ಮಹಿಳೆಯರ ಬಟ್ಟೆ ಹೊಲಿಯುವ ಟೈಲರಿಂಗ್, ಕೂದಲು ಕತ್ತರಿಸುವ ಸಲೂನ್, ಅವರಿಗೆ ತರಬೇತಿ ನೀಡುವ ಜಿಮ್–ಸ್ವಿಮ್ಮಿಂಗ್ನಂತಹ ವೃತ್ತಿಗಳಲ್ಲಿ ಮಹಿಳೆಯರಿಗೆ ಸೇವೆ ನೀಡುವ ಕೆಲಸಗಳಿಂದ ಪುರುಷರನ್ನು ದೂರವಿಡಬೇಕು...

ಇದು ಉತ್ತರ ಪ್ರದೇಶದ ಮಹಿಳಾ ಆಯೋಗ ಸಲ್ಲಿಸಿದ ಪ್ರಸ್ತಾವನೆ. ಇಂತಹ ವೃತ್ತಿಗಳಿಂದ ಪುರುಷರನ್ನು ದೂರ ನಿಲ್ಲಿಸುವ ಮೂಲಕ ಲೈಂಗಿಕ ಕಿರುಕುಳಗಳನ್ನು ತಪ್ಪಿಸಬಹುದು ಎನ್ನುತ್ತದೆ ಆಯೋಗ. ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಯುಪಿ ಮಹಿಳಾ ಆಯೋಗ ಸಲ್ಲಿಸಿರುವ ಈ ಪ್ರಸ್ತಾವನೆ ಇದೀಗ ಪರ–ವಿರೋಧ ಚರ್ಚೆಗಳಿಗೆ ಗ್ರಾಸವಾಗಿದೆ.

ಹೆಣ್ಣುಮಕ್ಕಳ ಮೇಲೆ ಲೈಂಗಿಕ ಕ್ರೌರ್ಯ ಎಸಗುವಂತಹ ಹಲವು ಪ್ರಕರಣಗಳು ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ವರದಿಯಾಗಿವೆ. ಮಹಿಳೆಯರ ಅತ್ಯಾಚಾರ, ಕೊಲೆ, ಅಪಹರಣ ಪ್ರಕರಣಗಳಲ್ಲಿ ಉತ್ತರ ಪ್ರದೇಶ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಎನ್ಸಿಆರ್ಬಿ ಅಂಕಿಅಂಶಗಳು ದೃಢಪಡಿಸಿವೆ. ವಿದ್ಯಾರ್ಥಿನಿಯ ಮೇಲೆ ಶಾಲೆಯ ವಾಹನ ಚಾಲಕ ನಡೆಸಿದ ಅತ್ಯಾಚಾರ, ಮತ್ತೊಬ್ಬ ಬಾಲಕಿಯ ಮೇಲೆ ಟೈಲರ್ ಎಸಗಿದ್ದ ಅತ್ಯಾಚಾರ, ಜಿಮ್ನಲ್ಲಿ ತರಬೇತುದಾರನೇ ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ್ದ ಘಟನೆ... ಇಂತಹ ಪ್ರಕರಣಗಳು ಯುಪಿಯಲ್ಲಿ ವರದಿಯಾಗಿವೆ. ಇಂತಹ ಪ್ರಕರಣಗಳನ್ನು ತಡೆಯಲು ಮಹಿಳೆಯರಿಗೆ ಸೇವೆ ಒದಗಿಸುವ ವೃತ್ತಿಗಳಿಂದ ಪುರುಷರನ್ನು ದೂರ ಇಡಬೇಕು ಎಂದು ಆಯೋಗಕ್ಕೆ ಅನಿಸಿದೆ. ಅಲ್ಲಿನ ಪರಿಸ್ಥಿತಿಗೆ ಇದು ಅಗತ್ಯ ಕೂಡ ಎನ್ನುವವರೂ ಇದ್ದಾರೆ.

ಆದರೆ, ಮಹಿಳೆಯರ ಮೇಲಿನ ಅಪರಾಧ ಕೃತ್ಯಗಳು ಹೆಚ್ಚಲು ಮುಖ್ಯವಾಗಿ ಹೆಣ್ಣನ್ನು ನೋಡುವ ಗಂಡಿನ ಮನಸ್ಥಿತಿ ಹಾಗೂ ದೃಷ್ಟಿಕೋನ ಕಾರಣ. ಮಹಿಳೆಯರ ಮೇಲೆ ದೌರ್ಜನ್ಯ–ಅತ್ಯಾಚಾರಗಳು ಯಾವುದೇ ಒಂದು ವೃತ್ತಿಯಲ್ಲಿರುವವರಿಂದ ಆಗುವಂತದ್ದಲ್ಲ. ಅದೊಂದು ಮನಸ್ಥಿತಿ. ಅಲ್ಲಿ ಬದಲಾವಣೆ ತರಬೇಕು ಎನ್ನುವುದು ಪ್ರಗತಿಪರ ಚಿಂತಕರ ವಾದ.

ಇಂತಹ ಹೇಳಿಕೆ ಮಹಿಳೆಯರಲ್ಲಿ ಅಭದ್ರತೆಯ ಭಾವ ಹುಟ್ಟಿಸುವ ಜೊತೆಗೆ ಆ ವೃತ್ತಿಯಲ್ಲಿರುವ ಪುರುಷರ ಘನತೆಗೂ ಧಕ್ಕೆ ತರುವಂಥದ್ದು ಎನ್ನುತ್ತಾರೆ ಅವರು.

ಪರಿಹಾರ ಬೇಕಾಗಿರುವುದು ಮುಖ್ಯವಾಗಿ ವ್ಯವಸ್ಥೆಯಲ್ಲಿ ಹಾಗೂ ಮನಸ್ಥಿತಿಯಲ್ಲಿ. ಜತೆಗಿರುವ, ಜತೆಗೆ ಕೆಲಸ ಮಾಡುವ, ವ್ಯವಹಾರಗಳಲ್ಲಿ ಸಹಭಾಗಿಗಳಾಗುವ, ಜೊತೆಗೆ ಪ್ರಯಾಣಿಸುವ ಹೆಣ್ಣುಮಕ್ಕಳನ್ನು ಗೌರವದಿಂದ–ಆದರದಿಂದ ಕಾಣುವ ಸಂವೇದನೆಯನ್ನು ಬೆಳೆಸಬೇಕು. ಉದ್ಯೋಗ ಅಥವಾ ವ್ಯವಹಾರದಲ್ಲಿ ತೊಡಗಿರುವ ಹೆಣ್ಣುಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಪುರುಷರ ಜೊತೆಗೆ, ಪುರುಷರ ಒಡಗೂಡಿ ಸಮಾಧಾನದಿಂದ, ದೃಢವಾಗಿ ಹಾಗೂ ಸುರಕ್ಷಿತವಾಗಿ ಹೆಣ್ಣುಮಕ್ಕಳು ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಬೇಕು. ಇದು ಹೆಣ್ಣು ಮತ್ತು ಗಂಡಿನ ನಡುವಿನ ಸಂಪರ್ಕವನ್ನು ಕಡಿತಗೊಳಿಸುವುದರಿಂದ ಆಗುವಂಥದ್ದಲ್ಲ.

ಟೈಲರಿಂಗ್–ಸಲೂನ್ನಂತಹ ಸೇವೆಗಳನ್ನು ಮಹಿಳೆಯರು, ಮಹಿಳೆಯರಿಂದಲೇ ಪಡೆಯಬಹುದಾದ ಆಯ್ಕೆಗಳೂ ಲಭ್ಯ ಇವೆ. ಆದ್ದರಿಂದ ಪುರುಷರನ್ನು ಅಂತಹ ವೃತ್ತಿಗಳಿಂದ ಹೊರಗಿಡುವ ಬದಲು, ಮಹಿಳೆಯರ ಸೇವೆ ಮಾಡುವ ವೃತ್ತಿಯಲ್ಲಿರುವವರು, ಮಹಿಳೆಯರೊಂದಿಗೆ ಕೆಲಸ ಮಾಡುವವರು ಮಹಿಳಾ ಸಹೋದ್ಯೋಗಿಗಳೊಂದಿಗೆ, ಮಹಿಳಾ ಗ್ರಾಹಕರೊಂದಿಗೆ ಹೇಗೆ ವರ್ತಿಸಬೇಕು ಎನ್ನುವ ಸಂವೇದನೆಯನ್ನು ಬೆಳೆಸುವುದು ಈಗಿನ ತುರ್ತು.

ಕಚೇರಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಬಸ್ಸು–ರೈಲು–ವಿಮಾನ ಪ್ರಯಾಣಗಳಲ್ಲಿ ಮಹಿಳೆಯರನ್ನು ಹೇಗೆ ಕಾಣಬೇಕು, ಹೇಗೆ ನಡೆಸಿಕೊಳ್ಳಬೇಕು ಮತ್ತು ಹೇಗೆ ನಡೆದುಕೊಳ್ಳಬೇಕು ಎನ್ನುವ ಪ್ರಜ್ಞೆಯನ್ನು ಪುರುಷರಲ್ಲಿ ಬೆಳೆಸಬೇಕು. ಅಷ್ಟೇ ಅಲ್ಲ, ಅಗೌರವಕ್ಕೆ, ಅನಾದಾರಕ್ಕೆ, ಕಿರುಕುಳಕ್ಕೆ ಈಡಾಗದಂತೆ ಎಚ್ಚರಿಕೆಯಿಂದ ಇರುವ, ಅಂತಹ ಸಂದರ್ಭ ಬಂದಾಗ ಜೋರಾಗಿ ಪ್ರಶ್ನಿಸುವ, ಪ್ರತಿರೋಧಿಸುವ ಮನೋಬಲವನ್ನು ಬೆಳೆಸಿಕೊಳ್ಳುವುದು ಮಹಿಳೆಯರ ಜವಾಬ್ದಾರಿಯೂ ಹೌದು ಎನ್ನುವ ದನಿಗಳೇ ಹೆಚ್ಚು ಢಾಳಾಗಿ ಕೇಳಿ ಬರುತ್ತಿವೆ.

ಮಿತಿಗಳನ್ನು ನಿರ್ಮಿಸಿ

ಸಿನಿಮಾ, ಮನರಂಜನೆ, ಜಾಹಿರಾತು ಸೇರಿದಂತೆ ಬಣ್ಣದ ಜಗತ್ತಿನಲ್ಲಿ ಮಹಿಳೆಯರಷ್ಟೇ ಪುರುಷರ ಸಹಾಭಾಗಿತ್ವವೂ ಮುಖ್ಯ. ತಾಂತ್ರಿಕ ಕಲಾವಿದರು, ಮೇಕಪ್ ಕಲಾವಿದರು ಬಹುತೇಕ ಪುರುಷರೇ ಆಗಿರ್ತಾರೆ. ಎಲ್ಲಾ ಕಡೆ ಅವರನ್ನ ಹೊರಗಿಡುತ್ತ ಹೋಗಲಾಗದು. ದೌರ್ಜನ್ಯಕ್ಕೆ–ಕಿರುಕುಳಕ್ಕೆ ಅವರನ್ನು ದೂರ ಇಡುವುದಲ್ಲ, ಒಳಗೊಳ್ಳುವುದು ಮುಖ್ಯ. ಅವರಿಗೆ ಗೌರವ ಕೊಟ್ಟು, ಗೌರವ ತೆಗೆದುಕೊಳ್ಳುವುದನ್ನ ನಾವು ಕಲಿಬೇಕು. ಅವರೊಂದಿಗೆ ಕೆಲಸ ಮಾಡುವಾಗ ವೃತ್ತಿಪರ ಗಡಿಗಳನ್ನು ನಿರ್ಮಿಸುವುದು ಬಹಳ ಮುಖ್ಯ.
ಪುರುಷರೊಂದಿಗೆ ಕೆಲಸ ಮಾಡುವ ಸಂದರ್ಭ ಇದ್ದಾಗ ನಾನು ಅವರಿಗೆ ಅವರ ಗಡಿಗಳನ್ನು ಸ್ಪಷ್ಟವಾಗಿ ತೋರಿಸುತ್ತೇನೆ. ಅವರ ಪೂರ್ವಾಪರ ತಿಳಿದುಕೊಳ್ಳುತ್ತೇನೆ ಮತ್ತು ಅವರಿಗೆ ಅವರ ಮಿತಿ ಹಾಗೂ ಸ್ಥಾನದ ಅರಿವು ಮೂಡುವಂತೆ ವರ್ತಿಸುತ್ತೇನೆ. ಆಯ್ಕೆಗಳು ನಮ್ಮೆದುರೆ ಇರುವಾಗ ಪಲಾಯನ ಬೇಕಾಗಿಲ್ಲ.

-ಪ್ರತಿಭಾ ಸಂಶಿಮಠ

ಆಯೋಗ ಪ್ರಬುದ್ಧತೆಯಿಂದ ನಡೆದುಕೊಳ್ಳಲಿ

ಮಹಿಳೆಯರಿಗೆ ಸೇವೆ ನೀಡುವ ಕೆಲವು ವೃತ್ತಿಗಳಲ್ಲಿ ಪುರುಷರು ಇರಬಾರದು ಎಂದು ಹೇಳಿರುವ ಆಯೋಗವು ಈ ವೃತ್ತಿಗಳಲ್ಲಿ ಪಾರಂಪರಿಕವಾಗಿ ಕೆಲಸ ಮಾಡುತ್ತಿರುವ ಸಭ್ಯ ಪುರುಷರನ್ನೂ ಅನುಮಾನಿಸಿದೆಯಲ್ಲದೆ, ಮತ್ತೇನನ್ನೂ ಸಾಧಿಸಿಲ್ಲ.
ಈ ಮೂಲಕ ಈಗಾಗಲೇ ಪುರುಷರಿಗೆ ಮಹಿಳೆಯರಿಗೆಂದು ಇರುವ ಸಿದ್ಧಮಾದರಿಯ ವೃತ್ತಿಗಳನ್ನೂ ಇದು ಪ್ರೋತ್ಸಾಹಿಸುತ್ತಿದೆ. ಸಮಾಜದಲ್ಲಿ ಇನ್ನೂ ತಾರತಮ್ಯವನ್ನು ಹೆಚ್ಚಿಸುವುದಲ್ಲದೆ, ಜೊತೆಗೂಡಿ ನಡೆಯಬೇಕಾದ ಪುರುಷ ಮಹಿಳೆಯರು ಪರಸ್ಪರ ಅನುಮಾನಿಸುವಂತೆ ಮಾಡುತ್ತದೆ. ಮಹಿಳಾ ದೌರ್ಜನ್ಯಕ್ಕೆ ಮೂಲ ಕಾರಣ, ಅದನ್ನು ತಡೆಗಟ್ಟಲ್ಲಿನ ವೈಫಲ್ಯ, ಇವುಗಳನ್ನು ಕುರಿತು ಯೋಚಿಸದೆ, ಮಹಿಳೆಯರಿಗೆ ಸೇವೆ ನೀಡುವ ಕೆಲವು ವೃತ್ತಿಗಳಲ್ಲಿ ಪುರುಷರನ್ನು ನಿಷೇಧಿಸಲು ಸಲಹೆ ನೀಡಿರುವುದರ ಹಿಂದೆ ಕೇವಲ ಸಂಕುಚಿತ ಮನಸ್ಸುಗಳಿವೆ.

ದಶಕಗಳ ಮಹಿಳಾ ಹೋರಾಟದ ಫಲವಾಗಿ ಮಹಿಳಾ ಆಯೋಗದ ರಚನೆಯಾಗಿದ್ದು, ಅದರ ಕಾರ್ಯವೈಖರಿಯ ಬಗ್ಗೆ ಹಲವಾರು ತಕರಾರುಗಳು ಇರುವ ಈ ಹೊತ್ತಿನಲ್ಲಿ ಈ ರೀತಿಯ ಅಸಂಬದ್ಧ ಶಿಫಾರಸುಗಳು ಆಯೋಗದ ಮೇಲಿನ ಭರವಸೆಯನ್ನು ಇನ್ನೂ ಕಡಿಮೆ ಮಾಡುತ್ತವೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆ, ಅವರ ಸುರಕ್ಷತೆಗೆಂದೇ ಇರುವ ಆಯೋಗಗಳ ಆಲೋಚನೆ, ಮನಸ್ಥಿತಿ, ಕಾರ್ಯವೈಖರಿ ಬದಲಾಗಬೇಕಿದೆ. ಆಯೋಗ ಪ್ರಬುದ್ಧತೆಯಿಂದ ನಡೆದುಕೊಳ್ಳಲಿ.

ಪ್ರತಿಭಾ ಆರ್
ಅಧ್ಯಕ್ಷರು, ಗಾರ್ಮೆಂಟ್ ಆ್ಯಂಡ್ ಟೆಕ್ಸ್ಟೈಲ್ ವರ್ಕರ್ಸ್ ಯೂನಿಯನ್

ಸಮಸ್ಯಾತ್ಮಕ ಪರಿಹಾರ

ಯುಪಿಯಲ್ಲಿನ ವಾತಾವರಣ ಹಾಗೂ ಅಲ್ಲಿನ ಸಮಸ್ಯೆಗಳ ಸ್ವರೂಪ ಭಿನ್ನಾವಾಗಿರುವುದೇನೋ ಸತ್ಯ. ಆದರೆ ಅವರು ಈಗ ಮಾತನಾಡುತ್ತಿರೋದು ಸಮಸ್ಯಾತ್ಮಕ ಪರಿಹಾರ ಅಂತ ನನಗನಿಸುತ್ತೆ. ಸ್ವಸ್ಥ ಸಮಾಜ ನಿರ್ಮಾಣ ಮಾಡುವ ಆಲೋಚನೆ ಇದಲ್ಲ. ಇದು ಸಾಮಾಜಿಕ ಚಲನೆಗೆ ವಿರುದ್ಧವಾದ ಸಲಹೆ.

ನಮಗೆ ಬೇಕಾಗಿರುವುದು ಸಮಾಜವನ್ನು ಕಟ್ಟುವ, ಮನಸುಗಳನ್ನು ಬೆಸೆಯುವ ಪರಿಹಾರಗಳೆ ಹೊರತು ಸಮಾಜವನ್ನು ಒಡೆಯುವ, ಮನಸುಗಳನ್ನು ಕುಗ್ಗಿಸುವ ಪರಿಹಾರಗಳಲ್ಲ. ಸಮಾಜದಲ್ಲಿ ಹೆಣ್ಣು ಮಕ್ಕಳ ಸ್ಥಾನವನ್ನು ಗೌರವಿಸುವ ಕಾಪಾಡುವ ಬಗ್ಗೆ ಅರಿವು ಮೂಡಿಸುವ ಶೈಕ್ಷಣಿಕ ಪ್ರಯತ್ನಗಳಾಗಬೇಕೆ ಹೊರತು, ಹೀಗೆ ಸಮಾಜವನ್ನು ವಿಭಾಗಿಸುವುದರಿಂದ ಪರಿಹಾರ ಸಿಗದು.

ಮುಂದೇನು? ಹೆಣ್ಣು ಮಕ್ಕಳನ್ನು ಮಹಿಳಾ ಡಾಕ್ಟರುಗಳೆ ನೋಡಬೇಕು, ಶಿಕ್ಷಕಿಯರೇ ಪಾಠ ಮಾಡಬೇಕು ಅಂತ ಮಾಡಲು ಸಾಧ್ಯವೇ? ಈ ಬಗೆಯ ಆಲೋಚನೆಯಿಂದ ವ್ಯವಸ್ಥೆ ಬಿಗಡಾಯಿಸುವುದಿಲ್ಲವೇ?

ಪ್ರೀತಿ ನಾಗರಾಜ್, ಪತ್ರಕರ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.