ಒಂದು ಕಾಲಕ್ಕೆ ಮೀರಜ್ ಎಂದರೆ ದೊಡ್ಡಾಸ್ಪತ್ರೆಯ ಪರ್ಯಾಯ ಹೆಸರು. 19ನೇ ಶತಮಾನದಲ್ಲಿ ಒಬ್ಬ ಕ್ರೈಸ್ತ ಪಾದ್ರಿ ಆರಂಭಿಸಿದ ಈ ಆಸ್ಪತ್ರೆಗೆ ರೋಗಿಯನ್ನು ಒಯ್ಯಲಾಗಿದೆ ಎಂದರೆ ಸಾವು ಬದುಕಿನ ನಡುವೆ ಕದನವೆಂದೇ ಅರ್ಥ. ಮಿರ್ಜಿ ಅಣ್ಣಾರಾಯರ ‘ನಿಸರ್ಗ’ ಕಾದಂಬರಿಯಲ್ಲಿ ಪಾತ್ರಗಳು ಈ ದವಾಖಾನೆಗೆ ಹೋಗುತ್ತವೆ. ಅಣ್ಣಾರಾಯರ ಶೇಡಬಾಳವು ಮೀರಜಿಗೆ ತೀರ ಸನಿಹ. ಕರ್ನಾಟಕ ಗಡಿಗೆ ಹತ್ತಿರವಾಗಿರುವ ಮಹಾರಾಷ್ಟ್ರದ ಶಹರಗಳಲ್ಲಿ ಕೊಲ್ಹಾಪುರ, ಸೊಲ್ಲಾಪುರ ಬಿಟ್ಟರೆ ಮೀರಜ್ ಮೂರನೆಯದು. ಇಲ್ಲಿ ಕನ್ನಡ ಪತ್ರಿಕೆಗಳು ಧಾರಾಳ; ಕನ್ನಡ ಮಾತುಗರು ಹೆಜ್ಜೆಗೊಬ್ಬರಂತೆ; ಇಲ್ಲಿನ ರೈಲ್ವೆ ಹಳಿಗಳು ಉತ್ತರ ಕರ್ನಾಟಕವನ್ನು ಬೆಸೆದಿವೆ. ಮೀಟರ್ ಗೇಜಿದ್ದ ಕಾಲದಲ್ಲಿ ಕರ್ನಾಟಕದ ಮಂದಿ ಮುಂಬೈ ಹೋಗಬೇಕಾದರೆ ಮೀರಜಿನಲ್ಲಿಳಿದು ಬ್ರಾಡ್ಗೇಜಿನಲ್ಲಿ ಬೇರೆ ರೈಲು ಹಿಡಿಯಬೇಕಿತ್ತು. ‘ಜಂಕ್ಷನ್’ ಕೂಡುದಾಣ ಮಾತ್ರವಲ್ಲ, ಹಲವು ದಿಕ್ಕಿನಿಂದ ಬಂದವರನ್ನು ಹೊಸಪಥಕ್ಕೆ ಹಚ್ಚುವ ಚಿಮ್ಮುಹಲಗೆ ಕೂಡ. ಹಾಗೆ ಶಹರವಾಗಿ ಮೀರಜ್ ಹಲವು ವಲಸಿಗರ ಬಾಳ ಪಥವನ್ನು ಬದಲಿಸಿತು. ಅವುಗಳಲ್ಲಿ ಬರೋಡಾದಿಂದ ಬಂದ ಕಿರಾಣ ಘರಾಣೆಯ ಉಸ್ತಾದ್ ಅಬ್ದುಲ್ ಕರೀಂಖಾನರದೂ (1872-1937) ಒಂದು. ಉತ್ತರ ಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತ ಹರಡಿದ ಕೀರ್ತಿಯಲ್ಲಿ ಖಾನ್ಸಾಹೇಬರಷ್ಟೇ ಪಾಲು ಮೀರಜ್- ಹುಬ್ಬಳ್ಳಿ ರೈಲುಹಳಿಗೂ ಸಲ್ಲಬೇಕು. ರೈಲಿನಲ್ಲಿ ಸಂಗೀತವಾದ್ಯಗಳನ್ನು ಕೆಡದಂತೆ ಸಾಗಿಸಲು ಸುಲಭ. ಮೀರಜಿನಲ್ಲಿ ಕುಳಿತು ಕರೀಂಖಾನರು ಕಛೇರಿ ಕೊಡಲು ಮೈಸೂರು ದಸರಾಕ್ಕೊ ತಮಗೆ ಪ್ರಿಯರಾಗಿದ್ದ ಹುಬ್ಬಳ್ಳಿಯ ಸಿದ್ಧಾರೂಢಸ್ವಾಮಿಯವರನ್ನು ಕಾಣುವುದಕ್ಕೊ ಸಲೀಸಾಗಿ ಬಂದುಹೋಗುತ್ತಿದ್ದರು.

ಪುಣೆ, ಮುಂಬೈಗೆ ಹೋಗುವಾಗ ಮೀರಜಿನ ಮೇಲೆ ಹತ್ತಾರು ಬಾರಿ ಹಾದಿರುವೆ. ಇಳಿದು ಊರು ನೋಡಿರಲಿಲ್ಲ. ಈ ಸಲ ಮುದ್ದಾಮಾಗಿ ನಾನು- ಬಾನು ಮೀರಜಿನ ಸಿತಾರೆವಾಲೆ ಗಲ್ಲಿಯನ್ನು ನೋಡಲೆಂದು ಹೋದೆವು. ಸೂಫಿ ಸಂತ ಸೈಯದ್ ಶಮ್ಸುದ್ದೀನ್ ಸಾಹೇಬನ ಉರುಸೂ ನಡೆದಿತ್ತು. ದರ್ಗಾದ ಬಗಲಲ್ಲೇ ಕರೀಮಖಾನರ ಸಮಾಧಿಯಿದೆ- ದೆಹಲಿಯ ನಿಜಾಮುದ್ದೀನ್ ದರ್ಗಾದಲ್ಲಿ ಹಿಂದೂಸ್ತಾನಿ ಸಂಗೀತದ ಪಿತಾಮಹ ಅಮೀರ್ಖುಸ್ರೂ ಸಮಾಧಿಯಿರುವಂತೆ. ಸಂಗೀತವು ಸಂಪ್ರದಾಯಸ್ಥ ಮುಸ್ಲಿಮರಿಗೆ ನಿಷಿದ್ಧ; ಆದರೆ ಹಿಂದೂಸ್ತಾನಿ ಸಂಗೀತವನ್ನು ಮುಸ್ಲಿಮರಿಲ್ಲದೆ ಕಲ್ಪಿಸಿಕೊಳ್ಳುವುದು ಅಸಾಧ್ಯ. ಈ ನಿಷಿದ್ಧವನ್ನು ಆರಾಧನ ಮಾಧ್ಯಮವಾಗಿಸಿದ್ದು ಸೂಫಿಗಳು. ದರ್ಗಾಗಳನ್ನೂ ಅಲ್ಲಿಗೆ ಬರುವ ಸರ್ವಧರ್ಮಗಳ ಜನರನ್ನೂ ಕಾವ್ಯ, ಹರಕೆ, ಅನುಭಾವಗಳು ಮಾತ್ರವಲ್ಲ, ಸಂಗೀತ ರಾಗಗಳೂ ಬಂಧಿಸಿದವು. ದರ್ಗಾಗಳಲ್ಲಿ ಹಾಡಲು ತಲೆಮಾರುಗಳಿಂದ ಬಂದ ಆಸ್ಥಾನ ಖವಾಲರಿರುತ್ತಾರೆ; ಆದರೆ ನಾಡಿನ ಗಾಯಕರೆಲ್ಲ ಬಂದು ಸಂತನೊಬ್ಬನ ಉರುಸಿನಲ್ಲಿ ಗಾಯಕನೊಬ್ಬನ ಸ್ಮೃತಿಯಲ್ಲಿ ಹಾಡುವುದು ಮೀರಜಿನಲ್ಲಿ ಮಾತ್ರ. ಇಲ್ಲಿ ಕರೀಂ ಖಾನರ ಜತೆ ಭಾತಖಂಡೆ, ಫಲುಸ್ಕರ್, ಹೀರಾಬಾಯಿ ಬಡೋದೆಕರ್ ಇತ್ಯಾದಿ ಸಂಗೀತಗಾರರೂ ವಾಸವಿದ್ದರು.

ನಾವಿಬ್ಬರೂ ಸ್ಟೇಶನ್ನಿಗಿಳಿದು ದರ್ಗಾಕ್ಕೆ ನಡೆಯುತ್ತ ಹೊರಟೆವು. ದೂಳು ಮತ್ತು ಬಿಸಿಲುಗಳಿಂದ ಅಲಂಕೃತವಾಗಿದ್ದ ಹಾದಿ; ಉದ್ದಕ್ಕೂ ಸೀಬೆ, ಬಾಳೆ, ದ್ರಾಕ್ಷಿ ಮಾರುವ ಹೆಂಗಸರು; ರಾಜಸಂಸ್ಥಾನಿಕರು ಕಟ್ಟಿದ ವಿಶಿಷ್ಟ ಕಟ್ಟಡಗಳು; ಶಿವಾಜಿ ಜಯಂತಿಯ ಭಗವಾ ಧ್ವಜಗಳು. ಶಿವಾಜಿಯನ್ನು ಅಸ್ಮಿತೆ ಮಾಡಿಕೊಂಡಿರುವ ಮರಾಠಿಗರಲ್ಲಿ ಮಧ್ಯಕಾಲೀನ ಮೊಘಲರ ಆದಿಲಶಾಹಿಗಳನ್ನು ಕುರಿತು ಎದುರಾಳಿ ಭಾವ ತುಂಬಲಾಗಿದೆ. ಆದರೆ ಸಂಗೀತದ ವಿಷಯಕ್ಕೆ ಬಂದರೆ ಅವರು ಇತಿಹಾಸದ ಹೊರೆಯನ್ನಿಳಿಸಿ ನಾದವನ್ನು ತಲೆಯ ಮೇಲಿರಿಸಿಕೊಳ್ಳುವರು; ಗಾಯಕರನ್ನು ದೇವರಂತೆ ಆರಾಧಿಸುವರು.

ದರ್ಗಾ ರಸ್ತೆಯಲ್ಲಿ ಸಿಗುವ ಸರ್ಕಲಿನ ಮೂಲೆಗೆ ಕರೀಂಖಾನರ ಪ್ರತಿಮೆ ಕಂಡಿತು. ಪುಟ್ಟಮುಖ; ಗಡಿಯಾರ ಸರಪಳಿ ಸಿಕ್ಕಿಸಿದ ಕ್ಲೋಸ್ ಕಾಲರ್ ಕೋಟು; ಮೊಗವನ್ನು ಮತ್ತಷ್ಟು ಕಿರಿದುಗೊಳಿಸುವಂತೆ ತಲೆಯ ಮೇಲೆ ‘ಭಾರೀ ಜರದ ವಾರೀ ರುಮಾಲು’ ಪಗಡಿ. ಪ್ರತಿಮೆಯ ಕೆಳಗೆ ಕೊರೆದ ಹೆಸರುಗಳನ್ನು ಬಾಗಿ ಓದಿದೆ. ನೆಹರೂ ಸರ್ಕಾರದಲ್ಲಿ ಪ್ರಸಾರ ಮಂತ್ರಿಯಾಗಿದ್ದ ಕೇಸ್ಕರ್ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಹೀರಾಬಾಯಿ, ಬಾಲಕೃಷ್ಣ ಬುವಾ, ಕಪಿಲೇಶ್ವರಿ, ಭೀಮಸೇನ ಜೋಶಿ ಮೊದಲಾದವರು ಭಾಗವಹಿಸಿದ್ದಾರೆ. ಕಪಿಲೇಶ್ವರಿ, ಖಾನ್ ಸಾಹೇಬರ ಸಮಾಧಿಯನ್ನು ಅಮೃತಶಿಲೆಯಲ್ಲಿ ನಿರ್ಮಿಸಿದವರು. ಸವಾಯಿ ಗಂಧರ್ವ, ಕೇಸರಬಾಯಿ ಕೇಸರ್ಕರ್, ರಾಮಭಾವು ರುಕಡೀಕರ್, ಸುರೇಶಮಾನೆ, ಹೀರಾಬಾಯಿ-ಖಾನ ಸಾಹೇಬರ ಶಿಷ್ಯರು; ಸವಾಯಿ ಗಂಧರ್ವರು ಭೀಮಸೇನ ಹಾಗೂ ಗಂಗೂಬಾಯಿಯವರ ಗುರುಗಳು; ಕೊನೆಯವರಿಬ್ಬರು ಖಾನ್ ಸಾಹೇಬರ ಮಕ್ಕಳು.

19ನೇ ಶತಮಾನದಲ್ಲಿ ಕಟ್ಟಲಾಗಿರುವ ದೊಡ್ಡ ದರ್ಗಾ. ಸುತ್ತುಗಟ್ಟಿರುವ ಬಿಡದಿ ಮನೆಗಳಲ್ಲಿ ನಾನಾ ಕಡೆಯಿಂದ ಬಂದು ಬೀಡುಬಿಟ್ಟ ಜನ; ಲೋಬಾನ ಮತ್ತು ಅಡುಗೆ ಒಲೆಯ ಹೊಗೆಗಳ ಜತೆ ಸುಳಿಯುವ ಮಸಾಲೆಗಂಪು; ದರ್ಗಾದೆದುರು ವಿವಿಧ ಶಾಖೆಗೆ ಸೇರಿದ ಫಕೀರರ ಅಖಾಡಗಳು. ಕಪ್ಪುವಸ್ತ್ರಧಾರಿ ರಫಾಯಿ ಫಕೀರನು ನಾವು ಬಾಬಾಬುಡನಗಿರಿ ಸೀಮೆಯವರೆಂದು ತಿಳಿದು ಚಹ ಕೊಟ್ಟು ಸತ್ಕರಿಸಿದನು. ದರ್ಗಾದಲ್ಲಿ ಕೇಳಿಬರುತ್ತಿದ್ದ ಸಂಗೀತ ಆಲಿಸುತ್ತ, ಹೂವು ಸಕ್ಕರೆ ಏರಿಸಿ ಅಗ್ಗಿಷ್ಟಿಕೆಯಿಂದ ಬೂದಿಚೀಟು ಒಯ್ಯುತ್ತಿದ್ದ ನಾನಾ ನಮೂನೆ ಭಕ್ತರನ್ನು ನೋಡುತ್ತ ದಿನಗಳೆದೆವು. ವಿಶೇಷವೆನಿಸಿದ್ದು ಮೀರಜ್ ಸೀಮೆಯ ಲಿಂಗಾಂತರಿಗಳು ಬಂದು ಫಾತೆಹಾ ಮಾಡಿಸಿದ್ದು. ಈ ಲಿಂಗಾತೀತ ಸಮುದಾಯ ಜಾತ್ಯತೀತ ಕೂಡ. ಎಲ್ಲ ಧರ್ಮದವರೂ ಇರುವ ಲಿಂಗಾಂತರಿಗಳು ಧರ್ಮಾತೀತರಾದ ಸೂಫಿಗಳಿಗೆ ನಡೆದುಕೊಳ್ಳುವುದು ಅರ್ಥಪೂರ್ಣ ಎನಿಸಿತು.

ಬಿಸಿಲಿಳಿಸಿಕೊಂಡು ಸಂಗೀತವಾದ್ಯ ತಯಾರಿಸುವ ಪ್ರಸಿದ್ಧ ಸಿತಾರವಾಲೆ ಗಲ್ಲಿಗೆ ಹೋದೆವು. ಲಖನೌ, ಕೊಲ್ಕತ್ತಾ ಬಿಟ್ಟರೆ ಸಂಗೀತವಾದ್ಯ ತಯಾರಿಸುವ ಮೂರನೇ ಊರು ಮಿರಜ. ಈ ಗಲ್ಲಿಯ ಮೂಲ ಹೆಸರು ಮಹಾತ್ಮಗಾಂಧಿ ರಸ್ತೆ. ಇದು ದರ್ಗಾದಿಂದ ಕೆಳಗಿರುವ ಶನಿವಾರಪೇಟೆಯಲ್ಲಿದೆ. ಭಾರತದ ಬಹುತೇಕ ಮುಸ್ಲಿಮರು ಕೆಳಸ್ತರದ ಜಾತಿಗಳಿಂದ ಹೋದವರು. ಹೀಗಾಗಿ ಪಾರಂಪರಿಕ ಕೈಕಸುಬು ಹಾಗೂ ವ್ಯಾಪಾರಗಳ ಜತೆಗಿರುವಷ್ಟು ನಂಟು ಅವರಿಗೆ ಜಮೀನಿನ ಜತೆಯಿಲ್ಲ. ಇದುವೇ ಅವರನ್ನು ಸ್ಥಳಬದ್ಧವಾಗದೆ ಚಲಿಸುವ, ಯಾವುದೇ ಕೆಲಸ ಎಲ್ಲೇ ಸಿಕ್ಕರೂ ತೊಡಗಿಕೊಳ್ಳುವ ಸೃಜನಶೀಲ ಅಭದ್ರತೆಗೂ ಕಾರಣವಾಗಿದೆ. ಇದನ್ನು ಎಲ್ಲಿಂದಲೊ ವಲಸೆ ಬಂದಿರಬಹುದಾದ ಸಿತಾರವಾಲೆಗಳ ಬದುಕಲ್ಲೂ ಕಾಣಬಹುದು.

ಸಿತಾರವಾಲೆ ಗಲ್ಲಿಯ ವರ್ಕ್ಶಾಪ್ಗಳಲ್ಲಿ ವೀಣೆ, ಹಾರ್ಮೋನಿಯಂ, ತಾನ್ಪುರ, ಸಿತಾರ್, ಸುರಬಹಾರ್ ಬೀನ್, ದಿಲ್ರುಬಾ; ತಬಲ, ತಬಲಿ, ಡಗ್ಗ, ಢೋಲ್ ಢೋಲಚಿಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಅತಿ ಹೆಚ್ಚು ಭಜನಾ ವೀಣೆಗಳಿದ್ದವು. ಫಂಡರಾಪುರದ ವಾರಕರಿ ಭಕ್ತರು ಹೆಗಲಲ್ಲಿ ನೇತು ಹಾಕಿಕೊಂಡು ನುಡಿಸುತ್ತ ಅಭಂಗ ಹಾಡುವ ತಂತೀವಾದ್ಯವಿದು. ನೆಲದ ಮೇಲೂ ದೂಳು ತುಂಬಿದ ಕಪಾಟುಗಳಲ್ಲೂ ರಿಪೇರಿಗೆಂದು ಬಂದಿಳಿದ ಬುರುಡೆಯೊಡೆದ ತಂತಿ ಹರಿದ ಚರ್ಮ ಕಿತ್ತ ವಾದ್ಯಗಳು- ಸರ್ಕಾರಿ ದವಾಖಾನೆಯಲ್ಲಿ ಬೆಡ್ಡು ಸಿಗದೆ ನೆಲದ ಮೇಲೆ ಅಡ್ಡಾಗುವ ರೋಗಿಗಳಂತೆ ಪವಡಿಸಿದ್ದವು. ಅಂಗಡಿಗಳ ಮೇಲಿರುವ ಮಾಳಿಗೆಗಳಲ್ಲಿ ಕುಶಲಕರ್ಮಿಗಳ ಸಂಸಾರಗಳಿದ್ದವು. ಮನೆ- ಅಂಗಡಿ ಜತೆಗಿರುವುದರಿಂದ ವಾದ್ಯ ತಯಾರಿಕೆಯಲ್ಲಿ ಸದಸ್ಯರೆಲ್ಲ ಮರ ಕೆತ್ತುವ, ತಂತಿ ಕೂಡಿಸುವ, ಚರ್ಮ ಹೊದಿಸುವ, ನುಡಿಸಿ ನೋಡುವ ಕಾಯಕದಲ್ಲಿ ತೊಡಗಿದ್ದರು.

‘ಈ ಕೆಲಸದಲ್ಲಿ ಯಾವಾಗಿಂದ ತೊಡಗಿಕೊಂಡಿದ್ದೀರಿ?’ ಎಂದು ಕೇಳಿದೆ. ಕಲಾವಿದರು ‘ಖಚಿತವಾಗಿ ತಿಳಿಯದು. ಆರೇಳು ತಲೆಮಾರಿನ ಚರಿತ್ರೆಯಾದರೂ ಇದೆ’ ಎಂದರು. ಹಾಜಿ ಶೌಕತರ (75) ಅಂಗಡಿಯಲ್ಲಿ ಅವರ ಅಜ್ಜನ ದೊಡ್ಡ ಚಿತ್ರಪಟವಿತ್ತು. ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಹೋಲುವ ದಪ್ಪ ಮೀಸೆಯ ಪಗಡಿ ಸುತ್ತಿದ ಯಜಮಾನರು. ಅವರು ಹೊಸ ತಂತೀವಾದ್ಯ ಕಂಡುಹಿಡಿದವರು ಎಂಬ ವಿವರಣೆಯನ್ನೂ ಕೆಳಗೆ ಬರೆದಿತ್ತು. ‘ವ್ಯಾಪಾರ ಹೇಗಿದೆ?’ ಎಂದು ಕೇಳಲು ರಾಜು ಇಬ್ರಾಹಿಂ (50) ಹೇಳಿದರು: ‘ಖರೀದಿಗಾರರನ್ನು ದೇವರೇ ಕಳಿಸ್ತಾನೆ. ನಾವು ವಾದ್ಯ ಮಾಡ್ತೇವೆ. ಕಲಾವಿದರು ಅದರ ಮೂಲಕ ಕಲೆ ಸೃಷ್ಟಿಸ್ತಾರೆ. ಅವರಿಗೆ ಗೌರವ, ಧನ ಸಲ್ಲಬೇಕಾದ್ದು ನ್ಯಾಯ. ಆದರೆ, ವಾದ್ಯ ಸೃಷ್ಟಿಸುವ ನಮ್ಮನ್ನೂ ಸಮಾಜ ಗುರುತಿಸಬೇಕು. ನಾವೂ ದೇಶದ ಹೆಸರನ್ನು ಬೆಳಗಿಸಲು ಕಾರಣವಾಗಿದೀವಿ; ಸರ್ಕಾರವೇನೊ ತೆರಿಗೆ ಮಾಫಿ ಮಾಡಿದೆ. ಈ ಕಸುಬಿನಿಂದ ಜೀವನ ನಡೆಸಲು ಕಷ್ಟವಿಲ್ಲ. ಆದರೆ ಎತ್ತರಕ್ಕೆ ಹೋಗೋಕಾಗಲ್ಲ. ಮಿರಜದಲ್ಲಿ ಒಬ್ಬ ಗೌಂಡಿಗೆ ₹ 500 ಇದೆ; ನಾವು ಮನೆಮಂದಿಯೆಲ್ಲ ಸೇರಿ 10 ದಿನ ದುಡಿದು ಒಂದು ಸಿತಾರೊ, ವೀಣೆಯೊ ಮಾಡಿದರೆ ₹ 15 ಸಾವಿರ ಸಿಗುತ್ತದೆ. ಆಳಿಗೆ ₹ 300 . ಹಿಂಗಾಗಿ ಮಕ್ಕಳು ಆಟೊ ಓಡಿಸೋಕೆ ಹೋಗ್ತಾರೆ. ಕುಲಕಸುಬು ಒಲ್ಲೆ ಎನ್ನುತ್ತಾರೆ’ ಎಂದರು. ನಿಮ್ಮಲ್ಲಿ ಹೆಸರಾಂತ ಕಲಾವಿದರು ಯಾರೆನ್ನಲು ಶೆರಾಫತ್ ಭಾಯಿ ಎಂದರು.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಶೆರಾಫತ್ ಭಾಯಿ ತೀರಿಕೊಂಡಿದ್ದರು. ಸಿತಾರವಾಲೆಗಳಿಗೆ ಭಾರತದ ಬಹುತೇಕ ಗಾಯಕರ ಮಾಹಿತಿಯಿತ್ತು. ಕರ್ನಾಟಕದವರು ಎಂದೊಡನೆ ಬಾಲೇಖಾನ್ ಕುಟುಂಬದವರು ಮಿರಜಿಗೆ ಬಂದು ಉರುಸಿನಲ್ಲಿ ಸಂಗೀತ ಸೇವೆ ಸಲ್ಲಿಸುವುದನ್ನು ನೆನೆದರು.

‘ವಾದ್ಯ ರಿಪೇರಿಯಲ್ಲಿ ಆದಾಯವಿರಬೇಕು’ ಎಂದೆ. ‘ಉಂಟು. ತಾರು ಹರಿದರೆ ಕಲಾವಿದರೇ ಹಾಕಿಕೊಳ್ಳುವರು. ತುಂಬಾ (ಬುರುಡೆ) ಒಡೆದರೆ ನಮ್ಮಲ್ಲಿಗೇ ಬರಬೇಕು. ಚರ್ಮ ಹರಿದರೂ ನಾವೇ ಹಾಕಬೇಕು’ ಎಂದರು. ಚರ್ಮ, ಕಟ್ಟಿಗೆ, ತಂತಿ ಅವರ ಕಸುಬಿನ ಮುಖ್ಯ ಕಚ್ಚಾವಸ್ತುವಾಗಿದ್ದವು. ವಾದ್ಯ ತಯಾರಿಕೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಬಾನು ಕೇಳಿದಳು. ಸಿತಾರವಾಲೆಯವರು ಬಿದಿರಿನ ಮೊಳೆಗಳನ್ನು ತೋರಿಸುತ್ತ ‘ಮರದ ದಂಡಿಗೆಗೆ ಸೋರೆಬುರುಡೆ ಕೂಡಿಸುವಲ್ಲಿ ಇವು ಬಳಕೆಯಾಗುತ್ತವೆ. ಇವನ್ನು ಅವರು ಮಾಡುತ್ತಾರೆ’ ಎಂದರು. ಗಂಡಸರೇ ತುಂಬಿಕೊಂಡಿರುವ ಕಸುಬಿನಲ್ಲಿ ಮಹಿಳೆಯರ ಕೆಲಸ ಎದ್ದು ಕಾಣುವುದಿಲ್ಲ. ಆದರೆ, ಬೆಸೆವ ಕೊಂಡಿಗಳನ್ನು ಅವರೇ ಮಾಡುವುದು ಅರ್ಥಪೂರ್ಣವೆನಿಸಿತು.

ವಾದ್ಯಾಂಗಗಳ ಹೆಸರು ವಿಶಿಷ್ಟವಾಗಿದ್ದವು- ತುಂಬಾ, ತಾರ್, ಗೂಟಿ, ತಬಕಡಿ, ಶೆಗಡಾ, ಜವಾರಿ. ವಾದ್ಯದ ಎದೆಯ ಮೇಲೆ ತಾರುಗಳನ್ನು ಹಾಯಿಸುವ ಸೇತುವಿನಂತಿರುವ ಜವಾರಿಯನ್ನು ಎಲುಬಿನಿಂದ ಮಾಡಲಾಗುವುದು. ಕೂಡಲೇ ನನಗೆ ದೇಹದಿಂದ ಸಂಗೀತವಾದ್ಯ ಹುಟ್ಟುವ ರೂಪಕ ಕತೆ ನೆನಪಾದವು. ಎಲ್ಲಮ್ಮ ಕಾರ್ತವೀರ್ಯಾರ್ಜುನನ ದೇಹದಿಂದಲೂ, ಮರುಳಸಿದ್ಧ ಕೊಲ್ಲಾಪುರದ ಮಾಯಿಯ ಕಾಯದಿಂದಲೂ ವಾದ್ಯ ಮಾಡಿ ಬಾರಿಸುವ ಕತೆಗಳವು. ಎದುರಾಳಿಯನ್ನು ಕೊಂದು ಅಂಗಾಂಗದಿಂದ ವಾದ್ಯ ತಯಾರಿಸಿ ಬಾರಿಸುವ ವಿಜಯದ ಕಥನಗಳವು. ಆದರೆ, ಬಸವಣ್ಣ ತನ್ನ ಕಾಯವನ್ನು ದಂಡಿಗೆ, ಶಿರವನ್ನು ಬುರುಡೆ, ನರವನ್ನು ತಂತಿ ಮಾಡಿಕೊಂಡು ವಾದ್ಯ ತಯಾರಿಸಲು ಕೂಡಲ ಸಂಗಮನನ್ನು ಬೇಡುವುದರ ನೆಲೆಯೇ ಬೇರೆ. ದೇಹದ ಅವಯವಗಳು ವಾದ್ಯದ ಬಿಡಿಭಾಗಗಳಾಗಿ ವಾದ್ಯವೊಂದು ಸಿದ್ಧಗೊಳ್ಳುವ ಅಪೂರ್ವ ಚಿತ್ರ ಆ ವಚನದಲ್ಲಿದೆ.

ವಾದ್ಯದ ಮೂಲ ವಸ್ತುಗಳು ದೇಶದ ನಾನಾ ಕಡೆಯಿಂದ ಬರುತ್ತವೆ. ಲಖನೌ, ರಾಜಸ್ಥಾನಗಳಿಂದ ಜವಾರಿಗೆ ಬೇಕಾದ ಒಂಟೆಯೆಲುಬು; ಮುಂಬೈನಿಂದ ಉಕ್ಕಿನ ತಾರು; ಬಳ್ಳಾರಿಯಿಂದ ಕಟ್ಟಿಗೆ; ಚಿತ್ತಾರ ಬಿಡಿಸಲು ಕೇರಳದಿಂದ ಗಜದಂತ; ಫಂಡರಾಪುರ, ಅಕ್ಕಲಕೋಟೆಗಳಿಂದ ಸೋರೆಕಾಯಿ. ಎತ್ತಣ ಮರ ತಂತಿ ಎಲುಬು ಬುರುಡೆ? ಎತ್ತಣ ಮಿರಜ? ಎತ್ತಣ ಸಂಗೀತ? ಈ ವಿಸ್ಮಯ ಪರಿಭಾಷೆಯಲ್ಲಿ ತನ್ನ ಮತ್ತು ಗುಹೇಶ್ವರನ ಸಂಬಂಧ ವಿವರಿಸುವ ಅಲ್ಲಮ ಕೂಡ ವಾದ್ಯಕಾರ ಹಿನ್ನೆಲೆಯಿಂದ ಬಂದವನೇ.

ಅಂಗಡಿಯ ಜಂತಿಗೆ ದೊಡ್ಡ ದೊಡ್ಡ ಒಣಸೋರೆಗಳನ್ನು ನೇತು ಹಾಕಲಾಗಿತ್ತು- ಮಲೆನಾಡ ಮನೆಗಳಲ್ಲಿ ಬಣ್ಣದ ಸೌತೆಯನ್ನು ಕಟ್ಟಿದಂತೆ. ಸೋರೆಯನ್ನು ಭೀಮಾನದಿ ತೀರದ ಬುರುಡೆ ಬೆಸ್ತರು ತಮಗಾಗಿ ಬೆಳೆದುಕೊಳ್ಳುವ ಪದ್ಧತಿ ಮೊದಲಿಂದಲೂ ಇದ್ದು, ಅಲ್ಲಿಂದ ಸರಬರಾಜಾಗುತ್ತಿದೆ. ಸಾರಿನೊಳಗೆ ಹೋಳಾಗಿ ಹೊಟ್ಟೆ ತುಂಬಿಸುವ ತರಕಾರಿಯೊಂದು, ಕಲಾವಿದರ- ಸಾಧಕರ ಕೈಯಲ್ಲಿ ವಾದನವಾಗಿ ಶ್ರೋತೃಗಳ ಕಿವಿಗೆ ನಾದ ಹರಿಸುತ್ತಿದೆ. ಗುರುಪಂಥಗಳಲ್ಲಿ ಸಾಮಾನ್ಯ ವ್ಯಕ್ತಿ ದೀಕ್ಷೆ ಪಡೆದು ಸಾಧನೆಗೈದು ಅಸಾಧಾರಣ ರೂಪಾಂತರ ಪಡೆಯುವುದಕ್ಕೂ ಸೋರೆ ವಾದನವಾಗುವುದಕ್ಕೂ ಸಂಬಂಧವಿದೆ. ಹಸಿ ಮಣ್ಣು ಬೆಂದು ಘಟವಾದ್ಯವಾಗುವಲ್ಲೂ ಇದೇ ರೂಪಾಂತರವಿದೆ. ಬಸವಣ್ಣನ ವಚನದಲ್ಲಿರುವ ಕಾಯವೇ ಇಲ್ಲಿ ಘಟ. ಅಲ್ಲಮ ತಾಳೋಷ್ಠ ಸಂಪುಟವೆಂಬುದು ನಾದಬಿಂದು ಕಲಾತೀತ ಎನ್ನುವಾಗಲೂ ದೇಹಘಟದ ಅವಯವಗಳನ್ನೇ ಬಳಸುವನು. ವಾದ್ಯಗಳಲ್ಲಿ ಅಡಗಿರುವ ಕಾಯದ ಈ ರೂಪಾಂತರ ತತ್ವವು ಸಂಗೀತಕ್ಕೆ ಮಾತ್ರವಲ್ಲ, ಅನುಭಾವಕ್ಕೂ ಸಂಬಂಧಿಸಿದ್ದು. ವಾದ್ಯ ಮತ್ತು ದೇಹದ ಈ ಸಮೀಕರಣ ಜಗತ್ತಿನ ಹಲವು ಸಂಸ್ಕೃತಿಗಳಲ್ಲಿದೆ.

ಸಿನಿಮಾ ಹಾಡನ್ನು ಕೇಳುವಾಗ ನಮ್ಮೆದುರು ಥಟ್ಟನೆ ಎದುರು ನಿಲ್ಲುವವರು ಹಾಡುಗಾರರು. ಗೀತೆ ಬರೆದ ಕವಿಯಲ್ಲ; ಸಂಗೀತ ಒದಗಿಸಿದ ನಿರ್ದೇಶಕರಲ್ಲ; ಹಿನ್ನೆಲೆ ವಾದ್ಯ ನುಡಿಸಿದವರಲ್ಲ; ವಾದ್ಯ ತಯಾರಿಸಿದವರಂತೂ ಅಲ್ಲವೇ ಅಲ್ಲ. ಕನ್ನಡದಲ್ಲಿ ದಾನ ಕೊಟ್ಟು ಶಾಸನ ಹಾಕಿಸಿದ ದೊರೆಗಳ ಚರಿತ್ರೆ ಬಹಳಷ್ಟಿದೆ. ಆದರೆ, ಕಲ್ಲನ್ನು ಕೆತ್ತಿದ ಮತ್ತು ಅಕ್ಷರ ಮೂಡಿಸಿದ ಶಿಲ್ಪಿಗಳ ಚರಿತ್ರೆಯಿಲ್ಲ. ಪ್ರೊ.ಎಸ್. ಶೆಟ್ಟರ್ ಅವರ ಚರಿತ್ರೆಯನ್ನು ಶೋಧಿಸಿ ತೆಗೆದು ಚರಿತ್ರೆಯ ಕೊರತೆಯನ್ನು ತುಂಬಿದರು. ಸಂಗೀತಲೋಕದಲ್ಲೂ ಕಲಾವಿದರ ಚರಿತ್ರೆಯಿದೆ. ಅವರ ಕೈಯಲ್ಲಾಡುವ ವಾದ್ಯಗಳನ್ನು ಸೃಷ್ಟಿಸಿದವರ ಮಾಹಿತಿಯಿಲ್ಲ. ನಾವುಣ್ಣುವ ರೊಟ್ಟಿಯ ಹಿಂದಿರುವ ಕಾಳಲ್ಲಿ, ನಾವುಡುವ ವಸ್ತ್ರದಲ್ಲಿರುವ ಎಳೆಯಲ್ಲಿ ರೈತರ ದುಡಿತವಿದೆ; ಒಲೆ ಬೆಂಕಿಯ ಮುಂದೆ ಕೂತು ಅವನ್ನು ಅಟ್ಟಿದ ಮತ್ತು ಮಗ್ಗದಲ್ಲಿ ಕೂತು ನೇದ ಕೈಗಳ ಪಾಲೂ ಇದೆ. ಇದರ ನೆನಪಿದ್ದಾಗ ತಿನ್ನುವ ಆಹಾರಕ್ಕೆ, ಉಡುವ ಉಡುಪಿಗೆ ಒದಗುವ ರುಚಿ- ಖದರು ಹೇಗಿರಬಹುದು? ಯಾವುದೇ ಸಂಗೀತವನ್ನು ಕೇಳುವಾಗ, ಅಲ್ಲಿ ಬಾಜಿತವಾಗುವ ವಾದ್ಯಗಳನ್ನು ತಯಾರಿಸಿದ ಕುಶಲಕರ್ಮಿಗಳು ಮನಸ್ಸಿನೆದರು ಬಂದಲ್ಲಿ, ಅದರ ಅನುಭವ ಹೇಗಿರಬಹುದು?

ಬಸವಣ್ಣನ ವಚನದಲ್ಲಿ ಕೂಡಲಸಂಗಮನು ಕೇವಲ ವಾದ್ಯಗೇಯುವ ಕುಶಲಕರ್ಮಿ ಮಾತ್ರವಲ್ಲ, ಅದನ್ನು ಉರದಲೊತ್ತಿ ಬಾರಿಸುತ್ತ ಬತ್ತೀಸ ರಾಗ ಹಾಡುವ ಕಲಾವಿದ ಕೂಡ. ಸಾಮಾನ್ಯವಾಗಿ ವಾದ್ಯ ತಯಾರಕರು ಹಾಡರು; ಹಾಡುವ ಅಥವಾ ನುಡಿಸುವ ಕಲಾವಿದರು ವಾದ್ಯ ತಯಾರಿಸರು. ಆದರೆ ಕುಶಲಕರ್ಮಿಗಳು ರಚಿಸುವ ವಾದ್ಯಗಳಿಂದ ಹೊರಡುವ ನಾದ ಹಾಗೂ ಕಲಾವಿದರ ಕೊರಳು ಸೃಷ್ಟಿಸುವ ನಾದದೆಳೆಗಳು ನೇಯ್ಗೆಗೊಂಡೇ ಒಟ್ಟು ಸಂಗೀತ ಸೃಷ್ಟಿಯಾಗುವುದು. ಈ ಸಂಗೀತ ರಸಿಕರ ಎದೆಯಲ್ಲಿಳಿದು ಅನುರಣನಗೊಂಡು ನೆನಪುಗಳಲ್ಲಿ ಮರುಸೃಷ್ಟಿಯಾಗುವುದು.

ಈ ಸಂಗೀತ ತ್ರಿಕೂಟದಲ್ಲಿರುವ ಕಸುಬುದಾರ- ಕಲಾವಿದ- ಕೇಳುಗರು, ಹಲವು ಧರ್ಮ ಪ್ರದೇಶ ಸಂಸ್ಕೃತಿಗಳ ಹಿನ್ನೆಲೆಯಿಂದ ಬಂದವರು. ಸಂಗೀತಕ್ಕೇ ವಿಶಿಷ್ಟವಾದ ಬಹುತ್ವ ಅಥವಾ ಧರ್ಮಾತೀತತೆಯಿದು. ಮಿರಜಿನ ದವಾಖಾನೆಗಳು ದೇಹಕ್ಕಡರಿದ ಕಾಯಿಲೆಗಳನ್ನು ನಿವಾರಿಸುತ್ತಿದ್ದರೆ; ಸಂತನ ದರ್ಗಾ, ಕಲಾವಿದರ ಸಂಗೀತ, ಮಹಾತ್ಮಗಾಂಧಿ ರಸ್ತೆಯಲ್ಲಿರುವ ಸಿತಾರವಾಲೆಗಳ ವಾದ್ಯಗಳು, ಮನಃಕಷಾಯಗಳನ್ನು ತೊಳೆಯುತ್ತಿವೆ ಅನಿಸಿತು.

ಸಿತಾರವಾಲೆಗಳು ತಮ್ಮ ಆರ್ಥಿಕ ಬವಣೆಯನ್ನೆಲ್ಲ ಹೇಳಿಮುಗಿಸಿದ ಬಳಿಕ ಸಂತೃಪ್ತಭಾವದಲ್ಲಿ ಹೇಳಿದರು: ‘ನಾವು, ಮನೆಮಗಳನ್ನು ಬೆಳೆಸಿ ಅಲಂಕರಿಸಿ ಅಪರಿಚಿತ ಕುಟುಂಬದ ವರನಿಗೆ ಧಾರೆಯೆರೆದು ಕೊಡುವ ತಂದೆ– ತಾಯಿಗಳಂತೆ. ಆಕೆ ಹೊಸ ಮನೆಗೆ ಹೋಗಿ ಅಲ್ಲಿನ ದೀಪ ಬೆಳಗುತ್ತಾಳೆ. ಅಂತೇ ನಮ್ಮ ವಾದ್ಯ ಯಾವುದೊ ಕಲಾವಿದರ ಕೈಯಲ್ಲಿ ನಾದ ಹೊರಡಿಸುತ್ತ ಬದುಕುತ್ತದೆ. ಇದರ ನೆನಪು ನಮಗೆ ಸಾರ್ಥಕತೆ ಕೊಡುತ್ತದೆ.’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.