ಬೆಟ್ಟದ ತುದಿಯಲ್ಲಿ ಹಾಸುಗಲ್ಲೊಂದರ ಮೇಲೆ ಕುಳಿತು ಆನಂದ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ‘ತಾವು ತಂಗಿದ್ದ ಆ ಆಮ್ರವನದಲ್ಲಿ ಹೀಗೆ ಮನಬಿಚ್ಚಿ ಅಳುವಹಾಗಿಲ್ಲ. ಎಲ್ಲರೂ ಮುಗಿಬಿದ್ದು ‘ಏನಾಯ್ತು, ಏನಾಯ್ತು’ ಎಂದು ಗಾಬರಿಯಾಗುತ್ತಾರೆ. ತಥಾಗತ ಆಗಾಗ ಹೇಳುತ್ತಿರುತ್ತಾನೆ ‘ದುಃಖವನ್ನು ತೆರೆದ ಮನಸ್ಸಿನಿಂದ ಅನುಭವಿಸುವವನಿಗೆ ಮಾತ್ರವೇ ಸುಖದ ನಿಜವಾದ ಅನುಭೂತಿಯಾಗುವುದು’ ಎಂದು. ಬುದ್ಧನ ಜೊತೆಗೆ ಏನಿಲ್ಲವೆಂದರೂ ನಲವತ್ತು ವರುಷಗಳಿಂದ ಇದ್ದೇನೆ. ಅವನೊಂದಿಗೆ ನಡೆದಿದ್ದೇನೆ, ಕುಳಿತಿದ್ದೇನೆ, ಮಾತಾಡಿದ್ದೇನೆ. ಅನೇಕ ಬಾರಿ ಧ್ಯಾನವನ್ನೂ ಮಾಡಿದ್ದೇನೆ. ಒಮ್ಮೊಮ್ಮೆ ವರ್ಣಿಸಲು ಸಾಧ್ಯವಾಗದ ಒಂದು ಸಮಾಧಾನವನ್ನೂ ಕಂಡಿದ್ದೇನೆ, ಆತ್ಮೀಯ ಗೆಳೆಯನಂತೆಯೇ ಆಡುವ ಆತನ ಸರಳ ಸುಂದರ ಮಾತುಗಳನ್ನು ಕೇಳಿದ್ದೇನೆ. ಆದರೂ ಈ ಸಾವು ಎಂಬುದನ್ನು ನನಗೇಕೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ? ಯಾಕೆ ಈ ಒಂದು ವಿಷಯ ನನ್ನನ್ನು ಹೀಗೆ ಹಿಡಿದು ಕಾಡುತ್ತಿದೆ ?

ಅಂದು ಗೌತಮಿ ‘ಬುದ್ಧ ಬದುಕಿಸು’ ಎಂದು ತನ್ನ ಮಗುವಿನ ಶವವನ್ನು ತಂದಿದ್ದಳು. ತಥಾಗತ ಅವಳಿಗೆ ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿದ. ಸಾವಿಲ್ಲದ ಮನೆಯೇ ಸಿಗದ ಆಕೆ ಸಾವನ್ನು ಒಪ್ಪಿಕೊಂಡಿದ್ದಳು. ಅವಳಷ್ಟೇ ಏಕೆ ನಾವೂ ಕೂಡ ಸಾವಿನ ಅನಿವಾರ್ಯತೆಯನ್ನು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೆವು.! ಸಾವನ್ನು ಗೆಲ್ಲುವ, ಯಮದೂತರನ್ನು ಹಿಂತಿರುಗಿಸಿ ಕಳಿಸುವ, ಮಂತ್ರ ದಂಡದಿಂದ, ಭಸ್ಮದಿಂದ, ತೀರ್ಥದಿಂದ ಸತ್ತವನನ್ನು ಬದುಕಿಸುವ ಯಾವ ಕಥೆಯೂ ಬುದ್ಧನ ಬಳಿ ಇಲ್ಲ. ಆತ್ಮ ಪರಮಾತ್ಮಗಳ ಗೊಂದಲವಿಲ್ಲ. ಅವನೊಂದು ತಿಳಿನೀರ ಝರಿ. ಜುಳು ಜುಳುವಾಗಿ ನಿರಂತರ ಹರಿಯುತ್ತಿರುತ್ತಾನೆ. ಆತ ಧರ್ಮವನ್ನು ಯಾರ ಕೊರಳಲ್ಲೂ ಕಟ್ಟಲಿಲ್ಲ. ಯಾರ ತಲೆಯ ಮೇಲೂ ಹೊರಿಸಲಿಲ್ಲ. ಬದಲಾಗಿ ಅವರನ್ನು ಆ ಗೊಂದಲದಿಂದ ಬಿಡುಗಡೆಗೊಳಿಸಿದ. ಆ ಭಾರವನ್ನು ಹಗುರಗೊಳಿಸಿದ. ಬದುಕನ್ನು ಪ್ರೀತಿಸಲು ಕಲಿಸಿದ. ಆದರೆ... ಆದರೆ...ಅವನ ದೇಹ ತ್ಯಾಗದ ವಿಷಯ ಏಕೆ ನನ್ನನ್ನು ಇಷ್ಟೊಂದು ವಿಚಲಿತಗೊಳಿಸುತ್ತಿದೆ? ಈ ಧ್ಯಾನ, ತಪಸ್ಸುಗಳು ನನ್ನನ್ನೇಕೆ ಗಟ್ಟಿಗೊಳಿಸಲಿಲ್ಲ? ನಾನೆಷ್ಟೇ ನಿಗ್ರಹಿಸಿಕೊಂಡರೂ ಅವನ ವಿದಾಯವನ್ನು ಮಾತ್ರ ನನ್ನ ಮನಸ್ಸು ಒಪ್ಪಿಕೊಳ್ಳುತ್ತಲೇಯಿಲ್ಲ. ಅವನಿಲ್ಲದ ಬದುಕನ್ನು ನಾ ಹೇಗೆ ಕಲ್ಪಿಸಿಕೊಳ್ಳಬಲ್ಲೆ?’ ಆನಂದನಿಗೆ ಮತ್ತೆ ಅಳು ಒತ್ತರಿಸಿಬಂತು. ಸುಮಾರು ಹೊತ್ತು ಹಾಗೇ ಅತ್ತು ಅತ್ತು ಮನಸ್ಸು ಒಂದಿಷ್ಟು ನಿರಾಳವಾಯಿತು. ಆಗಲೇ ‘ಆನಂದ, ಆನಂದ, ಇನ್ನೂ ಎಷ್ಟು ಹೊತ್ತು ಇಲ್ಲೇ ಕೂತಿರುತ್ತೀ ಗೌತಮ ಕರೆಯುತ್ತಿದ್ದಾನೆ ಬಾ’ ಎಂಬ ಧ್ವನಿ. ಎಚ್ಚೆತ್ತವನಂತೆ ಹಿಂತಿರುಗಿ ನೋಡಿದ. ಇಬ್ಬರು ಭಿಕ್ಕುಗಳು ಕಳವಳವೇ ಮೈವೆತ್ತಂತೆ ನಿಂತಿದ್ದರು. ‘ಸರಿ ನೀವು ನಡೆಯಿರಿ, ನಾನೀಗಲೇ ಬರುತ್ತೇನೆ’ ಎಂದು ಹೇಳಿ ಮತ್ತೆ ಅಲ್ಲೇ ಆ ಸೂರ್ಯೋದಯವನ್ನೇ ನೋಡುತ್ತ ಕೂತ. ಮನಸ್ಸು ಯಾಕೋ ಬೇಡ ಬೇಡವೆಂದರೂ ಆ ಅದೇ ಬೆಳಗನ್ನು ಜ್ಞಾಪಿಸಿಕೊಳ್ಳತೊಡಗಿತು. ಅಂದೂ ಕೂಡ ಹೀಗೇ ಬೆಳಗಿನ ಜಾವದಲ್ಲಿ ಆ ಬೆಟ್ಟದ ಮೇಲೆ ಮೂಡುತ್ತಿದ್ದ ಸೂರ್ಯನನ್ನೇ ನೋಡುತ್ತಿದ್ದ. ಆಗಲೇ ಆತ ಬಂದಿದ್ದು.

ಬಣ್ಣ ಕಳೆದುಕೊಂಡ ಟವೆಲು ತಲೆಗೆ, ಹಲವಾರು ದಿನಗಳಿಂದ ಲ್ಯಾವೀ ಗಂಟಿನಲ್ಲಿ ಕಟ್ಟಿಟ್ಟಿದ್ದರಿಂದ ಮುದುಡಿ ನೆರಿಗೆ ನೆರಿಗೆಯಾದ, ಮಾಸಲು ಬಿಳಿ ಅಂಗಿ, ಅವಸರದಲ್ಲಿ ಸುತ್ತಿಕೊಂಡಿದ್ದ ಕೊಳೆಯಾದ ಧೋತರ, ಅದನ್ನು ತೊಡಕಾಲು ಬಡಿಯದಂತೆ ಎತ್ತಿ ಕಟ್ಟಿಕೊಂಡಿದ್ದ ಆ ವ್ಯಕ್ತಿ ತನ್ನ ಗೆಳೆಯರೊಂದಿಗೆ ಅವಸರವಸರವಾಗಿ ಆಮ್ರವನದತ್ತಲೇ ಬರುತ್ತಿರುವುದನ್ನು ಆನಂದ ನೋಡಿದ. ಓಡಿದಂತೆಯೇ ನಡೆದು ಬರುತ್ತಿದ್ದ ಆ ವ್ಯಕ್ತಿಯ ನಡಿಗೆಯಲ್ಲಿನ ಉತ್ಸಾಹ ಆತನನ್ನು ಚಕಿತಗೊಳಿಸಿತು. ಇಷ್ಟು ವರ್ಷಗಳಲ್ಲಿ ರಾಜ ಮಹಾರಾಜರಿಂದ ಹಿಡಿದು ಅದೆಷ್ಟೋ ವ್ಯಾಪಾರಿಗಳು, ದಂಡನಾಯಕರು, ಧರ್ಮ ಗುರುಗಳು, ಆಮ್ರಪಾಲಿ ಸೇರಿದಂತೆ ಅನೇಕ ಸ್ತ್ರೀಯರು ತಥಾಗತನನ್ನು ಕಾಣಲು ಬಂದಿದ್ದರು. ಆದರೆ ವೇಷಭೂಷಣದಿಂದ ತೀರಾ ಬಡವನೆಂದು ಕಾಣುವ, ವಿನಯದಿಂದ ಸಮಾಜದ ನಿಮ್ನ ವರ್ಗದವನೆಂದು ತೋರುವ ಇಂಥ ವ್ಯಕ್ತಿಯೊಬ್ಬ ಬುದ್ಧನನ್ನು ಕಾಣಲು ಬರುತ್ತಿರುವುದು ಇದೇ ಮೊದಲು. ತೀರ ಹತ್ತಿರ ಬಂದ ಆ ವ್ಯಕ್ತಿ ದೂರದಿಂದಲೇ ನೆಲ ಮುಟ್ಟಿ ನಮಸ್ಕರಿಸಿದ. ಉಳಿದವರೂ ಅವನನ್ನು ಅನುಸರಿಸಿದರು.

‘ಅಣ್ಣಾ ನನ್ನ ಹೆಸರು ಚುಂದ ಅಂತ. ಇದೇ ಪಾವಾದವನು. ಇಲ್ಲಿ ಬುದ್ಧದೇವ ಬಂದಿದ್ದಾನೆಂದು ಕೇಳಿದೆ. ನಿಜವೇ? ಆತ ಇಲ್ಲೇ ಇದ್ದಾನೆಯೇ ?’ ಎಂದಾತ ಕೇಳಿದ. ಆತನ ವಿನಯದಲ್ಲಿನ ಪ್ರಾಮಾಣಿಕತೆ, ಬುದ್ಧನನ್ನು ಕಾಣುವ ಅದಮ್ಯ ಹಂಬಲ ಆನಂದನನ್ನು ಕರಗಿಸಿಬಿಟ್ಟವು. ಬುದ್ಧ ಅವನ ಪರಮ ಅನುಯಾಯಿಗಳಿಬ್ಬರ ಅನಿರೀಕ್ಷಿತ ಸಾವಿನಿಂದ ಖಿನ್ನನಾಗಿದ್ದ. ಆ ಕಾರಣಕ್ಕಾಗಿಯೇ ಏನೋ ಶ್ರಾವಸ್ಥಿಯಿಂದ ಎಲ್ಲಿಗಾದರೂ ಸರಿಯೇ ಮನಕ್ಕೊಂದಿಷ್ಟು ಶಾಂತಿ ಬೇಕೆಂದು ಹೊರಟುಬಿಟ್ಟಿದ್ದ. ಅಲ್ಲಿಂದ ರಾಜಗ್ರಹ, ಅಂಬಾಲತಿಲಕ, ನಲಂದ, ಪಾಟಲೀ ಗ್ರಾಮ, ಕೋಟಿಗಾಮಿ, ನದಿಕ, ವೈಶಾಲಿ, ಬಂದಗಾಮ, ಹಾತಿಗ್ರಾಮ ಹೀಗೆ ನಿರಂತರ ಊರೂರು ತಿರುಗಿ ತಥಾಗತ ದಣಿದಿದ್ದ. ಹಾಗಾಗಿ ಆತನಿಗೆ ಗೊತ್ತಿಲ್ಲದಂತೆಯೇ ಆನಂದ ತೀರಾ ಅವಶ್ಯಕವೆನಿಸುವ ಸಂದರ್ಶಕರನ್ನು ಮಾತ್ರ ಅವನ ಭೇಟಿಗೆ ಬಿಡುತ್ತಿದ್ದ. ಆದರೆ ಯಾಕೋ ಈ ಬಡವನ ಪ್ರಾಮಾಣಿಕ ಹಂಬಲವನ್ನು ಕಂಡು ಅವನನ್ನು ತಡೆಯಲಾಗಲಿಲ್ಲ. ಬಿದಿರನ್ನು ಸೀಳಿ, ಒಪ್ಪವಾಗಿ ಕತ್ತರಿಸಿ ಜೋಡಿಸಿ ಬಿಗಿದು ಮಾಡಿದ ಮಂಚದ ಮೇಲೆ ಮಲಗಿದ್ದ ಗೌತಮ ಅಲ್ಲಿಂದಲೇ ‘ಯಾರದು ಆನಂದ?’ ಎಂದು ಕೇಳಿದ. ಆನಂದ ಒಳಗೆ ಓಡಿ ಹೋಗಿ ‘ಯಾರೋ ಚುಂದನಂತೆ, ಕಮ್ಮಾರ. ನಿನ್ನನ್ನು ಕಾಣುವ ಹಂಬಲದಲ್ಲಿದ್ದಾನೆ’. ಆನಂದನ ಮಾತಿನಲ್ಲಿ ಉತ್ಸಾಹ ಮತ್ತು ‘ಗೌತಮ ಅವನನ್ನು ಭೇಟಿಯಾಗು, ವಾಪಸ್ಸು ಕಳಿಸಬೇಡ’ ಎಂಬ ಯಾಚನೆಯೂ ಇದ್ದುದನ್ನು ಅರ್ಥ ಮಾಡಿಕೊಂಡ ಬುದ್ಧ ಮೆದುವಾಗಿ ನಕ್ಕು ‘ಸರಿ ಕುಳ್ಳಿರಿಸು, ಬಂದೆ’ ಎಂದ.

ಮಟ್ಟಸವಾದ ಜಾಗದಲ್ಲಿ ಬೆಳೆದಿದ್ದ ಒಂದು ದೊಡ್ಡ ಮಾವಿನ ಮರದ ಕೆಳಗೆ ಒಂದು ಕಟ್ಟೆಯಂಥ ಕಲ್ಲನ್ನು ಒಪ್ಪವಾಗಿ ಇಡಲಾಗಿತ್ತು. ಬುದ್ಧ ಯಾರು ಬಂದರೂ ಅದೇ ಹಾಸುಗಲ್ಲಿನ ಮೇಲೆ ಕುಳಿತು ಮಾತಾಡುತ್ತಿದ್ದ. ಶಿಷ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ. ಎದುರಿಗೆ ನೂರಾರು ಮರಗಳು. ಅವುಗಳ ತುಂಬಾ ನಿರಾಳವಾಗಿ ಹಾಡುವ, ಹಾರಾಡುವ ಹಕ್ಕಿಗಳು.

ಬೆಳಕಿನ ಪರ್ವತವೇ ನಡೆದು ಬಂದಂತೆ ಬರುತ್ತಿದ್ದ ಬುದ್ಧನನ್ನು ನೋಡಿ ಚುಂದ ಮತ್ತವನ ಸಹಚರರು ಬೆರಗಾಗಿ ಹೋದರು. ಕೂಡಲೇ ಸಾವರಿಸಿಕೊಂಡು ದೂರದಿಂದಲೇ ನಮಸ್ಕರಿಸಿದರು. ‘ನಿನ್ನನ್ನು ನೋಡಿ ತುಂಬಾ ಸಂತೋಷವಾಯ್ತು ಚುಂದಾ, ಹೇಳು ಹೇಗಿದ್ದೀಯಾ? ನಿನ್ನ ಅನುಮತಿಯಿಲ್ಲದೇ ನಿನ್ನ ಈ ಆಮ್ರವನದಲ್ಲಿ ತಂಗಿದ್ದೇವೆ. ಕೋಪವಿಲ್ಲವಷ್ಟೇ?’ ಎಂದು ಮುಗುಳು ನಗೆ ನಕ್ಕ. ಬುದ್ಧನನ್ನು ನೋಡಿ ಚುಂದನಿಗೆ ಮಾತೇ ಹೊರಡಲಿಲ್ಲ, ತಥಾಗತ ಇತ್ತ ಬಂದದ್ದೇ ಒಂದು ದೊಡ್ಡ ಭಾಗ್ಯ, ಅಂಥದ್ದರಲ್ಲಿ ತನ್ನ ತೋಟದಲ್ಲಿರುವುದೆಂದರೆ ಅದು ಅಹೋ ಭಾಗ್ಯ. ಏನು ಹೇಳಿಯಾನು? ಸುಮ್ಮನೇ ಬುದ್ಧನನ್ನೇ ಕಣ್ತುಂಬ ತುಂಬಿಕೊಂಡ. ಇಡೀ ವಾತಾವರಣ ಧನ್ಯತೆಯಿಂದ ಆರ್ದ್ರವಾಯ್ತು. ಸುಯ್ಯನೇ ಬೀಸಿದ ಗಾಳಿ ಎಲೆಗಳನ್ನುದುರಿಸಿತು. ಹಕ್ಕಿಗಳು ಆಚೀಚೆ ಹಾರಾಡಿ ಕಿಲ ಕಿಲ ನಕ್ಕವು.

‘ಹೇಳು ಚುಂದ ಏನು ಬಂದಿದ್ದು?’ ಬುದ್ಧನ ಪ್ರಶ್ನೆಯಿಂದ ಚುಂದ ಅರೆಕ್ಷಣ ಗಲಿಬಿಲಿಗೊಂಡ. ಏನೆಂದು ಸಂಬೋಧಿಸುವುದು? ‘ಸ್ವಾಮಿ’ ಎನ್ನಲು ಮನಸ್ಸಿಲ್ಲ, ‘ಪ್ರಭು’ ಎಂದು ದೂರವಿರಿಸಲೂ ಆಗುತ್ತಿಲ್ಲ. ಆತ ಎದ್ದು ನಿಂತು ಎರಡೂ ಕೈ ಜೋಡಿಸಿ ‘ತಂದೆ’ ಎಂದ. ಮುಂದಿನದನ್ನು ಹೇಗೆ ಹೇಳುವುದು? ಎಂಬ ಹಿಂಜರಿಕೆಯ ಹುದುಲೊಳಗೆ ಸಿಕ್ಕು ಒದ್ದಾಡತೊಡಗಿದ. ಗೌತಮ ‘ಹೇಳು ಚುಂದ, ಮನಸ್ಸಿನಲ್ಲಿಟ್ಟುಕೊಂಡು ಕೊರಗಬೇಡ. ಹೇಳಬೇಕೆಂದಿರುವುದನ್ನು ಹೇಳಿಬಿಡಬೇಕು’ ಎಂದ. ಆಗ ತುಂಬಾ ವಿನಯದಿಂದ ಚುಂದ ‘ತಂದೆ ನಾನು ಅತ್ಯಂತ ಬಡವ. ರಾಜ ಮಹಾರಾಜರುಗಳಂತೆ, ವ್ಯಾಪಾರಿಗಳಂತೆ ಮೃಷ್ಟಾನ್ನವನ್ನು ಬಡಿಸುವ ಯೋಗ್ಯತೆ ನನಗಿಲ್ಲ. ಆದರೂ ನನ್ನ ಗುಡಿಸಲಿಗೆ ತಾವು ಬಂದು, ನನ್ನ ಮನೆಯಲ್ಲಿ ಊಟ ಮಾಡಬೇಕು ಎಂಬುದು ನನ್ನ ಬಲವಾದ ಇಚ್ಛೆ’ ಎಂದ. ತಥಾಗತನ ಮುಖದಲ್ಲಿ ನಗು ಮೂಡಿತು. ಅದನ್ನು ಕಂಡು ಅಲ್ಲಿದ್ದವರೆಲ್ಲರೂ ಮುಗುಳ್ನಕ್ಕರು. ಚುಂದನಿಗೆ ನಿರಾಸೆಯಾದಂತಾಯ್ತು. ಗೌತಮ ನನ್ನ ಆಮಂತ್ರಣವನ್ನು ತಿರಸ್ಕರಿಸಿದ, ಸರಿ ನನಗೆಲ್ಲಿ ಆ ಯೋಗ್ಯತೆಯಿದೆ? ಎಂದು ತನ್ನನ್ನು ತಾನು ಸಮಾಧಾನಪಡಿಸಿಕೊಳ್ಳಲೆಂಬಂತೆ ನಡುವಿಗೆ ಕಟ್ಟಿಕೊಂಡಿದ್ದ ಟವೆಲ್ಲನ್ನು ಬಿಚ್ಚಿ ಇನ್ನೇನು ಕಣ್ಣೊರೆಸಿಕೊಳ್ಳಬೇಕು. ಅಷ್ಟರಲ್ಲಿ ‘ಚುಂದಾ’ ಎಂಬ ಗೌತಮನ ಅಕ್ಕರೆಯ ಧ್ವನಿ. ಎಲ್ಲರೂ ಶಾಂತರಾದರು. ಗೌತಮ ‘ಚುಂದಾ ನಾನು ಖಂಡಿತ ಬರುತ್ತೇನೆ. ನಾಳೆಯೇ ಆದರೂ ಆಗಲಿ’ ಎಂದ. ಚುಂದ ‘ಅಯ್ಯೋ ಒಪ್ಪಿಕೊಂಡೆಯಾ ತಂದೆ? ಅಥವಾ ನಾನೇ ತಪ್ಪಾಗಿ ಕೇಳಿಸಿಕೊಂಡೆನೇ’ ಎಂದ ಅಸ್ಪಷ್ಟವಾದ. ಗೌತಮ ‘ಇಲ್ಲ ಇಲ್ಲ ನೀನು ಸರಿಯಾಗೇ ಕೇಳಿಸಿಕೊಂಡಿರುವೆ, ನಾನು ಖಂಡಿತವಾಗಿಯೂ ಬರುತ್ತೇನೆ’ ಎಂದು ಮತ್ತೊಮ್ಮೆ ಹೇಳಿದ. ಚುಂದನಿಂದ ಯಾವ ಮಾತೂ ಹೊರಡಲಿಲ್ಲ. ಮತ್ತೆ ದೂರ ನಿಂತು ನೆಲ ಮುಟ್ಟಿ ನಮಸ್ಕರಿಸಿದ. ಅವನ ಕಣ್ಣುಗಳು ಸಂತೋಷದಿಂದ ತುಂಬಿ ತುಳುಕಾಡುತ್ತಿದ್ದವು. ಅಲ್ಲಿಂದ ಅವಸರವಸರವಾಗಿ ಹೊರಟುಬಿಟ್ಟ. ಈಗಲೇ ಊಟಕ್ಕೆ ಸಿದ್ಧಪಡಿಸುವನೇನೋ ಎಂಬಂತೆ. ಅವನು ಹೋದತ್ತಲೇ ನೋಡುತ್ತಿದ್ದ ಬುದ್ಧ ‘ಆನಂದ, ನೋಡಿದೆಯಾ ಚುಂದನ ಮುಖದಲ್ಲಿ ಎಂಥ ಮುಗ್ಧತೆಯಿದೆ! ಅನ್ನ ಹಾಕುವೆನೆಂಬ ಅಹಮಿಕೆಯಾಗಲೀ ನಾಲ್ಕು ಜನರಿಗೆ ಅದನ್ನು ತೋರಿಸಬೇಕೆನ್ನುವ ಅಭಿಮಾನವಾಗಲೀ ಒಂದಿನಿತೂ ಇಲ್ಲ ನೋಡು’ ಎಂದ. ಆಗ ಆನಂದ ‘ಅಲ್ಲ ನಿನ್ನೆಯಿಂದ ಎಷ್ಟೊಂದು ಜನ ಎಡತಾಕಿದ್ದರು ನಿನ್ನನ್ನು ಕರೆದೊಯ್ಯಲು. ಅನಾರೋಗ್ಯದ ನೆಪವೊಡ್ಡಿ ನಿರಾಕರಿಸಿದೆ. ಈಗ ನೋಡಿದರೆ….’. ಬುದ್ಧ ‘ಇನ್ನದರ ಕುರಿತು ಮಾತಾಡುವುದು ಬೇಡ’ ಎನ್ನುವಂತೆ ಕೈ ಎತ್ತಿ ಸನ್ನೆ ಮಾಡಿದ. ಉತ್ಸಾಹದಲ್ಲಿ ಓಡಿದಂತೆಯೇ ನಡೆಯುತ್ತಿದ್ದ ಚುಂದ ಮತ್ತವನ ಸಹಚರರ ಆಕೃತಿಗಳಲ್ಲೇ ಬುದ್ಧನ ನೋಟ ನೆಟ್ಟಿತ್ತು. ಎಷ್ಟು ವೇಗದಲ್ಲಿ ಬಂದಿದ್ದನೋ ಅದಕ್ಕಿಂತಲೂ ಎರಡುಪಟ್ಟು ವೇಗವಾಗಿ ಆತ ನಡೆಯುತ್ತಿದ್ದ.

ಬೆಳಗಿನ ಸೂರ್ಯ ಅದೇಕೋ ಮತ್ತೆ ಮತ್ತೆ ಮೋಡಗಳ ಹಿಂದೆಯೇ ಸರಿಯುತ್ತಿದ್ದ. ಗಾಳಿ ನಿಂತು ಹೋಗಿತ್ತು. ಗಿಡ ಮರಗಳೆಲ್ಲ ಹಾಳೆಯಲ್ಲಿ ಬರೆದಿಟ್ಟ ಚಿತ್ರಗಳಂತೆ ಸ್ತಬ್ಧವಾಗಿದ್ದವು. ಹಕ್ಕಿಗಳು ಒಮ್ಮೊಮ್ಮೆ ತಥಾಗತನೆದುರೇ ಅತ್ತಿಂದಿತ್ತ, ಇತ್ತಿಂದತ್ತ ಹಾರಿ ರೆಕ್ಕೆ ಬಡಿದು ಆ ಮೌನವನ್ನು ಇನ್ನೂ ಗಾಢವಾಗಿಸುತ್ತಿದ್ದವು. ಇಡೀ ಪ್ರಕೃತಿಯನ್ನು ಯಾವುದೋ ಅಸ್ವಸ್ಥತೆ ಆವರಿಸಿಕೊಂಡಿತ್ತು. ಆನಂದ ಕೊನೆಯ ಪ್ರಯತ್ನವೆಂಬಂತೆ ‘ಗೌತಮ ನೀನೆಷ್ಟು ಬಳಲಿದ್ದೀ, ಒಂದು ತಿಂಗಳಿಂದ ನಿರಂತರವಾಗಿ ಪ್ರಯಾಣ ಮಾಡಿದ್ದೀ. ಇಂಥ ಪರಿಸ್ಥಿತಿಯಲ್ಲಿ ಚುಂದನಲ್ಲಿಗೆ ಹೋಗಲೇಬೇಕೇ?’ ಎಂದ. ಆ ಮಾತಿಗೆ ನಗುತ್ತ ಬುದ್ಧ ಉತ್ತರೀಯವನ್ನು ಹೊದ್ದು ನಡೆದೇಬಿಟ್ಟ.

ಶಿಷ್ಯರೆಲ್ಲ ಹಿಂಬಾಲಿಸಿದರು.

ಇವರನ್ನೇ ಎದುರು ನೋಡುತ್ತಿದ್ದ ಚುಂದ ಓಡೋಡಿ ಬಂದು ಬರಮಾಡಿಕೊಂಡ. ಇಡೀ ಅಂಗಳವನ್ನು ಗುಡಿಸಿ ಸ್ವಚ್ಛ ಮಾಡಲಾಗಿತ್ತು. ಧೂಳು ಏಳಬಾರದೆಂದು ನೀರು ಚಿಮುಕಿಸಿದ್ದರಿಂದ ಮಣ್ಣಿನ ಘಮಲು ಹರಡಿತ್ತು. ಸೆಗಣಿಯಿಂದ ನಿನ್ನೆಯಷ್ಟೇ ಸಾರಿಸಿದ ನೆಲ. ಸ್ವಲ್ಪ ಕೆಮ್ಮಣ್ಣು ಕಲಸಿ ಲೇಪಿಸಿದ ಜಗುಲಿ. ಅದರ ಮೇಲೆ ಮಕ್ಕಳು ಸುಣ್ಣದಿಂದ ನವಿಲು, ಗಿಳಿ, ಆನೆ, ಹೂವುಗಳನ್ನು ಬರೆದಿದ್ದರು. ಯಾವ ಸಾಮ್ರಾಟನ ಆಸ್ಥಾನದಲ್ಲೂ ಇಷ್ಟೊಂದು ಖುಷಿಯಾಗಿರದ ಗೌತಮನನ್ನು ಕಂಡು ಆನಂದನಿಗೆ ಆಶ್ಚರ್ಯವಾಯ್ತು. ಕಟ್ಟೆಯ ಮೇಲೆ ಹಾಸಲಾದ ಹಾಸಿಗೆಯ ಮೇಲೆ ಕುಳಿತ ತಥಾಗತ ಮುಜುಗರದಲ್ಲೇ ಓಡಾಡುತ್ತಿದ್ದ ಚುಂದನನ್ನು ಹತ್ತಿರಕ್ಕೆಳೆದುಕೊಂಡ. ಚುಂದ ತನ್ನ ದೇಹವನ್ನು ಹಿಡಿಯಷ್ಟಾಗಿಸಿಕೊಂಡು ಮುದುಡಿ ಕುಳಿತುಕೊಂಡ. ತಥಾಗತ ಚುಂದನ ಮನೆ, ಮಕ್ಕಳು, ಕುಟುಂಬ, ತೋಟ, ವ್ಯವಸಾಯ ಮುಂತಾಗಿ ಅಕ್ಕರೆಯಿಂದ ವಿಚಾರಿಸುತ್ತಿದ್ದರೆ ಚುಂದ ಯಾವುದೋ ಸ್ವಪ್ನ ಲೋಕದಲ್ಲಿದ್ದಂತೆ ಉತ್ತರಿಸುತ್ತಿದ್ದ. ಸ್ವಲ್ಪ ಹೊತ್ತು ಹೀಗೇ ಕಳೆದ ಮೇಲೆ ಕೈ ಕಾಲು ತೊಳೆದುಕೊಳ್ಳಲು ಮಣ್ಣ ಕುಡಿಕೆಯಲ್ಲಿ ಬಿಸಿನೀರು ಕೊಟ್ಟರು. ನಂತರ ಊಟಕ್ಕೆ ಕೂರಿಸಲಾಯಿತು. ಅತ್ಯಂತ ಕುಶಲತೆಯಿಂದ ಮಾಡಿದ ಎಲೆಗಳನ್ನು ಹಾಕಲಾಯ್ತು. ಜೊತೆಗೆ ಚಿಕ್ಕ ಚಿಕ್ಕ ದೋಣಾಗಳನ್ನೂ ಇಡಲಾಯಿತು. ಒಂದರಲ್ಲಿ ಅಕ್ಕಿಯಿಂದ ಮಾಡಿದ ಖೀರು, ಇನ್ನೊಂದರಲ್ಲಿ ನಿನ್ನೆಯ ದಿನ ಕಾಡಲ್ಲೆಲ್ಲ ಅಲೆದು ಇಂದಿನ ಭೋಜನಕ್ಕೆಂದೇ ವಿಶೇಷವಾಗಿ ಆಯ್ದು ತಂದಿದ್ದ ಅಣಬೆಗಳಿಂದ ಮಾಡಿದ ಸಬ್ಜಿ(ಸೂಕರ ಮದ್ದವ). ಮತ್ತೊಂದರಲ್ಲಿ ಕಡಲೆಕಾಳುಗಳನ್ನು ಹದವಾಗಿ ಬೇಯಿಸಿ ಮಾಡಿದ ಪಲ್ಯ, ಮತ್ತೆ ಬಿಸಿ ಬಿಸಿಯಾಗಿ ಕರಿ ಕರಿದು ತರುತ್ತಿದ್ದ ಪೂರಿಗಳು. ಚುಂದನ ಪ್ರೀತಿ ಆದರಗಳಿಂದ ಬುದ್ಧ ಸಂಪ್ರೀತನಾಗಿದ್ದ.

ಒಂದು ತುತ್ತು ಪೂರಿ ಮುರಿದು ಅಣಬೆಯ ಸಬ್ಜಿಯಲ್ಲಿ ಅದ್ದಿ ಬಾಯಿಗೆ ಹಾಕಿಕೊಂಡ. ಯಾಕೋ ಕಹಿ ಎನಿಸಿತು. ಇನ್ನೊಂದು ತುತ್ತು ತಿಂದ. ಅದೂ ಕೂಡ ಕಹಿಯೇ ಆಗಿತ್ತು. ಆದರೆ ಅದನ್ನು ತೋರಗೊಡದೇ ತಿನ್ನತೊಡಗಿದ. ಮುಖದ ಮೇಲೆ ಮಂದಹಾಸ ತಂದುಕೊಳ್ಳುತ್ತ ಬುದ್ಧ ಹಾಕಿಸಿಕೊಂಡಿದ್ದರಲ್ಲಿ ಅರ್ಧ ತಿಂದ. ಆ ಅಣಬೆಯ ಸಬ್ಜಿಯ ಪಾತ್ರೆಯನ್ನು ಬುದ್ಧನ ಮುಂದೆಯೇ ಇಡಲಾಗಿತ್ತು. ಅದನ್ನು ಆತನಿಗೆಂದೇ ವಿಶೇಷವಾಗಿ ಸಿದ್ಧಪಡಿಸಿದೆ ಎಂಬುದು ಸ್ಪಷ್ಟವಿತ್ತು. ಕಹಿಯಿದೆ ಎಂದು ಮುಖ ಕಿವುಚಿದರೆ ಚುಂದನಿಗೆ ಬೇಸರವಾಗುವುದಲ್ಲದೇ ಚುಂದ ತನ್ನನ್ನು ಕೊಲ್ಲಲು ವಿಷ ಹಾಕಿದ್ದಾನೆ ಎಂದು ಜನ ರೊಚ್ಚಿಗೆದ್ದು ಅನಿಗೇನಾದರೂ ಅಪಾಯ ಮಾಡಿಯಾರು ಎಂದು ಸುಮ್ಮನೇ ಸಂತೋಷವನ್ನು ನಟಿಸಿದ. ಆಮೇಲೆ ‘ಚುಂದಾ’ ಎಂದ. ತಕ್ಷಣವೇ ಓಡಿ ಬಂದ ಚುಂದ ‘ತಂದೆ’ ಎಂದ. ಅರ್ಧ ಹಾಗೇ ಉಳಿದಿರುವ ಎಲೆಯನ್ನು ಮಡಿಚಿ ಚುಂದನ ಕೈಗಿಡುತ್ತ ಹೇಳಿದ. ‘ನೀನು ಈ ಸೂಕರ ಮದ್ದವವನ್ನು(ಅಣಬೆಯ ಪಲ್ಯ) ನನಗಾಗಿಯೇ ಮಾಡಿದ್ದಲ್ಲವೇ?’ ಅದಕ್ಕೆ ಆತ ‘ಹೌದು ತಂದೆ’ ಎಂದ. ಅದಕ್ಕೆ ಬುದ್ಧ ‘ಸರಿ ಹಾಗಾದರೆ ಇನ್ನುಳಿದವರಿಗಾರಿಗೂ ಇದನ್ನು ಬಡಿಸಬೇಡ’ ಎಂದ. ಚುಂದನಿಗೆ ಗಾಬರಿಯಾಯಿತು. ‘ಯಾಕೆ ತಂದೆ’ ಎಂದ. ಅದಕ್ಕೆ ‘ಅಷ್ಟೊಂದು ಹೆದರಬೇಡ ಚುಂದ, ಈ ವಿಶೇಷವಾದ ಅಡುಗೆಯನ್ನು ನೀನು ತಥಾಗತನಿಗಾಗಿಯೇ ಮಾಡಿದ್ದೆ. ಆತ ಅದನ್ನು ಸ್ವೀಕರಿಸಿದ. ಅವನಲ್ಲದೇ ಅದನ್ನು ಯಾರೂ ಸೇವಿಸಬಾರದು. ಉಳಿದವರಿಗೆ ಪೂರಿಯಿದೆ. ಖೀರಿದೆ. ಕಡಲೆ ಕಾಳು ಪಲ್ಯವಿದೆ. ಅದನ್ನು ಬಡಿಸು. ನಿನ್ನ ಅಮಿತಾಭನಿಗೆಂದೇ ತಯಾರಿಸಿದ ಅದನ್ನು ಬೇರಾರೂ ಸೇವಿಸಬಾರದು. ಅದನ್ನು ಒಂದು ತಗ್ಗು ತೆಗೆದು ಮಣ್ಣಲ್ಲಿ ಹೂತುಬಿಡು’ ಎಂದ. ಇದರಲ್ಲೇನೋ ಆಧ್ಯಾತ್ಮಿಕ ಅರ್ಥವಿರಬಹುದು ಎಂದು ಯೋಚಿಸಿದ ಚುಂದ, ಬುದ್ಧ ಬಿಟ್ಟ ಎಲೆಯ ಜೊತೆ ಉಳಿದ ಅಣಬೆಯ ಪಲ್ಯವನ್ನೂ ಮನೆಯ ಹಿಂದಿನ ತೋಟದಲ್ಲಿ ತಗ್ಗು ತೆಗೆದು ಹೂತು ಅದರ ಮೇಲೆ ಒಂದು ಮಾವಿನ ಸಸಿಯನ್ನು ನೆಟ್ಟು ಬಂದ. ಇದೆಲ್ಲವನ್ನು ಗಮನಿಸುತ್ತಿದ್ದ ಆನಂದನಿಗೆ ವಿಚಿತ್ರವೆನಿಸಿತು.

ಊಟದ ನಂತರ ಚುಂದ, ಆತನ ಹೆಂಡತಿ, ಮಕ್ಕಳು ಆ ಊರಿನ ಜನರೆಲ್ಲ ಬೀಳ್ಕೊಡಲು ಬಂದರು. ತಥಾಗತ ತನ್ನ ಮನೆಗೆ ಬಂದು ಊಟ ಮಾಡಿದ ಎಂಬುದು ಕನಸೋ ನನಸೋ ಒಂದೂ ಗೊತ್ತಾಗದ ಸ್ಥಿತಿಯಲ್ಲಿ ಅತ್ತಿತ್ತ ಆತ ಓಡಾಡುತ್ತಿದ್ದ. ಎಲ್ಲರಿಗೂ ಕಣ್ಣಲ್ಲೇ ಕರುಣೆಯನ್ನು ಹರಿಸಿ ಬುದ್ಧ ಅವರಿಂದ ಬೀಳ್ಕೊಂಡು ಹೊರಟ. ಅವನ ಹಿಂದೆ ಆನಂದ ಮತ್ತು ಇತರ ಶಿಷ್ಯರು ಹೊರಟರು.

‘ಚುಂದನ ಮುಖದಲ್ಲಿ ಎಂಥಾ ಧನ್ಯತೆ ಇತ್ತಲ್ಲ?’ ಗೌತಮನನ್ನು ಮಾತಿಗೆಳೆಯಲುಆನಂದ ಪ್ರಯತ್ನಿಸಿದ. ಯಾಕೋ ಬುದ್ಧ ತುಂಬಾ ಅವಸರ ಮತ್ತು ಉದ್ವೇಗದಲ್ಲಿ ನಡೆಯುತ್ತಿದ್ದಾನೆಂದೆನಿಸುತ್ತಿತ್ತು. ಬುದ್ಧ ‘ಹ್ಞೂ’… ಎಂದ. ನಡಿಗೆಯ ವೇಗ ಇನ್ನೂ ಹೆಚ್ಚಾಯಿತು. ಆತನ ಅಸಹಜವಾದ ಈ ನಡೆ ಆನಂದನಿಗೆ ಆತಂಕವನ್ನುಂಟು ಮಾಡತೊಡಗಿತು. ಊರನ್ನು ದಾಟಿ ಆಮ್ರವನದ ದಾರಿ ಸಿಕ್ಕಿತು. ಗೌತಮನಿಗೆ ಹೊಟ್ಟೆ ತೊಳೆಸಿದಂತಾಯ್ತು. ವಾಂತಿಯೂ ಬಂದ ಹಾಗೆ ಅನ್ನಿಸಿ ವಿಪರೀತ ಬೆವರತೊಡಗಿದ. ಆನಂದ ಕಂಗಾಲಾದ. ಹತ್ತಿರವೇ ಹರಿಯುತ್ತಿದ್ದ ತೊರೆಯೊಂದಕ್ಕೆ ಓಡಿ ಹೋಗಿ ಕೈಗೆ ಸಿಕ್ಕ ಎಲೆಗಳಲ್ಲೇ ದೋಣಾ ಮಾಡಿಕೊಂಡು ತಂದು ಒಂದಿಷ್ಟು ನೀರು ಕುಡಿಸಿದ. ಚುಂದನ ಮನೆಯಲ್ಲಿ ಉಂಡ ಊಟ ಬುದ್ಧನ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡಿತ್ತು. ಆಮೇಲೆ ಭೇದಿಯೂ ಶುರುವಾಯ್ತು. ಆನಂದನಿಗೆ ಎಲ್ಲವೂ ಸ್ಪಷ್ಟವಾಯ್ತು. ಚುಂದನ ಮನೆಯಲ್ಲಿ ಬುದ್ಧ ಸೇವಿಸಿದ್ದು ಅಣಬೆಯ ಸಬ್ಜಿ. ಅಣಬೆ ತುಂಬಾ ಒಳ್ಳೆಯದು. ಮಳೆಗಾಲದ ಆರಂಭದಲ್ಲಿ ಮಾತ್ರವೇ ಅದು ಸಿಗುವುದು. ತುಂಬಾ ಅಪರೂಪ. ಆದರೆ ತರುವಾಗ ನೋಡಿ ಎಚ್ಚರಿಕೆಯಿಂದ ತರಬೇಕು. ಅದರಲ್ಲಿ ಕೆಲವು ವಿಷಕಾರಿ ಅಣಬೆಗಳೂ ಇರುತ್ತವೆ. ಚುಂದ ಆಯ್ದು ತಂದ ಅಣಬೆಗಳಲ್ಲಿ ಅಂಥದ್ದೂ ಇದ್ದಿರಬೇಕು..!

ಗೌತಮನ ಆರೋಗ್ಯ ತೀರಾ ಹದಗೆಟ್ಟಿತು. ಹಾಗೂ ಹೀಗೂ ಮಾಡಿ ಇತರ ಶಿಷ್ಯರೊಂದಿಗೆ ಎಲ್ಲರೂ ತಾವು ತಂಗಿದ್ದ ಆಮ್ರವನಕ್ಕೆ ತಲುಪಿದರು. ಎರಡು ದಿನಗಳಲ್ಲಿ ಬುದ್ಧ ತೀರಾ ಅಶಕ್ತನಾದ. ಏಳಲೂ ಕುಳಿತುಕೊಳ್ಳಲೂ ಯಾರೋ ಒಬ್ಬರ ಆಸರೆ ಬೇಕೇ ಬೇಕಾದ ಪರಿಸ್ಥಿತಿ. ಆತಂಕದಿಂದ ಓಡಾಡಿ ಆರೈಕೆ ಮಾಡುತ್ತಿದ್ದ ಆನಂದನನ್ನು ನೋಡಿ ಒಮ್ಮೊಮ್ಮೆ ಬುದ್ಧ ನಗುತ್ತಿದ್ದ. ಆತ ಅಮ್ಮನಂತೆ ಗದರಿ ಗದರಿ ಔಷಧಿ, ಊಟ ತಿನ್ನಿಸುತ್ತಿದ್ದ. ಅಂತೂ ಅವನ ಕಾಳಜಿ ಮತ್ತು ಆರೈಕೆಗಳಿಂದಾಗಿ ಒಂದಷ್ಟು ಚೇತರಿಸಿಕೊಂಡ ಮೇಲೆ ಬುದ್ಧ ಕುಶೀನಾರಕ್ಕೆ ಹೋಗೋಣವೆಂದು ಹಟ ಹಿಡಿದ. ಆ ಪರಿಸ್ಥಿತಿಯಲ್ಲಿ ಆತನನ್ನು ಕುಶೀನಾರಕ್ಕೆ ಕರೆದೊಯ್ಯುವುದು ತುಂಬಾ ದುಸ್ತರವಾದ ಕೆಲಸವಾಗಿತ್ತು. ಆದರೂ ಬುದ್ಧ ಕೇಳಲಿಲ್ಲ.

ಇಡೀ ತಂಡ ಕುಶೀನಾರಕ್ಕೆ ಹೊರಟಿತು. ಸ್ವಲ್ಪ ದೂರ ಕ್ರಮಿಸಿದ ನಂತರ ತಥಾಗತನಿಗೆ ಮುಂದೆ ನಡೆಯಲಾಗಲಿಲ್ಲ. ಏದುಸಿರು ಬರತೊಡಗಿತು. ‘ಆನಂದ ನನಗೆ ನಡೆಯಲಾಗುತ್ತಿಲ್ಲ ಅಗೋ ಅಲ್ಲಿ ಕಾಣುತ್ತಿದೆಯಲ್ಲ ಆ ಮರದ ನೆರಳಲ್ಲಿ ವಸ್ತ್ರ ಹಾಸು, ನಾನು ಮಲಗಬೇಕು’ ಎಂದ. ಆನಂದ ಕಂಕುಳಲ್ಲಿ ಹಿಡಿದುಕೊಂಡಿದ್ದ ವಸ್ತ್ರವನ್ನು ಬಿಚ್ಚಿ ಹಾಸಿದ. ಬುದ್ಧ ನಿಟ್ಟುಸಿರುಬಿಟ್ಟು ಕಾಲುಗಳನ್ನು ನಿಡಿದಾಗಿ ಚಾಚಿ ಒಂದಿಷ್ಟು ಹೊತ್ತು ಒರಗಿಕೊಂಡ. ಸಮೀಪದ ತೊರೆಯಿಂದ ಆನಂದ ನೀರು ತಂದು ಕುಡಿಸಿದ. ಸ್ವಲ್ಪ ಸುಧಾರಿಸಿಕೊಂಡ ಮೇಲೆ ಮತ್ತೆ ಪ್ರಯಾಣ ಆರಂಭವಾಯ್ತು. ಆದರೆ ಕಾಕುತ್ಥ ನದಿಯನ್ನು ತಲುಪುವಷ್ಟರಲ್ಲಿ ಸಾಕುಸಾಕಾಯ್ತು. ಆ ನದಿಯ ತಿಳಿಯಾದ ಮತ್ತು ತಂಪಾದ ನೀರನ್ನು ನೋಡಿ ಬುದ್ಧನಿಗೆ ಸ್ನಾನ ಮಾಡಬೇಕೆನಿಸಿತು. ತೃಪ್ತಿಯಾಗುವವರೆಗೂ ನೀರಲ್ಲಿ ಮುಳು ಮುಳುಗೆದ್ದ. ಬೊಗಸೆ ತುಂಬಿ ತುಂಬಿ ಮನಸೋ ಇಚ್ಛೆ ನೀರನ್ನು ಕುಡಿದ. ತುಂಬಾ ಹಿತವೆನಿಸಿತು. ಆದರೂ ದೇಹದ ನಿಶ್ಯಕ್ತಿ ದೂರವಾಗಲಿಲ್ಲ. ನಡೆದುಬಂದ ದಣಿವು ಮತ್ತು ಅನಾರೋಗ್ಯ ಅವನನ್ನು ಹಿಂಡಿ ಹಿಪ್ಪೆ ಮಾಡಿದ್ದವು. ನದಿಯಿಂದ ಎದ್ದು ಬಂದು ಕುಳಿತುಕೊಂಡವನು ನನಗೇಕೋ ತುಂಬಾ ಆಯಾಸವಾಗುತ್ತಿದೆ ಮಲಗಬೇಕು ಎಂದ. ಆನಂದ ತೀವ್ರವಾಗಿ ಅಸ್ವಸ್ಥಗೊಂಡ ತನ್ನ ಮಗುವನ್ನು ನೋಡುವ ನಿಸ್ಸಹಾಯಕ ತಾಯಿಯಂತೆ ಬುದ್ಧನನ್ನು ಆರ್ದ್ರವಾಗಿ ನೋಡಿದ. ಬುದ್ಧ ನಕ್ಕು ‘ಆನಂದ ಯಾಕೆ ಕಳವಳಪಡುತ್ತೀ ಈ ದೇಹಕ್ಕೆ ವಯಸ್ಸಾಗಿದೆ. ಪ್ರಕೃತಿ ಸಹಜವಾದ ಹಣ್ಣುತನ ಇದಕ್ಕೂ ಆಗಲೇಬೇಕಲ್ಲ. ಮಿಡಿ ಕಾಯಾಗಬೇಕು, ಕಾಯಿ ಹಣ್ಣಾಗಬೇಕು, ಹಣ್ಣು ಮರದಿಂದ ಉದುರಿ ಬಿದ್ದು ಮಣ್ಣಲ್ಲಿ ಮಣ್ಣಾಗಬೇಕು….’ ತಥಾಗತ ಇನ್ನೂ ಏನೇನೋ ಹೇಳುವವನಿದ್ದ. ಆನಂದನ ಕೆಂಪಾದ ಕಣ್ಣುಗಳನ್ನು ಕಂಡು ಸುಮ್ಮನಾದ.

ಮುಂಜಾವದ ಹೂಬಿಸಿಲು ಒಳಗೂ ತೂರಿ ಬರುತ್ತಿತ್ತು, ಹಕ್ಕಿಗಳು ಚಿಂವ್ ಚಿಮು, ಕಿಚ ಪಿಚ, ಚಿಲಿ ಪಿಲಿ ಎಂದೇನೇನೋ ಮಾತಾಡಿಕೊಳ್ಳುತ್ತಿದ್ದವು. ತಥಾಗತನ ದೇಹಕ್ಕೆ ಒಂದಿಷ್ಟು ಶಕ್ತಿ ಬಂದಂತಾಗಿತ್ತು. ಆನಂದ ಬಂದು ಹೊರಗೆ ಮಡಕೆಯಲ್ಲಿ ತುಂಬಿಟ್ಟಿದ್ದ ನೀರು ತೆಗೆದುಕೊಂಡು ಮುಖ ತೊಳೆದುಕೊಂಡ. ಆತ ಗಂಭೀರವಾಗಿದ್ದುದನ್ನು ಕಂಡು ಬುದ್ಧ ಮೆಲ್ಲಗೆ ‘ಆನಂದಾ’ ಎಂದು ಕರೆದ. ಆತ ಮಾತಾಡಲಿಲ್ಲ. ಬುದ್ಧ ನಕ್ಕ. ಆನಂದನಿಗೆ ಇನ್ನಿಲ್ಲದ ಕೋಪ ಬಂತು. ಗೌತಮನನ್ನು ದುರುಗುಟ್ಟಿ ನೋಡಿದ. ಬುದ್ಧ ದೇಹ ತ್ಯಾಗ ಮಾಡುವ ವಿಷಯ ಆನಂದನನ್ನು ಬಿಟ್ಟರೆ ಬೇರಾರಿಗೂ ತಿಳಿದಿರಲಿಲ್ಲ.

ಗೌತಮ ಪದ್ಮಾಸನವನ್ನು ಹಾಕಿ ಕುಳಿತುಕೊಂಡ. ಅವನಿಗೆ ಗೊತ್ತಾಗಿತ್ತು ಆನಂದನ ಅಳುವಿಗೆ ಅವರಿಬ್ಬರ ಮಧ್ಯೆ ನಿನ್ನೆ ರಾತ್ರಿ ನಡೆದ ಸಂಭಾಷಣೆಯೇ ಕಾರಣ ಎಂದು. ಆನಂದನನ್ನು ಹೇಗೆ ಸಮಾಧಾನ ಮಾಡಬೇಕು ಎಂಬ ಹೊಸ ಚಿಂತೆ ಅವನನ್ನೀಗ ಕಾಡತೊಡಗಿತು. ಎಷ್ಟೋ ಹೊತ್ತು ಹಾಗೇ ಕುಳಿತಿದ್ದ. ನಿನ್ನೆಯ ರಾತ್ರಿ ಗೌತಮ ಆನಂದನಿಗೆ ಆ ತನ್ನ ಅಚಲವಾದ ನಿರ್ಧಾರವನ್ನು ಹೇಳಿದ್ದ. ಆಘಾತಕ್ಕೊಳಗಾದಂತಿದ್ದ ಆನಂದ ‘ಏನಾಗಿದೆ ನಿನಗೆ? ಹೀಗೇಕೆ ಮಾತನಾಡುತ್ತಿರುವೆ? ಇನ್ನೂ ಇರಬೇಕು ನೀನು, ನಾನು ಇಷ್ಟು ಬೇಗ ನಿನ್ನನ್ನು ಹೋಗಲು ಬಿಡುವುದಿಲ್ಲ. ಇನ್ನೊಮ್ಮೆ ಹೀಗೆಲ್ಲ ದಯವಿಟ್ಟು ಮಾತಾಡಬೇಡ’ ಎಂದು ಪರಿ ಪರಿಯಾಗಿ ಯಾಚಿಸಿದ್ದ. ಆದರೆ ಗೌತಮ ನಿರ್ಧರಿಸಿಯಾಗಿತ್ತು. ಈ ಸಂಗತಿಯನ್ನು ಅರಗಿಸಿಕೊಳ್ಳಲಾಗದೇ ಆನಂದ ಹುಚ್ಚನಂತೆ ಏನೇನೋ ಬಡಬಡಿಸಿದ್ದ. ‘ನೀ ಹೋದರೆ ನಾನು ಯಾರಿಗಾಗಿ ನೀರು ತರಲಿ? ಯಾರ ಕಾಲನ್ನೊತ್ತಲಿ, ಯಾರಿಗೆ ಹಾಸಿಗೆ ಹಾಸಿ ಕೊಡಲಿ, ಧರ್ಮದ ಕುರಿತು ಯಾರೊಂದಿಗೆ ಮಾತಾಡಲಿ?’ ಎಂದು ಒತ್ತರಿಸಿ ಬರುತ್ತಿದ್ದ ದುಃಖವನ್ನು ತಡೆದೂ ತಡೆಯದವನಾಗಿ ಬಿಕ್ಕಿದ್ದ.

ಎಂಬತ್ತು ವಸಂತಗಳನ್ನು ಪೂರೈಸಿದ್ದರೂ ಗೌತಮನ ಚರ್ಮದಲ್ಲಿ ಒಂದಿನಿತೂ ಸುಕ್ಕು ಕಾಣುತ್ತಿರಲಿಲ್ಲ. ಅಷ್ಟೊಂದು ಕೂದಲೂ ನರೆತಿರಲಿಲ್ಲ. ಕಂಠ ಕುಗ್ಗಿರಲಿಲ್ಲ. ಬೆನ್ನು ಬಾಗಿರಲಿಲ್ಲ. ಸೂರ್ಯನಿಗೆ ವಿಮುಖನಾಗಿ ಧ್ಯಾನ ಮುದ್ರೆಯಲ್ಲಿ ಕುಳಿತಿದ್ದ ಆತನೇ ಒಬ್ಬ ಸೂರ್ಯನಂತೆ ಕಾಣುತ್ತಿದ್ದ. ಅಂದು ಸಾಲವನದ ವೀರರನ್ನು ಕುರಿತು ಕೆಲವು ಮಾತುಗಳನ್ನು ಹೇಳಿದ. ‘ನೂರು ವೀರರನ್ನು ರಣಾಂಗಣದಲ್ಲಿ ಗೆಲ್ಲುವವನಿಗಿಂತ ತನ್ನನ್ನು ತಾ ಗೆದ್ದವನೇ ನಿಜವಾದ ವೀರ’ ಎಂಬುದು ಆ ಮಾತುಗಳ ಸಾರವಾಗಿತ್ತು. ನಂತರ ಅಹಿಂಸೆಯ ಮಹತ್ವ, ಸದಾಚಾರದ ಗರಿಮೆ, ಕರ್ತವ್ಯ ನಿಷ್ಠೆ, ಪರಧರ್ಮ ಸಹಿಷ್ಣುತೆ ಮುಂತಾದ ವಿಚಾರಗಳನ್ನು ಹೇಳಿದ.

ಇನ್ನು ಮುಂದಿನ ದೃಶ್ಯವನ್ನು ನೋಡಲಾರೆನೆಂಬಂತೆ ಸೂರ್ಯ ಅವಸರವಸರವಾಗಿ ಪಶ್ಚಿಮ ದಿಗಂತದತ್ತ ಇಳಿಯುತ್ತಿದ್ದ. ಆಗಲೇ ಸುಭದ್ರನೆಂಬ ಪರಿವ್ರಾಜಕ ಬಂದ. ಗೌತಮ ಅವನಿಗೂ ಸುದೀರ್ಘವಾದ ಉಪದೇಶವನ್ನಿತ್ತ. ಪ್ರಭಾವಿತನಾದ ಆ ಪರಿವ್ರಾಜಕ ಕೊನೆಗೆ ‘ತಥಾಗತ ನಿನಗೆ ಶರಣು, ನಿನ್ನ ಧರ್ಮಕ್ಕೆ ಶರಣು, ನಿನ್ನ ಸಂಘಕ್ಕೆ ಶರಣು’ ಎಂದು ಸಂಪೂರ್ಣವಾಗಿ ಶರಣಾದ.

ಕತ್ತಲಾವರಿಸಲು ಹವಣಿಸುತ್ತಿದ್ದರೂ, ನಾನು ಬುದ್ಧನನ್ನು ನೋಡದೇ, ಆತನನ್ನು ಲೋಕಕ್ಕೆ ಕಾಣಿಸದೇ ಇರಲಾರೆ ಎನ್ನುವಂತೆ ಹುಣ್ಣಿಮೆಯ ಚಂದ್ರ ಅವಧಿಗೂ ಮುಂಚೆಯೇ ಹಾಜರಾದ. ಮುಂದೆ ಅನೇಕ ಶಿಷ್ಯರು ಧರ್ಮ ಜಿಜ್ಞಾಸುಗಳೂ ಸೇರಿದ್ದರು. ಎಲ್ಲರ ಮುಖದಲ್ಲೂ ಒಂದು ರೀತಿಯ ಮ್ಲಾನದ ಮೌನ ಆವರಿಸಿಬಿಟ್ಟಿತ್ತು. ಆದರೂ ಬುದ್ಧ ಹೇಳುತ್ತಿದ್ದ. ‘ನೋಡಿ ಸಹೋದರರೇ ಇಷ್ಟು ಸುದೀರ್ಘವಾದ ಹಾದಿಯನ್ನು ನನ್ನೊಂದಿಗೆ ನಡೆದಿದ್ದೀರಿ. ಧರ್ಮಕ್ಕೆ ಬೇರೆಯದೇ ಅರ್ಥವನ್ನು ನಾವು ನೀವೆಲ್ಲ ಸೇರಿ ಕಂಡುಕೊಂಡಿದ್ದೇವೆ. ನಾನು ಕಂಡುಕೊಂಡ, ನಿಮಗೆ ತಿಳಿಸಲೆತ್ನಿಸಿದ ಧರ್ಮ ನಿಮಗೆಲ್ಲರಿಗೂ ನಿಚ್ಚಳವಾಗಿದೆಯೆಂದುಕೊಂಡಿದ್ದೇನೆ. ಇನ್ನೂ ಏನಾದರೂ ಶಂಕೆಗಳಿದ್ದರೆ, ಗೊಂದಲಗಳಿದ್ದರೆ ಅದು ದಮ್ಮದ ಕುರಿತು, ಸಂಘದ ಕುರಿತು, ಮಾರ್ಗದ ಕುರಿತು, ಯಾವುದರ ಕುರಿತಾದರೂ ಸರಿಯೇ ಖಂಡಿತವಾಗಿಯೂ ಚರ್ಚೆ ಮಾಡೋಣ. ಏನಾದರೂ ಪ್ರಶ್ನೆಗಳಿವೆಯೇ ಕೇಳಿ’ ಎಂದ. ಯಾರೂ ಮಾತಾಡಲಿಲ್ಲ. ಬುದ್ಧನನ್ನು ನಾವಿನ್ನು ಹೀಗೆ ನೋಡಲಾಗುವುದಿಲ್ಲವಲ್ಲ ಎಂಬ ಸಂಗತಿಯೇ ಅವರನ್ನು ಮೂಕರನ್ನಾಗಿಸಿತ್ತು. ಅವನೇ ಹೋಗುತ್ತಿರುವಾಗ ಯಾರು ತಾನೆ ಅವನ ತತ್ವದ ಕುರಿತು ಅಲ್ಲಿ ಚರ್ಚಿಸಿಯಾರು ?

ಬುದ್ಧ ‘ಪರರನ್ನು ನಿಮ್ಮಂತೆಯೇ ಬಗೆಯಿರಿ ಎಲ್ಲರನ್ನೂ ಪ್ರೀತಿಸಿ’ ಎಂದು ಹೇಳಿದ. ಬಹಳ ಹೊತ್ತಿನಿಂದ ಮಾತಾಡಿದ್ದರಿಂದಲೇ ಇರಬಹುದು ಮುಂದೆ ಮಾತಾಡಲು ಅವನಿಗೆ ಶಕ್ತಿ ಸಾಲಲಿಲ್ಲ. ಒಂದು ಕ್ಷಣ ಸುಮ್ಮನಾದ. ಎಷ್ಟೋ ಹೊತ್ತು ಹಾಗೇ ಕುಳಿತಿದ್ದವ ನಿಧಾನವಾಗಿ ಒರಗಿದ. ಅಲ್ಲಿದ್ದ ಜನಸ್ತೋಮ ಸ್ತಬ್ದವಾಯಿತು. ಬಲ ಮಗ್ಗುಲಾಗಿ ಕೈಯನ್ನು ತಲೆ ದಿಂಬಾಗಿಸಿ ಮಲಗಿದ ಗೌತಮನ ಮುಖದಲ್ಲಿ ಅಸೀಮವಾದ ಶಾಂತಿಯಿತ್ತು, ಆನಂದವಿತ್ತು. ಅವನ ಉಸಿರಾಟದ ಗತಿಯನ್ನೇ ಆನಂದ ಅತಂಕದಿಂದ ಗಮನಿಸುತ್ತಿದ್ದ. ಅದು ನಿಧಾನವಾಗುತ್ತ ಕೊನೆಗೆ ನಿಂತು ಹೋಯಿತು. ಹುಣ್ಣಿಮೆಯ ಚಂದ್ರ ಇನ್ನಷ್ಟು ಢಾಳಾಗಿ ಬೆಳಗುತ್ತ ಅವನನ್ನೇ ನೋಡುತ್ತಿದ್ದ, ಅವನನ್ನು ಜಗತ್ತಿಗೆ ತೋರಿಸುತ್ತಿದ್ದ. ಆನಂದ, ಅನಿರುದ್ಧ ಮತ್ತು ಅನೇಕ ಭಿಕ್ಕುಗಳು ಬಿದ್ದು, ಎದ್ದು ಹೊರಳಾಡಿ ಎದೆ ಎದೆ ಬಡಿಕೊಂಡು ರೋದಿಸತೊಡಗಿದರು. ಆನಂದ ಬುದ್ಧನನ್ನೇ ನೋಡುತ್ತಿದ್ದ. ಕೆಲವರು ಕೆಲ ಹೊತ್ತು ಇದ್ದು ಅವನಿಗೆ ಅಂತಿಮ ನಮನ ಸಲ್ಲಿಸಿ, ತಾವು ತಂದಿದ್ದ ಕಂದೀಲು ಹಿಡಿದು ಹೊರಟರು. ಅವರ ಆ ಕಂದೀಲಿನ ಬೆಳಕಿನಲ್ಲಿ ಬುದ್ಧ ಶಾಂತವಾಗಿ ನಗುತ್ತಿದ್ದಂತೆ ಭಾಸವಾಯಿತು. ಅವನು ಹೇಳುತ್ತಿದ್ದ ಒಂದು ಮಾತು ಆನಂದನಿಗೆ ಫಕ್ಕನೇ ನೆನಪಾಯಿತು. ‘ಆನಂದ ನಿಜವಾದ ಗುರುವು ಶಿಷ್ಯನಿಗೆ ಬೆಳಕು ಮಾತ್ರ ತೋರಬಾರದು, ಆ ಬೆಳಕನ್ನು ಹೇಗೆ ಪಡೆಯುವುದೆಂಬುದನ್ನೂ ಹೇಳಿಕೊಡಬೇಕು. ಯಾಕೆಂದರೆ ಬುದ್ಧ ಇರುವವರೆಗೆ ಆನಂದ ಅವನ ಬೆಳಕಿನಲ್ಲಿ ನಡೆದ. ಬುದ್ಧನ ನಂತರ ಆತ ಕತ್ತಲೆಯಲ್ಲಿ ಕಳೆದು ಹೋದ ಎನ್ನುವಂತಾಗಬಾರದು. ನಿನ್ನ ಬೆಳಕನ್ನು ನೀನೇ ಕಂಡುಕೊಳ್ಳಬೇಕು ನಿನ್ನ ದುಃಖವನ್ನು ನೀನೇ ನಿವಾರಿಸಿಕೊಳ್ಳಬೇಕು’. ಆನಂದ ಧಡಕ್ಕನೇ ಎದ್ದ. ಆತ ನಿಂತ ರಭಸಕ್ಕೆ ಅಲ್ಲಿದ್ದವರೆಲ್ಲ ಚಕಿತರಾದರು. ಆತ ಇದುವರೆಗಿನ ಆನಂದನಂತಿರಲಿಲ್ಲ. ಯಾವುದೋ ಒಂದು ಶಕ್ತಿಯನ್ನು ಆವಾಹಿಸಿಕೊಂಡವನಂತಿದ್ದ. ಅಲ್ಲಿ ಅಳುತ್ತಿದ್ದ ಭಿಕ್ಕು ಸಮೂಹವು ಕುತೂಹಲದಿಂದ ಅವನನ್ನೇ ನೋಡತೊಡಗಿತು. ಅಳು ನಿಂತು ಹೋಯಿತು. ಆನಂದ ಸ್ಪಷ್ಟವಾದ ಧ್ವನಿಯಲ್ಲಿ ಹೇಳತೊಡಗಿದ ‘ಬುದ್ಧಂ ಶರಣಂ ಗಚ್ಛಾಮಿ’ ಇಡೀ ಜನಸಾಗರ ಭೋರ್ಗರೆದಂತೆ ಹೇಳತೊಡಗಿತು ‘ಧಮ್ಮಂ ಸರಣಂ ಗಚ್ಛಾಮಿ’. ಬುದ್ಧನ ಮುಖದಲ್ಲಿನ ಮಂದಹಾಸ ದ್ವಿಗುಣವಾದಂತೆ ಕಂಡಿತು. ಆನಂದನ ಮುಖದಲ್ಲಿ ಬೆಳಕು ಮೂಡಿತ್ತು. ಆತ ತದೇಕ ಚಿತ್ತದಿಂದ ಬುದ್ಧನನ್ನೇ ನೋಡತೊಡಗಿದ. ಬುದ್ಧ ಹೇಳಿದಂತಾಯ್ತು. ‘ಈಗ ನೀನೇ ಒಂದು ಕಂದೀಲಾದೆ ನೋಡು’……

ಗ್ರಂಥ ಋಣ –
1. ಬುದ್ಧ ಮತ್ತವನ ಧಮ್ಮಂ – ಡಾ. ಬಿ. ಆರ್ ಅಂಬೇಡ್ಕರ್(ಭಾವಾನುವಾದ – ಡಾ. ಜಗದೀಶ್ ಕೊಪ್ಪ)
2. ವೈಶಾಖಿ - ಶ್ರೀ ಎಂ. ಗೋವಿಂದ ಪೈ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.