ಕಪ್ಪಾದ ಕತ್ತಲೆ, ಗಾಡಾಂಧಕಾರವನ್ನು ‘ಕಗ್ಗತ್ತಲೆ’ ಎಂದು ಹೇಳುವುದು ರೂಢಿ. ಕುವೆಂಪು ಅವರು ಶ್ರವಣ ಬೆಳ್ಗೊಳದ ಬೆಟ್ಟದ ಮಧ್ಯದಲ್ಲಿ ಎದ್ದು ನಿಂತಿರುವ ಗೋಮಟೇಶ್ವರನನ್ನು ಧ್ಯಾನಿಸುವ ಕವನದಲ್ಲಿ ‘ಕಲ್ಗತ್ತಲೆ’ ಪದವನ್ನು ಪ್ರಯೋಗಿಸಿದ್ದಾರೆ. ಅಮಾವಾಸ್ಯೆಯ ರಾತ್ರಿಯಲ್ಲಿ ಕೋಟಿ ನಕ್ಷತ್ರವನ್ನು ಏಕಾಂಗಿಯಾಗಿ ದಿಟ್ಟಿಸುವ ಚಿತ್ರವನ್ನು ನೀಡುವಾಗ ಆ ಬೆಟ್ಟದ ಆವರಣದಲ್ಲಿ ಸೃಷ್ಟಿಯಾದ ಕರ್ಗತ್ತಲೆಯನ್ನು ‘ಕಲ್ಗತ್ತಲೆ’ ಎಂದು ಕರೆದಿದ್ದಾರೆ.

‘ಕದ್ದಿಂಗಳಲಿ ಕಲ್ಗತ್ತಲೆಯ ರುಂದ್ರ ರಾತ್ರಿಯಲಿ’

(ಶ್ರವಣ ಬೆಳ್ಗೊಳದ ಗೊಮ್ಮಟೇಶ್ವರನ ಸಾನ್ನಿಧ್ಯದಲ್ಲಿ : ಅಗ್ನಿಹಂಸ)

ತೋರುಮನೆ

ತೋರುಮನೆ (ನಾ). ಪ್ರದರ್ಶನಾಲಯ; ವಸ್ತುಸಂಗ್ರಹಾಲಯ

(ತೋರು + ಮನೆ)

ಆಂಜನೇಯನು ರಾತ್ರಿಯಲ್ಲಿ ಕನಕಲಂಕಾನ್ವೇಷಣೆ ಮಾಡುತ್ತ ಇಂದ್ರಜಿತು, ವಿಭೀಷಣ, ಪ್ರಹಸ್ತ, ಮಹಾಪಾರ್ಶ್ವ ಮುಂತಾದವರ ಮನೆಗಳನ್ನು ಹೊಕ್ಕು ಸೀತೆಯನ್ನು ಹುಡುಕುವನು. ಅನಂತರ ಅವನು ಗೂಬೆಯ ರೂಪವನ್ನು ತಾಳಿ ಕುಂಭಕರ್ಣನ ಮನೆಯನ್ನು ಪ್ರವೇಶಿಸುವನು. ಅಲ್ಲಿರುವ ಹೆಬ್ಬಂಡೆ, ಹೆಮ್ಮರದ ದಿಮ್ಮಿ, ದಪ್ಪನಾದ ಹಗ್ಗಗಳನ್ನು ಕುಂಕುಮ ಬೆರಸಿದ ಕೆಮ್ಮಣ್ಣು ರಾಶಿ ಕಂಡು ಅದನ್ನು ಮಹಾಗರಡಿ ಎಂದು ತಿಳಿಯುವನು.
ಹಾಗೆ ಮುಂದುವರಿಯಲು ಕಾಡುಕೋಣ ಕಡವೆ ಸಾರಗ ಜಿಂಕೆಗಳ ಕವಲು ಕೊಂಬುಗಳು, ತಿರುಗೊಂಬುಗಳು, ನೀಳ ಕೊಂಬುಗಳು; ಹಂದಿ ಹುಲಿ ಕರಡಿ ಸಿಂಹ ಆನೆ ಖಡ್ಗಮೃಗ ಇತ್ಯಾದಿ ಜಂತುಗಳ ದಂತ ನಖ ಚರ್ಮಗಳು ಕಂಡವು. ಅವುಗಳು ಶಿಲ್ಪ ಕೆತ್ತನೆ ಕಂಭ ಕಂಭಗಳಲ್ಲಿ, ಗೋಡೆಗೋಡೆಗಳಲ್ಲಿ, ಕಣ್ಣು ಹರಿವ ಕಡೆಯಲೆಲ್ಲ, ಸುತ್ತ ಎಲ್ಲ ಸ್ಥಳಗಳಲ್ಲಿ ಮೆರೆದಿದ್ದವು. ಅವುಗಳು ಕಂಭಕರ್ಣನ ವಿನೋದಮಯ ಬೇಟೆಗೆ ಸಾಕ್ಷಿಯಾಗಿ ಆ ‘ತೋರುಮನೆ’ಯಲ್ಲಿದ್ದವು.

ಕುವೆಂಪು ಅವರು ಅಲ್ಲಿಯ ಪ್ರದರ್ಶನ ವ್ಯವಸ್ಥೆಗೆ ಹೊಂದುವಂತೆ ಆ ವಸ್ತು ಸಂಗ್ರಹಾಲಯವನ್ನು ‘ತೋರುಮನೆ’ ಎಂಬ ಅಚ್ಚಗನ್ನಡ ಶಬ್ದ ರೂಪಿಸಿ ಚಿತ್ರಿಸಿದ್ದಾರೆ.

ತರುತಪಸ್ವಿ

‘ಪ್ರೇತವೃಕ್ಷ’ ಕವನದಲ್ಲಿ ಕವಿಯು ತಮ್ಮ ಲೌಕಿಕಾನುಭವವನ್ನು ಮರಕ್ಕೆ ಆರೋಪಿಸುತ್ತ, ಅದನ್ನು ವ್ಯಕ್ತಿ ಎಂದು ಪರಿಭಾವಿಸಿ ಹಲವು ಪ್ರಶ್ನೆಗಳೊಂದಿಗೆ ಸಮಾಧಾನದ ಉತ್ತರ ಪಡೆದಿದ್ದಾರೆ. ಆ ಒಂಟಿ ಮರವನ್ನು ಹೊಟ್ಟೆಕಿಚ್ಚು ಪಟ್ಟು ಕೊರೆಯುವ ಜನಕ್ಕಿಂತ ನಿರ್ಜನತೆಯ ಸಂಗಸುಖವನ್ನು ಬಯಸಿದೆಯ? (ಇದನ್ನು ಓದಿದಾಗ ಚಂದ್ರಹಾಸನ ಕಥೆಯಲ್ಲಿ ‘ಕರುಬರಿದ್ದೂರಿಗಿಂತ ಕಾಡೊಳಿತು ಎನಿಸುವಂತೆ’ ಎಂಬ ಲಕ್ಷ್ಮೀಶನ ನುಡಿ ನೆನಪಾಗುತ್ತದೆ.) ಬೊಬ್ಬಿರಿದು ಗದ್ದಲವೆಬ್ಬಿಸುವ ಜನಸಂದಣಿಗಿಂತ ‘ನೀರವತೆಯ ಸಂಗೀತ’ ಆಶಿಸಿ ನೀನು ದೂರ ನಿಂತು ಮೌನವಾಗಿರುವೆಯ ತರುತಪಸ್ವಿ? ಎಂದು ಪ್ರಶ್ನಿಸಿದ್ದಾರೆ. ಅನಂತರ ನೀನು ಇಂದಿನಿಂದ ನನ್ನ ಜೊತೆಗಿರುವವನಾಗಿರುವೆ ಎಂದು ತಮ್ಮ ನಿರ್ಜನತೆ, ನೀರವತೆಗೆ ಆಶಿಸುವ ಗುಣದ ಗೆಳೆಯನೆಂದು ಹರ್ಷಿಸಿದ್ದಾರೆ.

‘ನಿರ್ಜನತೆಯ ಸಂಗಸುಖಂ

ಕರುಬಿ ಕೊರೆವ ಮಂದಿಗಿಂ:

ನೀರವತೆಯೆ ಸಂಗೀತಂ

ಬೊಬ್ಬಿರಿಯುವ ಮಂದೆಗಿಂ;

ಎಂದು ನೀನು ದೂರನಿಂತೆ,

ತರುತಪಸ್ವಿ, ಮೌನವಾಂತೆ;

ನೀನಿಂದೆನಗೊಂದಿಗಂ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.