ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭರವಸೆ ದೃಢಪಡಿಸಿದ ಗಾನ ʼಅಂಜಲಿʼ

Published : 6 ಅಕ್ಟೋಬರ್ 2024, 11:09 IST
Last Updated : 6 ಅಕ್ಟೋಬರ್ 2024, 11:09 IST
ಫಾಲೋ ಮಾಡಿ
Comments

ಯುವ ಗಾಯಕಿ ಅಂಜಲಿ ಶ್ರೀರಾಮ್‌ ಇತ್ತೀಚೆಗೆ ಕರ್ನಾಟಕ ಸಂಗೀತದಲ್ಲಿ ಸಮಗ್ರವಾಗಿ ಬೆಳೆಯುತ್ತಿರುವ, ಬೆಡಗುತ್ತಿರುವ ಕಲಾವಿದೆ. ಯತಿರಾಜ ಜೀಯರ್‌ ಸ್ವಾಮೀಜಿ ಅವರ ಅಮೃತ ಮಹೋತ್ಸವ ಮತ್ತು 10ನೇ ಚಾತುರ್ಮಾಸದ ಸೀಮೋಲ್ಲಂಘನೆಯ ಸಂದರ್ಭದಲ್ಲಿ ನಡೆದ ಕಛೇರಿಯು ಅವರ ಮೇಲಿನ ಭರವಸೆಯನ್ನು ದೃಢಪಡಿಸಿತು.

ಮಲ್ಲೇಶ್ವರದ ಯದುಗಿರಿ ಯತಿರಾಜ ಮಠದ ಆವರಣದಲ್ಲಿ ಹೊಸದಾಗಿ ಲೋಕಾರ್ಪಣೆಯಾದ ಚಿಕ್ಕ ಹಾಗೂ ಚೊಕ್ಕವಾದ ಸುಸಜ್ಜಿತ ಆದಿಶೇಷ ವಿಲಾಸಭವನ ಅವರ ಶುದ್ಧ ಗಾಯನಕ್ಕೆ ಸಾನುಕೂಲ ಆವರಣ ಒದಗಿಸಿತು. ಯತಿರಾಜ ಜೀಯರ್‌ ಸ್ವಾಮೀಜಿ ಅವರ ಘನ ಸಾನ್ನಿಧ್ಯವಂತೂ ಪರಿಣಾಮ-ಪ್ರಭಾವಗಳನ್ನು ಇಮ್ಮಡಿಗೊಳಿಸುತ್ತದೆ.

ಸಾವೇರಿ ವರ್ಣ ಮತ್ತು ನಾಗಸ್ವರಾವಳಿ ರಾಗದ ʼಗರುಡಗಮನʼ ಕಲ್ಪನಾಸ್ವರಗಳೊಂದಿಗೆ ಚೇತೋಹಾರಿ ಆರಂಭವನ್ನೊದಗಿಸುತ್ತದೆ. ಅಂದು ರವಿವಾರವಾದ್ದರಿಂದ ದೀಕ್ಷಿತರ ʼಸೂರ್ಯಮೂರ್ತೆʼ(ಸೌರಾಷ್ಟ್ರ ರಾಗ) ಸವಾಲಿನ ಚತುರಶ್ರ ಧೃವತಾಳದಲ್ಲಿ ಮೂಡಿ ಬಂದು ವಿಳಂಬಕಾಲದ ಸುಂದರ ವಿನಿಕೆಗೆ ಕಾರಣವಾಯಿತು.

ಯತಿರಾಜ ಜೀಯರ್‌ ಸ್ವಾಮೀಜಿಯವರು ʼರಾಮಾನುಜಪ್ರಿಯʼ ಎಂಬ ಅಂಕಿತದೊಂದಿಗೆ ಉತ್ಕೃಷ್ಟ ವಾಗ್ಗೇಯಕಾರರಾಗಿಯೂ ಗೌರವಾನ್ವಿತರಾಗಿದ್ದಾರೆ. ವೆಂಕಟೇಶ್ವರನನ್ನು ಕುರಿತಾದ ಅವರ ʼಸಪ್ತಗಿರಿ ವಿರಾಜಿತಂʼ(ಸಿಂಹೇಂದ್ರಮಧ್ಯಮ) ಸಂಸ್ಕ್ರತ ರಚನೆಯನ್ನು ಅಂಜಲಿ ಸವಿಸ್ತಾರವಾಗಿ ಸಾದರ ಪಡಿಸಿ ಭಾವದೊಲ್ಮೆ ಹಾಗೂ ಭಾವ-ಲಯ ಸಾಂದ್ರತೆಯನ್ನು ಶ್ರೀಮಂತವಾಗಿ ಕಟ್ಟಿಕೊಟ್ಟು ಸಂಗೀತ ಪ್ರಿಯರನ್ನು ಸಂತಸಾಶ್ಚರ್ಯಗಳಲ್ಲಿ ಮುಳುಗಿಸಿದರು.

ಸಿಂಹೇಂದ್ರಮಧ್ಯಮ ರಾಗವಿಸ್ತಾರವು ಮಂದ್ರ ಸ್ಥಾಯಿಯ ಆಳಕ್ಕೆ ಇಳಿದು ಶಾಂತವಾದ ಆಲಾಪನೆಯ ಅನುಕ್ರಮದಿಂದ ಗುರುತಿಸಲ್ಪಟ್ಟಿದೆ. ರಾಗವನ್ನು ವಿವರಿಸುವಾಗ ಕರ್ನಾಟಕ ಸಂಗೀತದ ಶಾಸ್ತ್ರೀಯತೆ ಮತ್ತು ಘನತೆಯಿಂದ ಎಂದಿಗೂ ದೂರವಾಗಲಿಲ್ಲ. ರಾಗದ ತೀಕ್ಷ್ಣ ಹಾಗೂ ಸರಳವಾದ ಅಂಶಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಸೆರೆಹಿಡಿಯಲಾಗಿದೆ. ಈ ಪ್ರತಿ ಮಧ್ಯಮ ರಾಗದ ವಿಶಿಷ್ಟವಾದ ಮೇಲ್ಪದರಗಳನ್ನು ಹೈಲೈಟ್ ಮಾಡಲಾಗಿದೆ. ಅಂಜಲಿ ತಮ್ಮ ಶಿಷ್ಟ ಹಾಗೂ ಸೊಗಸಾಗಿ ಸಿದ್ಧ ಪಡಿಸಿಕೊಂಡಿರುವ ಮನೋಧರ್ಮವನ್ನು ರಾಗದ ಭಾವಪೂರ್ಣತೆಯ ಲೇಪನದೊಂದಿಗೆ ಸುಂದರವಾಗಿ ಬಳಸಿಕೊಳ್ಳುತ್ತಾರೆ. ʼಪದ್ಮಾವತಿ ಪ್ರಿಯಕರಂʼ ಎಂಬಲ್ಲಿ ನೆರವಲ್‌ ಮತ್ತು ಸ್ವರಗಳು ಚತುರಶ್ರ ಏಕತಾಳದ ಲಯಚಕ್ರದಲ್ಲಿ ಬೆಳೆದು ಅಂಜಲಿ ಲಯಮೋಡಿಯನ್ನೇ ಮಾಡಿದರು.

ʼರಘುವಂಶ ಸುಧಾಂಬುದಿ”(ಕದನಕುತೂಹಲ), ʼತೆಲಿಯಲೇರು ರಾಮ(ಧೇನುಕ), ಸವಿವರ ಮಧ್ಯಮಾವತಿ(ರಾಮಕಥಾಸುಧಾರಸ)ಯ ಗಾಯನದಲ್ಲಿ ಆಪ್ತತೆಯನ್ನು ಕಾಣಬಹುದು. ವಿರಳಾತಿವಿರಳ ಆದರೆ ಬಹು ಸೊಗಸಾದ ತ್ಯಾಗರಾಜರ ʼಕರುಣಾಜಲಧೆʼ(ನಾದನಾಮಕ್ರಿಯ) ಕೃತಿ ಬಹುಕಾಲ ಅನುರಣಿಸಿತು. ಮತ್ತೂರು ಶ್ರೀನಿಧಿ(ಪಿಟೀಲು) ಸ್ಥಿರ ಪ್ರದರ್ಶನ ನೀಡಿದರು. ಪ್ರತಿಭಾನ್ವಿತ ಬಿ.ಎಸ್.ಪ್ರಶಾಂತ್‌(ಮೃದಂಗ) ಅಂದವಾದ ಬಲಯುತ ಕಸುಬುಗಾರಿಕೆಯ ಪಕ್ಕವಾದ್ಯದೊಂದಿಗೆ ಮಹತ್ವದ ಕಾಣಿಕೆ ನೀಡಿದರು. ಓಂಕಾರ್‌ ಅವರ ಘಟ ಉಪಯುಕ್ತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT