ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪುಗೆಯೇ ಆರೈಕೆ

Published 3 ಮೇ 2024, 23:30 IST
Last Updated 3 ಮೇ 2024, 23:30 IST
ಅಕ್ಷರ ಗಾತ್ರ

ಹಗ್, ಅಪ್ಪುಗೆ, ಆಲಿಂಗನ... ಪದಗಳಷ್ಟೇ ಅಲ್ಲ, ಇದರ ಪದರುಗಳೂ ಅಷ್ಟೇ ನವಿರು. ನೋವು, ಸಂಕಟ, ದುಃಖ, ಅವಮಾನ, ಎದೆಗುದಿ, ಕಳವಳ, ತಳಮಳಗಳನ್ನೆಲ್ಲ ಒಂದು ತೋಳಿನಿಂದ ಬದಿಗೆ ಸರಿಸುವ; ಇನ್ನೊಂದು ತೋಳಿನಿಂದ ಒಲವು, ಪ್ರೀತಿ, ಅನುರಾಗ, ಅಕ್ಕರೆ, ವಾತ್ಸಲ್ಯ, ಸಮಾಧಾನ, ಕಕ್ಕುಲಾತಿ, ಅಂತಃಕರಣದ ಮೂಲಕ ಚೈತನ್ಯವನ್ನು ನರನಾಡಿಗಳಿಗೆ ರವಾನಿಸುವ ಅಪೂರ್ವ ಸಂಗಮವೇ ಅಪ್ಪುಗೆ.
ಅಳುವ ಕಂದನಿಗೆ, ದಣಿದ ಪತ್ನಿಗೆ, ನೊಂದ ಗೆಳತಿಗೆ, ಸಂಕಟದಲ್ಲಿರುವ ಪ್ರೇಯಸಿಗೆ, ಸೋತ ಗೆಳೆಯನಿಗೆ, ಆಯಾಸಗೊಂಡ ಪತಿಗೆ, ವಿಷಾದ ತುಂಬಿದ ಬಂಧುವಿಗೆ, ಸಂಕಷ್ಟದಲ್ಲಿರುವ ಆಪ್ತನಿಗೆ... ಒಂದು ಅಪ್ಪುಗೆ ಸಾವಿರ ಮಾತುಗಳಿಗೆ ಸಮ. ಒಂದೇ ಗಳಿಗೆಯಲ್ಲಿ ನೂರು ಭಾವಗಳನ್ನು ಮೀಟಬಲ್ಲ ಆ ಒಂದು ಆಲಿಂಗನ ವಿಸ್ಮಯದ ರೀತಿಯಲ್ಲಿ ದೇಹ–ಮನಸುಗಳಿಗೆ ಮುಲಾಮು ಸವರಬಲ್ಲದು.

ಎಲ್ಲಾ ಸಂದರ್ಭಕ್ಕೂ, ಎಲ್ಲಾ ಕಾಲಕ್ಕೂ ಸಲ್ಲುವ ಗುಣ ಅಪ್ಪುಗೆಗಿದೆ. ಸಾವಿನ ಮನೆಯ ಸಾಂತ್ವನದಿಂದ ಹಿಡಿದು, ಯಶಸ್ಸಿನ ಅಭಿನಂದನೆ, ಹಬ್ಬದ ಶುಭಾಶಯಗಳವರೆಗೆ ಎಲ್ಲಾ ಕಡೆ ಬೆಚ್ಚನೆಯ ಅಪ್ಪುಗೆಯೊಂದು ತನ್ನ ಸಂದೇಶವನ್ನು ಸಾರುತ್ತದೆ. ಮಾತುಗಳು ಹೊರಡದೇ ಇದ್ದಾಗ, ಮಾತುಗಳು ಮುಗಿದು ಹೋದಾಗ, ಮಾತುಗಳಿಗೆ ಅರ್ಥವೇ ಇಲ್ಲ ಎಂದೆನಿಸಿದಾಗ ಅಪ್ಪುಗೆ ಆ ಅಂತರವನ್ನು ತುಂಬುತ್ತದೆ. ಸ್ವಾಗತಕ್ಕೂ, ಸಂಭ್ರಮಕ್ಕೂ, ವಿದಾಯಕ್ಕೂ ಅಪ್ಪುಗೆ ತನ್ನ ಮುದ್ರೆಯನ್ನೊತ್ತುತ್ತದೆ. ‘ಇದು ನನ್ನ–ನಿನ್ನ ಕಡೆಯ ಭೇಟಿ’ ಎನ್ನುವ ವಿದಾಯದ ಮಾತಿಗೂ, ‘ವರ್ಷಗಳ ನಂತರ ಮತ್ತೆ ಒಂದಾದೆವಲ್ಲ’ ಎನ್ನುವ  ನೆಮ್ಮದಿಗೂ, ‘ಇನ್ನೆಂದೂ ಮತ್ತೆ ನನ್ನ ತೊರೆಯಬೇಡ’ ಎನ್ನುವ ವಾಗ್ದಾನಕ್ಕೂ ಬಿಗಿಯಾದ ಈ ಬೆಸುಗೆಯೊಂದೇ ಸಾಕಲ್ಲವೇನು?


ಅಂದಹಾಗೆ ಅಪ್ಪುಗೆಯಲ್ಲಿ ಔಷಧವಿದೆ ಎನ್ನುವ ಅಂಶವನ್ನು ವಿಜ್ಞಾನವೂ ಪುಷ್ಟೀಕರಿಸಿ ದಶಕಗಳೇ ಕಳೆದಿವೆ. ಬಳಲಿದ ಮನಸು–ದೇಹದ ದಣಿವನ್ನು ಪ್ರೀತಿಯ, ಮಮತೆಯ, ಒಲವಿನ, ಅಕ್ಕರೆಯ ಅಪ್ಪುಗೆಯೊಂದು ವಿಸ್ಮಯದ ರೀತಿಯಲ್ಲಿ ಉಪಶಮನ ಮಾಡಬಹುದು ಎಂದು ವೈದ್ಯಕೀಯ ವಿಜ್ಞಾನ ದೃಢೀಕರಿಸಿದೆ. ಇದೇ ಮೂಲಾಧಾರದ ಮೇಲೆ ರೂಪುಗೊಂಡ ಚಿಕಿತ್ಸೆ ‘ಕಾಂಗರೂ ಮದರ್ ಕೇರ್’ ನವಜಾತ ಶಿಶುಗಳ ಆರೈಕೆಯಲ್ಲಿ ಅಳವಡಿಸಿದ್ದಲ್ಲವೆ? ಎಲ್ಲಾ ನಂಟು–ಎಲ್ಲಾ ಅನುಬಂಧಗಳನ್ನೂ ಗಟ್ಟಿಗೊಳಿಸುವ ಬೆಸುಗೆ ಈ ಅಪ್ಪುಗೆ!

ಅಪ್ಪುಗೆಯಿಂದ ಆರೋಗ್ಯ
ಹೌದು, ಅಪ್ಪುಗೆಯನ್ನು ಅಷ್ಟೊಂದು ಲಘು ಅರ್ಥದಲ್ಲಿ ಕಾಣಬೇಡಿ ಎನ್ನುತ್ತಾರೆ ಸಂಶೋಧಕರು. ಕಲವಾರು ಪಾಶ್ಚಿಮಾತ್ಯ ರಾಷ್ಟ್ರಗಳು ಅಪ್ಪುಗೆಯಿಂದ ಉಂಟಾಗುವ ಆರೋಗ್ಯ ಲಾಭದ ಬಗ್ಗೆ ಅಧ್ಯಯನವನ್ನೂ ನಡೆಸಿವೆ. 

ಅಕ್ಕರೆಯ, ಆತ್ಮೀಯ, ಒಲವಿನ ಅಪ್ಪುಗೆಯಿಂದ ಮಿದುಳಿನಲ್ಲಿ ಆಕ್ಸಿಟೋಸಿನ್ ಎನ್ನುವ ಹಾರ್ಮೋನ್‌ ಬಿಡುಗಡೆಯಾಗುತ್ತದೆ ಮತ್ತು ಪಿಟ್ಯುಟರಿ ಗ್ರಂಥಿಯ ಸಹಾಯದಿಂದ ಇದು ರಕ್ತವಾಹಕಗಳಿಗೆ ಸಾಗುತ್ತದೆ.  ಇದನ್ನು ‘ಲವ್‌ ಹಾರ್ಮೋನ್‌’ ಎಂದೂ ಕರೆಯಲಾಗುತ್ತದೆ. ಹೃದಯ, ಸ್ತನ ಮತ್ತು ಗರ್ಭಾಶಯವನ್ನು ಒಳಗೊಂಡಂತೆ ದೇಹದ ಅಂಗಗಳ ಮೇಲೆ ಈ ಹಾರ್ಮೋನ್ ನೇರ ಪರಿಣಾಮ ಬೀರುತ್ತದೆ. ಮೆದುಳಿನಲ್ಲಿ ರಾಸಾಯನಿಕ ಸಂದೇಶವಾಹಕವಾಗಿಯೂ ಇದು ಕಾರ್ಯನಿರ್ವಹಿಸುತ್ತದೆ.

ಅಪ್ಪುಗೆಯಿಂದ ಉತ್ಪತ್ತಿಯಾಗುವ ಈ ಹಾರ್ಮೋನ್‌, ಮನಸಿನ ಆಯಾಸವನ್ನು ತಗ್ಗಿಸುವ ಮೂಲಕ ಒತ್ತಡವನ್ನು ಶಮನಮಾಡುವ ಶಕ್ತಿಯನ್ನು ಹೊಂದಿದೆ.  ಈ ಹಾರ್ಮೋನ್‌ ಪ್ರತಿರಕ್ಷಣಾ ಕಾರ್ಯವನ್ನು ಸುವ್ಯವಸ್ಥೆಯಲ್ಲಿಡುತ್ತದೆ. ಇದರಿಂದ ಉರಿಯೂತ ನಿವಾರಣೆ, ಪ್ರತಿರಕ್ಷಣಾ ಕೋಶಗಳ ಚಟುವಟಿಕೆಯ ಸುಧಾರಣೆಯಂತಹ ಲಾಭಗಳೂ ಇವೆ. ಅಷ್ಟೇ ಅಲ್ಲ, ಒಲವಿನ ಆಲಿಂಗನದಿಂದ ಸ್ರವಿಸುವ ಆಕ್ಸಿಟೋಸಿನ್ ಹೃದಯದ ಆರೋಗ್ಯವನ್ನೂ ಕಾಪಾಡುತ್ತದೆ. ಹೃದಯರಕ್ತನಾಳದ ಆರೋಗ್ಯಕ್ಕೂ ಕೊಡುಗೆ ನೀಡುತ್ತದೆ. ಒಪ್ಪುಗೆಯಿಂದ ಭಾವನೆಗಳೂ ಅರಳುತ್ತವೆ. ಪ್ರೀತಿ, ಕಾಳಜಿ, ಅನುರಾಗ, ಮಮತೆ ಮತ್ತು ಬೆಂಬಲದಂತಹ ಹಲವಾರು ಮಿಶ್ರಭಾವಗಳನ್ನು ಹೊರಡಿಸುವ ಅಪ್ಪುಗೆಯಿಂದ ಭಾವನಾತ್ಮಕ ಏರಿಳಿತಗಳು ಸುಸ್ಥಿತಿಯಲ್ಲಿರುತ್ತವೆ. ಹಾಗೆಯೇ, ಉತ್ತಮ ನಿದ್ರೆಗೂ ಇದು ಸಹಾಯಕ. 


ರಷ್ಯಾ, ಅಮೆರಿಕ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅತಿಥಿಗಳು, ಆತ್ಮೀಯರು, ಗೆಳೆಯರು ಎದುರಾದಾಗ ಪರಸ್ಪರ ಆಲಂಗಿಸಿಕೊಳ್ಳುವುದು, ಕೈಕುಲುಕುವುದು ಸಾಮಾನ್ಯ ವಾಡಿಕೆ. ಆದರೆ ಫ್ರಾನ್ಸ್‌, ಜಪಾನ್‌, ಮೆಕ್ಸಿಕೊ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಆಲಿಂಗನ ಸಾರ್ವಜನಿಕವಾದುದಲ್ಲ. ಭಾರತ ಹಾಗೂ ಕೆಲ ಮುಸ್ಲೀಂ ರಾಷ್ಟ್ರಗಳಲ್ಲಿಯೂ ಸಹ ಆಲಿಂಗನ ತೀರಾ ವೈಯಕ್ತಿಕ ಎಂದೇ ಭಾವಿಸಲಾಗುತ್ತದೆ. ಆದರೆ, ಇತ್ತೀಚೆಗೆ ಸಾರ್ವನಿಜಕ ಸ್ಥಳಗಳಲ್ಲಿ ಅತಿಥಿ–ಬಂಧುಗಳನ್ನು ಸಹ ಅಪ್ಪುಗೆಯ ಮೂಲಕ ಸ್ವಾಗತಿಸುವ ಪರಿಪಾಠ ಆರಂಭವಾಗಿದೆ.

ಚಳಿಗೆ ಬಿಸಿಲಿಗೊಂದೆ ಹದನ

ಅವನ ಮೈಯ ಮುಟ್ಟೆ

ಅದೇ ಘಳಿಗೆ ಮೈಯ ತುಂಬ

ನನಗೆ ನವಿರು ಬಟ್ಟೆ

ಎನ್ನುವ ಬೇಂದ್ರೆಯವರ ಈ ಕವನದ ಸಾಲು ಅಪ್ಪುಗೆಯ ಸವಿ ಸಾರುವುದಲ್ಲವೆ?

ಫ್ರೀ ಹಗ್‌ ವೃತ್ತಾಂತ

ಇತ್ತೀಚೆಗೆ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ 20ರ ಹರೆಯದ ಯುವತಿಯೊಬ್ಬಳು ‘Free hug’ ಎಂದು ಬರೆದಿದ್ದ ಫಲಕವನ್ನು ಹಿಡಿದುಕೊಂಡು ನೋಡುಗರ ಗಮನ ಸೆಳೆದಿದ್ದಳು. ಯಾರು ಬೇಕಾದರೂ ಬಂದು ತನ್ನನ್ನು  ಅಪ್ಪಿಕೊಳ್ಳಬಹುದು ಎಂದು ಯುವಕ-ಯುವತಿಯರಿಗೆ ಆಹ್ವಾನ ನೀಡಿದ್ದಳು. ಕಣ್ಣು ಮುಚ್ಚಿ ತೆರೆಯುವುದರಲ್ಲಿ ಹುಡುಗರ ಹಿಂಡು ಸರತಿ ಸಾಲಿನಲ್ಲಿ ಜಮಾಯಿಸಿದ್ದರು. ಕೂಡಲೇ ಪೊಲೀಸರು ಯುವತಿಯನ್ನು ಬೈದು ಕಳಿಸಿ, ಅಪ್ಪುಗೆಗೆ ಸಾಲಿನಲ್ಲಿ ನಿಂತಿದ್ದ ಯುವಕರನ್ನು ಚದುರಿಸಬೇಕಾಯಿತು.

‘ಅಯ್ಯೊ ಎಲ್ಲಿಗೆ ಬಂತು ಭಾರತೀಯ ಸಂಸ್ಕಾರ!’ ಎಂದು ಕೆಲವರು ಹಲುಬಿದರು. ‘ಹಾಗೆಲ್ಲಾ ಕಂಡಕಂಡಲ್ಲಿ, ಕಂಡಕಂಡವರಿಗೆ ಹಂಚುವ ಕ್ಯಾಂಡಿ ಅಲ್ಲ ಅಪ್ಪುಗೆ’ ಎಂದು ಕೆಲವರು ಸಿಟ್ಟಿಗೆದ್ದರು. ‘ಸಿಕ್ಕವರಿಗೆ ಸೀರುಂಡೆ...’ ಅಂತ ಕೆಲವರು ಮುಗಿಬಿದ್ದರು. ನೋಡನೋಡುತ್ತಿದ್ದಂತೆ ಪೊಲೀಸರು ಬಂದು ಅಪ್ಪುಗೆಯ ರಸಭಂಗ ಮಾಡಿದ್ದರು.

‘ಅಪ್ಪುಗೆ ಮನಸಿನ ಆಯಾಸವನ್ನು, ಅಸಹನೆಯನ್ನು ದೂರಮಾಡುತ್ತದೆ, ಮನುಷ್ಯ–ಮನುಷ್ಯರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಈಗ ತಾನೆ ಜನಿಸಿದ ಕೂಸುಗಳಿಂದ ಹಿಡಿದು, ಸಂಗಾತಿ, ಸ್ನೇಹಿತರು, ಸಹೋದರ–ಸಹೋದರಿಯರು, ಅಮ್ಮ–ಅಪ್ಪ ಎಲ್ಲರಿಗೂ ಪ್ರೀತಿಯ ಅಪ್ಪುಗೆ ಒಂದು ಉಡುಗೊರೆ’ ಎಂದು ವಾಖ್ಯಾನ ನೀಡಿದ ಯುವತಿ ಮನೆಯಿಂದ ದೂರದ ಬೆಂಗಳೂರಿಗೆ ವಲಸೆ ಬಂದ ಜನರಿಗೆ ಅಪ್ಪುಗೆಯ ಮೂಲಕ ಮನೆಯ ನಂಟನ್ನು ನೆನಪಿಸಲು ಈ ಮಾರ್ಗ ಆರಿಸಿಕೊಂಡಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT