ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಳ್ಳಿ ಹಮ್ಮೀರನ ಹಮ್ಮರ್‌ ವಿನ್ಯಾಸ ಯಾನ

Published 29 ಜೂನ್ 2024, 23:39 IST
Last Updated 29 ಜೂನ್ 2024, 23:39 IST
ಅಕ್ಷರ ಗಾತ್ರ

ಕೃಷಿಯನ್ನೇ ನಂಬಿದ ಕುಟುಂಬ ಅದು. ಈಗಲೂ ಆ ಕುಟುಂಬದವರಿಗೆ ಕೃಷಿಯೇ ಖುಷಿ. ಅವರ ನಡುವೆಯೇ ಬೆಳೆದ ಸಮೀರ್‌ ದತ್ತಾ ಅವರ ಮನಸ್ಸಿನಲ್ಲಿ ಅಚ್ಚೊತ್ತಿದ್ದು ಬೇರೆಯೇ ಕನಸು. ಆಗ ಕನಸಿನಲ್ಲಿ ಕಾಸಿಗೆ ಅಷ್ಟೊಂದು ಬೆಲೆ ಇರಲಿಲ್ಲ. ಬದಲಿಗೆ ಆಟೊಮೋಟಿವ್‌ ವಿನ್ಯಾಸ ಕ್ಷೇತ್ರದಲ್ಲಿ ಸಾಧನೆ ಮಾಡುವುದಷ್ಟೇ ಅವರ ಸುಂದರ ಸ್ವಪ್ನವಾಗಿತ್ತು. ಅದರ ಬೆನ್ನೇರಿ ಪಶ್ಚಿಮ ಬಂಗಾಳದ ಮಿಡ್ನಾಪುರ ಎಂಬ ಹಳ್ಳಿಯಿಂದ ಬೆಂಗಳೂರಿಗೆ ಬಂದರು. ಕನಸು, ಪ್ರತಿಭೆ, ಬದ್ಧತೆ ಮತ್ತು ಪರಿಶ್ರಮದಿಂದಾಗಿ ಆಟೊಮೋಟಿವ್‌ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದರು.

ವಾಹನ ವಲಯದಲ್ಲಿ ಅಮೆರಿಕದ ಸುಪ್ರಸಿದ್ಧ ಜನರಲ್‌ ಮೋಟರ್‌ ಕಂಪನಿಯದ್ದು (ಜಿಎಂಸಿ) ಮುಂಚೂಣಿ ಹೆಸರು. ಆ ಕಂಪನಿ ತಯಾರಿಸುವ ವಾಹನಗಳ ಬೆಲೆಯೂ ಅಷ್ಟೇ ದುಬಾರಿ. ಜಿಎಂಸಿ ತಯಾರಿಸಿರುವ ವಿದ್ಯುತ್‌ಚಾಲಿತ ಹಮ್ಮರ್‌ ಕಾರು ರಸ್ತೆಯಲ್ಲಿ ಚಲಿಸುವಾಗ ವಾಹನ ಪ್ರಿಯರು ಅದರ ಲೋಹದ ದೇಹ ವಿನ್ಯಾಸವನ್ನು ಬೆರಗಿನಿಂದ ನೋಡುವುದು ಖಚಿತ. ಆ ಕಾರಿನ ವಿನ್ಯಾಸ ರೂಪಿಸಿದ ಹಿರಿಮೆ ಸಮೀರ್‌ ದತ್ತಾ ಅವರದ್ದು.

ತನ್ನ ಅಪ್ಪ ಉಳುಮೆ ಮಾಡುವುದನ್ನು ನೋಡುತ್ತಲೇ ಅವರು ವಾಹನಗಳ ವಿನ್ಯಾಸದ ಸೆಳೆತಕ್ಕೆ ಸಿಲುಕಿದ್ದು ಸೋಜಿಗ. ಹತ್ತರ ವಯಸ್ಸಿನಲ್ಲಿದ್ದಾಗಲೇ ಅವರಿಗೆ ಪೆನ್ನು, ಪೆನ್ಸಿಲ್‌ ಮೇಲೆ ಕಡುಮೋಹ. ಅವು ಕೈಗೆ ಸಿಕ್ಕಿದ ತಕ್ಷಣ ನೋಟ್‌ಬುಕ್‌ನಲ್ಲಿ ಗೀಚಲು ತೊಡಗುತ್ತಿದ್ದರು. ಊರಿನ ಬೀದಿ, ಮನೆ, ಗಿಡ, ಮರಗಳು ಅವರ ನೆನಪಿನ ಉಗ್ರಾಣದಲ್ಲಿ ದೃಶ್ಯಭಾಷೆಯಾಗಿ ಸಂಗ್ರಹವಾಗುತ್ತಿದ್ದವು. ಅವುಗಳಿಗೆ ಬಣ್ಣ ತುಂಬುತ್ತಾ ತನ್ನದೆ ಆದ ಮಾಯಾಲೋಕದಲ್ಲಿ ವಿಹರಿಸುವುದು ಅವರ ನಿತ್ಯದ ಕಾಯಕವಾಗಿತ್ತು. ಕೊನೆಗೆ, ಚಿತ್ರಕಲೆ ಎಂಬ ವರ್ಣಕ್ರಿಯೆ ಅವರಿಗೆ ಆಪ್ತವಾಯಿತು.

ಶಾಲಾ ಮಟ್ಟದ ಸ್ಪರ್ಧೆಗಳಲ್ಲಿ ಅವರು ರಚಿಸಿದ ಚಿತ್ರಗಳಿಗೆ ಬಹುಮಾನವೂ ಬಂತು. ತನ್ನನ್ನು ಬಿಟ್ಟು ಮುಂದೆ ಓಡುತ್ತಿರುವಂತೆ ಭಾಸವಾಗುತ್ತಿದ್ದ ಪ್ರಪಂಚವು, ಚಿತ್ರಕಲೆಯ ಅಲೆಯಲ್ಲಿ ಭಿನ್ನವಾಗಿ ಕಂಡಿತು. ಅವರ ಕನಸಿಗೆ ಪೋಷಕರು ರೆಕ್ಕೆ ಕಟ್ಟಿದರು. ಹೀಗೆ ಹಾರುತ್ತಲೇ ಆಟೊಮೋಟಿವ್‌ ವಿನ್ಯಾಸಕ ಸಮೀರ್‌ ದತ್ತಾ ಅವರಿಗೆ ಅಂತರರಾಷ್ಟ್ರೀಯ ವೃತ್ತಿಪರತೆ ಕರಗತವಾಯಿತು. ಬಳಿಕ ಅವರು ವಿಶ್ವದ ಅಗ್ರಮಾನ್ಯ ಆಟೊಮೊಬೈಲ್‌ ಸ್ಟುಡಿಯೊ ‘ಒಇಎಂ ಡಿಸೈನ್‌ ಸ್ಟುಡಿಯೊ’ದ ಒಳಹೊಕ್ಕರು.

ಭಾರತದ ಕಲೆ ಮತ್ತು ಶ್ರೀಮಂತಿಕೆಯು ಆಳವಾದ ಚರಿತ್ರೆ ಹೊಂದಿದೆ. ಇಲ್ಲಿ ವಿನ್ಯಾಸಗೊಳಿಸುವ ವಸ್ತುಗಳಿಗೆ ಜಾಗತಿಕ ಮಟ್ಟದಲ್ಲಿ ಭಾರಿ ಬೇಡಿಕೆ ಮತ್ತು ಮನ್ನಣೆ ಇದೆ. ಅದರ ಮಹತ್ವ ಅರಿಯಲು ಸಮೀರ್‌ಗೆ ಹೆಚ್ಚು ದಿನಗಳು ಹಿಡಿಯಲಿಲ್ಲ. ದೇಶೀಯಮಟ್ಟದ ಆಟೊಮೋಟಿವ್‌ ವಿನ್ಯಾಸಕರು ಮತ್ತು ಪರಿಣತ ಎಂಜಿನಿಯರ್‌ಗಳ ಜೊತೆಗೆ ಕೆಲಸ ನಿರ್ವಹಿಸುತ್ತಲೇ ವಾಹನಗಳ ವಿನ್ಯಾಸದ ಕಲೆಯು ಅವರಿಗೆ ಸಿದ್ಧಿಸಿತು.

ಜಾಗತಿಕ ಮಟ್ಟದಲ್ಲಿ ಆಟೊಮೋಟಿವ್ ವಿನ್ಯಾಸದ ವ್ಯಾಪ್ತಿಯು ಬಹುವಿಸ್ತಾರವಾಗಿದೆ. ಸ್ಪೋರ್ಟ್ಸ್‌ ಕಾರುಗಳು, ದೊಡ್ಡ ಎಸ್‌ಯುವಿಗಳು ಮತ್ತು ಸ್ವಯಂಚಾಲಿತ ವಾಹನವರೆಗೆ ಇದು ವಿಸ್ತರಿಸಿದೆ. ಆದರೆ, ಭಾರತದ ಮಟ್ಟಿಗೆ ಈ ಕ್ಷೇತ್ರವು ಅಷ್ಟೊಂದು ಪ್ರವರ್ಧಮಾನಕ್ಕೆ ಬಂದಿಲ್ಲ.

ಎರಡು ದಶಕಗಳ ಹಿಂದೆ ಭಾರತೀಯ ಯುವಕರು ಸಾಂಪ್ರದಾಯಿಕ ವ್ಯಾಪಾರ ಕ್ಷೇತ್ರದತ್ತ ಗಮನ ಕೇಂದ್ರೀಕರಿಸುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು. ಸಮೀರ್‌ ಅವರಿಗೆ ಸಾಫ್ಟ್‌ವೇರ್ ಎಂಜಿನಿಯರ್‌ ಆಗುವ ಹಂಬಲ ಚಿಗುರೊಡೆದಿತ್ತು. ಕೆಳ ಮಧ್ಯಮ ವರ್ಗದಿಂದ ಬರುವ ಯುವಕರು ಕಾಣುವ ಕನಸುಗಳು ಅವರನ್ನು ಬೆಂಬಿಡದೆ ಕಾಡಿದ್ದು ಉಂಟು.

ಆಟೊಮೊಬೈಲ್‌ ಎಂಜಿನಿಯರಿಂಗ್‌ನಲ್ಲಿ ಸೃಜನಾತ್ಮಕ ವಿನ್ಯಾಸದ ಕಲಿಕೆಗೆ ಮುಂದಾದರು. ಆಗ ಬೆಂಗಳೂರಿನ ಎಂ.ಎಸ್‌.ರಾಮಯ್ಯ ಅಡ್ವಾನ್ಡ್ಸ್‌ ಸ್ಟಡೀಸ್‌ ಕಾಲೇಜಿಗೆ ಸೇರ್ಪಡೆಗೊಂಡರು.

‘ಆರ್ಥಿಕ ಭದ್ರತೆಯೇ ನನ್ನ ಮುಂದಿದ್ದು ಮೊದಲ ಗುರಿಯಾಗಿತ್ತು. ಕಂಪ್ಯೂಟರ್‌ನಲ್ಲಿ ವಿನ್ಯಾಸ ರಚಿಸುವ ಮೂಲಕ ವೃತ್ತಿ ಆರಂಭಿಸಿದೆ. ನಾನು ನೆಟ್ಟೂರ್ ತಾಂತ್ರಿಕ ತರಬೇತಿ ಫೌಂಡೇಶನ್‌ನಲ್ಲಿ ಓದುತ್ತಿದ್ದಾಗ ಹಿರಿಯ ವಿದ್ಯಾರ್ಥಿಗಳು ಇದೇ ವೃತ್ತಿ ಮಾಡುತ್ತಿದ್ದರು. ನಾನು ಕೂಡ ಅವರಿಂದ ಪ್ರೇರಣೆಗೊಂಡಿದ್ದು ಸಹಜವಾಗಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ.

ಟಾಟಾ ಎಲ್ಕ್ಸಿ ಕಂಪನಿಯಲ್ಲಿ ಕೆಲಸ ನಿರ್ವಹಿಸುವಾಗ ಅಲ್ಲಿನ ಸಹೋದ್ಯೋಗಿಗಳು ಮತ್ತು ಸ್ನೇಹಿತರ ಪ್ರೇರಣೆಯಿಂದ ಅವರ ಆಟೊಮೋಟಿವ್‌ ವಿನ್ಯಾಸದತ್ತ ಹೊರಳಿದರು.

ಕಾರಿನ ವಿನ್ಯಾಸ ರೂಪಿಸುವ ಕುರಿತಂತೆ ವಿನ್ಯಾಸಗಾರನಿಗೆ ಸ್ಪಷ್ಟತೆ ಮುಖ್ಯ. ಆಗಷ್ಟೇ ನಿರ್ದಿಷ್ಟ ಗುರಿ ಸಾಧನೆ ಸಾಧ್ಯ. ಕಾರಿನ ಹೊರಭಾಗದ ವಿನ್ಯಾಸದ ವೇಳೆ ಆ ಸರಕು ಮತ್ತು ಕಂಪನಿಯ ಬ್ರ್ಯಾಂಡ್‌ ಮೌಲ್ಯ, ಗ್ರಾಹಕರ ಅಭಿರುಚಿ ಬಗ್ಗೆಯೂ ಸ್ಪಷ್ಟ ತಿಳಿವಳಿಕೆ ಇರಬೇಕು ಎಂಬುದು ಅವರ ನಂಬಿಕೆ.

‘ವಿನ್ಯಾಸದ ಬಗ್ಗೆ ಕಾಗದ ಅಥವಾ ಪರದೆ ಮೇಲೆ ಕಲಾತ್ಮಕವಾಗಿ ರೇಖಾಚಿತ್ರಗಳ ಮೂಲಕ ಬಿಡಿಸಬೇಕು. ನಮ್ಮ ಸ್ಮೃತಿಪಟಲದಲ್ಲಿ ಮೂಡಿದ್ದು ಪರದೆ ಮೇಲೆ ಸಾಕಾರಗೊಂಡರೆ ವಿನ್ಯಾಸಗಾರನಿಗೆ ಮುಕ್ಕಾಲು ಪಾಲು ಯಶಸ್ಸು ಲಭಿಸಿದಂತೆ. ಆದರೆ, ಬಹಳಷ್ಟು ಸ್ಟುಡಿಯೊಗಳು ಈ ರಚನೆಯ ಹೊರತಾಗಿಯೂ ಮತ್ತಷ್ಟು ನಿರೀಕ್ಷೆಗಳನ್ನು ಹೊಂದಿರುತ್ತವೆ’ ಎಂಬುದು ಅವರ ಅನುಭವದ ಸಾರ.

ಇದಕ್ಕೆ ಅವರು ಸ್ಪೋರ್ಟ್‌ ಕಾರುಗಳ ವಿನ್ಯಾಸವನ್ನು ನಿದರ್ಶನ ನೀಡುತ್ತಾರೆ. ಈ ಕಾರುಗಳ ಬಾಹ್ಯರೂಪ ಸೇರಿ ಹಲವು ಅಂಶಗಳು ವಿಭಿನ್ನವಾಗಿರುತ್ತವೆ. ಆದರೆ, ಎಸ್‌ಯುವಿ ಅಥವಾ ಸಣ್ಣ ಮಾದರಿಯ ಕಾರುಗಳಲ್ಲಿ ವಿನ್ಯಾಸದಲ್ಲಿ ಅಷ್ಟೊಂದು ಭಿನ್ನತೆ ಕಾಣುವುದಿಲ್ಲ ಎನ್ನುತ್ತಾರೆ.

ಕಾರಿನ ವಿನ್ಯಾಸದ ವೇಳೆ ಆಟೊಮೋಟಿವ್ ಲೈಟಿಂಗ್ ವ್ಯವಸ್ಥೆಯ ನಿರ್ಣಾಯಕವಾದುದು. ಇದು ಪ್ರತಿಯೊಂದು ವಾಹನದ ಅವಿಭಾಜ್ಯ ಅಂಗ. ರಾತ್ರಿ ವೇಳೆಯಲ್ಲಿ ಸುರಕ್ಷಿತವಾಗಿ ಚಾಲನೆಗೆ ಇದರ ಅವಶ್ಯಕತೆ ಹೆಚ್ಚು. ಚಾಲಕರು ರಸ್ತೆಯಲ್ಲಿ ಸರಿಯಾಗಿ ಸಾಗಲು ಮತ್ತು ಇತರೆ ರಸ್ತೆ ಬಳಕೆದಾರರಿಗೆ ವಾಹನವನ್ನು ಗೋಚರಿಸುವಂತೆ ಮಾಡಲು ಅತ್ಯಗತ್ಯ. ವಾಹನದ ಸೌಂದರ್ಯ ಹೆಚ್ಚಿಸುವಲ್ಲಿಯೂ ಇದರ ಪಾತ್ರ ನಿರ್ಣಾಯಕ ಎಂಬುದು ಅವರ ವಿವರಣೆ.

ಎರಡು ದಶಕಗಳ ಆಟೊಮೋಟಿವ್‌ ವಿನ್ಯಾಸದ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಸವಲತ್ತು ಸಿಗುತ್ತಿರಲಿಲ್ಲ. ಅನುಭವಿಗಳು ನೀಡುತ್ತಿದ್ದ ಮಾಹಿತಿಗಳೇ ಕಲಿಕೆಗೆ ನೆರವಾಗುತ್ತಿದ್ದವು. ಆಟೊಮೋಟಿವ್‌ ವಿನ್ಯಾಸವು ಕೇವಲ ವಾಹನದ ಒಳಭಾಗ ಅಥವಾ ಹೊರಭಾಗದ ರೇಖಾಚಿತ್ರಗಳ ರಚನೆಗಷ್ಟೇ ಸೀಮಿತಗೊಂಡಿಲ್ಲ.

‘ವಾಹನಗಳ ವಿನ್ಯಾಸದ ಸಾಮ್ರಾಜ್ಯ ಹೊಕ್ಕಿರುವುದು ಸುಲಭವೂ ಅಲ್ಲ. ಈಗ ತಂತ್ರಜ್ಞಾನ ಕ್ಷೇತ್ರ ಅಗಾಧವಾಗಿ ಬೆಳೆದಿದೆ. ಸದ್ಯ ಆನ್‌ಲೈನ್‌ನಲ್ಲಿ ಈ ಬಗ್ಗೆ ಮಾಹಿತಿಯ ಮಹಾಪೂರವೇ ಸಿಗುತ್ತಿದೆ. ಈ ಕ್ಷೇತ್ರಕ್ಕೆ ಬರುವ ಹೊಸಬರು ಇದರ ಪ್ರಯೋಜನ ಪಡೆದುಕೊಳ್ಳಬೇಕಿದೆ. ಅಂದಹಾಗೆ ಈ ಜ್ಞಾನ ಒಂದೇ ಗುಟುಕಿಗೆ ದಕ್ಕುವುದಿಲ್ಲ. ಇಲ್ಲಿ ಮ್ಯಾರಥಾನ್‌ ಮಾಡುತ್ತಲೇ ಕರಗತ ಮಾಡಿಕೊಳ್ಳಬೇಕು’ ಎಂಬುದು ಅವರ ಸಲಹೆ.

ಹಮ್ಮರ್‌ 
ಹಮ್ಮರ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT