ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಈಗ ಎಕ್ಕಡದ ಕತೆ ಭಲೇ ಜೋರಾಗಿದೆ. ಕತೆ ಮೊದಲೇ ಇತ್ತು. ಈಗ ಬಹಳಷ್ಟು ಜನರ ಬಾಯಲ್ಲಿ ಮತ್ತೆ ನಲಿದಾಡುತ್ತಿದೆ. ಮೊದಲು ಈ ಕತೆ ಕೇಳಿಬಿಡೋಣ. ಒಮ್ಮೆ ಒಬ್ಬ ಶಾನುಭೋಗ ಬಡವನೊಬ್ಬನ ಮನೆಗೆ ಬಂದು ‘ನಾವು ಇಂದು ನಿಮ್ಮ ಮನೆಗೆ ಊಟಕ್ಕೆ ಬರುತ್ತೇವೆ’ ಎಂದನಂತೆ. ಬಡವನಿಗೆ ಅಚ್ಚರಿಯಾದರೂ ಊಟ ಹಾಕಲು ಒಪ್ಪಿಕೊಂಡನಂತೆ. ಆದರೆ ಬರುವ ಅತಿಥಿಗಳಿಗೆ ಅಡುಗೆ ಮಾಡಿ ಬಡಿಸುವಷ್ಟು ಶಕ್ತಿ ಅವನಿಗೆ ಇರಲಿಲ್ಲ. ಆದರೂ ಊರ ಶಾನುಭೋಗ ಬರುತ್ತೇನೆ ಎಂದ ಮೇಲೆ ಏನು ಮಾಡೋದು ಎಂದು ಚಿಂತೆಗೆ ಬಿದ್ದನಂತೆ. ಶಾನುಭೋಗ ಹೇಳಿದ ಸಮಯಕ್ಕೆ ತನ್ನ ಸ್ನೇಹಿತರೊಂದಿಗೆ ಅವರ ಮನೆಗೆ ಊಟಕ್ಕೆ ಬಂದೇ ಬಿಟ್ಟನಂತೆ. ಆಗ ಆ ಬಡವ, ‘ಸಾಮಿ ಇಲ್ಲೇ ಕುಳಿತಿರಿ. ಹೊರಗೆ ಹೋಗಿ ಬರ್ತೀನಿ’ ಎಂದು ಹೇಳಿ ಹೋಗಿ ದಿನಸಿ ಸಾಮಾನುಗಳನ್ನು ತಂದು ಅಡುಗೆ ಮಾಡಿ ಬಡಿಸಿದನಂತೆ. ಊಟ ಬಹಳ ಚೆನ್ನಾಗಿತ್ತು. ಶಾನುಭೋಗರು ಬಹಳ ಖುಷಿಯಾದರು. ‘ಬಡವರ ಮನೆ ಊಟ ಆದರೂ ಬಹಳ ಚೆನ್ನಾಗಿತ್ತು’ ಎಂದು ಹೊಗಳಿದರಂತೆ. ಆಗ ಆ ಬಡವ ‘ಎಲ್ಲಾ ನಿಮ್ಮ ಎಕ್ಕಡ ಸಾಮಿ’ ಎಂದನಂತೆ. ಇದೇನಿದು ನಮ್ಮ ಎಕ್ಕಡ ಎನ್ನುತ್ತಾನಲ್ಲ ಎಂದು ಹೊರಗೆ ಬಂದು ನೋಡಿದರೆ, ಅತಿಥಿಗಳ ಚಪ್ಪಲಿಗಳೆಲ್ಲಾ ಕಾಣೆಯಾಗಿದ್ದವಂತೆ. ಆ ಚಪ್ಪಲಿಗಳನ್ನು ಮಾರಾಟ ಮಾಡಿ ಬಂದ ಹಣದಿಂದಲೇ ದಿನಸಿ ತಂದು ಆತ ಅಡುಗೆ ಸಿದ್ಧಪಡಿಸಿದ್ದ.

ಈ ಕತೆ ಈಗ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಯಾಕೆ ಹರಿದಾಡುತ್ತಿದೆ ಎಂದರೆ, ಅಲ್ಲಿ ಈಗ ಮನೆಗೊಬ್ಬ ಗೌರವ ಡಾಕ್ಟರೇಟ್ ಪಡೆದ ವ್ಯಕ್ತಿ ಸಿಗುತ್ತಿದ್ದಾನೆ. ಗೌರವ ಡಾಕ್ಟರೇಟ್ ಕೊಡಿಸುವ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಹಣ ಪಡೆದು ಗೌರವ ಡಾಕ್ಟರೇಟ್ ಕೊಡಿಸುವ ಏಜೆಂಟರು ರಾಜಾರೋಷವಾಗಿ ವ್ಯವಹಾರ ನಡೆಸುತ್ತಿದ್ದಾರೆ. ಆ ಎರಡು ಜಿಲ್ಲೆಗಳಲ್ಲಿ ಮಾತ್ರ ಅಲ್ಲ. ಈ ದಂಧೆ ರಾಜ್ಯದ ಎಲ್ಲ ಕಡೆಯೂ ನಡೆಯುತ್ತಿದೆ. ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ವಿಶ್ವವಿದ್ಯಾಲಯಗಳು ಇದನ್ನು ನೋಡಿಯೂ ಕಣ್ಣು ಮುಚ್ಚಿ ಕುಳಿತಿವೆ. ಪೊಲೀಸರನ್ನು ಕೇಳಿದರೆ ‘ಯಾರೂ ದೂರು ಕೊಟ್ಟಿಲ್ಲ’ ಎಂಬ ಮಾಮೂಲಿ ಸಬೂಬು ಹೇಳುತ್ತಿದ್ದಾರೆ. ಹೆಚ್ಚಿಗೆ ಮಾತನಾಡಿದರೆ ಪೊಲೀಸರಿಗೂ ಗೌರವ ಡಾಕ್ಟರೇಟ್ ಕೊಡುತ್ತಾರಂತೆ. ಹಾಗೆ ಪಡೆದ ಪೊಲೀಸರೂ ಇಲ್ಲಿದ್ದಾರೆ. ಮಾಧ್ಯಮದವರಿಗೂ ಗೌರವ ಡಾಕ್ಟರೇಟ್ ಸಿಕ್ಕಿದೆ. ಅಂಗಡಿಗೆ ಹೋಗಿ ದಿನಸಿ ವಸ್ತುಗಳನ್ನು ತಂದ ಹಾಗೆಯೇ ಗೌರವ ಡಾಕ್ಟರೇಟ್ ಬಿಕರಿಯಾಗುತ್ತಿದ್ದರೂ ಅದನ್ನು ತಡೆಯಲು ಮುಂದಾಗದೇ ಇರುವುದು ಅಚ್ಚರಿ. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರೂ ಈ ಬಗ್ಗೆ ಗಮನ ಹರಿಸಿದಂತೆ ಇಲ್ಲ.

ತಮಿಳುನಾಡಿನ ಮೂರು ನಕಲಿ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಹಂಚುತ್ತಿವೆ. ಅವುಗಳಿಗೆ ಕಡಿವಾಣ ಹಾಕುವ ಕೆಲಸ ಮಾಡದೇ ಇದ್ದರೆ, ಕಷ್ಟಪಟ್ಟು ಡಾಕ್ಟರೇಟ್ ಪಡೆಯುವ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ಜೊತೆಗೆ ವಿಶ್ವವಿದ್ಯಾಲಯಗಳ ಗೌರವ ಕೂಡ ಕಡಿಮೆಯಾಗುತ್ತದೆ. ರಾಜ್ಯದ ಹಲವು ಭಾಗಗಳಲ್ಲಿ ಗೌರವ ಡಾಕ್ಟರೇಟ್ ಕೊಡಿಸುವ ದಂಧೆ ವ್ಯಾಪಕವಾಗಿ ನಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿ ಬಂದ ನಂತರ ಈಗ ಈ ದಂಧೆ ಆನ್‌ಲೈನ್‌ನಲ್ಲಿ ಶುರುವಾಗಿದೆ. ಡಾಕ್ಟರೇಟ್ ಪ್ರದಾನ ಸಮಾರಂಭ ಕೂಡ ಕದ್ದುಮುಚ್ಚಿ ನಡೆಯುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಇಂತಹ ಸಮಾರಂಭವೊಂದು ಮೈಸೂರಿನಲ್ಲಿ ನಡೆಯಿತು. ಗೌರವ ಡಾಕ್ಟರೇಟ್ ಪ್ರಮಾಣ ಪತ್ರಗಳನ್ನು ಅಲ್ಲಿ ಗುಡ್ಡೆ ಹಾಕಲಾಗಿತ್ತಂತೆ. ಡಾಕ್ಟರೇಟ್‌ಗಾಗಿ ಹಣ ಕೊಟ್ಟವರು ಅಲ್ಲಿಗೆ ಹೋಗಿ ತಮ್ಮ ಹೆಸರಿನ ಪ್ರಮಾಣ ಪತ್ರವನ್ನು ತೆಗೆದುಕೊಂಡು ಬಂದು ಗೌನ್ ಹಾಕಿಕೊಂಡು ಫೋಟೊ ತೆಗೆಸಿಕೊಂಡರಂತೆ. ಪುಸ್ತಕ ಓದೋದಿಲ್ಲ, ಕ್ಷೇತ್ರ ಕಾರ್ಯ ಮಾಡೋದಿಲ್ಲ. ಹಣ ಕೊಡೋದು, ಡಾಕ್ಟರೇಟ್ ಪಡೆದು ಕೊಳ್ಳುವುದು ಅಷ್ಟೆ. ಅದಕ್ಕೇ ಈಗ ಅಲ್ಲಿ ‘ಎಕ್ಕಡ ಸಾಮಿ’ ಕತೆ ಹೇಳಿಕೊಂಡು ಎಲ್ಲರೂ ನಗುತ್ತಿದ್ದಾರೆ.

ಇದನ್ನೂ ಓದಿ...ಕಾಂಚಾಣದ ಕರಾಮತ್ತು: ವರ್ಷದಲ್ಲಿ ಮಂಡ್ಯ ಜಿಲ್ಲೆಗೆ 350 ಗೌರವ ಡಾಕ್ಟರೇಟ್!

ಈ ಎಕ್ಕಡ ಸಾಮಿ ಕತೆ, ಗೌರವ ಡಾಕ್ಟರೇಟ್ ಪದವಿಗೆ ಮಾತ್ರ ಹೊಂದುವಂಥದ್ದಲ್ಲ. ನಮ್ಮ ಇಡೀ ವ್ಯವಸ್ಥೆಯೇ ಹೀಗಾಗಿದೆ. ನಮ್ಮನ್ನು ಆಳುವ ನಾಯಕರೂ ಇದನ್ನೇ ಮಾಡುತ್ತಿದ್ದಾರೆ. ನಮ್ಮದೇ ಹಣವನ್ನು ಲೂಟಿ ಮಾಡಿ ಅದನ್ನು ನಮಗೇ ಬಡಿಸುತ್ತಿದ್ದಾರೆ. ‘ಎಲ್ಲಾ ನಿಮ್ಮ ಎಕ್ಕಡ ಸಾಮಿ’ ಎಂದು ರಾಜಕಾರಣಿಗಳು ಪ್ರಜೆಗಳಿಗೆ ಹೇಳಿದರೆ ಅದನ್ನು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ನಾವಿದ್ದೇವೆ. ಯಾಕೆಂದರೆ ನಾವು ಈಗಾಗಲೇ ಊಟ ಮಾಡಿ ಆಗಿದೆ. ಈಗ ಚಪ್ಪಲಿ ಎಂದು ಕೇಳಕ್ಕಾಗಲ್ಲ. ಬರೀ ಕಾಲಲ್ಲೇ ಹೋಗಬೇಕು ಅಷ್ಟೆ.

ಗಣಿ ಉದ್ಯಮದಲ್ಲಿ ಸಾಕಷ್ಟು ಅಕ್ರಮಗಳನ್ನು ಮಾಡಿ ಕೋಟ್ಯಧಿಪತಿಯಾದ ಒಬ್ಬ ರಾಜಕಾರಣಿ ಲೋಕಸಭಾ ಚುನಾವಣೆಗೆ ನಿಂತಿದ್ದರು. ಅಲ್ಲಿನ ಮತದಾರರನ್ನು ‘ಈ ವ್ಯಕ್ತಿ ನಮ್ಮ ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡಿ ಹಣ ಮಾಡಿಕೊಂಡಿದ್ದಾನೆ. ಅವನನ್ನು ನೀವು ಆಯ್ಕೆ ಮಾಡುತ್ತೀರಾ’ ಎಂದು ಕೇಳಿದ್ದಕ್ಕೆ ಮತದಾರನೊಬ್ಬ ‘ಅವರೇನು ನಮ್ಮ ಮನೆಯ ಹಣವನ್ನು ಕದ್ದುಕೊಂಡು ಹೋಗಿಲ್ಲ. ಅವರು ಹೇಗೆ ಹಣ ಮಾಡಿದರು ಎನ್ನುವುದು ನಮಗೆ ಮುಖ್ಯ ಅಲ್ಲ. ಅವರು ನಮ್ಮ ಕಷ್ಟಕ್ಕೆ ನೆರವಾಗುತ್ತಾರೆ. ಮಗಳ ಮದುವೆಗೆ ಹಣ ಕೊಡುತ್ತಾರೆ. ನಮಗೆ ಏನಾದರೂ ತೊಂದರೆಯಾದರೆ ನಮ್ಮ ನೆರವಿಗೆ ಬರ್ತಾರೆ. ಅದಕ್ಕೇ ನಮ್ಮ ವೋಟು ಅವರಿಗೆ’ ಎಂದು ಉತ್ತರಿಸಿದರು. ನಮ್ಮದೇ ಹಣವನ್ನು ಅವರು ಲೂಟಿ ಮಾಡಿದ್ದಾರೆ ಎನ್ನುವುದನ್ನು ಅವರಿಗೆ ಅರಿವಾಗುವಂತೆ ಹೇಳುವುದು ಸಾಧ್ಯವೇ ಆಗಲಿಲ್ಲ. ಆ ಚುನಾವಣೆಯಲ್ಲಿ ಅವರು ಗೆದ್ದರು. ನಮ್ಮ ಮನೆಯ ಚಪ್ಪಲಿಗಳನ್ನು ಭಾರಿ ಬೆಲೆಗೆ ಮಾರಾಟ ಮಾಡಿ ನಮಗೆ ಮೃಷ್ಟಾನ್ನ ಬಡಿಸಿದರು ಎನ್ನುವ ಸತ್ಯ ಆ ಮತದಾರರ ಅರಿವಿಗೆ ಬರಲೇ ಇಲ್ಲ. ಸಾರ್ವಜನಿಕ ಆಸ್ತಿಯಾದರೆ ಯಾರಾದರೂ ನುಂಗಿ ನೀರು ಕುಡಿಯಲಿ ನಮಗೇನು ಎನ್ನುವ ಉದಾಸೀನ ಭಾವ ನಮ್ಮದು.

ಇನ್ನಷ್ಟು...ಮಂಡ್ಯ: ಮತ್ತೆ 153 ಮಂದಿಗೆ ‘ಗೌಡಾ’ ಪ್ರದಾನ

ಈ ಅರಿವು ಇಲ್ಲದೇ ಇರುವುದರಿಂದಲೇ ನಮ್ಮ ರಾಜ್ಯದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅರ್ಥ ಕಳೆದುಕೊಳ್ಳುವ ಸ್ಥಿತಿಗೆ ಬಂದಿದೆ. ಶಾಸಕರು ತಾವು ಆಯ್ಕೆಯಾದ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದರಲ್ಲಿ ಯಾವುದೇ ಅವಮಾನ ಇಲ್ಲ ಎಂದುಕೊಂಡಿದ್ದಾರೆ. ಅವರಿಗೆ ಒಂದೇ ಒಂದು ಧೈರ್ಯ ಎಂದರೆ, ತಾವು ಮತ್ತೆ ಮತದಾರರಿಗೆ ಊಟ ಉಣಿಸಿ ಗೆಲ್ಲುತ್ತೇವೆ ಎನ್ನುವುದು. ಅದಕ್ಕಾಗಿಯೇ ಈ ಶಾಸಕರನ್ನು ಅನರ್ಹ ಮಾಡಿದರೂ ಅವರು ಅಂಜುತ್ತಿಲ್ಲ. ತಮಗೆ ಬೇಕಾದ ಖಾತೆಯನ್ನು ಟವಲ್ ಹಾಕಿ ಕಾಯ್ದಿರಿಸಿಕೊಳ್ಳುವ ಮಟ್ಟಕ್ಕೆ ಅವರು ಬೆಳೆದಿದ್ದಾರೆ. ಹಾಗಂತ ಈಗ ಆರಿಸಿ ಬಂದ ಪಕ್ಷದಲ್ಲಿಯೇ ಇರುವ ಶಾಸಕರೂ ಬಹಳ ಸುಭಗರು ಎಂದೇನೂ ಅಲ್ಲ. ಅವರೂ ಇವರ ಹಾಗೆಯೇ ನಮ್ಮ ಮನೆಯ ಚಪ್ಪಲಿಯನ್ನು ಮಾರಾಟ ಮಾಡಿದವರೇ ಆಗಿದ್ದಾರೆ.

ಎಲ್ಲಿಯವರೆಗೆ ನಾವು ಈ ಚಪ್ಪಲಿ ಮಾರಾಟದ ಕತೆಯನ್ನು ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ವ್ಯವಸ್ಥೆ ಹಾಗೆಯೇ ಇರುತ್ತದೆ. ಅವರು ನಮ್ಮ ಚಪ್ಪಲಿಗಳನ್ನು ಮಾರಾಟ ಮಾಡಿ ನಮಗೆ ಒಂದು ದಿನ ಮೃಷ್ಟಾನ್ನ ಭೋಜನ ಕೊಡಿಸುತ್ತಿರುತ್ತಾರೆ. ನಮಗೆ ಒಂದು ದಿನ ಒಳ್ಳೆಯ ಊಟ ಸಿಗುತ್ತದೆ. ನಂತರ ವರ್ಷಪೂರ್ತಿ ಉಪವಾಸ ಇರಬೇಕಾಗುತ್ತದೆ.

ಇದನ್ನೂ ಓದಿ...‘ಗೌಡಾ’ಗಳಿಂದ ಪಾರ್ಟಿಗಳ ಕಿಕ್!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.