ಉತ್ತರಾಖಂಡದ ಹಲ್ದ್ವಾನಿ ಪಟ್ಟಣದಲ್ಲಿ ಕಳೆದ ವಾರವಷ್ಟೆ ಪತ್ರಕರ್ತರ ಸಂತೆ ನೆರೆದಿತ್ತು. ಭಾರತೀಯ ರೈಲ್ವೆಗೆ ಸೇರಿದ್ದ ಸ್ಥಳದಲ್ಲಿ ಕಟ್ಟಲಾಗಿದ್ದ ನಾಲ್ಕು ಸಾವಿರಕ್ಕೂ ಹೆಚ್ಚು ಕಟ್ಟಡಗಳನ್ನು ಒಂದೇ ವಾರದಲ್ಲಿ ಖಾಲಿ ಮಾಡಬೇಕೆಂದು ಅಲ್ಲಿನ ಉಚ್ಚ ನ್ಯಾಯಾಲಯ ತೀರ್ಪು ನೀಡಿದ್ದು ದೊಡ್ಡ ಸುದ್ದಿಯಾಗಿತ್ತು. ಈಗ ಅಲ್ಲೇ ತುಸು ಉತ್ತರಕ್ಕೆ, ಅದೇ 79.5ನೇ ರೇಖಾಂಶದಲ್ಲಿರುವ ಜೋಶಿಮಠ ಎಂಬ ಪಟ್ಟಣದಲ್ಲಿ ಸುದ್ದಿ ಮಾಧ್ಯಮಗಳು ಬೀಡು ಬಿಟ್ಟಿವೆ. ಅಲ್ಲಿ ಬಿರುಕು ಬಿಟ್ಟ 600ಕ್ಕೂ ಹೆಚ್ಚು ಮನೆಗಳನ್ನು ತೆರವು ಮಾಡಿಸಲಾಗುತ್ತಿದೆ. ಪಟ್ಟಣವನ್ನು ಖಾಲಿ ಮಾಡಿಸಿದರೆ ಸಾಕೆ ಅಥವಾ ಸಮೀಪದ ಅಣೆಕಟ್ಟು ಯೋಜನೆಯನ್ನೂ ಹೆದ್ದಾರಿ ವಿಸ್ತರಣೆಯನ್ನೂ ಕೈಬಿಡಬೇಕೆ ಎಂಬ ಬಗ್ಗೆ ಮೊನ್ನೆ ಸೋಮವಾರ ಪ್ರಧಾನ ಮಂತ್ರಿಯವರ ಕಚೇರಿಯಲ್ಲಿ ಉನ್ನತ ಮಟ್ಟದ ತುರ್ತು ಸಭೆಯನ್ನು ಆಯೋಜಿಸಲಾಗಿತ್ತು. ಅದೇ ದಿನ ಪ್ರಧಾನಿಯವರು ‘ಭಾರತೀಯ ಪ್ರವಾಸೀ ದಿವಸ್’ ಉದ್ಘಾಟನೆಗೆಂದು ಇಂದೋರ್ಗೆ ಹೋಗಿದ್ದರು.

ಹಿಮಪ್ರವಾಸಿಗರ ಪ್ರವೇಶದ್ವಾರ ಎಂದೇ ಹೆಸರಾದ ಜೋಶಿಮಠದ ಮೂಲ ಹೆಸರು ಜ್ಯೋತಿರ್ಮಠ. ಆದಿ ಶಂಕರಾಚಾರ್ಯರು ಭಾರತದ ನಾಲ್ಕು ದಿಕ್ಕಿಗೆ ಸ್ಥಾಪಿಸಿದ ನಾಲ್ಕು ಮಠಗಳಲ್ಲಿ (ಪುರಿ, ಶೃಂಗೇರಿ, ದ್ವಾರಕಾ ಮತ್ತು ಜ್ಯೋತಿರ್ಮಠ) ಇದೂ ಒಂದು. ಅದು ಈಗ ಪುಣ್ಯ ಕ್ಷೇತ್ರವಾಗಿ ಅಷ್ಟೇ ಅಲ್ಲ, ಚಾರ್ಧಾಮ್ ಯಾತ್ರಾರ್ಥಿಗಳಿಗೆ, ಪರ್ವತಾರೋಹಣದಂಥ ಸಾಹಸ ಯಾತ್ರಿಗಳಿಗೆ ಮತ್ತು ಹೂಗಳ ಕಣಿವೆಯಂಥ ರಮ್ಯ ಪ್ರವಾಸಕ್ಕೂ ನೂಕುನುಗ್ಗಲ ದ್ವಾರವಾಗಿದೆ. ಆಯಕಟ್ಟಿನ ಮಿಲಿಟರಿ ನೆಲೆಯಿದೆ. ಅಲ್ಲಿಂದ 11 ಕಿ.ಮೀ. ದೂರದಲ್ಲಿರುವ ಔಲಿ ಎಂಬಲ್ಲಿ ಸ್ಕೀಯಿಂಗ್ ಎಂಬ ಜಾರುಕ್ರೀಡೆಯ ಸೌಲಭ್ಯವೂ ಸಜ್ಜಾಗಿದ್ದು ಅಲ್ಲಿಗೆ ಹೋಗಲು ನಿರ್ಮಿಸಿದ ಹಗ್ಗದ ಮಾರ್ಗವು ಏಷ್ಯ ಖಂಡದ ಅತಿ ಉದ್ದನ್ನ ರೋಪ್ವೇ ಎನ್ನಿಸಿಕೊಂಡಿದೆ. ಚಾರ್ಧಾಮ್ ಯಾತ್ರಿಕರಿಗೆಂದು ನಾಲ್ಕು ಪಥಗಳ ಹೆದ್ದಾರಿ ನಿರ್ಮಾಣ ನಡೆದಿದೆ. ಜೋಶಿಮಠದಿಂದ 10 ಕಿ.ಮೀ. ದೂರದಲ್ಲಿ ತಪೋವನವಿಷ್ಣುಗಢ ಎಂಬಲ್ಲಿ ಜಲವಿದ್ಯುತ್ತಿಗೆಂದು ಸುರಂಗ ಕೊರೆತ ನಡೆದಿದೆ. ಅದಕ್ಕೆಂದು ಧೌಲಿಗಂಗಾ ಮತ್ತು ರಿಷಿಗಂಗಾ ಎಂಬ ಉಪನದಿಗಳಿಗೆ ಅಣೆಕಟ್ಟು ಕಟ್ಟಲಾಗಿದ್ದು ಕಳೆದ ಫೆಬ್ರುವರಿಯಲ್ಲಿ ಅನಿರೀಕ್ಷಿತವಾಗಿ ಮೇಘಸ್ಫೋಟ ಆಗಿದ್ದರಿಂದ ಹಠಾತ್ ಪ್ರವಾಹ ಬಂದು ರಸ್ತೆ, ಸೇತುವೆ, ಅಣೆಕಟ್ಟುಗಳನ್ನು ಧ್ವಂಸ ಮಾಡಿತು. ಆ ದುರಂತದಲ್ಲಿ ಸುರಂಗ ನಿರ್ಮಾಣದ ಭಾರೀ ಯಂತ್ರಗಳ ಸಮೇತ 160ಕ್ಕೂ ಹೆಚ್ಚು ಜನ ಭೂಗತರಾಗಿ ಬರೀ 31 ಜನರ ಶವ ಸಿಕ್ಕಿತ್ತು. ಹತ್ತು ವರ್ಷಗಳ ಹಿಂದೆ 2013ರಲ್ಲಿ ಇಂಥದ್ದೇ ಹಠಾತ್ ಪ್ರವಾಹದಲ್ಲಿ ಕೇದಾರನಾಥ ಆಸುಪಾಸಿನಲ್ಲಿ ಐದು ಸಾವಿರಕ್ಕೂ ಹೆಚ್ಚು ಜನ ಗತಿಸಿದರು.

ಜೋಶಿಮಠದ ಗೋಡೆ, ಸೂರು, ರಸ್ತೆ, ಕಟ್ಟೆಕಾಲುವೆ ಗಳು ಬಿರುಕು ಬಿಡಲು ಕಾರಣ ಇಷ್ಟೆ: ಲಕ್ಷಾಂತರ ವರ್ಷಗಳ ಹಿಂದೆ ಭಾರೀ ಪರ್ವತವೊಂದು ಜರಿದು ಕ್ರಮೇಣ ಗಟ್ಟಿಗೊಂಡ ಬಂಡೆ-ಪುಡಿಗಲ್ಲುಗಳ ಮೇಲೆ ಇಡೀ ಪಟ್ಟಣ ನಿಂತಿದೆ. ಇಲ್ಲಿ ನಿರ್ಮಾಣ ಚಟುವಟಿಕೆ ಕೂಡದೆಂದು 1976ರಲ್ಲೇ ಎಮ್.ಸಿ. ಮಿಶ್ರಾ ಸಮಿತಿ ಹೇಳಿತ್ತು. ಆದರೆ ಈಚಿನ ಹತ್ತಿಪ್ಪತ್ತು ವರ್ಷಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಸೌಲಭ್ಯ ಕಲ್ಪಿಸಲೆಂದು ಹೊಟೆಲ್, ಅಂಗಡಿ, ಹೋಂ ಸ್ಟೇ, ರಸ್ತೆ, ವಿದ್ಯುತ್ ಜಾಲ ಇತ್ಯಾದಿ ಸೇರಿದಂತೆ ಇಡೀ ಊರೇ ಅಡ್ಡಾದಿಡ್ಡಿ ಬೆಳೆದಿದೆ. ಚರಂಡಿ ನೀರು ಅಲ್ಲಲ್ಲೇ ಇಂಗುತ್ತ ಭೂತಲವನ್ನು ಸಡಿಲಗೊಳಿಸುತ್ತಿದೆ. ಅಂತರ್ಜಲಧಾರೆ ಎಲ್ಲೆಲ್ಲಿಂದಲೋ ಧುಮುಕುತ್ತಿದೆ. ಹಾಗಿದ್ದರೆ ಬಿರುಕು ಬಿಟ್ಟ ಮನೆಗಳನ್ನಷ್ಟೆ ತೆರವುಗೊಳಿಸಿ, ಇನ್ನುಳಿದ ಮನೆಗಳಿಗೆ ಒಳಚರಂಡಿ ವ್ಯವಸ್ಥೆ ಮಾಡಿದರೆ ಸಾಕಲ್ಲವೆ? ಸಾಕೆ? ಹಿಮಾಲಯವೆಂದರೆ ಕಳೆದ ಸುಮಾರು ನಾಲ್ಕು ಕೋಟಿ ವರ್ಷಗಳಿಂದ ಮೆಲ್ಲಗೆ ಬೆಳೆಯುತ್ತ, ಕಂಪಿಸುತ್ತ, ಕುಸಿಯುತ್ತ, ಮೇಲೇಳುತ್ತಿರುವ ಎಳೇ ಪರ್ವತಮಾಲೆ. ಅದರ ಮೇಲೆ ಈಗ ಎರಡು ಬಗೆಯ ಶಿವತಾಂಡವ ಏಕಕಾಲದಲ್ಲಿ ನಡೆಯುತ್ತಿದೆ. 1. ಅಭಿವೃದ್ಧಿ ಸಾಧಿಸಿದ ರಾಷ್ಟ್ರಗಳು ಕಾರ್ಬನ್ ಇಂಧನಗಳನ್ನು ಸುಡುತ್ತಿರುವು ದರಿಂದ ಹವಾಗುಣ ಏರುಪೇರಾಗಿ ಇಲ್ಲಿ ಅನಿರೀಕ್ಷಿತ ಮೇಘಸ್ಫೋಟ, ಹಠಾತ್ ಹಿಮಕುಸಿತ ಸಂಭವಿಸುತ್ತಿದೆ. 2. ನಾವು ಹೊಸದಾಗಿ ಅಭಿವೃದ್ಧಿಯ ಮಹಾಯಂತ್ರಗಳನ್ನು ಈ ಸೂಕ್ಷ್ಮ ಪರಿಸರದಲ್ಲಿ ನುಗ್ಗಿಸುತ್ತಿದ್ದೇವೆ.

ಹಿಮಾಲಯದ ಧಾರಣಶಕ್ತಿಯನ್ನು ಧಿಕ್ಕರಿಸುವ ದೊಡ್ಡ ಯೋಜನೆಗಳ ವಿರುದ್ಧ ಪ್ರತಿಭಟನೆ, ಸತ್ಯಾಗ್ರಹ, ಆಯೋಗಗಳ ನೇಮಕ, ನ್ಯಾಯಾಲಯದ ತೀರ್ಪು, ಹೊಸ ಯೋಜನೆ, ಅದಕ್ಕೂ ಪ್ರತಿಭಟನೆ ಮತ್ತೆ ಆಮರಣ ಉಪವಾಸ, ಸಂತರ ಜೀವತ್ಯಾಗ, ಯೋಜನೆಗಳ ಪುನಾರಚನೆ ಎಲ್ಲವೂ ಸರಣಿಯಂತೆ ಘಟಿಸಿವೆ. ದುರಂತಗಳೂ ಪದೇ ಪದೇ ಸಂಭವಿಸುತ್ತಿವೆ. ಆದರೂ ಅಭಿವೃದ್ಧಿಯ ಒತ್ತಡ ಅದೆಷ್ಟೆಂದರೆ ಎಲ್ಲ ಸಾತ್ವಿಕ ಅಡೆ ತಡೆಗಳನ್ನೂ ಕಡೆಗಣಿಸಿ, ಯಂತ್ರಗಳ ಸಂತೆ ನೆರೆದಿದೆ. ಉದಾಹರಣೆಗೆ: ಗಂಗಾ ಮತ್ತು ಅದರ ಉಪನದಿಗಳುದ್ದಕ್ಕೂ 69 ಅಣೆಕಟ್ಟುಗಳನ್ನು ಕಟ್ಟಿ 9,000 ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಯೋಜನೆಗೆ ಪ್ರತಿರೋಧ ಬಂದಾಗ ಬಿ.ಕೆ. ಅಗರ್ವಾಲ್ ಆಯೋಗ ನೇಮಕವಾಯಿತು. ರೂರ್ಕಿ ಎಂಜಿನಿಯರ್ಗಳು ಕೂತಲ್ಲೇ ಭೂಸ್ಖಲನದ ಅಂಕಿ ಅಂಶಗಳನ್ನೇ ತಿದ್ದಿ ಹೊಸ ಪ್ರಸ್ತಾವವನ್ನು ಮಂಡಿಸಿದ್ದರು.

‘ಆಯೋಗದ ಸದಸ್ಯೆಯಾಗಿ ನಾನು ಈ ಹುನ್ನಾರವನ್ನು ಎತ್ತಿ ತೋರಿಸಿದೆ; ಆದರೂ ಯೋಜನೆ ಜಾರಿಗೆ ಬಂತು’ ಎನ್ನುತ್ತಾರೆ, ದಿಲ್ಲಿಯ ವಿಜ್ಞಾನ ಮತ್ತು ಪರಿಸರ ಕೇಂದ್ರದ ಮುಖ್ಯಸ್ಥೆ ಸುನೀತಾ ನರೇನ್. ‘ನಿಸರ್ಗವನ್ನು ಹೇಗೆ ಬೇಕಾದರೂ ತಿದ್ದಬಲ್ಲೆವೆಂಬ ಎಂಜಿನಿಯರ್ಗಳ ಧಿಮಾಕು ಇದೆಲ್ಲವನ್ನೂ ಮಾಡಿಸುತ್ತಿದೆ’ ಎಂದು ಅವರು ಹೇಳುತ್ತಾರೆ. ಅಲ್ಲಿನ ಎಳೆನದಿಗಳ ಮೇಲೆ ಬಲಾತ್ಕಾರ ಬೇಡವೆಂದು ಒತ್ತಾಯಿಸಿ 86ರ ವೃದ್ಧ ಸಂತ (ಪೂರ್ವಾಶ್ರಮದಲ್ಲಿ ನೀರಾವರಿ ಎಂಜಿನಿಯರ್ ಆಗಿದ್ದ) ಸಾನಂದ ಸ್ವಾಮೀಜಿ 111 ದಿನ ಉಪವಾಸವಿದ್ದು ಜೀವ ಬಿಟ್ಟಿದ್ದೂ ವ್ಯರ್ಥವಾಗಿದೆ.

ಚಿಕ್ಕಚಿಕ್ಕ ಸುಸ್ಥಿರ ಯೋಜನೆಗಳ ಮೂಲಕ ಈಗಲೂ ಅಲ್ಲಿನ ಸ್ಥಳೀಯರಿಗೆ ನೀರು, ವಿದ್ಯುತ್ ಮತ್ತು ಸಂಪರ್ಕ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಿದೆ. ‘ಅದರಲ್ಲಿ ಲೂಟಿಕೋರರಿಗೆ ಏನೂ ಸಿಗುವುದಿಲ್ಲ. ಈಗ ಇಡೀ ಹಿಮಾಲಯವೇ ಪವರ್ ಮಾಫಿಯಾ ಕೈಯಲ್ಲಿ ನಲುಗುತ್ತಿದೆ’ ಎಂದು (ಹಿಂದೆ ಇಂಥ ಬೃಹತ್ ಯೋಜನೆಗಳಿಗೆ ಅಡ್ಡಗಾಲು ಹಾಕಿ ಸಚಿವ ಸ್ಥಾನವನ್ನು ಕಳೆದುಕೊಂಡ) ಉಮಾ ಭಾರತಿ ಹೇಳುತ್ತಾರೆ.

‘ಭಾರತದ ನಿಸರ್ಗವೇ ಗುತ್ತಿಗೆದಾರರ, ಅಧಿಕಾರಿಗಳ ಮತ್ತು ರಾಜಕಾರಣಿಗಳ ಉಕ್ಕಿನ ತ್ರಿಕೋನದಲ್ಲಿ ಸಿಲುಕಿದೆ’ ಎಂದು ಪ್ರೊ. ಮಾಧವ್ ಗಾಡ್ಗೀಳ್ ಹಿಂದೆ ಹೇಳಿದ್ದು ನಮಗಿಲ್ಲಿ ನೆನಪಾಗಬೇಕು. ಈ ಶಕ್ತಿಗಳೇ ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರದಲ್ಲಿ ಗೀರೆಳೆದೆಳೆದು ಹೆದ್ದಾರಿ, ಸುರಂಗ, ಗೋಪುರ, ಕಾಲುವೆ, ರೋಪ್ವೇಗಳನ್ನು ನಿರ್ಮಿಸುತ್ತಿವೆ. ಅಭಿವೃದ್ಧಿಯ ಈ ಮಾಯಾಜಾಲದ ನೇಯ್ಗೆಯಲ್ಲಿ ನಮ್ಮ ಪಾಲೂ ಇದೆ. ಹಿಮಾಲಯದ ಬೃಹತ್ ಯೋಜನೆಗೆ ಎಲ್ಐಸಿ ಮತ್ತು ಹತ್ತಾರು ರಾಷ್ಟ್ರೀಯ ಬ್ಯಾಂಕ್ಗಳು ಹಣ ಹೂಡಿವೆ. ಅಂದರೆ, ನಮ್ಮನಿಮ್ಮ ಉಳಿತಾಯದ ಹಣವೂ ಇದರಲ್ಲಿ ಹೂಡಿಕೆ ಆಗಿರುವುದರಿಂದ ನಾವೂ ವಿಧ್ವಂಸಕ ಎಂಜಿನಿಯರಿಂಗ್ ಸಾಹಸಗಳಲ್ಲಿ ಭಾಗಿಗಳಾಗಿದ್ದೇವೆ.

ಹಿಮಾಲಯವನ್ನು ದೇವಭೂಮಿ ಎಂತಲೇ ಹಿಂದಿನವರು ಪರಿಗಣಿಸಿದ್ದರು. ಸತ್ಯದ ಅನ್ವೇಷಣೆಗೆಂದು ಅಧ್ಯಾತ್ಮ ಚಿಂತಕರು, ಯೋಗಿಗಳು ಮಾತ್ರ ಹೋಗುತ್ತಿದ್ದ ತಾಣ ಅದಾಗಿತ್ತು. ನದಿಮೂಲಗಳ ಪಾವಿತ್ರ್ಯ ರಕ್ಷಣೆಗೆಂದು ದೇಗುಲಗಳನ್ನು, ತಪೋವನಗಳನ್ನು ಅಲ್ಲಲ್ಲಿ ಸ್ಥಾಪಿಸಿದ್ದರು. ಈಗ ದೇಶವಿದೇಶಗಳ ವಿಜ್ಞಾನಿಗಳೂ ಆಚಿನ ಲೋಕದ ಸತ್ಯಾನ್ವೇಷಣೆಗೆಂದು ಅಲ್ಲಿಗೆ ಹೋಗುತ್ತಿದ್ದಾರೆ. ನೈನಿತಾಲ್ನಲ್ಲಿ ಅಂತರರಾಷ್ಟ್ರೀಯ ದ್ರವದೂರದರ್ಶಕ ಸ್ಥಾಪನೆಯಾಗಿದೆ. ಲಡಾಖ್ನ ಹಾನ್ಲೆ ಎಂಬಲ್ಲಿ ನಕ್ಷತ್ರ ವೀಕ್ಷಣೆಗೆಂದೇ ಅಪರೂಪದ ಸ್ಟಾರ್ಪಾರ್ಕ್ ಸೃಷ್ಟಿಯಾಗಿದೆ. ಹಿಮಶಿಖರಗಳಲ್ಲಿ ಅಂಥ ಶೋಧಕ್ಕಷ್ಟೇ ಆಧುನಿಕ ವಿಜ್ಞಾನ ಸೀಮಿತವಾಗಿದ್ದರೆ ಸಾಕಿತ್ತು. ಆದರೆ ಯೋಗಿಗಳ ಬದಲು ಭೋಗಿಗಳು ಧಾವಿಸುತ್ತಾರೆ. ಅವರ ವಾಹನಗಳ ವೇಗ ಹೆಚ್ಚಿಸಲೆಂದು ಹೆದ್ದಾರಿ ವಿಸ್ತರಣೆ ಮಾಡಿ, ಧುಮುಕುವ ಎಳೆನದಿಗಳ ವೇಗ ಕಡಿಮೆ ಮಾಡಿ, ಸುರಂಗಗಳಲ್ಲಿ ನುಗ್ಗಿಸಲಾಗುತ್ತಿದೆ. ನಿಸರ್ಗ ಪ್ರಕೋಪಕ್ಕೆ ತಾಳಮೇಳ ಎಂಬಂತೆ ತಾಂತ್ರಿಕ ತಾಂಡವ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.