ಪ್ರಸ್ತುತ ಬ್ಯಾಂಕ್‌ಗಳು ಸಿಟಿಎಸ್ (ಚೆಕ್ ಟ್ರಂಕೇಷನ್ ಸಿಸ್ಟಂ) ಮೂಲಕ ಎರಡು ದಿನದಲ್ಲಿ ಚೆಕ್ ಕ್ಲಿಯರೆನ್ಸ್ ಮಾಡುತ್ತವೆ. ಇನ್ನು ಮುಂದೆ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವ ಅವಧಿಯಲ್ಲಿಯೇ ಚೆಕ್‌ಗಳನ್ನು ಸ್ಕ್ಯಾನ್ ಮಾಡಿ, ಕೆಲವೇ ಗಂಟೆಗಳಲ್ಲಿ ಅವುಗಳ ತ್ವರಿತ ವಿಲೇವಾರಿಗೆ ಆರ್‌ಬಿಐ ಕ್ರಮವಹಿಸಿದೆ. ಇದರಿಂದ ಚೆಕ್ ಪಾವತಿದಾರರು ಮತ್ತು ಹಣ ಪಡೆಯುವವರಿಗೆ ಅನುಕೂಲವಾಗಲಿದೆ. 2021ರಲ್ಲಿ ಸಿಟಿಎಸ್ ವ್ಯವಸ್ಥೆ ಜಾರಿಗೆ ಬಂದಿದೆ. ಸಿಟಿಎಸ್ ಸೌಲಭ್ಯದ ಚೆಕ್‌ಗಳನ್ನು ಸ್ಕ್ಯಾನ್ ಮಾಡಿದರೆ ಚೆಕ್ ಕುರಿತ ದತ್ತಾಂಶಗಳ ಮಾಹಿತಿಯು ಕ್ಲಿಯರಿಂಗ್ ಹೌಸ್‌ಗೆ ನೇರವಾಗಿ ಹೋಗುತ್ತದೆ. ಬೇರೆ ಖಾತೆಗೆ ಹಣ ಸಂದಾಯವಾಗುವ ಸಾಧ್ಯತೆ ಕಡಿಮೆ.
ನಿಯೋಜಿತ ಪಾವತಿ
ಯುಪಿಐ ಮೂಲಕ ನಿಯೋಜಿತ ಪಾವತಿ ವ್ಯವಸ್ಥೆಗೆ ಆರ್‌ಬಿಐ ಅವಕಾಶ ಕಲ್ಪಿಸಿದೆ. ಅಂದರೆ ಒಬ್ಬರ ಬದಲಿಗೆ ಬೇರೊಬ್ಬರು ಹಣ ಪಾವತಿಸುವ ವ್ಯವಸ್ಥೆ ಇದಾಗಿದೆ. ಉದಾಹರಣೆಗೆ ಒಂದು ಬ್ಯಾಂಕ್ ಖಾತೆ ಹೊಂದಿರುವ ವ್ಯಕ್ತಿಯನ್ನು ಪ್ರಾಥಮಿಕ ಬಳಕೆದಾರ ಎಂದು ಪರಿಗಣಿಸಲಾಗುತ್ತದೆ. ಈ ವ್ಯಕ್ತಿಯು ತನ್ನ ಖಾತೆಯನ್ನು ಯುಪಿಐ ಮೂಲಕ ಎರಡನೇ ವ್ಯಕ್ತಿಗೆ ಬಳಸಲು (ಯುಪಿಐ ವ್ಯವಸ್ಥೆ ಹೊಂದಿದವರು) ಅವಕಾಶ ಕೊಡಬಹುದಾಗಿದೆ. ಯುಪಿಐ ಮೂಲಕ ಎಷ್ಟು ಮೊತ್ತದ ವಹಿವಾಟು ನಡೆಸಬಹುದು ಎನ್ನುವುದನ್ನು ಪ್ರಾಥಮಿಕ ಸದಸ್ಯ ನಿರ್ಧರಿಸಬಹುದಾಗಿದೆ.
ಯುಪಿಐ ಮಿತಿ ಏರಿಕೆ
ಸದ್ಯ ಯುಪಿಐ ಮೂಲಕ ₹1 ಲಕ್ಷದವರೆಗೆ ಹಣ ಪಾವತಿಗೆ ಮಿತಿ ನಿಗದಿಪಡಿಸಲಾಗಿದೆ. ಇದನ್ನು ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಹೊಸ ವ್ಯವಸ್ಥೆಯು ತೆರಿಗೆ ಪಾವತಿಗಷ್ಟೇ ಸೀಮಿತವಾಗಿದೆ.