ಒಡಿಶಾದ ಭವಾನಿಪಟ್ಣದಿಂದ ಛತ್ತೀಸಗಢದ ಜಗದಾಳ್ಪುರಕ್ಕೆ ಬರುತ್ತಿದ್ದರೆ ನಿಮ್ಮ ಆ ನಾಲ್ಕೂವರೆ ತಾಸುಗಳ ಪ್ರಯಾಣದಲ್ಲಿ ಏಳು ಭಾಷೆಗಳು ಕಿವಿಗೆ ಬೀಳುತ್ತವೆ. ಆ ಯಾವವೂ ನಮ್ಮ ನೋಟುಗಳ ಮೇಲೆ ಮುದ್ರಿತವಾದ ಭಾಷೆಗಳಲ್ಲ. ಮುದ್ರಿಸಲು ಅವಕ್ಕೆ ಲಿಪಿಯೂ ಇಲ್ಲ. ಆ ಏಳೂ ಭಾಷೆಗಳು ಅಪರೂಪದ ದೇಸೀ ಸಂಸ್ಕೃತಿಯನ್ನು, ವಿಶಿಷ್ಟ ಜನಪದ ಜ್ಞಾನವನ್ನು, ಅನೂಹ್ಯ ದೈವಗಳನ್ನು, ಅನನ್ಯ ಬದುಕಿನ ವಿಧಾನವನ್ನು ಒಳಗೊಂಡಿವೆ. ನಮ್ಮ ದೇಶದಲ್ಲಿ ಅಂಥ 700 ಮೂಲಭಾಷೆಗಳಿವೆ. ಬಹಳಷ್ಟು ಭಾಷೆಗಳು ಅವಸಾನದ ಅಂಚಿಗೆ ಬಂದಿವೆ. ಕೆಲವು ನಶಿಸಿ ಹೋಗುತ್ತಿವೆ. ತ್ರಿಪುರಾದ ಸೈಮಾರ್ ಭಾಷೆಯಲ್ಲಿ ಮಾತಾಡಬಲ್ಲವರ ಸಂಖ್ಯೆ ಏಳಕ್ಕೆ ಇಳಿದಿದೆ.
ನಮ್ಮದು ಬಿಡಿ, ಇಂಡೊನೇಶ್ಯಾಕ್ಕೆ ಸೇರಿದ ಪಾಪುವಾ ನ್ಯೂಗಿನಿ ಎಂಬ ದ್ವೀಪಕಲ್ಪವಿದೆ. ಆಸ್ಟ್ರೇಲಿಯಾದ ಉತ್ತರದ ಅಂಚಿಗೆ ತಾಗಿಕೊಂಡಂತಿರುವ ಅದು ವಿಸ್ತೀರ್ಣದಲ್ಲಿ ಭಾರತದ ಕಾಲು ಭಾಗ ಇದೆಯಷ್ಟೆ. (ವಿಮಾನವೇರಿ ಹೋಗುವುದಾದರೂ ಅಲ್ಲಿಗೆ ಇಪ್ಪತ್ತು ಗಂಟೆ ಪಯಣ. ಆದರೂ ನಮಗೆ ಹತ್ತಿರದ ಪ್ರಾಂತ ಅದು. ಏಕೆಂದರೆ ಅಲ್ಲಿ ಜಯಪುರ ಹೆಸರಿನ ಒಂದು ದೊಡ್ಡ ರೇವುಪಟ್ಟಣವಿದೆ. ಮಂಡಲ ಎಂಬುದು ಅಲ್ಲಿನ ಕ್ರೀಡಾಂಗಣದ ಹೆಸರು.) ಅಂಥ ಪಾಪುವಾ ನ್ಯೂಗಿನಿಯಲ್ಲಿ ಒಂದು ಸಾವಿರ ಮೂಲಭಾಷೆಗಳು ಜೀವಂತ ಇವೆ; ಕೆಲವು ಕೊನೆಯುಸಿರಿಗೆ ಬಂದಿವೆ.

ಒಟ್ಟಾರೆ ಭೂಮಿಯ ಮೇಲೆ 6809 ಭಾಷೆಗಳಿವೆ ಎಂದು ಅಂದಾಜು ಮಾಡಲಾಗಿದೆ. ಅವೆಲ್ಲ ಹೆಚ್ಚಾಗಿ 37 ಕೋಟಿ ಆದಿವಾಸಿಗಳ ಹಾಡಿಗಳಲ್ಲೇ ಬಳಕೆಯಾಗುತ್ತಿವೆ. ಅವುಗಳಲ್ಲಿ 357 ಭಾಷೆಗಳನ್ನು ಸಾವಿನಂಚಿನ ಭಾಷೆಗಳು ಎಂದು ಈಗಾಗಲೇ ಗುರುತಿಸಲಾಗಿದೆ. ಆ ಒಂದೊಂದು ಭಾಷೆಯಲ್ಲಿ ಮಾತಾಡುವವರ ಸಂಖ್ಯೆ ೫೦ಕ್ಕಿಂತ ಕೆಳಕ್ಕಿಳಿದಿದೆ. ಅಭಿವೃದ್ಧಿಯ ಮಹಾಚಕ್ರಕ್ಕೆ ಹಾಗೂ ತಂತ್ರಜ್ಞಾನದ ಕಾಲ್ತುಳಿತಕ್ಕೆ ಸಿಕ್ಕು ಉಳಿಗಾಲ ಕಮ್ಮಿಯಾಗುತ್ತಿದೆ.

ಭಾಷೆಯ ವಿಷಯ ಬಂದಾಗ ಒಂದು ವಿಲಕ್ಷಣ ತಾರ್ಕಿಕ ದ್ವಂದ್ವ ಎದುರಾಗುತ್ತದೆ: ಮನುಷ್ಯ-ಮನುಷ್ಯರ ನಡುವೆ ಉತ್ತಮ ಸಂಪರ್ಕ ಇರಲೆಂದೇ ಭಾಷೆ ವಿಕಾಸವಾಗಿದೆ ತಾನೆ? ಆದರೆ ಜಗತ್ತಿನಲ್ಲಿ ಎಲ್ಲಿಂದ ಎಲ್ಲಿಗೆ ಹೋದರೂ ನಮಗೆ ಗೊತ್ತಿಲ್ಲದ ಭಾಷೆಗಳೇ ಇವೆ! ಇಂಗ್ಲಿಷ್‌ನಂಥ ಸಂಪರ್ಕ ಭಾಷೆ ಗೊತ್ತಿದ್ದರೂ ಶೇಕಡಾ 97 ರಷ್ಟು ಭಾಷೆಗಳಲ್ಲಿ ಏನೇನಿವೆ ಎಂಬುದ ಗೊತ್ತಾಗಲು ಸಾಧ್ಯವೇ ಇಲ್ಲ. ಅದು ಹೇಗೆ? ಇಡೀ ಮನುಕುಲವೇ ಮೂಲ ಆಫ್ರಿಕಾದಲ್ಲಿ ಉಗಮವಾಗಿತ್ತು, ಅಲ್ಲೇ ಭಾಷೆಯೂ ಉಗಮವಾಗಿತ್ತು ಎಂದಮೇಲೆ ಅವರೆಲ್ಲ ಬೇರೆ ಬೇರೆ ಭೂಭಾಗಗಳಿಗೆ ಚದುರಿ ಹೋಗುವಾಗ ಒಂದೇ ಭಾಷೆ ಇರಬೇಕಿತ್ತಲ್ಲವೆ? ಇಷ್ಟೆಲ್ಲ ಭಾಷೆಗಳು ಹೇಗೆ ಉಗಮವಾದವು ಅನ್ನೋದಕ್ಕೆ ಒಂದು ಚಂದದ ಕತೆ ಬೈಬಲ್‌ನಲ್ಲಿದೆ. ಮನುಷ್ಯರೆಲ್ಲ ಒಂದೇ ಭಾಷೆ ಮಾತಾಡುತ್ತಿದ್ದ ಕಾಲದಲ್ಲಿ ಅವರೆಲ್ಲ ಸೇರಿ ಸ್ವರ್ಗಕ್ಕೆ ಹೋಗಲೆಂದು ಒಂದು ಎತ್ತರದ ಗೋಪುರ (ಟವರ್ ಆಫ್ ಬೇಬೆಲ್) ಕಟ್ಟಲು ತೊಡಗಿದರಂತೆ. ಕಟ್ಟಡ ಎತ್ತರ ಎತ್ತರಕ್ಕೆ ಹೋದಂತೆ ಸ್ವರ್ಗದಲ್ಲಿನ ದೇವರಿಗೆ ಗಾಬರಿ ಆಯ್ತಂತೆ. ಶಾಪ ಕೊಟ್ಟುಬಿಟ್ಟ: ಈ ಜನರ ನಾಲಗೆಯ ಮೂಲಕ ವಿಭಿನ್ನ ಭಾಷೆಗಳು ಹೊಮ್ಮಲಿ ಅಂತ. ಕಟ್ಟಡದ ಕೆಲಸವೆಲ್ಲ ಅಲ್ಲಿಗೇ ಠಪ್! ಅವರು ಹೇಳಿದ್ದು ಇವರಿಗೆ ಅರ್ಥವಾಗುತ್ತಿಲ್ಲ ಇವರ ಭಾಷೆ ಅವರಿಗೆ ಗೊತ್ತಾಗುತ್ತಿಲ್ಲ.

ವಾಸ್ತವ ಏನೆಂದು ನೋಡುವಾಗ ಭಾಷಾ ವಿಜ್ಞಾನಿಗಳೂ ಅಷ್ಟೇ ಚಂದದ ಇನ್ನೊಂದು ನಂಬಲರ್ಹ ತರ್ಕವನ್ನು ಮುಂದಿಡುತ್ತಾರೆ. ಅದೇನೆಂದರೆ ಭಾಷೆಯನ್ನು ನಮ್ಮ ಸುತ್ತಲಿನ ಪ್ರಕೃತಿಯೇ ನಮಗಾಗಿ ಸೃಷ್ಟಿ ಮಾಡುತ್ತದೆ. ನಾವು ಏನೂ ಮಾಡಬೇಕಾಗಿಯೇ ಇಲ್ಲ. ಮೂಲಭಾಷೆ ಏನೇ ಇದ್ದರೂ ಮೂಲ ಪಂಗಡದಿಂದ ದೂರ ಹೋಗಿ ಅನೇಕ ತಲೆಮಾರುಗಳವರೆಗೆ ಒಂದೇ ಜಾಗದಲ್ಲಿ ವಾಸ್ತವ್ಯ ಹೂಡಿದಾಗ ಅಲ್ಲಿನ ಗಿಡಮರ, ಗುಡ್ಡಬೆಟ್ಟ, ಮೃಗಪಕ್ಷಿ, ನೀರು, ಮರಳು ಬಿಸಿಲು ಎಲ್ಲವುಗಳ ಪ್ರಭಾವದಿಂದ ಅಲ್ಲಿ ಹೊಸ ಭಾಷೆಯೇ ಸೃಷ್ಟಿಯಾಗುತ್ತದೆ. ಅಂದರೆ, ಮಾತು ಬಾರದ ನಿಸರ್ಗವೇ ನಮಗೆ ಭಾಷೆಯನ್ನು ಕಲಿಸುತ್ತದೆ! ಕಳೆದ 65 ಸಾವಿರ ವರ್ಷಗಳಿಂದ ಮನುಷ್ಯ ನಿಧಾನಕ್ಕೆ ಕಾಲ್ನಡಿಗೆಯಲ್ಲಿ ಹೋಗಿ ದೂರದ ತಾಣಗಳಲ್ಲಿ ಕಾಲೂರಿದಲ್ಲೆಲ್ಲ ಭಾಷಾ ವೈವಿಧ್ಯ ಹೆಚ್ಚುತ್ತಲೇ ಹೋಯಿತು. ಈ ಚಮತ್ಕಾರ ತೀರ ಇತ್ತೀಚೆಗೆ ಕ್ರಿ.ಶ. 1500ರವರೆಗೂ ಅರಳುತ್ತಲೇ ಇತ್ತು. ಸೈಬೀರಿಯದ ಹಿಮಗಾಡಿನಲ್ಲಿ ೪೩೦ ಭಾಷೆ, ಆಫ್ರಿಕಾದ ಕಾಲಾಹಾರಿ ಮರಳುಗಾಡಿನಲ್ಲಿ130 ಭಾಷೆ, ಕೆನಡಾದ ಮರಗಟ್ಟುವ ಚಳಿಯಲ್ಲಿ 130 ಭಾಷೆ, ಆಸ್ಟ್ರೇಲಿಯಾದ ಗುಡ್ಡಕಂಟಿಗಳಲ್ಲಿ ೩೮೩ ಭಾಷೆ, ಅಮೆಝಾನ್‌ನ ಹಸುರು ಕೊಳ್ಳದಲ್ಲಿ ೮೫೦ ಭಾಷೆ, ಪಾಪುವಾ ನ್ಯೂಗಿನಿಯ ದಟ್ಟ ಕಾಡುಗಳಲ್ಲಿ ಸಾವಿರ ಭಾಷೆ. ಅಂದರೆ- ಬೀಸಿ ಬರುವ ಮರಳು ಕಣಗಳ ವೈವಿಧ್ಯ, ಹಾಸಿ ಬೀಳುವ ಹಿಮಕಣಗಳ ವೈವಿಧ್ಯ, ಸುಗಂಧ ಸೂಸುವ ಹುಲ್ಲುಬಳ್ಳಿಗಳ ವೈವಿಧ್ಯ, ಏರಿಳಿತದ ಗುಡ್ಡಕಣಿವೆಗಳ ನೆಲವೈವಿಧ್ಯ, ಜಲಧಾರೆಯ ವೈವಿಧ್ಯ, ಗಿಡಗಂಟಿಗಳ ಕೊರಳೊಳಗಿಂದ ಹಕ್ಕಿಗಳ ಕಲರವದ ವೈವಿಧ್ಯ ಹೆಚ್ಚುತ್ತ ಹೋದಂತೆಲ್ಲ ಮನುಷ್ಯರ ಭಾಷಾ ವೈವಿಧ್ಯವೂ ವಿಕಾಸವಾಗುತ್ತ ಹೋಗಿದೆ.

ಪ್ರಕೃತಿ ಎಂಥ ಅದ್ಭುತ ನೋಡಿ: ಅದು ಗ್ಯಾಲಪಗೋಸ್ ದ್ವೀಪಸಮೂಹದಲ್ಲಿನ ಫಿಂಚ್ ಹಕ್ಕಿಗಳಿಗೆ ಒಂದೊಂದು ನಡುಗಡ್ಡೆಯಲ್ಲಿ ಒಂದೊಂದು ಬಗೆಯ ಚುಂಚನ್ನು ಕೊಟ್ಟು, ಒಂದೊಂದು ಬಗೆಯ ಹಾಡನ್ನು ಕಲಿಸಿತು. ಅತ್ತ ಬಂದ ಚಾರ್ಲ್ಸ್ ಡಾರ್ವಿನ್‌ನ ಕಿವಿಯಲ್ಲಿ ವಿಕಾಸದ ರಹಸ್ಯ ಸೂತ್ರವನ್ನು ಉಸುರಿತು.

ಚರಿತ್ರೆಯ ವ್ಯಂಗ್ಯ ಏನೆಂದರೆ ಡಾರ್ವಿನ್ ಮಹಾಶಯ ಅತ್ತ ಪಯಣಕ್ಕೆ ಹೊರಟ ವರ್ಷವೇ ಬ್ರಿಟನ್ನಿನಲ್ಲಿ ಮೊತ್ತಮೊದಲ ರೇಲ್ವೆ ಮಾರ್ಗ ಬಂತು. ಆತ ಹಿಂದಿರುಗಿ ಬಂದು ವಿಕಾಸವಾದವೆಂಬ ನೈಸರ್ಗಿಕ ಸತ್ಯವನ್ನು ಪ್ರಕಟಿಸಿ ಖ್ಯಾತಿಯ ಉತ್ತುಂಗಕ್ಕೇರಿ, ಆತ್ಮಕಥೆ ಬರೆಯಲು ಕೂರುವ ಹೊತ್ತಿಗೆ ಪೆಟ್ರೋಲಿಯಂ ವ್ಯಾಪಕವಾಗಿ ಬಳಕೆಗೆ ಬಂತು. ಮೆಲ್ಲಗೆ ತೇಲಿಕೊಂಡು ಸಾಗುತ್ತಿದ್ದ ಹಡಗುಗಳಿಗೆ ಡಾರ್ವಿನ್‌ನ ಜೀವಿತಾವಧಿಯಲ್ಲೇ ಶರವೇಗ ಬಂತು. ಹಡಗು, ರೈಲು, ಲಾರಿ, ಕಾರು, ವಿಮಾನ ಏರಿ ಖಂಡಖಂಡಗಳಿಗೂ ನರಮನುಷ್ಯ ನುಗ್ಗುತ್ತ, ಕಂಡಕಂಡಿದ್ದನ್ನು ಕಡಿದೊಗೆಯುವ ಆತನ ಧ್ವಂಸಕಾರ್ಯಕ್ಕೂ ಭೀಮಬಲ ಬಂತು. ವಸಾಹತುಗಳು ಹೋದಲ್ಲೆಲ್ಲ ರಸ್ತೆ, ರೈಲು, ಸುರಂಗವನ್ನು ನಿರ್ಮಿಸುತ್ತ, ಜೀವಿವೈವಿಧ್ಯವನ್ನು ಹೊಸಕುತ್ತ, ಪ್ರಕೃತಿಯ ಉಲಿಯನ್ನೇ ಬತ್ತಿಸುತ್ತ ಹೋದ ಹಾಗೆ, ಮನುಷ್ಯರ ಭಾಷೆಗಳೂ ಹೊಸಕಿ ಹೋಗತೊಡಗಿದವು. ಭಾಷಾನಾಶದ ವೇಗ ಎಲ್ಲಿಗೆ ಬಂದಿದೆಯೆಂದರೆ ವಾರಕ್ಕೊಂದು ಭಾಷೆ ತನ್ನ ಕೊನೆಯುಸಿರು ಎಳೆಯುತ್ತಿದೆ. ವೇಗ ಹೆಚ್ಚುತ್ತಲೇ ಇದೆ. ಈಗ ವರ್ಷಕ್ಕೆ ೫೦ ಭಾಷೆ ಸಾಯುತ್ತಿವೆ. ಐದು ವರ್ಷಗಳ ನಂತರ ನೂರೈವತ್ತು ಭಾಷೆ.
ಒಂದು ಭಾಷೆ ಸಾಯಲು ನೂರೊಂದು ಕಾರಣಗಳಿರುತ್ತವೆ. ಅಮೆರಿಕದಲ್ಲಿ ನಗರ ವಿಸ್ತರಣೆಗೆಂದೇ ರೆಡ್ ಇಂಡಿಯನ್ ಮೂಲನಿವಾಸಿಗಳ ನೂರಾರು ಪಂಗಡಗಳನ್ನು ಎತ್ತಂಗಡಿ ಮಾಡಿದ ಕತೆ ನಮಗೆ ಗೊತ್ತೇ ಇದೆ. ಈ ಭೂಮಿ ತಾತ ಮುತ್ತಾತಂದಿರಿಂದ ಬಂದ ಬಳುವಳಿ ಅಲ್ಲ, ಮಕ್ಕಳು ಮೊಮ್ಮಕ್ಕಳಿಂದ ಎರವಲು ಪಡೆದಿದ್ದು ಎಂಬ ವಿವೇಕವಾಣಿ ಬಂದಿದ್ದು ಕೂಡ ಚೀಫ್ ಸಿಯಾಟ್ಲ್ ಹೆಸರಿನ ಮೂಲನಿವಾಸಿಯಿಂದಲೇ ಅಲ್ಲವೆ? ಟಿಬೆಟನ್ನು ಒತ್ತುವರಿ ಮಾಡಿಕೊಂಡ ಚೀನಾ ಸರಕಾರ ಒಂದೇ ಏಟಿಗೆ ಹತ್ತಾರು ನಾಟೀಭಾಷೆಗಳನ್ನು ಹೊಸಕಿ ಹಾಕಿತು. ಚಾಕಲೇಟ್ ತಯಾರಿಕೆಗೆ ಬೇಕಾದ ಪಾಮೆಣ್ಣೆಗಾಗಿ ತಾಳೆತೋಟ ಬೆಳೆಸಲೆಂದು ಇಂಡೊನೇಷ್ಯ ಅದೆಷ್ಟೊ ಬುಡಕಟ್ಟುಗಳ ಬದುಕನ್ನು ಬುಡಮೇಲು ಮಾಡಿತು. ಶಿಕ್ಷಣ, ಆರೋಗ್ಯದ ಪಾಠ ಹೇಳುತ್ತೇವೆಂದು ಧಾರ್ಮಿಕ ಮಿಶನರಿಗಳು ಅದೆಷ್ಟೊ ಭಾಷೆಗಳನ್ನು ನೆಲಸಮ ಮಾಡಿದರು. ತೈಲಬಾವಿ ಕೊರೆಯಲೆಂದು, ರೈಲುಮಾರ್ಗ ಹಾಕಲೆಂದು, ಮಿಲಿಟರಿ ನೆಲೆ ಸ್ಥಾಪಿಸಲೆಂದು, ಬಂದರು ನಿರ್ಮಾಣಕ್ಕೆಂದು, ಗಣಿಗಾರಿಕೆಗೆಂದು, ನೀರಾವರಿ ಯೋಜನೆಗೆಂದು ಜಗತ್ತಿನ ಅನೇಕ ದೇಶಗಳಲ್ಲಿ ಅಸಂಖ್ಯ ಮೂಲವಾಸಿಗಳು ನೆಲೆ ಕಳೆದುಕೊಳ್ಳುತ್ತಿದ್ದಾರೆ.

ಅಳಿವಿನಂಚಿನಲ್ಲಿರುವ ಪ್ರಾಣಿಪಕ್ಷಿಗಳನ್ನು, ಸಸ್ಯಗಳನ್ನು, ಜಲಜೀವಿಗಳನ್ನು ರಕ್ಷಿಸಲು ನಮ್ಮ ಎಷ್ಟೊಂದು ಮಂದಿ ಟೊಂಕ ಕಟ್ಟಿ ನಿಂತು ಹೋರಾಡುತ್ತಿದ್ದಾರೆ. ನಿಸರ್ಗವನ್ನು ಉಳಿಸುವ ಘನ ಉದ್ದೇಶದಿಂದಲೇ ಆದಿವಾಸಿಗಳನ್ನು ಅವರ ನೆಲೆಯಿಂದ ಹೊರಕ್ಕೆ ತರಲು ಎಷ್ಟೊಂದು ಕೋರ್ಟು ಕಚೇರಿಗಳಿಗೆ ಎಡತಾಕುತ್ತಿದ್ದಾರೆ. ಸಾವಿನಂಚಿನ ಭಾಷೆಗಳನ್ನು, ಬದುಕಿನ ರಮ್ಯರಹಸ್ಯಗಳನ್ನು ಉಳಿಸುವುದು ಬೇಡವೆ? ಹೇಗೆ ಉಳಿಸೋಣ? ಕೆಲವು ಭಾಷೆಗಳು ಅದೆಷ್ಟು ನಾಜೂಕು ಅಂದರೆ, ಲಿಪಿಯ ರೂಪದಲ್ಲಿ ತರುವುದರಿಂದಲೇ ಅವುಗಳ ಒಂದಿಷ್ಟು ಪದಗಳು ಮಂಕಾಗುತ್ತವೆ, ಮುಕ್ಕಾಗುತ್ತವೆ, ನಾಶವಾಗುತ್ತವೆ. ಹವಾಯಿ ಎಂದು ನಾವು ಯಾವ ಲಿಪಿಯಲ್ಲಿ ಬರೆಯಲು ಹೋದರೂ ಅದು ಹವಾಯಿಯ ಹೆಸರನ್ನೇ ಬದಲಿಸಿಬಿಡುತ್ತದೆ. ಹ್ವೆಇಇ ಎಂದು ಬರೆದರೂ ಅರೆಸತ್ಯ ಅಥವಾ ಅಸತ್ಯವೇ ಅಚ್ಚಾಗುತ್ತದೆ. ಎಸ್ಕಿಮೊ ಭಾಷೆಯಲ್ಲಿ ಹಿಮಪಕಳೆ ಎಂಬುದಕ್ಕೆ ೫೨ ವಿಭಿನ್ನ ಪದಗಳಿವೆ. ಅಲ್ಲೇ ಬದುಕುವ ಅವರಿಗೆ ಹಿಮಕಣಗಳ ಸೂಕ್ಷ್ಮ ವ್ಯತ್ಯಾಸವೂ ಅತ್ಯಂತ ಮಹತ್ವದ್ದಾಗಿರುತ್ತದೆ. ಕಾಲಾಹಾರಿ ಮರುಭೂಮಿಯ ಭಾಷೆಯನ್ನು ಲಿಪಿಗೆ ಇಳಿಸಲಂತೂ ಸಾಧ್ಯವೇ ಇಲ್ಲ. ಅವರು ಮಾತಾಡುವಾಗ ಪ್ರತಿ ಪದದಲ್ಲೂ ಪಕ್ಷಿಗಳ ಕ್ಳಕ್, ಹಲ್ಲಿಯ ಚ್ಲೊಚ್, ಲಟಿಗೆ ಮುರಿಯುವ (?) ಸದ್ದು ಇರುತ್ತದೆ. ಆಸ್ಟ್ರೇಲಿಯಾದ ಮೂಲ ನಿವಾಸಿಗಳ ದಾಮಿನ್ ಭಾಷೆಯಲ್ಲಿ ಅವನು, ಅವಳು, ಅವರು ಅದು ಮುಂತಾದ ಪದಗಳೇ ಇಲ್ಲ. ನಾನು ಮತ್ತು ನಾನಲ್ಲ ಎಂಬ ಎರಡೇ ಬಗೆಗಳಿವೆ. ಅಂಥ ಭಾಷೆಗಳನ್ನು ಇಂಗ್ಲಿಷ್‌ನಲ್ಲಿ ವೈಲ್ಡ್ ಲ್ಯಾಂಗ್ವೇಜಿಸ್ ಎನ್ನುತ್ತಾರೆ. ಅದನ್ನು ವನ್ಯಭಾಷೆ ಎಂದು ಕನ್ನಡದಲ್ಲಿ ತರ್ಜುಮೆ ಮಾಡುವುದೂ ತಪ್ಪಾಗುತ್ತದೆ. ವನ್ಯ ಎಂದಾಕ್ಷಣ ವನ ಅಥವಾ ಕಾಡುಗಳಿಗೆ ಸಂಬಂಧಿಸಿದ್ದು ಎಂಬ ಅರ್ಥ ಬರುತ್ತದೆ. ಮರುಭೂಮಿಯ ನಿವಾಸಿಗಳು, ಹಿಮವಾಸಿಗಳು ಅಥವಾ ಜಲವಾಸಿಗಳೆಲ್ಲ ಈ ವ್ಯಾಪ್ತಿಯಿಂದ ಹೊರಕ್ಕೇ ಉಳಿಯುತ್ತವೆ.

ನಾವೇ ನಿಸರ್ಗದಿಂದ ಹೊರಕ್ಕೆ ಉಳಿಯಲು ಹೊರಟಿದ್ದೇವೆ. ನಮ್ಮ ಜೇನು ಕುರುಬರು, ಸೋಲಿಗರು, ಕುಣಬಿಗಳ ಮಕ್ಕಳನ್ನೇ ನೋಡಿ: ಅವರಿದ್ದಲ್ಲಿ ಶಾಲೆ ಬಂದಿದ್ದೇ ತಡ, ಕನ್ನಡ ಅಆಇಈ ಆರಂಭವಾಗಿದ್ದೇ ತಡ, ಕಾಡಿನ ಸಂಪರ್ಕ ಕಮ್ಮಿಯಾಗಿ, ಮನೆಭಾಷೆ ಕಮ್ಮಿಯಾಗಿ, ಹಕ್ಕಿಪಕ್ಕಿ, ಹುಳಹುಪ್ಪಟೆ, ಬೇರುನಾರುಗಳ ಹೆಸರುಗಳೆಲ್ಲ ಮಿದುಳಿನಿಂದ ಮಾಯವಾಗುತ್ತವೆ. ಮನೆಯೊಳಗೆ ಅಮೃತಾಂಜನ, ಕಾಲ್ಗೇಟು, ಕ್ರೋಸಿನ್ನು, ಕಾಂಡಮ್ಮು ಕಾಲಿಟ್ಟಿದ್ದೇ ತಡ, ನಾಟಿ ಔಷಧ ಮೂಲಿಕೆಗಳು ಹಿತ್ತಲಲ್ಲಿ ಕಾಲಿಗೆ ತೊಡಕಿದರೂ ಅಪರಿಚಿತವಾಗುತ್ತವೆ. ಹಾಡಿಯ ಮೂಲಜ್ಞಾನ ಅಳಿಸಿ ಹೋಗುತ್ತದೆ. ಇನ್ನು ಇಂಗ್ಲಿಷ್ ಸ್ಕೂಲ್ ಬಂದರಂತೂ ಈಚಲು, ನಿಸ್ರಿ ಜೇನು, ಕಾಸರಕ, ಹಾವಸೆಯಂಥ ಕನ್ನಡ ಪದಗಳೂ ವಿದ್ಯಾರ್ಥಿಯ ಪಾಲಿಗೆ ನಾಪತ್ತೆಯಾಗುತ್ತವ. ಅವರಿದ್ದ ಹಾಡಿಗೆ ಹೊಸದಾಗಿ ರಸ್ತೆ ಬಂದರಂತೂ ಬಿಡಿ; ಜೇನು, ಕಣಿಲೆ, ಎಡ್ಡ, ಧೂಪ, ಹಳ್ಳ, ಮರಳು, ಮರಮಟ್ಟು ಸಮೇತ ಊರಿನ ಜನರನ್ನೂ ಕೊನೆಗೆ ಅದು (ಮಹಾಶ್ವೇತಾ ದೇವಿಯವರು ಹೇಳುವಂತೆ) ಇಡಿಇಡೀ ಹಾಡಿಯನ್ನೂ ನಾಡಿಗೆ ಸಾಗಿಸಿಬಿಡುತ್ತದೆ.

ಇಡೀ ಜಗತ್ತೇ ಹೀಗೆ ಈಗ ನಗರಮುಖಿ ಆಗಿರುವಾಗ ಮೂಲಜನಾಂಗದ ಅಷ್ಟಿಷ್ಟು ಪರಿಕರಗಳನ್ನೇನೊ ತಂದು ನಾವು ಜಾನಪದ ಮ್ಯೂಸಿಯಮ್ಮಿನಲ್ಲಿ ತಂದಿಡಬಹುದು. ಭಾಷೆಯನ್ನು ಹೇಗೆ ತರೋಣ? ಆ ಭಾಷೆಯ ಅದ್ಭುತ ಗಾದೆಗಳನ್ನು, ನಾಣ್ಣುಡಿಗಳನ್ನು, ಹಾಡುಗಳನ್ನು, ನಿಸರ್ಗ ಜಾಣ್ಮೆಯನ್ನು, ಬೈಗುಳಗಳನ್ನು, ತತ್ವಾದರ್ಶಗಳನ್ನು ಎಲ್ಲಿಡೋಣ? ಹೆಸರಾಂತ ಪತ್ರಕರ್ತ ಪಿ. ಸಾಯಿನಾಥ್ ಅವರ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ ಸಂಸ್ಥೆ ಅದನ್ನೇ ಒಂದು ದೀಕ್ಷೆಯಂತೆ, ಗ್ರಾಮೀಣ ಭಾರತದಲ್ಲಿ ಕಾಣೆಯಾಗುತ್ತಿರುವ ಧ್ವನಿ, ಚಿತ್ರ, ಕಥನ ಎಲ್ಲವನ್ನೂ ಕಾಪಿಡುವ ವ್ಯವಸ್ಥೆ ಮಾಡುತ್ತಿದೆ. ಈ ಲೇಖನದ ಆರಂಭದಲ್ಲಿ ಬಂದ ಒಡಿಶಾ, ತ್ರಿಪುರಾ ಉದಾಹರಣೆ ಅವರದ್ದೇ. ಸರಕಾರದ ಅಥವಾ ಕಾರ್ಪೊರೇಟ್ ಕಂಪನಿಗಳ ನೆರವಿಲ್ಲದೆ ಜನರ ದುಡ್ಡಿನಿಂದಲೇ ಬೆಳೆಯುತ್ತಿರುವ ಈ ಸಂಸ್ಥೆಯ ಚಟುವಟಿಕೆಗಳನ್ನು ನೋಡುವುದಾದರೆ, ಅಷ್ಟಿಷ್ಟು ನೆರವು ನೀಡಲು ಬಯಸಿದರೆ ‘ruralindiaonline’ ಎಂಬ ಜಾಲತಾಣಕ್ಕೆ ಭೇಟಿ ನೀಡಬಹುದು.

ಅದೇನೊ ಉತ್ತಮ ಕೆಲಸವೇ ಹೌದು. ಆದರೆ ಗತಿಸಲಿರುವ ಭಾಷೆಗೆ ಅದು ಹೊಸ ಚೈತನ್ಯ ಕೊಡಲಾರದು. ಅದಕ್ಕೆ ಬೇರೆಯದೇ ಬಗೆಯ ಪ್ರಯತ್ನಗಳು ಬೇಕು. ನಿಕರಾಗುವಾದ ಕಡಲಂಚಿನ ಜನರು ರಾಮಾ ಭಾಷೆಯಲ್ಲಿ ಮಾತಾಡುತ್ತ ಬಾಳೆ, ಪಪ್ಪಾಯಾ, ಜೀಗುಜಿ ಮತ್ತು ಅಡಿಕೆಯನ್ನು ಹೋಲುವ ಪೆಜಿಬಾಯೆ ಬೆಳೆಯುತ್ತ ಹಾಯಾಗಿದ್ದಾಗ ಕ್ರಿಶ್ಚಿಯನ್ ಮಿಶನರಿಗಳು ಬಂದರು. ಚರ್ಚ್ ಸ್ಥಾಪಿಸಿ, ತಮ್ಮ ದೇವರನ್ನೂ ಇಂಗ್ಲಿಷ್ ಶಿಕ್ಷಣವನ್ನೂ ಹೇರುತ್ತ ಕೊನೆಕೊನೆಗೆ ರಾಮಾ ಭಾಷೆ ಮಾತಾಡುವವರ ಸಂಖ್ಯೆ ೩೦ಕ್ಕೆ ಇಳಿಯಿತು. ಮೈಕೊಡವಿ ಎದ್ದು ಅಲ್ಲಿನವರು ೧೯೮೫ರಲ್ಲಿ ರಾಮಾ ಉಳಿಸಿ ಎಂಬ ಚಳವಳಿ ಕಟ್ಟಿ ಈಗ ಆ ಭಾಷೆಗೆ ಬದುಕಿಬಂದ ಭಾಷೆ ಎಂಬ ಹಣೆಪಟ್ಟಿ ಕೊಡಲಾಗಿದೆ.

ವಿಶ್ವಸಂಸ್ಥೆಯ ಯುನೆಸ್ಕೊ ಘಟಕ ಅಂಥ ವಿವಿಧ ಸಾಧ್ಯತೆಗಳನ್ನು ಚರ್ಚಿಸಲೆಂದೇ https://en.iyil2019.org/ ಎಂಬ ಜಾಲತಾಣವನ್ನು ಸೃಷ್ಟಿಸಿದೆ. ಆಸಕ್ತರು ವರ್ಷವಿಡೀ ಮೊಗೆಯಬಹುದಾದಷ್ಟು ಮಾಹಿತಿ ಸಂಪತ್ತು ಅಲ್ಲಿದೆ. ಪ್ರಪಂಚದ ಯಾವ ಭಾಷೆಯನ್ನಾದರೂ ಕಲಿಸಬಹುದಾದ ಎಸ್ಪಿಕಿಟ್ ಕೂಡ ಇದೆ.

ಹಾಗೆ ನೋಡಿದರೆ ಒಂದು ನಾಟಿಭಾಷೆಯನ್ನು ಉಳಿಸುವ ಕೆಲಸಕ್ಕೆ ಎಷ್ಟೊಂದು ಪರಿಕರಗಳು ಈಗ ನಮ್ಮ ಕೈಗೆ ಬಂದಿವೆ. ಸಮುದಾಯ ರೇಡಿಯೊಗಳು ಬಂದಿವೆ. ಅಜ್ಜ-ಅಜ್ಜಿಯರ ಕತೆಗಳನ್ನು ಅವರ ಬಾಯಿಂದಲೇ ಕೇಳುವ ವ್ಯವಸ್ಥೆ ಬಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಗುಂಪುಚರ್ಚೆ ಸಲೀಸಾಗಿದೆ. ಬುಡಕಟ್ಟು ಜನರ ಬದುಕನ್ನು, ಅವರ ನಾಟಿಜ್ಞಾನವನ್ನು ದಾಖಲಿಸಿ ಸಂರಕ್ಷಿಸುವ ಕೆಲಸ ಹಿಂದೆಂದಿಗಿಂತ ಸುಲಭವಾಗಿದೆ. ಆದರೆ ಉಲ್ಟಾ ಆಗುತ್ತಿದೆ. ಅವರ ನಿಸರ್ಗ ಜ್ಞಾನವನ್ನು ದೋಚಲೆಂದು ಬಹುರಾಷ್ಟ್ರೀಯ ಕಂಪನಿಗಳ ದಲ್ಲಾಳಿಗಳು ಅಂಥ ಸಾಧನಗಳನ್ನು ಬಳಸುತ್ತಾರೆ. ಅಥವಾ ಆ ಕೆಲಸಕ್ಕೆ ಬುಡಕಟ್ಟು ಜನರನ್ನೇ ಬಳಸುತ್ತಾರೆ. ಅಂಥ ಖೂಳರ ಕತೆ ಹಾಗಿರಲಿ, ನಮ್ಮವರ ಕತೆ ಕೇಳಿ: ಅಂಡಮಾನ್ ದ್ವೀಪದಲ್ಲಿ ಬಟ್ಟೆಯಿಲ್ಲದೆ ಓಡಾಡುವ ಜರಾವಾಗಳನ್ನು ನೋಡಲೆಂದು ಪ್ರವಾಸಿಗಳ ದಂಡೇ ಧಾವಿಸುತ್ತಿದೆ. ಗೇರುಸೊಪ್ಪ ಕಾಡಿನ ಸಂರಕ್ಷಿತ ತಾಣಗಳಲ್ಲಿರುವ ಸಿಂಗಳೀಕಗಳನ್ನು ತಮ್ಮತ್ತ ಸೆಳೆಯಲೆಂದು ಸೇಬು, ಬಿಸ್ಕಿಟ್ ಎಸೆಯುವ ಪ್ರವಾಸಿಗಳ ಹಾಗೆ ಅಂಡಮಾನ್ ಹೆದ್ದಾರಿಯಂಚಿನ ಪೊದೆಗಳಿಂದ ಜರಾವಾಗಳನ್ನು ಹೊರಕ್ಕೆ ಆಕರ್ಷಿಸಲೆಂದೇ ಕುರ್ಕುರೆ, ಗುಟ್ಕಾ ಎಸೆಯಲಾಗುತ್ತಿದೆ. ನಗ್ನ ಹೆಂಗಸರ ವಿಡಿಯೊ ಚಿತ್ರಣ ಮಾಡಿ ಗ್ರುಪ್‌ಗಳಿಗೆ ಹಂಚಲಾಗುತ್ತಿದೆ. ಸಾಯಬಿದ್ದವರನ್ನು ದೋಚಲೆಂದೇ ಅಪಘಾತ ಸಂಭವಿಸಿದ ಜಾಗಕ್ಕೆ ದೌಡಾಯಿಸುವವರು ಇರುತ್ತಾರಲ್ಲ, ಹಾಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.