ಬಿರುಬೇಸಿಗೆಯ ಜೊತೆ ಚುನಾವಣೆ ಕೂಡ ಬಂದಿದ್ದರಿಂದ ಎಲ್ಲೆಡೆ ಭಾರೀ ಪ್ರಮಾಣದ ದೂಳು ಏಳುತ್ತಿದೆ. ಈ ದೂಳಿನ ವಿಶೇಷ ಏನೆಂದರೆ, ದೊಡ್ಡ ದೊಡ್ಡ ಕಣಗಳಿಗಿಂತ ಕಣ್ಣಿಗೆ ಕಾಣದ ಅತಿ ಸೂಕ್ಷ್ಮಕಣಗಳೇ ಹೆಚ್ಚು ಅಪಾಯಕಾರಿ. ಮೂಗು, ಗಂಟಲಿನ ಅಂಟುತಡೆಗಳನ್ನು ದಾಟಿ ಅವು ಸೀದಾ ಶ್ವಾಸನಾಳದ ತಳಕ್ಕೇ ಇಳಿದು ರಕ್ತಕ್ಕೆ ಸೇರಿಕೊಳ್ಳುತ್ತವೆ.

ಮೊನ್ನೆ ಏಪ್ರಿಲ್ 7ರಂದು ‘ವಿಶ್ವ ಆರೋಗ್ಯ ದಿನ’ದ ಸಂದರ್ಭದಲ್ಲಿ ಭಾರತದ ಮಾನವನ್ನು ಬೀದಿಗೆ ತರುವಂಥ ವರದಿಯೊಂದು ಬಿಡುಗಡೆಯಾಯಿತು. ಪ್ರಪಂಚದ ಅತ್ಯಂತ ಕೊಳೆಗಾಳಿ ಇರುವ 20 ನಗರಗಳ ಪೈಕಿ ಭಾರತದಲ್ಲೇ 15 ನಗರಗಳಿವೆ ಎಂದು ‘ಜಾಗತಿಕ ವಾಯು ಗುಣಮಟ್ಟ ಸ್ಥಿತಿಗತಿ ವರದಿ- 2019’ ಹೇಳಿದೆ. ಕಳೆದ ಐದಾರು ವರ್ಷಗಳಿಂದಲೂ ಈ ದುಃಸ್ಥಿತಿಗತಿ ನಮಗೆ ಗೊತ್ತೇ ಇತ್ತು ಅನ್ನಿ. ವಿಶೇಷ ಏನೆಂದರೆ- ನಮ್ಮಲ್ಲಿ ಸಕ್ಕರೆ ಕಾಯಿಲೆ ಅತಿಯಾಗಲು ಈ ಸೂಕ್ಷ್ಮಕಣಗಳೇ ಪ್ರಮುಖ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ. (ದೂಳಿನ ದೊಡ್ಡ ಕಣಗಳಿಗೆ ವಿಜ್ಞಾನಿಗಳು ಪಿಎಮ್ 10 ಎನ್ನುತ್ತಾರೆ; ಚಿಕ್ಕ ಕಣಗಳಿಗೆ ಪಿಎಮ್ 2.5 ಎನ್ನುತ್ತಾರೆ. (ಪಿಎಮ್ ಅಂದರೆ ಇಲ್ಲಿ ಪ್ರೈಮ್ ಮಿನಿಸ್ಟರ್ ಅಲ್ಲ. ಪಿಎಮ್ 2.5 ಅಂದರೆ- ಎರಡೂವರೆ ಮೈಕ್ರೊಮೀಟರ್ ಗಾತ್ರದ ‘ಪಾರ್ಟಿಕ್ಯುಲೇಟ್ ಮ್ಯಾಟರ್’, ಅರ್ಥಾತ್ ಕಣ ದ್ರವ್ಯಗಳು. ಅಂದಹಾಗೆ, ಇಂದಿನ ಅಂಕಣದಲ್ಲಿ ಪಿಎಮ್ ಕೂಡ ಬರಲಿದ್ದಾರೆ ಅನ್ನಿ.)

ಭಾರತವನ್ನು ‘ಮಧುಮೇಹದ ರಾಜಧಾನಿ’ ಎಂತಲೇ ಕರೆಯಲಾಗುತ್ತಿದೆ. ಬೇಕರಿ ತಿನಿಸುಗಳ ಅತಿಸೇವನೆ, ಸಿಹಿ ಸೇವನೆ ಮತ್ತು ಬೊಜ್ಜು ಹೆಚ್ಚುತ್ತಿರುವುದೇ ಅದಕ್ಕೆ ಕಾರಣವೆಂದು ಅವರಿವರು ಹೇಳುತ್ತಿದ್ದರು. ಹಾಗಿದ್ದರೆ ಹಿತಮಿತವಾಗಿ ಸಿಹಿ ಸೇವಿಸುವ ಸಣಕಲು ಜನರಿಗೂ ಸಕ್ಕರೆ ಕಾಯಿಲೆ ಏಕೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿರಲಿಲ್ಲ. ಈ ವರದಿಯಲ್ಲಿ ಅದಕ್ಕೆ ಉತ್ತರವಿದೆ: ದೂಳಿನ ಅತಿಸೂಕ್ಷ್ಮ ಕಣಗಳು (ಪಿಎಮ್ 2.5) ರಕ್ತನಾಳಗಳಿಗೆ ನುಗ್ಗುತ್ತವೆ. ಅಲ್ಲಿ ನಮ್ಮ ಹಾರ್ಮೋನ್‍ಗಳನ್ನು ಸಮಸ್ಥಿತಿಯಲ್ಲಿಡುವ ಕೆಲವು ಒಳಸುರಿಗಳನ್ನು ಇವು ಏರುಪೇರು ಮಾಡುತ್ತವೆ. ಅದರಿಂದಾಗಿ ಸಕ್ಕರೆ ಕಾಯಿಲೆ- ದೊಡ್ಡವರಿಗಷ್ಟೇ ಅಲ್ಲ, ಮಕ್ಕಳಿಗೂ ಬರುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅಂದಮೇಲೆ ಈ ದೇಶವ್ಯಾಪಿ ಕಾಯಿಲೆಗೆ ಭಾರತೀಯ ವೈದ್ಯವಿಜ್ಞಾನಿಗಳು ಔಷಧವನ್ನು ತಯಾರಸಿರಬೇಕಲ್ಲವೆ? ಹೌದು, ಅವಸರದಲ್ಲಿ ‘ಬಿಜಿಆರ್-34’ ಮತ್ತು ‘ಆಯುಷ್ 82’ ಹೆಸರಿನ ಮಾತ್ರೆ, ಕ್ಯಾಪ್ಸೂಲ್‍ಗಳನ್ನು ಬಿಡುಗಡೆ ಮಾಡಿ, ಅಲ್ಲೂ ಭಾರತದ ಮಾನವನ್ನು ದೂಳುಪಾಲು ಮಾಡಿದ್ದಾರೆ. ಇತ್ತೀಚೆಗೆ ನಮ್ಮದೇ ‘ಏ-ಸ್ಯಾಟ್’ ಕ್ಷಿಪಣಿಯನ್ನು ಚುನಾವಣೆಗೆ ಮುಂಚೆ ಉಡಾಯಿಸಿ ನಮ್ಮದೇ ಉಪಗ್ರಹವನ್ನು ಚಿಂದಿ ಮಾಡಿ ಭಾರತ ‘ನಾಸಾ’ದಿಂದಲೂ ಟೀಕೆಗೊಳಗಾಯಿತಲ್ಲ? ಹಾಗೇ ನಾವೇ ಸೃಷ್ಟಿಸಿಕೊಂಡ ಮಧುಮೇಹಕ್ಕೆ ನಮ್ಮದೇ ಔಷಧ ತಯಾರಿಸಿ ವಿಜ್ಞಾನಿಗಳು ಅಂತಾರಾಷ್ಟ್ರೀಯ ವೈದ್ಯರಂಗದಲ್ಲಿ ಹೆಸರು ಕೆಡಿಸಿಕೊಂಡಿದ್ದಾರೆ. ಎರಡೂ ಸಂದರ್ಭಗಳಲ್ಲಿ ಪ್ರಧಾನಿ ಮೋದಿಯವರಿಂದ ಹೊಗಳಿಸಿಕೊಳ್ಳುವ ಉತ್ಸಾಹದಲ್ಲಿ ಅವರ ಬಿಂಬಕ್ಕೂ ಮಸಿ ತಗಲುವಂತೆ ಮಾಡಿದ್ದಾರೆ.

ಆಗಿದ್ದಿಷ್ಟೆ: ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೊಪಥಿ (AYUSH) ಈ ಐದು ಸಾಂಪ್ರದಾಯಿಕ ವೈದ್ಯಪದ್ಧತಿಗೆ ಪ್ರೋತ್ಸಾಹ ನೀಡಲೆಂದು ಹಿಂದಿನ ಯುಪಿಎ ಸರ್ಕಾರ, ಆರೋಗ್ಯ ಸಚಿವಾಲಯದಲ್ಲಿ ‘ಆಯುಷ್’ ಹೆಸರಿನ ವಿಭಾಗವನ್ನು ಆರಂಭಿಸಿತು. ಎನ್‍ಡಿಎ ಸರ್ಕಾರ ‘ಆಯುಷ್’ಗೆ ಪ್ರತ್ಯೇಕ ಸಚಿವಾಲಯವನ್ನೇ ರೂಪಿಸಿತು. ಆಯುರ್ವೇದದಲ್ಲಿ ಹೇಳಲಾದ ಐದು ಗಿಡಮೂಲಿಕೆಗಳ ಸಾರವನ್ನು ಸಂಗ್ರಹಿಸಿ ಸಿಎಸ್‍ಐಆರ್ ವಿಜ್ಞಾನಿಗಳು ಮಧುಮೇಹದ ‘ಬಿಜಿಆರ್’ (ಬ್ಲಡ್ ಗ್ಲೂಕೊಸ್ ರೆಗ್ಯುಲೇಟರ್) ಮಾತ್ರೆ ಸಿದ್ಧಗೊಳಿಸಿದರು. ಮೋದಿಯವರು ಈ ವಿಜ್ಞಾನಿಗಳನ್ನು ಹೊಗಳಿ ಅಟ್ಟಕ್ಕೇರಿಸಿದರು. ವೈದ್ಯಕೀಯದ ಯಾವುದೇ ಬಿಗಿ ನಿಯಮ ಅನುಸರಿಸದೆ, ಪ್ರಯೋಗಾಲಯದ ಯಾವ ಕಟ್ಟುಪಾಡುಗಳನ್ನೂ ಪಾಲಿಸದೆ, ಪೇಟೆಂಟ್ ಕೂಡ ಪಡೆಯದೆ, ಸುರಕ್ಷಾ ಮಾನದಂಡಗಳಿಲ್ಲದೆ ಅಂಗಡಿಗಳಿಗೆ ಆ ಔಷಧ ಬಂತು. ಮೋದಿಯವರು ಹೊಗಳಿದ್ದು ಯುಟ್ಯೂಬಿನಲ್ಲಿ ವೈರಲ್ಲಾಗಿ ಅದ್ಧೂರಿ ಪ್ರಚಾರ ಸಿಕ್ಕಿತು. ಅದು ಉತ್ತಮ ಔಷಧವೆ, ರಕ್ತದ ಸಕ್ಕರೆಯನ್ನು ಅಪಾಯದ ಮಟ್ಟಕ್ಕೆ ತಗ್ಗಿಸುತ್ತದೆಯೆ? ಅಡ್ಡಪರಿಣಾಮ ಇಲ್ಲವೆ? ಏನೇನೂ ಗೊತ್ತಿಲ್ಲ. ಏಕೆಂದರೆ ವ್ಯವಸ್ಥಿತ ಸಂಶೋಧನೆಯೇ ಆಗಿಲ್ಲ. ವ್ಯವಸ್ಥಿತ ಪ್ರಚಾರ ಮಾತ್ರ ಆಗಿದೆ.

ಆಯುರ್ವೇದದಲ್ಲಿ ಸತ್ವ ಇದ್ದರೆ ಆಧುನಿಕ ವಿಜ್ಞಾನ ಅದನ್ನು ಎತ್ತಿ ಹೇಳಬೇಕು ಹೌದು. ಆದರೆ ನಮ್ಮ ವಿಜ್ಞಾನಿಗಳು ತಮ್ಮ ಎಡಬಿಡಂಗಿ ಸಂಶೋಧನೆಯನ್ನು ಢೋಂಗಿ ಪತ್ರಿಕೆಯಲ್ಲಿ ಪ್ರಕಟಿಸಿ, ಉಲ್ಟಾ ಕೆಲಸ ಮಾಡಿದ್ದಾರೆ. ಹೋಲಿಕೆಗೆ ಚೀನೀ ವಿಜ್ಞಾನಿಗಳನ್ನು ನೋಡಿ: ಅವರು ಮಲೇರಿಯಾ ಜ್ವರಕ್ಕೆ ಬಳಸುತ್ತಿದ್ದ ಸಾಂಪ್ರದಾಯಿಕ ಆರ್ಟಿಮೀಸಿಯಾ (ನಾಗದೋನಾ) ಸಸ್ಯದ ಮೇಲೆ ಹೊಸ ಸಂಶೋಧನೆ ಮಾಡಿ ನೊಬೆಲ್ ಪಡೆದಿದ್ದಾರೆ. ನಮ್ಮವರು ಅಪಖ್ಯಾತಿ ಪಡೆದಿದ್ದಾರೆ.

ಆ ಕತೆಗೆ ಈಗ ಇನ್ನೊಂದು ಅಪ್ರಿಯ ತಿರುವು ಸಿಕ್ಕಿದೆ. ಗಿಡಮೂಲಿಕೆಗಳ ಸಾಚಾಸತ್ವವನ್ನು ಯಾರು ಅಧ್ಯಯನ ಮಾಡಬೇಕು? ಆಯುರ್ವೇದದ ಹೊಗಳುಭಟ್ಟರು ಆ ಕೆಲಸ ಮಾಡಬಾರದು; ಬೇರೆ ವೈದ್ಯವಿಜ್ಞಾನಿಗಳು ಪರೀಕ್ಷೆ ಮಾಡಬೇಕು ತಾನೆ? ಹಾಗೆ ಮಾಡಕೂಡದು ಎಂಬಂತೆ ‘ಆಯುಷ್’ ಮಂತ್ರಾಲಯ ದಿಗ್ಬಂಧನ ಹಾಕಿದ್ದು ಮೊನ್ನೆ ಏಪ್ರಿಲ್ 2ರಂದು ಬಹಿರಂಗವಾಗಿದೆ. ‘ಆಯುಷ್ ಖ್ಯಾತಿಗೆ ಅಪಚಾರ ಆಗುವಂಥ ಯಾವುದೇ ಸಂಶೋಧನೆ ಕೈಗೊಳ್ಳುವ ಮುನ್ನ ಆಯುಷ್ ವೈದ್ಯತಜ್ಞರ ಅನುಮೋದನೆ ಪಡೆಯಬೇಕು’ ಎಂದು ಸಚಿವಾಲಯ ಸುತ್ತೋಲೆ ಹೊರಡಿಸಿದೆ. ಅಂಥ ಸಂಶೋಧನೆಗಳ ಫಲಿತಾಂಶ ಪ್ರಕಟಿಸುವ ವೈಜ್ಞಾನಿಕ ಪತ್ರಿಕೆಗಳಿಗೂ ಎಚ್ಚರಿಕೆ ಕೊಡಲಾಗಿದೆ. ಸಹಜವಾಗಿಯೇ ಇದು ಸಾಚಾ ವಿಜ್ಞಾನಿಗಳನ್ನು ಕೆರಳಿಸಿದೆ. ‘ಆಯುರ್ವೇದ ಎಂದರೆ ಅದು ಅನುಭವವನ್ನು ಆಧರಿಸಿದ ಜ್ಞಾನವೇ ಹೊರತು ಸಾಕ್ಷ್ಯ ಆಧರಿಸಿದ ವಿಜ್ಞಾನವಲ್ಲ; ಸಸ್ಯೌಷಧಗಳನ್ನು ನಾನು ಪ್ರಯೋಗಕ್ಕೆ ಒಳಪಡಿಸದಂತೆ ನಿರ್ಬಂಧಿಸಲು ಇವರು ಯಾರು?’ ಎಂಬರ್ಥದಲ್ಲಿ ಬನಾರಸ್ ಹಿಂದೂ ವಿವಿಯ ಪ್ರೊ. ಸುಭಾಸ್ ಲಖೋಟಿಯಾ ಆಕ್ಷೇಪಣೆ ಎತ್ತಿದ್ದಾರೆ. ಇನ್ನೂ ತಮಾಷೆ ಏನೆಂದರೆ ವಿಜ್ಞಾನ ಪತ್ರಿಕೆಗಳ, ಅದೂ ವಿದೇಶೀ ಪತ್ರಿಕೆಗಳ ಸಂಪಾದಕರ ಮೇಲೆ ಇವರು ಹೇಗೆ ದಿಗ್ಬಂಧನ ಹೇರಲು ಸಾಧ್ಯ?

ಅದು ಹೇಗೂ ಇರಲಿ, ಈಗ ಚುನಾವಣಾ ಕಣ ಮತ್ತು ದೂಳುಕಣಗಳತ್ತ ಮತ್ತೆ ಬರೋಣ: ಬಿಸಿಲಿನಲ್ಲಿ ಪ್ಲಾಸ್ಟಿಕ್ ತುಣುಕುಗಳೂ ಪೆಡಸಾಗಿ ನ್ಯಾನೊ ಕಣಗಳಾಗಿ ಗಾಳಿಯ ಮೂಲಕ ನಮ್ಮ ರಕ್ತಕ್ಕೆ ಸೇರುತ್ತವೆ. ಅವು ಹೊಮ್ಮಿಸುವ ಡಯಾಕ್ಸಿನ್, ಫ್ಯೂರಾನ್ ಮತ್ತು ಬಿಸ್ಫಿನೈಲ್-ಬಿ ವಿಷಗಳು ಸಂತಾನಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತವೆ. ಬಿಸಿಲಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಹೊಗೆಯಲ್ಲಿರುವ ನೈಟ್ರೊಜನ್ ಕಣಗಳು ವಿಷಕಾರಿ ಓಝೋನ್ ಅನಿಲವನ್ನು ಉತ್ಪಾದಿಸುತ್ತವೆ. ಓಝೋನ್ ತೀರ ಎತ್ತರದಲ್ಲಿದ್ದರೆ ಪೃಥ್ವಿಗೆ ರಕ್ಷಾಕವಚವಾಗುತ್ತದೆ; ನಮ್ಮೊಳಗೇ ಸೇರಿಕೊಂಡರೆ ಶರೀರವೇ ನಂಜಿನ ಗೂಡಾಗುತ್ತದೆ. ಇನ್ನು, ಮನೆಯೊಳಗಿನ ಸೌದೆ ಒಲೆಯಿಂದ ಹೊಮ್ಮುವ ಸೂಕ್ಷ್ಮಕಣಗಳೂ ರಕ್ತಹೀನತೆಗೆ ಕಾರಣವಾಗುತ್ತವೆ. ಅದಕ್ಕೇ ‘ಉಜ್ವಲಾ’ ಯೋಜನೆಯನ್ನು ಜಾರಿಗೆ ತಂದು ಬಡವರಿಗೆ ಅನುಕೂಲ ಮಾಡಿದ್ದಾಗಿ ಮೋದಿವಾದಿಗಳು ಹೇಳುತ್ತಾರಾದರೂ ವಾಸ್ತವ ಬೇರೆಯೇ ಇದೆ: ಉತ್ತರದ ನಾಲ್ಕು ರಾಜ್ಯಗಳಲ್ಲಿ ರೈಸ್ ಸಂಸ್ಥೆಯವರು ನಡೆಸಿದ ಸಮೀಕ್ಷೆಗಳ ಪ್ರಕಾರ ಶೇ 85ರಷ್ಟು ಫಲಾನುಭವಿಗಳು ಅಡುಗೆ ಅನಿಲವನ್ನು ಮೂಲೆಗೊತ್ತಿ ಮತ್ತೆ ಸೌದೆ ಒಲೆಗೇ ಮೊರೆ ಹೋಗಿದ್ದಾರೆ. ಅನಿಲಕ್ಕೆ ಹಣ ಸುರಿಯುವ ಬದಲು ಕೃಷಿಕಸ, ಪ್ಲಾಸ್ಟಿಕ್ ಕಸದಲ್ಲೇ ಒಲೆ ಉರಿಸುತ್ತಾರೆ. ಆಮೇಲೆ ಆಸ್ಪತ್ರೆಗೆ ಹಣ ಸುರಿಯಲಾಗದೇ ತಪಿಸುತ್ತಾರೆ.

ಇದ್ದುದರಲ್ಲಿ ಸಂತಸ ಏನೆಂದರೆ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಈಗಿನ ಪ್ರಣಾಳಿಕೆಗಳಲ್ಲಿ ನಗರಗಳ ವಾಯುಮಾಲಿನ್ಯಕ್ಕೆ ತಡೆ ಹಾಕುವುದಾಗಿ ಹೇಳಿವೆ. ಪ್ರಣಾಳಿಕೆ ಹೇಗೂ ಇರಲಿ, ನಗರಗಳಲ್ಲಿ ಪ್ರಣಾಳ ಶಿಶುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಒಂದು ಮಗುವಿಗಾಗಿ ಹೈಟೆಕ್ ಆಸ್ಪತ್ರೆಗಳ ಎದುರು, ಆಯುರ್ವೇದ ಪಂಡಿತರ ಎದುರು, ಢೋಂಗಿ ಸ್ವಾಮಿಗಳ ಎದುರು ಕ್ಯೂ ಹೆಚ್ಚುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.