ಗಿರೀಶ ಕಾಸರವಳ್ಳಿ ನಿರ್ದೇಶನದ ‘ಕೂರ್ಮಾವತಾರ’ ಚಲನಚಿತ್ರದಲ್ಲಿ ಗಾಂಧಿ ಜೀವನಕಥೆಯನ್ನು ಆಧರಿಸಿ ಟೆಲಿ ಸೀರಿಯಲ್ ರೂಪಿಸುವ ಪ್ರಸಂಗವಿದೆ. ಗಾಂಧಿಯನ್ನು ಕೊಲ್ಲುವ ಸನ್ನಿವೇಶದ ಚಿತ್ರೀಕರಣ ಧಾರಾವಾಹಿ ನಿರ್ದೇಶಕನ ಕಲ್ಪನೆಗೆ ತಕ್ಕಂತೆ ಬಾರದೆ, ಆ ದೃಶ್ಯವನ್ನು ಮತ್ತೆ ಮತ್ತೆ ಚಿತ್ರೀಕರಿಸಲಾಗುತ್ತದೆ.

ಗಾಂಧಿಕಥನಕ್ಕೆ ಒಳ್ಳೆಯ ಟಿಆರ್ಪಿ ಬಾರದ ತಲೆನೋವಿನಲ್ಲಿರುವ ನಿರ್ದೇಶಕನಿಗೆ, ಮಹಾತ್ಮ ಕೊಲೆಗೀಡಾಗುವ ದೃಶ್ಯದ ಮೂಲಕ ಧಾರಾವಾಹಿಯ ರೇಟಿಂಗ್ ಮೇಲೆತ್ತುವ ಉಮೇದು. ಆ ಪ್ರಯತ್ನದಲ್ಲಿ,
ಗಾಂಧೀಜಿ ಮತ್ತೆ ಮತ್ತೆ ಗುಂಡೇಟಿಗೆ ಈಡಾಗ ಬೇಕಾಗುತ್ತದೆ. ಗುಂಡೇಟಿನಿಂದ ಗಾಂಧೀಜಿ ಕುಸಿದುಬೀಳುವುದು, ಮತ್ತೆ ಮೇಲೇಳುವುದು, ಮತ್ತೆ ಗುಂಡೇಟು, ಮತ್ತೆ ಬೀಳುವ ಏಳುವ ಆಟ. ಗಾಂಧಿ ಹತ್ಯೆಯ ಆಟ ಮೇಲ್ನೋಟಕ್ಕೆ ಪ್ರಹಸನದಂತೆ ಕಾಣಿಸಿದರೂ, ಮಹಾತ್ಮ ಹಾಗೂ ಆತನ ತತ್ವಗಳಿಗೆ ‘ವರ್ತಮಾನ ಭಾರತ’ದಲ್ಲಿ ಮತ್ತೆ ಮತ್ತೆ ಪೆಟ್ಟುಬೀಳುತ್ತಿರುವ ವಿಪರ್ಯಾಸವನ್ನು ಆ ದೃಶ್ಯ ಮಾರ್ಮಿಕವಾಗಿ
ಕಟ್ಟಿಕೊಡುತ್ತದೆ. ‘ಹಿಂದೂ ಮಹಾಸಭಾ’ಕ್ಕೆ ಸೇರಿದ ಉತ್ತರ ಪ್ರದೇಶದ ಓರ್ವ ಕಾರ್ಯಕರ್ತೆ, ಗಾಂಧಿಯ ಫೋಟೊಕ್ಕೆ ಆಟಿಕೆ ಪಿಸ್ತೂಲ್ನಿಂದ ಶೂಟ್ ಮಾಡುವ ವಿಡಿಯೊ ಐದು ವರ್ಷಗಳ ಹಿಂದೆ ಸುದ್ದಿಯಾಗಿತ್ತು. ಅಹಿಂಸಾಮೂರ್ತಿಯನ್ನು ಮತ್ತೆ ಮತ್ತೆ ಕೊಲ್ಲುವ ಇಂಥ ಪ್ರಹಸನಗಳು ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಲೇ ಇವೆ. ಮಹಾತ್ಮನಿಗೆ ಪೆಟ್ಟುಕೊಡುವ ಈ ಆಟ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಜಾರಿಯಲ್ಲಿದೆ. ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾಂಸಾಹಾರಿಗಳನ್ನು ಕುರಿತು ಪ್ರಧಾನಿ ಆಡಿರುವ ಮಾತು ಹಾಗೂ ಭಾರತದ ರಾಜತಾಂತ್ರಿಕತೆಯಲ್ಲಿ ಹಿಂದುತ್ವದ ತಾತ್ವಿಕತೆಯ ತಿರುಳನ್ನು ಸೇರಿಸುವ ಬಿಜೆಪಿ ಪ್ರಣಾಳಿಕೆಯಲ್ಲಿನ ಆಶಯವನ್ನು ಗಮನಿಸಿದರೆ ಕೊಲ್ಲುವ ಪ್ರಹಸನದ ಸುಳಿವು ಸಿಗುತ್ತದೆ.

‘ಶ್ರಾವಣ ಮಾಸದಲ್ಲಿ ಮಾಂಸ ತಿಂದು ಅದರ ವಿಡಿಯೊ ಹರಿಯಬಿಡುವವರದ್ದು ಮೊಘಲರ ಮನಃಸ್ಥಿತಿ’ ಎಂದು ಪ್ರತಿಪಕ್ಷಗಳ ನಾಯಕರನ್ನುದ್ದೇಶಿಸಿ ಚುನಾವಣಾ ರ್ಯಾಲಿಯೊಂದರಲ್ಲಿ ಪ್ರಧಾನಿ ಹೇಳಿದ್ದಾರೆ. ‘ಸಸ್ಯಾಹಾರ ಅಥವಾ ಮಾಂಸಾಹಾರ ಸೇವಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಅವರು ಬಹುಸಂಖ್ಯಾತರ ಭಾವನೆಗಳಿಗೆ ನೋವುಂಟುಮಾಡುವ ಉದ್ದೇಶ ಹೊಂದಿದ್ದರು. ಮೊಘಲರಿಗೆ ಭಾರತದ ರಾಜರನ್ನು ಸೋಲಿಸಿದಾಗ ತೃಪ್ತಿ ಸಿಗಲಿಲ್ಲ. ಇಲ್ಲಿನ ದೇವಾಲಯಗಳನ್ನು ನಾಶ ಮಾಡಿದಾಗ ಮಾತ್ರ ತೃಪ್ತಿ ಸಿಗುತ್ತಿತ್ತು’ ಎಂದೂ ಪ್ರಧಾನಿ ಹೇಳಿದ್ದಾರೆ. ಅವರ ಮಾತಿನಲ್ಲಿ ಮಾಂಸಾಹಾರಿಗಳ ಬಗೆಗಿನ ಅಸಹನೆ ಸ್ಪಷ್ಟವಾಗಿದೆ. ಶ್ರಾವಣದಲ್ಲಿ ಮಾಂಸ ತಿನ್ನುವುದು ಅಪರಾಧ ಎನ್ನುವ ಅರ್ಥದ ಮಾತಂತೂ ದೇಶದ ಪ್ರಧಾನಿ ಬಾಯಿತಪ್ಪಿಯೂ ಆಡುವಂತಹದ್ದಲ್ಲ. ಸರ್ಕಾರದ ಸಾಧನೆಗಳನ್ನು ಮುಂದಿಟ್ಟು ಮತ ಕೇಳಬೇಕಾದ ನಾಯಕ, ಆಹಾರ ರಾಜಕಾರಣದ ಮೂಲಕ ಸಮಾಜದಲ್ಲಿ ಒಡಕುಂಟು ಮಾಡುವ ಪ್ರಯತ್ನ ನಡೆಸುವುದು, ಭಾರತೀಯ ರಾಜಕಾರಣ ತಲುಪಿರುವ ದುರವಸ್ಥೆಯನ್ನು ಸೂಚಿಸುವಂತಿದೆ.

ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಸಂವಿಧಾನವೇ ಸರ್ವಸ್ವವಾಗಿದ್ದು, ಸ್ವತಃ ಅಂಬೇಡ್ಕರ್ ಬಂದರೂ ಸಂವಿಧಾನವನ್ನು ರದ್ದುಗೊಳಿಸಲು ಈಗ ಸಾಧ್ಯವಿಲ್ಲ ಎಂದು ಮತ್ತೊಂದು ರ್ಯಾಲಿಯಲ್ಲಿ ಪ್ರಧಾನಿ ಹೇಳಿದ್ದಾರೆ. ಸಂವಿಧಾನಕ್ಕೆ ಬದ್ಧ ಎಂದು ಹೇಳುವ ವ್ಯಕ್ತಿಯೇ, ಆಹಾರದ ಹಕ್ಕನ್ನು ಗೇಲಿ ಮಾಡುವುದನ್ನು ನೋಡಿದರೆ ಅವರ ಸಂವಿಧಾನ ಬೇರೆಯದೇ ಇರಬಹುದೆಂದು ಭಾವಿಸಬೇಕಾಗುತ್ತದೆ.

ಭಾರತದ ರಾಜತಾಂತ್ರಿಕ ನೀತಿಯ ಕೇಂದ್ರದಿಂದ ಬುದ್ಧ ಹಾಗೂ ಗಾಂಧಿ ಮಾದರಿಗಳನ್ನು ಸ್ಥಾನಪಲ್ಲಟ
ಗೊಳಿಸಿ, ಆ ಜಾಗದಲ್ಲಿ ರಾಮ ಮತ್ತು ರಾಮಾಯಣವನ್ನು ತರುವುದಾಗಿ ಬಿಜೆಪಿ ಪ್ರಣಾಳಿಕೆ ಹೇಳುತ್ತಿರುವುದೂ, ಪಕ್ಷದ ಶ್ರದ್ಧೆ ಯಾವುದಕ್ಕೆನ್ನುವುದನ್ನು ಸೂಚಿಸುವಂತಿದೆ. ಬುದ್ಧ ಹಾಗೂ ಗಾಂಧಿ ಈ ದೇಶದ ಅಸ್ಮಿತೆಯಷ್ಟೇ ಅಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಗುರುತಿಸುವ ಚಹರೆಗಳೂ ಹೌದು. ‘ಬುದ್ಧನ ನಾಡು’, ‘ಗಾಂಧಿಯ ನಾಡು’ ಎನ್ನುವುದು ಭಾರತದ ಜಾಗತಿಕ ವಿಳಾಸಗಳಾಗಿವೆ. ಈಗ ಆ ವಿಳಾಸವನ್ನು ರಾಮನ ಹೆಸರಿಗೆ ಬದಲಿಸುವ ಚಿಂತನೆ ನಡೆದಿದೆ.

ದೇಶದ ಸಂವಿಧಾನ ಕಟ್ಟಿಕೊಡುವ ‘ಬಹುತ್ವ ಭಾರತ’ದ ಆಶಯಕ್ಕೂ ವಿಶ್ವವೇದಿಕೆಗಳಲ್ಲಿ ಭಾರತದ ಅಸ್ಮಿತೆಯ ಕುರುಹುಗಳಾಗಿ ಗಾಂಧಿ–ಬುದ್ಧನನ್ನು ಬಿಂಬಿಸುವುದಕ್ಕೂ ಸಂಬಂಧವಿದೆ. ಈ ಬಿಂಬಗಳನ್ನು ಪಲ್ಲಟಗೊಳಿಸುವ ಮೂಲಕ, ಭಾರತವನ್ನು ‘ಹಿಂದೂ ದೇಶ’ದ ಸ್ವರೂಪದಲ್ಲಿ ಬಿಂಬಿಸುವ ರಾಜಕಾರಣದ ದಾಳವಾಗಿ ರಾಮ ಬಳಕೆ ಆಗುತ್ತಿದ್ದಾನೆ. ಬದಲಾವಣೆಯ ಪಥದಲ್ಲಿ, ಗಾಂಧಿ ಮತ್ತು ಬುದ್ಧನ ದೇಶ ಹಿಂದೂಸ್ತಾನವಾಗಿ ಬದಲಾಗಿದೆ ಎಂದು ವಿಶ್ವಕ್ಕೆ ಸಂದೇಶ ಕೊಡುವ ಉದ್ದೇಶವೂ ಈ
ಪಲ್ಲಟದಲ್ಲಿದೆ.

ಬುದ್ಧ, ಗಾಂಧಿ ಮತ್ತು ಅಂಬೇಡ್ಕರ್ ಅವರ ಭಾರತ ಎಂದು ಹೇಳಿಕೊಳ್ಳಲಿಕ್ಕೆ ಅಪಾರವಾದ ನೈತಿಕಶಕ್ತಿ ಬೇಕು. ಸಂವಿಧಾನದ ಬಗ್ಗೆ ನಂಬಿಕೆ ಹಾಗೂ ಗೌರವ ಬೇಕು. ಸಂವಿಧಾನವನ್ನು ಗೌರವಿಸುವ ಯಾರೊಬ್ಬರಿಗೂ ಈ ದೇಶವನ್ನು ರಾಮನ ಹೆಸರಿನಲ್ಲಿ ಬಿಂಬಿಸುವ ಯೋಚನೆ ಬರುವುದು ಸಾಧ್ಯವಿಲ್ಲ. ರಾಜಕಾರಣ ಮತ್ತು ಭಕ್ತಿಯ ನಡುವಣ ಗೆರೆ ಅಳಿಸಿಹೋದಾಗ ಇಲ್ಲವೇ ಎಲ್ಲ ನಾಗರಿಕರನ್ನು ಸಮಾನರನ್ನಾಗಿ ನೋಡುವುದು ಸಾಧ್ಯವಾಗದೆ ಹೋದಾಗಲಷ್ಟೇ ಇಂಥ ಯೋಚನೆಗಳು ಬರುವುದು ಸಾಧ್ಯ.

ವಿಶ್ವ ವೇದಿಕೆಗಳಲ್ಲಿ ಭಾರತದ ಅಸ್ಮಿತೆಯಾಗಿ ರಾಮ ಮತ್ತು ರಾಮಾಯಣವನ್ನು ಪ್ರಚುರಪಡಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ರಾಮನ ಕುರಿತ ಪ್ರೀತಿ ಅಥವಾ ಭಕ್ತಿಯಿದೆ ಎಂದು ಯಾರೂ ಭಾವಿಸಬೇಕಾಗಿಲ್ಲ. ರಾಮಭಕ್ತರ ವೇಷದಲ್ಲಿರುವ ರಾಜಕಾರಣಿಗಳು, ಮೂಲ ರಾಮನನ್ನು ಹತ್ತಿಕ್ಕಿ ತಮ್ಮದೇ ಆದ ರಾಮನನ್ನು ರೂಪಿಸಿಕೊಂಡಿದ್ದಾರೆ. ಇಂದಿನ ರಾಮ ಸನ್ನಿವೇಶದ ಶಿಶು.

ಭಾರತೀಯ ಮೌಲ್ಯವ್ಯವಸ್ಥೆಯಲ್ಲಿ ಹಾಗೂ ಭಾರತೀಯರ ಭಾವಕೋಶದಲ್ಲಿ ರಾಮ ಹಾಗೂ ಕೃಷ್ಣನಿಗೆ ಬಹುದೊಡ್ಡ ಸ್ಥಾನವಿದೆ. ಆದರೆ, ಧಾರ್ಮಿಕ ಸಂಕೇತಗಳನ್ನು ದೇಶದ ಅಸ್ಮಿತೆಯ ರೂಪದಲ್ಲಿ ಬಿಂಬಿಸುವ ಪ್ರಯತ್ನ ಈ ಮಣ್ಣಿನ ಜಾತ್ಯತೀತ ಸ್ವರೂಪವನ್ನು ಗಾಸಿಗೊಳಿಸುವ ದುಸ್ಸಾಹಸ. ಬುದ್ಧ, ಗಾಂಧಿ,
ಅಂಬೇಡ್ಕರರನ್ನು ಪಕ್ಕಕ್ಕೆ ಸರಿಸಿ ದೇಶದ ಅಸ್ಮಿತೆಯನ್ನು ಜಾಗತಿಕ ನೆಲೆಯಲ್ಲಿ ಬಿಂಬಿಸಲು ಹೊರಡುವುದು, ದೇಶದ ವರ್ಚಸ್ಸನ್ನು ಕುಗ್ಗಿಸುವ ಪ್ರಯತ್ನವೇ ಆಗಿದೆ.

ಗಾಂಧೀಜಿ ಮತ್ತು ರಾಮನ ನಡುವಣ ಆಯ್ಕೆ, ಜನಪರ ಮತ್ತು ಜನಪ್ರಿಯತೆಗಳಲ್ಲಿ ನಮ್ಮ ಆದ್ಯತೆ ಯಾವುದಕ್ಕೆ ಎನ್ನುವುದನ್ನು ಸೂಚಿಸುವಂತಿದೆ. ಗಾಂಧೀಜಿಯ ಅನುಸರಣೆ ಜನಪರ ನಡವಳಿಕೆಯಾದರೆ, ರಾಮನನ್ನು ಮುಂದಿಟ್ಟುಕೊಳ್ಳುವುದು ವರ್ತಮಾನದಲ್ಲಿ ಜನಪ್ರಿಯ ವಾದ ತೀರ್ಮಾನ. ಸದ್ಯದ ಸರ್ಕಾರದ ಆದ್ಯತೆಗಳು ಸ್ಪಷ್ಟವಾಗಿವೆ. ಅಧಿಕಾರ ನಡೆಸುವವರಿಗೆ ಭಕ್ತಿಮಾರ್ಗದಲ್ಲಿ ಅನುಕೂಲ ಹೆಚ್ಚು. ಮಹಾತ್ಮನ ನೈತಿಕಶಕ್ತಿ ಅಡಿಗಡಿಗೆ ತೊಡಕು ಉಂಟುಮಾಡುವಂತಹದ್ದು. ಜನಸಾಮಾನ್ಯರ ಸಂಕಷ್ಟಗಳ ಬಗ್ಗೆ ಗಮನಸೆಳೆಯುವ ತೊಡಕಿನ ಗಾಂಧಿ ಮಾದರಿ ಈಗ ಅಪಥ್ಯ. ಅನುದಿನದ ತೊಡಕುಗಳ ಬಗ್ಗೆ ಮರೆವೆ ಉಂಟುಮಾಡುವ ಭಕ್ತಿಮಾರ್ಗವೇ ಅಧಿಕಾರ ಗಳಿಸುವ ಮತ್ತು ಉಳಿಸುವ ಶಕ್ತಿಮಾರ್ಗವಾಗಿ ಈಗ
ಚಾಲ್ತಿಯಲ್ಲಿರುವಂತಿದೆ.

ಈಗಿನ ಪ್ರಧಾನಿ ಅಧಿಕಾರಕ್ಕೆ ಬಂದ ಹೊಸದರಲ್ಲಿ ‘ಸ್ವಚ್ಛ ಭಾರತ’ ಅಭಿಯಾನ ಆರಂಭಿಸುವ ಮೂಲಕ ಮಹಾತ್ಮನನ್ನು ನೆನಪಿಸಿದ್ದರು. ನಂತರದ ಹತ್ತು ವರ್ಷಗಳಲ್ಲವರು ಗಾಂಧಿಯ ಜೀವನದ ಭಾಗವೇ ಆಗಿದ್ದ ಪರಧರ್ಮ ಮತ್ತು ಪರ ವಿಚಾರಗಳ ಸೈರಣೆಯನ್ನು ಮಾತು–ಕೃತಿಯಲ್ಲಿ ಅನುಸರಿಸಿದ್ದಕ್ಕೆ ನಿದರ್ಶನಗಳಿಲ್ಲ. ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ದೊರೆತರೆ ಸಂವಿಧಾನ ಬದಲಾವಣೆ ಮಾಡುತ್ತೇವೆಂದು ಹೇಳಿದ ಬಿಜೆಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವು ದಿರಲಿ, ಆ ಮಾತುಗಳಿಗೆ ಪ್ರತಿಕ್ರಿಯಿಸುವ ಗೋಜಿಗೂ ಪ್ರಧಾನಿ ಹೋಗಿಲ್ಲ. ಮಾಂಸಾಹಾರಿಗಳ ಬಗೆಗಿನ ಅವರ ಕಟಕಿಯು ಗಾಂಧಿ ಹಾಗೂ ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಷ್ಟೇ ಅಲ್ಲ, ಈ ದೇಶದ ಬಹುಸಂಖ್ಯಾತರ ಆಹಾರ ಪದ್ಧತಿಯ ಅಣಕವೂ ಹೌದು. ಆದರೆ, ಪ್ರಧಾನಿಯ ಮಾತಿನಿಂದ ಯಾವ ದೇಶವಾಸಿಗಳು ಗಾಸಿಗೊಳ್ಳ
ಬೇಕಾಗಿತ್ತೋ ಅವರು ಮೌನವಾಗಿರುವುದನ್ನು ನೋಡಿದರೆ, ಭಕ್ತಿಮಾರ್ಗದ ಮರೆವಿನ ಶಕ್ತಿ ಪರಿಣಾಮ ಕಾರಿಯಾಗಿ ಕೆಲಸ ಮಾಡುತ್ತಿರುವಂತಿದೆ. ಆ ಮರೆವೆಯನ್ನೇ ದೇಶದ ಅಸ್ಮಿತೆಯೆಂದು ವಿಶ್ವಮಟ್ಟದಲ್ಲೂ ಬಿಂಬಿಸುವ ಪ್ರಯತ್ನ, ಬಾಲರಾಮನನ್ನು ಚುಂಬಿಸಿದ ಸೂರ್ಯರಶ್ಮಿಯ ಅಡಿಯಲ್ಲೇ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.