‘ವರ್ಕ್ ಫ್ರಮ್ ಹೋಮ್’ ಅವಕಾಶವೀಗ ನಿಧನಿಧಾನವಾಗಿ ಕರಗಿ, ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಳ್ಳುವವರ ಸಂಖ್ಯೆ ಏರುತ್ತಿದೆ. ಕಾರ್ಪೊರೇಟ್ ವಲಯದ ಉದ್ಯೋಗಿಗಳನ್ನೇ ನೆಚ್ಚಿಕೊಂಡಿರುವ ಸಣ್ಣ ಪುಟ್ಟ ವ್ಯಾಪಾರಿಗಳಿಗೂ ಇದು ನೆಮ್ಮದಿ ತರುವ ಬೆಳವಣಿಗೆಯಾಗಿದೆ. ರಿಯಲ್ ಎಸ್ಟೇಟ್ನವರ ಲೆಕ್ಕಾಚಾರದ ಪಾಲೂ ಇದರಲ್ಲಿ ಇದೆ.

ನಾನು ನಂದಿನಿ,

ಬೆಂಗಳೂರಿಗೆ ಬಂದೀನಿ

ಪಿಜಿಲಿ ಇರ್ತೀನಿ

ಐಟಿ ಕೆಲಸ ಮಾಡ್ತೀನಿ

ಊಟ ಸರಿಯಿಲ್ಲ ಅಂದ್ರೂನೂ ತಿಂತೀನಿ

ಬಂದಿದ್ ದುಡ್ಡೆಲ್ಲಾ, ಮನೆಗ್ ಕಳಿಸ್ತೀನಿ...

‘ಆಕ್ವಾ’ ಆಲ್ಬಂನ ‘ಆಮ್ ಎ ಬಾರ್ಬಿ ಗರ್ಲ್’ ಗೀತೆಯ ಸಂಗೀತಕ್ಕೆ ಕನ್ನಡದ ಸಾಹಿತ್ಯ ಹಾಕಿದ ಈ ಹಾಡು ಸದ್ಯ ಟ್ರೆಂಡ್ನಲ್ಲಿದೆ. ಆದರೆ ಇದು ಬರೀ ಮನರಂಜನೆಯಷ್ಟೇ ಅಲ್ಲದೆ, ಐಟಿ ನಗರಿ ಬೆಂಗಳೂರು ಮತ್ತು ಸಾಫ್ಟ್ವೇರ್ ಉದ್ಯೋಗ ಕಂಡುಕೊಳ್ಳಲು ಸಿಲಿಕಾನ್ ಸಿಟಿಗೆ ಬಂದವರ ಕಥೆಯನ್ನು ಹೊಸತೇ ಆದ ಧ್ವನಿಯಲ್ಲಿ ಹೇಳುತ್ತದೆ.

ಬೆಂಗಳೂರು ಸಿಲಿಕಾನ್ ಸಿಟಿ ಆಗುವ ಹೊಸ್ತಿಲಲ್ಲಿ ಎಲ್ಲವೂ ಝಗಮಗ. ಐಟಿ ಕಂಪನಿ ಉದ್ಯೋಗ ಪಡೆಯುವ ಮಹದಾಸೆಯೊಂದಿಗೆ ನಂದಿನಿಯಂತೆಯೇ ಬೆಂಗಳೂರಿಗೆ ಬಂದು ನೆಲೆಸಿದವರು ಲಕ್ಷಗಟ್ಟಲೆ ಮಂದಿ. ಹೀಗೆ ಬಂದವರನ್ನೇ ನಂಬಿಕೊಂಡು ಉದ್ಯಮ ಸ್ಥಾಪಿಸಿಕೊಂಡು ಬದುಕು ಕಟ್ಟಿಕೊಂಡವರು ಇನ್ನಷ್ಟು ಮಂದಿ. ಟ್ರಾಫಿಕ್ ಕಿರಿಕಿರಿ, ಕೆಲಸದ ಒತ್ತಡ ಇದ್ದರೂ ನುಂಗಿಕೊಂಡು ಊರನ್ನು ಮರೆತಿದ್ದವರೇ ಹೆಚ್ಚು.

ಆದರೆ ಕೋವಿಡ್–19 ಎಲ್ಲವನ್ನೂ ಬದಲಿಸಿಬಿಟ್ಟಿತು. ಬದುಕುಳಿದರೆ ನೂರು ವರ್ಷ ಆಯುಸ್ಸು ಎಂದು ನಂಬಿದವರೇ ಹೆಚ್ಚು. ಅದಕ್ಕೆ ಪೂರಕವೆಂಬಂತೆ ಜಾರಿಗೆ ಬಂದಿದ್ದೇ ‘ವರ್ಕ್ ಫ್ರಮ್ ಹೋಮ್‘ ಎಂಬ ಮನೆಯಿಂದಲೇ ಕೆಲಸ ಮಾಡುವ ಅವಕಾಶ. ಅಂತರ್ಜಾಲದಿಂದಾಗಿ ವಿಶ್ವವೇ ಒಂದು ಹಳ್ಳಿಯಾಗಿರುವ ಸಂದರ್ಭದಲ್ಲಿ, ಹಳ್ಳಿಯಲ್ಲೇ ಕುಟುಂಬದವರೊಂದಿಗೆ ಕುಳಿತ ವಿಶ್ವದ ವಿವಿಧ ರಾಷ್ಟ್ರಗಳೊಂದಿಗೆ ಕೆಲಸ ಮಾಡುವ ಎಂಜಿನಿಯರ್ಗಳು ಈಗ ಮನೆ ವಾತಾವರಣಕ್ಕೆ ಒಗ್ಗಿಕೊಂಡಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ತೀವ್ರತೆ ಕ್ಷೀಣಿಸಿದ್ದು, ಮರಳಿ ಕಚೇರಿಗೆ ಬನ್ನಿ ಎಂಬ ಕಂಪನಿಗಳ ಆಹ್ವಾನವನ್ನು ಬಹಳಷ್ಟು ನೌಕರರು ನಿರಾಕರಿಸುತ್ತಿದ್ದಾರೆ. ಇವರಲ್ಲಿ ಊರು ಸೇರಿದವರು ಮಾತ್ರವಲ್ಲ ಬೆಂಗಳೂರಿನಲ್ಲಿ ಇರುವವರೂ ಕಚೇರಿಗೆ ಹೋಗಲು ಮನಸ್ಸು ಮಾಡುತ್ತಿಲ್ಲ. ಕೋವಿಡ್ ನಂತರದಲ್ಲಿ ಬೆಂಗಳೂರಿನಲ್ಲಿ ಹೆಚ್ಚಾಗಿರುವ ಮನೆ ಬಾಡಿಗೆ, ಇಂಧನ ಬೆಲೆ, ಮಕ್ಕಳ ಶಾಲೆ ಶುಲ್ಕದ ಹೊರೆ ಬೆಂಗಳೂರು ಬಿಟ್ಟವರಿಗೆ ಕಾರಣಗಳಾಗಿವೆ. ಬೆಂಗಳೂರಿನಲ್ಲೇ ನೆಲೆಸಿರುವವರಿಗೆ ಟ್ರಾಫಿಕ್ ಕಿರಿಕಿರಿ ದೊಡ್ಡ ತಲೆನೋವಾಗಿದೆ. ಮತ್ತೊಂದೆಡೆ, ಈ ನೌಕರರನ್ನೇ ನಂಬಿಕೊಂಡಿರುವ ಇತರ ಉದ್ಯಮಗಳು ಕಚೇರಿ ಮರಳಿ ಆರಂಭವಾಗುವ ನಿರೀಕ್ಷೆಯಲ್ಲಿದ್ದಾರೆ.

ಐಟಿ ಕಂಪನಿ ಒಳಗಿನ ಸ್ವಚ್ಛತೆಯ ಗುತ್ತಿಗೆ ಪಡೆದ ಸಂಸ್ಥೆ, ಸಾರಿಗೆ ವ್ಯವಸ್ಥೆ ಕಲ್ಪಿಸುವ ಏಜೆಂಟರು, ಕಾಫಿ ಮತ್ತು ಊಟೋಪಚಾರ ಸೌಲಭ್ಯ ಒದಗಿಸುವ ಕೇಟರಿಂಗ್ನವರು, ಕಂಪನಿ ಸುತ್ತಲಿನ ಹೋಟೆಲ್ಗಳು, ವಸ್ತ್ರ ಮಳಿಗೆಗಳು, ಗೂಡಂಗಡಿ, ಎಳನೀರು, ಹಣ್ಣಿನ ರಸ ನೀಡುವ ಅಂಗಡಿಗಳು ನೌಕರರ ಬರುವಿಕೆಯ ಹಾದಿ ಕಾಯುತ್ತಿವೆ.

ಹೈಬ್ರಿಡ್ ಮಾದರಿಗೆ ಸೈ ಎಂದ ನೌಕರರು

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ, ವೈಟ್ಫೀಲ್ಡ್, ಬೆಂಗಳೂರು ಪೂರ್ವದ ಭಾಗಗಳು ಸೇರಿ 60ಕ್ಕೂ ಹೆಚ್ಚು ವಿಶೇಷ ಆರ್ಥಿಕ ವಲಯವನ್ನು ರಾಜ್ಯ ಸರ್ಕಾರ ಸೃಷ್ಟಿಸಿದೆ. ಆ ಮೂಲಕ ಸಿಲಿಕಾನ್ ಸಿಟಿ ಬಯಸಿ ಬರುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ ಭೂಮಿ ಖರೀದಿ, ವಿದ್ಯುತ್ ಶುಲ್ಕದಲ್ಲಿ ರಿಯಾಯಿತಿ ಸೇರಿ ಹಲವು ಸೌಲಭ್ಯಗಳನ್ನು ಒದಗಿಸಿದೆ. ಇದರ ಮೂಲ ಉದ್ದೇಶವೇ ಹೆಚ್ಚಿನ ಉದ್ಯೋಗ ಸೃಷ್ಟಿ ಮತ್ತು ಸ್ಥಳೀಯ ಆರ್ಥಿಕ ಬೆಳವಣಿಗೆ. ಆದರೆ ನೌಕರರೇ ಬಾರದೆ ಬಿಕೋ ಎನ್ನುತ್ತಿರುವ ಐಟಿ ಕಂಪನಿಗಳು ಹಿಂದಿನಂತೆಯೇ ಕಾರ್ಯನಿರ್ವಹಿಸಲಿ ಎಂಬ ಒತ್ತಡ ಸರ್ಕಾರದಿಂದಲೂ ಕಂಪನಿಗಳ ಮೇಲಿವೆ. ಜತೆಗೆ ಮೂಲಸೌಕರ್ಯಕ್ಕಾಗಿ ಸಾಕಷ್ಟು ಹಣ ಹೂಡಿರುವ ಕಂಪನಿಗಳು ಇದೀಗ ಅವುಗಳ ಸದ್ಬಳಕೆ ಹೇಗೆ ಎಂದು ಚಿಂತಿಸುತ್ತಿರುವುದರಿಂದ ನೌಕರರನ್ನು ಮರಳಿ ಕಚೇರಿಗೆ ಕರೆಯುತ್ತಿವೆ. ಆದರೆ, ಇದಕ್ಕೆ ಒಲ್ಲೆ ಎನ್ನುತ್ತಿರುವ ನೌಕರರು, ಸದ್ಯ ವಾರದಲ್ಲಿ ಎರಡು ದಿನ ಕಚೇರಿ ಹಾಗೂ ಮೂರು ದಿನ ಮನೆಯಿಂದಲೇ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ನೌಕರರು ಒಪ್ಪಿಕೊಂಡಿರುವ ಹೈಬ್ರಿಡ್ ಮಾದರಿಯಲ್ಲಿ ಸದ್ಯ ಸಿಲಿಕಾನ್ ಸಿಟಿ ತುಸುವಾದರೂ ಝಗಮಗಿಸುತ್ತಿದೆ.

ಮತ್ತೊಂದೆಡೆ ಕಚೇರಿಗೆ ಬರಲು ಒತ್ತಾಯಿಸಿದರೆ ಕೆಲಸಕ್ಕೆ ರಾಜೀನಾಮೆ ನೀಡುವ ಬೆದರಿಕೆಯೂ ನೌಕರರಿಂದ ವ್ಯಾಪಕವಾಗಿ ಬರುತ್ತಿದೆ. ಅದರಲ್ಲೂ ಬಹಳಷ್ಟು ಮಹಿಳೆಯರು ಸಂಪೂರ್ಣವಾಗಿ ಮನೆಯ ವಾತಾವರಣಕ್ಕೆ ಒಗ್ಗಿಕೊಂಡಿದ್ದಾರೆ. ಅದರೊಂದಿಗೆ ಮಕ್ಕಳು, ಪಾಲಕರನ್ನು ನೋಡಿಕೊಳ್ಳುವ ಹೊಣೆಗಾರಿಕೆಯಿಂದಾಗಿ ಕಚೇರಿಗೆ ಬರಲು ಸಾಧ್ಯವಾಗದಿರುವ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಹೆಚ್ಚು ಒತ್ತಾಯಿಸಿದರೆ ರಾಜೀನಾಮೆ ನೀಡಿ, ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವ ಕಂಪನಿಗಳನ್ನು ಸೇರುವ ಯೋಜನೆ ಅವರದ್ದು ಎನ್ನುವುದು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ವ್ಯವಸ್ಥಾಪಕರಾಗಿರುವ ಪ್ರವೀಣ್ ಅವರ ಅನುಭವದ ಮಾತು.

ನೌಕರರಿಗೆ ಮನೆಯ ಸೆಳೆತ; ಮ್ಯಾನೇಜರ್ಗಳಿಗೆ ಒತ್ತಡ

ಕೋವಿಡ್ ಸಂದರ್ಭದಲ್ಲಿ ಅನಿವಾರ್ಯವಾಗಿ ‘ವರ್ಕ್ ಫ್ರಮ್ ಹೋಮ್‘ ಸಂಸ್ಕೃತಿಗೆ ಒಗ್ಗಿಕೊಂಡಿರುವ ನೌಕರರು ಮನೆಯ ವಾತಾವರಣಕ್ಕೆ ಹೊಂದಿಕೊಂಡಿದ್ದಾರೆ. ಮನೆಯಲ್ಲೇ ಹೆಚ್ಚಿನ ಕೆಲಸ ಮಾಡುತ್ತಿರುವುದರಿಂದ ಕಚೇರಿಗೆ ಬರುವ ಅಗತ್ಯವಾದರೂ ಏನಿದೆ ಎನ್ನುವುದು ಅವರ ವಾದ.

ನೌಕರರ ಈ ಪ್ರಶ್ನೆಯನ್ನು ಮ್ಯಾನೇಜರ್ಗಳ ಮುಂದಿಟ್ಟರೆ, ‘ಕಾವೇರಿ ವಿವಾದ ಬಗೆಹರಿಸಿ ಎಂದು ರಾಜ್ಯದ ಮುಖ್ಯಮಂತ್ರಿ ಪ್ರಧಾನಿ ಭೇಟಿಗಾಗಿ ಕಾಯುತ್ತಿರುವುದೇಕೆ, ಅದನ್ನೂ ವಿಡಿಯೊ ಕಾನ್ಫರೆನ್ಸ್ ಮೂಲಕ ಮುಗಿಸಬಹುದಲ್ಲವೇ’ ಎಂಬ ಪ್ರಶ್ನೆಯನ್ನು ವೈಟ್ಫೀಲ್ಡ್ ಬಳಿ ಇರುವ ಬಹುರಾಷ್ಟ್ರೀಯ ಕಂಪನಿಯ ವ್ಯವಸ್ಥಾಪಕ ಕಾರ್ತಿಕ್ ಮುಂದಿಡುತ್ತಾರೆ.

‘ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿಯಿಂದ ಕಂಪನಿಯ ಸಂಸ್ಕೃತಿ ಮರೆಯಾಗುತ್ತಿದೆ. ತಂಡವಾಗಿ ದುಡಿಯಬೇಕಾದವರು ಪ್ರತ್ಯೇಕವಾಗಿ ಕೆಲಸ ಮಾಡಿದರೆ, ಉತ್ಪನ್ನದಲ್ಲಿ ಹೊಸತನ ತರುವುದು ಕಷ್ಟ. ಕಂಪನಿ ಹಾಗೂ ಉದ್ಯೋಗಿ ಬೆಳೆಯಬೇಕೆಂದರೆ ಹೊಸ ಆಲೋಚನೆಯ ಜತೆಗೆ ಎಲ್ಲರೊಂದಿಗೂ ಕೆಲಸ ಮಾಡಬೇಕಾದದ್ದು ಅನಿವಾರ್ಯ. ಆದರೆ ವರ್ಕ್ ಫ್ರಮ್ ಹೋಮ್ನಿಂದ ಸಂವಹನವೇ ಇಲ್ಲವಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸತನವಿಲ್ಲವಾದಲ್ಲಿ ಕಂಪನಿ ಬೆಳೆಯದು. ಇದರಿಂದಾಗಿ ಸಿಬ್ಬಂದಿಯನ್ನು ಕಚೇರಿಗೆ ಬರಲು ಹೇಳಲಾಗುತ್ತಿದೆ’ ಎಂದರು ಅವರು.

ಕಚೇರಿಗೆ ಬಾರದಿರಲು ಮೂನ್ಲೈಟಿಂಗ್ ಕೂಡ ಕಾರಣವಾಯಿತೆ?

ಕೆಲ ತಿಂಗಳ ಹಿಂದೆ ಮುನ್ನೆಲೆಗೆ ಬಂದ ಸಾಫ್ಟ್ವೇರ್ ಉದ್ಯೋಗಿಗಳು ಎರೆಡೆರೆಡು ಕಡೆ ನೌಕರಿ ಮಾಡುವ ‘ಮೂನ್ಲೈಟಿಂಗ್’ ಕೂಡ ಕೆಲ ನೌಕರರು ಕಚೇರಿಗೆ ಬಾರದಿರಲು ಕಾರಣ ಎಂಬ ಮಾತುಗಳೂ ಇವೆ. ಒಂದೆಡೆ ಲಾಕ್ಡೌನ್ ಅವಧಿಯಲ್ಲಿ ಹಲವರು ಉದ್ಯೋಗ ಕಳೆದುಕೊಂಡರು. ಕಂಪನಿ ಉದ್ಯೋಗ ಕಂಡುಕೊಂಡರೆ ಮುಂದೊಂದು ದಿನ ಪಿಂಕ್ ಸ್ಲಿಪ್ (ನೌಕರಿಯಿಂದ ವಜಾ) ಪಡೆಯುವ ಸಾಧ್ಯತೆ ಇದೆ ಎಂದೇ ನಂಬಿರುವ ಬಹಳಷ್ಟು ನೌಕರರು, ಜಮೀನು ಖರೀದಿಸಿ ಕೃಷಿ, ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನೂ ಕೆಲವರು ತಮ್ಮದೇ ಆದ ಸ್ಟಾರ್ಟ್ಅಪ್ಗಳನ್ನು ಆರಂಭಿಸಿ ಮೂಲ ಕಂಪನಿ ಹಾಗೂ ಸ್ಟಾರ್ಟ್ಅಪ್ ಎರಡೂ ಕಡೆ ದುಡಿಯುತ್ತಿದ್ದಾರೆ. ಇನ್ನೂ ಕೆಲವರು ಎರಡು ಬೇರೆಯದೇ ಕಂಪನಿಗಳ ಕೆಲಸ ಮಾಡಿಕೊಂಡು ಹೆಚ್ಚಿನ ಗಳಿಕೆಯ ಹಾದಿ ಕಂಡುಕೊಂಡಿದ್ದಾರೆ.

ವರ್ಕ್ ಫ್ರಮ್ ಹೋಮ್ನಿಂದ ಪ್ರಾಜೆಕ್ಟ್ನಲ್ಲಿ ಯಾವುದಾದರೂ ಗೊಂದಲ ಇದ್ದರೆ ಅದನ್ನು ನೇರವಾಗಿ ಕೇಳಲು ಸಾಧ್ಯವಿಲ್ಲ. ಏಕಕಾಲಕ್ಕೆ ಎಲ್ಲರೂ ಕೆಲಸ ಮಾಡಿದರೆ ಹೊಸ ಆಲೋಚನೆಗಳು ಹೊಳೆಯುತ್ತವೆ. ಹಾಗೆಯೇ ಇರುವ ಯೋಜನೆಗೆ ಸಂಬಂಧಿಸಿದಂತೆ ಇರುವ ಗೊಂದಲಗಳೂ ದೂರವಾಗುತ್ತವೆ. ಆದರೆ ಈಗ ಹಾಗಾಗುತ್ತಿಲ್ಲ. ಕಚೇರಿಗೆ ಬನ್ನಿ ಎಂದು ಕರೆದರೆ, ಟ್ರಾಫಿಕ್, ಶಾಲೆ ಶುಲ್ಕ, ಮನೆ ಬಾಡಿಗೆ, ಅಪೂರ್ಣ ಮೆಟ್ರೊ ಮಾರ್ಗ, ಕುಟುಂಬ ಹಾಗೂ ಸಂಬಂಧಗಳಿಗೆ ಹೆಚ್ಚಿನ ಒತ್ತು ಹೀಗೆ ಸಾಲು ಸಾಲು ಕಾರಣಗಳನ್ನು ಕೊಡುತ್ತಿದ್ದಾರೆ. ಹೀಗಾಗಿ ಸದ್ಯ ಇದು ಹೈಬ್ರಿಡ್ ಹಂತಕ್ಕೆ ಬಂದು ನಿಂತಿದೆ’ ಎನ್ನುತ್ತಾರೆ ಅವರು.

ಕಚೇರಿಗೆ ಬಂದು ಕೆಲಸ ಮಾಡುವುದೇ ಅನಿವಾರ್ಯವಾದರೆ ಇಂಥ ಎರಡೆರೆಡು ಗಳಿಕೆ ಕಷ್ಟವಾಗಲಿದೆ ಎನ್ನುವುದು ಕೆಲವರ ವಾದ. ‘ಸದ್ಯ ಹಲವು ಕೆಲಸಗಳನ್ನು ನಾವು ಏಕಕಾಲಕ್ಕೆ ಮಾಡುತ್ತಿದ್ದೇವೆ. ಬೆಂಗಳೂರು ಬಲು ದುಬಾರಿಯಾಗಿದ್ದು, ಇಲ್ಲಿ ಬದುಕುವುದೇ ಕಷ್ಟವಾಗಿದೆ. ಹೀಗಾಗಿ ಎರಡು ಕೆಲಸ ಅನಿವಾರ್ಯ. ಜತೆಗೆ ಮನೆ, ಮಕ್ಕಳ ಲಾಲನೆ, ಪಾಲನೆಯೂ ಅಗತ್ಯ. ಕಚೇರಿ ಕೆಲಸ ಮುಗಿಸಿ ಉಳಿದ ಸಮಯದಲ್ಲಿ ಬೇರೆ ಕೆಲಸ ಮಾಡುವ ಮೂಲಕ ಒಂದಷ್ಟು ಹೆಚ್ಚಿನದನ್ನು ಗಳಿಸಲಾಗುತ್ತಿದೆ. ಸಂಜೆ ಮಕ್ಕಳು ಶಾಲೆಯಿಂದ ಬಂದ ನಂತರ ಅವರನ್ನು ಯಾವುದಾದರೂ ಕ್ರೀಡೆಗೆ ಸೇರಿಸಿ, ಅಲ್ಲಿಯೇ ಲ್ಯಾಪ್ಟಾಪ್ ತೆರೆದು ಕೆಲಸ ಮಾಡುತ್ತೇವೆ. ನಮ್ಮ ದುಡಿಯುವ ಅವಧಿ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಟ್ರಾಫಿಕ್ನಲ್ಲಿ ಅನಗತ್ಯವಾಗಿ ಕಳೆಯುತ್ತಿದ್ದ ಸಮಯ ಈಗ ವೃತ್ತಿಗೆ ಬಳಕೆಯಾಗುತ್ತಿದೆ. ಆದರೆ, ಕಂಪನಿಗಳ ಉದ್ದೇಶವೇ ಬೇರೆ ಇದೆ. ರಿಯಲ್ ಎಸ್ಟೇಟ್ ತಾಳಕ್ಕೆ ತಕ್ಕಂತೆ ಅವು ಕುಣಿಯುತ್ತಿವೆ’ ಎಂದು ಹೆಸರು ಹೇಳಲು ಇಚ್ಛಿಸದ ಕೆಲವು ಸಾಫ್ಟ್ವೇರ್ ಉದ್ಯೋಗಿಗಳು ವಾಸ್ತವ ತೆರೆದಿಡುತ್ತಾರೆ.

‘ವರ್ಕೋವೆಕೇಷನ್‘ನಿಂದ ಹೆಚ್ಚಿದ ಪ್ರವಾಸೋದ್ಯಮ

ಉಪಾಹಾರ ಮತ್ತು ಮಧ್ಯಾಹ್ನದ ಊಟದ ನಡುವೆ ಮಾಡುವ ‘ಬ್ರಂಚ್’ನಂತೆಯೇ ಈಗ ವೃತ್ತಿಯಲ್ಲೂ ಕೆಲಸ, ಪ್ರವಾಸ ಎರಡನ್ನೂ ಬೆರೆಸಿದ ‘ವರ್ಕೋವೆಕೇಷನ್’ ಎಂಬ ಪರಿಕಲ್ಪನೆ ‘ವರ್ಕ್ ಫ್ರಮ್ ಹೋಮ್’ನಿಂದಾಗಿ ಸಾಧ್ಯವಾಗಿದೆ. ಮನೆಯಿಂದಲೇ ಕೆಲಸ ಮಾಡುವ ಕೆಲ ಉದ್ಯೋಗಿಗಳು ಈಗ ಮನೆಯಿಂದಲೂ ಅಲ್ಲದೆ ತಮ್ಮ ಇಷ್ಟದ ತಾಣದಿಂದಲೇ ಕೆಲಸ ಮಾಡುವ ಅವಕಾಶವನ್ನು ವರ್ಕ್ ಫ್ರಮ್ ಹೋಮ್ನಿಂದ ಪಡೆದಿದ್ದಾರೆ. ಇಷ್ಟದ ಪ್ರವಾಸಿ ತಾಣ, ಮೆಚ್ಚಿನ ಹೋಂ ಸ್ಟೇ, ಸ್ನೇಹಿತರು ಹಾಗೂ ಸಂಬಂಧಿಕರ ಮನೆ... ಭೇಟಿ ನೀಡಬೇಕೆನಿಸಿದ ಸ್ಥಳದಿಂದಲೇ ಕೆಲಸ ಮಾಡುತ್ತಿದ್ದಾರೆ.

ವರ್ಕ್ ಫ್ರಮ್ ಹೋಮ್ನಿಂದಾಗಿ ಐಟಿಯನ್ನೇ ನಂಬಿಕೊಂಡಿರುವ ಪೂರಕ ಉದ್ಯಮಗಳು ನೆಲ ಕಚ್ಚಿದ್ದವು. ಸಾಕಷ್ಟು ನಷ್ಟದ ನಂತರ ಆ ಉದ್ಯಮಗಳಲ್ಲಿ ಇರುವವರೂ ಈಗ ಹೈಬ್ರಿಡ್ನಿಂದ ಒಂದಷ್ಟು ಗಳಿಕೆಯ ಹಾದಿಗೆ ಮರಳಿದ್ದಾರೆ.

‘ಹಳೆಯ ಉದ್ಯೋಗಿಗಳು ಕಚೇರಿಗೆ ಬರಲು ಒಪ್ಪುತ್ತಿಲ್ಲ. ಆದರೆ ಹೊಸ ಉದ್ಯೋಗಿಗಳಿಗೆ ಕಚೇರಿಗೆ ಬರಲು ಯಾವುದೇ ಸಮಸ್ಯೆ ಇಲ್ಲ. ಹೊಸದಾಗಿ ಸೇರಿದವರು ವಾರದ ಐದೂ ದಿನ ಈಗ ಕಚೇರಿಗೆ ಬರುತ್ತಿದ್ದಾರೆ. ಇದರಿಂದಾಗಿ ಅವರಿಗೆ ಅಗತ್ಯವಿರುವ ಸೌಕರ್ಯಗಳನ್ನು ನೀಡಲು ಕಂಪನಿ ಮುಂದಾಗುತ್ತಿದೆ. ಇದರಿಂದ ನಮಗೂ ಒಂದಷ್ಟು ಗಳಿಕೆಯಾಗುತ್ತಿದೆ. ಹಳತನ್ನೇ ನಂಬಿ ಕೂರುವ ಬದಲು ಹೊಸತನ್ನು ನಂಬಿಕೊಂಡು ಮುಂದಡಿ ಇಡಬೇಕಷ್ಟೆ’ ಎನ್ನುವುದು ಐಟಿ ಕಂಪನಿಗಳಿಗೆ ಕಾಫಿ ಮೇಕರ್ ಯಂತ್ರ ಸರಬರಾಜು ಮಾಡುವ ಸಂದೀಪ್ ಅವರ ಭರವಸೆಯ ಮಾತುಗಳು.

ಸದ್ಯದ ಪರಿಸ್ಥಿತಿಯಲ್ಲಿ ಹೈಬ್ರಿಡ್ ಮಾದರಿಯಿಂದ ಶೇ 60ರಷ್ಟು ಉದ್ಯೋಗಿಗಳು ಕಚೇರಿಗೆ ಬರಲು ಆರಂಭಿಸಿದ್ದಾರೆ. ಸೇವಾ ವಲಯದಲ್ಲಿ ಇದು ಶೇ 50ಕ್ಕಿಂತ ಹೆಚ್ಚು ಇದೆ. ಆದರೆ ಒಇಎಂ ಕ್ಷೇತ್ರದಲ್ಲಿ ಇದು ಇನ್ನಷ್ಟೇ ಏರಬೇಕಿದೆ ಎನ್ನುವುದು ಐಟಿ ಪಂಡಿತರ ಲೆಕ್ಕಾಚಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.