ಅನನ್ಯ ಪ್ರತಿಭೆಯ ದೇವನೂರ ಮಹಾದೇವ ಅವರ `ಎದೆಗೆ ಬಿದ್ದ ಅಕ್ಷರ' ಈ ಕಾಲದ ಚಾರಿತ್ರಿಕ ಅಭಿವ್ಯಕ್ತಿ. ಈ ಕೃತಿಯನ್ನು ಓದುತ್ತಿದ್ದಂತೆಯೇ ಗಾಂಧೀಜಿಯ `ಹಿಂದ್‌ಸ್ವರಾಜ್' ನೆನಪಾಗುತ್ತದೆ. ಅಂಬೇಡ್ಕರ್ ಅವರ `ಜಾತಿ ವಿನಾಶ' ಕೃತಿಯ ವಿಚಾರಗಳು ಎದುರಾಗುತ್ತವೆ. ಅಂತೆಯೇ ಲೋಹಿಯಾ ಅವರ ಜಾತಿ ಪದ್ಧತಿಯ ಬಗೆಗಿನ ಆಲೋಚನೆಗಳು ಮೂಡಿಬರುತ್ತವೆ.

ದೇವನೂರರ ಈ ಬರಹದ ಬೆನ್ನ ಹಿಂದೆ ಈ ಮೂವರೂ ಚಿಂತಕರ ರೆಂಬೆ-ಕೊಂಬೆಗಳಿದ್ದರೆ ಅಭಿವ್ಯಕ್ತಿಯ ಉತ್ಕಟತೆಯಲ್ಲಿ ಮಹಾದೇವ ಅವರ ದಲಿತ ಲೋಕದ ಬೇರುಗಳು ಗಾಢವಾಗಿವೆ. ವರ್ತಮಾನದ ಭಾರತವನ್ನು ತನ್ನ ಸಮುದಾಯದ ಬಿಡುಗಡೆಯ ನೆಲೆಯಿಂದ ಅವಲೋಕಿಸುವ ಅವರ ಪ್ರಸ್ತುತ ಕೃತಿ ಒಂದು ರೀತಿಯಲ್ಲಿ ದಲಿತ್ ಸ್ವರಾಜ್‌ನ ಮಂಡನೆಯಂತಿದೆ. ಆದರ್ಶ ಭಾರತವನ್ನು ಗಾಂಧೀಜಿ ಅವರು ಧ್ಯಾನಿಸಿದಷ್ಟೇ ಆರ್ದ್ರವಾಗಿ ಮಹಾದೇವ ಅವರು ಕೂಡ ಜಾತ್ಯತೀತವಾದ ಅಖಂಡ ಮಾನವತೆಯ ಭಾರತವನ್ನು ಈ ಕೃತಿಯ ಉದ್ದಕ್ಕೂ ಹಂಬಲಿಸುತ್ತಾರೆ. ಹಿಂದುತ್ವವನ್ನು ಯಾವ ಉತ್ಕಟ ಪ್ರತಿರೋಧದ ಕಿಚ್ಚಿನ ವೈಚಾರಿಕತೆಯಲ್ಲಿ ಅಂಬೇಡ್ಕರ್ ಅವರು ಬೌದ್ಧಿಕವಾಗಿ ವ್ಯಕ್ತಪಡಿಸಿದರೊ, ಅದೇ ಬಗೆಯ ಸಾತ್ವಿಕತೆಯೂ ನೈತಿಕತೆಯೂ `ಎದೆಗೆ ಬಿದ್ದ ಅಕ್ಷರ'ದ ಬರಹಗಳಲ್ಲೂ ವ್ಯಕ್ತವಾಗಿದೆ.

ಲೋಹಿಯಾ ಅವರ ಸಂವೇದನಾಶೀಲವಾದ ಮಮಕಾರದ ಗುಣವೂ ಈ ಬರಹಕ್ಕೆ ಬಂದೊದಗಿದೆ. ಹೀಗಾಗಿಯೇ ಈ ಬರಹದ ಉದ್ದಕ್ಕೂ ಅಂತಃಕರಣದ ಆರ್ದ್ರತೆ, ತಾಯ್ತನದ ಸಂಕಟ ಎರಡೂ ಬೆರೆತು ಕಣ್ಣು ತೆರೆಸುವ ಬರಹವಾಗಿ ಮಾರ್ಪಟ್ಟಿದೆ. ಮಹಾದೇವ ಅವರು ಸತತವಾಗಿ ನಲವತ್ತು ವರ್ಷಗಳಿಂದ ಇದೇ ಬಗೆಯ ಪ್ರಾರ್ಥನೆಯನ್ನು ತಮ್ಮ ಹೋರಾಟಗಳಲ್ಲಿ, ಬರಹಗಳಲ್ಲಿ, ವೈಯಕ್ತಿಕ ವ್ಯಕ್ತಿತ್ವದ ಸಂಬಂಧಗಳಲ್ಲಿ ನಿವೇದಿಸುತ್ತಲೇ ಬಂದಿದ್ದಾರೆ.

ಮಹಾದೇವ ಅವರ ಈ ಬರಹಗಳೇ ಒಂದು ಬಗೆಯಲ್ಲಿ ಚಳವಳಿ ಇದ್ದಂತೆ. ಅವರ ಆಳದಲ್ಲಿ ಕುವೆಂಪು ಅವರ ಇಡೀ ಬರಹವೂ ಕೂಡ ಒಂದು ಚಳವಳಿಯಾಗಿಯೇ ಸಾಗಿ ಬಂದಿದೆ. ವಚನ ಪರಂಪರೆಯಂತೂ ಆತ್ಯಂತಿಕ ಚಳವಳಿ.

`ಎದೆಗೆ ಬಿದ್ದ ಅಕ್ಷರ' ಹೋರಾಟದ ಕಥನ. ಜಾತಿ ವಿನಾಶದ ಕನಸಿನ ಕಥನ. ಮುಂದುವರಿದು ಇದು ಸ್ವತಃ ದೇವನೂರ ಅವರ ಬದುಕಿನ ಹೋರಾಟದ ಆತ್ಮಕಥನ. ಅಂತೆಯೇ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಆತ್ಮಕಥನವೂ ಹೌದು. ಒಂದೇ ಕೃತಿಯಲ್ಲಿ ಎಷ್ಟೊಂದು ಕಥನಗಳಿವೆ ಎಂದು ಅಚ್ಚರಿಯಾಗುತ್ತದೆ. ಹಾಗಾಗಿಯೇ ಈ ಕೃತಿಯು ಒಂದು ಕಾಲದ ತನ್ನ ಜನಾಂಗದ ಆತ್ಮಕಥನವೂ ಆಗಿಬಿಡಬಲ್ಲ ಸಾಧ್ಯತೆಗಳನ್ನು ಪಡೆದುಕೊಂಡಿದೆ.

ಈ ಕೃತಿಯಲ್ಲಿ ವೈಯಕ್ತಿಕ ನಿರೂಪಣೆಯ ಯಾವ ಅಂಶವೂ ಇಲ್ಲ. ಇಡೀಯಾಗಿ ತನ್ನ ಸಮುದಾಯವನ್ನೇ ಹೊತ್ತುಕೊಂಡು ಮಾತನಾಡಿದಂತಿದೆ. ಹೀಗಾಗಿಯೇ ಈ ಬರಹ ಹೆಚ್ಚಾಗಿ ವಚನದಂತೆ, ಉತ್ಕಟ ಮಾತಿನಂತೆ, ಕಾಲಾಂತರದ ನಿವೇದನೆಯಂತೆ ನಮ್ಮ ಎದೆಯ ಕದವ ತೆರೆಯುತ್ತದೆ.

ಈ ಬರಹದ ಮತ್ತೊಂದು ಸೆಳೆತ ಎಂದರೆ ವರ್ತಮಾನದ ಹಿಂದುತ್ವದ ಮತೀಯ, ಕೋಮುವಾದಿ, ಜಾತಿವಾದಿ, ಅಧರ್ಮದ ರಾಜಕೀಯ ಸಂಚುಗಳ ಕುರಿತಾದ ಪ್ರತಿರೋಧದ ಚಿಂತನೆ. ಈ ಸಂಬಂಧಿ ಅಭಿವ್ಯಕ್ತಿಗಳಲ್ಲಿ ಮಹಾದೇವ ಅವರು ಅಂಬೇಡ್ಕರ್ ಅವರನ್ನು ಮೈದುಂಬಿಕೊಂಡು ಪ್ರತಿಭಟಿಸುತ್ತಾರೆ.

ಅವರ ತೀಕ್ಷ್ಣವಾದ ಮಾತಿನ ಏಟು ಒಂದು ಕ್ಷಣ ತಡೆದು... ಮಹಾದೇವ ಅಂತಹ ಮಹದೇವ ಇಷ್ಟೊಂದು ಕಠಿಣವಾಗಿ ಮಾತನಾಡುತ್ತಿರುವರೇ ಅನಿಸಿಬಿಡುತ್ತದೆ. ವರ್ತಮಾನದ ಭ್ರಷ್ಟವಾದ, ನೀಚವಾದ, ಅಮಾನುಷವಾದ ಹಿಂದುತ್ವದ ಬೆಳವಣಿಗೆಗಳು ಅವರ ನಿದ್ದೆಗೆಡಿಸಿರುವುದರ ಪರಿಣಾಮವಾಗಿ ಬ್ರಾಹ್ಮಣ್ಯದ ಕುಟಿಲತೆಯ ಬಗ್ಗೆ ನಿರ್ದಾಕ್ಷಿಣ್ಯ ನಿಲುವು ತಾಳುತ್ತಾರೆ.

ಬಲಪಂಥೀಯ ಕೋಮುವಾದಿ ರಾಜಕಾರಣದ ಎಗ್ಗಿಲ್ಲದ ಹಿಂಸೆಯನ್ನು ಕಂಡು ಒಳಗೊಳಗೇ ದಹನವಾದಂತೆ ಮಹಾದೇವರ ಬರಹಗಳು ಕುದಿಯುತ್ತವೆ. ಅದೇ ಹೊತ್ತಿಗೆ ದೇವರನ್ನೂ, ಧರ್ಮವನ್ನೂ ದೆವ್ವವಾಗಿಸಿರುವವರೇ ನಿಜವಾದ ದೇವರಾಗಿ ರೂಪಾಂತರಗೊಂಡು ಎದುರಾಗಲಿ ಎಂಬ ಪ್ರಾರ್ಥನೆಯನ್ನೂ ಈ ಬರಹಗಳು ಮಾಡುತ್ತವೆ.

ನಂಜಿಲ್ಲದ, ದ್ವೇಷವಿಲ್ಲದ ಈ ಬರಹಕ್ಕೆ ಅಖಂಡ ಮಾನವತ್ವದ ದಾಹವೇ ಪ್ರಧಾನವಾಗಿದೆ. ಆ ಮಟ್ಟಿಗೆ ವರ್ತಮಾನದ ಹಿಂದೂ ರಾಜಕಾರಣದ ಹುನ್ನಾರಗಳ ವಿರುದ್ಧದ ಸಾತ್ವಿಕನೊಬ್ಬನ ದಂಗೆಯಂತೆ ಈ ಬರಹಗಳು ವಿಸ್ತರಿಸಿಕೊಂಡಿವೆ. ಜಾತಿವಾದದಿಂದ ಕೇವಲ ದಲಿತರಿಗೆ ಮಾತ್ರ ಅನ್ಯಾಯವಾಗುತ್ತಿಲ್ಲ, ಅದರಿಂದ ಇಡೀ ಭಾರತೀಯರಾದ ಎಲ್ಲರಿಗೂ ಅನೇಕ ಬಗೆಯಲ್ಲಿ ತೊಂದರೆ ಆಗುತ್ತಿದೆ ಎಂಬುದನ್ನು ವಿರಾಟ್ ಮಾನವತ್ವದಲ್ಲಿ ಯೋಚಿಸುವ ಮಹಾದೇವರ ಬರಹಕ್ಕೆ ವ್ಯಾಪಕವಾದ ಮಾನವ ಸಂಬಂಧಗಳ ಕೊಂಡಿಗಳು ಇಲ್ಲಿ ಸಾಧ್ಯವಾಗಿವೆ. ಕೊಲ್ಲುವನನ್ನೂ ಕರುಣಿಸುವ ಗುಣ ಈ ಬರಹಗಳಲ್ಲಿ ಸಹಜವಾಗಿ ಬಂದುಬಿಟ್ಟಿದೆ.

ಮಹಾದೇವ ಅವರು ರೂಪಕ ಪ್ರತಿಭೆಯ ಲೇಖಕ ಎಂಬುದು ಎಲ್ಲರಿಗೂ ತಿಳಿದಿರುವಂತದ್ದೇ. ಆ ಬಗೆಯ ಗುಣ `ಎದೆಗೆ ಬಿದ್ದ ಅಕ್ಷರ'ದ ಮಾತುಕತೆಯಲ್ಲೂ ದಟ್ಟವಾಗಿ ವ್ಯಾಪಿಸಿಕೊಂಡಿದೆ. ಪ್ರಬಂಧ, ಸಣ್ಣ ಕಥೆಯ ಗುಣಗಳೂ ಕೂಡ ಇಲ್ಲಿನ ಹಲವು ಬರಹಗಳಲ್ಲಿದೆ. ಕೆಲವಂತೂ ನೇರ ಸಣ್ಣಕಥೆಗಳೇ ಅನಿಸುತ್ತವೆ.

ಹೋರಾಟದ ಹಾದಿಯಲ್ಲಿ ಕಂಡಿದ್ದು, ಕೇಳಿದ್ದು ಹಾಗೆಯೇ ದಲಿತ ಲೋಕದ ಮೌಖಿಕ ಪರಂಪರೆಯಿಂದ ತಿಳಿದದ್ದನ್ನೆಲ್ಲ ಅವರು ಹೋರಾಟದ ಮಾತಿನ ಜೊತೆ ಬೆರೆಸಿ ಪುನರ್‌ಸೃಷ್ಟಿಸಿ ಕಥನವಾಗಿ ಹೇಳುವ ರೀತಿಯೂ ಗಾಢವಾಗಿದೆ. ಹಳೆಯ ದೃಷ್ಟಾಂತವನ್ನು ವರ್ತಮಾನದ ಜೊತೆಗೆ ಬೆಸುಗೆ ಮಾಡಿ ಹೇಳುವ ಕಥನದ ಸಂದರ್ಭದಲ್ಲಿ ಅವರ ಮಾರ್ಮಿಕ ಮಾತಿನ ಅನ್ವಯವು ಒಂದು ಕ್ಷಣ ಬೆಚ್ಚಿಸಿ ಆಲೋಚಿಸುವಂತೆ ಮಾಡುತ್ತದೆ.

ಹಾಗೆಯೇ ವಿನೋದದ ಶೈಲಿಯೊಂದು ಈ ಬರಹಗಳಲ್ಲಿ ಸೂಕ್ಷ್ಮವಾಗಿ ಹರಿದಿದೆ. ಪ್ರೊ.ನಂಜುಂಡಸ್ವಾಮಿ ಅವರ ಜೊತೆಗಿನ ಮಹಾದೇವ ಅವರ ಸಂದರ್ಶನದ ಪ್ರಸಂಗವನ್ನೇ ಯಾರಾದರೂ ಒಂದು ನಾಟಕವನ್ನಾಗಿಸಿಬಿಡಬಹುದು. ಮಹಾದೇವ ಅವರು ಎಷ್ಟೊಂದು ಬಿಕ್ಕಟ್ಟಿಗೆ ಎಂ.ಡಿ.ಎನ್. ಅವರನ್ನು ಸಿಕ್ಕಿಸುತ್ತಾರೆ ಎಂದರೆ ನಾನಂತೂ ಇಡೀ ದಿನವೆಲ್ಲ ಹೊಟ್ಟೆ ನೋವಾಗುವಷ್ಟು ನಗಾಡಿದೆ.

ಹಾಗೆ ನಗಾಡುತ್ತಲೇ ದಲಿತ ಸಂಘರ್ಷ ಸಮಿತಿಗೂ ರೈತ ಸಂಘಕ್ಕೂ ನಡುವೆ ಇರುವ ಅತೀ ಸೂಕ್ಷ್ಮ ಅಂತರ, ಸಂಘರ್ಷಗಳ ವೈರುಧ್ಯಗಳ ಬಗ್ಗೆ ಮಹಾದೇವ ಅವರಿಗೆ ಇರುವ ಗ್ರಹಿಕೆಯನ್ನು ಕಂಡು ಅಚ್ಚರಿಗೊಂಡೆ.

ಈ ಎಲ್ಲ ಬರಹಗಳಲ್ಲೂ ಅದು ಎಷ್ಟೇ ಘನ ಗಂಭೀರವಾಗಿದ್ದರೂ ಮಹಾದೇವ ಅವರು ತಣ್ಣನೆಯ ವಿನೋದವನ್ನೂ ವಿಷಾದವನ್ನೂ ಬೆರೆಸುತ್ತ ವರ್ತಮಾನದ ಸಮಾಜದ ಸಮಸ್ಯೆಯತ್ತ ನಮ್ಮನ್ನು ಸೆಳೆದುಕೊಳ್ಳುವರು.

ಮಹಾದೇವ ಅವರ ಈ ಬರಹಕ್ಕೆ ದೇಶಭಕ್ತಿಯ ಗುಣವೂ ಇದೆ. ಈ ದೇಶಭಕ್ತಿ ಎಂಬ ಪದವನ್ನು ಮತೀಯವಾದಿಗಳು ವಿಪರೀತ ಹದಗೆಡಿಸಿದ್ದಾರೆ. ಮಹಾದೇವ ಅವರಂತಹ ದೇಶಭಕ್ತಿಯ ಪ್ರಾರ್ಥನೆಯೇ ಬೇರೆ.

ಅಂಬೇಡ್ಕರ್ ಅವರು ಬಹಿಷ್ಕೃತ ಭಾರತೀಯರ ಬಗ್ಗೆ ಹೇಳಿದ್ದಿದೆ. ತಬ್ಬಲಿಗಳ ತಾಯ್ತನದ ಹಂಬಲದಂತೆಯೇ ದಲಿತರು ತಾಯಿ ಭಾರತಿಯನ್ನು ಧ್ಯಾನಿಸುವುದು. ಆದ್ದರಿಂದಲೇ ಹಿಂದ್ ಸ್ವರಾಜ್‌ಗಿಂತಲೂ ದಲಿತ್ ಸ್ವರಾಜ್ ಉಳಿದೆಲ್ಲ ಬಗೆಯ ದೇಶಭಕ್ತಿಯ ಕಥನಗಳಿಗಿಂತಲೂ ವಿಭಿನ್ನವಾದುದು. ಮಹಾದೇವ ಅವರ ಈ ಬರಹಗಳ ದೇಶಭಕ್ತಿಯ ಸೂಕ್ಷ್ಮತೆ ಜಡಗೊಂಡವರಿಗೆ ಅರಿವಾಗುವುದಿಲ್ಲ.

ಎಲ್ಲರನ್ನೂ ಹೊತ್ತುಕೊಂಡು ತಳದಲ್ಲಿ ನಿಂತಿರುವವರ ದೇಶಭಕ್ತಿಗೂ ಇತರರ ದೇಶಭಕ್ತಿಗೂ ತುಂಬಾ ವ್ಯತ್ಯಾಸಗಳಿವೆ. ಮಹಾದೇವ ಅವರು ಈ ಏಣಿ ನಿಷ್ಠ ರಾಷ್ಟ್ರೀಯತೆಯನ್ನು ನಿರಾಕರಿಸಿ, ಸಮಪಾತಳಿಯ ಜಾತ್ಯತೀತ ರಾಷ್ಟ್ರೀಯತೆಯ ರಾಷ್ಟ್ರಪ್ರೇಮವನ್ನು ಅರಸುತ್ತಾರೆ. ಗಾಂಧಿವಾದ ಎಂಬ ಹೊಳೆಯೂ, ಅಂಬೇಡ್ಕರ್‌ವಾದ ಎಂಬ ನದಿಯೂ, ಲೋಹಿಯಾವಾದ ಎಂಬ ಸಮಾಜವಾದಿ ಹಳ್ಳವೂ ದೇವನೂರ ಮಹಾದೇವ ಅವರ ಮೂಲದ ದಲಿತ ಕೇರಿಗಳ ಭಾವ ಪ್ರಜ್ಞೆಯಲ್ಲಿ ಸಂಗಮಿಸಿ ಹರಿದು, ಮಹಾದೇವ ಅವರ ಎದೆಯಲ್ಲೂ ತುಂಬಿ ಹರಿದು, ಅಲೆ ಅಲೆಯಾಗಿ ಸಾಗಿರುವ ಈ ಬರಹಕ್ಕೆ ವಿಶ್ವಾತ್ಮಕವಾದ ಸೆಳೆತವೂ ಇದೆ.

ಆದ್ದರಿಂದಲೇ ಈ ಬರಹ ಈ ಹೊತ್ತಿನ ಭಾರತದ ಯಾವುದೇ ಮೂಲೆಯ ದಲಿತನ ಬಿಡುಗಡೆಯ ಕಥನವೂ ಆಗಿರುವಂತೆಯೇ ಯಾವುದೇ ಭಾರತೀಯನ ಮುಕ್ತಿಯ ಹಾದಿಯ ನಿರೂಪಣೆಯೂ ಆಗಿದೆ.

ಮಹಾದೇವ ಅವರೊಳಗೊಬ್ಬ ಸತ್ವಶಾಲಿ ವಿಮರ್ಶಕನೂ ಇದ್ದಾನೆ ಎಂಬುದನ್ನು ಸಾರುವಂತಹ ಸಾಹಿತ್ಯ ಸಂಬಂಧಿ ಕೆಲವು ಲೇಖನಗಳು ಗಮನ ಸೆಳೆಯುತ್ತವೆ. ರಾಘವೇಂದ್ರ ಖಾಸನೀಸರ `ತಬ್ಬಲಿಗಳು' ಕಥೆಯ ಬಗ್ಗೆ ಅವರು ಎಷ್ಟೊಂದು ಮನಮಿಡಿವ ಭಾವದ ವಿಮರ್ಶೆಯನ್ನು ಮಾಡುತ್ತಾರೆ ಎಂದರೆ... ಅವರ ಆ ಬರಹವನ್ನು ಓದಿಯೇ ತಿಳಿಯಬೇಕು.

ಎಲ್ಲ ಬಗೆಯ ಮಾನವ ದ್ವೇಷದ ವಿರುದ್ಧ ತನ್ನ ಪ್ರಜ್ಞೆಯನ್ನೇ ಪಣಕ್ಕಿಟ್ಟಂತೆ ವರ್ತಮಾನದ ಹಿಂಸೆಯ ವಿರುದ್ಧ ಮುಖಾಮುಖಿ ಆಗುತ್ತಿರುವ ಈ ಬರಹಗಳಿಗೆ ಮಧ್ಯಮ ಮಾರ್ಗದ ಯೋಗಿಯ ಗುಣವೂ ಇದೆ. ಜನರ ದನಿಗೂ, ಕಾಲದ ಅವಶ್ಯಕತೆಗೂ, ತನ್ನ ಆಲೋಚನೆಗೂ, ಅಭಿವ್ಯಕ್ತಿಯ ಸಹಜ ಸಾಮಾಜಿಕ ನುಡಿಗೂ ಮಹಾದೇವ ಸಾವಯವ ಸಂಬಂಧವನ್ನು ಸಾಧಿಸಿಕೊಂಡು ಬರೆಯುತ್ತಾರೆ ಹಾಗೆಯೇ ಬದುಕುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.