2004ರಲ್ಲಿ ನನ್ನ ಪತ್ನಿಯು ₹3 ಲಕ್ಷಕ್ಕೆ ಆಸ್ತಿಯೊಂದನ್ನು ಖರೀದಿಸಿದ್ದರು. ಪ್ರಸ್ತುತ ಅದರ ಮಾರುಕಟ್ಟೆ ಮೌಲ್ಯವು ಸುಮಾರು ₹1 ಕೋಟಿ ಆಗಿದೆ. ಅವರು ಸರ್ಕಾರಿ ಸ್ವಾಮ್ಯದ ಉದ್ದಿಮೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಶೇ 30ರ ಆದಾಯ ತೆರಿಗೆ ಶ್ರೇಣಿಯಲ್ಲಿ ಬರುತ್ತಾರೆ. ಈ ಆಸ್ತಿ ಮಾರಾಟ ಮಾಡುವ ಕುರಿತು ನನಗೆ ಕೆಲವು ಪ್ರಶ್ನೆಗಳಿವೆ;
* ಇತ್ತೀಚಿನ ಆದಾಯ ತೆರಿಗೆ ಮಾರ್ಗಸೂಚಿ ಪ್ರಕಾರ ಲಾಭದ ಮೇಲೆ ಶೇ 12.50 ದರದಲ್ಲಿ (ಸೂಚ್ಯಂಕ ರಹಿತ ಲಾಭ) ಅಥವಾ ಶೇ 20ರ ದರದಲ್ಲಿ (ಸೂಚ್ಯಂಕ ಸಹಿತ ಲಾಭ) ತೆರಿಗೆ ವಿಧಿಸಲಾಗುವುದೇ? ಆ ಮಾರಾಟದ ಮೊತ್ತವನ್ನು ಅವರ ಆದಾಯ ತೆರಿಗೆ ರಿಟರ್ನ್ಸ್‌ಗಳಲ್ಲಿ ತೋರಿಸಬೇಕೇ ಮತ್ತು ಇದಕ್ಕೆ ಹೆಚ್ಚುವರಿ ಶೇ 30ರಷ್ಟು ತೆರಿಗೆ ವಿಧಿಸಲಾಗುತ್ತದೆಯೇ?
* ಮಾರಾಟದ ಮೊತ್ತವನ್ನು ಯಾವುದೇ ತೆರಿಗೆ ಉಳಿತಾಯ ಸಾಧನಗಳಲ್ಲಿ ಹೂಡಿ ತೆರಿಗೆ ಉಳಿಸುವ ಅವಕಾಶಗಳಿವೆಯೇ? ಈ ವ್ಯವಹಾರದಲ್ಲಿ ತೆರಿಗೆ ಕಡಿತ ಅನ್ವಯವಾಗುತ್ತದೆಯೇ? ತೆರಿಗೆ ಕಡಿತವನ್ನು ಯಾರು ಮಾಡಬೇಕು? ಮಾರಾಟಗಾರರೆ ಅಥವಾ ಕೊಳ್ಳುವವರೇ? ಕಡಿತ ಮಾಡಬೇಕಾದ ತೆರಿಗೆ ದರ ಎಷ್ಟು?
ನಿಮ್ಮ ಆಸ್ತಿಯನ್ನು ಈಗ ಮಾರಾಟ ಮಾಡುವ ಉದ್ದೇಶ ಹೊಂದಿರುವುದರಿಂದ 2024ರ ಬಜೆಟ್ ಘೋಷಣೆಗಳು ಅನ್ವಯವಾಗುತ್ತವೆ. ಇದರ ಉದ್ದೇಶಿತ ಹೊಸ ಪ್ರಸ್ತಾವದಂತೆ ನೀವು ಈಗಾಗಲೇ 2024ರ ಜುಲೈ 23ರ ಮೊದಲು ಆಸ್ತಿ ಖರೀದಿಸಿರುವುದರಿಂದ ನಿಮಗೆ ಎರಡು ಆಯ್ಕೆಗಳಲ್ಲಿ ಲಾಭದಾಯಕ ಆಯ್ಕೆಯನ್ನು ಪರಿಗಣಿಸುವ ಅವಕಾಶವಿದೆ.
ಮೊದಲನೆಯದು ದೀರ್ಘಾವಧಿ ತೆರಿಗೆ ಲೆಕ್ಕ ಹಾಕುವಾಗ ಹಣದುಬ್ಬರ ಸೂಚ್ಯಂಕ ಆಧರಿಸಿ ಈ ಹಿಂದೆ ಹೇಗಿತ್ತೋ ಅದೇ ರೀತಿ ಆಸ್ತಿಯ ಮೌಲ್ಯವನ್ನು ಪರಿಗಣಿಸಿ ತೆರಿಗೆ ಲೆಕ್ಕ ಹಾಕಬಹುದಾಗಿದೆ. ಬಳಿಕ ಲಾಭದ ಮೇಲೆ ಶೇ 20ರಷ್ಟು ತೆರಿಗೆ ಪಾವತಿಸಬೇಕಿದೆ.
ಎರಡನೆಯದು, ಹೊಸ ಬದಲಾವಣೆಯಂತೆ ಮಾರಾಟ ಮೌಲ್ಯ ಹಾಗೂ ಮೂಲ ಅಸಲು ಇವುಗಳ ನಡುವಿನ ಲಾಭದ ಮೇಲೆ ಶೇ 12.5ರ ದರದಲ್ಲಿ ತೆರಿಗೆ ಪಾವತಿಸಬೇಕಿದೆ.
ಒಂದು ವೇಳೆ ವಾಸವಿರುವ ಮನೆ ಮಾರಾಟ ಮಾಡಿ ಇನ್ನೊಂದು ಮನೆ ಖರೀದಿ ಮಾಡುವುದಿದ್ದರೆ ದೀರ್ಘಾವಧಿ ಬಂಡವಾಳ ಲಾಭದ ಮೇಲೆ ತೆರಿಗೆ ವಿನಾಯಿತಿ ಇದೆ. ಈ ಸಂದರ್ಭದಲ್ಲಿ ನಿಮ್ಮ ಲಾಭಾಂಶ ಏನಿದೆಯೋ ಆ ಮೊತ್ತಕ್ಕೆ ಕಡಿಮೆ ಆಗದ ರೀತಿ ಹೂಡಿಕೆ ಮಾಡಿದ್ದರೆ ಸೆಕ್ಷನ್ 54ರ ಅಡಿ ಸಂಪೂರ್ಣ ವಿನಾಯಿತಿ ಸಿಗುತ್ತದೆ. ಇಲ್ಲವಾದರೆ ಲಾಭ ಹಾಗೂ ಹೂಡಿಕೆಯಲ್ಲಿ ಏನು ವ್ಯತ್ಯಾಸವಿದೆಯೋ ಆ ಮೊತ್ತವು ತೆರಿಗೆಗೊಳಪಡುತ್ತದೆ.
ಮಾರಾಟ ಮಾಡುವ ಆಸ್ತಿ ಕೇವಲ ನಿವೇಶನವಾಗಿದ್ದು, ನಿಮ್ಮ ಮುಂದಿನ ಹೂಡಿಕೆ ವಾಸಯೋಗ್ಯ ಮನೆ ನಿರ್ಮಾಣ ಅಥವಾ ಖರೀದಿಗೆ ಉಪಯೋಗಿಸುವುದಿದ್ದರೆ ಸೆಕ್ಷನ್ 54ಎಫ್ ಅಡಿ ಮಾರಾಟ ಮೌಲ್ಯ ಹಾಗೂ ಹೂಡಿಕೆಯ ಮೌಲ್ಯದ ಅನುಪಾತದಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ. ಅಲ್ಲದೆ, ಸೆಕ್ಷನ್ 54ಈಸಿ ಅಡಿ ಕ್ಯಾಪಿಟಲ್ ಗೇನ್ಸ್ (ಬಂಡವಾಳ ಗಳಿಕೆ) ಬಾಂಡ್‌ಗಳಲ್ಲೂ ನಿಗದಿತ ಸಂದರ್ಭಗಳಲ್ಲಿ ಹೂಡಿಕೆಗೂ ಅವಕಾಶವಿದೆ.
ಸೆಕ್ಷನ್ 194ಐಎ ಪ್ರಕಾರ ಭೂಮಿ ಖರೀದಿ ಮಾಡುವ ವ್ಯಕ್ತಿ, ಮಾರಾಟಗಾರರ ಪ್ಯಾನ್ ಸಂಖ್ಯೆಯಡಿ ಶೇ 1ರ ದರದಲ್ಲಿ ತೆರಿಗೆ ಕಡಿತ ಮಾಡಿ ಉಳಿದ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಆದರೆ, ಈ ನಿಯಮ ₹50 ಲಕ್ಷಕ್ಕೂ ಅಧಿಕ ಮೌಲ್ಯದ ಯಾವುದೇ ಸ್ಥಿರಾಸ್ತಿ ವ್ಯವಹಾರಕ್ಕೆ ಮಾತ್ರ ಅನ್ವಯಿಸುತ್ತದೆ.
ಇನ್ನು ವೇತನಕ್ಕೆ ಗರಿಷ್ಠ ತೆರಿಗೆ ದರ ಅನ್ವಯಿಸಿದರೂ ಆಸ್ತಿ ಮಾರಾಟಕ್ಕೆ ಸಂಬಂಧಿಸಿದ ಲಾಭಕ್ಕೆ ತೆರಿಗೆ ಕಾಯ್ದೆಯಡಿ ಪ್ರತ್ಯೇಕ ದರ ಅನ್ವಯಿಸಲಿದೆ. ಇದರಿಂದ ಆ ದರಗಳನ್ನೇ ಪರಿಗಣಿಸಲಾಗುತ್ತದೆಯೆ ಹೊರತು ಒಂದೇ ಆದಾಯಕ್ಕೆ ಎರಡು ಬಾರಿ ತೆರಿಗೆ ಇರುವುದಿಲ್ಲ.
ನಾನು ಹಿರಿಯ ನಾಗರಿಕ (ವಯಸ್ಸು 65). 1984ರಲ್ಲಿ ನಮ್ಮ ತಂದೆಯವರು ₹25,000 ಕೊಟ್ಟು ತೆಗೆದುಕೊಂಡ ಜಾಗದಲ್ಲಿ 1987ರಲ್ಲಿ ಸುಮಾರು ₹2 ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿಸಿದ್ದೇವೆ. 2020ರಲ್ಲಿ ಸುಮಾರು ₹5 ಲಕ್ಷ ವೆಚ್ಚದಲ್ಲಿ ಮೇಲ್ಮಹಡಿ ಕಟ್ಟಿಸಿದ್ದೇವೆ. ಈಗ ಮಾರಾಟ ಮಾಡಿದರೆ ಸುಮಾರು ₹1.25 ಕೋಟಿ ಲಭಿಸಲಿದೆ.
ನಾನು ಅಜಮಾಸು ಎಷ್ಟು ದೀರ್ಘಕಾಲಿನ ಲಾಭದ ತೆರಿಗೆ ಕಟ್ಟಬೇಕಾಗುತ್ತದೆ. ತೆರಿಗೆ ಕಡಿಮೆ ಮಾಡಲು ಯಾವ ರೀತಿ ಪರಿಹಾರಗಳಿವೆ. ₹50 ಲಕ್ಷದವರೆಗೆ ಠೇವಣಿ ಇಡುವ ಯೋಜನೆ ಇದೆಯೇ? ಒಂದು ವೇಳೆ ನಗರ ಮಿತಿಯಿಂದ 8 ಕಿ.ಮೀ ಒಳಗಡೆ ಕೃಷಿ ಜಮೀನು ಖರೀದಿಸಿ ಫಾರಂ ಹೌಸ್ ಕಟ್ಟಿಸಿದರೆ ತೆರಿಗೆ ಉಳಿಸಬಹುದೇ?
ಈ ಮೇಲಿನ ಪ್ರಶ್ನೆಯಲ್ಲಿ ಈಗಾಗಲೇ ಉಲ್ಲೇಖಿಸಿರುವಂತೆ ನಿಮ್ಮ ತೆರಿಗೆಯನ್ನು ಲೆಕ್ಕ ಹಾಕಿಕೊಳ್ಳಬೇಕಾಗುತ್ತದೆ. ಹೆಚ್ಚುವರಿಯಾಗಿ ನೀವು ಗಮನಿಸಬೇಕಾದ ಅಂಶವೆಂದರೆ ನಿಮ್ಮ ಆಸ್ತಿಯ ಮೌಲ್ಯವು 2000ರ ಏಪ್ರಿಲ್ 1ಕ್ಕೆ ಎಷ್ಟಿತ್ತು ಎಂಬುದನ್ನು ಗೊತ್ತು ಮಾಡಿಕೊಳ್ಳಬೇಕು. ಅದರ ಮೇಲೆ ಸೂಚ್ಯಂಕ ಆಧರಿಸಿ ಲಾಭ ಲೆಕ್ಕ ಹಾಕಬೇಕು. ಅಲ್ಲದೆ, ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೂ ಇಂತಹ ಸೂಚ್ಯಂಕ ಆಧಾರಿತ ಲಾಭ ಲೆಕ್ಕ ಹಾಕಬೇಕು. ನಿಮಗೆ ಈ ಹಿಂದಿನಿಂದ ಚಾಲ್ತಿಯಲ್ಲಿರುವ ಸೂಚ್ಯಂಕ ಆಧಾರಿತ ತೆರಿಗೆ ಲೆಕ್ಕದ ಅನ್ವಯ ತೆರಿಗೆ ಹೆಚ್ಚುವರಿ ಬರುವುದಿದ್ದರೆ ಶೇ 12.50ರ ದರದಲ್ಲಿ ಬರುವ ಲಾಭಕ್ಕೆ ತೆರಿಗೆ ಕಟ್ಟಬಹುದು.
ನೀವು ಮನೆ ಮಾರಾಟ ಮಾಡುತ್ತಿರುವ ಕಾರಣ ಹೊಸ ಮನೆಯ ನಿರ್ಮಾಣ, ಖರೀದಿ, ಬಾಂಡ್‌ಗಳ ಖರೀದಿ ಇತ್ಯಾದಿಗಳಲ್ಲಿ ಹೂಡಿಕೆ ಮಾಡುವುದಕ್ಕೆ ಅವಕಾಶ ಇದೆ. ಕೃಷಿ ಭೂಮಿ ಮೇಲಿನ ಹೂಡಿಕೆಗೆ ತೆರಿಗೆ ಲಾಭ ಬರಲು ಕೃಷಿ ಭೂಮಿಯನ್ನಷ್ಟೇ ಮಾರಾಟ ಮಾಡಿ ಮರು ಹೂಡಿಕೆ ಮಾಡಿರಬೇಕು. ನಿಮ್ಮ ವಿಚಾರದಲ್ಲಿ ಮಾರಾಟ ಮಾಡುವ ಆಸ್ತಿ ಮನೆಯಾಗಿರುವುದರಿಂದ ಈ ಪ್ರಯೋಜನ ಸಿಗುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.