥಾತ್, ರೋಬಾಟುಗಳು ಅಷ್ಟು ಅಚ್ಚುಕಟ್ಟಾಗಿ ನಮ್ಮೆಲ್ಲಾ ಅವಶ್ಯಕತೆಗಳನ್ನು ಪೂರೈಸಬಲ್ಲವು ಎನ್ನುವುದು ಸೋಜಿಗದ ಸಂಗತಿ.

ರೋಬಾಟುಗಳಲ್ಲಿ ಅವಶ್ಯಕತೆಗಳಿಗೆ ತಕ್ಕಂತೆ ನಾನಾ ವಿಧಗಳಿವೆ. ಆಟೋಮೇಟೆಡ್ ಮೊಬೈಲ್ ರೋಬೋಟ್, ಆರ್ಟಿಕ್ಯುಲೇಟೆಡ್ ರೋಬೋಟ್, ಹ್ಯೂಮನಾಯ್ಡ್ಸ್, ಕೋಬೋಟ್ಸ್, ಇತ್ಯಾದಿ. ಇವುಗಳಲ್ಲಿ ಕೆಲವು ಕೇವಲ ನಿರ್ದೇಶಿಸಿದ ಕೆಲಸಗಳನ್ನು ಯಾವುದೇ ರೀತಿಯ ತೊಡಕಿಲ್ಲದೇ ಮಾಡುವಂಥವು. ಇವು ಮಾತನಾಡುವುದಿಲ್ಲ, ಭಾವನೆಗಳಂತೂ ಇಲ್ಲವೇ ಇಲ್ಲ. ಇತ್ತೀಚೆಗೆ ಸುದ್ದಿಯಲ್ಲಿರುವ ವಿಷಯವೇನೆಂದರೆ, ‘ರೋಬಾಟುಗಳೂ ನಮ್ಮಂತೆಯೇ ಭಾವಿಸಬಲ್ಲವೇ’ – ಎನ್ನುವುದು. ಇದಕ್ಕೆ ಸಂಬಂಧಿಸಿದಂತೆ ಅದರ ಅನುಕೂಲ, ಅನನುಕೂಲಗಳು ಮತ್ತೊಂದು ದೊಡ್ಡ ಚರ್ಚೆಯ ವಿಷಯ. ಇದು ರೋಬೋಟಿಕ್ಸ್‌ನಲ್ಲಿ ಆಗುತ್ತಿರುವ ಕ್ಷಿಪ್ರವೇಗದ ಬೆಳವಣಿಗೆಯ ಸೂಚನೆಯೂ ಹೌದು. ಪ್ರಸ್ತುತ, ರೋಬಾಟುಗಳಲ್ಲಿ ‘ಸೋಷಿಯಲ್ ರೋಬೋಟ್’, ಎಂದರೆ ‘ಸಾಮಾಜಿಕ ರೋಬಾಟು’ಗಳು ಟ್ರೆಂಡ್‌ನಲ್ಲಿವೆ. ಇವು ನಮ್ಮೊಡನೆ ಮಾತನಾಡಬಲ್ಲವಂತೆ. ಅದುವೂ ನಮ್ಮದೇ ಆದ ಉಪಭಾಷೆಯಲ್ಲಿ! ಹೀಗೆಂದು ನಿನ್ನೆ ‘ಫ್ರಂಟಿಯರ್ಸ್ ಇನ್ ರೋಬೋಟಿಕ್ಸ್ ಅ್ಯಂಡ್ ಎಐ’ ಪತ್ರಿಕೆಯಲ್ಲಿ, ಜರ್ಮನಿಯ ಪೋಟ್ಸ್ಡ್ಯಾಮ್ ವಿಶ್ವವಿದ್ಯಾನಿಲಯದ ಕ್ಯಾಥರೀನಾ ಕುನೆ ಅವರು ವರದಿ ಮಾಡಿದ್ದಾರೆ.

ಈ ಸಾಮಾಜಿಕ ರೋಬಾಟುಗಳು ನಮಗೆ ಕಲಿಯಲು, ಬೋಧಿಸಲು, ಶುಶ್ರೂಷೆ ಮಾಡಲು – ಹೀಗೆ ಸಾಕಷ್ಟು ಕೆಲಸಗಳಲ್ಲಿ ನೆರವಾಗಬಲ್ಲವು. ಅವು ವಿನ್ಯಾಸವಾಗಿರುವುದೇ ನಮಗೆ ಸಹಾಯವಾಗಲೆಂದು, ನಮ್ಮ ಜೀವನವನ್ನು ಆರಾಮವಾಗಿಸಲು; ಇದರಲ್ಲಿ ಅವು ನಮ್ಮೊಡನೆ ಹೇಗೆ ಸಂವಹಿಸುತ್ತವೆ ಎನ್ನುವುದೂ ಸೇರಿದೆಯೆನ್ನಿ! ನಮ್ಮೆಲ್ಲರಿಗೂ ಅವು ನಮ್ಮೊಂದಿಗೆ ಹೇಗೆ ಮಾತನಾಡಬೇಕು ಎಂದಾಗ ವಿಭಿನ್ನ ಅಭಿಪ್ರಾಯಗಳಿವೆ. ಕೆಲವರಿಗೆ ಅವು ನಮ್ಮದೇ ಉಪಭಾಷೆ ಮಾತನಾಡಿದರೆ ಇಷ್ಟವಾಗುತ್ತದೆ. ಉದಾಹರಣೆಗೆ, ಮೈಸೂರು-ಬೆಂಗಳೂರಿನ ಕನ್ನಡಿಗರಿಗೆ ಗ್ರಾಂಥಿಕ ಭಾಷೆಯಾದ ಮೈಸೂರು ಕನ್ನಡ ಇಷ್ಟವಾದರೆ, ಮಂಗಳೂರಿಗರಿಗೆ ಅವರ ಕನ್ನಡವೇ ಚಂದವೆನ್ನಿಸುತ್ತದೆ. ಆಯಾ ಭಾಷಿಕರಿಗೆ ಅವರವರ ಭಾಷೆಯತ್ತ ಅಭಿಮಾನವಿರುವುದು ಸಹಜ. ಸಮೀಕ್ಷೆಯ ಪ್ರಕಾರ, ಕೆಲವರು ರೋಬಾಟುಗಳು ಆಪ್ತವೆನ್ನಿಸುವ ತಮ್ಮದೇ ರೀತಿಯ ಉಚ್ಚಾರಣೆಯಲ್ಲಿ ಉಪಭಾಷೆಗಳಲ್ಲಿ ಮಾತನಾಡಬೇಕು ಎಂದು ಬಯಸಿದರೆ, ಇನ್ನೂ ಕೆಲವರು ‘ಸ್ಟ್ಯಾಂಡರ್ಡ್’ ಎನ್ನಿಸುವ ಭಾಷೆಗಳಲ್ಲಿ ಮಾತನಾಡುವುದನ್ನು ಬಯಸುತ್ತಾರಂತೆ.

ಈ ಸಾಮಾಜಿಕ ರೋಬಾಟುಗಳು, ಜನರ ಆರಾಮವನ್ನೇ ಆಧರಿಸಿವೆಯಾದರೂ ಇವು ನಮಗೆ ವಿಶ್ವಾಸಾರ್ಹ ಮತ್ತು ಯೋಗ್ಯವೆನಿಸಿದಾಗಲೇ ನಾವು ಅವನ್ನು ಹೆಚ್ಚೆಚ್ಚು ಬಳಸಿಕೊಳ್ಳಲು ಸಾಧ್ಯ. ಅವುಗಳ ಭಾಷೆಯ ಉಚ್ಚಾರಣೆ ಮನುಷ್ಯನಂತೆಯೇ ಇದ್ದಾಗ ನಮಗೆ ಅವುಗಳ ಸಾಮರ್ಥ್ಯ ಅರ್ಥವಾಗುತ್ತದೆ. ಅರ್ಥಾತ್, ಅವುಗಳು ‘ಸ್ಟ್ಯಾಂಡರ್ಡ್’ ಎನ್ನಿಸುವ ಗ್ರಾಂಥಿಕ ಭಾಷೆಯನ್ನಾಡಿದಾಗ ನಮಗೆ ಅವು ಬಹಳ ಬುದ್ಧಿಶಕ್ತಿಯುಳ್ಳವು ಎಂದೆನಿಸಿದರೆ, ಉಪಭಾಷೆಯನ್ನಾಡಿದಾಗ ನಮಗವು ಮತ್ತಷ್ಟು ಅಪ್ತವೆನಿಸುತ್ತವೆ. ನಮ್ಮ ಮನೆಯ ಸದಸ್ಯರೊಂದಿಗೆ ಹರಟೆ ಹೊಡೆಯುವಂತೆ ಸಾಮಿಪ್ಯದ ಭಾವನಾತ್ಮಕ ಅನುಭವ ಬೇಕೆಂದಾಗ ಉಪಭಾಷೆಯನ್ನೂ, ಕಲಿಕೆ–ಬೊಧನೆಯ ಕೆಲಸಗಳಿಗೆ ಸಂಬಂಧಿಸಿದ ಸೇವೆಗಳಿಗಾಗಿ ಸ್ಟ್ಯಾಂಡರ್ಡ್ ಭಾಷೆಯನ್ನೂ ಬಳಸಿಕೊಳ್ಳಬಹುದು. ಎರಡೂ ಭಾಷೆಗಳನ್ನು ಮಾತನಾಡಬಲ್ಲವಾದರೆ ನಮಗೆ ಬೇಕೆಂದ ಭಾಷೆಯಲ್ಲಿ ನಮ್ಮ ಕಾರ್ಯ ಸಾಧಿಸಿಕೊಳ್ಳಬಹುದಲ್ಲವೆ?

ರೋಬಾಟುಗಳು ಉಪಭಾಷೆಯಲ್ಲಿ ಸಂವಹಿಸುತ್ತವೆಯಾದರೂ ಅದು ಜನರಿಗೆ ಎಷ್ಟು ಒಪ್ಪಿತವಾಗಿವೆ ಎಂದು ಪರೀಕ್ಷಿಸಬೇಕಲ್ಲವೆ? ಇದಕ್ಕಾಗಿ ವಿಜ್ಞಾನಿಗಳು ಬರ್ಲಿನ್‌ನ 120 ಜನರನ್ನು ಆರಿಸಿಕೊಂಡು ಸಮೀಕ್ಷೆ ನಡೆಸಿದ್ದಾರೆ. ಇವರಿಗೆ ರೋಬಾಟುಗಳು ಸ್ಟ್ಯಾಂಡರ್ಡ್ ಜರ್ಮನ್ ಭಾಷೆ ಹಾಗೂ ಸ್ನೇಹಶೀಲವೆನ್ನಿಸುವ ಬರ್ಲಿನ್‌ನ ಉಪಭಾಷೆಗಳೆರಡನ್ನೂ ಮಾತನಾಡುವ ವೀಡಿಯೋಗಳನ್ನು ಪ್ರದರ್ಶಿಸಿದ್ದಾರೆ. ಹೆಚ್ಚಿನವರಿಗೆ, ಜರ್ಮನ್ನರಲ್ಲದೇ ಅಲ್ಲಿ ವಾಸಿಸುತ್ತಿದ್ದ ಇತರರಿಗೂ ಬರ್ಲಿನ್ ಉಪಭಾಷೆ ಸುಲಭವಾಗಿ ಅರ್ಥವಾಗಿತ್ತಂತೆ. ಭಾಗವಹಿಸಿದವರು ಎಷ್ಟು ಜನ ಸ್ಥಳೀಯರು ಹಾಗೂ ಇತರರಲ್ಲಿ ಯಾರ್ಯಾರು ಎಷ್ಟು ವರ್ಷಗಳಿಂದ ಬರ್ಲಿನ್ ಉಪಭಾಷೆಯನ್ನು ಮಾತನಾಡುತ್ತಿದ್ದಾರೆ, ಅವರಿಗೆ ಭಾಷೆಯ ಮೇಲಿದ್ದ ಹಿಡಿತವೆಲ್ಲವನ್ನೂ ಮೊದಲಿಗೆ ಸಮೀಕ್ಷೆ ಮಾಡಿ ನಂತರ, ರೋಬಾಟುಗಳ ಸಾಮರ್ಥ್ಯದ ಬಗೆಗಿನ ಅವರ ಅಭಿಪ್ರಾಯಗಳನ್ನು ಕ್ರೋಡೀಕರಿಸಿದ್ಧಾರೆ.

ಸಾಮಾನ್ಯವಾಗಿಯೇ ಬಹುತೇಕರು ರೋಬಾಟುಗಳು ಸ್ಟ್ಯಾಂಡರ್ಡ್ ಜರ್ಮನ್ ಭಾಷೆ ಮಾಡನಾಡುವುದನ್ನೇ ಆರಿಸಿಕೊಂಡರಾದರೂ, ಬರ್ಲಿನ್ ಉಪಭಾಷೆ ಮಾತನಾಡುತ್ತಿದ್ದವರೆಲ್ಲರೂ ರೋಬಾಟುಗಳ ಉಪಭಾಷೆಯ ಕಡೆಗೇ ಒಲವು ತೋರಿದರಂತೆ. ಹಾಗಾಗಿ ನಮ್ಮ ಹಾಗೂ ರೋಬಾಟುಗಳ ನಡುವೆ ಹೆಚ್ಚಿನ ಸಾಮ್ಯತೆಯಿದ್ದಲ್ಲಿ ನಮಗೆ ಅವು ವಿಶ್ವಾಸಾರ್ಹವೆನಿಸುವುದು ಸಹಜ ಎಂದಾಯಿತು. ಭಾಗವಹಿಸಿದವರಲ್ಲಿ ಫೋನು ಹಾಗೂ ಟ್ಯಾಬ್ಲೆಟ್‌ಗಳನ್ನು ಬಳಸುತ್ತಿದ್ದವರೆಲ್ಲರೂ ಉಪಭಾಷೆಯಲ್ಲಿ ಮಾತನಾಡುವುದನ್ನು ಆರಿಸಿಕೊಂಡರೆ, ಲ್ಯಾಪ್‌ಟಾಪುಗಳ ಬಳಕೆದಾರರು ಸ್ಟ್ಯಾಂಡರ್ಡ್ ಜರ್ಮನ್ ಭಾಷೆಯನ್ನು ಇಷ್ಟಪಟ್ಟರಂತೆ. ವಿಜ್ಞಾನಿಗಳು ತೋರಿಸಿದ ವಿಡಿಯೊಗಳನ್ನು ಫೋನು ಹಾಗೂ ಟ್ಯಾಬ್ಲೆಟ್‌ಗಳಲ್ಲಿ ನೋಡುವಾಗ ಅವರ ಗಮನ ಬೇರೆಡೆಗೆ ಹೊರಳುವುದು ಸಾಮಾನ್ಯವಾದ್ದರಿಂದ ಈ ಅಭಿಪ್ರಾಯವಿರಬಹುದು ಎಂಬುದು ವಿಜ್ಞಾನಿಗಳ ಅಂದಾಜು.

ಕೇವಲ ಇಷ್ಟು ಮಾಹಿತಿಗಳಿಂದ ರೋಬಾಟುಗಳು ಉಪಭಾಷೆಯಲ್ಲಿ ಸಂವಹಿಸಿಸುವುದರ ಬಗ್ಗೆ ಜನರ ಪರ–ವಿರೋಧಗಳನ್ನು ತೀರ್ಮಾನಿಸಲಾಗದು. ಆದರೂ ಸ್ಟ್ಯಾಂಡರ್ಡ್ ಭಾಷೆಯನ್ನು ಬಳಸಿದಾಗ ರೋಬಾಟುಗಳ ಸಾಮರ್ಥ್ಯವೂ ದಕ್ಷವೆನಿಸುತ್ತದೆ; ವಿಷಯಗಳ ರಾಶಿಯನ್ನು ಕಡಿಮೆ ಮಾಡಿ ಅವುಗಳಲ್ಲಿ ನಿಖರತೆಯನ್ನು ಸಾಧಿಸಲು ಸಹಾಯವಾಗುತ್ತದೆ ಎನ್ನುತ್ತಾರೆ, ಕ್ಯಾಥರೀನಾ. ಸಂಭಾಷಣೆಯಲ್ಲಿ ರೋಬಾಟುಗಳ ಅರಿವಿನ ಮಟ್ಟ ಹಾಗೂ ಪ್ರಮಾಣವನ್ನು ಪರೀಕ್ಷಿಸುವ ಯೋಜನೆಗಳೂ ಇವೆಯಂತೆ.

ಹೀಗಿದ್ದರೂ, ರೋಬಾಟುಗಳು ಉಪಭಾಷೆಯಲ್ಲಿ ಸಂವಹನ ನಡೆಸಿದಾಗ ಅದನ್ನು ಕೇಳಿಸಿಕೊಂಡವರು ಹೇಗೆ ಗ್ರಹಿಸಿಕೊಳ್ಳತ್ತಾರೆ ಎಂಬುದು ಅವುಗಳ ವರ್ಚಸ್ಸನ್ನು ಅಳೆಯಲಿದೆ. ಸಂಭಾಷಣೆಯಲ್ಲಿ ಸಂದರ್ಭಗಳು ಬಹಳ ಪ್ರಧಾನವಾಗಿರುತ್ತವೆ. ಹಾಗಾಗಿ ನೈಜ ಸಂದರ್ಭಗಳಲ್ಲಿ ಮಾತನಾಡುವ ಸಾಮಾಜಿಕ ರೋಬಾಟುಗಳ ಬಳಕೆಯ ಬಗ್ಗೆ ಹೆಚ್ಚೆಚ್ಚು ಅಧ್ಯಯನದ ಅಗತ್ಯವಿದೆ ಎನ್ನುತ್ತಾರೆ, ಕ್ಯಾಥರೀನಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.