37 ವರ್ಷದ ವಿವಾಹಿತೆ. ಗಂಡನ ವಯಸ್ಸು 39, ಮದುವೆಯಾಗಿ 8 ವರ್ಷ ಆಗಿದೆ, ಮಕ್ಕಳಿಲ್ಲ. ಪತಿ ಎಮ್‌ಟೆಕ್ ಮಾಡಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಕ್ಕರೆ ಕಾಯಿಲೆ ಬಿಪಿ ಬಂದು 7 ವರ್ಷ ಆಯಿತು. ಅವರು ಮದ್ಯಪಾನ, ಧೂಮಪಾನ ಮತ್ತು ಗುಟ್ಕಾದ ದಾಸರಾಗಿದ್ದಾರೆ. ಎಷ್ಟೇ ಪ್ರಯತ್ನ ಮಾಡಿದರು ದುಷ್ಚಟಗಳನ್ನು ಬಿಡುತ್ತಿಲ್ಲ. ಒಳ್ಳೆಯ ಮಾತಿನಲ್ಲಿ ಹೇಳಿದೆ, ಬೈದು ಹೇಳಿದ್ದಕ್ಕೆ ಹೊಡೆದೆ ಬಿಟ್ಟರು. ನನ್ನ ಅರೋಗ್ಯ ಸುಧಾರಿಸಲು ತಿಂಗಳು ಬೇಕಾಯ್ತು. ಈತನಿಂದ ಡೈವೋರ್ಸ್ ಪಡೆಯೋಣವೆಂದರೆ ನಮ್ಮ ಮನೆಯವರು ನೀನು ಬಂದರೆ ಊರಿನಲ್ಲಿ ಮಾನ ಮರ್ಯಾದೆ ಹೋಗುತ್ತದೆ, ತಂಗಿ ತಮ್ಮಂದಿರಿಗೆ ತೊಂದರೆಯಾಗುತ್ತದೆ ಎಂದು ನನ್ನನು ತಡೆಯುತ್ತಾರೆ.. ಮಕ್ಕಳಾದ ಮೇಲೆ ಸರಿ ಹೋಗುತ್ತಾನೆ ಎನ್ನುತ್ತಾರೆ.. ಡಾಕ್ಟರ್ ಹತ್ತಿರ ತೋರಿಸಿದೆ.. ನಿಮ್ಮಲ್ಲಿ ಯಾವ ಸಮಸ್ಯೆ ಇಲ್ಲ ನಿಮ್ಮ ಗಂಡನಲ್ಲಿ ಸಮಸ್ಯೆ ಇದೆ, ಅವರು ಎಲ್ಲಾ ದುಶ್ಚಟ ಬಿಡಬೇಕು ಎನ್ನುತ್ತಾರೆ. ನನಗೆ ವರದಕ್ಷಿಣೆ ಕಿರುಕಳ ಏನು ಇಲ್ಲ. ಆದರೆ ತಿಂಗಳ ಮುಗಿಯಲು 10 ದಿನ ಇರುವಾಗಲೇ ಎಲ್ಲಾ ಸಂಬಳ ಖಾಲಿ. ನಾನು ಕೆಲಸಕ್ಕೆ ಹೋಗೋಣ ಎಂದರೆ ನನ್ನ ಗಂಡ ಅನುಮಾನದ ಪಿಶಾಚಿ.. ಮನೆಯ ಗಂಡು ಮಕ್ಕಳು ಬಿಟ್ಟರೆ ನಾನು ಯಾವ ಗಂಡಸರನ್ನು ಮಾತನಾಡಿಸುವಂತಿಲ್ಲ.. 9 ವರ್ಷದಿಂದ ನರಕದಲ್ಲಿ ಇದ್ದೇನೆ. ಯಾರ ಕಡೆಯಿಂದಲೂ ಬೆಂಬಲ ಇಲ್ಲ. ಹೇಳಲಾಗದಷ್ಟು ನೋವಿದೆ.
ನಿಮ್ಮ ಪತ್ರದಲ್ಲಿ ಕೇವಲ ನಿಮ್ಮದೊಂದೇ ಅಲ್ಲ, ಸಾಕಷ್ಟು ಹೆಣ್ಣು ಮಕ್ಕಳ ದುರಂತದ ಕತೆಯಿದೆ. ಈ ದುರಂತದ ಹಿಂದಿರುವುದೇನು ಎನ್ನುವುದನ್ನು ಗುರುತಿಸಿದರೆ ಪರಿಹಾರಗಳ ದಾರಿಗಳು ಸಿಗುತ್ತದೆ. ನಿಮ್ಮ ಪತ್ರವನ್ನು ನೀವೇ ಬೇರೆ ದೃಷ್ಟಿಕೋನದಿಂದ ಓದಿದರೆ ನಿಮ್ಮ ನೋವಿನ ಮೂಲ ಹೊಳೆಯುತ್ತದೆ. ದಾಂಪತ್ಯ ಕಹಿಯಾಗಿದ್ದರೂ ಅದರಿಂದ ಹೊರಬರುವುದಕ್ಕೆ ತೌರುಮನೆಯ ಬೆಂಬಲ ನಿರೀಕ್ಷಿಸುತ್ತಿದ್ದೀರಿ. ಆರ್ಥಿಕವಾಗಿ ಸ್ವತಂತ್ರರಾಗಲು ಪತಿಯ ಬೆಂಬಲ ನಿರೀಕ್ಷಿಸುತ್ತಿದ್ದೀರಿ. ಅಂದರೆ ನೀವು ಸಂಪೂರ್ಣ ಪರಾವಲಂಬಿಗಳು ಎಂದಾಯಿತಲ್ಲವೇ? ಇಂತಹ ಅವಲಂಬನೆ ಆರ್ಥಿಕವಾಗಿ ಸ್ವತಂತ್ರರಾಗಿಲ್ಲದಿರುವುದಕ್ಕೆ ಬಂದಿರುವುದು ಎಂದು ಮೇಲು ನೋಟಕ್ಕೆ ಅನ್ನಿಸಬಹುದು. ಆದರೆ ಆರ್ಥಿಕವಾಗಿ ಸ್ವಾವಲಂಬಿಗಳಾಗಿರುವ ಸಾಕಷ್ಟು ಮಹಿಳೆಯರೂ ಕಹಿ ದಾಂಪತ್ಯದಿಂದ ಹೊರಬರುವುದಕ್ಕೆ ಹಿಂಜರಿಯುತ್ತಾರೆ. ಇದರ ಕಾರಣ ಮಹಿಳೆಯರ ಮಾನಸಿಕ ಅವಲಂಬನೆ. ಇಂತಹ ಮಾನಸಿಕ ಸ್ಥಿತಿಗೆ ಮಹಿಳೆಯರನ್ನೇ ದೂಷಿಸುವಂತಿಲ್ಲ.
ಕೌಟುಂಬಿಕವಾಗಿ, ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಧಾರ್ಮಿಕವಾಗಿ ಮಹಿಳೆಯರು ಹೀಗೆಯೇ ಇರಬೇಕೆಂದು ನಿರ್ದೇಶಿಸಲಾಗುತ್ತದೆ. ಇಂತಹ ಕಟ್ಟಳೆಗಳನ್ನು ಮೀರುವವರನ್ನು ಅವಮಾನಿಸಲಾಗುತ್ತದೆ. ಇವುಗಳಿಂದ ತಪ್ಪಿಸಿಕೊಳ್ಳಲು ಮಹಿಳೆಯರು ತಮ್ಮತನವನ್ನು ಕಳೆದುಕೊಂಡು ಪುರುಷರ ಅಧಿನದಲ್ಲಿ ಇರುವುದು ಅನಿವಾರ್ಯವಾಗುತ್ತದೆ. ಈಗ ನಿಮ್ಮ ನೋವಿಗೆ ಪರಿಹಾರಗಳನ್ನು ಹುಡುಕೋಣ. ವ್ಯಸನಗಳಿಂದ ಮುಕ್ತರಾಗುವುದು ಬಿಡುವುದು ನಿಮ್ಮ ಪತಿಯ ಆಯ್ಕೆ. ಅವರನ್ನು ಸರಿಮಾಡುವುದು ನಿಮ್ಮ ಬದುಕಿನ ಗುರಿಯಾದರೆ ಅದು ನಿಮ್ಮ ಪರಾವಲಂಬನೆಯ ಸೂಚನೆಯಲ್ಲವೇ?
ನಿಮ್ಮ ಪತಿಯೇ ವ್ಯಸನಗಳಿಂದ ಹೊರಬರಲು ನಿರ್ಧರಿಸದಿದ್ದರೆ ಇತರರು ಸಹಾಯ ಮಾಡಲು ಸಾಧ್ಯವಿಲ್ಲ. 30ನೇ ಸೆಪ್ಟೆಂಬರ್ 2023ರ ಇದೇ ಅಂಕಣದಲ್ಲಿ ವ್ಯಸನಗಳಿಂದ ಮುಕ್ತರಾಗುವುದು ಹೇಗೆ ಎನ್ನುವುದರ ಕುರಿತು ಬರೆಯಲಾಗಿದೆ. ಇದನ್ನು ನಿಮ್ಮ ಪತಿಗೆ ಓದಲು ಕೊಡಿ. ನಿಮ್ಮ ಬದುಕು ಮತ್ತು ವ್ಯಕ್ತಿತ್ವಗಳನ್ನು ಸ್ವತಂತ್ರವಾಗಿ ಕಟ್ಟಿಕೊಳ್ಳುವುದು ಹೇಗೆಂದು ಯೋಚಿಸಿ. ನಿಮ್ಮ ವಿದ್ಯಾರ್ಹತೆಗೆ ಹೊಂದುವ ಒಂದು ಉದ್ಯೋಗವನ್ನು ಹುಡುಕಿಕೊಳ್ಳಿ. ಅದಕ್ಕೆ ಪತಿ ಅಡ್ಡಿಪಡಿಸಿದರೆ ಸ್ವತಂತ್ರವಾಗಿ ಬದುಕಲು ಹಿಂಜರಿಯಬೇಡಿ. ಅಗತ್ಯವಿದ್ದರೆ ಮಹಿಳೆಯರಿಗೆ ಸಹಾಯ ಮಾಡುವ ಸ್ವಸಹಾಯ ಸಂಸ್ಥೆಗಳು ಅಥವಾ ಸರ್ಕಾರಿ ಸಂಸ್ಥೆಗಳ ಬೆಂಬಲ ಪಡೆಯಿರಿ. ಹಂತಹಂತವಾಗಿ ಮಾನಸಿಕ ಅವಲಂಬನೆಯಿಂದ ಹೊರಬಂದು ನಿಮ್ಮೊಳಗಿನ ಶಕ್ತಿಯನ್ನು ಗುರುತಿಸಿಕೊಳ್ಳಿ. ಆರಂಭದ ಹಾದಿ ಕಠಿಣವಾಗಿರುತ್ತದೆ. ಆದರೆ ನಿಮ್ಮ ಬದುಕನ್ನು ರೂಪಿಸಿಕೊಳ್ಳುವುದು ನಿಮ್ಮದೇ ಜವಾಬ್ದಾರಿ ಎನ್ನುವುದು ನೆನಪಿರಲಿ. ನೀವು ಸ್ವತಂತ್ರರಾದ ಮೇಲೆ ನಿಮಗೆ ಸೂಕ್ತವೆನ್ನಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಆಗಲೂ ಪತಿಯಿಂದ ಬೇರೆಯಾಗುವ ಮೊದಲು ನಿಮಗೆ ಸರಿಯೆನ್ನಿಸಿದರೆ ಅವರಿಗೆ ಬದಲಾಗುವ ಒಂದು ಅವಕಾಶವನ್ನು ಕೊಡಬಹುದು. ಅವರು ನಿಮ್ಮನ್ನು ಬಿಟ್ಟು ವ್ಯಸನಗಳನ್ನೇ ಆಯ್ಕೆ ಮಾಡಿಕೊಂಡರೆ ನೀವು ನಿಮ್ಮ ಸ್ವಾತಂತ್ರ, ಸಮಾಧಾನಗಳನ್ನು ಆಯ್ಕೆ ಮಾಡಿಕೊಳ್ಳಿ. ಶುಭವಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.