ಸರಿಯಾಗಿ ಲೆಕ್ಕ ಹಾಕಿದರೆ ಒಂದು ಸಾವಿರ ಜನಸಂಖ್ಯೆ ದಾಟದ, ಚಿತ್ರದುರ್ಗ ತಾಲ್ಲೂಕಿನ ಕರಿಯಮ್ಮನ ಹಟ್ಟಿಯಲ್ಲಿ ನಲವತ್ತು ವರ್ಷ ಹಳೆಯದಾದ ಶ್ರೀ ಕರಿಯಾಂಬ ಅನುದಾನಿತ ಪ್ರೌಢಶಾಲೆ ಇದೆ. ಇಲ್ಲಿಗೆ ಅಕ್ಕಪಕ್ಕದ ಹಳ್ಳಿಯಿಂದ ಬರುವವರು ಸೇರಿ ಸುಮಾರು 110 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮೂಲ ಸೌಕರ್ಯಗಳ ಕೊರತೆ ಇರುವ, ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಈ ಶಾಲೆಯ ಪುನರುಜ್ಜೀವಕ್ಕೆ ದೇಣಿಗೆ ಸಂಗ್ರಹಿಸಲು ಆ ಶಾಲೆಯ ಹಳೆಯ ವಿದ್ಯಾರ್ಥಿ ಸುದರ್ಶನ್ ಜಿ.ಟಿ. ಸೈಕಲ್ ಏರಿದ್ದಾರೆ! ಸೈಕಲ್ನಲ್ಲಿಯೇ ಹಲವು ದೇಶಗಳನ್ನು ಸುತ್ತಿ ದೇಣಿಗೆ ಸಂಗ್ರಹಿಸುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಪೆಡಲ್ಗಳ ಮೇಲಿನ ಕಾಲುಗಳು ಚಲಿಸುತ್ತಲೇ ಇವೆ.

ಸೈಕಲ್ ಮೇಲೆ ದೇಶ-ವಿದೇಶಗಳನ್ನು ಸುತ್ತುವುದರಿಂದ ಸುದರ್ಶನ್ ಹಿಂದೆ ‘ಸಂಚಾರಿ’ ಎನ್ನುವ ವಿಶೇಷಣ ಸೇರಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ‘ಸಂಚಾರಿ ಸುದರ್ಶನ್’ ಎಂದೇ ಇವರು ಪರಿಚಿತರು. ಈಗಷ್ಟೇ 25ರ ಹರೆಯ. ಚಿತ್ರದುರ್ಗ ತಾಲ್ಲೂಕಿನ ಹನುಮನಹಳ್ಳಿಯ ಇವರಿಗೆ ಬಾಲ್ಯದಿಂದಲೂ ಸೈಕಲ್ ಬಗೆಗೆ ವಿಪರೀತ ಮೋಹ. ಸೈಕ್ಲಿಸ್ಟ್ ಆಗಲು ಬೆವರು ಬಸಿಯುತ್ತಿದ್ದ ದೂರದ ಸಂಬಂಧಿಯೊಬ್ಬರಿಂದಾಗಿ ಸೈಕಲ್ ಬಗೆಗಿನ ಆಸೆ ಹುಚ್ಚಾಯಿತು. ಅವರಿವರ ಸೈಕಲ್ನಲ್ಲಿ ಸವಾರಿ ಮಾಡುತ್ತಿದ್ದ ಸುದರ್ಶನ್, ಓದು ಮುಗಿಸಿ, ಕೆಲಸ ಗಿಟ್ಟಿಸಿಕೊಂಡು ಸೈಕಲ್ ಖರೀದಿಸಿದ್ದು 2020ರಲ್ಲಿ. ಸಣ್ಣ ಟ್ರಿಪ್ನಿಂದ ಆರಂಭವಾದ ‘ಸಂಚಾರಿ’ ಜೀವನಯಾನ ಇದೀಗ ಎಂಟು ರಾಷ್ಟ್ರಗಳಲ್ಲಿ ಸಾಗಿದೆ. 50 ಸಾವಿರಕ್ಕೂ ಅಧಿಕ ಕಿಲೋಮೀಟರ್ ಪ್ರಯಾಣ ಪೂರ್ಣಗೊಂಡಿದೆ.

‘ಆರಂಭದಲ್ಲಿ ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೆ. ಏಳೆಂಟು ದಿನಗಳ ಈ ಪ್ರವಾಸಕ್ಕೆ ಸಮಾನ ಮನಸ್ಕ ಸ್ನೇಹಿತರೂ ಜೊತೆಯಾಗುತ್ತಿದ್ದರು. ದೇಶ ಸುತ್ತುವ ಯೋಚನೆ ಹೊಳೆದಾಗ ಕೈಯಲ್ಲಿದ್ದಿದ್ದು ₹300 ಮಾತ್ರ. ಹೀಗೊಂದು ಯೋಚನೆ ಹೊಳೆಯುವುದಕ್ಕೂ ಒಂದು ಕಾರಣ ಇದೆ’ ಎಂದು ಸುದರ್ಶನ್ ತಮ್ಮ ‘ಅಲೆಮಾರಿ’ ಬದುಕಿನ ಕಥೆ ಹೇಳಲು ಅಣಿಯಾದರು.

‘ಕೋವಿಡ್ ವೇಳೆಯಲ್ಲಿ ಹೈದರಾಬಾದ್ ಮೂಲದ ಕಂಪನಿಯೊಂದರ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಚಿತ್ರದುರ್ಗದಲ್ಲಿ ಕೆಲಸ ಮಾಡುತ್ತಿದ್ದೆ. ಎರಡನೇ ಲಾಕ್ಡೌನ್ನಲ್ಲಿ ಕೆಲಸ ಹೋಯಿತು. ಸಂಬಳ, ಭತ್ಯೆಗಳು ಸೇರಿ ₹52 ಸಾವಿರ ಬರಬೇಕಿತ್ತು. ಆದರೆ ಕಂಪನಿ ₹10 ಸಾವಿರ ಕೊಟ್ಟು ಕೈತೊಳೆದುಕೊಂಡಿತು. ಬಾಕಿ ಹಣ ನೀಡಿ ಎನ್ನುವ ಮನವಿಗೆ ಮನ್ನಣೆ ಸಿಗಲಿಲ್ಲ. ಕಾರ್ಮಿಕ ಇಲಾಖೆಗೆ ನೀಡಿದ ದೂರೂ ಪ್ರಯೋಜನಕ್ಕೆ ಬರಲಿಲ್ಲ. ಕಷ್ಟಪಟ್ಟು ದುಡಿದ ದುಡ್ಡಿಗಾಗಿ ಕಂಪನಿಯ ಕೇಂದ್ರ ಕಚೇರಿ ಇರುವ ಹೈದರಾಬಾದ್ಗೆ ಸೈಕಲ್ ಏರಿ ಹೊರಟೆ. ಬೆನ್ನ ಹಿಂದೆ ಪಯಣದ ಉದ್ದೇಶ, ಕಂಪನಿಯ ಮಾಹಿತಿ ಬರೆದುಕೊಂಡಿದ್ದೆ. ದಾರಿ ಮಧ್ಯೆ ತೆಲುಗು ಪತ್ರಿಕೆಯೊಂದು ನನ್ನ ಬಗ್ಗೆ ಸುದ್ದಿ ಮಾಡಿತು. ತತ್ಕ್ಷಣವೇ ಕಾರ್ಮಿಕ ಇಲಾಖೆಯು ಕಂಪನಿಗೆ ನೋಟಿಸ್ ನೀಡಿತು. ಹೈದರಾಬಾದ್ ತಲುಪುತ್ತಿದ್ದಂತೆಯೇ ಕಚೇರಿಗೆ ಕರೆಸಿಕೊಂಡ ಕಂಪನಿ ಬಾಕಿ ಪಾವತಿ ಮಾಡಿತು. ಹೈದರಾಬಾದ್ಗೆ ಕೈಗೊಂಡ ಈ ‘ಪ್ರತಿಭಟನಾ ಪಯಣ’ವೇ ಲೋಕ ಸಂಚರಿಸಲು ಪ್ರೇರಣೆ ನೀಡಿತು. ಸೈಕಲ್ನಲ್ಲಿ ದೇಶ ಸುತ್ತುವ ಕನಸು ಚಿಗುರೊಡೆದಿದ್ದು ಆಗಲೇ’ ಎಂದು ತಮ್ಮ ಸೈಕಲ್ ಸವಾರಿ ಯಾನ ಆರಂಭವಾದ ಬಗೆಯನ್ನು ಬಿಚ್ಚಿಟ್ಟರು.

ದೇಶದ ಎಲ್ಲಾ ಜಿಲ್ಲೆಗಳನ್ನು ಸುತ್ತುವ ಸುದರ್ಶನ್ ಅವರ ಸೈಕ್ಲಿಂಗ್ ಯಾನ ಬೆಂಗಳೂರಿನಿಂದ ಆರಂಭವಾಯಿತು. ಬೆಂಗಳೂರಿನಿಂದ ಕನ್ಯಾಕುಮಾರಿಗೆ ತೆರಳಿ, ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ಛತ್ತೀಸಗಢ, ತ್ರಿಪುರಾ, ಅಸ್ಸಾಂ ದಾಟಿ ಮೇಘಾಲಯ ತಲುಪುವಾಗ ಎರಡು ವರ್ಷಗಳೇ ಸರಿದಿದ್ದವು. ಪ್ರತಿ ಜಿಲ್ಲೆಗೂ ಭೇಟಿ ಕೊಡುತ್ತಿದ್ದರಿಂದ ಒಂದು ರಾಜ್ಯವನ್ನು ಸುತ್ತಲು ಕನಿಷ್ಠ ಎರಡು ತಿಂಗಳಾದರೂ ಬೇಕಿತ್ತು. ದಾರಿಯುದ್ದಕ್ಕೂ ಜನರ ಪರಿಚಯ, ಅವರ ಜೀವನ, ಸಂಸ್ಕೃತಿಯ ಪರಿಚಯವೂ ಆಗುತ್ತಿತ್ತು. ಭಾಷೆಯೂ ತಕ್ಕಮಟ್ಟಿಗೆ ಅರ್ಥವಾಗುತ್ತಿತ್ತು. ಗೂಗಲ್ ಟ್ರಾನ್ಸ್ಲೇಟ್ ಸಹಾಯಕ್ಕೆ ಬರುತ್ತಿತ್ತು. ದಾರಿ ಮಧ್ಯೆ ಸಿಕ್ಕ ಅಪರಿಚಿತರು ಮನೆಯ ಸದಸ್ಯ ಎಂಬಂತೆ ನೋಡಿಕೊಂಡರು. ಭಾರತ ಪ್ರವಾಸವನ್ನು ಅಲ್ಲಿಗೆ ನಿಲ್ಲಿಸಿ, ನಡುವೆ ನೇಪಾಳಕ್ಕೂ ಸೈಕಲ್ನಲ್ಲಿ ಹೋಗಿ ಬಂದ ಸುದರ್ಶನ್ ತಲೆಯಲ್ಲಿ ಸಿಂಗಪುರ ಪ್ರವಾಸದ ಯೋಚನೆ ಮೊಳಕೆಯೊಡೆದಿತ್ತು. ಈವರೆಗೆ 12 ರಾಜ್ಯಗಳ ಎಲ್ಲಾ ಜಿಲ್ಲೆಗಳನ್ನು ಅವರು ಸುತ್ತಿದ್ದಾರೆ.

ಇಷ್ಟೊತ್ತಿಗಾಗಲೇ ಯೂಟ್ಯೂಬ್ನಿಂದ ₹30 ಸಾವಿರ ಕೈಸೇರಿತ್ತು. ಈ ಹಣದಿಂದ ತಾನು ಕಲಿತ ಕರಿಯಮ್ಮನ ಹಟ್ಟಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಕೊಡಲು ಬ್ಯಾಗ್ಗಳನ್ನು ತೆಗೆದುಕೊಂಡು ಹೋದಾಗ ಶಾಲೆಯ ದುಃಸ್ಥಿತಿಯ ವಿರಾಟ ದರ್ಶನವಾಯಿತು. ಪರಿಶಿಷ್ಟ ಹಾಗೂ ಬಡ ಕುಟುಂಬದ ಮಕ್ಕಳೇ ಹೆಚ್ಚಿರುವ ಈ ಶಾಲೆಯಲ್ಲಿ, ಶಿಕ್ಷಕರೇ ತಮ್ಮ ವೇತನದಿಂದ ವಾಹನವೊಂದನ್ನು ಖರೀದಿ ಮಾಡಿ, ವಿದ್ಯಾರ್ಥಿಗಳು ಶಾಲೆಯಿಂದ ವಿಮುಖರಾಗದಂತೆ ನೋಡಿಕೊಂಡಿದ್ದರು. ಶಾಲೆಗೊಂದು ಹೊಸ ಕಟ್ಟಡ ಬೇಕು ಎನ್ನುವ ಬಯಕೆಯನ್ನು ಶಿಕ್ಷಕರು ಸುದರ್ಶನ್ ಮುಂದಿಟ್ಟರು. ಈ ಯೋಜನೆಗೆ ಸುಮಾರು ಒಂದು ಕೋಟಿ ರೂಪಾಯಿಯ ಅಗತ್ಯವಿತ್ತು. ಸಿಎಸ್ಆರ್ ನಿಧಿಗೆ ಸುದರ್ಶನ್ ಪಟ್ಟ ಪ್ರಯತ್ನ ಫಲ ನೀಡಲಿಲ್ಲ. ಮುಂದಿನ ಸಿಂಗಪುರ ಪ್ರವಾಸವನ್ನು ಶಾಲಾ ಕಟ್ಟಡಕ್ಕೆ ದೇಣಿಗೆ ಸಂಗ್ರಹಿಸುವ ಗುರಿಯೊಂದಿಗೆ ಪ್ರಾರಂಭಿಸಿದರು.

ಬೆಂಗಳೂರಿನಿಂದ ಕೋಲ್ಕತ್ತಾ, ಅಲ್ಲಿಂದ ವಿಯೆಟ್ನಾಂಗೆ ವಿಮಾನ ಮೂಲಕ ತೆರಳಿ, ಸೈಕಲ್ನಲ್ಲಿಯೇ ಕಾಂಬೋಡಿಯಾ, ಲಾವೋಸ್, ಮಲೇಷ್ಯಾ ಸುತ್ತಿ ಸಿಂಗಪುರ ಪರ್ಯಟನೆ ಮುಗಿಸಿದ್ದಾರೆ. ‘ಶಾಲೆಗೆ ಧನ ಸಹಾಯ ಮಾಡಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಭಿನ್ನವಿಸಿಕೊಂಡರು. ಈ ಪ್ರವಾಸದಲ್ಲಿ ಶಾಲೆಗಾಗಿ ಒಂದೂವರೆ ಲಕ್ಷ ರೂಪಾಯಿ ಸಂಗ್ರಹವಾಯಿತು. ‘ಸುದರ್ಶನ್ ಸಂಚಾರಿ ಫೌಂಡೇಶನ್’ ರಚಿಸುವ ಕಾರ್ಯ ಪ್ರಗತಿಯಲ್ಲಿದ್ದು, ಆ ಮೂಲಕ ಶಾಲೆಗೆ ಹೊಸ ಕಟ್ಟಡ ನಿರ್ಮಿಸಿಕೊಡುವ ಪ್ರಯತ್ನವನ್ನು ಮುಂದುವರಿಸಿದ್ದಾರೆ. ‘ಸುಸಜ್ಜಿತ ಕಟ್ಟಡ ಸಿಕ್ಕಿದರೆ ಹಳ್ಳಿ ವಿದ್ಯಾರ್ಥಿಗಳ ಭವಿಷ್ಯ ಬೆಳಗಲಿದೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಶಾಲೆಯ ಹಳೆ ವಿದ್ಯಾರ್ಥಿಯೊಬ್ಬ ಈ ಪ್ರಯತ್ನಕ್ಕಿಳಿದಿರುವುದು ನಮಗೆ ಹೆಮ್ಮೆ’ ಎಂದರು ಶಾಲೆಯ ಮುಖ್ಯೋಪಾಧ್ಯಾಯ ನಾಗಪ್ಪ ಹೇಮಪ್ಪ ಅಡ್ಡಮನಿ.

ಹಣ ಹೊಂದಿಸುವ ಪ್ರಯಾಸ

ದೇಶ ಸುತ್ತುವ ಆಸೆಯಿಂದ ಸೈಕಲ್ ತೆಗೆದುಕೊಂಡ ಸುದರ್ಶನ್, ಕೆಲವೇ ತಿಂಗಳಲ್ಲಿ ಕೋವಿಡ್ನಿಂದಾಗಿ ಕೆಲಸ ಕಳೆದುಕೊಳ್ಳಬೇಕಾಯಿತು. ಬಳಿಕ ಚಿತ್ರದುರ್ಗ, ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಆಗಿ ಗಳಿಸಿದ ಕಾಸು ಖರ್ಚಿಗೂ ಸಾಲುತ್ತಿರಲಿಲ್ಲ. ಮನೆಯ ಜವಾಬ್ದಾರಿಯ ಹೊರೆಯೂ ತಲೆ ಮೇಲಿತ್ತು. ಖಾಲಿ ಕಿಸೆಯಲ್ಲೇ ದೇಶ ಸುತ್ತಾಟ ಆರಂಭವಾಯಿತು. ‘ದಾರಿ ಮಧ್ಯೆ ಜನರ ಬಳಿ ಕೆಲಸ ಕೊಡಿ ಎಂದು ಕೇಳುತ್ತಿದ್ದೆ. ಕೆಲಸ ಸಿಕ್ಕರೆ ಸ್ವಲ್ಪ ಹಣ ಕೈ ಸೇರುತ್ತಿತ್ತು.

ಕೇರಳದ ನೀಲಕ್ಕಲ್ನ ಅಯ್ಯಪ್ಪ ದೇಗುಲದಲ್ಲಿ ಬಣ್ಣ ಬಳಿಯುವ, ತಿರುವನಂತಪುರದಲ್ಲಿ ಕಾಂಕ್ರೀಟ್ ಕಾರ್ಮಿಕನಾಗಿ, ತೆಲಂಗಾಣದ ಗಣಿಯೊಂದರಲ್ಲಿ ಕೂಲಿಯಾಗಿ ಕೆಲಸ ಮಾಡಿದ್ದೇನೆ. ಕೆಲವೊಂದು ಕಡೆ ಮಾಸ್ಕ್ ಮಾರಿ ಒಂದಿಷ್ಟು ಗಳಿಸಿದ್ದೇನೆ. ದಾರೀಲಿ ಸಿಕ್ಕವರು ಊಟ ಕೊಟ್ಟರೆ ಸ್ವಲ್ಪ ತಿಂದು ಎತ್ತಿಟ್ಟುಕೊಳ್ಳುತ್ತಿದ್ದೆ. ಕೆಲವು ಸಲ ನೀರು ಕುಡಿದೇ ಸಾಗಿದ್ದೂ ಇದೆ. ನನ್ನ ಉತ್ಸಾಹ ನೋಡಿ ಹಣ ಕೊಟ್ಟವರು, ಉಳಿದುಕೊಳ್ಳಲು ಸ್ಥಳ ಕೊಟ್ಟ ಹಲವು ಮಂದಿ ಇದ್ದಾರೆ. ವಿದೇಶಲ್ಲಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಹಲವು ಮಂದಿ ಸಹಾಯ ಮಾಡಿದ್ದಾರೆ. ಸಿಂಗಪುರದಲ್ಲಿ ಕನ್ನಡದ ದಂಪತಿ ಗೋಪ್ರೊ ಕೊಡಿಸಿದರು. ಈಗ ಸಾಮಾಜಿಕ ಜಾಲತಾಣದಿಂದ ಬರುವ ಹಣವೇ ಆದಾಯ. ನಾನು ಹಲವು ಮಂದಿಯ ಋಣದಲ್ಲಿದ್ದೇನೆ’ ಎಂದರು ಸುದರ್ಶನ್.

ಏಕಾಂಗಿ ಪಯಣ ಸುಲಭವಲ್ಲ

ಗುರುತು ಪರಿಚಯ ಇಲ್ಲದ ಊರಿನಲ್ಲಿ ಏಕಾಂಗಿಯಾಗಿ ತಿರುಗಾಡುವುದು, ಅಲ್ಲಿನ ವಾತಾವರಣಕ್ಕೆ ದೇಹವನ್ನು ಒಗ್ಗಿಸಿಕೊಳ್ಳುವುದು ಸುಲಭವಲ್ಲ. ಈ ಸವಾಲುಗಳ ಜೊತೆಯಲ್ಲೇ ಸುದರ್ಶನ್ ಪಯಣ ಸಾಗಿದೆ. ಒಮ್ಮೆ ಕರ್ನಾಟಕ ಗಡಿ ಸಮೀಪದ ಕೇರಳದ ರಾಣಿಪುರ ಬೆಟ್ಟದಿಂದ ಇಳಿಯುವಾಗ ಬ್ರೇಕ್ ಫೇಲ್ ಆಗಿ ಬಿದ್ದು ಕೇರಳದ ಅರಣ್ಯ ಇಲಾಖೆಯ ಸಿಬ್ಬಂದಿ ಆಸ್ಪತ್ರೆಗೆ ಸೇರಿಸಿದ್ದರು. ಗಾಯ ಹೆಚ್ಚಿನ ಪ್ರಮಾಣದಲ್ಲಿ ಆಗಿದ್ದರಿಂದ ಒಂದು ತಿಂಗಳ ವಿಶ್ರಾಂತಿ ತೆಗೆದುಕೊಳ್ಳಬೇಕಾಯಿತು.

ಥಾಯ್ಲೆಂಡ್ ಪ್ರವೇಶದ ವೇಳೆ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ವಿಯೆಟ್ನಾಂನಿಂದ ಕಾಂಬೊಡಿಯಾಗೆ ತೆರಳುವ ವೇಳೆ ಎದುರಾದ ವಿಸಾ ಸಮಸ್ಯೆ, ಕ್ವಾಲಾಲಂಪುರದಲ್ಲಿ ಟೈರ್ ಸ್ಫೋಟಿಸಿದ್ದು, ಲಾವೋಸ್ನಲ್ಲಿ ಭಾರಿ ಸೆಖೆಯಿಂದಾಗಿ ರಾತ್ರಿ ಪೂರ್ತಿ ಸೈಕಲ್ ತುಳಿದಿದ್ದು, ಹಲವು ದೇಶಗಳಲ್ಲಿ ಹಣ ವಿನಿಮಯಕ್ಕಾಗಿ ಪರದಾಡಿದ್ದು, ಜ್ವರ ಬಂದು ಟೆಂಟ್ನಲ್ಲಿಯೇ ದಿನ ದೂಡಿದ್ದು, ಕೆಲವು ದೇಶಗಳಲ್ಲಿ ವಿಡಿಯೊ ಮಾನಿಟೈಸ್ ಆಗದೆ ಹಣಕ್ಕೆ ಪರದಾಡಿದ್ದು, ಸಸ್ಯಾಹಾರಿ ಮಾಂಸಾಹಾರ ತಿನ್ನಬೇಕಾಗಿ ಬಂದಿದ್ದು ‘ಸಂಚಾರಿ’ಗೆ ಹಂಚಿಕೊಳ್ಳಲು ಅನುಭವಗಳ ಮೂಟೆಯೇ ಇದ್ದವು.

ಸುದರ್ಶನ್ಗೆ ಪ್ರವಾಸ ಜೀವನದ ಪಾಠ ಕಲಿಸಿದೆ. ದೃಷ್ಟಿಕೋನ ಬದಲಾಯಿಸಿದೆ. ಯೋಚನೆಗೆ ಹೊಸ ಹೊಳಪು ಬಂದಿದೆ. ಪೂರ್ವಗ್ರಹಗಳು ಮಾಯವಾಗಿವೆ. ಹತ್ತಾರು ಸ್ನೇಹಿತರನ್ನು ಕೊಟ್ಟಿದೆ. ಪ್ರಕೃತಿಯ ಒಡನಾಟ ಕಲಿಸಿದೆ. ಆತ್ಮತೃಪ್ತಿ ನೀಡಿದೆ. ಬದುಕುವ ಉಮೇದು ಹೆಚ್ಚಿಸಿದೆ. ಅಸಂಖ್ಯಾತ ಜನರ ಪ್ರೀತಿ ಕೊಟ್ಟಿದೆ. ಹೊಸ ಸೈಕಲ್ ಖರೀದಿ ಮಾಡುವ ಬಯಕೆಗೆ ಹಣದ ಸಮಸ್ಯೆ ಇದೆ. ಸವಾಲುಗಳು ಹಲವು ಇವೆ. ಸೈಕಲ್ನಲ್ಲಿಯೇ ವಿಶ್ವ ಸುತ್ತುವ ಯೋಜನೆಯೂ ಪ್ರಾರಂಭವಾಗಿದೆ.

ಶಾಲೆ, ಪೆಟ್ರೋಲ್ ಬಂಕ್ಗಳೇ ತಂಗುದಾಣ

ಸೈಕಲ್ ಏರಿ ಹೊರಟರೆ ಟೆಂಟ್, ಸ್ಲೀಪಿಂಗ್ ಬ್ಯಾಗ್, ಟ್ಯೂಬ್, ಪಂಚರ್ ಕಿಟ್, ಶೂ, ಚಪ್ಪಲಿ, ನಾಲ್ಕೈದು ಜೋಡಿ ಬಟ್ಟೆ, ರೈನ್ ವೇರ್, ಸಣ್ಣ ಗ್ಯಾಸ್ ಸ್ಟವ್, ಮೊಬೈಲ್, ಕ್ಯಾಮೆರಾ ಇವಿಷ್ಟೇ ಸಂಗಾತಿಗಳು. ದೇಹ ವಿಶ್ರಾಂತಿ ಬಯಸಿದಾಗ ಸೂಕ್ತ ಸ್ಥಳ ಹುಡುಕಿ ಟೆಂಟ್ ಹಾಕಿ ಮಲಗಿದರೆ ಕಣ್ಣು ತುಂಬಾ ನಿದ್ದೆ. ಪೆಟ್ರೋಲ್ ಬಂಕ್, ಡಾಬಾ, ಶಾಲೆಗಳ ಆವರಣದಲ್ಲಿ ಟೆಂಟ್ ಹಾಕಿ ಕಳೆದ ರಾತ್ರಿಗಳು ಹಲವು. ಸ್ಥಳೀಯ ತರಕಾರಿಗಳನ್ನು ಕೊಂಡು ಆಹಾರ ತಯಾರಿ. ವಿದೇಶದಲ್ಲಿದ್ದಾಗ ಊಟಕ್ಕೆ ‘ಇಂಡಿಯನ್ ಸ್ಟೋರ್’ನಲ್ಲಿ ಮಸಾಲೆಗಳ ಖರೀದಿ. ದಾರಿಯಲ್ಲಿ ಸಿಗುವ ಶಾಲೆಯಲ್ಲಿ ಅವಕಾಶ ಸಿಕ್ಕರೆ ಮಕ್ಕಳಿಗೆ ಸುಸ್ಥಿರ ಅಭಿವೃದ್ಧಿ ಬಗ್ಗೆ ಪಾಠ. ಮಳೆ, ಚಳಿ, ಗಾಳಿ ಲೆಕ್ಕಿಸದೆ ‘ಸುದರ್ಶನ ಚಕ್ರ’ ತಿರುಗುತ್ತಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.