‘ಮಹಾಭಾರತ ಅನುಸಂಧಾನ ಭಾರತಯಾತ್ರೆ’ ಕೃತಿಗೆ ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ಪ್ರಶಸ್ತಿ ಸಂದಿದೆ. ಈ ಸಂದರ್ಭದಲ್ಲಿ ಅವರು ಮಹಾಭಾರತ ಹಾಗೂ ಸಮಕಾಲೀನ ಸಂದರ್ಭವನ್ನು ಮುಖಾಮುಖಿಯಾಗಿಸಿ ತಮ್ಮ ಚಿಂತನೆಯನ್ನು ಹಂಚಿಕೊಂಡಿದ್ದಾರೆ.

* ಮಹಾಭಾರತವನ್ನು ಕುರಿತ ನಿಮ್ಮ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಿದೆ. ಮಹಾಭಾರತದ ಸಾರ್ವಕಾಲಿಕ ಮೌಲ್ಯಗಳನ್ನು ಈಗಿನ ಸಂದರ್ಭಕ್ಕೆ ಹೇಗೆ ಒಗ್ಗಿಸಬಹುದು ಎನ್ನುವುದನ್ನು ನೀವು ಅಭಿವ್ಯಕ್ತಿಸಿದ್ದೀರಿ. ಅದು ಸಾಧ್ಯವಾದುದು ಹೇಗೆ?

ಮಹಾಭಾರತ ಓದಿದವರು, ಓದದವರು ಎನ್ನುವ ವಿಚಾರ ಹಾಗಿರಲಿ. ನಮ್ಮ ಹಳ್ಳಿಯ ಪಕ್ಕದ ಹಳ್ಳಿಯಲ್ಲಿ ಒಂದು ಕೆರೆ ಇದೆ. ಅದಕ್ಕೆ ಪಾಂಡವರ ಕೆರೆ ಎಂದು ಹೆಸರು. ದ್ರೌಪದಿ ಅದರಲ್ಲಿ ಸ್ನಾನ ಮಾಡಿ ಬಟ್ಟೆ ಒಣಗಿಸುತ್ತಿದ್ದಳು ಎನ್ನುವುದು ಪ್ರತೀತಿ. ಕೆರೆಯ ಬಳಿ ಒಂದು ಶಿಲೆ ಇದೆ. ಅದರ ಮೇಲೆ ಅವಳು ಬಟ್ಟೆ ಒಣಗಿಸುತ್ತಿದ್ದಳು ಎನ್ನುತ್ತಾರೆ. ಇಂತಹ ಸಾವಿರ ಪ್ರತೀತಿಗಳು ಎಲ್ಲ ಕಡೆಯೂ ಇವೆ. ಇದರರ್ಥ ಜನರ ಮೇಲೆ ರಾಮಾಯಣ–ಮಹಾಭಾರತಗಳು ಆಳವಾದ ಪ್ರಭಾವವನ್ನು ಬೀರಿವೆ. ನಾನು ಒಂದು ಕಡೆ ಬರೆದಿದ್ದೆ- ನಮ್ಮ ಊರಿನ ಕಲ್ಲಿನ ಮೇಲೆ ದ್ರೌಪದಿ ಒಣಗಿಸಿದ ಸೀರೆಯನ್ನು ಯಾವ ದುಶ್ಯಾಸನನೂ ಸೆಳೆಯಲು ಸಾಧ್ಯವಿಲ್ಲ- ಎಂದು. ಅಂದರೆ, ನಮ್ಮ ಸುಪ್ತ ಮನಸ್ಸಿನ ಮೇಲೆ ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಬಹಳ ತೀವ್ರವಾದ ಪ್ರಭಾವ ಬೀರಿವೆ. ಇದು ನನಗೆ ಆಶ್ಚರ್ಯ ಮತ್ತು ಆಕರ್ಷಣೆ. ಅಪ್ರಜ್ಞಾಪೂರ್ವಕವಾಗಿ ಹೀಗೆ ಆಗುವ ಪ್ರಭಾವ ಬಹಳ ಆಳವಾದುದು. ನಾವು ಪ್ರಜ್ಞಾಪೂರ್ವಕವಾಗಿ ಬದುಕಬೇಕು ಎನ್ನುತ್ತೇವೆ. ಆದರೆ, ಅಪ್ರಜ್ಞಾಪೂರ್ವಕವಾದ ಪ್ರಭಾವ ನಮ್ಮಲ್ಲಿ ಆಳವಾಗಿರುತ್ತದೆ. ನಮ್ಮ ಸುಪ್ತಪ್ರಜ್ಞೆಯನ್ನು ಪ್ರಭಾವಿಸತಕ್ಕ ದ್ರವ್ಯವನ್ನು ಮಹಾಭಾರತವು ಹೊಂದಿದೆ. ಯಾವುದೋ ಒಂದು ಅಧ್ಯಯನ ನಮಗೇ ಗೊತ್ತಿಲ್ಲದೆ ಸ್ವಾಧ್ಯಾಯವಾಗುತ್ತದೆ. ಸ್ವಾಧ್ಯಾಯ–ತಪಸ್ಸುಗಳು ಭಾರತೀಯ ಸಂಸ್ಕೃತಿಯಲ್ಲಿ ಬಹಳ ಮುಖ್ಯವಾದಂಥವು. ಈ ದೃಷ್ಟಿಯಿಂದ ನಾನು ಮಹಾಭಾರತವನ್ನು ಅನುಸಂಧಾನ ಮಾಡುತ್ತಾ ಹೋದೆ. ಹೀಗಾಗಿ ನನಗೆ ಕಥೆ ಹೇಳುವುದಕ್ಕಿಂತಲೂ ಶೋಧನೆ ಮುಖ್ಯವಾಯಿತು. ಅದಕ್ಕೆ ಬೇಕಾದ ಅನೇಕ ಪರಿಕರಗಳನ್ನು ಇಟ್ಟುಕೊಂಡು ಆಲೋಚಿಸಿದೆನಷ್ಟೆ. ಈ ಅನುಸಂಧಾನದಲ್ಲಿ ಪಾತ್ರಗಳು ಮುಖ್ಯವೂ ಹೌದು, ಅಮುಖ್ಯವೂ ಹೌದು. ತೀವ್ರವಾದ ಶೋಧನೆ ಇಲ್ಲಿಯ ಪ್ರಧಾನ ಉದ್ದೇಶ. ಒಂದು ಕಾವ್ಯ ಎಲ್ಲರದ್ದೂ ಆಗದೆ ಯಾರದ್ದೂ ಆಗುವುದಿಲ್ಲ. ಒಂದರ ಒಳಗಿನ ಒಂದನ್ನು ಹುಡುಕುವುದನ್ನು ಮಹಾಭಾರತವೇ ನನಗೆ ಕಲಿಸಿತು. ಇದನ್ನು ಹದಿನೈದು ದಿನಕ್ಕೊಮ್ಮೆ ‘ಪ್ರಜಾವಾಣಿ’ ಪತ್ರಿಕೆಗೇ ಬರೆಯುತ್ತಿದ್ದೆ ಅಲ್ಲವೆ? ಆದರೆ ಆಗ ಬಹಳ ಒದ್ದಾಡುತ್ತಿದ್ದೆ. ಒಳ ಮನಸ್ಸಿನ ವಿಷಯವನ್ನು ಬರೆಯುವುದು ಕಷ್ಟ!

* ಆಧುನಿಕ ಕಾಲದಲ್ಲಿ ವಿಜ್ಞಾನ ಮಹಾಸಾಧನೆ ನಮ್ಮ ಮುಂದಿದೆ. ಕೃತಕ ಬುದ್ಧಿಮತ್ತೆಯಿಂದ ಏನಾಗುವುದೋ ಎಂಬ ಆತಂಕವೂ ಇದೆ. ಆದರೂ ಪ್ರಾಚೀನ ವಾಙ್ಮಯದ ಕುರಿತೂ ಹೆಚ್ಚಿನ ಒಲವು ಈಗ ಇದೆ. ನಿಮ್ಮ ಪ್ರಮುಖ ಕೃತಿಗಳೆಲ್ಲವೂ ಪ್ರಾಚೀನ ವಾಙ್ಮಯದ ಸುತ್ತಲೇ ಇವೆ. ಇದರ ಬಗ್ಗೆ ನಿಮಗೆ ಏನನ್ನಿಸುತ್ತದೆ?

ಮನುಷ್ಯ ಎಷ್ಟೇ ಆಧುನಿಕನಾದರೂ ಅಷ್ಟೇ ಪ್ರಾಚೀನ. ಭೂತಕಾಲದಿಂದ ಮನುಷ್ಯನಿಗೆ ಬಿಡುಗಡೆ ಸುಲಭವೋ? ಮನುಷ್ಯ ಪ್ರಾಚೀನನೂ ಹೌದು, ನವೀನನೂ ಹೌದು. ಪ್ರಾಚೀನ ವಾಙ್ಮಯದ ಒಲವು ಎಂಬುದು ಆಧುನಿಕತೆಯಿಂದಲೋ ಮತ್ತೊಂದರಿಂದಲೋ ಬಿಡಿಸಿಕೊಳ್ಳುವ ಪಲಾಯನವಾದವಲ್ಲ. ಉದಾಹರಣೆಗೆ ನೋಡಿ: ಭಗವದ್ಗೀತೆಯು ನಿನ್ನ ಕರ್ತವ್ಯವನ್ನು ನೀನು ಮಾಡು ಎಂದು ಹೇಳುತ್ತದೆ; ಪಲಾಯನ ಮಾಡಬೇಡ ಎನ್ನುತ್ತದೆ. ಪ್ರಾಚೀನ ವಾಙ್ಮಯದಲ್ಲಿ ಪ್ರಾಚೀನವೂ ನವೀನವೂ ಒಟ್ಟೊಟ್ಟಿಗೆ ಇರುತ್ತದೆ. ಉಪನಿಷತ್ತುಗಳು ತುಂಬಾ ಪ್ರಾಚೀನವಾದವು. ‘ಕಣ್ಣಿನ ಕಣ್ಣು’ ಎಂದು ಉಪನಿಷತ್ ಹೇಳುತ್ತದೆ. ‘ಸತ್ಯಸ್ಯ ಸತ್ಯಂ’ ಎನ್ನುತ್ತದೆ. ಕಣ್ಣು ಎನ್ನುವುದು ಇಂದ್ರಿಯವೇ ಹೌದು. ಆದರೆ, ನಮ್ಮ ಪ್ರಾಚೀನರು ಅಲ್ಲಿ ಹೇಳುತ್ತಿರುವುದು – ನಾವು ಇಂದ್ರಿಯಗಳಿಂದ ಮಾತ್ರವಷ್ಟೆ ಬದ್ಧರಾದವರಲ್ಲ; ಇಂದ್ರಿಯದ ಒಳಗಡೆ ಇನ್ನೊಂದು ಕೆಲಸ ಮಾಡುತ್ತಿದೆ. ಅದು ಇರುವುದರಿಂದಲೇ ನಮ್ಮ ಇಂದ್ರಿಯಗಳು ಕೆಲಸ ಮಾಡಲು ಸಾಧ್ಯವಾಗುತ್ತದೆ. ನಮಗೆ ಪ್ರಜ್ಞೆ, ಬೌದ್ಧಿಕತೆ ಇದೆ. ಅಂದಮೇಲೆ ಕೃತಕ ಬುದ್ಧಿಮತ್ತೆ ಬಂದದ್ದು ಎಲ್ಲಿಂದ? ನಮ್ಮಿಂದಲೇ ಅಲ್ಲವೇ?

* ಪ್ರಾಚೀನ ಗ್ರಂಥಗಳನ್ನು ನೇರವಾಗಿ ಅಧ್ಯಯನ ಮಾಡುವುದು ಈಗ ಕಷ್ಟ. ಹೀಗಿರುವಾಗ ಪ್ರಾಚೀನ ಗ್ರಂಥಗಳನ್ನು ಓದಲು ಸಿದ್ಧರಾಗುವುದಾದರೂ ಹೇಗೆ?

ಹೈಸ್ಕೂಲ್ನಲ್ಲಿ ನನಗೆ ಒಬ್ಬರು ಮೇಷ್ಟರಿದ್ದರು. ನಮ್ಮ ಪಠ್ಯದಲ್ಲಿ ಕುವೆಂಪು ಅವರ ಒಂದು ಅಧ್ಯಾಯ ಇತ್ತು. ಅದರಲ್ಲಿ ಒಂದು ಸಾಲು ಹೀಗಿತ್ತು-‘ಅಂಗಳದಲ್ಲಿ ಹಸುಳೆ ಬಿಸಿಲು ಆಡುತ್ತಿತ್ತು.’ ಮೇಷ್ಟರು ಓದಿ, ಪುಸ್ತಕ ಮಡಚಿಟ್ಟರು. ‘ಆಹಾ’ ಎಂದರು. ಇದು ನನ್ನ ಮನಸ್ಸನ್ನು ಮುಟ್ಟಿತು. ಉದ್ದೇಶಪೂರ್ವಕವಾಗಿ ಮುಟ್ಟಿದ್ದಲ್ಲ. ಕೇಳುತ್ತಾ ಕೇಳುತ್ತಾ ಆದದ್ದು. ಇದರಿಂದ ಕನ್ನಡದ ಮೇಲೆ ನನಗೆ ಪ್ರೀತಿ ಹುಟ್ಟಿತು. ಎಲ್ಲ ವಿಷಯಗಳಲ್ಲಿ ಹೀಗೆ ಪ್ರೀತಿ ಹುಟ್ಟುವಂಥದ್ದು ನಡೆದುಬಿಟ್ಟರೆ ನಮ್ಮ ಶಿಕ್ಷಣ ಪದ್ಧತಿಯೂ ಸೇರಿದಂತೆ ಎಲ್ಲವೂ ಸರಿಯಾಗುತ್ತದೆ. ಇಂಥ ಪ್ರೀತಿಯನ್ನು ಹುಟ್ಟಿಸದೆ ಸುಮ್ಮನೆ ಯಾವ ಸಿದ್ಧಾಂತವನ್ನು ಹೇಳಿದರೂ ಪರಿಣಾಮ ಆಗುವುದಿಲ್ಲ. ಜೀವಂತ ಮನಸ್ಸು ಜೀವಂತವಾಗಿರಲು ಹೇಗೆಲ್ಲ ಕೆಲಸ ಮಾಡುತ್ತದೆ ಎನ್ನುವುದಷ್ಟೆ ಮುಖ್ಯ. ಸುಲಭವಾದ ತೀರ್ಮಾನಗಳಲ್ಲಿ ಜೀವನ ಸಾಗಿಸುವುದು ವ್ಯಾವಹಾರಿಕತೆ. ಇದು ಕಪ್ಪು-ಬಿಳುಪು, ಎಡ-ಬಲ ಎನ್ನುತ್ತೇವಲ್ಲ, ಹಾಗೆ. ಯಾವುದೇ ಸಂಗತಿಯಲ್ಲೂ ಮನಸ್ಸು ಆಳಕ್ಕೆ ಇಳಿಯದೆ ಏನು ಫಲ? ತರ್ಕವನ್ನು ಮೀರಿ ಆಳಕ್ಕೆ ಇಳಿಯಬೇಕು. ಮನಸ್ಸು ಸೆರೆಮನೆಯಲ್ಲಿದೆ ಎಂದು ನಮಗೆ ಗೊತ್ತಾಗಬೇಕು. ಅದನ್ನು ಶಿಕ್ಷಣವೇ ಮಾಡಬೇಕು.

* ಈಗ ಮನುಷ್ಯನ ಬುದ್ಧಿ ಸಾಕಷ್ಟು ಬೆಳೆದಿದೆ. ಆದರೆ, ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗಿನ ಯುದ್ಧಗಳೇ ಹೆಚ್ಚು ಅನಿಸುತ್ತದೆ. ಮಹಾಭಾರತದಲ್ಲೂ ಯುದ್ಧವಿತ್ತು. ಈ ಎರಡನ್ನೂ ಎದುರು ಬದಿರಲ್ಲಿ ಇಟ್ಟು ಏನು ಹೇಳಬಹುದು?

ಜಗತ್ತಿನಲ್ಲಿ ಎಲ್ಲೆಲ್ಲೂ ಈಗ ಗೆಲ್ಲಬೇಕು ಎಂಬ ಭಾವನೆ ಇದೆ. ಯಾರ ವಿರುದ್ಧ? ನಮ್ಮ ಶತ್ರುಗಳ ವಿರುದ್ಧ. ನಮ್ಮ ಶತ್ರುಗಳು ಎಂದು ಹೇಗೆ ಭಾವಿಸುತ್ತೀರಿ? ಅವರು ನಮ್ಮನ್ನ ಶತ್ರುಗಳು ಎಂದು ಭಾವಿಸಿರುವುದರಿಂದ. ಅವರು ನಮ್ಮನ್ನು ಹಾಗೆ ಭಾವಿಸುವುದನ್ನೇ ಸತ್ಯ ಎಂದೇಕೆ ಭಾವಿಸಬೇಕು? ಯಾಕೆ ಈ ಚಿತ್ರಣವನ್ನು ನಾವು ಬದಲಾಯಿಸಬಾರದು? ಬದಲಾಯಿಸಲು ಅವರು ಬಿಡೊಲ್ಲ, ಅದಕ್ಕೇ ಹೀಗೆ ಮಾಡುತ್ತೇವೆ ಎನ್ನುತ್ತೇವೆ. ಹೇಗಾದರೂ ಮಾಡಿ ಗೆಲ್ಲಬೇಕು ಎಂಬ ಪ್ರವೃತ್ತಿಯನ್ನು ನಿರಂತರವಾಗಿ ಚಿಕ್ಕಂದಿನಿಂದಲೇ ಪೋಷಿಸಲಾಗುತ್ತದೆ. ಜೀವನ ಮಾಡುವುದು ಎಂದರೆ ಹಠದಿಂದ ಬದುಕುವುದಾ? ನಾವು ಬದುಕಿರುವುದು ನಮ್ಮ ಅಹಂಕಾರದಿಂದಲ್ಲ ಎಂಬುದನ್ನು ಅರಿಯಬೇಕು. ಗಾಢನಿದ್ದೆಯಲ್ಲಿ ನಮಗೆ ಯಾವ ಅಹಂಕಾರವೂ ಇರುವುದಿಲ್ಲ; ಅದು ಶಾಂತಸ್ಥಿತಿ. ನಮ್ಮ ಎಲ್ಲ ಸಂಕಟಗಳೂ ಪ್ರಾರಂಭವಾಗುವುದು ಎಚ್ಚರವಾದ ಮೇಲೆ. ಈ ಎಚ್ಚರ ಎನ್ನುವುದೇ ಎಲ್ಲ ಸಂಕಟಗಳ ಕೊಡುಗೆಯಾ? ಇದನ್ನು ಯಾರೂ ಆಲೋಚಿಸುವುದಿಲ್ಲ. ನಮ್ಮಲ್ಲಿ ಅಹಂಕಾರದ ಪೋಷಣೆ ನಡೆಯಕೂಡದು ಎನ್ನುವುದು ನಮಗೆ ಗೊತ್ತಾಗಬೇಕಷ್ಟೆ. ಮಹಾಭಾರತವು ಇಂಥ ಎಲ್ಲ ಕಷ್ಟಗಳನ್ನೂ ಬಿಡಿಬಿಡಿಯಾಗಿ ಹೇಳುತ್ತದೆ. ನಾವು ನಿಜವಾಗಿ ದೇವರ ದಾಸರಾದರೆ, ಆ ಕ್ಷಣದಿಂದ ಲೋಕದ ದಾಸ್ಯದಿಂದ ನಮಗೆ ಬಿಡುಗಡೆ ಸಿಕ್ಕುತ್ತದೆ. ಆದರೆ ಯಾವುದಾದರೂ ಒಂದು ಸಿದ್ಧಾಂತಕ್ಕೆ ಬದ್ಧರಾದರೆ ಇಂತಹ ಅರಿವು ಸಾಧ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.