ಇದೊಂದು ಸುಂದರ ಕತೆ. ದೇವಾಲಯವೊಂದರ ಪ್ರಾಂಗಣದಲ್ಲಿ ಸಾಕಷ್ಟು ಮಂದಿ ಕುಳಿತುಕೊಂಡಿದ್ದರು. ಆಗ ಇಬ್ಬರು ಭಕ್ತರು ಬಂದರು. ಒಬ್ಬರು ಚಪ್ಪಲಿಯನ್ನು ದೇವಾಲಯದ ಹೊರಕ್ಕೆ ಜೋಡಿಸಿಟ್ಟು ಒಳಕ್ಕೆ ಹೋದರು. ಇನ್ನೊಬ್ಬರು ಅವಸರದಿಂದ ಚಪ್ಪಲಿಯನ್ನು ಕಳಚಿ ತಮ್ಮ ನಿಲುವಂಗಿಯ ಜೇಬಿನಲ್ಲಿ ಇಟ್ಟುಕೊಂಡು ದೇವಾಲಯದ ಒಳಕ್ಕೆ ಹೋದರು. ಇದನ್ನು ನೋಡಿ, ಪ್ರಾಂಗಣದಲ್ಲಿ ಕುಳಿತವರ ಚರ್ಚೆ ಆರಂಭವಾಯಿತು.

ಒಬ್ಬರು ಹೇಳಿದರು ‘ಮೊದಲನೆಯವನು ದೈವಭಕ್ತ. ಚಪ್ಪಲಿ ಹೊರಗಿಟ್ಟು ಬರಿಗಾಲಿನಲ್ಲಿ ಒಳಕ್ಕೆ ಹೋದ. ಆದರೆ ಎರಡನೆಯವನು ದೈವದ್ರೋಹಿ. ದೇವಾಲಯದ ಒಳಕ್ಕೆ ಯಾರಾದರೂ ಚಪ್ಪಲಿ ತೆಗೆದುಕೊಂಡು ಹೋಗುತ್ತಾರೆಯೇ’ ಎಂದು ಸಿಟ್ಟು ಹೊರಹಾಕಿದರು. ಅದಕ್ಕೆ ಇನ್ನೊಬ್ಬರು ‘ಅದರಲ್ಲಿ ತಪ್ಪೇನಿದೆ? ಅವನು ಕಾಲಿನಲ್ಲಿ ಚಪ್ಪಲಿ ಹಾಕಿಕೊಂಡು ಹೋಗಿಲ್ಲವಲ್ಲ. ಜೇಬಿನಲ್ಲಿ ಇಟ್ಟುಕೊಂಡು ಹೋಗಿದ್ದಾನೆ. ಚಪ್ಪಲಿ ಹೊರಗಿಟ್ಟು ದೇವರ ಮುಂದೆ ಧ್ಯಾನ ಮಾಡುವಾಗ, ಹೊರಗಿರುವ ಚಪ್ಪಲಿಯನ್ನು ಯಾರಾದರೂ ತೆಗೆದುಕೊಂಡು ಹೋದರೆ ಏನು ಎಂದು ಚಿಂತಿಸುವುದಕ್ಕಿಂತ ಜೇಬಿನಲ್ಲಿ ಭದ್ರವಾಗಿ ಇಟ್ಟುಕೊಂಡು ಹೋಗಿರುವುದೇ ಸರಿ’ ಎಂದು ವಾದಿಸಿದರು.

ವಾದ–ವಿವಾದ ಮುಂದುವರಿದಿರುವಾಗಲೇ ದೇವಾಲಯದ ಒಳಕ್ಕೆ ಹೋಗಿದ್ದ ಮೊದಲ ವ್ಯಕ್ತಿ ಹೊರ ಬಂದರು. ಜನ ಅವರನ್ನೇ ಪ್ರಶ್ನೆ ಮಾಡಿದರು. ಅದಕ್ಕೆ ಆತ ‘ಅನೇಕ ಜನರು ಚಪ್ಪಲಿಯನ್ನು ಹೊರಗೇ ಬಿಟ್ಟಿದ್ದರು. ಚಪ್ಪಲಿ ಕಳ್ಳರು ಇದ್ದೇ ಇರುತ್ತಾರೆ. ಆದರೆ ದೇವಾಲಯದಂತಹ ಪವಿತ್ರ ಸ್ಥಳದಲ್ಲಿ ಕಳವು ಮಾಡಬಾರದೆಂಬ ಸಂಯಮ ಕಳ್ಳನಲ್ಲಿ ಬರುತ್ತದೆ. ಹೀಗೆ ಒಬ್ಬ ಕಳ್ಳನಿಗಾದರೂ ಒಳ್ಳೆಯ ಮಾರ್ಗದಲ್ಲಿ ಸಾಗಲು ಅನುಕೂಲವಾಗಲಿ ಎಂದು ನಾನು ಚಪ್ಪಲಿಯನ್ನು ಹೊರಗೆ ಬಿಟ್ಟುಹೋದೆ’ ಎಂದರು. ಎಂತಹ ಉದಾತ್ತ ಚಿಂತನೆ ಎಂದು ಕೊಂಡಾಡಿದರು ಜನ.

ಆ ಹೊತ್ತಿಗೆ ಚಪ್ಪಲಿಯನ್ನು ಜೇಬಿನಲ್ಲಿ ಇಟ್ಟುಕೊಂಡು ಹೋದವರೂ ಹೊರಕ್ಕೆ ಬಂದರು. ಅವರಲ್ಲಿಯೂ ಜನ ಪ್ರಶ್ನೆ ಮಾಡಿದರು. ‘ನೋಡಿ ನಾನು ಚಪ್ಪಲಿ ಹೊರಕ್ಕೆ ಇಟ್ಟು ಹೋದರೆ ಯಾವುದೋ ಒಬ್ಬ ವ್ಯಕ್ತಿಗೆ ಚಪ್ಪಲಿಯ ಮೇಲೆ ಆಸೆಯಾಗಬಹುದು. ಆಗ ಅವನು ಅದನ್ನು ಕದಿಯಬಹುದು. ಕಳ್ಳತನ ಪಾಪವಲ್ಲವೇ? ಒಬ್ಬ ವ್ಯಕ್ತಿ ಪಾಪಿಯಾಗುವುದಕ್ಕೆ ನಾನೇ ಕಾರಣನಾಗುವುದಿಲ್ಲವೇ? ಅದಕ್ಕಾಗಿ ನಾನು ಚಪ್ಪಲಿಯನ್ನು ಒಳಕ್ಕೆ ತೆಗೆದುಕೊಂಡು ಹೋದೆ’ ಎಂದರು. ಜನ ಅವರ ಮಾತನ್ನೂ ಒಪ್ಪಿಕೊಂಡರು. ಅದನ್ನು ನೋಡಿದ ಹಿರಿಯರೊಬ್ಬರು ‘ಏನು ಜನಗಳಪ್ಪ ನೀವು. ದೇವಾಲಯದಲ್ಲಿ ಕುಳಿತು ದೇವರ ಧ್ಯಾನ ಮಾಡುವುದನ್ನು ಬಿಟ್ಟು ಚಪ್ಪಲಿ ಧ್ಯಾನ ಮಾಡುತ್ತಿದ್ದೀರಿ’ ಎಂದು ಪ್ರಶ್ನೆ ಮಾಡಿದರು.

ಈಗ ನಮ್ಮ ದೇಶದ ಜನರಲ್ಲಿಯೂ ಇದೇ ಪ್ರಶ್ನೆಯನ್ನು ಕೇಳಬೇಕಾಗಿದೆ. ನಾವು ಈಗ ಹೊಸ ಸಹಸ್ರಮಾನದ ಹೊಸ ಶತಮಾನದ ದ್ವಿದಶಕದ ಕೊನೆಯ ವರ್ಷದಲ್ಲಿ ಇದ್ದೇವೆ. ಆರ್ಥಿಕ ಹಿಂಜರಿತ ನಮ್ಮ ದೇಶವನ್ನು ಕಾಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಜನರು ಉದ್ಯೋಗ ಇಲ್ಲದೆ ಪರಿತಪಿಸುತ್ತಿದ್ದಾರೆ. ಜೀವನೋಪಾಯಕ್ಕೆ ತತ್ತರಿಸುವ ದಿನಗಳು ಇವು. ಆದರೆ ನಾವು ರಾಮ ಮಂದಿರ ಕಟ್ಟಬೇಕೋ ಬೇಡವೋ, ಪೌರತ್ವ ಕಾಯ್ದೆ ಜಾರಿಯಾಗಬೇಕೋ ಬೇಡವೋ, ಎನ್ಆರ್‌ಸಿ ಕತೆ ಏನು, ಎನ್‌ಪಿಆರ್ ಏನಾಗುತ್ತಿದೆ ಎಂದು ದೊಂಬಿ ಮಾಡುತ್ತಿದ್ದೇವೆ.

ಹಾಗಾದರೆ ಈ ವಿಷಯಗಳೆಲ್ಲಾ ಮುಖ್ಯವಲ್ಲವೇ ಎಂದು ಕೇಳಿದರೆ, ಇವು ಮುಖ್ಯ ಹೌದು. ಚರ್ಚೆ ಆಗಲೇಬೇಕು. ಆದರೆ ಆರ್ಥಿಕ ಹಿಂಜರಿತದಿಂದ ಜೀವನವೇ ಕಷ್ಟವಾಗಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತಜ್ಞ ಸಂಸ್ಥೆಗಳೆಲ್ಲಾ ನಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿವೆ. ನಾವು ಭಾರತೀಯರು ಭಾವಜೀವಿಗಳು. ಅದಕ್ಕೇ ನಮಗೆ ಪೌರತ್ವದ ಪ್ರಶ್ನೆ ಕಾಡಿದ ಹಾಗೆ ಆರ್ಥಿಕ ಹಿಂಜರಿತ ಕಾಡುವುದೇ ಇಲ್ಲ. ಎನ್‌ಆರ್‌ಸಿ ಮತ್ತು ಪೌರತ್ವ ಕಾಯ್ದೆಯನ್ನು ವಿರೋಧಿಸಿ ಲಕ್ಷ ಲಕ್ಷ ಜನರು ಬೀದಿಗೆ ಇಳಿದು ಹೋರಾಟ ಮಾಡಿದ ಹಾಗೆ ನಾವು ಆರ್ಥಿಕ ಹಿಂಜರಿತದ ವಿರುದ್ಧ, ಆರ್ಥಿಕ ಪುನಶ್ಚೇತನಕ್ಕೆ ಒತ್ತಾಯಿಸಿ ಬೀದಿಗೆ ಇಳಿಯುವುದೇ ಇಲ್ಲ. ನಿರುದ್ಯೋಗ ಸಮಸ್ಯೆ ಬಗೆಹರಿಸಲು ಯಾರಾದರೂ ಹೋರಾಟಕ್ಕೆ ಮುಂದಾದರೆ ಅದಕ್ಕೆ ಸಾಕಷ್ಟು ಬೆಂಬಲ ಕೊಡುವುದೇ ಇಲ್ಲ.

ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ದೇಶದ ಯುವ ಸಮೂಹ ದೊಡ್ಡ ಪ್ರಮಾಣದಲ್ಲಿ ಹೋರಾಟ ನಡೆಸುತ್ತಿದೆ. ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ವಿರೋಧಿಸುವ ಕಾಲಕ್ಕೆ ಇಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಾಗ ಯುವಕರಲ್ಲಿ ಇಂತಹ ಸಂಚಲನ ಉಂಟಾಗಿತ್ತು. ಅದನ್ನು ಬಿಟ್ಟರೆ ದೇಶದಾದ್ಯಂತ ಇಷ್ಟು ದೊಡ್ಡ ಪ್ರಮಾಣದಲ್ಲಿ ಯುವಶಕ್ತಿ ಹೋರಾಟಕ್ಕೆ ಮುಂದಾಗಿದ್ದು ಈಗಲೇ. ಇದು ಬರೀ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಹೋರಾಟ ಎಂದು ಅನ್ನಿಸುವುದಿಲ್ಲ. ತಮ್ಮ ಭವಿಷ್ಯ ಮಸುಕಾಗುತ್ತಿದೆ ಎಂಬ ಭಯ ಕಾಡಿದ್ದರಿಂದಲೇ ಯುವಜನರು ಬೀದಿಗೆ ಬಂದ ಹಾಗಿದೆ.

ದೇಶದಲ್ಲಿ ಈಗ ಸಿಎಎ ಮತ್ತು ಎನ್‌ಆರ್‌ಸಿ ಪರ ಮತ್ತು ವಿರೋಧದ ಅಲೆಗಳು ಎದ್ದಿವೆ. ಇಡೀ ದೇಶ ಒಂದು ರೀತಿಯ ಪ್ರಕ್ಷುಬ್ಧ ಸ್ಥಿತಿಯಲ್ಲಿ ಇದೆ. ಇದು ಆಕಸ್ಮಿಕ ಅಲ್ಲ. ದಿಢೀರ್ ಪ್ರತಿಕ್ರಿಯೆ ಕೂಡ ಅಲ್ಲ. ನಮ್ಮ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ಇದನ್ನು ಮನಗಾಣಬೇಕು. ಅವರ ಹಿಂಬಾಲಕರು ಈಗಲೂ ಚಪ್ಪಲಿ ಪುರಾಣ ಚರ್ಚೆ ಮಾಡುವುದನ್ನು ತಡೆಯಬೇಕು. ಎನ್‌ಆರ್‌ಸಿ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಗಟ್ಟಿಯಾಗಿ ಮಾತನಾಡುವ ನಮ್ಮ ನಾಯಕರು ಆರ್ಥಿಕ ಹಿಂಜರಿತದ ಬಗ್ಗೆ, ನಿರುದ್ಯೋಗ ಸಮಸ್ಯೆ ಪರಿಹಾರದ ಬಗ್ಗೆ ಅಥವಾ ಬೆಲೆ ಏರಿಕೆ ತಡೆಯ ಬಗ್ಗೆ ಮಾತ್ರ ಯಾಕೆ ಇಷ್ಟೊಂದು ಗಟ್ಟಿಯಾಗಿ ಮಾತನಾಡುತ್ತಿಲ್ಲ? ಆ ಬಗ್ಗೆಯೂ ಮಾತನಾಡಬೇಕು. ಭರವಸೆ ಮೂಡಿಸಬೇಕು.

ಡಿವಿಜಿ ಹೇಳುತ್ತಾರೆ. ‘ಸರಕಾರ ಹರಿಗೋಲು, ತೆರೆಸುಳಿಗಳತ್ತಿತ್ತ, ಸುರೆಕುಡಿದ ಕೆಲವರು ಹುಟ್ಟು ಹಾಕುವರು. ಬಿರುಗಾಳಿ ಬೀಸುವುದು, ಜನವೆದ್ದು ಕುಣಿಯುವುದು, ಉರುಳದಿಹುದಚ್ಚರಿಯೋ ಮಂಕು ತಿಮ್ಮ’ ಎಂದು. ಸರ್ಕಾರ ಎನ್ನುವುದು ಹಡಗಲ್ಲ. ನಾವೆಯೂ ಅಲ್ಲ. ಅದೊಂದು ಹರಿಗೋಲು. ಅದನ್ನು ನಡೆಸುವವರು ಮದ್ಯ ಕುಡಿದಿದ್ದಾರೆ. ನದಿಯಲ್ಲಿ ತೆರೆ ಸುಳಿಗಳಿವೆ. ಜನ ಗಾಬರಿಯಿಂದ ಎದ್ದೆದ್ದು ಕುಣಿಯುತ್ತಿದ್ದಾರೆ. ಆದರೂ ಸರ್ಕಾರ ಮುಳುಗದೆ ಉಳಿದಿರುವುದೇ ಆಶ್ಚರ್ಯ ಎನ್ನುತ್ತಾರೆ. ಇಂದಿನ ಪರಿಸ್ಥಿತಿಯನ್ನು ನೋಡಿದರೆ ಇದು ನಿಜ ಎನ್ನಿಸುತ್ತದೆ.

ನಿನ್ನೆಯಷ್ಟೆ ಸೂರ್ಯ ಗ್ರಹಣವಾಗಿದೆ. ಆಗ ವಾಟ್ಸ್ ಆ್ಯಪ್‌ನಲ್ಲಿ ಒಂದು ಜೋಕ್ ಹರಿದಾಡುತ್ತಿತ್ತು. ಗ್ರಹಣದಲ್ಲಿ ಎಷ್ಟು ವಿಧ ಎಂದು ಕೇಳಿದರೆ ಮೂರು ವಿಧ. ಒಂದು ಸೂರ್ಯ ಗ್ರಹಣ, ಇನ್ನೊಂದು ಚಂದ್ರ ಗ್ರಹಣ. ಮತ್ತೊಂದು ಪಾಣಿ ಗ್ರಹಣ. ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣಕ್ಕೆ ಬಿಡುಗಡೆ ಇದೆ. ಆದರೆ ಪಾಣಿ ಗ್ರಹಣಕ್ಕೆ ಬಿಡುಗಡೆ ಇಲ್ಲ ಎಂದು ಈ ಜೋಕ್ ಹೇಳುತ್ತದೆ. ಹೌದು ಗಂಡು ಹೆಣ್ಣಿನೊಂದಿಗೆ, ಹೆಣ್ಣು ಗಂಡಿನೊಂದಿಗೆ ಮಾತ್ರ ಪಾಣಿಗ್ರಹಣ ಮಾಡಿಕೊಂಡಿಲ್ಲ. ನಾವು ರಾಜಕೀಯ ಪಕ್ಷದ ಜೊತೆಗೆ, ನಾಯಕತ್ವದ ಜೊತೆಗೆ, ಸಿದ್ಧಾಂತದ ಜೊತೆಗೆ ಪಾಣಿಗ್ರಹಣ ಮಾಡಿಕೊಂಡಿದ್ದೇವೆ. ನಿಸರ್ಗ ಸಹಜ ಗ್ರಹಣಕ್ಕೆ ಮೋಕ್ಷ ಕಾಲ ಇದೆ. ಮಾನವ ನಿರ್ಮಿತ ಗ್ರಹಣಕ್ಕೆ ಮೋಕ್ಷ ಸುಲಭಕ್ಕೆ ಇಲ್ಲ. ಈಗ ನಮ್ಮ ದೇಶಕ್ಕೆ ಬಂದಿರುವುದು ಮಾನವ ನಿರ್ಮಿತ ಗ್ರಹಣ. ಕಷ್ಟಪಟ್ಟು ನಾವೇ ಬಿಡಿಸಿಕೊಳ್ಳಬೇಕು. ಹಾಗೇ ಬಿಟ್ಟರೆ ಗ್ರಹಣವು ಗ್ರಹಚಾರವಾದೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.