ನಭಾರತೀಯು ತನ್ನ ವಿಶಿಷ್ಟ ಪ್ರಯೋಗಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವುದು ಮೈಸೂರಿನ ಕಲಾರಸಿಕ ವೃಂದಕ್ಕೆ ಪರಿಚಿತ ವಾದುದೇ. ಅದಕ್ಕೆ ಮತ್ತೊಂದು ಸೇರ್ಪಡೆ ಎಂದರೆ ಈಚೆಗೆ ವೀಣೆ ಶೇಷಣ್ಣ ಭವನದಲ್ಲಿ ನಡೆದ ‘ಮಂಜರಿ’ ದಿ ಮಿಸ್ಟಿಕ್ ಫ್ರಾಗ್ರೆನ್ಸ್ ಎಂಬ ನೃತ್ಯ ಪ್ರಯೋಗ.

ಬೆಂಗಳೂರಿನ ಯುವ ಭರತನಾಟ್ಯ ಕಲಾವಿದೆ ವಿದುಷಿ ದಿವ್ಯಾ ರವಿ ಅವರ ವಿನೂತನ ಕಲ್ಪನೆಯ ಕೂಸೇ ‘ಮಂಜರಿ’. ನೃತ್ಯ ದಂಪತಿಗಳಾದ ಕಿರಣ್ ಮತ್ತು ಸಂಧ್ಯಾ ಅವರ ಶಿಷ್ಯೆಯಾದ ದಿವ್ಯಾ ಅವರು, ಈಗ ವಿದುಷಿ ಸೌಂದರ್ಯ ಶ್ರೀವತ್ಸ ಅವರಲ್ಲಿ ತಮ್ಮ ಕಲಿಕೆಯನ್ನು
ಮುಂದುವರೆಸುತ್ತಿದ್ದಾರೆ.

ತಮ್ಮ ಪತಿಯೊಡಗೂಡಿ ಈ ವಿನೂತನ ಏಕವ್ಯಕ್ತಿ ಪ್ರದರ್ಶನವನ್ನು ಹುಟ್ಟುಹಾಕಿರುವ ಅವರು ಇದರಲ್ಲಿ ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾದ ಹೂಗಳ ಬಗ್ಗೆ ಸಾಮಾನ್ಯವಾಗಿ ಗಮನಿಸದೇ ಹೋಗುವ ಅನೇಕ ಸಂಗತಿಗಳನ್ನು ಅನಾವರಣಗೊಳಿಸಿದ್ದಾರೆ. ಹೂವುಗಳಿಗೆ ಇರುವ ಬಣ್ಣ, ಸುಗಂಧದ ಜೊತೆಗೆ ಅವುಗಳ ಪೌರಾಣಿಕ ಉಲ್ಲೇಖ, ಆಧ್ಯಾತ್ಮಿಕ ಪರಿಮಳ ಮತ್ತು ಅಲೌಕಿಕ ಕಥನಗಳನ್ನು ಹೆಕ್ಕಿ ತೆಗೆದು ಒಂದು ಸುಂದರ ನೃತ್ಯರೂಪಕ್ಕೆ ಮಾರ್ಗ ಶೈಲಿಯ ಚೌಕಟ್ಟಿನಲ್ಲಿಯೇ ಅಳವಡಿಸಿರುವುದು ಇದರ ವಿಶೇಷ.

ಅಲರಿಪು, ಕೃತಿ, ವರ್ಣ, ಜಾವಳಿ, ಪದ ಮತ್ತು ತಿಲ್ಲಾನದ ಹೊರಮೈಯನ್ನು ಹೊಂದಿದ್ದ ಈ ಎರಡು ಗಂಟೆಗಳ ನೃತ್ಯ ಕಾರ್ಯಕ್ರಮವು ನೋಡುಗರನ್ನು ಸಂಪೂರ್ಣವಾಗಿ ಹಿಡಿದಿಡುವಲ್ಲಿ ಯಶಸ್ವಿಯಾಯಿತು. ಪ್ರಾರಂಭದ ಅಲರಿಪುವು ಹೆಚ್ಚಾಗಿ ಮೊಗ್ಗನ್ನು ಸೂಚಿಸುವ ಹಸ್ತಮುದ್ರೆಯನ್ನೇ ಬಳಸಿದುದೂ ಅರ್ಥಪೂರ್ಣವಾದ ಪೀಠಿಕೆಯಾಗಿತ್ತು. ಮುಂದೆ ಅಶೋಕ ಪುಷ್ಪವು ಅವರ ಆಯ್ಕೆಯಾಗಿತ್ತು. ಅಹಂಕಾರಿ ತಶೋಕನು ಮುನಿಯ ಶಾಪದಿಂದ ‘ಅಶೋಕ’ (ಶೋಕವಿಲ್ಲದ) ವೃಕ್ಷವಾಗಿ ಪರಿವರ್ತಿತವಾಗುವ ಕಥೆಯನ್ನು ಅವರು ಸಂಚಾರಿಯಲ್ಲಿ ನಿರೂಪಿಸಿದರು. ಕಾಳಿದಾಸನ ‘ಮಾಳವಿಕಾಗ್ನಿಮಿತ್ರ’ದಲ್ಲಿ ಬರುವ ‘ಹೆಂಗಳೆಯರ ಕಾಲಿನ ತಾಡನದಿಂದ ಹೂ ತಳೆಯು’, ರಾಮಾಯಣದ ಸೀತಾಮಾತೆಯು ಲಂಕೆಯ ಅಶೋಕವನದಲ್ಲಿ ಸೆರೆಯಲ್ಲಿದ್ದ ಉಲ್ಲೇಖವೂ ಪ್ರಸ್ತಾಪಗೊಂಡಿತು.

ಪಂಚಭೂತಗಳಿಂದ ತನ್ನ ಚೈತನ್ಯವನ್ನು ಪಡೆಯುವ ಕಮಲವು ಮುಂದಿನ ನೃತ್ಯಬಂಧದ ವಸ್ತು. ಬ್ರಹ್ಮನು ಚಿನ್ನದ ಕಮಲದಿಂದ ತನ್ನ ಕಾರ್ಯ ಆರಂಭಿಸಿದ ಎಂಬ ಸಂಗತಿಯಿಂದ ಹಿಡಿದು ದೇಹದಲ್ಲಿರುವ ಸಪ್ತ ಚಕ್ರಗಳು ವಿವಿಧ ದಳಗಳ ತಾವರೆಯಿಂದ ನಿರ್ದೇಶಿಸಲ್ಪಡುತ್ತದೆ ಎಂಬುವವರೆಗೆ ಇದರ ಹರಹು ಇದ್ದಿತು. ಬಿಗಿಯಾದ ಅಡವುಗಳು ಮಧ್ಯದಲ್ಲಿದ್ದು, ಇದಕ್ಕೆ ವರ್ಣದ ರೂಪವನ್ನು ನೀಡಿದವು. ಶೃಂಗಾರ ವಸ್ತುವಿನ ಜಾವಳಿಗೆ ಅವರ ಆಯ್ಕೆ ಪಾರಿಜಾತವಾಗಿತ್ತು. ಸಹಜವಾಗಿಯೇ ಸತ್ಯಭಾಮೆಯ ಮುನಿಸು, ಅಸೂಯೆ, ನಿರಾಶೆ ಎಲ್ಲದರ ಅಭಿವ್ಯಕ್ತಿಗೂ ವಿಫುಲ ಅವಕಾಶವಿದ್ದ ವಸ್ತು. ಶ್ರೀಕೃಷ್ಣನು ರುಕ್ಮಿಣಿಗೆ ನೀಡಿದ ಪಾರಿಜಾತದ ಸುದ್ದಿಯು ಸತ್ಯಭಾಮೆಯನ್ನು ಸಿಟ್ಟಿಗೆಬ್ಬಿಸಿರುತ್ತದೆ. ಅವಳ ಎಲ್ಲ ಭಾವಾಭಿನಯವು ದಿವ್ಯಾ ಅವರ ಮೊಗದಲ್ಲಿ ಸುಂದರವಾಗಿ ಮೂಡಿಬಂದಿತು.

ಶಿವನಿಂದ ಶಾಪಗ್ರಸ್ಥವಾಗಿ ಅವನ ಪೂಜೆಗೆ ಸಲ್ಲದಿರುವ ಕೇತಕಿಯ ಕಥಾ ಭಾಗವು ಪದದ ರೂಪದಲ್ಲಿ ಅನಾವರಣಗೊಂಡಿತು. ತನ್ನ ಸುವಾಸನೆಯಿಂದ ತಾನೇ ಮತ್ತೇರಿದವಳಂತೆ ವರ್ತಿಸುವ ಕೇತಕಿಯಲ್ಲದೆ ಜ್ಯೋತಿರ್ಲಿಂಗದ ಅಶರೀರವಾಣಿಯ ಸೂಚನೆಯಂತೆ ಶಿವನ ಆದಿ-ಅಂತ್ಯವನ್ನು ಅರಸುವ ವಿಷ್ಣು ಮತ್ತು ಬ್ರಹ್ಮರ ಕಥೆಯನ್ನು ಒಳಗೊಂಡಿತ್ತು. ಬ್ರಹ್ಮನೊಡಗೂಡಿ ಅನೃತವನ್ನಾಡುವ ಕೇತಕಿಗೆ ಎಂದೆಂದೂ ತನ್ನ ಪೂಜೆಗೆ ಅನರ್ಹವಾಗುವ ಶಾಪವನ್ನು ಶಿವನು ನೀಡುತ್ತಾನೆ.

ಇದನ್ನು ಸೊಗಸಾದ ಸಂಚಾರಿಯಲ್ಲಿ ದಿವ್ಯಾ ಅವರು ತೋರಿದರು. ಹೂಗಳು ಮನುಕುಲದ ವಿಲಾಸವಷ್ಟೇ ಅಲ್ಲ, ವಿಕಾಸಕ್ಕೂ ಪ್ರೇರಣವಾಗಿ, ಆತ್ಮೋಜ್ವಲಕ್ಕೆ ಕಾರಣವಾಗಿರುತ್ತವೆ ಎಂಬುದನ್ನು ಅವರ ಕೊನೆಯ ತಿಲ್ಲಾನ ರೂಪದ ನೃತ್ಯಬಂಧವು ತೋರಿತ್ತು. ಪೂಜೆಗೆ, ಗೌರವ ತೋರಲು, ಸಂತಸವನ್ನು ವ್ಯಕ್ತಪಡಿಸಲು, ಶರಣಾಗತಿ ತೋರಲೂ ಕುಸುಮಗಳು ಬಳಕೆಯಾಗುತ್ತವೆ ಎಂಬುದಷ್ಟೇ ಅಲ್ಲದೆ ಅವು ಹೇಗೆ ತಮ್ಮ ವಂಶೋದ್ಧಾರ ಕಾರ್ಯಕ್ಕೂ ಕಾರಣವಾಗುತ್ತವೆ ಎಂಬುದನ್ನು ದಿವ್ಯಾ ಅವರು ನಿರೂಪಿಸಿದರು.

ಸಪೂರ ಅಂಗ ಸೌಷ್ಠವ, ಸುಂದರ ಅಭಿನಯ, ಕುಂದಿಲ್ಲದ ಪಾದಗತಿಗಳೊಡನೆ ಸೊಗಸಾದ ಶ್ರೀವತ್ಸ ಅವರ ಕಂಠಸಿರಿಯು ಈ ಪ್ರಯೋಗದ ಆಕರ್ಷಣೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.