ನಾನು ಕಳೆದ ಕೆಲವು ವರ್ಷಗಳಿಂದ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೇನೆ. ಫಂಡ್‌ಗಳಲ್ಲಿನ ಹೂಡಿಕೆಗೂ ಮೊದಲು ನಾವು ಅನ್ಯರ ಊಹಾಪೋಹಕ್ಕೆ ಗಂಟುಬಿದ್ದು ನಡೆಸುವ ಹೂಡಿಕೆಗಿಂತ ಸ್ವತಃ ಕೆಲವು ಮಾಹಿತಿಯನ್ನು ಮೊದಲೇ ಅಧ್ಯಯನ ನಡೆಸಿ ಫಂಡ್ ಉತ್ತಮವಾದುದೇ, ಈ ಹಿಂದಿನ ವರ್ಷಗಳ ಲಾಭಾಂಶ ಎಷ್ಟಿದೆ ಎಂಬ ಮಾಹಿತಿ ಅರಿತು ಹೂಡಿಕೆ ಮಾಡುವುದು ಅಗತ್ಯ ಎಂಬ ವಿಚಾರ ಇತ್ತೀಚೆಗೆ ವ್ಯಾಪಕವಾಗಿ ಅರಿವಿಗೆ ಬರುತ್ತಿದೆ. ಈ ಹಂತದಲ್ಲಿ ಬೆಂಚ್ ಮಾರ್ಕ್ ಸೂಚ್ಯಂಕ ಹಾಗೂ ಹೂಡಿಕೆಗೆ ಉದ್ದೇಶಿಸಿರುವ ಫಂಡ್ ಹೇಗೆ ಮಾರುಕಟ್ಟೆಯ ಒಂದೇ ಸಮಯದಲ್ಲಿ ಪ್ರತಿಕ್ರಿಯಿಸಿದೆ ಎನ್ನುವ ಗ್ರಾಫ್ ನೋಡಿದ್ದೆ. ಇದರಲ್ಲಿ ಆಯಾ ಸೂಚ್ಯಂಕದ ಜೊತೆಗೆ ಟಿಆರ್‌ಐ ರಿಟರ್ನ್ಸ್ ಎಂಬ ವಿಶೇಷವಾದ ಸೂಚ್ಯಂಕ ಕೂಡ ಇರುವುದನ್ನು ಕಂಡಿದ್ದೇನೆ.
ನನ್ನ ಪ್ರಶ್ನೆ ಏನೆಂದರೆ ಸಾಮಾನ್ಯ ಸೂಚ್ಯಂಕ ಹಾಗೂ ಈ ‘ಟಿಆರ್‌ಐ ಸೂಚ್ಯಂಕ’ಕ್ಕೂ ವ್ಯತ್ಯಾಸ ಏನು. ನಾವು ಹೂಡಿಕೆಯ ಸಲುವಾಗಿ ಇವುಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಮಾಹಿತಿ ನೀಡಿ.
ಮ್ಯೂಚುವಲ್ ಫಂಡ್ ಸಂಸ್ಥೆಗಳು ಸಾಮಾನ್ಯವಾಗಿ ತಮ್ಮ ಬೆಂಚ್ ಮಾರ್ಕ್ ರಿಟರ್ನ್ ಅನ್ನು ಆಯಾ ವಿಭಾಗದ ಸೂಚ್ಯಂಕದ ಮೌಲ್ಯಕ್ಕೆ ಹೋಲಿಕೆ ಮಾಡುತ್ತವೆ. ಇದು ಆಯಾ ಸ್ಕೀಂ ನಿಗದಿತ ಬೆಂಚ್ ಮಾರ್ಕ್ ಸೂಚ್ಯಂಕಕ್ಕಿಂತ ಉತ್ತಮವಾಗಿ ನಿರ್ವಹಿಸಲ್ಪಟ್ಟಿದೆಯೇ, ಇಲ್ಲವೇ ಎಂಬುದನ್ನು ಹೂಡಿಕೆದಾರರಿಗೆ ಮನವರಿಕೆ ಮಾಡಿ ಕೊಡುತ್ತದೆ. ಪ್ರೈಸ್ ರಿಟರ್ನ್ ಇಂಡೆಕ್ಸ್ ಕೇವಲ ಮೌಲ್ಯದಲ್ಲಿ ಆಗುವ ಏರಿಳಿತವನ್ನು ಮಾತ್ರ ಪರಿಗಣಿಸಿ ಲಾಭದ ಪ್ರಮಾಣ ನಿರ್ಧರಿಸುತ್ತದೆ. ಆದರೆ, ಟೋಟಲ್ ರಿಟರ್ನ್ಸ್ ಇಂಡೆಕ್ಸ್ ಆಯಾ ಸ್ಕೀಂ ಬಿಡುಗಡೆ ಮಾಡಿದ ಡಿವಿಡೆಂಡ್ (ಲಾಭಾಂಶ) ಇತ್ಯಾದಿಯನ್ನೂ ಪರಿಗಣಿಸಿ ಫಂಡ್ ನೀಡಿರುವ ಲಾಭದ ನಿಖರ ಮಾಹಿತಿಯನ್ನು ಹೂಡಿಕೆದಾರರಿಗೆ ನೀಡುತ್ತದೆ. ಹೀಗಾಗಿ, ಹೂಡಿಕೆದಾರರು ಟಿಆರ್‌ಐ ಸಹಿತವಾದ ಹೋಲಿಕೆಯು ಹೆಚ್ಚು ಸಮಂಜಸವಾಗಿದೆ ಎಂದು ತಿಳಿಯಬಹುದು. ಇದು ಸೆಬಿ ನಿಯಮದ ಪಾಲನೆಯ ಭಾಗವೂ ಆಗಿದೆ.
ನಾನು ಹಿರಿಯ ನಾಗರಿಕನಾಗಿದ್ದು, ಹಲವು ವರ್ಷಗಳಿಂದ ಮ್ಯೂಚುವಲ್ ಫಂಡ್‌ಗಳಲ್ಲಿ ಹಣವನ್ನು ವಿನಿಯೋಗಿಸುತ್ತಾ ಇದ್ದೇನೆ. ಇತ್ತೀಚೆಗೆ ನನ್ನ ಒಂದು ಆಸ್ತಿಯನ್ನು ಮಾರಾಟ ಮಾಡಿ ಬಂದ ಹಣವನ್ನು ಮತ್ತೆ ಬೇರೆ ಆಸ್ತಿ ಖರೀದಿಸಲು ಅನುಕೂಲವಾಗುವಂತೆ 2023ರ ಏಪ್ರಿಲ್ 1ರ ನಂತರ ಲಿಕ್ವಿಡ್ ಫಂಡ್‌ಗಳಲ್ಲಿ ವಿನಿಯೋಗಿಸಿದ್ದೆ. ಇದರಿಂದ ಸುಮಾರು ಶೇ 6-7ರಷ್ಟು ಆದಾಯ ಬಂದರೂ ಆದಾಯ ತೆರಿಗೆಗೆ ಒಳಪಡುವುದರಿಂದ ನನಗೆ ಲಿಕ್ವಿಡ್ ಫಂಡ್‌ಗಳಲ್ಲಿ ಮುಂದುವರಿಯಲು ಆಸಕ್ತಿ ಇಲ್ಲ.
ಈಗಾಗಲೇ, ಈಕ್ವಿಟಿ ಫಂಡ್‌ಗಳಲ್ಲಿ ಸಾಕಷ್ಟು ವಿನಿಯೋಗ ಇರುವುದರಿಂದ ಲಿಕ್ವಿಡ್ ಫಂಡ್‌ಗಳನ್ನು ಮಾರಾಟ ಮಾಡಿ ಆ ಹಣವನ್ನು ಡೈನಮಿಕ್ ಅಸೆಟ್ ಅಲೋಕೇಷನ್ ಫಂಡ್‌ಗಳಲ್ಲಿ ವಿನಿಯೋಗಿಸುವುದು ಭದ್ರತೆ, ವೃದ್ಧಿ ಹಾಗೂ ಆದಾಯ ತೆರಿಗೆಯ ವಿಚಾರದಿಂದ ಒಳ್ಳೆಯ ಉಪಾಯವೇ ಎಂದು ತಿಳಿಸಿ ಅಥವಾ ಬೇರೆ ಒಳ್ಳೆಯ ಪರ್ಯಾಯ ಉಪಾಯಗಳು ಇದ್ದರೆ ತಿಳಿಸಿ.
ಉತ್ತರ: ನೀವು ಮ್ಯೂಚುವಲ್ ಫಂಡ್ ವಿಭಾಗದಲ್ಲಿ ಹೆಚ್ಚಿನ ಆದಾಯ ಪಡೆಯುವ ಅವಕಾಶ ಇರುವ ಉತ್ಪನ್ನಗಳಿಗೆ ನಿಮ್ಮ ಹಣವನ್ನು ವರ್ಗಾಯಿಸುವ ಉದ್ದೇಶ ಹೊಂದಿರುವುದು ಸರಿಯಾಗಿದೆ. ಆದರೆ, ಈ ನಿರ್ಧಾರದ ಹಿಂದೆ ಅನೇಕ ಮಾಹಿತಿ ಹೊಂದಿರುವುದೂ ಅಗತ್ಯ. ಸಾಮಾನ್ಯವಾಗಿ ಉತ್ತಮ ಮಾರುಕಟ್ಟೆ ಸನ್ನಿವೇಶದಲ್ಲಿ ಎಲ್ಲ ಈಕ್ವಿಟಿ ಹೂಡಿಕೆ ಉತ್ಪನ್ನಗಳು ಉತ್ತಮ ಆದಾಯ ನೀಡುವುದು ಸಹಜ.
ಆದರೆ, ಈ ಸ್ಥಿತಿ ಸತತವಾಗಿ ಇರುತ್ತದೆ ಎಂಬುದು ಸಾರ್ವಕಾಲಿಕವಲ್ಲ. ಹೀಗಾಗಿ, ನಿಮ್ಮ ನಿರ್ಣಯದ ಹಿಂದೆ ಈ ಕೆಳಗಿನ ವಿಮರ್ಶೆ ಮಾಡಿ.
ಹೂಡಿಕೆಯ ಸಮಯದ ಪರಿಧಿ: ಎಲ್ಲದಕ್ಕಿಂತ ಪ್ರಮುಖವಾಗಿ ನಿಮ್ಮ ಹೂಡಿಕೆಯ ಅವಧಿ ಎಷ್ಟು ವರ್ಷ ಇರಬೇಕು ಎನ್ನುವ ನಿರ್ಧಾರ ನಿಮ್ಮ ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ್ದು ಹಾಗೂ ಇದು ನೀವು ಮಾತ್ರ ಊಹಿಸಬಹುದಾಗಿರುವ ವಿಚಾರ. ಸಾಮಾನ್ಯವಾಗಿ ಈಕ್ವಿಟಿ ವಿಭಾಗದ ಹೂಡಿಕೆಗಳಾಗಿದ್ದರೆ, ಕೆಲವೊಮ್ಮೆ ಅಲ್ಪಾವಧಿಯಲ್ಲಿ ಅತಿ ವೇಗದ ಲಾಭ ಕಂಡುಬಂದರೂ, ಮಾರುಕಟ್ಟೆಯ ಏರಿಳಿತದ ಸ್ಥಿತಿಯಲ್ಲಿ ಇದು ನಿರಂತರವಲ್ಲ. ಹೀಗಾಗಿ, ದೀರ್ಘಾವಧಿ ಹೂಡಿಕೆಗಳೇ ಹೆಚ್ಚು ಸೂಕ್ತ. ಈ ಅವಧಿಗೂ ಮೊದಲು ನಿಮ್ಮ ನಿರ್ಧರಿತ ಲಾಭ ಬಂದರೆ ಮಾರಾಟ ಮಾಡುವ ಅವಕಾಶ ಇಲ್ಲವೆಂದಲ್ಲ.
ಆದರೆ, ಮಾರುಕಟ್ಟೆಯ ಅನಿವಾರ್ಯ ಪರಿಸ್ಥಿತಿಯ ಸಂದರ್ಭದಲ್ಲಿ ಉಂಟಾದ ನಷ್ಟವನ್ನು ದೀರ್ಘಾವಧಿ ಹೂಡಿಕೆಗಳಷ್ಟೇ ಭರಿಸುವ ಸಾಮರ್ಥ್ಯ ಹೊಂದಿವೆ. ನಿಮ್ಮ ಹೂಡಿಕೆ ನಿರ್ಧಾರ 3 ರಿಂದ 5 ವರ್ಷದ್ದಾಗಿದ್ದರೆ ಮಾತ್ರ ಇದು ಹೆಚ್ಚಿನ ಹಾಗೂ ನಿಯತ ಲಾಭ ಕೊಡಬಲ್ಲದು. ಈಕ್ವಿಟಿ ವಿಭಾಗದ ಉತ್ತಮ ಹೂಡಿಕೆಗಳು ಆರ್ಥಿಕ ಅಪಾಯ ಇಲ್ಲದ ಹೂಡಿಕೆಗಳಿಗೆ ಹೋಲಿಕೆ ಮಾಡಿದರೆ ದ್ವಿಗುಣ ಆದಾಯ ಕೊಟ್ಟಿರುವುದು ಕಂಡುಬರುತ್ತದೆ.
ಆರ್ಥಿಕ ಅಪಾಯ: ಸಾಮಾನ್ಯವಾಗಿ ಯಾವುದೇ ಈಕ್ವಿಟಿ ವಿಭಾಗದ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೊದಲು ಆಯಾ ಸ್ಕೀಮ್‌ಗೆ ಸಂಬಂಧಪಟ್ಟ ದಾಖಲೆಗಳಲ್ಲಿ ರಿಸ್ಕೋ ಮೀಟರ್ ಪ್ರಕಟಿಸಲಾಗುತ್ತದೆ. ನಿಮ್ಮ ಹೂಡಿಕೆಯ ಅವಧಿಗೆ ಹೋಲಿಕೆ ಮಾಡಿ ಈ ಬಗ್ಗೆ ನಿರ್ಧಾರ ಕೈಗೊಳ್ಳಿ. ಯಾವುದೇ ಕ್ಷಿಪ್ರ ಅಗತ್ಯಗಳಿಗೆ ಬೇಕಾಗಿರುವ ಹಣವನ್ನು ಇಲ್ಲಿ ಹೂಡಿಕೆ ಮಾಡಬೇಡಿ.
ತೆರಿಗೆ ದರ: ಈಕ್ವಿಟಿ ವಿಭಾಗದ ಹೂಡಿಕೆಗಳಾಗಿದ್ದರೆ, ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಮಾರಾಟ ಮಾಡಿದರೆ, ಅಲ್ಪಾವಧಿ ಹೂಡಿಕೆಯಾಗುತ್ತದೆ. ಇದು ಶೇ 20ರ ದರದಲ್ಲಿ ತೆರಿಗೆಗೆ ಒಳಪಡುತ್ತದೆ. ಅದುವೇ ಒಂದು ವರ್ಷಕ್ಕೂ ಮೇಲ್ಪಟ್ಟು ಹೂಡಿಕೆ ಮಾಡಿ ಮಾರಾಟ ಮಾಡಿದಾಗ ದೀರ್ಘಾವಧಿ ಲಾಭವಾಗುತ್ತದೆ. ₹1.25 ಲಕ್ಷದ ತನಕದ ಲಾಭಕ್ಕೆ ತೆರಿಗೆ ಇಲ್ಲ. ಇದಕ್ಕೂ ಮೇಲ್ಪಟ್ಟ ಮೊತ್ತಕ್ಕೆ ಶೇ 12.5ರಷ್ಟು ತೆರಿಗೆ ಇದೆ.
ಸರಣಿ ಹೂಡಿಕೆ: ನಿಮ್ಮ ಮೊತ್ತ ಒಂದೇ ಬಾರಿ ಒಂದೇ ಫಂಡ್‌ನಲ್ಲಿ ಹೂಡುವುದಕ್ಕಿಂತ ಈಕ್ವಿಟಿ ವಿಭಾಗದ ನಾಲ್ಕೈದು ಫಂಡ್‌ಗಳಲ್ಲಿ ವಿಂಗಡಿಸಿ ಹೂಡಿಕೆ ಮಾಡುವುದು ಆರ್ಥಿಕ ಅಪಾಯ ನಿರ್ವಹಣೆಯ ದೃಷ್ಟಿಯಲ್ಲಿ ಹೆಚ್ಚು ಸಮಂಜಸ.
ಎಕ್ಸಿಟ್ ಲೋಡ್: ಬಹುತೇಕ ಫಂಡ್‌ಗಳು ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಈಕ್ವಿಟಿ ವಿಭಾಗದ ಹೂಡಿಕೆಗಳಿಗೆ, ಹೂಡಿಕೆ ಮರಳಿ ಪಡೆಯುವ ಸಂದರ್ಭದಲ್ಲಿ ಎಕ್ಸಿಟ್ ಲೋಡ್ ವಿಧಿಸುವುದಿಲ್ಲ. ಅನಿವಾರ್ಯ ಸಂದರ್ಭದಲ್ಲಿ ಈ ಅವಧಿಗೂ ಮುನ್ನ ಹಣ ಬೇಕಾದರೆ ಶೇ 1ರಷ್ಟು ಎಕ್ಸಿಟ್ ಲೋಡ್ ವಿಧಿಸುವ ಅವಕಾಶ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.