ಆಧುನಿಕ ಕನ್ನಡ ಸಣ್ಣಕಥೆಗಳ ಪರಂಪರೆಯನ್ನು ಪೋಷಿಸುವಲ್ಲಿ ‘ಪ್ರಜಾವಾಣಿ’ ಪತ್ರಿಕೆ ಮಹತ್ವದ ಪಾತ್ರವಹಿಸುತ್ತಾ ಬಂದಿದೆ. ಕಥನ ಕಲೆ ಮತ್ತು ಕನ್ನಡ ಭಾಷೆ ತಲುಪಬೇಕಾದ ಪ್ರಬುದ್ಧತೆಗೆ ಕಥಾಸ್ಪರ್ಧೆಯನ್ನು ಒಂದು ಮುಕ್ತ ಮಾರ್ಗವನ್ನಾಗಿ ರೂಪಿಸಿದ ಶ್ರೇಯಸ್ಸು ಪತ್ರಿಕೆಗೆ ಸಲ್ಲುತ್ತದೆ.

ಈ ವರ್ಷ ಅಂತಿಮ ಸುತ್ತಿನಲ್ಲಿ ಸ್ಪರ್ಧೆಗೆ ಆಯ್ಕೆಯಾದ ಮೂವತ್ತು ಕಥೆಗಳು ನಮ್ಮ ಕೈ ಸೇರಿದವು. ವಸ್ತು ಮತ್ತು ವಿನ್ಯಾಸಗಳರೆಡರಲ್ಲೂ ವೈವಿಧ್ಯವಿತ್ತು. ಇಲ್ಲಿನ ಹಲವು ಕಥೆಗಳು ಅಸಮಾನ ಮತ್ತು ಅಮಾನವೀಯ ಸಾಮಾಜಿಕ ರಚನೆಯಿಂದಲೇ ಹುಟ್ಟಿ ಬಂದಂತವು. ಹೃದಯಹೀನವಾಗುತ್ತಿರುವ ಮನುಷ್ಯ ಕ್ರೌರ್ಯ, ಅರಿವಿಲ್ಲದೆ ಅವತರಿಸುವ ಜೀವಹಿಂಸಕ ಜಮೀನ್ದಾರೀ ಪ್ರವೃತ್ತಿ, ಧಾರ್ಮಿಕ ಬಹಿಷ್ಕಾರಕ್ಕೆ ಪ್ರತಿರೋಧ ಒಡ್ಡಿದ ಪ್ರತಿಭಟನೆ, ಮತೀಯ ದ್ವೇಷದಿಂದಾಗಿ ಸಮಾಜದಿಂದ ದೂಡಲ್ಪಟ್ಟ ಸಂಕಟಗ್ರಸ್ತರು ಒಂಟಿತನದಲ್ಲೂ ಕಾಪಾಡಿಕೊಂಡ ಜೀವಪ್ರೀತಿ, ಹಸಿವು ಮತ್ತು ಅವಮಾನಗಳಿಂದ ಮಾತು ಕಳೆದುಕೊಂಡವರು ದಬ್ಬಾಳಿಕೆಯ ವಿರುದ್ಧ ಎತ್ತಿದ ದ್ವನಿ, ಮಹಿಳೆ ಮತ್ತು ಮಕ್ಕಳ ಮುಗ್ಧತೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ ಉಳ್ಳವರ ಕೌಟುಂಬಿಕ ಶೋಷಣೆ ಕಥೆಗಳ ವಸ್ತುವಾಗಿ ಅವು ಜೀವಕಾರುಣ್ಯದ ಪರ್ಯಾಯ ಪ್ರಪಂಚವನ್ನು ಕಟ್ಟಿಕೊಡುತ್ತಿರುವುದು ಆಶಾದಾಯಕವಾಗಿದೆ.

ಮೊದಲ ಸ್ಥಾನ ಪಡೆದ ‘ಪತನ’ ಮನಸಿನಲ್ಲಿ ಉಕ್ಕುತ್ತ ಕಾಡುವ ಕಥೆ. ರಾಮೇಶ್ವರಿ ಎಂಬ ವೃದ್ಧೆಯನ್ನು ಆತ್ಮಹತ್ಯೆಗೆ ತಳ್ಳಿದ ಹೃದಯಹೀನ ಪ್ರಪಂಚ ಅವಳ ಒಡನಾಡಿಯಾಗಿದ್ದ ರಂಜಿತಳ ಜೀವನದಲ್ಲಿ ಪ್ರತಿಧ್ವನಿಸಿದ್ದನ್ನು ಅತ್ಯಂತ ಅಚ್ಚುಕಟ್ಟಾದ ವಿವರಗಳಲ್ಲಿ ರೂಪಕಾತ್ಮಕವಾಗಿ ನಿರೂಪಿಸುವ ವಿಧಾನ ಕಥನ ಕಲೆಯ ಅತ್ಯುತ್ತಮ ಮಾದರಿಗೆ ಸಾಕ್ಷಿಯಾಗಿದೆ. ‘ಬ್ಲೀಡಿಂಗ್ ಹಾರ್ಟ್’ ಎಂಬ ಬಳ್ಳಿ ರಾಮೇಶ್ವರಿ ಮತ್ತು ರಂಜಿತಳ ಜೀವನದಲ್ಲಿ ಸಂಬಂಧಗಳ ‘ಪತನ’ಕ್ಕೆ ರೂಪಕವಾಗುವುದು ಕಥೆಯ ಅಂತಃಸತ್ವದ ಶ್ರೇಷ್ಠತೆಗೆ ಕಾರಣವಾಗಿದೆ.

ದ್ವಿತೀಯ ಸ್ಥಾನದ ‘ಒಂದು ತೇಗದ ಖುರ್ಚಿ’ ಸಮುದಾಯದ ತಿರಸ್ಕಾರಕ್ಕೊಳಗಾದ ಜಮೀನ್ದಾರಿ ಪದ್ಧತಿ ಪತ್ರಕರ್ತನಲ್ಲಿ ಸುಪ್ತ ಪ್ರವೃತ್ತಿಯಾಗಿ, ಅದು ಅವನ ತಿಳುವಳಿಕೆಯಲ್ಲಿ ಪರಿವರ್ತನೆಗೊಳಗಾಗುವುದನ್ನು ನಿರೂಪಿಸುತ್ತದೆ. ಅಪ್ಪನನ್ನು ಅವಮಾನಿಸಿದ ಜಮೀನ್ದಾರ ತೀರಿಕೊಂಡಾಗ ಅದು ಕೇವಲ ದಬ್ಬಾಳಿಕೆಯ ವ್ಯಕ್ತಿಯ ಸಾವಾಗಿರದೆ ಪ್ರತೀಕಾರವಾಗಿ ಮಾಲತೇಶನೊಳಗೆ ಬೆಳೆಯುತ್ತಿದ್ದ ಸೇಡಿನ ಸಾವಾಗಿ ಸಂಭವಿಸುವುದರ ಸೂಚನೆಯಾಗಿ ಚಹಾದ ಒಲೆಯ ಬೆಂಕಿಗೆ ಆಹುತಿಯಾಗುವ ತೇಗದ ಕುರ್ಚಿ ತನ್ನ ರೂಪಕ ಭಾಷೆಯಲ್ಲಿ ನಾಟಕೀಯವಾಗಿ ಅಭಿನಯಿಸುತ್ತದೆ.

ತೃತೀಯ ಸ್ಥಾನದ ‘ಚಂದ್ರಾಮ ಕನ್ನಡಿ ಹರಳ’ ವ್ಯಾವಹಾರಿಕ ನೆಲೆಯಲ್ಲಿ ಸೌಹಾರ್ದದಿಂದ ಬದುಕಿದ್ದ ಬೇರೆ ಬೇರೆ ಮತಸ್ಥರು ಜಾತ್ರೆಯಂತಹ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ವೈರಿಗಳಂತೆ ದೂರಾಗಿ ಬಹಿಷ್ಕಾರಕ್ಕೆ ಬಂದು ತಲುಪವ ತೀರ್ಮಾನದಲ್ಲಿ ಸಮಾಜವಿನ್ನೂ ಆಧ್ಯಾತ್ಮಿಕ ಮತ್ತು ಲೌಕಿಕ ವಾಸ್ತವಗಳ ನಡುವಿನ ಬಿರುಕನ್ನು ದಾಟಿಲ್ಲ ಎಂಬುದನ್ನು ಸೂಚಿಸುವ ಕಥೆ.

ಮೆಚ್ಚುಗೆಗೆ ಪಾತ್ರವಾದ ‘ಹಸಿದ ಹೊಟ್ಟೆ ಮತ್ತು ಶಿಷ್ಟಾಚಾರ’ ಮೊಬೈಲ್ ಫೋನಿನಂತಹ ಯಂತ್ರವನ್ನೇ ಪರಸ್ಪರ ಆಟವಾಡಿಸುವ ಬೋನಾಗಿ ಉಪಯೋಗಿಸಲ್ಪಟ್ಟಾಗ ಉಂಟಾದ ರಾದ್ಧಾಂತವನ್ನೂ, ಜಾಗೃತ ಮಹಿಳೆಯರ ಪ್ರಾತಿನಿಧಿಕತೆಯನ್ನೂ ಪ್ರಸ್ತುತಗೊಳಿಸುವ ಕಥೆಯ ವಸ್ತು ಮತ್ತು ತಂತ್ರ ಹೊಸದೆನಿಸಿತು.

‘ತುಳಸಿ’ ಅಕ್ಕೋರು ಹಾಗೂ ಮಾಸ್ತರ ಮನೆಯಲ್ಲಿದ್ದ ಕೆಲಸದ ಹುಡುಗಿ ತನ್ನ ಧಾರಣ ಶಕ್ತಿಯಿಂದ ನಮ್ಮ ಸಹಾನುಭೂತಿಯನ್ನು ಉತ್ಕಟಗೊಳಿಸುವ ನಿರರ್ಗಳ ನಿರೂಪಣೆಯ ನವಿರಾದ ಕಥೆ. ಸವಕಲು ವಸ್ತುವನ್ನು ಮರೆಸುವ ಕಸು ಭಾವ ತೀವ್ರತೆಯ ಭಾಷೆಗಿದ್ದದ್ದು ವಿಶೇಷ.

ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆ ಮತ್ತು ಅದರ ಪಡಿಯಚ್ಚಿನಂತಿರುವ ನೌಕರಶಾಹಿ ಜಂಟಿಯಾಗಿ ಬದಲಾವಣೆಯನ್ನು ತಡೆಯುವ ತಂತ್ರಗಾರಿಕೆಗೆ ಕಥೆ ‘ಸಂವಿಧಾನ ಅಂದದ್ದೇ ಕಾರಣವಾಗಿ...’ ಸಾಕ್ಷಿಯಾಗುತ್ತದೆ. ಕಲೆಯನ್ನು ಕಾಪಾಡುವುದು ಪರಂಪರೆಯೊ ಸಂವಿಧಾನದ ಮೌಲ್ಯಗಳೊ ಎಂಬ ವಾಗ್ವಾದ ಅನುಭವದಿಂದ ಮೂಡಿಬರದೆ ಹೊರಗಿನಿಂದ ಆರೋಪಿತವಾದ ವಿಚಾರವಾದದ್ದರಿಂದ ಕಥೆಯ ಅಂತ್ಯ ಅಸಹಜವೆನಿಸಿತು.

‘ಚಾವಡಿ ಮತ್ತು ನಡುಮನೆಯ ಮಧ್ಯದಲ್ಲೊಂದು ಕಣಿವೆ’ ಎಳೆಯ ಗೆಳತಿಯರಿಬ್ಬರೊಳಗೆ ಹುಟ್ಟಿದ ಸಿನಿಮಾದ ಭ್ರಾಮಕ ಲೋಕ ಕನಸನ್ನು ಚಿಗುರಿಸಿ ದುರಂತದಲ್ಲಿ ಅಂತ್ಯವಾಗುವ ಸೊಗಸಾದ ಕಥೆ.

ಹೆಣ್ಣಿನ ಲೋಕಪಾಲನೆಯ ಮಾತೃತ್ವಕ್ಕೆ ಪುರುಷನ ಬೇಜವಾಬ್ದಾರಿತನದಲ್ಲೂ ಬದುಕು ಭಾರವಲ್ಲವೆಂಬ ನಿಜವನ್ನು ನೇಯ್ದು ಕೊಡುವ ಕಥೆ ‘ಆಕಾಶ ಮತ್ತು ಪಕ್ಷಿ’.

ಆಯ್ಕೆಯಾಗದ ಕೆಲವು ಲೇಖಕರರಲ್ಲಿ ಕಥೆ ಇದೆ, ಹೇಳಲಾಗುತ್ತಿಲ್ಲ; ಹಲವರಿಗೆ ಹೇಳುವ ತವಕವಿದೆ; ಕಥೆಗಳಿಲ್ಲ. ಈ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುತ್ತಾರೆಂಬ ನಿರೀಕ್ಷೆಯೊಂದಿಗೆ ಭಾಗವಹಿಸಿದ ಎಲ್ಲ ಕಥೆಗಾರರನ್ನು ಅಭಿನಂದಿಸುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.