ಸವಾಲುಗಳು ಸಾಲಾಗಿ ನಿಂತಿರುವಾಗ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1ರಂದು ಸಂಸತ್ತಿನಲ್ಲಿ ಮಂಡಿಸಬೇಕಾದ ತಮ್ಮ ಎರಡನೆಯ ಮುಂಗಡ ಪತ್ರ ಹೆಣೆಯುವ ತಲೆಬಿಸಿಯಲ್ಲಿದ್ದಾರೆ. ಕೆಲವೇ ದಿನಗಳ ಹಿಂದೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಾದ ಶೇ 3ರಷ್ಟು ಏರಿಕೆಯು ಅವರ ಕಷ್ಟವನ್ನು ಹೆಚ್ಚಿಸಿದೆ. ಅವರು ತಮ್ಮ ಮೊದಲನೆಯ ಬಜೆಟ್ ಅನ್ನು ಹೇಗೋ ಮಾಡಿ ಮುಗಿಸಿ ವಿವಾದಕ್ಕೀಡಾಗಿದ್ದರು. ಎರಡನೇ ಬಜೆಟ್ ಅನ್ನು ಹೇಗೆ ರೂಪಿಸಲಿದ್ದಾರೆ ಎನ್ನುವುದು ಈಗಿರುವ ದೊಡ್ಡ ಪ್ರಶ್ನೆ.

ದೇಶದ ಅರ್ಥವ್ಯವಸ್ಥೆಯು 70 ವರ್ಷಗಳಲ್ಲಿ ಕಂಡು ಕೇಳರಿಯದ ಸಂಕಷ್ಟಗಳನ್ನು ಕಾಣುತ್ತಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಸುಮಾರು ನಾಲ್ಕು ತಿಂಗಳ ಹಿಂದೆ ಹೇಳಿದ್ದರು. ಅದೇ ಆಯೋಗದ ಸಿಇಒ ಅಮಿತಾಭ್ ಕಾಂತ್, ‘ಅಲ್ಪಾವಧಿಗಷ್ಟೇ ಮಂದಗತಿ ಬೆಳವಣಿಗೆ’ ಎಂದು ಇತ್ತೀಚೆಗೆ ಹೇಳುವ ಮೂಲಕ, ದೇಶದ ಜನರನ್ನು ಸಮಾಧಾನ ಪಡಿಸುವ ತಂತ್ರಗಾರಿಕೆ ಮಾಡಿದ್ದಾರೆ ಎಂಬುದು, ಮಂದಮತಿಯುಳ್ಳವನಿಗೂ ತಿಳಿಯುತ್ತದೆ.

ಶ್ರೀಸಾಮಾನ್ಯರಿಗೆ ಈ ತನಕ ‘ಅಚ್ಛೇ ದಿನ್’ ಬಾರದಿದ್ದರೂ 2020- 21ನೇ ಸಾಲಿನ ಬಜೆಟ್ನತ್ತ ಅವರು ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ಹಣಕಾಸು ಸಚಿವರು ಇದನ್ನು ಪರಿಗಣಿಸಬೇಕು.

ತೀರಾ ಇತ್ತೀಚಿನವರೆಗೂ ಕೇಂದ್ರ ಸರ್ಕಾರದೊಡನೆ ಸಹಕರಿಸುವಲ್ಲಿ ಇತಿಹಾಸ ತಜ್ಞ, ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇತಿಹಾಸ ಸೃಷ್ಟಿಸಿದ್ದರು. ಅಕ್ಟೋಬರ್ ತಿಂಗಳಿನಲ್ಲಿ ಸತತ ಐದನೇ ಬಾರಿಗೆ ರಿಸರ್ವ್ ಬ್ಯಾಂಕಿನ ಹಣಕಾಸು ಸಮಿತಿಯು ರೆಪೊ ದರಗಳನ್ನು ಕಡಿತಗೊಳಿಸಿದ ನಂತರ, ಗವರ್ನರ್ ಜತೆಗೆ ನಿರ್ಮಲಾ ಪತ್ರಿಕಾಗೋಷ್ಠಿ ನಡೆಸಿದ್ದರು. ರಿಸರ್ವ್ ಬ್ಯಾಂಕ್ ಮತ್ತು ಸರ್ಕಾರವು ಅಭಿವೃದ್ಧಿ ನೀತಿ ರೂಪಿಸುವ ವಿಚಾರದಲ್ಲಿ ಒಂದೇ ಅಭಿಪ್ರಾಯ ಹೊಂದಿವೆ ಎಂದು ಹೇಳಿ ಖುಷಿಪಟ್ಟಿದ್ದರು. ಆದರೆ, ಡಿ.5ರಂದು ರಿಸರ್ವ್ ಬ್ಯಾಂಕ್, ರೆಪೊ ದರ ಕಡಿತಗೊಳಿಸದೆ ಅಚ್ಚರಿಯ ನಡೆಪ್ರದರ್ಶಿಸಿತು. ಮಾತ್ರವಲ್ಲ, ‘ಆರ್ಬಿಐ ಪ್ರತಿ ಬಾರಿಯೂ ಯಾಂತ್ರಿಕವಾಗಿ ಬಡ್ಡಿ ದರ ಕಡಿತ ಮಾಡುವುದನ್ನು ನೀವು ನಿರೀಕ್ಷಿಸಬಾರದು’ ಎಂದು ದಾಸ್ ಹೇಳಿಯೇ ಬಿಟ್ಟರು. ರೋಗಗ್ರಸ್ತ ಆರ್ಥಿಕತೆಯ ನಡುವೆ ನಿರ್ಮಲಾ ಅವರ ಎರಡನೇ ಬಜೆಟ್ ಮಂಡನೆಯ ಸಮಯ ಸಮೀಪಿಸುತ್ತಿರುವಾಗ, ಆರ್ಬಿಐ ಮತ್ತು ಕೇಂದ್ರ ಸರ್ಕಾರ ಬೇರೆ ಬೇರೆ ರೀತಿ ಯೋಚಿಸುತ್ತಿರುವಂತೆ ಭಾಸವಾಗುತ್ತಿದೆ!

ಹಣದುಬ್ಬರಕ್ಕೆ ಇನ್ನಷ್ಟು ರೆಕ್ಕೆ ಪುಕ್ಕಗಳು ಮೂಡಿ ಶೇ 6ರ ಸುರಕ್ಷತಾ ಮಿತಿ ದಾಟಿರುವಾಗ ರೆಪೊ ದರ ಗಳನ್ನು ರಿಸರ್ವ್ ಬ್ಯಾಂಕ್ ಏರಿಸಬೇಕಾಗಬಹುದು. ಆಗ ಆರ್ಬಿಐ ಮತ್ತು ಸರ್ಕಾರದ ನಡುವೆ ಸಂಘರ್ಷ ಉಂಟಾಗಿ ಹಳೆಯ ಇತಿಹಾಸ ಮರುಕಳಿಸಬಹುದು. ಅದೆಲ್ಲಾ ಆಗಿ ದೇಶದ ಪ್ರತಿಷ್ಠೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಿರ್ಮಲಾ ಅವರ ಮೇಲೂ ಇದೆ. ಸಂಪನ್ಮೂಲ ಕ್ರೋಡೀಕರಣ ಪಥದಿಂದ ಅವರ ದ್ವಿತೀಯ ಬಜೆಟ್ ದೂರ ಸರಿಯುವಂತಿಲ್ಲ.

2019- 20ನೇ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ದರ ಶೇ 6.1ರಷ್ಟು ಆಗಬಹುದೆಂದು ಆರ್ಬಿಐ ಈ ಹಿಂದೆ ಅಂದಾಜಿಸಿತ್ತು. ಆರ್ಥಿಕ ವಲಯಗಳು ಇನ್ನಷ್ಟು ದುರ್ಬಲಗೊಂಡಿದ್ದನ್ನು ಗಮನಿಸಿ ಈಗ ಅದು ತನ್ನ ಅಂದಾಜನ್ನು ಶೇ 5ಕ್ಕೆ ತಗ್ಗಿಸಿದೆ. 2024- 25ರ ಹೊತ್ತಿಗೆ ₹ 350 ಲಕ್ಷ ಕೋಟಿ ಜಿಡಿಪಿ ಗಾತ್ರದ ಆರ್ಥಿಕತೆ ಉದಯಿಸಬೇಕಾದರೆ, ಬೆಳವಣಿಗೆ ದರ ಶೇ 8ರಿಂದ ಶೇ 9ರಷ್ಟಿರಬೇಕು. ಈ ದರ ಬೇಗನೇ ಮೇಲೆ ಜಿಗಿಯಬೇಕಾದರೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸೂಚಿಸಿದಂತೆ ದಿಟ್ಟವಾದ ರಚನಾತ್ಮಕ ಸುಧಾರಣೆಗಳುಳ್ಳ ಬಜೆಟ್ ಅನ್ನು ನಿರ್ಮಲಾ ಅವರು ಮಂಡಿಸಬೇಕಾಗಿದೆ.

ಬಜೆಟ್ ಅನುದಾನಕ್ಕಾಗಿ ಹೆಚ್ಚು ಕಡಿಮೆ ಎಲ್ಲಾ ವಲಯಗಳೂ ಪೈಪೋಟಿ ನಡೆಸುತ್ತಿರುವುದು ನಿರ್ವಿವಾದ. ಆದ್ಯತಾ ರಂಗಗಳಾದ ಕೃಷಿ, ಎಂಎಸ್ಎಂಇ ಮತ್ತು ಶಿಕ್ಷಣ ವಲಯಗಳನ್ನು ಅಲಕ್ಷಿಸುವಂತಿಲ್ಲ. ಮಾನವ ಅಭಿವೃದ್ಧಿಗೆ ಬೇಕೇ ಬೇಕಾದ ಆರೋಗ್ಯ ಕ್ಷೇತ್ರವನ್ನು ಕಡೆಗಣಿಸಬಾರದು. ಸರ್ಕಾರಿ ಸ್ವಾಮ್ಯದ ರೈಲು ಸಾರಿಗೆಯ ಕ್ಷಮತೆಯನ್ನು ಹೆಚ್ಚಿಸಬೇಕಾಗಿದೆ. ಗ್ರಾಮೀಣ ಜನರ ಆದಾಯ ವೃದ್ಧಿಗೆ ನೆರವಾಗುತ್ತಿರುವ ‘ನರೇಗಾ’ಕ್ಕೆ ಅನುದಾನ ಏರಿಸಬೇಕೇ ಹೊರತು ನಿರ್ಮಲಾ ಅವರು ಪ್ರಥಮ ಬಜೆಟ್ನಲ್ಲಿ ಮಾಡಿದಂತೆ ಕಡಿತ ಮಾಡುವುದು ಸಲ್ಲ. ನಗರ ಪ್ರದೇಶದಲ್ಲೂ ಉದ್ಯೋಗ ಖಾತರಿ ಯೋಜನೆ ಪ್ರಾರಂಭವಾಗಬೇಕೆಂಬ ಬಲವಾದ ಬೇಡಿಕೆ ಇದೆ. ಕೌಶಲಾಭಿವೃದ್ಧಿ ಯೋಜನೆಗಳನ್ನು ಮುಂದುವರಿಸುವುದರ ಜತೆಗೆ ಈ ಯೋಜನೆಗಳ ಲಾಭ ಮಹಿಳೆಯರಿಗೆ ಹೆಚ್ಚಾಗಿ ದೊರಕುವಂತೆ ಮಾಡುವ ಬಜೆಟ್ ಬೇಕಾಗಿದೆ.

ಸೆಪ್ಟೆಂಬರ್ನಲ್ಲಿ ಕಾರ್ಪೊರೇಟ್ ವಲಯಕ್ಕೆ ನೀಡಿದ ತೆರಿಗೆ ದರ ಕಡಿತದ ಬಂಪರ್ ಕೊಡುಗೆಯನ್ನು ಮುಂದುವರಿಸುವುದು ಅವಶ್ಯ. ವಿಶ್ವದ ಒಟ್ಟು ಸರಕು ಗಳ ರಫ್ತು ವ್ಯಾಪಾರದಲ್ಲಿ ಭಾರತದ ಪಾಲು ಕೇವಲ ಶೇ 1.7ರಷ್ಟು. ಬರಲಿರುವ ಬಜೆಟ್, ರಫ್ತು ವ್ಯಾಪಾರಕ್ಕೆ ಇನ್ನಷ್ಟು ವಿತ್ತೀಯ ಉತ್ತೇಜನ ನೀಡಬೇಕಾಗಿದೆ. ನಿರ್ಮಲಾ ಅವರು ಯಾವುದನ್ನೂ ಬಿಡುವಂತಿಲ್ಲ, ಎಲ್ಲವನ್ನೂ ಮಾಡುವ ಸಾಮರ್ಥ್ಯ ಅವರು ಪ್ರತಿನಿಧಿಸುತ್ತಿರುವ ಸರ್ಕಾರಕ್ಕಿಲ್ಲ. ಹಣಕಾಸು ಸಚಿವೆ ಈಗ ಖಂಡಿತ ವಾಗಿಯೂ ಸತ್ವಪರೀಕ್ಷೆ ಎದುರಿಸುತ್ತಿರುವುದು ಸತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.