ನಮ್ಮ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ – ಎಂದು ಕೇಳಿದರೆ, ನಮ್ಮ ವರ್ಣಮಾಲೆಯಲ್ಲಿ 49 ಅಕ್ಷರಗಳಿವೆ ಮತ್ತು ನೂರಿಪ್ಪತ್ತೈದು ಇಮೋಜಿಗಳಿವೆ ಎಂದು ಹೊಸಕಾಲದ ಯಾರು ಬೇಕಾದರೂ ಹೇಳಿಯಾರು! ನಾವು ಹೇಳಬೇಕಾದ್ದನ್ನು ನಮ್ಮ ಭಾಷೆಯಲ್ಲೇ ಹೇಳಿದರಾಗದೇ? ಇಮೋಜಿಯ ಊರುಗೋಲು ಬೇಕಾಗುವುದು ಭಾವ ಕುಂಟಿದರೆ ಮಾತ್ರ ಎನ್ನುವವರೂ ಇದ್ದಾರು. ಆಶ್ಚರ್ಯ ಸೂಚಕ ಚಿಹ್ನೆಯನ್ನು ಬಳಸುವುದು ಅಂದರೆ ನಮ್ಮ ಜೋಕಿಗೆ ನಾವೇ ನಕ್ಕ ಹಾಗೆ ಎಂದು Scott Fitzgerald ಹೇಳಿದ್ದೂ ಈ ತರಹದ್ದೇ ನಂಬಿಕೆಯಿಂದ. ಇಮೋಜಿಗಳನ್ನು ಬಳಸಲು ಹಿಂಜರಿಯುತ್ತಿದ್ದ ನಾನೂ ‘ನಿಮ್ಮ ಜೋಕು ಅರ್ಥವೇ ಆಗುವುದಿಲ್ಲ’ ಎಂಬ ಆರೋಪದಿಂದ ತಪ್ಪಿಸಿಕೊಳ್ಳಲಿಕ್ಕೇ ಮೊದಮೊದಲು ಅವುಗಳಿಗೆ ಶರಣಾಗಿ, ‘ಜೋಕೆ! ಹಿಂದೆ ಒಂದು ತಮಾಷೆಯ ವಾಕ್ಯವಿದೆ’ ಎಂಬ ಸೂಚನಾಫಲಕದಂತೆ ನಕ್ಕು ನಾಲಗೆ ಹೊರಚಾಚುವ ಇಮೋಜಿಯ ಅಸ್ತ್ರ ಪ್ರಯೋಗಿಸುತ್ತಿದ್ದೆ. ನನಗೆ ಆಗ ಗೊತ್ತಿರದೇ ಇದ್ದ ತಮಾಷೆ ಎಂದರೆ ಈ ಇಮೋಜಿಗಳ ಪೂರ್ವಜನಾದ ‘ಇಮೋಟಿಕಾನ್’ ಹುಟ್ಟಿದ್ದು ಇಂತಹದ್ದೇ ಕಾರಣಕ್ಕೆ ಎಂಬ ವಿಚಾರ.

ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯದ ಸ್ಕಾಟ್ ಫಾಲ್ಮನ್ ಎಂಬ ತಂತ್ರಜ್ಞರು ಎಂಬತ್ತರ ದಶಕದಲ್ಲಿ ಕಾಲೇಜಿನ ಬುಲೆಟಿನ್ ಬೋರ್ಡಿನಲ್ಲಿ ಲೇಖನಗಳನ್ನು ಹಾಕುವಾಗ, ಅವರ ಜೋಕುಗಳು ಪಕ್ಕನೆ ಓದುವವರ ತಲೆಗೇ ಹೋಗುತ್ತಿರಲಿಲ್ಲವಂತೆ. ಹೀಗಾಗಿ ‘ಇದನ್ನು ಓದಿ ಯಾರೂ ಸಿಟ್ಟಾಗಬೇಡಿ ಸ್ವಾಮೀ, ಇದು ಗಂಭೀರವಾಗಿ ಹೇಳಿದ್ದಲ್ಲ, ತಮಾಷೆಗೆ, ವ್ಯಂಗ್ಯವಾಗಿ ಹೇಳಿದ್ದು’ ಎಂಬ ಸುಳಿವು ಕೊಡಲಿಕ್ಕೆ, ಒಂದು ನಗುಮುಖದ ಚಿತ್ರರೂಪದ ಸಂಕೇತವನ್ನು ಹಾಕಿದರೆ ಹೇಗೆ ಎಂಬ ಹೊಳಹು ಅವರ ತಲೆಗೆ ಬಂತು. ಹೀಗೆ, ಟಿವಿ ಧಾರಾವಾಹಿಗಳಲ್ಲಿ ಹಿನ್ನೆಲೆಯಲ್ಲಿ ನಗುವ ಟ್ರ್ಯಾಕ್ ಇರುವ ಹಾಗೆ, ಜೋಕು, ಬೇಸರಗಳ ತೋರುಗಂಬಗಳಾಗಿ ನಗುಮುಖ, ಅಳುಮುಖಗಳನ್ನು ತೋರಿಸುವ ‘ಇಮೋಟಿಕಾನ್’ ಹುಟ್ಟಿತು.

ಇಮೋಶನ್ ಹಾಗೂ ಐಕನ್ ಎಂಬ ಎರಡು ಪದಗಳನ್ನು ಸೇರಿಸಿ ‘ಇಮೋಟಿಕಾನ್’ ಎಂಬ ಪದ ಇರುವಂತೆ ಇಮೋಜಿಯಲ್ಲೂ ಇರುವುದು ಇಮೋಶನ್ ಎಂಬ ಪೂರ್ವಪದ ಎಂದು ನೀವಂದುಕೊಂಡಿದ್ದರೆ ಅದು ಸರಿಯಲ್ಲ; ಅದು ಜಪಾನೀಭಾಷೆಯ ‘ಇ’ ಮತ್ತು ‘ಮೋಜಿ’ ಎಂಬ ಪದಗಳ ಜೋಡಣೆಯಿಂದ ಆಗಿರುವ ಪದ. ‘ಇ’ ಅಂದರೆ ಚಿತ್ರ ಹಾಗೂ ‘ಮೋಜಿ’ ಅಂದರೆ ಅಕ್ಷರ. ಇದಕ್ಕೆ ಜಪಾನೀಭಾಷೆಯ ಹೆಸರು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸುಲಭ. ಜಪಾನಿನ ಎನ್ಟಿಟಿ ಡೊಕೊಮೊ ಕಂಪನಿಯ ಶಿಗೆಟಾಕಾ ಕುರಿತಾ ಎಂಬ ಎಂಜಿನಿಯರನೇ ಮೊದಲ ಇಮೋಜಿಗಳನ್ನು ವಿನ್ಯಾಸ ಮಾಡಿದವನು. ದೂರದರ್ಶನದ ಹವಾಮಾನ ವರದಿಯಲ್ಲಿ ಸೂರ್ಯನ ಚಿತ್ರ, ಮೋಡದ ಚಿತ್ರಗಳನ್ನು ತೋರಿಸಿ, ‘ಮೋಡ ಕವಿದ ವಾತಾವರಣ’ವನ್ನೋ ಬಿರುಬಿಸಿಲನ್ನೋ ಭಾರೀಮಳೆಯನ್ನೋ ಸೂಚಿಸುವುದನ್ನು ನೋಡಿ, ಭಾವನೆಗಳಿಗೆ ಮೋಡ ಕವಿಯುವುದನ್ನೂ, ಬಿರುಬಿಸಿಲಿನಂತಹ ಮೂಡನ್ನೂ, ಭಾರೀ ಮಳೆಯಂತಹ ಮೆಸೇಜನ್ನೂ ಚಿತ್ರಗಳಿಂದ ಯಾಕೆ ತೋರಿಸಿಕೊಡಬಾರದು ಎಂಬ ಕಲ್ಪನೆ ಅವನಿಗೆ ಬಂತು. ಜೊತೆಗೆ ಚಿತ್ರಗಳಲ್ಲೇ ಕಥೆ ಹೇಳುವ ಮಾಂಗಾ ಕಾಮಿಕ್ಸ್ ಅನ್ನೂ ಓದಿದ ನೆನಪು ಅವನಿಗಿತ್ತು. ಹೀಗೆ, ಮನುಷ್ಯ ಶಿಲಾಯುಗಗಳಲ್ಲಿ ಗುಹೆಗಳಲ್ಲಿ ಚಿತ್ರರೂಪದ ಸಂದೇಶಗಳನ್ನು ಬಿಡಿಸಿ, ಕ್ರಮೇಣ ಶತಶತಮಾನಗಳಲ್ಲಿ ನೂರಾರು ಸಂಕೀರ್ಣ ಲಿಪಿಗಳನ್ನು ಬಳಸಿ ಈಗ ಒಂದು ಸುತ್ತು ಮುಗಿಸಿ ಮತ್ತೆ ಚಿತ್ರಲಿಪಿಗೆ ಬರುವ ಕಾರ್ಯಕ್ರಮಕ್ಕೆ ನಾಂದಿಯಾಯಿತು!

ಆ್ಯಪಲ್ ಕಂಪನಿಯವರು ಜಪಾನಿನಲ್ಲಿ ಬಿಟ್ಟರೆ ಬೇರೆಲ್ಲೂ ಇದು ಕೆಲಸಕ್ಕೆ ಬರಲಾರದು ಎಂದು ಇವುಗಳನ್ನು ಆರಂಭದ ವರ್ಷಗಳಲ್ಲಿ ಬೇರೆ ದೇಶದ ಗ್ರಾಹಕರಿಗೆ ಕಾಣದಂತೆ ಮಾಡಿದ್ದರಂತೆ! ಗೂಗಲ್ಲಿನವರು ಜಪಾನಿನ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಾಗಲೂ ಜಿಮೇಲಿನಲ್ಲಿ ಈ ಇಮೋಜಿಗಳು ಇರಬೇಕೇ? ಇದ್ದರೆ ಎಷ್ಟು ಇರಬೇಕು ಎಂದು ತಜ್ಞರ ಸಮಿತಿಯಲ್ಲಿ ಚರ್ಚೆಗಳನ್ನು ಮಾಡಿದ್ದರಂತೆ. ಐಸ್ಕ್ರೀಮಿನ ಕೋನಿನ ರೂಪದ ಮಲದ ಇಮೋಜಿ ಯಾಕೆ ಬೇಕು ಎಂದು ಈ ತಜ್ಞರಿಗೆ ಅರ್ಥವೇ ಆಗಲಿಲ್ಲವಂತೆ. ಕಡೆಗೆ ಅದಿಲ್ಲದಿದ್ದರೆ ವರ್ಣಮಾಲೆಯಿಂದ ಒಂದು ಅಕ್ಷರವನ್ನೇ ತೆಗೆದಂತೆ ಅಂತ ಜಪಾನೀಯರು ಹೇಳಿದ್ದರಿಂದ ಅದು ಉಳಿದುಕೊಂಡಿತಂತೆ!

ನಾವು ಮಾತಾಡುವಾಗ ಶೇ. ಏಳರಷ್ಟು ಮಾತ್ರ ಶಬ್ದಗಳಿಂದ ಸಂವಹನವಾಗುವುದು; ಹೇಳಿದ ಶೈಲಿ, ಸ್ವರದ ಏರಿಳಿತ ಇವುಗಳಿಂದ ಶೇ. ಮೂವತ್ತೆಂಟರಷ್ಟು ಅರ್ಥ ಹೊರಡುವುದು; ಕಣ್ಣಿನ ಭಾವ, ಹುಬ್ಬು, ಕೈಕರಣ ಇವುಗಳಿಂದ ಶೇ. ಐವತ್ತೈದರಷ್ಟು ಸಂವಹನ ಆಗುವುದು ಎಂದು ಅಧ್ಯಯನವೊಂದು ತಿಳಿಸಿದೆ. ಶೈಲಿ, ಸ್ವರದ ಏರಿಳಿತ, ಬಾಡಿ ಲ್ಯಾಂಗ್ವೇಜ್ ಇವೆಲ್ಲ ಮಾಡುವ ಕೆಲಸವನ್ನು ಇಮೋಜಿಗಳು ಮಾಡುತ್ತವೆ ಎಂಬ ಕಾರಣಕ್ಕೆ ಅವುಗಳಿಗೆ ಅಷ್ಟೊಂದು ಪ್ರಸಿದ್ಧಿ ಸಿಕ್ಕಿರಬೇಕು. ಹೇಳಿದ್ದರ ಸನ್ನಿವೇಶದ ಭಾವವನ್ನು ಪರಿಣಾಮಕಾರಿಯಾಗಿ ಹೇಳುವಷ್ಟು ಭಾಷಾಸಾಮರ್ಥ್ಯ ಇರದವರಿಗೆ, ಇಂತಹ ಭಾವಕ್ಕೆ ಇಂತಹ ಚಿತ್ರ ಎಂಬ ಸಿದ್ಧಸೂತ್ರದ ಪರಿಹಾರ ಈ ಮಟ್ಟಕ್ಕೆ ಒದಗಿ ಬಂದೀತು ಎಂದು ಯಾರಿಗೆ ಗೊತ್ತಿತ್ತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.