ಮೊನ್ನೆ ಪೊಲೀಸರು ಬಂಧಿಸಿ ಒಯ್ಯುತ್ತಿದ್ದಾಗ ಕ್ಯಾಮೆರಾಗಳನ್ನು ಎದುರಿಸಿದ ಆ ಖೂಳನ ಮುಖದ ಮೇಲೆ ಅಟ್ಟಹಾಸದ ನಗೆ ಕುಣಿಯುತ್ತಿತ್ತು. ಏಳರ ಹಸುಳೆಗಳಿಂದ ಹದಿನೇಳರ ಬಾಲೆಯರ ತನಕ 34 ಅಸಹಾಯಕ ಹೆಣ್ಣುಮಕ್ಕಳನ್ನು ತಾನು ಹರಿದು ತಿಂದು ಇತರೆ ಅಧಮರ ಪಲ್ಲಂಗಗಳಿಗೂ ತಳ್ಳಿದವನ ಮುಖದ ಮೇಲಿನ ಹೇವರಿಕೆ ಹುಟ್ಟಿಸುವ ನಗು. ಬಿಹಾರ ಸರ್ಕಾರ ತನ್ನ ಜೇಬಿನ ದಮ್ಮಡಿ ಎಂದುಕೊಂಡವನ ಮುಖದ ಮೇಲೆ ಮಾತ್ರವೇ ತೇಲಬಹುದಾದ ವಿಕೃತ ನಗೆ ಅದು. ಕೊಳೆತು ಹುಳು ಹತ್ತಿದ ವ್ಯವಸ್ಥೆಯನ್ನು ಪ್ರತಿಫಲಿಸುವ ನಗೆ. ನೀಚನ ನಾಮಧೇಯ ಬ್ರಿಜೇಶ್ ಕುಮಾರ್ ಠಾಕೂರ್.

ಅತಿ ಕೇಡಿನ ತುರ್ತುಪರಿಸ್ಥಿತಿಯಲ್ಲಿ ಬೆಂಕಿಯುಗುಳುವ ಬಂಡುಕೋರ ಜಾರ್ಜ್ ಫರ್ನಾಂಡಿಸ್ ಬಿಹಾರದ ಮುಜಫ್ಫರ್‌ಪುರದ ಜೈಲುಪಾಲಾಗಿದ್ದರು. ನಂತರ ಜರುಗಿದ ಲೋಕಸಭಾ ಚುನಾವಣೆಗಳಲ್ಲಿ ಹರಿದ ಜನತಂತ್ರದ ಲಾವಾರಸ ಇಂದಿರಾ ರಾಜ್ಯಭಾರವನ್ನು ಬೂದಿ ಮಾಡಿತ್ತು. ಅಲ್ಪಾಯು ಎನಿಸಿದರೂ ಭಾರತದ ಜನತಾಂತ್ರಿಕ ರಾಜಕಾರಣದ ನಿಗಿ ನಿಗಿ ಅಧ್ಯಾಯ ಅದು. ಈ ಚುನಾವಣೆಯಲ್ಲಿ ಒಮ್ಮೆಯೂ ಮುಖಾಮುಖಿ ಆಗದಿದ್ದರೂ ಜಾರ್ಜ್ ಎಂಬ ಜೈಲುವಾಸಿ ಕನ್ನಡಿಗನನ್ನು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಲೋಕಸಭೆಗೆ ಕಳಿಸಿದ್ದವರು ಮುಜಫ್ಫರ್‌ಪುರದ ಮತದಾರರು.

ಬಿಹಾರದ ಮುಜಫ್ಫರ್‌ಪುರ ಎಂಬ ಸೀಮೆ ಲಿಚ್ಛಿ ಎಂಬ ಅತಿಮಧುರ- ಪರಿಮಳಭರಿತ ಹಣ್ಣುಗಳಿಗೆ ಲೋಕಪ್ರಸಿದ್ಧ. ಪುರಾಣದ ಸೀತೆಯದು ಎನ್ನಲಾದ ಮಿಥಿಲೆಯ ಈ ನೆಲ ಮತ್ತು ಸದಾ ಹರಿಯುವ ಗಂಡಕೀ ನದಿಯ ಜಲ ಮೊನ್ನೆ ಬ್ರಿಜೇಶ್ ಠಾಕೂರ್ ನಡೆಸಿದ ಬೀಭತ್ಸಕ್ಕೆ ಬೆಚ್ಚಿ ತಣ್ಣಗೆ ಕಣ್ಣೀರು ಹರಿಸಿದ್ದಿರಬಹುದು.

ಧರೆಯೇ ಬೀಜಗಳ ನುಂಗಿದರೆ, ಬೇಲಿಯೇ ಹೊಲವನ್ನು ಮೇಯ್ದರೆ, ಗಂಡನೇ ಹೆಂಡತಿಯನ್ನು ಉಗ್ರವಾಗಿ ಶಿಕ್ಷಿಸಿದರೆ, ದೊರೆಯೇ ತನ್ನ ಪ್ರಜೆಗಳ ಬಾಧಿಸಿದರೆ, ಬಳ್ಳಿಯೇ ಹಣ್ಣುಗಳನ್ನು ಮೆದ್ದರೆ, ಮಾತೆಯೇ ಮಗುವಿಗೆ ವಿಷವೂಡಿಸಿದರೆ, ಹರನೇ ಕೊಂದರೆ ಪರ ಕಾಯುವನೇ ಎಂದು ಸೋಮೇಶ್ವರ ಶತಕ ಸಾರಿದ ಭಯಾನಕ ಸ್ಥಿತಿಯಿದು. ಸತ್ಯ ಘಟನೆಗಳು ಎಷ್ಟೋ ಸಲ ಕಟ್ಟು ಕತೆಗಳಿಗಿಂತ ವಿಚಿತ್ರವಾಗಿರುತ್ತವೆ ಎಂಬ ಮಾತು ಇಲ್ಲಿ ಅತ್ಯಂತ ಪ್ರಸ್ತುತ.

ನಶೆ ಬರಿಸುವ ಮದ್ದು ಉಣಿಸಿ ನಿದ್ದೆಗೆ ಜಾರಿಸಿ ಏಳೆಂಟು ವರ್ಷಗಳ ಹಸುಳೆಗಳ ಎಳೆಯ ಒಡಲುಗಳ ಬಗೆ ಬಗೆದು ದೋಚುವ ಪಿಪಾಸೆ ಯಾವ ನಾಗರಿಕ ಸಮಾಜದ ಹೆಮ್ಮೆ ಎನಿಸೀತು? ಹಗಲು ಸರಿದು ಇರುಳು ಯಾಕೆ ಇಳಿಯುತ್ತದೋ ಎಂದು ಥರಥರನೆ ನಡುಗುತ್ತಿದ್ದವು ಎಳೆಯ ಹೆಣ್ಣುಮಕ್ಕಳು. ನಶೆಯ ಮದ್ದು ಬೇಡವೆಂದರೆ ಅವುಗಳ ಮರ್ಮಾಂಗಗಳ ಮೇಲೆ ಕಾಲಿನಿಂದ ಝಾಡಿಸಿ ಒದೆಯುತ್ತಿದ್ದ ಠಾಕೂರ್. ಅವನ ಬಾಯಿಂದ ಬರುತ್ತಿದ್ದ ಬೈಗುಳಗಳ ಹೊಲಸನ್ನು ಬರೆದರೆ ಕಾಗದ ಕುದ್ದು ಹೋದೀತು. ಕುದಿಯುವ ನೀರು ಮತ್ತು ಕಾದ ಎಣ್ಣೆಯನ್ನು ಮೈ ಮೇಲೆ ಎರಚಲಾಗುತ್ತಿತ್ತು. ಊಟ, ಬಟ್ಟೆ ಕೊಡದೆ ಚಪ್ಪಲಿಯಿಂದ ಹೊಡೆಯಲಾಗುತ್ತಿತ್ತು. ರಾತ್ರಿ ನಶೆ ಬರಿಸುವ ಔಷಧಿಯನ್ನು ಬಲವಂತದಿಂದ ಸೇವಿಸಿ ನಿದ್ರೆ ಹೋದ ಹತ್ತು ವರ್ಷದ ಹಸುಳೆ ಮುಂಜಾನೆ ರಕ್ತ ಸ್ರವಿಸುವ ಜನನಾಂಗದೊಂದಿಗೆ ಹೌಹಾರಿ ಏಳುತ್ತಿತ್ತು. ‘ಕೆಟ್ಟ ಕೆಲಸ’ದಿಂದ (ಲೈಂಗಿಕ ಅತ್ಯಾಚಾರ) ತಪ್ಪಿಸಿಕೊಳ್ಳಲು ಕೆಲ ಬಾಲೆಯರು ಗಾಜಿನ ಚೂರುಗಳಿಂದ ಕೈ ಕಾಲುಗಳನ್ನು ಕೊಯ್ದು ರಕ್ತ ರಾದ್ಧಾಂತ ಮಾಡಿಕೊಳ್ಳುತ್ತಿದ್ದರು. ಮತ್ತು ಬರಿಸುವ ಮದ್ದು ನೀಡುವ ಮೊದಲು ಈ ಮಕ್ಕಳಿಗೆ ಅನೇಕ ಬಾರಿ ಕಾಮಕೂಟದ ವಿಡಿಯೊಗಳನ್ನು ಬಲವಂತವಾಗಿ ತೋರಿಸಲಾಗುತ್ತಿತ್ತು. ಮಕ್ಕಳ ಗರ್ಭಗಳನ್ನು ಇಳಿಸಲು ಈ ಯಾತನಾಗೃಹದಲ್ಲೊಂದು ‘ಆಪರೇಷನ್ ಥಿಯೇಟರ್’ ಕೂಡ ಇತ್ತು. ಗರ್ಭವತಿ ಹುಡುಗಿಯೊಬ್ಬಳನ್ನು ಹೊಡೆದು ಸಾಯಿಸಿ ಸುಧಾರಣಾ ಗೃಹದ ಅಂಗಳದಲ್ಲೇ ದಫನು ಮಾಡಿದ ಆಪಾದನೆ. ಪೊಲೀಸರ ಜೆಸಿಬಿಗಳು ಮೊನ್ನೆ ಅಂಗಳವನ್ನು ತಾಸುಗಟ್ಟಲೆ ಅಗೆದವು. ಅಸ್ಥಿಪಂಜರ ಪತ್ತೆಯಾಗಲಿಲ್ಲ. ಮಣ್ಣನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಹೊಡೆತ ತಾಳದೆ ಓಡಿ ಹೋದ ಹುಡುಗಿಯರನ್ನು ಮತ್ತೆ ಹಿಡಿದು ತಂದು ಇನ್ನಷ್ಟು ಕ್ರೂರವಾಗಿ ಥಳಿಸಲಾಗುತ್ತಿತ್ತು. ನಿದ್ದೆ ಅಥವಾ ಮತ್ತು ಬರಿಸುವ 63 ಬಗೆಯ ಔಷಧಿಗಳನ್ನು ಮತ್ತು ಅವುಗಳ ರ‍್ಯಾಪರ್‌ಗಳನ್ನು ಪೊಲೀಸರು ಬಾಲಿಕಾಗೃಹದ ಆವರಣದಿಂದ ವಶಪಡಿಸಿಕೊಂಡಿದ್ದಾರೆ. ವೈದ್ಯಕೀಯ ದಾಖಲೆಗಳ ಪ್ರಕಾರ ಹೀಗೆ ಲೈಂಗಿಕ ಅತ್ಯಾಚಾರಕ್ಕೆ ಈಡಾಗಿರುವ ಬಾಲೆಯರ ಸಂಖ್ಯೆ ಸದ್ಯಕ್ಕೆ 34. ಠಾಕೂರ್ ನಡೆಸುತ್ತಿದ್ದ ಇತರೆ ಸ್ವಯಂಸೇವಾ ಸಂಸ್ಥೆಗಳಲ್ಲೂ ಮದ್ಯದ ಬಾಟಲಿಗಳು, ಕಾಂಡೋಮ್‌ಗಳು ಸಿಕ್ಕಿವೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ.

ವಿಶೇಷ ನ್ಯಾಯಾಲಯದಲ್ಲಿ ಬಾಲೆಯರ ವಿಡಿಯೊ ದಾಖಲಿತ ಸಾಕ್ಷ್ಯಗಳು ಮಾನವೀಯ ಮನಸುಗಳನ್ನು ಮರಗಟ್ಟಿಸುತ್ತವೆ. ಅದಕ್ಕೆಂದೇ ಈ ಸಾಕ್ಷ್ಯಗಳನ್ನು ಪ್ರಸಾರ ಮಾಡಬಾರದೆಂದು ಟೆಲಿವಿಷನ್ ಚಾನೆಲ್‌ಗಳಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೂ ಅಂತರ್ಜಾಲದಲ್ಲಿ ಅಲ್ಲಲ್ಲಿ ಈ ಧ್ವನಿ- ದೃಶ್ಯ ಸಾಕ್ಷ್ಯಗಳು ಈಗಲೂ ಸಿಗುತ್ತವೆ. ಅವುಗಳಲ್ಲಿ ಕೆಲ ಮಾದರಿಗಳು ಹೀಗಿವೆ- ‘ನನ್ನ ಊಟದಲ್ಲಿ ನಿದ್ರೆ ಔಷಧ ಬೆರೆಸಲಾಗುತ್ತಿತ್ತು. ತಲೆಸುತ್ತಿದಂತಾಗುತ್ತಿತ್ತು.
ಬ್ರಜೇಶ್ ಸರ್ ಅವರ ಕೋಣೆಗೆ ಅತಿಥಿಯೊಬ್ಬರು ಬರುತ್ತಾರೆಂದೂ, ನಾನು ಅಲ್ಲಿ ಮಲಗಬೇಕೆಂದೂ ಸೂಚಿಸಲಾಗುತ್ತಿತ್ತು. ಮುಂಜಾನೆ ಎದ್ದಾಗ ನನ್ನ ಪ್ಯಾಂಟ್, ಕೆಳಗೆ ನೆಲದ ಮೇಲೆಲ್ಲೋ ಬಿದ್ದಿರುತ್ತಿತ್ತು’ (ಈ ಮಗುವಿನ ವಯಸ್ಸು 10 ವರ್ಷ).

‘ಎನ್.ಜಿ.ಒ. ಮಂದಿ ಮತ್ತು ಹೊರಗಿನ ಅನೇಕ ಮಂದಿ ನನ್ನ ಮೇಲೆ ಲೈಂಗಿಕ ಅತ್ಯಾಚಾರ ಮಾಡಿದ್ದಾರೆ. ಹಲವಾರು ದಿನಗಳ ಕಾಲ ನನಗೆ ನಡೆಯಲು ಆಗುತ್ತಿರಲಿಲ್ಲ. ಹತ್ತಾರು ಬಾರಿ ಬಾಲಿಕಾ ಗೃಹದಿಂದ ಹೊರಗೂ ಕರೆದೊಯ್ದಿದ್ದಾರೆ. ಎಲ್ಲಿಗೆ ಒಯ್ಯುತ್ತಿದ್ದರು ತಿಳಿಯುತ್ತಿರಲಿಲ್ಲ. ಆದರೆ ಮರುದಿನವೇ ವಾಪಸು ಕರೆತರುತ್ತಿದ್ದರು’.

‘ಮುಂಜಾನೆ ನಿದ್ದೆಯಿಂದ ಎದ್ದಾಗ ಹೊಟ್ಟೆನೋಯುತ್ತಿತ್ತು. ಆಂಟಿಯರಿಗೆ ಹೇಳಿದರೆ ಎಲ್ಲ ಸರಿಯಿದೆ ಹೋಗು ಎನ್ನುತ್ತಿದ್ದರು. ವೈದ್ಯರದೂ ಇದೇ ಮಾತು. ಕಿಟಕಿಯ ಬಳಿ ನಿಂತರೆ ಬ್ರಜೇಶ್ ಸರ್ ಬಂದು ಹೊಟ್ಟೆಯ ಕೆಳಗೆ ಕಾಲಿನಿಂದ ಒದೆಯುತ್ತಿದ್ದರು’.

‘ಔಷಧಿ ಬೇಡ ಎಂದು ನಿರಾಕರಿಸಿದರೆ ಡೊಳ್ಳು ಹೊಟ್ಟೆಯ ವ್ಯಕ್ತಿಯೊಬ್ಬ ಹೊಡೆಯುತ್ತಿದ್ದ. ಬ್ರಜೇಶ್ ಠಾಕೂರ್ ಕಚೇರಿಗೆ ಕರೆದೊಯ್ದು ಗುಪ್ತಾಂಗದ ಮೇಲೆ ಗೀರುತ್ತಿದ್ದ. ಒಮ್ಮೊಮ್ಮೆ ಎಷ್ಟು ಕ್ರೂರವಾಗಿ ಗೀರುತ್ತಿದ್ದನೆಂದರೆ ಚರ್ಮ ಕೊಯ್ದಂತಾಗಿ ಕಲೆಗಳು ಉಳಿಯುತ್ತಿದ್ದವು’.

ಗಲೀಜ್ ಕಾಮ್ ಬೇಡ, ನೋವಾಗ್ತದೆ ಅಂತ ಅಂಕಲ್‌ಗೆ ಹೇಳಲಿಲ್ಲವೇ ಮಗಳೇ ಎಂಬ ಪೊಲೀಸ್ ತನಿಖಾ ತಂಡದ ಸದಸ್ಯೆಯೊಬ್ಬಾಕೆಯ ಪ್ರಶ್ನೆಗೆ ಏಳು ವರ್ಷದ ಮಗುವಿನ ಉತ್ತರ- ‘ಹೇಳಿದೆ, ಆದರೆ ಅಂಕಲ್ ಕೇಳ್ತಿರಲೇ ಇಲ್ಲ’.

ನಾನು ನಿಮ್ಮ ಮಗಳಂತೆ ಅಲ್ವಾ, ಯಾಕೆ ಮಾಡ್ತೀರಿ ಅಂತ ಹೇಳಲಿಲ್ಲವೇ ಎಂಬ ಮತ್ತೊಂದು ಪ್ರಶ್ನೆಗೆ ಆ ಮಗುವಿನ ಉತ್ತರ- ‘ನಾವು ಎಷ್ಟು ಹೇಳಿದರೂ ಅವರು ಜಬರದಸ್ತೀ ಮಾಡ್ತಿದ್ರು’.

ಹೇಗೆ ಮಾಡ್ತಿದ್ರು, ಏನಾದರೂ ಯೂಸ್ ಮಾಡ್ತಿದ್ರಾ ಎಂಬ ಪ್ರಶ್ನೆಗೆ ಹನ್ನೊಂದು ವರ್ಷದ ಮತ್ತೊಬ್ಬ ಬಾಲೆಯ ತಗ್ಗಿದ ದನಿಯ ಉತ್ತರ- ‘ಹೂಂ, ಯೂಸ್ ಮಾಡ್ತಿದ್ರು, ಕಾಂಡೋಮ್’.

ಆಂಟಿಗಳಿಗೆ ಯಾಕೆ ಹೇಳಲಿಲ್ಲ?- ‘ಆಂಟಿಗಳೇ ಇದನ್ನೆಲ್ಲ ನಮ್ಮ ಕೈಲಿ ಮಾಡಿಸ್ತಿದ್ರು. ಊಟ ಕೇಳಿದರೆ ಬರೆ ಎಳೀತಿದ್ರು. ಹೊಟೇಲುಗಳಿಗೂ ನಮ್ಮನ್ನು ಒಯ್ಯುತ್ತಿದ್ದರು. ಆ ಹೋಟೆಲ್ ಹೆಸರು ಆಮ್ರಪಾಲಿ. ಅಲ್ಲಿ ಎಲ್ಲರೂ ಇರ್ತಿದ್ರು. ಪ್ರತಿ ಸಲ ನಾಲ್ವರು ಮಕ್ಕಳನ್ನು ಕರೆದೊಯ್ಯುತ್ತಿದ್ದರು’.

ರೆಡ್ ಲೈಟ್ ಏರಿಯಾದ ಹುಡುಗೀರು, ಮನೆ ಬಿಟ್ಟು ಓಡಿಹೋದ ಹುಡುಗಿಯರು, ಪ್ರೇಮಸಂಬಂಧ ಇಟ್ಟುಕೊಂಡ ಹುಡುಗಿಯರು, ದಿಕ್ಕಿಲ್ಲದ ಅನಾಥರು ಮತ್ತು ಕಳೆದು ಹೋದ ಹೆಣ್ಣುಗಳು ಇಲ್ಲಿಗೆ ಬರುತ್ತವೆ. ಅವುಗಳ ಭಾವಾತಿರೇಕವನ್ನು ಶಮನಗೊಳಿಸಲು ನಿದ್ರೆಯ ಔಷಧಿ ನೀಡಿದ್ದಿರಬಹುದು ಎಂಬುದು ಠಾಕೂರನ ಪತ್ನಿ ಆಶಾದೇವಿಯ ಸಮರ್ಥನೆ.

ನೆರೆ ಹೊರೆಯ ನಿವಾಸಿಗಳು ಕಿವಿ ಕಿವುಡಾಗಿ ಎದೆ ಬಿರಿಯುವಂತಹ ಆಕ್ರಂದನ, ಚೀರಾಟಗಳನ್ನು ಕೇಳಿಸಿಕೊಂಡದ್ದು ಉಂಟು. ಆದರೆ ಯಾರೂ ದೂರು ನೀಡಲಿಲ್ಲ ಅಥವಾ ಹೀಗಾಗುತ್ತಿದೆ ಎಂದು ಎಲ್ಲಿಯೂ ಬಾಯಿ ಬಿಡಲಿಲ್ಲ. ಮಕ್ಕಳು ವಸತಿ ಗೃಹದ ಹೊರಗೆ ಅಥವಾ ಚಾವಣಿಯ ಮೇಲೆ ಎಂದೂ ಕಾಣಿಸಿಕೊಳ್ಳುತ್ತಿರಲಿಲ್ಲ. ಈ ವಸತಿ ಗೃಹಕ್ಕೆ ಕಿಟಕಿಗಳೇ ಇಲ್ಲ. ಹೆಚ್ಚೆಂದರೆ ಗಾಳಿಯಾಡಲು ಎತ್ತರದಲ್ಲಿ ಸಣ್ಣ ಕಿಂಡಿಗಳಿವೆ ಅಷ್ಟೇ. ಬ್ರಿಜೇಶ್ ಠಾಕೂರ್ ಬಲು ಗೂಂಡಾಗಿರಿಯ ವ್ಯಕ್ತಿಯಾದ ಕಾರಣ ಬಾಯಿ ಬಿಡಲು ನಮಗೆ ಧೈರ್ಯ ಬರಲಿಲ್ಲ ಎನ್ನುತ್ತಾರೆ ನೆರೆಹೊರೆಯ ನಿವಾಸಿಗಳು.

ತಂದೆ ರಾಧಾಮೋಹನ್ ಹಾಕಿಕೊಟ್ಟ ದಾರಿಯಲ್ಲಿ ಬಹುದೂರ ಸಾಗಿ ಬಂದ ಠಾಕೂರ್, ಪತ್ರಕರ್ತನಾಗಿ ರಾಜಕಾರಣಿಗಳು ಮತ್ತು ನೌಕರಶಾಹಿಯ ಸಾಮೀಪ್ಯ ಗಳಿಸಿದ್ದ. ಈ ವೃತ್ತಿಯನ್ನು ಯಶಸ್ಸಿನ ನಿಚ್ಚಣಿಗೆಯಾಗಿ ಬಳಸಿದ. ಅನುದಾನ- ಜಾಹೀರಾತು ರೂಪದಲ್ಲಿ ಸರ್ಕಾರದಿಂದ ಈತನ ವರಮಾನ ವರ್ಷಕ್ಕೆ ಕನಿಷ್ಠ ಐದು ಕೋಟಿ ರೂಪಾಯಿ. 2000ದ ಇಸವಿಯ ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಕುಖ್ಯಾತ ‘ಬಾಹುಬಲಿ’ ಆನಂದಮೋಹನನ ಬಿಹಾರ್ ಪೀಪಲ್ಸ್ ಪಾರ್ಟಿಯ ಉಮೇದುವಾರನಾಗಿ ಕಣಕ್ಕಿಳಿದಿದ್ದ ಠಾಕೂರ್ ಕಡಿಮೆ ಮತಗಳ ಅಂತರದಲ್ಲಿ ಸೋತ. 1995ರಲ್ಲೂ ಇದೇ ಪಕ್ಷದಿಂದ ಸ್ಪರ್ಧಿಸಿದ್ದ ಇವನಿಗೆ 202 ಮತಗಳು ಬಿದ್ದಿದ್ದವು. ಬಿಜೆಪಿ-ಸಂಯುಕ್ತ ಜನತಾದಳದ ಜೊತೆ ಚುನಾವಣಾ ಮೈತ್ರಿಯ ಕಾರಣ ಎನ್.ಡಿ.ಎ. ದಿಗ್ಗಜರು ಈತನ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದುಂಟು.

ಇದೇ ವರ್ಷದ ಏಪ್ರಿಲ್ 27ಕ್ಕೆ ಕೈಸೇರಿದ ಸೋಷಿಯಲ್ ಆಡಿಟ್ ವರದಿಯನ್ನು ರಾಜ್ಯ ಸರ್ಕಾರ ಒಂದು ತಿಂಗಳು ಉರುಳಿದರೂ ಓದುವುದಿಲ್ಲ. ಮೇ 30ಕ್ಕೆ ನಾಲ್ಕು ಸಾಲುಗಳ ಎಫ್.ಐ.ಆರ್. ದಾಖಲು ಮಾಡಲಾಗುತ್ತದೆ. ಅದರಲ್ಲಿ ಯಾರ ಹೆಸರೂ ಇರುವುದಿಲ್ಲ. ಜೂನ್ ಮೂರಕ್ಕೆ 63 ಬಾಲೆಯರ ವೈದ್ಯಪರೀಕ್ಷೆ ನಡೆಯುತ್ತದೆ. ಆದರೆ ಪರೀಕ್ಷೆಯ ಈ ವರದಿ ಒಂದೂವರೆ ತಿಂಗಳ ನಂತರ ಜುಲೈ 22ರಂದು ಹೊರಬರುತ್ತದೆ! ಕಶೀಶ್ ನ್ಯೂಸ್ ಎಂಬ ಸ್ಥಳೀಯ ಟಿ.ವಿ. ಚಾನೆಲ್ ಈ ಪ್ರಕರಣ ಕುರಿತು 40 ವರದಿಗಳನ್ನು ಪ್ರಸಾರ ಮಾಡದೆ ಹೋಗಿದ್ದರೆ ಇಡೀ ಪ್ರಕರಣ ಹೂತು ಹೋಗುತ್ತಿತ್ತು. ಈ ಎಲ್ಲ ವಿಪರೀತ ವಿದ್ಯಮಾನಗಳು ನಡೆದದ್ದು ಸುಶಾಸನ ಬಾಬು ಎಂಬ ಅಭಿದಾನ ಪಡೆದಿರುವ ನಿತೀಶ್ ಕುಮಾರ್ ಅವರ ಆಡಳಿತದಲ್ಲೇ.

ಹಸಿವಿನಿಂದ, ಅವಮಾನದಿಂದ, ದೈಹಿಕ ಚಿತ್ರಹಿಂಸೆಯಿಂದ, ಅಗಾಧ ತಬ್ಬಲಿತನದಿಂದ, ಬೆಂದು ನೀಗುವ ಮನುಷ್ಯ ಜೀವಗಳ ಜಗತ್ತು ಬೇರೆಲ್ಲೋ ಪರಲೋಕದಲ್ಲಿ ಅಥವಾ ಗೋಳದ ಆಚೆ ಬದಿಯಲ್ಲೋ ಅಡಗಿಕೊಂಡಿಲ್ಲ... ಅದು ನಮ್ಮ ನಿಮ್ಮ ನೆರೆಹೊರೆಯಲ್ಲೇ ನರಳುತ್ತ ಮಲಗಿದೆ... ಅದನ್ನು ಕಾಣಬಲ್ಲ ಕಣ್ಣುಗಳು ಮತ್ತು ಗ್ರಹಿಸಬಲ್ಲ ಜೀವದಯೆಯ ಮನಸ್ಸುಗಳು ಎಚ್ಚರವಿರಬೇಕು. ಕಡುಸ್ವಾರ್ಥ ಮತ್ತು ವಿಲಾಸ ವೈಪರೀತ್ಯಗಳ ಅಮಲಿನಲ್ಲಿ ತೇಲುವ ಕುರುಡು ಸಮಾಜಕ್ಕೆ ಇದ್ಯಾವುದರ ಪರಿವೆಯೂ ಇರದು. ಹೆಣ್ಣು-ಗಂಡುಗಳ ನಡುವಣ ಅಸಮಾನತೆಯನ್ನು ಜಿದ್ದಿನಿಂದ ಸಮರ್ಥಿಸಿಕೊಳ್ಳುವ ಮತ್ತು ದೇವಿಯೆಂದೂ ಶಕ್ತಿಯೆಂದೂ ಮಾತೆಯೆಂದೂ ದುರ್ಗೆಯೆಂದೂ ಶಿವೆಯೆಂದೂ ಶಿಲಾಕೃತಿಯ ರೂಪದಲ್ಲಿ, ಚಿತ್ರಪಟಗಳಲ್ಲಿ ಆಕೆಯನ್ನು ಆರಾಧಿಸುವ ಆಷಾಢಭೂತಿಗಳು ನಿಜರೂಪದ ಆಕೆಯ ಒಡಲ ಹರಿದು ಭೋಗಿಸಲು ಅರೆ ಗಳಿಗೆಯೂ ಹೇಸುವುದಿಲ್ಲ.

ಗೋಮಾತೆಯ ರಕ್ಷಣೆಗೆ ಪ್ರಾಣ ಕೊಡುತ್ತೇವೆಂದು ಅಬ್ಬರಿಸಿ, ಅಮಾಯಕರ ಪ್ರಾಣ ತೆಗೆದು ರಕ್ಕಸ ಕೇಕೆ ಹಾಕತೊಡಗಿರುವ ಶಕ್ತಿಗಳು ಮತ್ತು ಅವುಗಳ ಸಮರ್ಥನೆಗೆ ನಿಂತಿರುವ ಮಂತ್ರಿ-ಮುಖ್ಯಮಂತ್ರಿಗಳು- ಮೌನ ಸಮ್ಮತಿ ನೀಡುವ ಪ್ರಧಾನರು, ಹುರಿದುಂಬಿಸುವ ಸಂಘ-ಸಂಘಟನೆಗಳ ಚತುರರು ಯಾಕೆ ಏಕಕಾಲಕ್ಕೆ ಕುರುಡರೂ ಕಿವುಡರೂ ಆಗಿಬಿಡುತ್ತಾರೆ? ಬಿಹಾರದ ಈ ಬಾಲೆಯರು ಭಾರತೀಯ ಹೆಣ್ಣಮಕ್ಕಳಲ್ಲವೇ, ಅವರ ಯಾತನೆಯಲ್ಲಿ, ಒಡಲುಗಳ ಉಲ್ಲಂಘನೆಯಲ್ಲಿ, ದುರ್ಗೆ, ಶಿವೆ, ದೇವಿ, ಗೋಮಾತೆಯರ ಉಲ್ಲಂಘನೆ- ಆಕ್ರಂದನಗಳು ಯಾಕೆ ಕೇಳುವುದಿಲ್ಲ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.