ಪತ್ರಿಕೋದ್ಯಮ ಮತ್ತು ಜನತಂತ್ರದ ನಡುವೆ ಕರುಳುಬಳ್ಳಿಯ ಸಂಬಂಧವಿದೆ.ಈ ಕಾರಣದಿಂದಲೇ ಒಂದು ರೋಗಗ್ರಸ್ತ ಆದರೆ ಇನ್ನೊಂದು ಕೂಡ ನರಳುತ್ತದೆ.ಫೇಕ್ ನ್ಯೂಸ್ ಎಂಬ ಗಂಡಾಂತರ ಕೊಳಕುಮಂಡಲ ಹಾವಿನ ವಿಷದಂತೆ ಸಮಾಜ ಶರೀರವನ್ನು ಸೇರತೊಡಗಿದೆ.

ಸಂವಹನ ತಂತ್ರಜ್ಞಾನದ ವಿಕಾಸದ ಬೆಳೆಯ ಜೊತೆಗೆ ಬಂದ ವಿಷಪೂರಿತ ಕಳೆಯಿದು. ಆದರೆ ಕಳೆಯೇ ಬೆಳೆಯಾಗತೊಡಗಿರುವ ದೊಡ್ಡ ಅಪಾಯವನ್ನು ನಾವು ಎದುರಿಸುತ್ತಿದ್ದೇವೆ.

ಅಂತರ್ಜಾಲದ ಬಳಕೆ ಹೆಚ್ಚುತ್ತಿದ್ದಂತೆ ಫೇಕ್ ನ್ಯೂಸ್ ಕೂಡ ಹೆಚ್ಚಿದೆ. ಅಸಲಿ ಸುದ್ದಿಗೆ ಎರಡೇ ಕಾಲು, ಆದರೆ ನಕಲಿ ಸುದ್ದಿಗೆ ಸಹಸ್ರ ಪಾದಗಳು. ನಕಲಿ ವ್ಯಕ್ತಿಗಳು, ನಕಲಿ ಅಕೌಂಟುಗಳು ಭಾರಿ ಸಂಖ್ಯೆಯಲ್ಲಿ ತಲೆ ಎತ್ತಿವೆ. ಅಂತರ್ಜಾಲ ಸಾಮಾಜಿಕ ತಾಣಗಳಲ್ಲಿ ಜನ ಸುದ್ದಿಓದುತ್ತಾರೆ. ಶೇ 62ರಷ್ಟು ಅಮೆರಿಕನ್ನರು ಸುದ್ದಿ ಓದಲು ಸಾಮಾಜಿಕ ಜಾಲತಾಣಗಳನ್ನು ಅವಲಂಬಿಸುತ್ತಾರಂತೆ. ಫೇಸ್ಬುಕ್ ಸುದ್ದಿ ತಾಣ ಅಲ್ಲದಿದ್ದರೂ,ಸುದ್ದಿ ಓದಲು ಫೇಸ್ಬುಕ್ ನ್ಯೂಸ್ ಫೀಡನ್ನು ಅವಲಂಬಿಸುತ್ತಾರೆ. ಶೇ 66ಷ್ಟು ಫೇಸ್ಬುಕ್ ಬಳಕೆದಾರರ ಸುದ್ದಿ ಮೂಲ ಫೇಸ್ಬುಕ್ಕೇ. ‘ಈ ಸುದ್ದೀನ ಅಂತರ್ಜಾಲದಲ್ಲಿ ಓದಿದೆ’ ಎನ್ನುವುದು ಸರ್ವೇಸಾಮಾನ್ಯ.ದೇಶದೊಳಗಿನ ರಾಜಕೀಯ ಸಮರಗಳಲ್ಲಿ ಖೋಟಾ ಸುದ್ದಿಯನ್ನು ಯಾರು ಬೇಕಾದರೂ ಅಸ್ತ್ರದಂತೆ ಬಳಸಬಹುದಾಗಿದೆ.

ಉತ್ಪ್ರೇಕ್ಷೆ ಅಥವಾ ಕಪೋಲಕಲ್ಪಿತ. ಇತಿಹಾಸದ ಸತ್ಯಾಂಶಗಳನ್ನೇ ತಿರುಚುವ ಫೇಕ್ ನ್ಯೂಸ್ಗಳು ಚುನಾವಣೆಗಳ ಮೇಲೆ ಪ್ರಭಾವ ಬೀರತೊಡಗಿವೆ ಎನ್ನುತ್ತಾರೆ ಫೇಕ್ ನ್ಯೂಸ್ ಬಯಲು ಮಾಡುವ ಆಲ್ಟ್ ನ್ಯೂಸ್ ಮುಖ್ಯಸ್ಥ ಪ್ರತೀಕ್ ಸಿನ್ಹಾ.

ರಾಜಕೀಯ ಪಕ್ಷವೊಂದು ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಪಿ.ಆರ್. ಕಂಪನಿಗಳನ್ನು ನೇಮಕ ಮಾಡಿಕೊಂಡು ಹುಸಿ ಪ್ರಚಾರ ಮತ್ತು ಅಪಪ್ರಚಾರ ನಡೆಸುತ್ತದೆ. ಪ್ರಧಾನಿಯವರನ್ನು ಟೀಕಿಸುವ ವ್ಯಕ್ತಿಗಳನ್ನು ವಾಚಾಮಗೋಚರ ಬೈದು, ಪ್ರಾಣ ಬೆದರಿಕೆ ಹಾಕುವ ಹಾಗೂ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಅಂತರ್ಜಾಲಿಗರನ್ನು ಸಾಮಾಜಿಕ ತಾಣಗಳಲ್ಲಿ ಖುದ್ದು ಪ್ರಧಾನಿ‘ಫಾಲೋ’ಮಾಡುತ್ತಾರೆಂದರೆ ಇವರ ಮೇಲೆ ಕ್ರಮ ಜರುಗಿಸುವ ಧೈರ್ಯ ಯಾರಿಗಿದ್ದೀತು?

ದೇಶದಲ್ಲಿ ನಕಲಿ ಸುದ್ದಿ ಓದುಗರ ಸಂಖ್ಯೆ ಅಸಲಿ ಸುದ್ದಿಯನ್ನು ಓದುವವರಿಗಿಂತ ಎಷ್ಟೋ ಪಟ್ಟು ದೊಡ್ಡದು. ನಕಲಿ ಅಂತರ್ಜಾಲ ತಾಣಗಳು ದೊಡ್ಡ ಸಂಖ್ಯೆಯಲ್ಲಿ ಹುಟ್ಟಿ ಬೆಳೆಯುತ್ತಿವೆ. ಕೋಮು ಧ್ರುವೀಕರಣದ ಅಂತರವನ್ನು ಹಿಗ್ಗಿ
ಸುವ ವದಂತಿಗಳು ಮತ್ತು ಊಹಾಪೋಹಗಳನ್ನು ಬೆಚ್ಚಿ ಬೀಳಿಸುವಷ್ಟು ಯಶಸ್ವಿಯಾಗಿ ಹಬ್ಬಿಸುತ್ತಿವೆ. ಮುಖ್ಯಧಾರೆಯ ಬಹುತೇಕ ಮಾಧ್ಯಮಗಳು ಈ ಪಿಡುಗನ್ನು ನಿಯಂತ್ರಿಸುವ ಬದಲು ಅವುಗಳಿಗೆ ಇನ್ನಷ್ಟು ನೀರು ಗೊಬ್ಬರ ಎರೆಯತೊಡಗಿವೆ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ 30 ಕೋಟಿಗೂ ಹೆಚ್ಚು ಮಂದಿ ವಾಟ್ಸ್ಆ್ಯಪ್ ಬಳಸುತ್ತಿದ್ದಾರೆ.ಇವರ ಪೈಕಿ ಸತ್ಯಸುದ್ದಿ ಮತ್ತು ಗಾಳಿಸುದ್ದಿಯ ನಡುವಣ ಅಂತರವನ್ನು ಅರಿಯದವರ ಸಂಖ್ಯೆಯೇ ಹೆಚ್ಚು.

ಪ್ರಶ್ನಿಸುವ ಬದಲು, ಸಂದೇಹಪಡುವ ಬದಲು, ಕಣ್ಣುಮುಚ್ಚಿ ನಂಬುವ ಶ್ರದ್ಧೆಯನ್ನು ಬೆಳೆಸುವುದು ಫೇಕ್ ನ್ಯೂಸ್ನ ಗುರಿ. ಫೇಕ್ ನ್ಯೂಸ್ನ ಬುನಿಯಾದಿ ಕೆಲಸ ತರ್ಕದ ಬದಲು ಕುರುಡು ಶ್ರದ್ಧೆ ಬೆಳೆಸುವುದು. ನಿಜ ಸಮಸ್ಯೆಗಳಾದ ನಿರುದ್ಯೋಗ, ರೈತಾಪಿ ಬಿಕ್ಕಟ್ಟು- ಆತ್ಮಹತ್ಯೆಗಳು, ಶಿಕ್ಷಣ ವ್ಯವಸ್ಥೆಯ ಕುಸಿತ ಮುಂತಾದವನ್ನು ಬದಿಗೆ ಸರಿಸಿ ಅವುಗಳ ಚರ್ಚೆಯ ಆವರಣವನ್ನು ತಾನು ಕಬಳಿಸಿ, ಅವುಗಳಿಗೆ ಆವರಣವನ್ನೇ ಉಳಿಸದಂತೆ ದಟ್ಟವಾಗಿ ಕವಿದು ಬಿಡುವುದೇ ಫೇಕ್ ನ್ಯೂಸ್.ಒಂದು ರೀತಿಯಲ್ಲಿ ಮೆದುಳಿನ ಹತ್ಯೆ, ಆಲೋಚನೆಯ ಹತ್ಯೆಯೇ ಅದರ ಗುರಿ.

ನಾವು ಶ್ರೇಷ್ಠ, ಅವರು ಕನಿಷ್ಠ ಎನ್ನುವ ಎರಡೇ ದೃಷ್ಟಿಫೇಕ್ ನ್ಯೂಸ್ನಲ್ಲಿರುತ್ತದೆ. ಜನರ ಆಲೋಚನಾ ಶಕ್ತಿಯನ್ನುಕುಂದಿಸುವುದು, ಜನರ ಆಲೋಚನೆಯನ್ನು ನಿಯಂತ್ರಿಸುವುದು ಇಲ್ಲವೇ ಅದನ್ನು ಬಂದ್ ಮಾಡಿಸುವುದು ಮತ್ತು ಜನಸಮೂಹಗಳ ಆಲೋಚನಾ ಶಕ್ತಿಗೆ ಜೋಮು ಹಿಡಿಸುವುದು ಫೇಕ್ ನ್ಯೂಸ್ನ ಅಸಲಿ ಉದ್ದೇಶ. ಮಾಹಿತಿಯನ್ನು ತಣ್ಣನೆಯ ತರ್ಕ ಮತ್ತು ವಾಸ್ತವಾಂಶಗಳ ಆಧಾರದ ಬದಲು ಭಾವಾವೇಶದಿಂದ ಸ್ವೀಕರಿಸುವಂತೆ ಮಾಡುವುದೇ ಈ ಷಡ್ಯಂತ್ರದ ಉದ್ದೇಶ.

ಕಾಗೆ ಕಿವಿ ಕಚ್ಚಿಕೊಂಡು ಹೋಯಿತು (ಕವ್ವಾ ಕಾನ್ ಲೇಕೆ ಉಡ ಗಯಾ) ಎಂಬ ಮಿಥ್ಯೆಯೊಂದು ಉತ್ತರ ಭಾರತದಲ್ಲಿ ಈಗಲೂ ಪ್ರಚಲಿತ. ಕಿವಿ ಕಚ್ಚಿಕೊಂಡು ಹೋಯಿತೇಎಂದು ತಡವಿ ನೋಡಿಕೊಳ್ಳುವುದನ್ನೂ ಮರೆತು, ಕಾಗೆಯನ್ನು ಕೊಲ್ಲುವ ರೋಷಾವೇಶದಿಂದ ತಾಸುಗಟ್ಟಲೆ ಅದರ ಬೆನ್ನು ಬೀಳುವ ಹೆಡ್ಡತನದ ಖೆಡ್ಡಾಕ್ಕೆ ಜನರನ್ನು ಕೆಡವಲಾಗುತ್ತಿದೆ. ತಾಸುಗಟ್ಟಲೆ ಕಾಗೆಯ ಹಿಂದೆ ಓಡಿ ಒಮ್ಮೆ ದಣಿದು, ನೋಡಿಕೊಂಡರೆ ಕಿವಿ ಇದ್ದಲ್ಲೇ ಇದೆ! ಇಂತಹ ಸುಳ್ಳು ಕಾಗೆಗಳನ್ನು ಸೃಷ್ಟಿಸುವ ಕಾರ್ಖಾನೆಗಳನ್ನು ದೇಶದ ಉದ್ದಗಲಕ್ಕೆ ಹುಟ್ಟಿ ಹಾಕಲಾಗುತ್ತಿದೆ.

ಒಂದು ದೇಶದ ವಿರುದ್ಧ ನಡೆಯುವ ಇಂತಹ ‘ಪ್ರಾಪಗ್ಯಾಂಡ’ ದೇಸೀ ರೂಪ ತಳೆಯುತ್ತದೆ. ಒಂದು ರಾಜಕೀಯ ಪಕ್ಷದ ವಿರುದ್ಧ ಮತ್ತೊಂದು ರಾಜಕೀಯ ಪಕ್ಷವನ್ನು, ಅದೇ ಸಮಾಜದ ಒಬ್ಬ ನಾಗರಿಕನ ವಿರುದ್ಧ ಮತ್ತೊಬ್ಬ ನಾಗರಿಕನನ್ನು ಎತ್ತಿ ಕಟ್ಟುತ್ತದೆ. ಕಡೆಗೆ ಹೊಸ್ತಿಲು ದಾಟಿ ಮನೆ ಮನೆಗಳನ್ನು ಹೊಕ್ಕು ಕುಟುಂಬವನ್ನೇ ಒಡೆಯುತ್ತದೆ. ಕುಟುಂಬದ ಸದಸ್ಯರು ಪರಸ್ಪರ ಹಗೆಗಳಂತೆ ನಿಲ್ಲುತ್ತಾರೆ.ಗಾಂಧಿ, ನೆಹರೂ ಅವರನ್ನು ಆಡಬಾರದ ಮಾತುಗಳಿಂದ, ಮಾಡಬಾರದ ಕಲ್ಪಿತ ಚಿತ್ರಗಳಲ್ಲಿ ಬಂಧಿಸಿ ಕೊಳಕಾಗಿ ಚಿತ್ರಿಸುವ ಫೋಟೊಶಾಪ್ ಮಾಡಲಾಗುತ್ತದೆ. ಅವರ ಕುರಿತು ಜನಮಾನಸದಲ್ಲಿನ ಭಾವ ಶಿಲ್ಪವನ್ನು ಕೆಡವುವುದು ಫೇಕ್ ನ್ಯೂಸ್ ಉದ್ದೇಶ. ನೆಹರೂ ವಿಲಾಸಿ ವ್ಯಕ್ತಿಯೆಂದು ಸುಳ್ಳಾಗಿ ಚಿತ್ರಿಸಿರುವ ನೆಹರೂ ಕುರಿತ ವಿಡಿಯೊ
ವೊಂದನ್ನು 40 ಲಕ್ಷ ಜನ ನೋಡಿದ್ದಾರೆ. ಫೋಟೊಶಾಪ್ ಮಾಡಲಾದ ಫೇಕ್ ಚಿತ್ರಗಳನ್ನು ಮುಖ್ಯಧಾರೆಯ ಇಂಗ್ಲಿಷ್, ಹಿಂದಿ ಚಾನೆಲ್ಗಳು ಪರಿಶೀಲಿಸದೆ ಕಣ್ಣು ಮುಚ್ಚಿ ಬಳಸುತ್ತವೆ. ಇದರ ಲಾಭ ಪಡೆಯುವ ಶಕ್ತಿಗಳು ಯಾವುವು ಎಂಬ ಪ್ರಶ್ನೆಯನ್ನು ಯಾರೂ ಕೇಳುವುದಿಲ್ಲ. ಇಂತಹ ಸುಳ್ಳು ಸುದ್ದಿಗಳು ರಾಜಕೀಯ ಪಕ್ಷಗಳ ವಾರ್ ರೂಮ್ಗಳು, ಪಬ್ಲಿಕ್ ರಿಲೇಷನ್ ಕಂಪನಿಗಳಿಂದ ಬರುತ್ತವೆ. ಸುಳ್ಳು ಸುದ್ದಿಗಳು ಹೋಗುತ್ತಲೂ ಕೊಯ್ಯುವ ಮತ್ತು ಬರುತ್ತಲೂ ಕೊಯ್ಯುವ ಗರಗಸದಂತೆ. ಒಂದನೆಯದಾಗಿ ಇನ್ನಿಲ್ಲದ ಹಾನಿಯನ್ನು ಉಂಟು ಮಾಡುತ್ತವೆ. ಇದಕ್ಕಿಂತ ಹೆಚ್ಚಾಗಿ ಸರಿಯಾದ ಸುದ್ದಿಯ ಪಾಲಿನ‘ಆಮ್ಲಜನಕ’ವನ್ನು ಮುಗಿಸಿಬಿಡುತ್ತವೆ ಎನ್ನುತ್ತಾರೆ ಮೀಡಿಯಾ ತಜ್ಞರು.

ನಿತ್ಯ ಓದುಗರ ಕೈ ಸೇರುವ ಪತ್ರಿಕೆಯೊಂದರ ಉತ್ಪಾದನಾ ವೆಚ್ಚ ಹೆಚ್ಚು ಕಡಿಮೆ 30 ರೂಪಾಯಿ. ಓದುಗರು ತೆರುವ ದರ ಹೆಚ್ಚೆಂದರೆ ನಾಲ್ಕೈದು ರೂಪಾಯಿ ಎಂದು ಇಟ್ಟುಕೊಳ್ಳೋಣ. ಸಮಾಜದ ಆರೋಗ್ಯ ಕಾಪಾಡಬೇಕು ಎಂಬ ದೊಡ್ಡ ಹೊಣೆಗಾರಿಕೆಯನ್ನು ಹೊರಿಸುವ ಪತ್ರಿಕೆಯ ಬೆಲೆ ಒಂದು ಲೋಟ ಚಹಾದಷ್ಟೂ ಇಲ್ಲ ಎಂಬುದು ನಗ್ನ ವಾಸ್ತವ. ಕೇವಲ ಓದುಗರು ನೀಡುವ ಚಂದಾ ಹಣದಿಂದ ಪತ್ರಿಕೆ ನಡೆಸುವುದು ಸಾಧ್ಯವಿಲ್ಲ. ಹಾಗೆಯೇ ಚಾನೆಲ್ಲುಗಳು ಕೂಡ. ಉತ್ಪಾದನಾ ವೆಚ್ಚ ಮತ್ತು ಓದುಗರು ತೆರುವ ದರದ ನಡುವಣ ಸುಮಾರು 25 ರೂಪಾಯಿಯ ಅಂತರವನ್ನು ತುಂಬುವವರು ಜಾಹೀರಾತುದಾರರು. ಪತ್ರಿಕೆಗಳು ಮತ್ತು ಚಾನೆಲ್ಲುಗಳು ಜಾಹೀರಾತುದಾರರಿಂದ ಹಣ ಪಡೆದು ಜಾಹೀರಾತುದಾರರ ಉತ್ಪನ್ನಗಳ ಖರೀದಿಗೆ ತಮ್ಮ ಓದುಗರ ಕಣ್ಣಾಲಿಗಳನ್ನು ನೀಡುತ್ತವೆ. ಈ ಕ್ರಿಯೆ ಕೇವಲ ಸಮೂಹ ಮಾಧ್ಯಮ ಸಂಸ್ಥೆಗಳು ತಮ್ಮ ಉತ್ಪನ್ನವನ್ನು ಓದುಗರಿಗೆ ತಲುಪಿಸುವುದು ಮಾತ್ರವೇ ಅಲ್ಲ. ಅದಕ್ಕಿಂತ ಹೆಚ್ಚಾಗಿ ಜಾಹೀರಾತುದಾರರಿಗೆ ಸಮೂಹ ಮಾಧ್ಯಮ ಸಂಸ್ಥೆಗಳು ಕೂಡ ಉತ್ಪನ್ನವೊಂದನ್ನು ಮಾರಾಟ ಮಾಡುತ್ತವೆ.

ಆ ಉತ್ಪನ್ನವೇ ಓದುಗರು. ಸರ್ಕಾರಗಳು, ಭಾರಿ ಸಂಸ್ಥೆಗಳು ಹಾಗೂ ಕಾರ್ಪೊರೇಟು ಸಂಸ್ಥೆಗಳು ಅಕ್ಷರಶಃ ತಮಗೆ ಬೇಕಾದ ವಿಷಯ ಕುರಿತು ಜನರ ಸಮ್ಮತಿಯನ್ನು ಉತ್ಪಾದಿಸುತ್ತವೆ. ಈ ಕ್ರಿಯೆ ಯಶಸ್ವಿಯಾಗಿ ನಡೆಯಬೇಕಿದ್ದರೆ ಜನರ ಎದುರು ಇರಿಸಲು ಒಬ್ಬ ಕಾಲ್ಪನಿಕ ಶತ್ರು ಬೇಕು. ಕಮ್ಯುನಿಸಂ, ಭಯೋತ್ಪಾದಕರು, ವಲಸೆಗಾರರೇ ಇಂತಹ ಕಾಲ್ಪನಿಕ ಸಮಾನ ಶತ್ರುಗಳು. ಈ ಕಾಲ್ಪನಿಕ ಶತ್ರುಗಳನ್ನು ಮುಂದಿರಿಸಿ ಜನರನ್ನು ಒಗ್ಗೂಡಿಸಲಾಗುತ್ತದೆ. ಹೀಗೆ ಸರ್ಕಾರದ ಮೇಲೆ ಹಿಡಿತ ಸಾಧಿಸುವ ಪ್ರಬಲ ಖಾಸಗಿ ಹಿತಾಸಕ್ತಿಗಳ ಪರವಾಗಿ ಜನಸಮೂಹಗಳ ಸಮ್ಮತಿಯನ್ನು ಉತ್ಪಾದಿಸುವಕ್ರಿಯೆ ಜನರ ಅರಿವಿಗೇ ಬಾರದಂತೆ ಸದಾ ನಡೆಯುತ್ತಿರುತ್ತದೆ. ಕಡೆಗೆ ತಾವು ಸಮ್ಮತಿ ಕೊಟ್ಟಿದ್ದೇವೆಂಬ ಸಂಗತಿ ಜನಸಮೂಹಗಳಿಗೇಗೊತ್ತಿರುವುದಿಲ್ಲ ಎಂದು ಜಗತ್ತಿನ ಅತ್ಯಂತ ಶ್ರೇಷ್ಠ ಚಿಂತಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿರುವ ನೋಮ್ ಚೋಮ್ಸ್ ಕೀ ಹೇಳಿದ್ದಾರೆ.

ಸಮೂಹ ಮಾಧ್ಯಮಗಳನ್ನು ಜನತಂತ್ರದ ಕಾಯುವ ನಾಯಿ ಎನ್ನಲಾಗುತ್ತದೆ. ಅದರೆ ಬಹುತೇಕ ಕಾಯುವ ನಾಯಿಗಳು ಆಳುವ ಪಕ್ಷದ ಮಡಿಲಲ್ಲಿ ಆಡುವ ಮುದ್ದಿನ ನಾಯಿಗಳಾಗಿವೆ. ಜನತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ಎಂದು ಬಣ್ಣಿಸಲಾಗಿರುವ ಪತ್ರಿಕೆಗಳು, ಚಾನೆಲ್ಗಳು ಸರ್ಕಾರದ ಹೆಜ್ಜೆಗಳನ್ನು ಕಣ್ಣಿಟ್ಟು ಕಾಯಬೇಕು. ರಚನಾತ್ಮಕ ಪ್ರತಿಪಕ್ಷದಂತೆ ಕೆಲಸ ಮಾಡಬೇಕು. ಆದರೆ ಪರಿಸ್ಥಿತಿ ವಿಕಟವಾಗಿ ತಿರುಗಿದೆ. ಬಹುತೇಕ ಸಮೂಹ ಮಾಧ್ಯಮ ಸಂಸ್ಥೆಗಳು ತಮ್ಮ ಕರ್ತವ್ಯ ಮರೆತಿವೆ. ಆಳುವವರ ಜೊತೆ ಶಾಮೀಲಾಗತೊಡಗಿವೆ.

ಸರ್ಕಾರವನ್ನು ಪ್ರಶ್ನಿಸುವ ಮತ್ತು ಕಿರಿಕಿರಿ ಉಂಟು ಮಾಡುವ ವ್ಯಕ್ತಿಗಳು, ಸಂಸ್ಥೆಗಳನ್ನು ಕಾಯಬೇಕಾದ ಕಾವಲು ನಾಯಿಗಳು ತಿರುಗಿ ಬೊಗಳುವ ಮತ್ತು ಕಚ್ಚತೊಡಗಿರುವ ವಿಕೃತಿ ಮೆರೆದಿವೆ.ದಿನ ಬೆಳಗಾದರೆ ಪ್ರತಿ
ಪಕ್ಷಗಳ ಬೇಟೆ ಆಡತೊಡಗಿರುವುದು ಪರಮ ವಿಕಾರ ಅಥವಾ ವಿಕೃತಿಯ ಸ್ಥಿತಿಯಲ್ಲದೆ ಇನ್ನೇನು?ಅಧಿಕಾರ ದಂಡ ಹಿಡಿದಿರುವ ಬಾಹುಬಲಿಗಳನ್ನು ಉದ್ದಂಡ ದೋರ್ದಂಡರನ್ನು ಅಸಹಾಯಕರಂತೆಯೂ, ಪ್ರತಿಪಕ್ಷಗಳ ಷಡ್ಯಂತ್ರಗಳ ಬಲಿಪಶುಗಳಂತೆಯೂ ಚಿತ್ರಿಸಲಾಗುತ್ತಿದೆ. ಮತ್ತೊಂದೆಡೆ ಆಳುವ ಶಕ್ತಿಗಳನ್ನು ಅತಿಮಾನವರಂತೆಯೂ ಬಿಂಬಿಸಲಾಗುತ್ತಿದೆ. ವಸ್ತುನಿಷ್ಠತೆಎಂಬ ವಿರಳ ಸಾಮಗ್ರಿಯ ಹತ್ಯೆ ಅವಿರತ ಜರುಗಿದೆ.ಇಂದಿರಾ ಗಾಂಧಿ, ರಾಜೀವ್ ಗಾಂಧಿ, ರಾಮಕೃಷ್ಣ ಹೆಗಡೆ, ನರಸಿಂಹರಾವ್ ಕಾಲದಲ್ಲೂ ಸಮೂಹ ಮಾಧ್ಯಮಗಳನ್ನು ನಿಯಂತ್ರಿಸುವ ಪ್ರಯತ್ನನಡೆದಿತ್ತು. ಈಗಲೂ ನಡೆದಿದೆ. ತುರ್ತುಪರಿಸ್ಥಿತಿಯ ಕಾಲದಲ್ಲಿ ಸೆನ್ಸಾರ್ಶಿಪ್ ಹೇರಿ ಪತ್ರಿಕೆಗಳ ಕತ್ತು ಹಿಸುಕಲಾಗಿತ್ತು. ಈಗ ಇದೇ ಕೆಲಸ ಇನ್ನಷ್ಟು ನವಿರಾಗಿ ನಡೆದಿದೆ. ತುರ್ತುಪರಿಸ್ಥಿತಿಯಲ್ಲಿ ಬಗ್ಗಿ ಎಂದರೆ ಸಾಷ್ಟಾಂಗ ನಮಸ್ಕಾರ ಮಾಡಿತು ಭಾರತೀಯ ಮೀಡಿಯಾ ಎಂದು ಟೀಕಿಸಿದ್ದರು ಎಲ್.ಕೆ.ಅಡ್ವಾಣಿ. ಈಗ ತುರ್ತುಪರಿಸ್ಥಿತಿ ಇಲ್ಲ. ಆದರೆ ಎದೆ ಸೆಟೆದಿದೆಯೇ ಅಥವಾ ನಡು ಬಗ್ಗಿದೆಯೇ ಎಂಬುದರ ಆತ್ಮಾವಲೋಕನ ಜರುಗಬೇಕಿದೆ.

ಗುಣಮಟ್ಟದ ಪತ್ರಿಕೋದ್ಯಮವನ್ನು ನೀಡಬಲ್ಲ ಸಶಕ್ತ ಮತ್ತು ಉತ್ತರದಾಯಿ ಮಾಧ್ಯಮ ಹೊಂದಬೇಕಿದ್ದರೆ ಟಿ.ಆರ್.ಪಿ. ಅಥವಾ ಜಾಹೀರಾತು ಅವಲಂಬಿತ ಮಾದರಿಯ ಪತ್ರಿಕೋದ್ಯಮ ಸಾಯಬೇಕು. ಹಣ ಸಂದಾಯ ಮಾಡಿ ಸೇವೆಗಳನ್ನು ಪಡೆಯುವ ಮಾದರಿಯಲ್ಲಿ ಓದುಗರು ಕಾಸು ತೆತ್ತು ಸುದ್ದಿ ಓದುವ ಕಾಲ ಬರಬೇಕು.

ಚುನಾವಣೆಗೆ ಮುನ್ನ ರಾಜಕೀಯ ಕಾರ್ಯಸೂಚಿಯೊಂದನ್ನು ಹಣ ಪಡೆದುಸುದ್ದಿ ಸಮಾಚಾರದ ಹೆಸರಿನಲ್ಲಿ ತೂರಿಸಲು ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳು ಒಪ್ಪಿಕೊಳ್ಳುವ ಅಪಾಯಕಾರಿ ಬೆಳವಣಿಗೆಯನ್ನು ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆ ಹೊರಹಾಕಿದೆ. ಹಣಕ್ಕಾಗಿ ಕೋಮು ಸಾಮರಸ್ಯ ಕಲಕುವುದು ಮಾತ್ರವಲ್ಲದೆ ನಿರ್ದಿಷ್ಟ ಪಕ್ಷವೊಂದರ ಪರವಾಗಿ ನಿಲ್ಲಲು ಸಿದ್ಧವೆಂದು ಸಾರಿರುವ ಸುದ್ದಿ ಸಂಸ್ಥೆಗಳ ಸಂಖ್ಯೆ 25ಕ್ಕೂ ಹೆಚ್ಚು ಎಂಬುದು ಅತ್ಯಂತ ಆತಂಕಕಾರಿ.

ಈ ಬಗೆಗೆ ದೊಡ್ಡ ಮಟ್ಟದ ಸಾರ್ವಜನಿಕ ಚರ್ಚೆಯೇ ನಡೆಯಬೇಕಿತ್ತು. ಕೆಲವೇ ಅಂತರ್ಜಾಲ ತಾಣಗಳನ್ನು ಬಿಟ್ಟರೆ ಈ ಆಪಾದನೆಗಳನ್ನು ಮುಖ್ಯಧಾರೆಯ ಮಾಧ್ಯಮ ಹೆಚ್ಚು ಕಡಿಮೆ ಹೂತು ಹಾಕಿತು. ದೇಶದಲ್ಲಿನ ಮಾಧ್ಯಮ ಸಂಸ್ಥೆಗಳ ಸ್ವಾತಂತ್ರ್ಯ ಕುರಿತು ಕಾಡುವ ಸಂದೇಹಗಳು ಮೂಡಿರುವುದು ವಾಸ್ತವ. ಈ ಹಿನ್ನೆಲೆಯಲ್ಲಿ ಭಾರತೀಯ ಮಾಧ್ಯಮದ ಆರೋಗ್ಯ ಕೆಟ್ಟಿದೆ ಎಂಬ‘ತಲೆಬರೆಹ’ವನ್ನು ಸಾರಾಸಗಟಾಗಿ ತಳ್ಳಿಹಾಕಲು ಬರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.