ಯುಗಾದಿ ನಿಸರ್ಗದ ಮರುಹುಟ್ಟಿನ ಕಾಲ. ಏರಿದ ತಾಪಮಾನಕ್ಕೆ ಜೀವ ಕಳೆದುಕೊಂಡಂತೆ ಮೌನವಾಗಿದ್ದ ಗಿಡಮರಗಳು ಹಬ್ಬದ ವೇಳೆಗೆ ಚಿಗುರೊಡೆದು ಅಂತ್ಯಕಾಣದ ಹಸಿರು ಸಮುದ್ರದಂತೆ ಇಡೀ ಪರಿಸರವನ್ನು ಆವರಿಸಿಬಿಡುತ್ತವೆ. ಉದುರಿದ ಹಣ್ಣೆಲೆಗಳಿಂದ ನೆಲ ಮುಚ್ಚಿಕೊಂಡಿರುತ್ತದೆ. ಎಲ್ಲೆಡೆ ಹಸಿರಿನದ್ದೇ ಸಂಭ್ರಮ.

ಹಳೇ ಮೈಸೂರು ಭಾಗದ ಹಳ್ಳಿಗಳಲ್ಲಿ ಹಬ್ಬದ ಸಡಗರ ಮೇಳೈಸಿರುತ್ತದೆ. ಕುಟುಂಬದ ಎಲ್ಲಾ ಸದಸ್ಯರಿಗೆ ಹೊಸ ಬಟ್ಟೆ ತರುವ ಜವಾಬ್ದಾರಿ ಮನೆಯ ಯಜಮಾನನದು. ಹಬ್ಬವಾದ ಮರುದಿನ ವರ್ಷ ತೊಡಕು. ಗುಡ್ಡೆಬಾಡು ಹಂಚಲು ಮನೆ ಮನೆಗೆ ಎಡತಾಕಿ ಹಣ ಸಂಗ್ರಹಿಸುವ ಕೆಲಸ ಗ್ರಾಮದ ಬಾಡ್ನೆಜಮಾನನದು.

ಸುಗ್ಗಿಕಾಲ ಅನ್ನದಾತರ ಬದುಕನ್ನು ಹಸನುಗೊಳಿಸುವುದು ತೀರಾ ಅಪರೂಪ. ಸುಗ್ಗಿ ಮುಗಿದಾಗ ದವಸಧಾನ್ಯದ ಮೂಟೆಗಳು ಅರ್ಧ ಮನೆಗೆ ಸೇರಿದರೆ, ಉಳಿದರ್ಧ ದಲ್ಲಾಳಿಗಳ ಮೂಲಕ ಮುಂಗಡ ಹಣದ ಋಣ ಸಂದಾಯದ ಭಾಗವಾಗಿ ಮಂಡಿ ಸೇರುವುದು ವಾಡಿಕೆ. ರೈತಾಪಿ ವರ್ಗದ ಜೀವನ ಹರಿದ ಗೋಣಿಚೀಲದ ಸ್ಥಿತಿ. ಮಂಡಿಯ ವ್ಯಾಪಾರಿ ನೀಡಿದ ಪುಡಿಗಾಸು ನಂಬಿಕೊಂಡೇ ಇಡೀ ವರ್ಷದ ಬದುಕಿನ ಬಂಡಿ ಚಲಿಸಬೇಕು. ಕೊಂಚ ಈ ಹಣ ವ್ಯಯಿಸಿಯೇ ಗುಡ್ಡೆಬಾಡು ಖರೀದಿಸಲು ಗ್ರಾಮೀಣರು ಶರಣಾಗದೆ ಅನ್ಯದಾರಿ ಇಲ್ಲ.

ಯುಗಾದಿ ಹಬ್ಬದಂದು ಬೇವು- ಬೆಲ್ಲ ಸವಿಯುವುದು ಸಂಪ್ರದಾಯ. ಜೀವನದಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎನ್ನುವುದೇ ಇದರ ಹಿಂದಿರುವ ತಾತ್ಪರ್ಯ. ಹೋಳಿಗೆ ಅಥವಾ ಒಬ್ಬಟ್ಟಿಗೂ ಅಷ್ಟೇ ಪ್ರಾಮುಖ್ಯತೆ ಇದೆ. ಆದರೆ, ಹಬ್ಬದ ಮರುದಿನ ಬಾಡು ತಿನ್ನದ ಮಾಂಸಾಹಾರಿಗಳನ್ನು ದುರ್ಬಿನ್ನು ಹಾಕಿಯೇ ಹುಡುಕಬೇಕು.

ಗುಡ್ಡೆಬಾಡಿನ ಕಥೆ
ಮಾಂಸ, ಚೀಚಿ, ತುಣುಕು ಬಾಡಿನ ಇನ್ನೊಂದು ಹೆಸರಿನ ರೂಪ. ಬಾಡು ಜಗತ್ತಿನ ಬಹುಪಾಲು ಸಮಾಜಗಳ ಆಹಾರ. ಅದು ಭಾವನಾತ್ಮಕ ವಿಷಯವೂ ಹೌದು. ಅದೆಷ್ಟೋ ಸಂಘರ್ಷಕ್ಕೆ ನಾಂದಿ ಹಾಡುವ, ಅದನ್ನು ಪರಿಹರಿಸುವ ಶಕ್ತಿ ಬಾಡೂಟಕ್ಕಿದೆ ಎಂದರೆ ಅತಿಶಯೋಕ್ತಿಯಲ್ಲ. ಮುರಿದುಹೋದ ಸಂಬಂಧಗಳನ್ನು ಮತ್ತೆ ಕಟ್ಟುವ ಶಕ್ತಿಯೂ ಬಾಡಿಗಿದೆ. ಜಾತ್ರೆಗಳಲ್ಲಿ ನಡೆಯುವ ಬಾಡೂಟ ಇದಕ್ಕೊಂದು ನಿದರ್ಶನ.

ನಮ್ಮೂರಿಗೆ ಭೀಮಣ್ಣನೇ ಬಾಡ್ನೆಜಮಾನ. ಬಿಡುವಿನ ದಿನಗಳು, ವರ್ಷ ತೊಡಕು ದಿನದಂದು ಇಡೀ ಊರಿನ ತುಂಬಾ ಬಾಡಿನ ಘಮಲು ತುಂಬಿಸುವಲ್ಲಿ ಆತನ ಶ್ರಮ ದೊಡ್ಡದು. ಗುಡ್ಡೆಬಾಡು ಹಂಚಿಕೆಯಲ್ಲಿ ಪ್ರವೀಣನಾದ ಆತ ಅನಕ್ಷರಸ್ಥ. ಆದರೆ, ಆಡು, ಕುರಿಗಳ ತೂಕವನ್ನು ನಿಖರವಾಗಿ ಓದಬಲ್ಲವ.

ಗುಡ್ಡೆಬಾಡಿಗಾಗಿ ಊರಿನಲ್ಲಿ ಒಂಟಿಯಾಗಿ ಸಾಕಿರುವ ಮೇಕೆ, ಕುರಿಗಳೇ ಆತನ ಮೊದಲ ಆಯ್ಕೆ. ಚೌಕಾಸಿ ವ್ಯಾಪಾರ ಮಾಡುವುದರಲ್ಲೂ ನಿಸ್ಸೀಮ. ವ್ಯಾಪಾರ ದಕ್ಕದಿದ್ದರೆ ದೂರದ ಅಕ್ಕಿರಾಂಪುರ, ಚೇಳೂರು ಸಂತೆ ಅಥವಾ ನೆರೆಹೊರೆಯ ಹಳ್ಳಿಗಳಲ್ಲಿ ಸುತ್ತಾಡಿ ಜನರಿಂದ ಸಂಗ್ರಹಿಸಿದ ಹಣದಲ್ಲಿ ಕೊಬ್ಬಿದ ಆಡು, ಕುರಿಗಳನ್ನು ಖರೀದಿಸಿ ತರುತ್ತಿದ್ದ.

ಹಲವು ವರ್ಷದಿಂದಲೂ ಊರಿನವರ ನಾಲಿಗೆ ರುಚಿಗೆ ಭಂಗವಾಗದಂತೆ ಎಚ್ಚರವಹಿಸಿದ್ದ. ಆತ ತನ್ನ ವೃತ್ತಿಯಿಂದ ‘ಕೊಳ್ಕೊಯ್ಯೋ ಭೀಮಣ್ಣ’ ಎಂಬ ಅಂಕಿತನಾಮದಿಂದ ಪ್ರಸಿದ್ಧನೂ ಆಗಿದ್ದ. ಸಂತೆಯಿಂದ ಆಡು, ಕುರಿಗಳನ್ನು ತಂದು ಗುಡ್ಡೆಬಾಡು ಮಾಡುವವರೆಗೂ ಅವನಿಗೆ ಸಹಕಾರ ನೀಡಲು ದೊಡ್ಡ ಪರಿವಾರವೇ ಇತ್ತು.

ಭೀಮಣ್ಣನ ಬಾಯಲ್ಲಿ ಊರಿನ ಮಗ್ಗಿಪುಸ್ತಕವೇ ಇತ್ತು. ಎಲ್ಲಾ ಮನೆಗಳ ಲೆಕ್ಕಾಚಾರವೂ ಅವನಿಗೆ ಗೊತ್ತಿತ್ತು. ಗ್ರಾಮದಲ್ಲಿ ಕುಟುಂಬದಿಂದ ಬೇರ್ಪಟ್ಟು ಹೊಸ ಸಂಸಾರದ ನೊಗ ಹೊತ್ತವರ ಹೆಸರೂ ಆತನ ಗುಡ್ಡೆಬಾಡು ಪಟ್ಟಿಗೆ ಸದ್ದಿಲ್ಲದೆ ಸೇರ್ಪಡೆಗೊಳ್ಳುತ್ತಿತ್ತು. ಬಾಡು ಹಂಚುವಾಗ ಪಟಪಟನೇ ಮನೆಗಳ ಯಜಮಾನರ ಹೆಸರು ಹೇಳುವಾಗ ಆತನ ಜ್ಞಾಪಕಶಕ್ತಿಗೆ ಎಲ್ಲರೂ ಬೆರಗಾಗುತ್ತಿದ್ದರು.
ಊರಿನ ಎಲ್ಲರಿಗೂ ಬಾಡು ಹಂಚಿದ ಬಳಿಕವೂ ಮೂರ್ನಾಲ್ಕು ಗುಡ್ಡೆಗಳು ಹಾಗೆಯೇ ಉಳಿಯುತ್ತಿದ್ದವು. ಪ್ಲಾಸ್ಟಿಕ್ ಕವರ್ನಲ್ಲಿ ಅಳಿದುಳಿದ ಬಾಡು ಕಟ್ಟಿ ತನ್ನ ಪರಿವಾರದ ಸದಸ್ಯನೊಬ್ಬನ ಕೈಗೆ ನೀಡುತ್ತಿದ್ದ. ಇದು ರಹಸ್ಯವಾಗಿಯೇ ಉಳಿಯುತ್ತಿತ್ತು.

ಗ್ರಾಮದ ಯಾವುದೋ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಗೆ ಭೀಮಣ್ಣನ ಮೂಲಕ ಗುಪ್ತವಾಗಿ ಗುಡ್ಡೆಬಾಡು ಕಳುಹಿಸಿದ ಸಂಗತಿ ಹೊರಬೀಳಲು ತಿಂಗಳುಗಳೇ ಉರುಳುತ್ತಿದ್ದವು.

ಗುಡ್ಡೆಬಾಡಿನ ತೂಕ ಮಾಡುವುದಿಲ್ಲ. ಪಾಲು ಹಾಕುವಾಗ ಒಂದೊಂದು ಗುಡ್ಡೆಗೂ ಮಾಂಸದ ಎಲ್ಲಾ ಅವಯವಗಳನ್ನು (ಸೀದ ತಲೆ, ಕಳ್ಳು, ಕೀಲುಮೂಳೆ ಇತ್ಯಾದಿ) ತುಂಡಾಗಿ ಕತ್ತರಿಸಿ ಹಾಕಲಾಗುತ್ತದೆ. ಗುಡ್ಡೆಬಾಡು ಸ್ಥಳ ಜಾತ್ರೆಯ ಸಡಗರವನ್ನು ನೆನಪಿಸುತ್ತದೆ. ತರಹೇವಾರಿ ಪಾತ್ರೆಗಳನ್ನು ಹಿಡಿದು ಹೆಂಗಸರು, ಮಕ್ಕಳು ತಮ್ಮ ಸರದಿಗಾಗಿ ಕಾಯುತ್ತಾರೆ. ವಿಳಂಬವಾದರೆ ಬಾಡ್ನೆಜಮಾನನ ವಿರುದ್ಧ ಗಲಾಟೆಗೂ ಇಳಿಯುತ್ತಾರೆ.

ಚೀಟಿ ಪದ್ಧತಿ
ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಗುಡ್ಡೆಬಾಡು ಪದ್ಧತಿ ಇದೆ. ಈಗ ವರ್ಷಪೂರ್ತಿ ಚೀಟಿ ಮೂಲಕ ಹಣ ಸಂಗ್ರಹಿಸಿ ಬಾಡು ಹಂಚಿಕೊಳ್ಳುವ ಪದ್ಧತಿ ಮುನ್ನೆಲೆಗೆ ಬಂದಿದೆ. ಹಾಗಾಗಿ, ಹಳೆಯ ತಲೆಮಾರಿನ ಬಾಡ್ನೆಜಮಾನರು ತೆರೆಗೆ ಸರಿಯುತ್ತಿದ್ದಾರೆ.

ಗ್ರಾಮದ ಹತ್ತಾರು ಯುವಕರು ಒಂದುಗೂಡಿ ಪ್ರತಿ ತಿಂಗಳು ಇಂತಿಷ್ಟು ಅಂತ ಹಣ ಸಂಗ್ರಹಿಸುತ್ತಾರೆ. ಎಲ್ಲರೂ ಹಣ ಕಟ್ಟುವುದು ಕಡ್ಡಾಯ. ಆ ಹಣಕ್ಕೆ ನಿರ್ದಿಷ್ಟ ಬಡ್ಡಿದರ ನಿಗದಿಪಡಿಸುತ್ತಾರೆ. ದೈನಂದಿನ ಅಗತ್ಯ ಪೂರೈಸಿಕೊಳ್ಳಲು ಜನರಿಗೆ ಹಣದ ಅವಶ್ಯಕತೆ ಇರುವುದರಿಂದ ಚೀಟಿಯ ಹಣ ಪಡೆಯಲು ಪೈಪೋಟಿ ಸಾಮಾನ್ಯ. ಅಧಿಕ ಬಡ್ಡಿಗೂ ಕೆಲವರು ಹಣ ಪಡೆಯುವುದುಂಟು. ಹಾಗಾಗಿ, ಚೀಟಿ ಹಣ ದುಪ್ಪಟ್ಟಾಗುತ್ತದೆ.

ಹಬ್ಬಕ್ಕೆ ಮೂರ್ನಾಲ್ಕು ದಿನಗಳು ಇರುವಾಗ ಸಂತೆಗೆ ತೆರಳಿ ಕುರಿ ಅಥವಾ ಮೇಕೆಗಳನ್ನು ಖರೀದಿಸಲಾಗುತ್ತದೆ. ಹಬ್ಬದ ಮರುದಿನ ಗುಡ್ಡೆಬಾಡು ಹಂಚಿಕೊಳ್ಳಲಾಗುತ್ತದೆ. ಬಾಡೂಟದ ಜೊತೆಗೆ ಮದ್ಯದ ಸಮಾರಾಧನೆಯೂ ಹೆಚ್ಚಿರುತ್ತದೆ.

ಯುಗಾದಿ ಹಬ್ಬದಂದು ಜೂಜಾಟ ಆಡುವುದು ಕಾನೂನುಬಾಹಿರ. ಆದರೆ, ಪೊಲೀಸರ ಕಣ್ಣುತಪ್ಪಿಸಿ ಯುವಜನರು ಜೂಜಾಟದಲ್ಲಿ ತೊಡಗುತ್ತಾರೆ.

ಅರಳಿಮರ ಅಥವಾ ಹೊಂಗೆಮರದ ನೆರಳಿನಲ್ಲಿ ಒಂದು ಗುಂಪು ಸೇರಿದರೆ ಕೆಲವರಿಗೆ ದೇಗುಲದ ಆವರಣವೇ ಜೂಜಿನ ಅಡ್ಡೆಯಾಗಿರುತ್ತದೆ. ಪುಡಿ ಹುಡುಗರಿಗೆ ಮನೆಯ ಜಗುಲಿಗಳೇ ಅಡ್ಡೆ.

ಹಬ್ಬದ ಸಾಮಗ್ರಿ ಖರೀದಿಸಲು ಜುಗ್ಗಾಟ ನಡೆಸುವ ಕೆಲವು ಕುಟುಂಬಗಳ ಯಜಮಾನರು ಜೂಜಿನ ಅಡ್ಡೆಗೆ ಬಂದೊಡನೆ ಅವರ ಜೇಬಿನಿಂದ ನೋಟಿನ ಕಂತೆಗಳೇ ಹೊರಬಂದು ಬೆರಗು ಮೂಡಿಸುತ್ತವೆ.

ವರ್ಷಪೂರ್ತಿ ಕೂಡಿಟ್ಟ ಹಣವನ್ನು ಒಂದೇ ದಿನ ಪಣಕ್ಕಿಟ್ಟು ಸೋಲುವವರೂ ಇದ್ದಾರೆ. ಹತಾಶರಾಗಿ ಹಣ ಗೆಲ್ಲುವ ಜಿದ್ದಿಗೆ ಬಿದ್ದು ಮನೆಯಲ್ಲಿರುವ ಸಣ್ಣಪುಟ್ಟ ಚಿನ್ನದ ಆಭರಣಗಳನ್ನು ಗಿರವಿಗೆ ಇಡುವುದು ಹಳ್ಳಿಗಳಲ್ಲಿ ಸಾಮಾನ್ಯ. ಸಕಾಲದಲ್ಲಿ ಅವುಗಳನ್ನು ಬಿಡಿಸಿಕೊಳ್ಳಲಾಗದೆ ಕೈಚೆಲ್ಲಿದವರೂ ಸಾಕಷ್ಟಿದ್ದಾರೆ. ಇಸ್ಪೀಟ್ ಮಾಯೆಯೇ ಅಂತಹದ್ದೇನೊ?

ಮಾರನೆ ದಿನ ಬೇಟೆ
ಯುಗಾದಿ ಹಬ್ಬದ ಮಾರನೇ ದಿನ ಖಾರದ ಊಟಕ್ಕಾಗಿ ಕಾಡಿಗೆ ತೆರಳಿ ಬೇಟೆಯಾಡುವ ಪದ್ಧತಿ ಇಂದಿಗೂ ತೆರೆಮೆರೆಯಲ್ಲಿ ನಡೆಯುತ್ತಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ವನ್ಯಜೀವಿಗಳ ಬೇಟೆ ನಿಷಿದ್ಧ. ಆದರೆ, ಅರಣ್ಯ ಅಧಿಕಾರಿಗಳ ಕಣ್ಣುತಪ್ಪಿಸಿ ಮೊಲ, ಜಿಂಕೆ, ಕಾಡುಹಂದಿಗಳ ಬೇಟೆ ನಡೆಯುತ್ತದೆ.

ಹಿಂದೆ ಊರಿನ ಜನರೆಲ್ಲರೂ ಸೇರಿ ವರ್ಷದ ತೊಡಕು ದಿನದಂದು ಕೋಲು ಬೇಟೆಯಾಡುತ್ತಿದ್ದರು. ಗ್ರಾಮದಲ್ಲಿ ಬಲಿಯಾದ ಪ್ರಾಣಿಗಳ ಮೆರವಣಿಗೆ ನಡೆಯುತ್ತಿತ್ತು. ಕೆಲವು ಹಳ್ಳಿಗಳಲ್ಲಿ ಬೇಟೆಗಾಗಿಯೇ ನಾಯಿಗಳನ್ನು ಸಾಕಲಾಗಿದೆ. ವಾರಕ್ಕೊಮ್ಮೆಯಾದರೂ ಆ ಊರಿನವರು ಬೇಟೆಗೆ ತೆರಳುತ್ತಾರೆ. ಬೇಟೆ ಅವರಿಗೆ ಅನುಷಂಗಿಕವಾಗಿ ಹರಿದು ಬಂದಿರುವ ವಿದ್ಯೆ.

ಮೊಲ, ಕಾಡುಹಂದಿಗಳ ಹೆಜ್ಜೆಗಳನ್ನು ಹಿಂಬಾಲಿಸಿ ಸಾಗಿ ಬೇಟೆಯಾಡುತ್ತಾರೆ. ಅವರಿಗೆ ಬೇಟೆನಾಯಿಗಳು ನೆರವಾಗುತ್ತವೆ. ಗುಡ್ಡೆಬಾಡಿನಲ್ಲಿ ಅದಕ್ಕೊಂದು ಪಾಲು ಸಿಗುತ್ತದೆ. ಅದು ಯಜಮಾನನಿಗೆ ಸೇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.