ನೀನು ಕೆರಳಿದೆ ಎಂದರು, ಮಹಾಕಾಳಿಯಾದೆ ಎಂದರು, ಪ್ರಕೃತಿ ಮಾತೆಯ ಕೋಪ- ವಿಕೋಪ- ಪ್ರಕೋಪಗಳ ಸ್ವರೂಪ ಎಂಥದೆಂದು ತಿಳಿಯಿತೇ, ಎಚ್ಚರ ಎಂದರು. ನಿನ್ನನ್ನು ತಿಳಿಯದವರು. ನಿನ್ನ ನೋವನ್ನು ಅರ್ಥ ಮಾಡಿಕೊಳ್ಳದವರು. ವಾಸ್ತವವೆಂದರೆ ಪ್ರಪಂಚ ಗ್ರಹಿಸಿದಂತೆ ಅದು ನಿನ್ನ ಕ್ರೋಧ ಅಲ್ಲವೇ ಅಲ್ಲ, ನೀನು ಆಕ್ರೋಶಗೊಂಡಿರುವುದೂ ಅಲ್ಲ. ತಾಯಿಯಾದವಳ ಕ್ರೋಧ ಈ ಮಟ್ಟಕ್ಕೆ ಏರುವುದು ಎಂದಿಗೂ ಸಾಧ್ಯವಿಲ್ಲ. ಅನಿರೀಕ್ಷಿತವಾಗಿ ಬಂದೆರಗಿದ ಸಂಕಷ್ಟಕ್ಕೆ ಸಿಲುಕಿದ ಜನರ ಕಂಬನಿ, ಅನಾಥ ಭಾವ, ಸ್ತಬ್ಧತೆ, ಆಘಾತ ಚೀರಾಟಗಳೆಲ್ಲವೂ ಒಟ್ಟಾಗಿ ಏಕರೂಪವಾಗಿ ಪ್ರಕಟವಾದ ನಿನ್ನ ದೀರ್ಘವಾದೊಂದು ಮಹಾ ಆಕ್ರಂದನ ಅದು. ನಿನ್ನ ರೋದನ. ಮರ್ಮಾಘಾತದ ವೇದನೆ ತಡೆಯಲಾರದೆ ಎದ್ದ ಬೊಬ್ಬೆ. ನಿನ್ನ ಆಕ್ರಂದನವನ್ನು, ನರಳಿಕೆಯನ್ನು ತಿಳಿಸಲು ಬೇರೆ ದಾರಿ ಇತ್ತೆ ನಿನಗೆ? ನೀನು ಬಳಲಿದೆ, ಮಕ್ಕಳ ಮೇಲೆಯೇ ಒರಗಿದೆ. ನಿನಗೆ ನೋವು ಕೊಟ್ಟವರು ಯಾರೋ, ವಿಧಿಯಿಲ್ಲದೆ ನೆಲದಾಚೆಯವರ ಜೊತೆ ಸೇರಬೇಕಾಗಿ ಬಂದ ನೆಲದ ಮಂದಿಯ ಅಸಹಾಯಕತೆ ನಿನಗೆ ಅರ್ಥವಾಗಿದೆಯಾದರೂ ನಿನಗೂ ಬೇರೆ ವಿಧಿಯಿರಲಿಲ್ಲ ಅಲ್ಲವೆ? ನಿನ್ನನ್ನು ಬಿಡದೆ ಬಸಿಯಲು ಜೆಸಿಬಿ ರಕ್ಕಸ ಜಲಗರ್ಭದ ತಳಪದರಕ್ಕೂ ಕೈ ಹಾಕಿದ. ನಿನ್ನ ವ್ಯಕ್ತಿತ್ವದ ಘನತೆಯನ್ನೇ ಧಿಕ್ಕರಿಸಿದ. ನಿನಗೆ ಘಾಸಿಯಾಗುವ ಪರಿವೆಯೇ ಇಲ್ಲದೆ ಅನೇಕ ಅಚಾತುರ್ಯಗಳು ವಿಪರೀತಗಳು ಸಹಜವೆಂಬಂತೆ ನಡೆದುಹೋದವು. ತಡೆದು ತಡೆದು ಇನ್ನು ತಡೆಯಲಾರದಷ್ಟು ನೋವಾದಾಗ ನೀನೊಮ್ಮೆ ಮುಲುಗಿದೆ, ಚೀತ್ಕರಿಸಿದೆ. ಎಲ್ಲ ನೆಲಸಮವಾಗಲು ಅಷ್ಟು ಸಾಕಾಯ್ತು.

ನಿನ್ನ ಮಕ್ಕಳ ಗುಣವನ್ನು ನೀನು ಬಲ್ಲೆ. ನಿನ್ನ ಬಗ್ಗೆ ಅಖಂಡ ಪ್ರೀತಿ ಅವರದು. ಸರಳ, ನೇರ, ಸ್ನೇಹಮಯ ವ್ಯಕ್ತಿತ್ವವುಳ್ಳ ಅಪ್ಪಟ ಪಹಾಡೀಗುಣವುಳ್ಳ ಸಜ್ಜನರು. ಅತಿ ಆಸೆಯಿಲ್ಲದೆ ಬದುಕನ್ನು ಖುಶಿಯಾಗಿ ಇಟ್ಟುಕೊಳ್ಳಬಲ್ಲ ರಹಸ್ಯ ಬಲ್ಲವರು. ತಾವು ನೆಚ್ಚಿಕೊಂಡ ಬದುಕಿನ ಮಾರ್ಗವಾದ ತೋಟ- ಕೃಷಿಗಳನ್ನು, ಅನೇಕ ತಾಪತ್ರಯಗಳ ನಡುವೆಯೇ, ತಮ್ಮ ಜೀವಸೆಲೆಯಂತೆ ಕಾಪಾಡಿಕೊಂಡವರು. ಗುಡ್ಡಗಾಡುಗಳನ್ನು ಅಪ್ಪಿಹಿಡಿದು ರೈಲ್ವೆ ಮಾರ್ಗ, ಕೇರಳದವರೆಗೆ ಹೈ ಟೆನ್ಶನ್ ವೈರ್ ಮುಂತಾದ ಪರಿಕ್ರಮಗಳನ್ನೂ ಪ್ರತಿಭಟಿಸಿ ನಿಲ್ಲಿಸಿದವರು ನಿನ್ನ ಮಕ್ಕಳು. ಹೊರಗಿನವರು ಬಂದರು. ನಿನ್ನ ನೈಜ ಚೆಲುವನ್ನು ಬರಿದೆ ನೋಡಿ ಹೋಗುವೆ ಎಂದವರು, ನೋಡಿ ಮಾರು ಹೋದರು. ಬಸಿದುಣ್ಣಲು ಹವಣಿಸಿದರು. ಇಲ್ಲಿಯೇ ತಮ್ಮದೊಂದು ಠಿಕಾಣಿ ಹೂಡಲು ಬಯಸಿದರು. ಇದು ಇಡೀ ಇಂಡಿಯಾದ, ಲೋಕದಲ್ಲಿನ ಇತರ ಎಷ್ಟೋ ಪ್ರದೇಶ ರಾಜ್ಯ ದೇಶಗಳ ಕತೆಯೇ. ಯಾವುದೇ ಊರು ಪರಕೀಯ ದಾಳಿಗೆ ಒಳಗಾಗುವಲ್ಲಿ ಅನೇಕ ಬಗೆಗಳಿರುತ್ತವೆಯಲ್ಲವೆ? ಸದ್ದಿಲ್ಲದ ಕೆಲವು; ಸದ್ದು ಮಾಡುವ ಕೆಲವು. ಚರಿತ್ರೆ ಓದಿದರೆ ಎಲ್ಲಿಂದಲೋ ಬಂದವರು, ಅಧಿಕಾರದ ಪಿಪಾಸೆಯಿಂದಲೋ, ಮೋಹ ಲೋಭ ಲಾಭ ಮತ್ಸರದಿಂದಲೋ ಮಾಡುವ ದಾಳಿ ಮೊದಮೊದಲು ತಿಳಿಯುವುದೇ ಇಲ್ಲ. ತಿಳಿಯುವ ಹೊತ್ತಿಗೆ ಊರು ಅಗೋಚರ ಅಗ್ನಿಗೆ ಬಲಿಯಾಗಿ ಹೊತ್ತಿ ಉರಿಯುತ್ತಿರುತ್ತದೆ. ಹಾಗೆ, ಇಲ್ಲಿಯೂ ಕೊಳ್ಳುವವರು ಬಂದರು. ಕೊಡುವವರು, ಕೆಲ ಮಂದಿ ಕೃಷಿ ಎದುರಿಸುವ ಆಧುನಿಕ ಕಾಲದ ಹಲವು ಸಮಸ್ಯೆಗಳೆದುರು ಸೆಣಸಾಡಿ ಸೋತು, ಸೋಲೊಪ್ಪಿ, ಕೊಳ್ಳುವವರ ಎದುರು ಶರಣಾದರು. ಹೊರಗಿಂದ ಬಂದವರಿಗೆ ನೆಲದ ಮೇಲೆ ತಾಯಿಯ ಪ್ರೀತಿ ಬರುವುದೆ? ಏನುಂಟು ಇಲ್ಲಿ, ಈ ಬೆಟ್ಟದಲ್ಲಿ? ಈ ನದೀ ಗರ್ಭದಲ್ಲಿ? ಈ ತಪ್ಪಲಲ್ಲಿ? ಬೆಟ್ಟವು ಬೆಟ್ಟವಾಗಿ ಕಾಣದೆ ನದಿಯು ನದಿಯಾಗಿ ಕಾಣದೆ ಸರ್ವವೂ ಸಕಲವೂ ದುಡ್ಡು ತರುವ ಭಂಡಾರಗಳಾಗಿ ಕಾಣುವ ಯುಗವಲ್ಲವೆ ತಾಯೀ ಇದು? ಅಂದಮೇಲೆ ಕೊಡಗು ಕೂಡ ಅದಕ್ಕೆ ಬಲಿಯಾಗುವುದು ವಿಧಿ ನಿಯಮವಾಗಿತ್ತೆ?

ನಿನ್ನ ತಾಳುವಿಕೆಯ, ನಿನ್ನ ಧಾರಣ ಶಕ್ತಿಯ ಪರೀಕ್ಷೆ ನಡೆಯಿತು. ಪರೀಕ್ಷೆ ಮಿತಿಮೀರಿದ್ದೇ ಅನಾಹುತಕ್ಕೆ ಎಡೆಯಾಯಿತು. ನೀನು ಬಳಲಿದೆ, ಹುಯಿಲಿಟ್ಟೆ, ಒಮ್ಮೆ ಮೈ ಒದರಿದೆ. ಅದು ನಿನ್ನ ಕ್ರೋಧ ರೌದ್ರ ಆಕ್ರೋಶ ಎಂದೆಣಿಸುವುದೆ! ಕೂಡದು. ಹಾಗಲ್ಲ ಅದು. ಇಂತಹ ಶಬ್ದಗಳು ನಿನಗಲ್ಲವೂ ಅಲ್ಲ. ಒಬ್ಬ ತಾಯಿಗೆ ಸಲ್ಲುವ ಮಾತೇ ಅಲ್ಲ ಅವು. ಪರಮಾವಧಿ ನೋವಲ್ಲಿ ಹೊರಡುವ ಆಕ್ರಂದನಕ್ಕೂ ಕ್ರೋಧಾಗ್ನಿಯ ಆರ್ಭಟಕ್ಕೂ ನಡುವೆ ಸೂಕ್ಷ್ಮವಾದ ಗೆರೆಯಿದೆ. ಅದನ್ನು ಅರಿಯಬೇಕು. ನಿನಗಾದ ಮರ್ಮಾಂತಿಕ ನೋವನ್ನು ಅರಿಯಬೇಕು. ಮಕ್ಕಳ ಎಷ್ಟೋ ತಪ್ಪುಗಳನ್ನು ಒಡಲಿಗೆ ಹಾಕಿಕೊಳ್ಳಲೆಂದೇ ತಾಯಿಯ ಒಡಲು ವಿಶೇಷವಾಗಿ ಹಿಗ್ಗುವ ದೊಡ್ಡದಾಗುವ ಗುಣ ಪಡೆದಿರುತ್ತದೆಯಂತೆ. ಆದರೆ ಆ ಹಿಗ್ಗುವ ಗುಣಕ್ಕೂ ಮಿತಿಯಿದೆಯಷ್ಟೆ?

ಒಡಲಿನ ಪದರವೇ ಒಡೆದು ಹೋಗುವಷ್ಟು ತಪ್ಪುಗಳು ಸಂಭವಿಸಿದರೆ? ತಾಯಿ ಬೊಬ್ಬಿಡದೆ ಇರಲೆಂತು? ತನಗೇ ಅರಿಯದೆ, ತನ್ನ ಅಳವು ಮೀರಿ ಹೊರಡುವ ಆರ್ಭಟರೂಪೀ ಬೊಬ್ಬೆ ಅದು.

ತಾಯೀ, ತಪ್ಪಾಗಿವೆ, ಅರಿತೋ ಅರಿಯದೆಯೋ ತಪ್ಪುಗಳು ಆಗುತ್ತವೆ, ತಪ್ಪಾಗುವುದು ತಿದ್ದಿಕೊಳ್ಳಲು ಆತ್ಮನಿರೀಕ್ಷಣೆ ಮಾಡಿಕೊಳ್ಳಲು ನಮ್ಮೊಳಗೆಯೇ ಸಿಗುವ ದೈವೀಸಂಜ್ಞೆಯಷ್ಟೆ? ಈಗ ಆ ತಪ್ಪು ಮತ್ತೆ ಘಟಿಸದಂತೆ, ನಿನಗಾದ ನೋವು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಪಣ ತೊಡಬೇಕಾದ ಸಮಯ ಬಂದಿದೆ. ನಿನ್ನನ್ನು ಏನಕೇನ ಪ್ರಕಾರೇಣ ಉಳಿಸಿಕೊಳ್ಳುವ, ಮುಂಚಿನ ಆರೋಗ್ಯಕ್ಕೆ ಮರಳಿಸುವ ಚಿಕಿತ್ಸೆಗೆ ಈಗಲೇ ತೊಡಗಬೇಕು. ಅದು ಕೇವಲ ನಿನ್ನ ಮಕ್ಕಳಿಂದಷ್ಟೇ ಸಾಧ್ಯವಾಗದು. ಅವರ ಹೊಣೆಯಷ್ಟೇ ಅಲ್ಲವದು. ಈಗ ಅವರೊಂದಿಗೆ ಎಲ್ಲರೂ ಸೇರಿಕೊಳ್ಳಬೇಕು. ಒಣಪ್ರತಿಷ್ಠೆ, ಒಣಚರ್ಚೆ, ಹಳವಂಡ, ಹಳಹಳಿಕೆ, ಮಾತುಗಳನ್ನು ನಿಲ್ಲಿಸಿ ಆಗಬೇಕಾದ ಕಾರ್ಯದತ್ತ ಹೊರಳಬೇಕು. ಕಾರ್ಯವಂತರಾಗಬೇಕು.

ನಾಡಿನ ಸುಖದುಃಖ ನೋಡಿಕೊಳ್ಳಲು ಆಯ್ಕೆಯಾದ ಸೇವಕಮಂದಿಗೆ ಈಗ ಒಂದು ಕ್ಷಣವೂ ದಂಡ ಮಾಡುವ ಯಾವ ಹಕ್ಕೂ ಇಲ್ಲ. ದುರಂತವೆಂದರೆ ನಮ್ಮ ಈ ಸೇವಕರನ್ನು ದುಡಿಸಿಕೊಳ್ಳುವಉಪಾಯ ನಮಗೆ ತಿಳಿಯದೇ ಇರುವುದು. ಅವರನ್ನು ನಾವು ನಮ್ಮ ಒಡೆಯರೆಂದು ತಿಳಿದಿರುವುದು. ನಾವು ನಿಯಮಿಸಿದ ಈ ಆಳುಗಳೇ ನಮ್ಮ ಮೇಲೆ ಅಧಿಕಾರ ಚಲಾಯಿಸುವುದು. ತಮ್ಮ ಅಜ್ಞಾನದಲ್ಲಿ ಊರು ಸುಟ್ಟು ಗೋರಿ ಮಾಡಲು ಹೊರಡುವುದು. ಅಥವಾ ಅಂಥ ಮಂದಿಗೆ ಆ ಪರವಾನಗಿ ಕೊಡುವುದು. ಗಾಳಿ, ಮಣ್ಣು, ನೆಲ, ಬೆಟ್ಟ, ನದಿಗಳೆಂದರೆ ಅವಷ್ಟೇ ಅಲ್ಲ ಎಂಬ ಮೂಲಭೂತ ಪಾಠಗಳನ್ನೂ ಅರಿಯದ ಸೇವಕರನ್ನು ಆರಿಸಿ ಅವರ ಕೈಗೆ ನಾವು ಆಸ್ತಿ, ಮನೆ, ಭಂಡಾರದ ಬೀಗದ ಕೈಯನ್ನೇ ಕೊಟ್ಟಂತೆ ಕುಳಿತುಕೊಳ್ಳಬೇಕಾಯಿತಲ್ಲ. ಅವರನ್ನು ಹಿಡಿತದಲ್ಲಿಡುವ ಸಾಮರ್ಥ್ಯವನ್ನು ನಾವು ಆವಾಹಿಸಿಕೊಳ್ಳದೇ ಇರುವೆವಲ್ಲ. ಪ್ರಮಾದ ಇರುವುದು ಇಲ್ಲಿ. ತಿಳಿಹೇಳಿದವರ ಮಾತು ಕೇಳದ, ಸ್ವಂತ ತಿಳಿವೂ ಇಲ್ಲದ, ಜ್ಞಾನ ಒಗ್ಗದ, ಎಲ್ಲವನ್ನೂ ಹಣವನ್ನಾಗಿ ಪರಿವರ್ತಿಸಿ ಹಣವೊಂದನ್ನೆ ಉಣ್ಣುವ, ತಿನ್ನುವ ಭ್ರಮೆಯಲ್ಲಿ ಕಿಂಗ್ ಮಿಡಾಸ್ ಸಿಂಡ್ರೋಮ್ ಹತ್ತಿದವರ ಹಿಂದೆ ಓಡುವವರ ದಂಡೇ ಇವತ್ತು ನಿನ್ನನ್ನು ಮಾತ್ರವಲ್ಲ ಸುತ್ತಣ ಜಗತ್ತನ್ನೇ ಕಂಗಾಲುಗೊಳಿಸಿದೆ. ಈಗಲೂ ಮತ್ತು ಇನ್ನೂ ಎಚ್ಚರವಾಗದೆ ಹೋದಲ್ಲಿ ಇದು ಜಗತ್ತನ್ನೇ ನಾಳೆ ಆಪೋಶನ ತೆಗೆದುಕೊಳ್ಳಲಿದೆ.

ನಿನ್ನ ಮಡಿಲಿಗೆ ನಾವಂದು ನಮ್ಮ ಒಡಲಿನ ಕುಡಿಯೊಂದನ್ನು ಸೇರಿಸಿದೆವು. ಪ್ರೀತಿಯ ಕೊಡಗಿನ ಅಮ್ಮೆಯೇ, ಇವಳಿನ್ನು ನಿನ್ನ ಮಗಳು ಎಂದು ಮನದಲ್ಲೇ ಪ್ರಾರ್ಥಿಸಿದೆವು. ಅವತ್ತಿನಿಂದ ನೀನು ನನ್ನ ಅತ್ಯಂತ ಹೆಮ್ಮೆಯ ಬೀಗಿತ್ತಿಯಾದೆ. ನಮ್ಮಲ್ಲಿ ಬೇರೆಯೇ ಆದೊಂದು ಬಾಂಧವ್ಯ ಬೆಳೆಯಿತು. ಬ್ರಹ್ಮಗಿರಿಯಿಂ ಪುಷ್ಟಗಿರಿ ಪರ್ಯಂತ ನಿನ್ನ ಸಕಲ ವೈಭವಗಳನ್ನೂ ಕಂಡವಳು ನಾನು. ಆ ನಿನ್ನ ಸಾಮ್ರಾಜ್ಯದ ಅಮಲ ಚೆಲುವನ್ನು ವರ್ಣಿಸಲು ಕಾಳಿದಾಸನಂತಹ ಕವಿಯೊಬ್ಬನಿಗೇ ಸಾಧ್ಯವೇನೋ ಎಂದು ಉದ್ಗರಿಸಿದವಳು. ಅಂದಿನ ಕೊಡಗು, ಅಲ್ಲಿ ಸುತ್ತಾಡಿದ ನಮ್ಮ ಸಂಭ್ರಮವನ್ನು, ವಿಸ್ಮಯವನ್ನು, ಭಾಗ್ಯವನ್ನು ಹೇಗೆ ಬಣ್ಣಿಸಲಿ? ಅಬ್ಬಿ, ತಲಕಾವೇರಿ, ಭಾಗಮಂಡಲ ಮತ್ತನೇಕ ಸಿರಿಗೂಸುಗಳನ್ನು ನಿನ್ನ ಹಸಿರಿನ ಮಡಿಲಿನಲಿ ಕುಳ್ಳಿರಿಸಿಕೊಂಡು ನಳನಳಿಸಿದ ಪ್ರಸನ್ನಮುಖಿ ತಾಯಿ ನೀನು. ಅಂದು ನಿನ್ನ ಅಗಾಧತೆಯ ಎದುರು ನಮ್ಮ ಅಸ್ತಿತ್ವವನ್ನೆ ಮರೆತು ಮೌನ ಸಂವಾದಿಸಿದ ಸುಖವೆಂದರೆ ಅದು ಶಾಶ್ವತದ್ದು.

ಆದರೆ ಈಗ! ನಿನ್ನೀ ಅಯೋಮಯ ಸ್ಥಿತಿ! ನಂಬುವಂಥದೆ? ಕಂಡು ದಿಗ್ಞೂಢಳಾಗಿರುವೆ. ಇದು ಕನಸಾಗಿದ್ದರೆ... ಎಂದು ಹಂಬಲಿಸುವಂತಾಗಿದೆ. ಮಾತೆಂಬುದು ಮಾತಾಗದ ಅವಾಕ್ ಸ್ಥಿತಿಯಲ್ಲಿ, ಈ ಅಗಾಧ ಕರ್ಮಕಾಂಡವನ್ನು ಅಂತ್ಯಗೊಳಿಸಿ ಮತ್ತೆ ಚಿಗುರು ಚಿಗುರಿಸುವ ಜೀವಕಳೆ ಮರಳಿಸುವ ಮುಹೂರ್ತಕ್ಕಾಗಿ ಕೈ ಮುಗಿದು ನಿಂತಿರುವೆ. ಮರಳಿ ಬಾ. ಮರಳಿ ಬಾ ತಾಯೆ, ಸ್ವಾಭಿಮಾನದ ಕೆಚ್ಚೆದೆಯ ಕುಗ್ಗದ ಬಗ್ಗದ ಕೊಡಗಿನ ಅಮ್ಮೆಯೇ. ಅಪರಾಧಂಗಳ ಮನ್ನಿಸಿ ಮರಳಿ ಅವತರಿಸು ಬಾ. ನಿನ್ನನ್ನು ನಿನ್ನ ಮಕ್ಕಳು ಇನ್ನೆಂದೂ ಯಾರಿಂದಲೂ ನಿನಗೆ ಈ ಪರಿಯ ಘಾತ ಸಂಭವಿಸಲು ಬಿಡರು. ನಿನಗೇ ಗೊತ್ತು. ಅವರು ನಿನ್ನನ್ನು ಪ್ರಾಣಪದಕದಂತೆ ನೋಡಿಕೊಂಡವರು. ನಮ್ಮ ಕೊಡಗಿದು ಜಮ್ಮದು, ಜಮ್ಮ ಕೊಡಗಿದು ನಮ್ಮದು ಎಂದು ಹೆಮ್ಮೆಯಿಂದ ಎದೆತಟ್ಟಿಕೊಳ್ಳುವವರು. ನಿನಗಾಗಿ ತಮ್ಮ ಜೀವ ಜೀವನವನ್ನು ಮೀಸಲಿಟ್ಟವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.