‘ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಕಿತ್ತೊಗೆಯುವವರೆಗೆ ವಿರಮಿಸುವುದಿಲ್ಲ’ ಎಂದು ಬಿಜೆಪಿ ನಾಯಕರು ಅಬ್ಬರಿಸಿ ವಾರ ಕಳೆಯುವಷ್ಟರಲ್ಲೇ, ರಾಜ್ಯದಲ್ಲಿ ‘ಕಮಲ’ದ ಬುಡ ಅಲುಗಾಡತೊಡಗಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಹಾಗೂ ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮದ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ, ವಿಧಾನಮಂಡಲದ ಉಭಯ ಸದನಗಳಲ್ಲಿ ಮೈತ್ರಿಕೂಟದ ನಾಯಕರು ಹೋರಾಟ ನಡೆಸಿದರು. ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನಡೆಯ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ ಸದನದಲ್ಲೇ ಕುಟುಕಿದ್ದರು.

ಇಲ್ಲಿನ ‘ಹೊಂದಾಣಿಕೆ ರಾಜಕಾರಣ’ದ ಅರಿವಿಲ್ಲದೇ ಇರುವ ಬಿಜೆಪಿಯ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕೆಂದು ಕಟ್ಟಪ್ಪಣೆ ಹೊರಡಿಸಿದರು. ತಮ್ಮ ಪಕ್ಷ ಹಾಗೂ ಜೆಡಿಎಸ್ ನಾಯಕರ ಜತೆಗೆ ಚರ್ಚೆ ಮಾಡದೇ, ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಮೈಸೂರಿನವರೆಗೆ ಪಾದಯಾತ್ರೆ ನಡೆಸುವುದಾಗಿ ವಿಜಯೇಂದ್ರ ಏಕಾಏಕಿ ಘೋಷಿಸಿಬಿಟ್ಟರು.

‘ಯಾರನ್ನು ಕೇಳಿ ಯಾತ್ರೆ ಮಾಡುತ್ತಿದ್ದೀರಿ? ನಮ್ಮ ನೈತಿಕ ಬೆಂಬಲ ನಿಮಗೆ ಇಲ್ಲ’ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಆರಂಭದಲ್ಲೇ ಅಪಸ್ವರ ತೆಗೆದರು. ಬಿಜೆಪಿ ವರಿಷ್ಠರ ಸಂಧಾನದ ಬಳಿಕ, ಕುಮಾರಸ್ವಾಮಿ ಯೂಟರ್ನ್ ಹೊಡೆದರು.

ಇತ್ತ ಬಿಜೆಪಿಯಲ್ಲಿ, ‘ಭ್ರಷ್ಟರು ಭ್ರಷ್ಟರನ್ನು ರಕ್ಷಿಸುವ ಯಾತ್ರೆ. ಸಿದ್ದರಾಮಯ್ಯ ಅವರನ್ನು ಇಳಿಸಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿಸಲು ವಿಜಯೇಂದ್ರ ಯಾತ್ರೆ ನಡೆಸುತ್ತಿದ್ದಾರೆ’ ಎಂದು ಟೀಕಿಸಿದ ಯತ್ನಾಳ, ಪಕ್ಷದ ನಾಯಕತ್ವಕ್ಕೆ ಸಡ್ಡು ಹೊಡೆದರು. ಮತ್ತೊಬ್ಬ ಶಾಸಕ ರಮೇಶ ಜಾರಕಿಹೊಳಿ ಅವರನ್ನೂ ತಮ್ಮ ಜತೆ ಸೇರಿಸಿಕೊಂಡರಲ್ಲದೆ, ಕೂಡಲ ಸಂಗಮದಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸುವುದಾಗಿಯೂ ಘೋಷಿಸಿದರು. ಮೈತ್ರಿ ನಾಯಕರ ಪಾದಯಾತ್ರೆ ಯಶಸ್ವಿಯಾದರೂ ಯಾವುದೇ ಪರಿಣಾಮ ಬೀರಲಿಲ್ಲ. ಆದರೆ, ವಿಜಯೇಂದ್ರ ಅವರ ವರ್ಚಸ್ಸು ಹೆಚ್ಚಿಸಿ, ಪಕ್ಷದಲ್ಲಿ ಹಿಡಿತ ಸಾಧಿಸಲು ನೆರವಾಯಿತು ಎಂಬುದು ಯಾವಾಗ ಅರಿವಿಗೆ ಬಂತೋ ಆಗ ಅವರ ವಿರೋಧಿ ಬಣ ಜಾಗೃತವಾಯಿತು. ವಿಜಯೇಂದ್ರ ವಿರುದ್ಧ ಸೆಟೆದು ನಿಂತಿದ್ದ ಒಂದಿಬ್ಬರ ತಂಡ ಈಗ ಗುಂಪುಗೂಡುತ್ತಿದೆ. ಯಡಿಯೂರಪ್ಪ ಆಪತ್ತಿಗೆ ಸಿಲುಕಿದಾಗೆಲ್ಲ, ಏರಿದ ಧ್ವನಿಯಲ್ಲಿ ಸಮರ್ಥನೆಗೆ ನಿಲ್ಲುತ್ತಿದ್ದ ಹರಿಹರ ಶಾಸಕ ಬಿ.ಪಿ.ಹರೀಶ್, ಈಗ ಎದುರು ಪಾಳಯಕ್ಕೆ ಜಿಗಿದಿದ್ದಾರೆ. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮೆದು ದನಿಯಲ್ಲಿ ಬೆಂಬಲ ಸೂಚಿಸಿದ್ದಾರೆ. ವಿಜಯೇಂದ್ರ ವಿರುದ್ಧ ಸಮರಕ್ಕೆ ವೇದಿಕೆ ಸಿದ್ಧವಾಗುತ್ತಿರುವುದು ಸ್ಪಷ್ಟ.

ಈ ಬೆಳವಣಿಗೆಯ ಮಧ್ಯೆಯೇ, ‘ವಿಜಯೇಂದ್ರ ಗೆದ್ದಿರುವುದು ಕಾಂಗ್ರೆಸ್ ಭಿಕ್ಷೆಯಿಂದ’ ಎಂದು ಉಪಮುಖ್ಯ
ಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆ ‘ಹೊಂದಾಣಿಕೆ ರಾಜಕಾರಣ’ದ ಮಗ್ಗುಲನ್ನು ಬಿಚ್ಚಿಟ್ಟಿದೆ. ಶಿವಕುಮಾರ್ ನೇತೃತ್ವದಲ್ಲಿಯೇ 2023ರ ವಿಧಾನಸಭೆ ಚುನಾವಣೆ ನಡೆದಿತ್ತು. ಶಿಕಾರಿಪುರದಲ್ಲಿ ಪ್ರಬಲ
ರಾಗಿದ್ದ ಕಾಂಗ್ರೆಸ್‌ನ ನಾಗರಾಜ ಗೌಡ ಬದಲಿಗೆ, ಗೋಣಿ ಮಾಲತೇಶ್ ಅವರಿಗೆ ಆ ಪಕ್ಷ ಟಿಕೆಟ್ ನೀಡಿತ್ತು. ನಾಗರಾಜ ಗೌಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪಕ್ಷದ ಯಾವೊಬ್ಬ ನಾಯಕರೂ ಶಿಕಾರಿಪುರಕ್ಕೆ ಹೋಗಲಿಲ್ಲ. ಮಾಲತೇಶ್ 7,666 ಮತ ಪಡೆದರೆ, ನಾಗರಾಜ ಗೌಡ 10 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಕಾಂಗ್ರೆಸ್ ಗೆಲುವಿಗಿಂತ ವಿಜಯೇಂದ್ರ ದಾರಿ ಸಲೀಸು ಮಾಡಿಕೊಡುವ ಲೆಕ್ಕಾಚಾರ ಇದರ ಹಿಂದಿತ್ತು ಎಂಬುದೇನೂ ರಹಸ್ಯವಲ್ಲ.

ಸಿದ್ದರಾಮಯ್ಯ ಸ್ಪರ್ಧಿಸಿದ್ದ ವರುಣ ಕ್ಷೇತ್ರದಲ್ಲಿ ವಿ. ಸೋಮಣ್ಣ ಬೆಂಬಲಕ್ಕೆ ಹಲವರು ನಿಲ್ಲಲಿಲ್ಲ. ಅಮಿತ್ ಶಾ ಭಾಷಣ ಮಾಡುತ್ತಿದ್ದಾಗಲೇ ಯಡಿಯೂರಪ್ಪ ವೇದಿಕೆಯಿಂದ ಇಳಿದು ಹೋಗಿದ್ದರು. ತಮ್ಮ ಸೋಲಿಗೆ ಕೆಲವರ ಪಿತೂರಿ ಕಾರಣ ಎಂದು ಸೋಮಣ್ಣ ಅನೇಕ ಬಾರಿ ಹೇಳಿದ್ದುಂಟು. ಈಗ ಹೊಂದಾಣಿಕೆ ಹಾಗೂ ಕುಟುಂಬ ರಾಜಕಾರಣದ ವಿರುದ್ಧ ಹೋರಾಡುವುದಾಗಿ ಗರ್ಜಿಸುತ್ತಿರುವ ಗುಂಪಿನ ನಡೆ– ನುಡಿಯಲ್ಲಿ, ಯಡಿಯೂರಪ್ಪ ಕುಟುಂಬದ ಹಿಡಿತದಿಂದ ಪಕ್ಷವನ್ನು ಹೊರತರುವ ಯತ್ನ ಕಾಣಿಸುತ್ತದೆ. ಪಾದಯಾತ್ರೆ ಮುನ್ನಡೆಸಿದ ವಿಜಯೇಂದ್ರ, ಪಕ್ಷದಲ್ಲಿ ತಮ್ಮ ಹಿಡಿತ ಬಿಗಿಗೊಳಿಸಲು ಸತತ ಯತ್ನ ನಡೆಸುತ್ತಿದ್ದಾರೆ. 48ರ ಪ್ರಾಯದ ಅವರು ಕನಿಷ್ಠ 20 ವರ್ಷ ರಾಜಕಾರಣ ಮಾಡಬಲ್ಲರು. ಅವರ ಕೈಗೆ ಪಕ್ಷವನ್ನು ಕೊಟ್ಟರೆ ತಮಗೆ ಏಳಿಗೆಯೇ ಇಲ್ಲವೆಂಬುದು ದೆಹಲಿಯಲ್ಲಿ ಕುಳಿತು ಕರ್ನಾಟಕದ ರಾಜಕಾರಣವನ್ನು ನಿಯಂತ್ರಿಸುವವರ ಚಿಂತೆ.

ಯಡಿಯೂರಪ್ಪನವರನ್ನು ಅಧಿಕಾರದಿಂದ ಇಳಿಸಿದಾಗಲೇ, ಅವರನ್ನು ಹೊರಗಟ್ಟುವ ಯತ್ನ ನಡೆದಿತ್ತು. ಲೋಕಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯುವಷ್ಟು ಸಂಖ್ಯಾಬಲ ಸಿಗುವುದಿಲ್ಲ ಎಂದು ಗೊತ್ತಾದಾಗ ಕರ್ನಾಟಕದಲ್ಲಿ ಸಂಖ್ಯೆ ಹೆಚ್ಚಿಸಿಕೊಳ್ಳುವ ಅನಿವಾರ್ಯ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಎದುರಾಯಿತು. ಅದಕ್ಕೆ, ಮತ್ತೆ ಯಡಿಯೂರಪ್ಪನವರ ಆಸರೆ ಬೇಕಾಯಿತು. ವಿಧಾನಸಭೆ ಚುನಾವಣೆ ಸೋಲಿನ ಬಳಿಕ ನಾಯಕತ್ವವನ್ನು ಯಾರಿಗೆ ವಹಿಸಬೇಕು ಎಂಬ ಚರ್ಚೆ ನಡೆದಿತ್ತು. ಮುಖ್ಯ ಸಚೇತಕನ ಸ್ಥಾನ ಸಿಕ್ಕಿದರೂ ಸಾಕೆಂಬ ಹವಣಿಕೆಯಲ್ಲಿ ವಿಜಯೇಂದ್ರ ಇದ್ದರು. ಮಗನಿಗೆ ಪಟ್ಟ ಕಟ್ಟಿದರಷ್ಟೇ ಯಡಿಯೂರಪ್ಪ ಪ್ರಚಾರಕ್ಕೆ ಬರಲಿದ್ದಾರೆ ಎಂಬ ಸುಳಿವು ಪಡೆದ ಮೋದಿ– ಶಾ ಜೋಡಿ, ಅಧ್ಯಕ್ಷ ಸ್ಥಾನವನ್ನೇ ದಯಪಾಲಿಸಿತು. ಚುನಾವಣೆಯಲ್ಲಿ ದೊಡ್ಡಮಟ್ಟದ ಗೆಲುವು ಅಸಾಧ್ಯವೆಂದಾದಾಗ, ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ ತೀರ್ಮಾನಕ್ಕೆ ಮೋದಿ–ಶಾ ಬಂದರು. ಮೈತ್ರಿ ಇಲ್ಲದೇ ಚುನಾವಣೆ ಎದುರಿಸಿದ್ದರೆ, ಈಗ ಬಂದಿರುವ ಫಲಿತಾಂಶದ ಬದಲು ಕಾಂಗ್ರೆಸ್ 17, ಬಿಜೆಪಿ 9 ಸ್ಥಾನ ಪಡೆಯುತ್ತಿದ್ದವು.

ಲಿಂಗಾಯತರೆಲ್ಲರೂ ಯಡಿಯೂರಪ್ಪನವರ ಜತೆಗಿಲ್ಲ ಎಂಬುದು ಬಿಜೆಪಿ ವರಿಷ್ಠರಿಗೆ ಗೊತ್ತಾದ ಬಳಿಕ, ಒಂದು ಕುಟುಂಬದ ಹಿಡಿತವನ್ನು ತಪ್ಪಿಸಬೇಕೆಂಬ ಕೂಗು ಏಳಲು ಶುರುವಾಯಿತು. ಲೋಕಸಭೆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮುನ್ನ ಕೆ.ಎಸ್.ಈಶ್ವರಪ್ಪ ಇದೇ ಮಾತು ಹೇಳಿದ್ದರು. ಪ್ರಲ್ಹಾದ ಜೋಶಿ, ರಮೇಶ ಜಾರಕಿಹೊಳಿ ಶಿವಮೊಗ್ಗ ಭೇಟಿಯ ಬಳಿಕವೇ ಈಶ್ವರಪ್ಪ ಅವರು ಸ್ಪರ್ಧೆಯ ಘೋಷಣೆ ಮಾಡಿದ್ದರು.

ಬಿಜೆಪಿಯಲ್ಲಿ ಈಗ ಯಡಿಯೂರಪ್ಪ ಬಣ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್– ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ, ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಆರ್. ಅಶೋಕ ಅಂತಹವರ ತಟಸ್ಥ ಬಣಗಳು ಹುರಿಗೊಳ್ಳುತ್ತಿವೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ, ಎಚ್.ವಿಶ್ವನಾಥ್, ಕೆ.ಎಸ್.ಈಶ್ವರಪ್ಪ ಹೀಗೆ ಕೆಲವರೇ ಮಾತನಾಡುತ್ತಿದ್ದರು. ಅವರ ಪೈಕಿ ಯತ್ನಾಳ, ಪಕ್ಷದ ಅಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕ ಸ್ಥಾನದ ಅಪೇಕ್ಷೆಯಲ್ಲಿದ್ದರು. ಅವರನ್ನೇ ಮುಂದೆ ಬಿಟ್ಟು, ವಿಜಯೇಂದ್ರ ಹಟಾವೋ ಹೋರಾಟ ಆರಂಭಿಸಿದಂತಿದೆ. ಭಿನ್ನರ ವಿರುದ್ಧ ಶಿಸ್ತು ಕ್ರಮ ಇಲ್ಲದೇ ಇರುವುದನ್ನು ನೋಡಿದರೆ, ವರಿಷ್ಠರ ಆಶೀರ್ವಾದವೇ ಇದ್ದಂತಿದೆ.

ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಬಣ ರಾಜಕೀಯಕ್ಕೆ ಕಾರಣರಾಗಿದ್ದ ಸಂತೋಷ್ ಈಗ ನೇರವಾಗಿ ಕಾಣಿಸಿಕೊಂಡಿಲ್ಲ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಕೆಡವಲು ಕಾರಣರಾದವರು ಈಗ ಒಂದುಗೂಡಿದ್ದಾರೆ. ವಿಜಯೇಂದ್ರ ವಿರುದ್ಧ ಈಗ ಗುಡುಗುತ್ತಿರುವವರೆಲ್ಲ ಸಂತೋಷ್ ಆಪ್ತ ವರ್ಗದಲ್ಲಿ ಇರುವವರು. ರಮೇಶ ಜಾರಕಿಹೊಳಿ, ಪ್ರಲ್ಹಾದ ಜೋಶಿಯವರ ಖಾಸಾ ಗುಂಪಿನಲ್ಲಿದ್ದಾರೆ.

ಈ ಎಲ್ಲದರ ಮಧ್ಯೆ, ಎಚ್.ಡಿ. ಕುಮಾರಸ್ವಾಮಿ ನಿರ್ದೇಶನದಂತೆ ಇಲ್ಲಿ ಬಿಜೆಪಿ ಚಟುವಟಿಕೆ ನಡೆಯುತ್ತಿದೆ. ಇದು ಮುಂದುವರಿದರೆ ವಿಜಯೇಂದ್ರ ಮತ್ತು ಕುಮಾರಸ್ವಾಮಿ ಮೇಲುಗೈ ಸಾಧಿಸಬಹುದು ಎಂಬ ಆತಂಕವೂ, ಹಿಂದೆ ಕುಮಾರಸ್ವಾಮಿಯವರಿಂದ ‘ಪೇಶ್ವೆ’ ಎಂದು ಕರೆಸಿಕೊಂಡವರಿಗೆ ಇದ್ದಂತಿದೆ. ಭಿನ್ನರ ಚಟುವಟಿಕೆ ಬಿರುಸಾಗಲೂ ಇದು ಕಾರಣವಾಗಿದೆ.

ತಮ್ಮ ಮನೆ ಭದ್ರಪಡಿಸಿಕೊಂಡು, ಅಲ್ಲಿ ನೆಮ್ಮದಿಯಿಂದ ಬದುಕುವುದು ಜಾಣರ ಲಕ್ಷಣ. ಆದರೆ, ತಮ್ಮ ಮನೆಯ ಗೋಡೆ ಅದುರಿ, ಗಳ ಚದುರಿರುವ ಹೊತ್ತಿನಲ್ಲೇ ಇನ್ನೊಬ್ಬರ ಮನೆ ಮುರಿಯುವ ಕೆಲಸ ದಡ್ಡರ ಗುಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.