ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಮಾಸಕ್ತಿಗೆ ಚೌಕಟ್ಟು ಬೇಕಿದೆ.. ಏನಿದು ಸೆಕ್ಸ್‌ಟಿಂಗ್?

ಸಾಮಾಜಿಕ ಜಾಲತಾಣಗಳನ್ನು, ಅಂತರ್ಜಾಲಗಳನ್ನು ಬಳಸುವಾಗ ಈ ಬಗ್ಗೆ ಸಮರ್ಪಕವಾಗಿ ಜ್ಞಾನ ಇಟ್ಟುಕೊಳ್ಳುವುದು ಒಳಿತು.
Published : 6 ಜುಲೈ 2024, 0:31 IST
Last Updated : 6 ಜುಲೈ 2024, 0:31 IST
ಫಾಲೋ ಮಾಡಿ
Comments

ಯಾರಾನ್ನಾದರೂ ಹೀಗಳೆಯಲು, ಆತ್ಮಸ್ಥೈರ್ಯವನ್ನು ಕುಂದಿಸಲು ಅಶ್ಲೀಲ ಭಾಷೆ, ಚಿತ್ರ ಹಾಗೂ ಸನ್ನೆ ಬಳಸುವುದು ಅಪಾಯಕಾರಿ ವರ್ತನೆ. ಸಾಮಾಜಿಕ ಜಾಲತಾಣಗಳನ್ನು, ಅಂತರ್ಜಾಲಗಳನ್ನು ಬಳಸುವಾಗ ಈ ಬಗ್ಗೆ ಸಮರ್ಪಕವಾಗಿ ಜ್ಞಾನ ಇಟ್ಟುಕೊಳ್ಳುವುದು ಒಳಿತು.

––––

ಇಡೀ ಜಗತ್ತನ್ನೆ ಹಿಡಿಯಷ್ಟು ಮಾಡಿಕೊಂಡ ಮೊಬೈಲ್ ಎಂಬ ಮಾಯಾವಿಯ ಅಂಗಳದಲ್ಲಿ ಆಡುವ ಹದಿಹರೆಯದ ಮಕ್ಕಳನ್ನು ಕಂಡಾಗಲೆಲ್ಲ ಪೋಷಕರ ಎದೆಯಲ್ಲಿ ಸಣ್ಣ ಅನುಮಾನ. ಮೊಬೈಲ್ ಹಿಡಿದುಕೊಂಡು ಮೆಸೇಜ್ ನೋಡುತ್ತಿರುವ ಮಗನೋ, ಮಗಳೋ ತುಟಿಯಂಚಿನಲ್ಲಿ ನಗು ತುಳುಕಿಸಿದರೆ, ಬೆರಳುಗಳ ನಡುವೆ ಸರಾಗವಾಗಿ ಹರಿಯುವ ಭಾವನೆಗಳು ಜಿಗಿಯುವ ರೀತಿಗೆ, ಮೊಬೈಲ್‌ ಪರದೆ ನೋಡುತ್ತ ನಸುನಾಚುವ ಮಕ್ಕಳ ಕಂಡು ಪೋಷಕರ ಮನಸ್ಸಿನಲ್ಲಿ ಹೊಯ್ದಾಟದ ಅಲೆ ಏಳುತ್ತದೆ. ಈ ವಯಸ್ಸೆ ಅಂಥದ್ದು; ಏನಿರಬಹುದು ಆ ಮೆಸೇಜ್‌ನಲ್ಲಿ ಎಂಬ ಆತಂಕ ಶುರುವಾಗುತ್ತದೆ. ಓದುವ ವಯಸ್ಸಿನಲ್ಲಿ ಸೆಕ್ಸ್‌ಟಿಂಗ್ ಜಾಡಿಗೆ ಬಿದ್ದಿರಬಹುದಾ ಎಂಬ ಪ್ರಶ್ನೆಯೂ ಏಳುತ್ತದೆ.

ಸೆಕ್ಸ್‌ಟಿಂಗ್ ಎನ್ನುವುದು ಕೇವಲ ಹರೆಯಕ್ಕೆ ಸೀಮಿತವೇನಲ್ಲ.ಒಟ್ಟಿಗೆ ಒಂದೇ ಮನೆಯಲ್ಲಿ ಇದ್ದು ದ್ವೀಪಗಳಾಗಿ ಬದುಕುತ್ತಿರುವ ಸಂಗಾತಿಗಳು ತಾವು ಇಚ್ಛಿಸಿದ ಸಂಬಂಧದಲ್ಲಿ ಸೆಕ್ಸ್‌ಟಿಂಗ್‌ಗೆ ಅವಕಾಶ ಕೊಟ್ಟು, ಆಮೇಲೆ ಪೇಚಾಡುವ ಸಂಗತಿಗಳು ಸರ್ವೇ ಸಾಮಾನ್ಯವಾಗಿದೆ. ಹೀಗೆ  ಯಾವುದೇ ವಯಸ್ಸಿನಲ್ಲಿರುವವರೂ ಸೆಕ್ಸ್‌ಟಿಂಗ್ ಮೂಲಕ ತೃಪ್ತರಾಗಬಹುದು.

ಮನಸ್ಸಿಗೆ ಕಚಗುಳಿಯಿಡುವ ಪ್ರೇಮ–ಕಾಮದ ಬಿಸುಪಿರುವ ಮೆಸೇಜ್‌ಗಳನ್ನು ಪರಸ್ಪರ ಒಪ್ಪಿಗೆಯ ಮೇರೆಗೆ ಕಳಿಸಬಹುದು. ಆತ್ಮಾಭಿಮಾನಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪರಸ್ಪರ ಗೌರವ ನೀಡುವ ಸಂಬಂಧದ ಚೌಕಟ್ಟಿನಲ್ಲಿ ಇದ್ದಷ್ಟು ಹೊತ್ತು ಈ ಸೆಕ್ಸ್‌ಟಿಂಗ್‌ ಉಪದ್ರವಿ ಎನಿಸದು. 

ಏನಿದು ಸೆಕ್ಸ್‌ಟಿಂಗ್?

ಸೆಕ್ಸ್‌ಟಿಂಗ್‌ ಎನ್ನುವುದು ಲೈಂಗಿಕ ಅಭೀಪ್ಸೆಗಳನ್ನು ವ್ಯಕ್ತಪಡಿಸುವ ಮೆಸೇಜ್‌. ಕಾಮೋದ್ರೋಕ ಮಾತುಗಳಿರುವ ಮೆಸೇಜ್‌ಗಳನ್ನು, ಕಾಮಪ್ರಚೋದಿತ ಬರಹ,  ಬೆತ್ತಲೆ, ಅರೆಬೆತ್ತಲೆ ಪೊಟೋಗಳನ್ನು ಪರಸ್ಪರ ಒಪ್ಪಿಗೆ ಆಧಾರ ಮೇಲೆ ಮೊಬೈಲ್‌ನಲ್ಲಿ ಅಥವಾ ಅಂತರ್ಜಾಲ ಬಳಸಿ ಕಳಿಸುವುದು ಸೆಕ್ಸ್‌ಟಿಂಗ್‌ನ ಪರಧಿಯೊಳಗೆ ಬರುತ್ತದೆ. ಕಾಮಾಸಕ್ತಿಯೆಂಬುದು  ಸಹಜವಾಗಿರುವುದರಿಂದ ಅದಕ್ಕೊಂದು ಚೌಕಟ್ಟು ಇರಬೇಕು. 

ಮೊಬೈಲ್‌ನಲ್ಲಿ ನೇರವಾಗಿಯೋ, ಆ್ಯಪ್‌ಗಳ ಮೂಲಕ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಸೆಕ್ಸ್‌ಟಿಂಗ್ ಮಾಡಲು ಅವಕಾಶವಿದೆ. ಒಂದು ಅಧ್ಯಯನದ ಪ್ರಕಾರ ತಂತ್ರಜ್ಞಾನನುರಿತ ಈ ಕಾಲದ ಪೀಳಿಗೆಯು ಇಂಥ ಭಾವೋದ್ರೇಕಕಾರಿ ಮೆಸೇಜ್‌ಗಳ ಬಗ್ಗೆ ಒಲವು ಬೆಳೆಸಿಕೊಂಡಿರುತ್ತಾರೆ. ಶೇ 15ರಷ್ಟು ಮಂದಿ ಇಂಥ ಮೆಸೇಜ್‌ಗಳನ್ನು ಸರಾಗವಾಗಿ ಕಳಿಸಬಲ್ಲರು. ಶೇ 27ರಷ್ಟು ಮಂದಿ ತಮಗೆ ಬಂದ ಇಂಥ ಮೆಸೇಜ್‌ಗಳನ್ನು ಇಷ್ಟಪಟ್ಟು ಓದಿ ಸುಮ್ಮನಾಗುತ್ತಾರಂತೆ. 

ಪ್ರೇಮಸಂಬಂಧದಲ್ಲಿ ಸೆಕ್ಸ್‌ಟಿಂಗ್ ಎನ್ನುವುದು ಸಹಜವಾದ ಆಕರ್ಷಣೆ. ಪ್ರೇಮಿಗಳು ಪರಸ್ಪರ ದೈಹಿಕವಾಗಿ ಸಮೀಪವಿರಲು ಸಾಧ್ಯವಿಲ್ಲದೇ ಇದ್ದಾಗೆಲ್ಲ ಸೆಕ್ಸ್‌ಟಿಂಗ್‌ ಸಾಮಾನ್ಯವಾಗಿರುತ್ತದೆ. ಪರಸ್ಪರ ಒಬ್ಬೊರನ್ನೊಬ್ಬರು ಅರಿಯಲು, ಬಂಧ ಗಟ್ಟಿಯಾಗಲು ಸೆಕ್ಸ್‌ಟಿಂಗ್‌ ಮೊರೆ ಹೋಗುತ್ತಾರೆ. ಅದರಲ್ಲಿಯೂ ಎರಡೂ ಜೀವಗಳು ದೂರವಿದ್ದಾಗ ಸೆಕ್ಸ್‌ಟಿಂಗ್ ಅವರ ನಡುವೆ ಗಟ್ಟಿಯಾದ ಬಂಧವನ್ನು ಬೆಸೆಯುತ್ತದೆ. ಲೈಂಗಿಕ ಆರೋಗ್ಯಕ್ಕೆ ನೆರವಾಗುವುದಲ್ಲದೇ, ಉತ್ತಮ ಬಾಂಧವ್ಯ ಬೆಸೆಯುತ್ತದೆ. 

ಫ್ಲರ್ಟ್‌ ಮಾಡುವುದು, ದೈಹಿಕ ಹಾಗೂ ಭಾವನಾತ್ಮಕವಾಗಿ ಸೆಳೆಯುವ ಮೆಸೇಜ್‌ಗಳು ಸೇರಿದಂತೆ ಸೆಕ್ಸ್‌ಟಿಂಗ್‌ಗೆ ಹಲವು ರೂಪಗಳಿವೆ. ಆ ಕ್ಷಣದ ಖುಷಿ, ಒಂಟಿತನದ ನಿವಾರಣೆಗಾಗಿ, ಪ್ರೀತಿಯಲ್ಲಿ ‘ತನ್ನದು‘ ಎಂಬುದನ್ನು ಸ್ಥಾಪಿಸಲು ಹೀಗೆ ಹಲವು ಕಾರಣಗಳಿಗೆ ಸೆಕ್ಸ್‌ಟಿಂಗ್‌ ಮಾಡುತ್ತಾರೆ. 

ಮಾನಸಿಕವಾಗಿ ಭದ್ರತೆಯ ಭಾವವನ್ನು ಹೊಂದಿರುವ ಮಕ್ಕಳು ಇಂಥದ್ದರ ಕಡೆಗೆ ಆಕರ್ಷಿತರಾಗುವುದು ತುಸು ಕಡಿಮೆ ಎಂದೇ ಹೇಳಬಹುದು. ಹರೆಯದಲ್ಲಿ ಹಾರ್ಮೋನಿನಲ್ಲಾಗುವ ವ್ಯತ್ಯಾಸಗಳಿಂದಾಗಿ ಸೆಕ್ಸ್‌ ಬಗ್ಗೆ ವಿಪರೀತ ಕುತೂಹಲ ಇಟ್ಟುಕೊಳ್ಳುವುದು, ಸಂಗಾತಿಯನ್ನು ಬಯಸುವುದೆಲ್ಲ ಸಹಜವಾಗಿರುತ್ತದೆ. ಸಣ್ಣ ಫ್ಲರ್ಟ್‌ನಿಂದ ಆರಂಭವಾಗುವ ಈ ಸೆಕ್ಸ್‌ಟಿಂಗ್‌  ಮೊಬೈಲ್‌ ಕ್ಯಾಮೆರಾದ ಮುಂದೆ ಬೆತ್ತಲಾಗುವವರೆಗೂ ಬಂದು ನಿಲ್ಲಬಹುದು.

ಭಾವಾನಾತ್ಮಕವಾಗಿ ಅಭದ್ರರಾಗಿರುವವರು, ಪ್ರೀತಿಯಿಂದ ವಂಚಿತರೆನ್ನುವವರು ಸೆಕ್ಸ್‌ಟಿಂಗ್‌ಗೆ ಬಹುಬೇಗ ಆಕರ್ಷಿತರಾಗುವ ಸಾಧ್ಯತೆ ಹೆಚ್ಚು. ಪದೇ ಪದೇ ಪ್ರೀತಿಪಾತ್ರರಿಂದ ಮೂದಲಿಕೆ ಹಾಗೂ ನಿರ್ಲಕ್ಷ್ಯಕ್ಕೆ ಒಳಗಾಗುವ ಮನಸ್ಥಿತಿಗೆ ಸೆಕ್ಸ್‌ಟಿಂಗ್‌ ಒಂದು ಬಿಡುಗಡೆಯ ಭಾವವನ್ನೂ ಒದಗಿಸಬಲ್ಲದು. ಜತೆಗೆ ತಾನೂ ಬೆಚ್ಚಗಿನ ಸಂಬಂಧದಲ್ಲಿ ಭದ್ರವಾಗಿದ್ದೇನೆ ಎಂಬ ಖುಷಿ ಸಿಗಬಹುದು. 

ಯಾವಾಗ ತೊಡಕು?‌

ಪರಸ್ಪರ ಒಪ್ಪಿಗೆಯಿದ್ದಾಗ ಮಾತ್ರ ಅದು ಸೆಕ್ಸ್‌ಟಿಂಗ್ ಎನಿಸಿಕೊಳ್ಳುತ್ತದೆ. ಇಲ್ಲವಾದರೆ ಹೀಗೆ ಲೈಂಗಿಕಾಸಕ್ತಿಗಳನ್ನು ಮುಂದಿಟ್ಟುಕೊಂಡು ಅಂತರ್ಜಾಲದಲ್ಲಿ ಮೆಸೇಜ್ ಮಾಡುವುದು, ಲೈಂಗಿಕವಾಗಿ ಪ್ರಚೋದಿಸುವಾಗಿ ಚಿತ್ರಗಳನ್ನು ಕಳಿಸುವುದು, ಮೆಸೇಜ್‌ಗಳನ್ನು ಹರಿಯಬಿಡುವುದು ಇನ್ನೊಬ್ಬರ ಆತ್ಮಗೌರವವನ್ನು ಕುಂದಿಸುವಂಥ ಅಶ್ಲೀಲಭಾಷೆಯನ್ನು ಬಳಸುವುದೆಲ್ಲವೂ ಸೈಬರ್‌ ಅಪರಾಧ ಎನಿಸಿಕೊಳ್ಳುತ್ತದೆ.  

ಯಾರಾನ್ನಾದರೂ ಹೀಗಳೆಯಲು, ಆತ್ಮಸ್ಥೈರ್ಯವನ್ನು ಕುಂದಿಸಲು ಅಶ್ಲೀಲ ಭಾಷೆ, ಚಿತ್ರ ಹಾಗೂ ಸನ್ನೆ ಬಳಸುವುದು ಅಪಾಯಕಾರಿ ವರ್ತನೆ. ಸಾಮಾಜಿಕ ಜಾಲತಾಣಗಳನ್ನು, ಅಂತರ್ಜಾಲಗಳನ್ನು ಬಳಸುವಾಗ ಈ ಬಗ್ಗೆ ಸಮರ್ಪಕವಾಗಿ ಜ್ಞಾನ ಇಟ್ಟುಕೊಳ್ಳುವುದು ಒಳಿತು. ಯಾವುದೋ ಪಂಥ ಅಥವಾ ವ್ಯಕ್ತಿಯನ್ನು ಆರಾಧಿಸುವ ಭರಾಟೆಯಲ್ಲಿ ಮತ್ತೊಬ್ಬರಿಗೆ  ಇಂಥ ಮೆಸೇಜ್‌ಗಳನ್ನು ಕಳಿಸಿ,  ಆತ್ಮಸ್ಥೈರ್ಯ ಕುಗ್ಗಿಸುವ ಚಾಳಿಯಿದ್ದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ. ಪದೇ ಪದೇ ಲೈಂಗಿಕ ಭಾವನೆಗಳನ್ನು ವ್ಯಕ್ತಪಡಿಸುವ ಮೆಸೇಜ್‌ಗಳನ್ನು ಕಳಿಸಿ ಇನ್ನೊಬ್ಬರಿಗೆ ಹಿಂಸೆ ನೀಡುವುದು ಅಪರಾಧ ಎನಿಸಿಕೊಳ್ಳುತ್ತದೆ.  

ಗೀಳಾದರೆ ಏನು ಮಾಡಬಹುದು? 

ಸದಾ ಒಂಟಿಯಾಗಿ, ಎಲ್ಲರ ನಡುವೆ ಇದ್ದು ದ್ವೀಪದಂತೆ ಬದುಕುತ್ತಿರುವವರ ಸದಾ ಒಂದಲ್ಲ ಒಂದು ಸಂಬಂಧದಲ್ಲಿ ಇರಲು ಇಚ್ಛಿಸುತ್ತಾರೆ. ಇಂಥವರಿಗೆ ಸೆಕ್ಸ್‌ಟಿಂಗ್ ಎನ್ನುವುದು ಗೀಳಾಗುವ ಸಾಧ್ಯತೆ ಇರುತ್ತದೆ. ಇಚ್ಛಿಸುವ ಜೀವದಿಂದ ತುಂಬು ಪ್ರೀತಿ ದೊರಕಿಬಿಟ್ಟರೆ ಅದನ್ನು ಬೇರೆ ಎಲ್ಲೂ ಅರಸುವ ಸಾಧ್ಯತೆ ಕಡಿಮೆ ಇರುತ್ತದೆ.

ಸಂಬಂಧಗಳಲ್ಲಿ ಮುಕ್ತವಾಗಿ ಮಾತನಾಡುವ ವಾತಾವರಣವೊಂದನ್ನು ರೂಪಿಸಿಕೊಳ್ಳಲು ಸಾಧ್ಯವಾಗಿಬಿಟ್ಟರೆ ಎಂಥ ಸಮಸ್ಯೆಯನ್ನಾದರೂ ನೀಗಿಕೊಳ್ಳಬಹುದು. 

ಬೇಡದ ಸೆಕ್ಸ್‌ಟಿಂಗ್‌ಗೆ ನಿರ್ಬಂಧ ಹೇಗೆ?

ಎರಡು ಮನಸ್ಸುಗಳ ನಡುವೆ ಆರೋಗ್ಯಕರ ಸೆಕ್ಸ್‌ಟಿಂಗ್‌ ಇದ್ದರೆ ಅದು ಖುಷಿ ತರಬಲ್ಲದು. ಇಲ್ಲವಾದರೆ ವಿನಾಕಾರಣ ಒಬ್ಬರೇ ಇಂಥ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದು, ಮತ್ತೊಬ್ಬರಿಗೆ ಅದರಿಂದ ಕಿರಿಕಿರಿಯಾಗುತ್ತಿದ್ದರೆ ಅದರಿಂದ ಹೊರಬರುವುದು ಹೇಗೆ ಎಂಬ ದಾರಿ ಗೊತ್ತಿರಬೇಕು.

ಪದೇ ಪದೇ ಸೆಕ್ಸ್‌ಟಿಂಗ್‌ ಮೂಲಕ ಅಭೀಪ್ಸೆಯನ್ನು ವ್ಯಕ್ತಪಡಿಸುವ ಮನಸ್ಸಿನ ಬಗ್ಗೆ ಒಂದು ಬಂಧ ಇದ್ದರೆ, ತಿಳಿ ಹೇಳಲು ಪ್ರಯತ್ನಿಸಬೇಕು. ಇಲ್ಲವಾದರೆ ಮೂಲಾಜಿಲ್ಲದೇ ಅದನ್ನು ನಿರ್ಬಂಧಿಸಲು ಕಲಿತುಕೊಳ್ಳಿ. 

ಹರೆಯದ ಮಕ್ಕಳು ಸಮರ್ಪಕವಾಗಿ ಇದನ್ನು ನಿರ್ವಹಿಸಲು ಸಾಧ್ಯವಾಗದೇ ಹೋದರೆ ಪೋಷಕರು  ಬೈಯುವ ಧಾಟಿಯಲ್ಲಿ ಬುದ್ಧಿ ಹೇಳದೆ, ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಕಳಿಸುವವರ ಸ್ಥಾನದಲ್ಲಿ ನಿಮ್ಮ  ಮಗು ಇದ್ದರೆ, ಯಾಕೆ ಹೀಗಾಗುತ್ತದೆ ಎಂಬುದಕ್ಕೆ ಉತ್ತರ ಕಂಡುಕೊಳ್ಳಿ. 

ಅಂತರ್ಜಾಲವಿರಲಿ; ಅದರಲ್ಲಿರುವ ಆ್ಯಪ್‌ಗಳಿರಲಿ, ಮೊಬೈಲ್‌ಗಳೇ ಇರಲಿ ಯಾವುದನ್ನಾದರೂ ಸರಿಯಾಗಿ ಬಳಸುವುದನ್ನು ಕಲಿಯಿರಿ. ಒಂದೊಮ್ಮೆ ಇಂಥ ಬೇಡವಾದ ಮೆಸೇಜ್‌ ಬರುತ್ತಿದ್ದರೆ ಬ್ಲಾಕ್‌ ಮಾಡುವ, ರಿಪೋರ್ಟ್ ಮಾಡುವ ದಾರಿಗಳನ್ನು ಕಲಿತಿರುವುದು ಒಳ್ಳೆಯದು. ಉಗುರಲ್ಲಿ ಹೋಗುವುದಕ್ಕೆ ಕೊಡಲಿ ಹಿಡಿದುಕೊಳ್ಳಬಾರದು ಎನ್ನುವ ಮಾತನ್ನು ಈ ವಿಚಾರದಲ್ಲಿ ಅಳವಡಿಸಿಕೊಳ್ಳುವುದು ಒಳ್ಳೆಯದು. ಅಂತರ್ಜಾಲದಲ್ಲಿ ಒಳ್ಳೆಯ ಸಂಗತಿಗಳಿದ್ದರೂ ಅಲ್ಲೊಂದು ಹಿಂಸಾತ್ಮಕ ಜಗತ್ತು ಮನೆಮಾಡಿಕೊಂಡಿದೆ. ವಿನಾಕಾರಣ ಆ ಜಗತ್ತಿನೊಳಗೆ ಪ್ರವೇಶ ಪಡೆದು, ಮನಸ್ಸು ಹಾಳು ಮಾಡಿಕೊಳ್ಳುವುದಕ್ಕಿಂತ ಮನಸ್ಸನ್ನು ತಿಳಿಯಾಗಿ ಇಟ್ಟುಕೊಳ್ಳಲು ಬಳಸಿ. 

ಮನೋಚಿಕಿತ್ಸಕರು ಏನು ಹೇಳ್ತಾರೆ?

ಕಾಮೋದ್ರೇಕ ಮಾತುಗಳಿಂದ ಗಮನ ಸೆಳೆಯುವ ಮನಸ್ಥಿತಿಯವರಿಗೆ ಸೆಕ್ಸ್‌ಟಿಂಗ್ ಬಹುದೊಡ್ಡ ಗೀಳಾಗಬಹುದು. ಲೈಂಗಿಕ ಮಾತುಗಳಿಂದಲೇ ಮತ್ತೊಬ್ಬರ ಮನಸ್ಸನ್ನು ಸೆಳೆಯುತ್ತೇನೆ, ಗೆಲ್ಲುತ್ತೇನೆ ಎಂಬ ಧಾಟಿಯಲ್ಲಿಯೇ ಇವರ ವರ್ತನೆ ಇರುತ್ತದೆ. ಖಾಸಗಿ ಅಂಗಗಳನ್ನು ಪ್ರದರ್ಶಿಸಿ, ಅಹಂ ತಣಿಸಿಕೊಳ್ಳುವ ಹಂತಕ್ಕೆ ಹೋಗುತ್ತದೆ. ನಿರಾಕರಣೆ ಅಥವಾ ಬೈಗುಳ ಸಿಕ್ಕಾಗ ಮನಸ್ಸು ಮತ್ತಷ್ಟು ವ್ಯಗ್ರಗೊಳ್ಳುವ ಸಾಧ್ಯತೆ ಇರುತ್ತದೆ. 

ಗೀಳು ವ್ಯಕ್ತಿತ್ವ ಹೊಂದಿರುವವರಲ್ಲಿ ಹೆಚ್ಚಾಗಿ ಇದನ್ನು ನೋಡಬಹುದು. ಹೀಗೆಲ್ಲ ಕಳಿಸುವ ಮೂಲಕ ಖುಷಿ ಹೊಂದುವ ಮನಸ್ಥಿತಿಯವರಾಗಿರುತ್ತಾರೆ. ಗುಪ್ತವಾದ ವರ್ತನೆಯನ್ನು ಅಳವಡಿಸಿಕೊಂಡಿರುವ ಇವರಿಗೆ ಸಾಮಾಜಿಕ ಜಾಲತಾಣಗಳಲ್ಲಿರುವ ಅನಾಮಿಕತೆ ಹೆಚ್ಚು ಇಷ್ಟವಾಗುತ್ತದೆ. ಹಾಗಾಗಿ ಅನಾಮಿಕವಾಗಿ ಪ್ರೊಫೈಲ್‌ಗಳನ್ನು ರಚಿಸಿ ಇಂಥ ಮೆಸೇಜ್‌ ಕಳಿಸಬಹುದು. 

ಆತ್ಮವಿಶ್ವಾಸ ಇಲ್ಲದವರು, ಆ್ಯಕ್ಸಿಷಿಯಸ್‌ ಅಟ್ಯಾಚ್‌ಮೆಂಟ್ ಇರುವವರು ತಮ್ಮ  ಸಂಗಾತಿ ತಮಗೆ ವಿಧೇಯರಾಗಿದ್ದಾರೋ ಇಲ್ಲವೊ ಎಂದು ಖಾತ್ರಿ ಪಡಿಸಿಕೊಳ್ಳಲು ಇಂಥ ಗೀಳಿಗೆ ಬೀಳಬಹುದು. ಇಂಥ ಮೆಸೇಜ್‌ ಸ್ವೀಕರಿಸಿದವರು ಧೈರ್ಯಗುಂದದೆ ಆತ್ಮೀಯರ ಬಳಿ ಹಂಚಿಕೊಂಡು ಹಗುರಾಗಿ. ಬ್ಲಾಕ್ ಮಾಡಿ, ದೂರವಿರುವ ಸಾಧ್ಯತೆಯನ್ನು ಕಂಡುಕೊಳ್ಳಿ. ತೀರಾ ಕಿರಿಕಿರಿಯಾಗುತ್ತಿದ್ದರೆ ಆಪ್ತಸಲಹೆಗಾರರನ್ನು ಭೇಟಿಯಾಗಬಹುದು ಜತೆಗೆ ಕಾನೂನಿನ ಸಲಹೆ ಪಡೆಯಲು ಸೈಬರ್‌ ಅಪರಾಧ ವಿಭಾಗವನ್ನು ಸಂಪರ್ಕಿಸಬಹುದು. 

–ಅರ್ಪಿತಾ ಮಿರ್ಚಾಂದಿನಿ, ಮನಃಶಾಸ್ತ್ರಜ್ಞೆ

ಕಾನೂನು ಹೀಗೆ ಹೇಳುತ್ತೆ...

ಈಗಾಗಲೇ ಆಗಿ ಹೋದ ಚಾಟ್‌, ವಿಡಿಯೊ, ಆಡಿಯೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 32ಕಲಂನಡಿ ಕೇಸು ದಾಖಲಿಸಬಹುದು. ಇದು ಸೈಬರ್‌ ಅಪರಾಧವಾಗುವುದರ ಜತೆಗೆ ಮಾಹಿತಿ ತಂತ್ರಜ್ಞಾನ-2000 ಕಾನೂನು ಕಾಯ್ದೆಯಡಿಯೂ ಬರುತ್ತದೆ. 

ನೊಂದಿರುವ ವ್ಯಕ್ತಿ ಯಾವುದೇ ಸ್ಥಳದಿಂದಲಾದರೂ ಜಿರೋ ಎಫ್‌ಐಆರ್‌ ದಾಖಲಿಸಬಹುದು. ಈ ಕಾನೂನಿಗೆ ಗಡಿ ಇರುವುದಿಲ್ಲ. ವಕೀಲರ ಮುಖಾಂತರ ನೊಂದಿರುವ ವ್ಯಕ್ತಿ ಕೇಸು ದಾಖಲಿಸಲು ಅವಕಾಶವಿದೆ. ಆರೋಪ ಸಾಬೀತಾದರೆ ಅಪರಾಧಿಗೆ 78ರ ಕಲಂನಡಿ ಮೂರು ವರ್ಷಗಳ ಜೈಲು ಹಾಗೂ ದಂಡ ವಿಧಿಸುವ ಅವಕಾಶವಿದೆ.

–ಮಂಜುಳಾ ಮುನವಳ್ಳಿ, ಹೈಕೋರ್ಟ್‌ ವಕೀಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT