ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಮೆ ಪ್ರೀಮಿಯಂ ಮೇಲಿನ ತೆರಿಗೆ ಕಡಿತ: ಜಿಎಸ್‌ಟಿ ದರ ಸರಳೀಕರಣಕ್ಕೆ ಆಕ್ಷೇಪ

Published 22 ಆಗಸ್ಟ್ 2024, 15:57 IST
Last Updated 22 ಆಗಸ್ಟ್ 2024, 15:57 IST
ಅಕ್ಷರ ಗಾತ್ರ

ನವದೆಹಲಿ: ಜಿಎಸ್‌ಟಿ ವ್ಯವಸ್ಥೆಯಡಿ ತೆರಿಗೆ ಪ್ರಮಾಣ ಸರಳಗೊಳಿಸಲು ರಚಿಸಿರುವ ಏಳು ಸಚಿವರನ್ನು ಒಳಗೊಂಡ ಸಮಿತಿ ಸಭೆಯು ಗುರುವಾರ ನಡೆಯಿತು.‌

ಜಿಎಸ್‌ಟಿ ಅಡಿ ರಚಿಸಿರುವ ನಾಲ್ಕು ಸ್ಲ್ಯಾಬ್‌ಗಳ ಪರಿಷ್ಕರಣೆ ಮತ್ತು ಕೆಲವು ಸರಕುಗಳಿಗೆ ಜಿಎಸ್‌ಟಿ ಕಡಿತಗೊಳಿಸುವ ಬಗ್ಗೆಯೂ ಚರ್ಚಿಸಲಾಯಿತು. ಆರೋಗ್ಯ ಮತ್ತು ಜೀವ ವಿಮೆ ಪ್ರೀಮಿಯಂ ಮೇಲಿನ ಶೇ 18ರಷ್ಟು ಜಿಎಸ್‌ಟಿ ಕಡಿತಗೊಳಿಸುವ ಬಗ್ಗೆಯೂ ಕೆಲವು ಸಚಿವರು ಸಭೆಯಲ್ಲಿ ಪ್ರಸ್ತಾಪಿಸಿದರು ಎಂದು ಹೇಳಲಾಗಿದೆ.

ತೆರಿಗೆ ಪ್ರಮಾಣ ಸರಳಗೊಳಿಸುವುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ದತ್ತಾಂಶ ಸಂಗ್ರಹಿಸಲು ಕೇಂದ್ರ ಮತ್ತು ರಾಜ್ಯಗಳ ತೆರಿಗೆ ಅಧಿಕಾರಿಗಳನ್ನು ಒಳಗೊಂಡಿರುವ ಸಮಿತಿಗೆ ಸೂಚಿಸಲಾಯಿತು.

ಸ್ಲ್ಯಾಬ್‌ ಬದಲಾವಣೆಗೆ ಆಕ್ಷೇಪ:‌

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಸಂಚಾಲಕರಾದ ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮಾತನಾಡಿ, ‘ಸ್ಬ್ಲಾಬ್‌ಗಳ ಬದಲಾವಣೆ ಮಾಡದಂತೆ ಕೆಲವು ಸಚಿವರು ಒತ್ತಾಯಿಸಿದ್ದಾರೆ’ ಎಂದರು.

‘ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಯಬೇಕಿದೆ. ಆ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ಪಶ್ಚಿಮ ಬಂಗಾಳದ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಮಾತನಾಡಿ, ‘ತೆರಿಗೆ ಸ್ಲ್ಯಾಬ್‌ನಲ್ಲಿ ಬದಲಾವಣೆ ಮಾಡದಂತೆ ಒತ್ತಾಯಿಸಿದ್ದೇನೆ’ ಎಂದರು.

ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘ಜಿಎಸ್‌ಟಿ ಪದ್ಧತಿ ಸದೃಢವಾಗಿದೆ’ ಎಂದರು.

‘ಆರೋಗ್ಯ ಮತ್ತು ಜೀವ ವಿಮೆ ಪ್ರೀಮಿಯಂಗೆ ವಿಧಿಸುವ ಜಿಎಸ್‌ಟಿ ಕೈಬಿಡುವ ಬಗ್ಗೆ ಮತ್ತಷ್ಟು ವಿವರ ನೀಡುವಂತೆ ಅಧಿಕಾರಿಗಳ ಸಮಿತಿಗೆ ಕೋರಲಾಗಿದೆ. ಸೆಪ್ಟೆಂಬರ್‌ 9ರಂದು ನಡೆಯುವ ಮಂಡಳಿಯ ಸಭೆಯ ಕಾರ್ಯಸೂಚಿಯಲ್ಲಿ ಈ ವಿಷಯ ಸೇರ್ಪಡೆಯಾಗಲಿದೆ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT