ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Union Budget 2024: ಪೂರ್ವದ ರಾಜ್ಯಗಳ ಅಭಿವೃದ್ಧಿಗೆ ‘ಪೂರ್ವೋದಯ’

Published 23 ಜುಲೈ 2024, 15:46 IST
Last Updated 23 ಜುಲೈ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಪೂರ್ವ ಭಾಗದ ರಾಜ್ಯಗಳು ಹಾಗೂ ಈಶಾನ್ಯ ಭಾಗದ ರಾಜ್ಯಗಳ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಪೂರ್ವ ಭಾಗದ ರಾಜ್ಯಗಳಾದ ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಅಭಿವೃದ್ಧಿಗೆ ‘ಪೂರ್ವೋದಯ’ ಹೆಸರಿನಲ್ಲಿ ಯೋಜನೆಯೊಂದನ್ನು ಸಿದ್ಧಪಡಿಸುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ. ಈ ಯೋಜನೆಯ ವ್ಯಾಪ್ತಿಗೆ ದಕ್ಷಿಣದ ಆಂಧ್ರಪ್ರದೇಶವನ್ನು ಕೂಡ ಸೇರಿಸಲಾಗಿದೆ.

ಈ ಯೋಜನೆಯು ಮಾನವ ಸಂಪನ್ಮೂಲ ಅಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಆರ್ಥಿಕ ಅವಕಾಶಗಳ ಸೃಷ್ಟಿಯ ಆಯಾಮಗಳನ್ನು ಒಳಗೊಂಡಿದೆ. ಈ ಕ್ರಮಗಳ ಮೂಲಕ ಈ ರಾಜ್ಯಗಳು ವಿಕಸಿತ ಭಾರತ ನಿರ್ಮಾಣದ ಚಾಲಕ ಶಕ್ತಿಗಳಾಗುವಂತೆ ಮಾಡುವ ಉದ್ದೇಶ ಇದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಅಮೃತಸರ–ಕೋಲ್ಕತ್ತ ಕೈಗಾರಿಕಾ ಕಾರಿಡಾರ್‌ನಲ್ಲಿ ಗಯಾದಲ್ಲಿ ಕೈಗಾರಿಕಾ ನೋಡ್ ಅಭಿವೃದ್ಧಿಪಡಿಸಲು ನೆರವು ಒದಗಿಸಲಾಗುತ್ತದೆ. ಈ ಕೈಗಾರಿಕಾ ಕಾರಿಡಾರ್‌ ದೇಶದ ಪೂರ್ವ ಭಾಗದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ವೇಗ ನೀಡಲಿದೆ. ಅಲ್ಲದೆ, ದೇಶದ ಸಾಂಸ್ಕೃತಿಕ ಮಹತ್ವದ ಪುರಾತನ ಕೇಂದ್ರಗಳನ್ನು ಆಧುನಿಕ ಅರ್ಥ ವ್ಯವಸ್ಥೆಯ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಲು ಗಯಾದಲ್ಲಿನ ಕೈಗಾರಿಕಾ ನೋಡ್‌ ಒಂದು ಮಾದರಿಯಾಗಿ ಒದಗಿಬರಲಿದೆ ಎಂದು ನಿರ್ಮಲಾ ಅವರು ಹೇಳಿದ್ದಾರೆ.

ವಿದ್ಯುತ್ ಉತ್ಪಾದನಾ ಘಟಕ

ಬಿಹಾರದ ಪೀರಪೈಂತಿಯಲ್ಲಿ 2,400 ಮೆಗಾ ವಾಟ್‌ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕವನ್ನು ₹21,400 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಬಿಹಾರದಲ್ಲಿ ಹೊಸ ವಿಮಾನ ನಿಲ್ದಾಣಗಳು, ವೈದ್ಯಕೀಯ ಕಾಲೇಜುಗಳು ಮತ್ತು ಕ್ರೀಡಾ ಮೂಲಸೌಕರ್ಯಗಳು ತಲೆ ಎತ್ತಲಿವೆ.

ಮಹಿಳಾ ಕೇಂದ್ರಿತ ಅಭಿವೃದ್ಧಿ

ಅಭಿವೃದ್ಧಿಯು ಮಹಿಳೆಯರನ್ನು ಕೇಂದ್ರೀಕರಿಸಿ ಇರಬೇಕು ಎಂಬ ಉದ್ದೇಶದಿಂದ, ಮಹಿಳೆಯರು ಹಾಗೂ ಹೆಣ್ಣುಮಕ್ಕಳಿಗೆ ನೆರವಾಗುವ ಯೋಜನೆಗಳಿಗೆ ಬಜೆಟ್‌ನಲ್ಲಿ ₹3 ಲಕ್ಷ ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಲಾಗಿದೆ.

ಈ ರೀತಿ ಮಾಡಿರುವುದು, ಆರ್ಥಿಕ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರವು ಹೆಚ್ಚಾಗಬೇಕು ಎಂಬ ವಿಚಾರದಲ್ಲಿ ಸರ್ಕಾರ ಹೊಂದಿರುವ ಬದ್ಧತೆಯನ್ನು ತೋರಿಸುತ್ತಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. 

ಬುಡಕಟ್ಟು ಸಮುದಾಯಗಳ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಜನಜಾತೀಯ ಉನ್ನತ ಗ್ರಾಮ ಅಭಿಯಾನವನ್ನು ಕೇಂದ್ರ ಸರ್ಕಾರವು ಆರಂಭಿಸಲಿದೆ. ಈ ಯೋಜನೆಯ ವ್ಯಾಪ್ತಿಗೆ 63 ಸಾವಿರ ಗ್ರಾಮಗಳು ಬರಲಿವೆ, ಯೋಜನೆಯಿಂದಾಗಿ ಬುಡಕಟ್ಟು ಸಮುದಾಯಗಳ ಐದು ಕೋಟಿ ಮಂದಿಗೆ ಅನುಕೂಲ ಆಗಲಿದೆ.

ಈಶಾನ್ಯ ರಾಜ್ಯಗಳಲ್ಲಿ ಬ್ಯಾಂಕ್ ಶಾಖೆಗಳು

ಬ್ಯಾಂಕಿಂಗ್ ಸೇವೆಗಳ ವ್ಯಾಪ್ತಿಯನ್ನು ಹಿಗ್ಗಿಸುವ ಉದ್ದೇಶದಿಂದ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ನ 100 ಶಾಖೆಗಳನ್ನು ಈಶಾನ್ಯ ಭಾಗಗಳಲ್ಲಿ ಹೊಸದಾಗಿ ಆರಂಭಿಸಲಾಗುತ್ತದೆ.

ಆಂಧ್ರಪ್ರದೇಶಕ್ಕೆ ವಿಶೇಷ ನೆರವು

ಆಂಧ್ರಪ್ರದೇಶ ರಾಜ್ಯಕ್ಕೆ ರಾಜಧಾನಿಯನ್ನು ಕಟ್ಟಿಕೊಳ್ಳಲು ಅಗತ್ಯವಿರುವ ಬಂಡವಾಳ ಒದಗಿಸಲು, ಬೇರೆ ಬೇರೆ ಸಂಸ್ಥೆಗಳ ಮೂಲಕ ವಿಶೇಷ ಹಣಕಾಸಿನ ನೆರವು ಪಡೆದುಕೊಳ್ಳಲು ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ಹಾಲಿ ಹಣಕಾಸು ವರ್ಷದಲ್ಲಿ ಈ ಉದ್ದೇಶಕ್ಕೆ ₹15 ಸಾವಿರ ಕೋಟಿ ಒಗ್ಗೂಡಿಸಿಕೊಡಲಾಗುತ್ತದೆ, ಮುಂದಿನ ವರ್ಷಗಳಲ್ಲಿ ಇನ್ನಷ್ಟು ನೆರವು ಒದಗಿಸಲಾಗುತ್ತದೆ ಎಂದು ಘೋಷಿಸಲಾಗಿದೆ.

ಪೋಲಾವರಂ ನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ನೆರವು ಒದಗಿಸಲಾಗುತ್ತದೆ. ವಿಶಾಖಪಟ್ಟಣ–ಚೆನ್ನೈ ಕೈಗಾರಿಕಾ ಕಾರಿಡಾರ್‌ನ ಕೊಪ್ಪರ್ತಿ ನೋಡ್‌ನಲ್ಲಿ ಮೂಲಸೌಕರ್ಯ ನಿರ್ಮಾಣಕ್ಕೆ, ಹೈದರಾಬಾದ್–ಬೆಂಗಳೂರು ಕೈಗಾರಿಕಾ ಕಾರಿಡಾರ್‌ನ ಒರವಕಲ್ ನೋಡ್‌ನಲ್ಲಿ ಮೂಲಸೌಕರ್ಯ ನಿರ್ಮಾಣಕ್ಕೆ ನೆರವು ಒದಗಿಸಲಾಗುತ್ತದೆ.

ಅಭಿವೃದ್ಧಿಯಲ್ಲಿ ಹಿಂದುಳಿದಿರುವ ರಾಯಲಸೀಮಾ, ಪ್ರಕಾಶಂ ಮತ್ತು ಆಂಧ್ರಪ್ರದೇಶದ ಉತ್ತರ ಕರಾವಳಿಯ ಅಭಿವೃದ್ಧಿಗೆ ಅನುದಾನ ಒದಗಿಸಲಾಗುತ್ತದೆ.‌

₹2.66 ಲಕ್ಷ ಕೋಟಿ: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣ

3 ಕೋಟಿ: ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ನಿರ್ಮಿಸಲಾಗುವ ಹೆಚ್ಚುವರಿ ಮನೆಗಳು

* ಪಟ್ನಾ – ಪೂರ್ಣಿಯಾ ಎಕ್ಸ್‌ಪ್ರೆಸ್‌ವೇ

* ಬಕ್ಸರ್–ಭಾಗಲಪುರ ಎಕ್ಸ್‌ಪ್ರೆಸ್‌ವೇ 

* ಬೋಧಗಯಾ, ರಾಜಗೀರ್, ವೈಶಾಲಿ ಮತ್ತು ದರ್ಭಾಂಗಾ ಮಾರ್ಗ

* ಬಕ್ಸರ್‌ನಲ್ಲಿ ಗಂಗಾ ನದಿಗೆ ಎರಡು ಪಥಗಳ ಹೆಚ್ಚವರಿ ಸೇತುವೆ ನಿರ್ಮಾಣ

(ಇವೆ‌ಲ್ಲವುಗಳಿಗಾಗಿ ಒಟ್ಟು ₹26 ಸಾವಿರ ಕೋಟಿ ಮೀಸಲಿರಿಸಲಾಗಿದೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT