ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ ಹೊಸ್ತಿಲಿನಲ್ಲಿದೆ. ಹಿಂದಿನ ಚುನಾವಣೆಯಲ್ಲಿ ಯಾವ ಸ್ಥಾನದಲ್ಲಿ ನವಾಜ್ ಷರೀಫ್ ಇದ್ದರೋ ಇದೀಗ ಆ ಸ್ಥಾನದಲ್ಲಿ ಇಮ್ರಾನ್ ಖಾನ್ ಇದ್ದಾರೆ. ಇಮ್ರಾನ್ ಕೈಯಲ್ಲಿದ್ದ ‘ಬ್ಯಾಟ್’ ಕೂಡ ಈಗ ಅವರ ಬಳಿ ಇಲ್ಲ. ಸರಳುಗಳ ಹಿಂದೆ ಬಂದಿಯಾಗಿರುವ ಒಂದು ಕಾಲದ ಕ್ರಿಕೆಟಿಗ, ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಮೈದಾನಕ್ಕೆ ಇಳಿದು ಆಡುವ ಅವಕಾಶವನ್ನೇ ಕಳೆದುಕೊಂಡಿದ್ದಾರೆ!

ಫೆಬ್ರುವರಿ 8ರಂದು ನಿಗದಿಯಾಗಿರುವ ಮತದಾನ ಒಂದು ಬಗೆಯ ಆತಂಕವನ್ನು ಸೃಷ್ಟಿಸಿದೆ. ದ್ವೇಷದ ರಾಜಕಾರಣ ಮತ್ತು ಸೇನೆಯ ಸರ್ವಾಧಿಕಾರಕ್ಕೆ ಹೆಸರಾಗಿರುವ ಪಾಕಿಸ್ತಾನದಲ್ಲಿ ಒಂದೊಮ್ಮೆ ಚುನಾವಣೆಯು ಮುಕ್ತವಾಗಿ ಮತ್ತು ಪಾರದರ್ಶಕವಾಗಿ ನಡೆಯದಿದ್ದರೆ ಜನ ದಂಗೆ ಏಳಬಹುದು, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಬಹುದು, ಹಿಂಸಾಚಾರಕ್ಕೆ ಆಸ್ಪದವಾಗಬಹುದು ಎಂಬ ಆತಂಕ ಇದೆ.

ದುರ್ಬಲ ಆರ್ಥಿಕತೆ, ಬೆಲೆ ಏರಿಕೆ, ನಿರುದ್ಯೋಗ, ನೈಸರ್ಗಿಕ ವಿಕೋಪಗಳ ಅಪಕ್ವ ನಿರ್ವಹಣೆ, ಆಡಳಿತದ ಭ್ರಷ್ಟಾಚಾರ, ದ್ವೇಷದ ರಾಜಕಾರಣ, ಸೇನೆಯ ರಾಜಕೀಯ ಹಸ್ತಕ್ಷೇಪ... ಹೀಗೆ ಪಾಕಿಸ್ತಾನವನ್ನು ಬಾಧಿಸುತ್ತಿರುವ ಹಲವು ಸಂಗತಿಗಳಿವೆ. ಆದರೆ ಪಾಕಿಸ್ತಾನದ ಚುನಾವಣೆ ವಿಷಯಾಧಾರಿತವಾಗಿ ನಡೆಯುವುದು ಕಡಿಮೆ. ಚುನಾವಣಾ ಪ್ರಚಾರ ಸಭೆಗಳು ನಡೆದರೂ, ಪರಸ್ಪರ ಆರೋಪ, ಪ್ರತ್ಯಾರೋಪಗಳು ಕೇಳಿಬಂದರೂ ಕೊನೆಗೆ ಮುಖ್ಯವಾಗುವುದು ಸೇನೆ ಯಾರ ಬೆಂಬಲಕ್ಕೆ ಇದೆ ಎನ್ನುವುದು!

ಪಾಕಿಸ್ತಾನದಲ್ಲಿ ಮೂರು ರಾಜಕೀಯ ಪಕ್ಷಗಳು ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಷರೀಫ್ ಕುಟುಂಬದ ನೇತೃತ್ವ ಇರುವ ಪಾಕಿಸ್ತಾನ್ ಮುಸ್ಲಿಂ ಲೀಗ್- ನವಾಜ್ (ಪಿಎಂಎಲ್– ಎನ್), ಭುಟ್ಟೊ– ಜರ್ದಾರಿ ಕುಟುಂಬದ ನಾಯಕತ್ವ ಇರುವ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಮತ್ತು ಈ ಎರಡಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ.

ಹಿಂದಿನ ಚುನಾವಣೆಯಲ್ಲಿ ಪಿಟಿಐ ಪಕ್ಷವನ್ನು ಸೇನೆ ಬೆಂಬಲಿಸಿತ್ತು. ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದ ಷರೀಫ್ ಪದಚ್ಯುತಗೊಂಡು ಕಾರಾಗೃಹ ಶಿಕ್ಷೆಗೆ ಒಳಪಟ್ಟಿದ್ದರು. ನಂತರ ಜಾಮೀನು ಪಡೆದು, ಅನಾರೋಗ್ಯದ ನೆಪವೊಡ್ಡಿ, ನಾಲ್ಕು ವಾರಗಳಲ್ಲಿ ಹಿಂದಿರುಗುವುದಾಗಿ ಹೇಳಿ ಇಂಗ್ಲೆಂಡಿಗೆ ತೆರಳಿ ಅಲ್ಲಿ ನಾಪತ್ತೆಯಾಗಿದ್ದರು. ಅವರನ್ನು ಜೀವಮಾನದ ಅವಧಿಗೆ ಚುನಾವಣೆಗಳಿಂದ ಅನರ್ಹಗೊಳಿಸಲಾಗಿತ್ತು.

ಸೇನೆಯ ಬೆಂಬಲದೊಂದಿಗೆ ಗೆದ್ದಿದ್ದ ಇಮ್ರಾನ್ ಖಾನ್ ಅವರಿಗೆ ಸೇನೆಯ ಒಲವನ್ನು ಹೆಚ್ಚು ದಿನಗಳವರೆಗೆ ಕಾಯ್ದುಕೊಳ್ಳಲು ಆಗಲಿಲ್ಲ. ಭ್ರಷ್ಟಾಚಾರದ ಆರೋಪ ಹೊತ್ತ ಇಮ್ರಾನ್ ನೇತೃತ್ವದ ಸರ್ಕಾರ ಅವಿಶ್ವಾಸ ಗೊತ್ತುವಳಿಯ ಮೂಲಕ ಪತನಗೊಂಡಿತು. ವಿರೋಧ ಪಕ್ಷಗಳೆಲ್ಲವೂ ಒಟ್ಟಾಗಿ ಸರ್ಕಾರ ರಚಿಸಿದವು.

ಇಮ್ರಾನ್ ಸಾರ್ವಜನಿಕ ಸಭೆಗಳನ್ನು ಆಯೋಜಿಸಿ ‘ಲಂಡನ್‌ನಲ್ಲಿ ಕೂತ ಷರೀಫ್ ನನ್ನ ಪದಚ್ಯುತಿಯ ಸೂತ್ರಧಾರ, ಅಮೆರಿಕ ಮತ್ತು ಸೇನೆಯ ಚಿತಾವಣೆಯಿಂದ ಸರ್ಕಾರ ಪತನಗೊಂಡಿದೆ’ ಎಂದು ಅಲವತ್ತುಕೊಂಡರು. ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಬಂಧನವಾದಾಗ ಹಲವೆಡೆ ಘರ್ಷಣೆ, ಹಿಂಸಾಚಾರ ನಡೆಯಿತು. ಇಮ್ರಾನ್ ಬೆಂಬಲಿಗರು ಸೇನೆ ಮತ್ತು ಐಎಸ್ಐ ಕಚೇರಿಗಳ ಮೇಲೆ ದಾಳಿ ಮಾಡಿದರು. ಇಮ್ರಾನ್ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ತೀರ್ಪು ಒಂದರ ಮೇಲೆ ಮತ್ತೊಂದು ಬಂದು, ಶಿಕ್ಷೆಯ ಅವಧಿ ಹೆಚ್ಚುತ್ತಾ ಹೋಯಿತು. ಅವರು ಜೈಲಿನಲ್ಲೇ ಇರುವಂತಾಯಿತು.

ಆದರೆ ಇಮ್ರಾನ್ ಖಾನ್ ಅವರ ಜನಪ್ರಿಯತೆ ಕುಸಿಯಲಿಲ್ಲ. ಇಮ್ರಾನ್ ಅನುಪಸ್ಥಿತಿಯಲ್ಲಿ ಇತರ ನಾಯಕರು ಸಾರ್ವಜನಿಕ ಸಭೆಗಳನ್ನು ಮಾಡಿದರು. ಹಲವೆಡೆ ಪ್ರತಿಭಟನಾ ಜಾಥಾ ನಡೆಯಿತು. ಆಗ ದ್ವೇಷ ರಾಜಕಾರಣ ಮತ್ತೊಂದು ಹಂತಕ್ಕೆ ಹೋಯಿತು. ಪಿಟಿಐ ಪಕ್ಷದ ಹಲವು ನಾಯಕರ ವಿರುದ್ಧ ಪ್ರಕರಣಗಳು ದಾಖಲಾದವು, ಕಾರ್ಯಕರ್ತರನ್ನು ಬಂಧಿಸಿ ಜೈಲಿನಲ್ಲಿ ಇಡಲಾಯಿತು.

ಸಂವಿಧಾನಬದ್ಧವಾಗಿ ಪಕ್ಷದ ಆಂತರಿಕ ಚುನಾವಣೆ ನಡೆಸಿಲ್ಲ ಎಂಬ ಕಾರಣದಿಂದ ಚುನಾವಣಾ ಆಯೋಗವು ಪಿಟಿಐ ಪಕ್ಷವನ್ನು ಅನೂರ್ಜಿತಗೊಳಿಸಿತು. ಪಕ್ಷದ ಚಿಹ್ನೆಯಾದ ‘ಬ್ಯಾಟ್’ ಗುರುತಿನ ಅಡಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ಆದೇಶ ಬಂತು. ಪಿಟಿಐ ಉಮೇದುವಾರರು ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ತಿರ್ಮಾನಿಸಿದರು. ಇಮ್ರಾನ್ ಖಾನ್ ಜೈಲಿನಿಂದಲೇ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿತು. ಪಾಕ್ ಸೇನೆಯ ಅವಕೃಪೆಗೆ ಭಾಜನರಾದರೆ ಏನಾದೀತು ಎಂಬುದಕ್ಕೆ ಇಮ್ರಾನ್ ಉದಾಹರಣೆಯಾದರು.

ಹಾಗಂತ ಪಾಕಿಸ್ತಾನದ ಸೇನೆಗೆ ತಾನು ಆಡಳಿತದ ಚುಕ್ಕಾಣಿ ಹಿಡಿಯಬೇಕು ಎಂಬ ಉಮೇದು ಸದ್ಯಕ್ಕೆ ಇದ್ದಂತಿಲ್ಲ. ಪ್ರಜಾಪ್ರಭುತ್ವ ರಾಷ್ಟ್ರದ ಸೋಗಿನಲ್ಲಿ ಹಿಂಬದಿಯಿಂದಲೇ ಆಡಳಿತ ನಿಯಂತ್ರಿಸಿದರೆ ಹೆಚ್ಚು ಅನುಕೂಲ ಎಂದು ಅದು ಭಾವಿಸಿದಂತಿದೆ. ಹಾಗಾಗಿ, ಅದು ಮತ್ತೊಮ್ಮೆ ನವಾಜ್ ಷರೀಫ್ ಅವರತ್ತ ನೋಡಿತು. ನವಾಜ್ ಷರೀಫ್ ಅವರಿಗೆ ಜಾಮೀನು ದೊರಕಿತು. ಚುನಾವಣೆಗಳಿಗೆ ಸ್ಪರ್ಧಿಸದಂತೆ ವಿಧಿಸಿದ್ದ ಜೀವಮಾನದ ಅವಧಿಯ ನಿರ್ಬಂಧವನ್ನು ಐದು ವರ್ಷಗಳಿಗೆ ತಗ್ಗಿಸಲಾಯಿತು. ಪಾಕಿಸ್ತಾನದ ಸೇನೆ ಮತ್ತು ನ್ಯಾಯಾಂಗ ಒಂದಕ್ಕೊಂದು ಪೂರಕವಾಗಿ ವರ್ತಿಸುತ್ತವೆ ಎಂಬುದು ಮತ್ತೊಮ್ಮೆ ಸಾಬೀತಾಯಿತು.

ಪಕ್ಷದ ಅಧಿಕೃತ ಚಿಹ್ನೆಯನ್ನು ಕಳೆದುಕೊಂಡ ಪಿಟಿಐ, ಇಮ್ರಾನ್ ಖಾನ್ ಅನುಪಸ್ಥಿತಿಯಲ್ಲಿ ಮತ್ತಷ್ಟು ಸೊರಗಿತು. ಪಾಕಿಸ್ತಾನದ ಚುನಾವಣೆಯಲ್ಲಿ ಮತ ಚಲಾಯಿಸುವ ದೊಡ್ಡ ಸಂಖ್ಯೆಯ ಮತದಾರರು ಅನಕ್ಷರಸ್ಥರು, ಚಿಹ್ನೆಯನ್ನು ಗಮನಿಸಿ ಮತ ನೀಡುವವರು. ವಿವಿಧ ಚಿಹ್ನೆಗಳ ಅಡಿಯಲ್ಲಿ ಪಿಟಿಐ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ, ಪಿಟಿಐ ಮತಗಳು ಇಡಿಯಾಗಿ ಈ ಅಭ್ಯರ್ಥಿಗಳಿಗೆ ಬೀಳುವುದು ಕಠಿಣ. ಹಾಗಾಗಿ, ಷರೀಫ್ ಅವರ ಪಕ್ಷ ಗೆದ್ದು ಸರ್ಕಾರ ರಚಿಸುವ ಉಮೇದಿನಲ್ಲಿದೆ.

ಆದರೆ ಸಿಂಧ್ ಪ್ರಾಂತ್ಯದಲ್ಲಿ ಪ್ರಾಬಲ್ಯ ಹೊಂದಿರುವ ಪಿಪಿಪಿಯ ಯುವ ಮುಂದಾಳು ಬಿಲಾವಲ್ ಭುಟ್ಟೊ ಮತ್ತೊಂದು ಬಗೆಯ ಲೆಕ್ಕಾಚಾರದಲ್ಲಿದ್ದಾರೆ. ಈ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಅವರು ವಿದೇಶಾಂಗ ಸಚಿವರಾಗಿ ಒಂದಿಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದರು. ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ, 34 ವರ್ಷದ ಬಿಲಾವಲ್ ವಿದೇಶಾಂಗ ಸಚಿವ ಹುದ್ದೆಗೆ ಏರಲು ಸಾಧ್ಯವಾಗಿದ್ದು ಸೇನೆಯ ಬೆಂಬಲದಿಂದಲೇ ಎನ್ನಲಾಗುತ್ತಿದೆ. ದೊಡ್ಡ ಸಂಖ್ಯೆಯ ಯುವ ಮತದಾರರು ಈ ಚುನಾವಣೆಯಲ್ಲಿ ಮತ ಚಲಾಯಿಸುವುದರಿಂದ, ಎಪ್ಪತ್ತು ದಾಟಿರುವ ಷರೀಫ್ ಮತ್ತು ಇಮ್ರಾನ್ ಅವರಿಗಿಂತ ಮೂವತ್ತರ ಮಧ್ಯದಲ್ಲಿರುವ ಬಿಲಾವಲ್ ಅವರಿಗೆ ಹೆಚ್ಚಿನ ಅನುಕೂಲವಾಗಬಹುದು ಎನ್ನುವ ಲೆಕ್ಕಾಚಾರ ಇದೆ.

ಸಿಂಧ್ ಪ್ರಾಂತ್ಯದ ಹೊರಗೆ ಉತ್ತಮ ಸಾಧನೆ ತೋರದ ಪಿಪಿಪಿ ಪಕ್ಷ ಈ ಬಾರಿ ಇಮ್ರಾನ್ ಖಾನ್ ಅವರ ಪಕ್ಷದ ಮತ ಕಸಿಯುವ ತಂತ್ರಗಾರಿಕೆ ರೂಪಿಸಿದೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದ್ವೇಷ ರಾಜಕಾರಣ ಕೊನೆಗೊಳ್ಳುತ್ತದೆ ಮತ್ತು ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸುತ್ತೇವೆ ಎಂದು ಬಿಲಾವಲ್ ಹೇಳುತ್ತಿದ್ದಾರೆ.

ಸದ್ಯದ ಮಟ್ಟಿಗಂತೂ ಸೇನೆಯ ಒಲವು ಷರೀಫ್ ಅವರ ಮೇಲಿರುವುದರಿಂದ ಅವರಿಗೆ ನಾಲ್ಕನೆಯ ಬಾರಿಗೆ ಪಾಕಿಸ್ತಾನದ ಪ್ರಧಾನಿಯಾಗುವ ಅದೃಷ್ಟ ಒಲಿಯಬಹುದು. ಭಾರತದ ದೃಷ್ಟಿಯಿಂದ ನೋಡುವುದಾದರೆ, ನವಾಜ್ ಷರೀಫ್ ತಮ್ಮ ಅವಧಿಯಲ್ಲಿ ಭಾರತದೊಂದಿಗೆ ಸಂಬಂಧವನ್ನು ವೃದ್ಧಿಸಿಕೊಳ್ಳುವತ್ತ ಹೆಜ್ಜೆ ಇರಿಸಿದ್ದ ನಾಯಕ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪದಗ್ರಹಣ ಸಮಾರಂಭಕ್ಕೆ ಷರೀಫ್ ಬಂದಿದ್ದು, ನಂತರ ಮೋದಿ ಅವರು ಷರೀಫ್ ಕುಟುಂಬದ ವಿವಾಹದ ಸಂದರ್ಭದಲ್ಲಿ ಅನಿರೀಕ್ಷಿತ ಹಾಜರಿ ಹಾಕಿದ್ದು ಈ ಹಿಂದೆ ನಡೆದಿದೆ.

ಭಾರತದ ಓಟ ಬೇರೆಯದೇ ಸ್ತರದಲ್ಲಿ ಇರುವುದರಿಂದ ಪಾಕಿಸ್ತಾನದಲ್ಲಿ ಯಾರು ಅಧಿಕಾರಕ್ಕೆ ಬಂದರೂ ಅದು ಭಾರತವನ್ನು ಹೆಚ್ಚು ಬಾಧಿಸುವುದಿಲ್ಲ.

ಅದೇನೇ ಇರಲಿ, ಪಾಕಿಸ್ತಾನದ ಸೇನೆಯ ಚಂಚಲ ಬುದ್ಧಿ ಈ ಎಪ್ಪತ್ತೈದು ವರ್ಷಗಳಲ್ಲಿ ಹಲವು ಬಾರಿ ಜಾಹೀರಾಗಿದೆ. ಒಂದೊಮ್ಮೆ ನವಾಜ್ ಷರೀಫ್ ಮತ್ತೊಮ್ಮೆ ಪ್ರಧಾನಿಯಾದರೂ ನೆಮ್ಮದಿಯ ನಿದ್ರೆ ಸಾಧ್ಯವಾಗಲಾರದು. ಪಾಕಿಸ್ತಾನವನ್ನು ಸಮಸ್ಯೆಗಳ ಕೂಪದಿಂದ ಮೇಲೆತ್ತಬೇಕಾದ ಸವಾಲಿನ ಜೊತೆಗೆ, ಸೇನೆಯ ಒಲವನ್ನು ಕಾಯ್ದುಕೊಳ್ಳುವ ಮಾರ್ಗವನ್ನೂ ಅವರು ಹುಡುಕಬೇಕಿದೆ. ಯಾವುದೇ ಪಕ್ಷದ ನೇತೃತ್ವದ ಸರ್ಕಾರಕ್ಕೆ ಎರಡನೆಯದೇ ದೊಡ್ಡ ಸವಾಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.