ನಮಸ್ತೆ ಸರ್, ನನಗೆ ಆಗಾಗ್ಗೆ ಕೆಟ್ಟ ಕನಸುಗಳು ಬೀಳುತ್ತಿರುತ್ತವೆ. ಇಂಥ ಕನಸು ಬಿದ್ದಾಗ ಏನೋ ಒಂದು ಕೆಟ್ಟದಾಗುತ್ತದೆ. ಹೀಗೊಂದು ನಂಬಿಕೆ ನನ್ನೊಳಗೆ ಅಳವಾಗಿ ಬೇರೂರುತ್ತಿದ್ದು, ನಿತ್ಯ ಆತಂಕದಲ್ಲಿಯೇ ಇರುವಂತಾಗಿದೆ. ಇದಕ್ಕೆ ಪರಿಹಾರ ತಿಳಿಸಿ.
ಕನಸುಗಳನ್ನು ಅರ್ಥೈಸಿಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸ. ಅನೇಕ ಸಂಶೋಧನೆಗಳ ನಂತರವೂ ಕನಸುಗಳನ್ನು ಸಂಪೂರ್ಣವಾಗಿ ವ್ಯಾಖ್ಯಾನಿಸಲು ಸಾಧ್ಯವಾಗಿಲ್ಲ. ಕೆಲವು ಮನಃಶ್ಶಾಸ್ತ್ರಜ್ಞರ ಪ್ರಕಾರ ಕನಸುಗಳು ನಮ್ಮ ದೈನಂದಿನ ಚಟುವಟಿಕೆಗಳ ಮುಂದುವರಿದ ಭಾಗವಾದರೆ, ಇನ್ನು ಕೆಲವರ ಪ್ರಕಾರ ನಮ್ಮ ದಿನನಿತ್ಯದ ಜೀವನದಲ್ಲಿ ಪೂರೈಸಲಾಗದ ವಿಷಯಗಳನ್ನು ನಾವು ಕನಸುಗಳ ಮೂಲಕ ಪೂರೈಸುತ್ತೇವೆ ಎನ್ನುತ್ತಾರೆ. ಇನ್ನು ಕೆಲವರು ಕನಸುಗಳು ನಮ್ಮ ಜೀವನದ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಸಹಕಾರಿ ಎಂದು ಹೇಳಿದರೆ, ಇನ್ನು ಕೆಲವರು ಕನಸುಗಳು ನಮಗೆ ಕೆಲವು ಸೂಚನೆಗಳನ್ನು ಕೊಡುತ್ತವೆ ಎಂದೂ ಹೇಳುತ್ತಾರೆ. ಹೀಗೆ ಒಬ್ಬೊಬ್ಬರ ವ್ಯಾಖ್ಯಾನ ಒಂದೊಂದು.
ಕೆಟ್ಟ ಕನಸುಗಳು ಯಾಕೆ ಬರುತ್ತವೆ ಎನ್ನುವುದಕ್ಕೆ ಕಾರಣಗಳು ಅನೇಕವಿರಬಹುದು. ನೀವು ಏನಾದರೂ ಆ ರೀತಿಯೇ ಯೋಚನೆ ಮಾಡಿಕೊಂಡು ಮಲಗಿದ್ದರೆ, ನಿಮಗೆ ಕೆಟ್ಟ ಕನಸುಗಳು ಬರಬಹುದು. ಅಥವಾ ಇನ್ಯಾರಾದರೂ ಕೆಟ್ಟ ಸುದ್ದಿಗಳನ್ನು ಹೇಳಿದ್ದರೆ, ಅವುಗಳು ಕನಸುಗಳಾಗಿ ಕಾಣಬಹುದು. ಅಥವಾ ಅವುಗಳು ನಿಜವಾಗಿಯೂ ಏನಾದರೂ ಸೂಚನೆಯನ್ನು ಕೊಡುತ್ತಿರಬಹುದು. ಹಾಗೇನಾದರೂ ಇದೆಯೇ ಎಂಬುದನ್ನು ಪರಿಶೀಲಿಸಿ. ಅದಕ್ಕಿಂತಲೂ ಹೆಚ್ಚು ಕೆಟ್ಟ ಕನಸುಗಳು ಬಿದ್ದಾಗ ಕೆಟ್ಟವೇ ಆಗು ತ್ತದೆ ಎನ್ನುವುದಕ್ಕೆ ಬಹುಶಃ ನೀವು ಕನಸುಗಳನ್ನು ನೆನಪಿನಲ್ಲಿಟ್ಟುಕೊಂಡು ಆಮೇಲೆ ಅವುಗಳ ಬಗ್ಗೆಯೇ ಯೋಚಿಸುತ್ತಿ ರುವುದೂ ಕಾರಣವಾಗಿರಬಹುದು. ಉದಾಹರಣೆಗೆ ಸೈಕಲ್ ಅಥವಾ ಬೈಕ್ ಚಲಾಯಿಸುವಾಗ ನಾನು ಎಲ್ಲಾದರೂ ಬಿದ್ದರೆ ಅಥವಾ ಅಪಘಾತವಾದರೆ ಎಂದೇ ಯೋಚಿಸುತ್ತಿದ್ದರೆ, ನಾವು ಬೀಳುವ ಅಥವಾ ಅಪಘಾತವಾಗುವ ಸಾಧ್ಯತೆಗಳು ಹೆಚ್ಚು. ಹಾಗೆಯೇ ಕೆಟ್ಟ ಕನಸುಗಳು ಬಿದ್ದಾಗ ಹಾಗೆಯೇ ಆದರೆ ಎಂದುಕೊಂಡು ಯೋಚಿಸುತ್ತಾ ಇದ್ದರೆ, ಕೆಟ್ಟವೇ ದೈನಂದಿನ ಜೀವನದಲ್ಲೂ ಘಟಿಸಬಹುದು. ಹಾಗಾಗಿ ಕನಸನ್ನು ಕನಸಾಗಿಯೇ ಬಿಟ್ಟುಬಿಡುವುದಕ್ಕೆ ಕಲಿಯಬೇಕು. ಒಂದು ವೇಳೆ ಅವು ನಮಗೆ ಸೂಚ್ಯವಾಗಿ ಏನೋ ಹೇಳುತ್ತಿವೆ ಅಂತ ನಿಮಗೆ ಅನಿಸಿದರೆ, ನೀವು ಯಾವೆಲ್ಲಾ ಮುಂಜಾಗರೂಕತೆ ವಹಿಸಬಹುದೋ, ಅವೆಲ್ಲವನ್ನೂ ಗಮನದಲ್ಲಿರಿಸಿಕೊಳ್ಳಿ. ಆವಾಗ ಎಲ್ಲವೂ ಸುಸೂತ್ರವಾಗಿ ಸಾಗುತ್ತದೆ. ಮಲಗುವ ಮುಂಚೆ ಯಾವುದಾದರೂ ಒಳ್ಳೆಯ ವಿಚಾರಗಳನ್ನು ಬರೆದಿಟ್ಟು ಅಥವಾ ಧ್ಯಾನ ಮಾಡಿ ಮಲಗುವ ಅಭ್ಯಾಸ ಮಾಡಿಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.