ಇಲ್ಲಿ ಕುಂಭದ್ರೋಣ ಮಳೆ; ಅಲ್ಲಿ ದಿಲ್ಲಿಗೆ ದಿಲ್ಲಿಯೇ ಬಿಸಿ ಬಾಣಲೆ. ಇಲ್ಲಿ ನೀರಿನಿಂದಾಗಿ ಏನೆಲ್ಲ ಸಂಕಟ; ಅಲ್ಲಿ ನೀರಿಲ್ಲದೇ ಏನೆಲ್ಲ ಪರದಾಟ. ಇಲ್ಲಿ ಬಟ್ಟೆ ಒಣಗಿಸಲು ವಾಷಿಂಗ್ ಮಷಿನ್‌ನಲ್ಲಿ ಬಿಸಿಗಾಳಿಯ ಬಳಕೆ; ಅಲ್ಲಿ ಬಿಸಿಗಾಳಿಯನ್ನು ತಂಪು ಮಾಡಲೆಂದು ಏರ್ ಕಂಡೀಷನರ್‌ಗಳ ಅತಿ ಬಳಕೆ. ಅಂತೂ ಅನುಕೂಲಸ್ಥರ ಬದುಕು ಸುಗಮವಾಗಲೆಂದು ಎರಡೂ ಕಡೆ ವಿದ್ಯುತ್ತಿಗಾಗಿ ಫಾಸಿಲ್ ಇಂಧನಗಳ ಹೇರಳ ಬಳಕೆ. ಅದರಿಂದಾಗಿ ವಾತಾವರಣಕ್ಕೆ ಇನ್ನಷ್ಟು ಶಾಖವರ್ಧಕ ಅನಿಲಗಳ ಬಿಡುಗಡೆ. ಮುಂದಿನ ವರ್ಷ ವಾತಾವರಣ ಮತ್ತಷ್ಟು ಅಲ್ಲೋಲಕಲ್ಲೋಲ.

ಈ ಮಧ್ಯೆ ಹೊಸದಾಗಿ ಇನ್ನೊಂದು ತರಲೆ ವಿವಾದ ಏಳುತ್ತಿದೆ: ಏಷ್ಯ ಖಂಡದಲ್ಲಿ ಏಳುತ್ತಿರುವ ಮಾನ್ಸೂನ್ ಬಿರುಗಾಳಿ ಇಲ್ಲಿ ನೆಲಮಟ್ಟದಲ್ಲಿದ್ದ ಕೊಳಕು ಗಾಳಿಯನ್ನೆಲ್ಲ ಎತ್ತರದ ವಾಯುಮಂಡಲಕ್ಕೆ ತೂರುತ್ತಿದೆಯಂತೆ. ಅಲ್ಲಿ ಓಝೋನ್ ರಂಧ್ರವನ್ನು ಇನ್ನಷ್ಟು ದೊಡ್ಡದು ಮಾಡಲಿದೆಯಂತೆ. ಹೀಗೆಂದು ಅಮೆರಿಕದ ನ್ಯಾಷನಲ್ ಸೈನ್ಸ್ ಅಕಾಡೆಮಿಯ ವಿಜ್ಞಾನಿಗಳು ತಿಳಿಸಿದ್ದಾರೆ.

ಅದು ನಿಜವೇ ಇದ್ದೀತು. ಈಚಿನ ದಶಕಗಳಲ್ಲಿ ಚೀನಾ, ಕೊರಿಯಾ, ತೈವಾನ್, ಇಂಡೊನೇಷ್ಯ ಮತ್ತು ಭಾರತ- ಈ ದೇಶಗಳಲ್ಲಿ ಔದ್ಯಮೀಕರಣ ಭರದಿಂದ ಹೆಚ್ಚುತ್ತಿದೆ. ಪಶ್ಚಿಮದ ರಾಷ್ಟ್ರಗಳಂತೆ ಅಭಿವೃದ್ಧಿ ಸಾಧಿಸಬೇಕೆಂಬ ಛಲದಿಂದ ಏಷ್ಯನ್ ದೇಶಗಳು ದಾಂಗುಡಿ ಇಡುತ್ತಿವೆ. ಪಶ್ಚಿಮದ ʻವಿಕಾಸ ಸೂತ್ರʼವನ್ನೇ ಇವೂ ಅನುಸರಿಸುತ್ತಿವೆ. ಅಲ್ಲಿನವರು ಕಳಚಿ ಹಾಕಿದ ಕೊಳಕು ಸೂಸುವ, ಕಳಪೆ ಯಂತ್ರಗಳನ್ನೇ ಇಲ್ಲಿ ಸ್ಥಾಪಿಸಿದ ಅದೆಷ್ಟೊ ಉದಾಹರಣೆಗಳೂ ಇಲ್ಲಿವೆ. ಉದ್ಯಮಕ್ಕೆ ಬೇಕಿದ್ದ ಸಾಲಸೋಲ, ಬಂಡವಾಳವೂ ಅಲ್ಲಿಂದಲೇ ಏಷ್ಯದತ್ತ ಹರಿದು ಬಂದಿದೆ. ಪಶ್ಚಿಮದವರು ತಕರಾರು ಎತ್ತುವಂತಿಲ್ಲ.

ಇದಕ್ಕೆ ಸಂಬಂಧಿಸಿ ಇಲ್ಲೊಂದು ಸ್ವಾರಸ್ಯದ ಕತೆ ಇದೆ: ಥಾಮಸ್ ಮಿಜ್ಲೀ (Midgley) ಜ್ಯೂನಿಯರ್ ಎಂಬೊಬ್ಬ ಪ್ರಚಂಡ ವಿಜ್ಞಾನಿ ಅಮೆರಿಕದಲ್ಲಿದ್ದ. ʻಭೂಮಿಗೆ ಬಹುವಿಧದ ಸಂಕಷ್ಟಗಳನ್ನು ತಂದ ಏಕೈಕ ವ್ಯಕ್ತಿʼ ಎಂತಲೇ ಕುಪ್ರಸಿದ್ಧಿ ಪಡೆದ ಭೂಪ ಈತ. ಸರಿಯಾಗಿ 100 ವರ್ಷಗಳ ಹಿಂದಿನ ಈತನ ಕತೆ ಹೀಗಿದೆ: ಆಗೆಲ್ಲ ಪೆಟ್ರೋಲ್ ಗಾಡಿಗಳು ಮಾರ್ಗಮಧ್ಯೆ ಆಗಾಗ ಕೆಮ್ಮುತ್ತ, ಕ್ಯಾಕರಿಸುತ್ತ ಓಡುತ್ತಿದ್ದವು. ಅಂತರ್ದಹನ ಎಂಜಿನ್‌ಗಳ ಈ ಕಾಯಿಲೆಗೆ ನಾಕಿಂಗ್ knocking ಎನ್ನುತ್ತಾರೆ. ಅಂದಿನ ಸುವಿಖ್ಯಾತ ʻಜನರಲ್ ಮೋಟಾರ್ಸ್ʼ ಕಂಪನಿಯ ಉದ್ಯೋಗಿಯಾಗಿದ್ದ ಈತ ಏನೇನೋ ಪ್ರಯೋಗ ಮಾಡಿ, ಪೆಟ್ರೋಲಿಗೆ ಸೀಸದ (lead-ಲೆಡ್) ದ್ರಾವಣ ಸೇರಿಸಿದರೆ ಸರಿಹೋಗುತ್ತದೆ ಎಂಬುದನ್ನು ಕಂಡುಕೊಂಡ.

ಸೀಸ ಭಾರೀ ವಿಷಕಾರಿ ವಸ್ತು ಎಂಬುದು ಆಗಲೇ ಗೊತ್ತಿತ್ತು. ಅದಕ್ಕೊಂದು ದೀರ್ಘ ಇತಿಯಾಸವೇ ಇದೆ. ರೋಮನ್ನರ ಕಾಲದಲ್ಲಿ ಕೊಳಾಯಿಗಳೂ, ಮದ್ಯದ ಲೋಟಗಳೂ ಸೀಸದ್ದೇ ಆಗಿದ್ದವು. ರೋಮ್ ಸಾಮ್ಯಾಜ್ಯದ ಪತನಕ್ಕೆ ಅದೇ ಕಾರಣ ಎಂದು ವಿಜ್ಞಾನಿಗಳು ಸಾಬೀತು ಮಾಡಿದ್ದಾರೆ. ಮಕ್ಕಳ ಮಂದಬುದ್ಧಿಗೆ ಅದೇ ಮುಖ್ಯ ಕಾರಣ ಎಂತಲೂ ಹೇಳಿದ್ದಾರೆ. ರಕ್ತದ ಮೂಲಕ ಸೀಸ ದೇಹಕ್ಕೆ ಒಮ್ಮೆ ಸೇರಿದರೆ ಮತ್ತೆಂದೂ ಹೊರಕ್ಕೆ ಬರಲಾರದು ಎಂಬುದು ಈ ಮಿಜ್ಲಿಗೂ ಗೊತ್ತಿತ್ತು. ಸೀಸದ ದ್ರಾವಣದ ಬದಲು ಕಡ್ಲೆಕಾಯಿ ಎಣ್ಣೆಯನ್ನು ಅಥವಾ ಇಥೆನಾಲ್ ಎಂಬ ಮದ್ಯಸಾರವನ್ನು ಶೇಕಡ 10ರಷ್ಟು ಸೇರಿಸಿದರೂ ಪೆಟ್ರೋಲ್ ಗಾಡಿ ಸಲೀಸಾಗಿ ಓಡುತ್ತದೆ ಎಂಬುದನ್ನೂ ಈತ ಕಂಡುಹಿಡಿದಿದ್ದ. ಆದರೂ ಸೀಸ ವಿಷದ ಸಂಯುಕ್ತವನ್ನು ಸೇರಿಸಲು ಕಾರಣ ಏನೆಂದರೆ ಅದಕ್ಕೆ ಮಾತ್ರ ಪೇಟೆಂಟ್ ಸಿಕ್ಕು, ಹಣ ಗಳಿಕೆಗೆ ಅವಕಾಶವಿತ್ತು. ಅಲ್ಪವೆಚ್ಚದ್ದೂ ಆಗಿತ್ತು. 1924ರಲ್ಲಿ ಪತ್ರಿಕಾಗೋಷ್ಠಿ ಕರೆದು ಈತ ಸೀಸದ ದ್ರಾವಣವನ್ನು ಕೈಗೆ ಸುರಿದುಕೊಂಡು ಮೂಸಿ ತೋರಿಸಿದ. ಪೆಟ್ರೋಲಿನ ಹೊಗೆಯಲ್ಲಿ ಸೀಸದ ಅಂಶ ನಗಣ್ಯವೆಂದೂ ಸುರಕ್ಷಿತವೆಂದೂ ಘೋಷಿಸಿದ.

ಈತನ ಆವಿಷ್ಕಾರಕ್ಕೆ ಪ್ರಶಸ್ತಿಗಳೂ ಬಂದವು. ಅಂದಿನ ಪ್ರಮುಖ ಕಂಪನಿಗಳು (ಫೋರ್ಡ್, ಜಿಎಮ್, ಎಸ್ಸೊ, ಡ್ಯೂಪಾಂಟ್) ಜಂಟಿಯಾಗಿ ಈತನ ʻಟೆಟ್ರಾ ಈಥೈಲ್ ಲೆಡ್ʼ ದ್ರಾವಣ ತಯಾರಿಸಲೆಂದು ಹಣ ಹೂಡಿದವು. ಜನರು ಆಕ್ಷೇಪ ಎತ್ತಬಾರದೆಂದು ʻಲೆಡ್ʼ (ಸೀಸ) ಎಂಬ ಪದವನ್ನು ಮರೆಮಾಚಿ ತಮ್ಮ ಹೊಸ ಕಂಪನಿಗೆ ಬರೀ ʻಈಥೈಲ್ʼ ಎಂಬ ಹೆಸರಿಟ್ಟವು. ಕಾರು, ಲಾರಿ, ಮಿಲಿಟರಿ ವಾಹನಗಳಿಗೆ ಸೀಸದ್ರಾವಣದ ಪೆಟ್ರೋಲನ್ನು ತುಂಬಿ ಭೂಮಿಗೆಲ್ಲ ಸೀಸದ ಹೊಗೆಯನ್ನು ತೂರಿದವು. 1970ರ ಸುಮಾರಿಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಈ ವಿಷದ ವಿರುದ್ಧ ಭಾರೀ ಕೂಗೆದ್ದಿತು. ಮಕ್ಕಳ ರಕ್ತದಲ್ಲೂ ಸೀಸದ ಅಂಶ ಹೆಚ್ಚಿತ್ತು. ಕಿಡ್ನಿವೈಫಲ್ಯದ ಪ್ರಕರಣಗಳು ಹೆಚ್ಚಿದವು. ಯಾವ ವಾಹನಕ್ಕೂ ಸೀಸದ ದ್ರಾವಣವನ್ನು ಸೇರಿಸಬಾರದೆಂಬ ಕಾನೂನು ಬಂತು. ನಮ್ಮಲ್ಲೂ ಸೀಸಮುಕ್ತ ಪೆಟ್ರೋಲ್ ಬೇಕೆಂದು ಭಾರತದಲ್ಲೇ ಮೊದಲ ಬಾರಿಗೆ 1990ರ ಮಾರ್ಚ್‌ನಲ್ಲಿ ಮೈಸೂರಿನಲ್ಲಿ ನಡೆದ ಜಾಥಾ ಕುರಿತು ಇದೇ ಅಂಕಣದಲ್ಲಿ ಚರ್ಚೆಯಾಗಿತ್ತು. ಅಂತೂ 2000ದ ಹೊತ್ತಿಗೆ ಎಲ್ಲೆಲ್ಲೂ ಸೀಸರಹಿತ ಪೆಟ್ರೋಲ್ ಬಳಕೆಗೆ ಬಂತು. ಆದರೆ ಅಮೆರಿಕದ್ದೇ ʻಇನ್ನೊಸ್ಪೆಕ್ʼ ಹೆಸರಿನ ಕಂಪನಿ ಮಾತ್ರ ಹಿಂದುಳಿದ ಅಲ್ಜೀರಿಯಾ, ಇರಾಕ್, ಮ್ಯಾನ್ಮಾರ್, ಅಫ್ಗಾನಿಸ್ತಾನ್‌ಗಳಿಗೆ 2014ರವರೆಗೂ ಪೆಟ್ರೋಲಿಗೆ ಸೀಸದ್ರಾವಣವನ್ನು ಪೂರೈಸುತ್ತ ಬಂತು. ಆ ದೇಶಗಳ ಮುಖ್ಯಸ್ಥರನ್ನು ಲಾಭಾರ್ಥಿಗಳನ್ನಾಗಿ ಮಾಡಿಕೊಂಡಿದ್ದಕ್ಕೆ ಕಂಪನಿಯ ಅಧಿಕಾರಿಗಳು ಜೈಲು ಸೇರಿದ್ದೂ ಆಯಿತು. ಅಂತೂ ಗಾಳಿಯಲ್ಲಿ ಸೇರಿದ್ದ ಸೀಸದ ಅಂಶ ಕ್ರಮೇಣ ಕಡಿಮೆಯಾಗಲು 40 ವರ್ಷಗಳೇ ಬೇಕಾದವು.

ಈತನ ಇನ್ನೊಂದು ಸಂಶೋಧನೆ ಓಝೋನ್ ಪದರದ ನಾಶಕ್ಕೆ ಕಾರಣವಾಯಿತು. ರೆಫ್ರಿಜರೇಟರ್ ಮತ್ತು ಏರ್ ಕಂಡೀಷನರ್‌ಗಳಿಗೆ ʻಸಿಎಫ್‌ಸಿʼ (ಕ್ಲೋರೋಫ್ಲೂರೊ ಕಾರ್ಬನ್) ಬಳಸಿದರೆ ದಕ್ಷತೆ ಹೆಚ್ಚುತ್ತದೆಂದು ಈತ ತೋರಿಸಿದ್ದೇ ತಡ, ಜಗತ್ತಿನೆಲ್ಲೆಡೆ ಹೊಸ ಯಂತ್ರಗಳು ಬಂದವು. ಚಂದದ ಡಬ್ಬಗಳಿಂದ ಪುಸ್‌ಪುಸ್ ಎಂದು ಸುಗಂಧವನ್ನೂ ಜಿರಳೆ ನಾಶಕ ವಿಷಗಳನ್ನೂ ಸಲೀಸಾಗಿ ಹೊಮ್ಮಿಸುವ ಸಿಂಚನಕಾರಿಯಾಗಿಯೂ ಸಿಎಫ್‌ಸಿ ವ್ಯಾಪಕವಾಗಿ ಬಳಕೆಗೆ ಬಂತು. ಮಿಲಿಟರಿ ಯೋಧರು ಸೊಳ್ಳೆ-ತಿಗಣೆಗಳ ನಾಶಕ್ಕೂ ಸಿಎಫ್‌ಸಿ ಇದ್ದ ಸ್ಪ್ರೇಗಳನ್ನೇ ಬಳಸತೊಡಗಿದರು. ಒಟ್ಟಾರೆ ಪರಿಣಾಮ ಏನೆಂದರೆ ನೆಲದಿಂದ 40 ಕಿ.ಮೀ. ಎತ್ತರದ ಓಝೋನ್ ಸುರಕ್ಷಾ ಕವಚ ಛಿದ್ರವಾಯಿತು. ಅದರ ದುಷ್ಪರಿಣಾಮಕ್ಕೆ ಬೆದರಿ ಸಿಎಫ್‌ಸಿ ನಿಷೇಧಕ್ಕೆ ಜಾಗತಿಕ ಸಮ್ಮೇಳನವೇ ಜರುಗಿ ಮಾಂಟ್ರಿಯಲ್ ಒಪ್ಪಂದ ಜಾರಿಗೆ ಬಂತು. ಪಶ್ಚಿಮದಲ್ಲಿ ನಿಷೇಧವಾದ ಬೆನ್ನಲ್ಲೇ ಅದೇ ತಂತ್ರಜ್ಞಾನವನ್ನು ನಮ್ಮತ್ತ ಸಾಗಹಾಕಲೆಂದು ವಿದೇಶೀ ಕಂಪನಿಗಳು ಇತ್ತ ದೌಡಾಯಿಸಿದವು. ದಿಲ್ಲಿಯಲ್ಲಿ ವಿಶೇಷ ಮಾರಾಟಮೇಳವೂ ಜರುಗಿತು.

ಸಿಎಫ್‌ಸಿಯಿಂದಾಗಿ ಓಝೋನ್ ಪದರದ ನಾಶವಷ್ಟೇ ಅಲ್ಲ; ಭೂಮಿಯನ್ನು ಬಿಸಿ ಮಾಡುವಲ್ಲಿ ಅದು ಕಾರ್ಬನ್ ಡೈಆಕ್ಸೈಡ್‌ಗಿಂತ ಹತ್ತು ಸಾವಿರ ಪಟ್ಟು ಪ್ರಬಲವಾಗಿದೆ. ಈಗೇನೋ ಸುಧಾರಿತ ದೇಶಗಳಲ್ಲಿ ಅಂಥ ಮಾಲಿನ್ಯವಿಲ್ಲ. ಆದರೆ ಅಲ್ಲಿಂದ ಬಂದ ಹಳೇ ಕಾರ್ಖಾನೆಗಳಿಂದಾಗಿ ಏಷ್ಯದ ದೇಶಗಳಲ್ಲಿ ಹೊಮ್ಮುವ ಕೊಳಕು ಗಾಳಿಯೆಲ್ಲ ಈಗಿನ ಮಾನ್ಸೂನ್ ಬಿರುಗಾಳಿಯಿಂದಾಗಿ ಮೇಲಕ್ಕೇರಿ ಓಝೋನ್ ವಲಯಕ್ಕೆ ಅಪಾಯ ತರುತ್ತಿದೆ ಎಂದು ಈಗ ಕೂಗೆದ್ದಿದೆ.

ಭೂಮಿಯನ್ನು ಅಪಾಯಕ್ಕೆ ಸಿಲುಕಿಸಿದವರಲ್ಲಿ ಥಾಮಸ್ ಮಿಜ್ಲೀ ಒಬ್ಬನನ್ನೇ ದೂರಬೇಕಾಗಿಲ್ಲ. ಆತನ ಸಂಶೋಧನೆಯನ್ನು ಲಾಭಕ್ಕಾಗಿ ಬಳಸಿಕೊಂಡ ಎಲ್ಲ ಬಹುರಾಷ್ಟ್ರೀಯ ಕಂಪನಿಗಳೂ, ಎಲ್ಲ ಭೋಗಪಿಪಾಸುಗಳೂ ಇದರಲ್ಲಿ ಪಾಲುದಾರರೇ ಆಗಿದ್ದಾರೆ. ಆಗಿದ್ದೇವೆ. ಭೂಮಿಗೆ ಈಗ ಸಂಕಟ ಬಂದಿದೆ ಎಂಬುದೂ ಸರಿಯಲ್ಲ. ನಮ್ಮೆಲ್ಲರಿಗೆ ಬಂದಿದೆ. ನಮ್ಮಲ್ಲೂ ವಿಶೇಷವಾಗಿ ದುರ್ಬಲರಿಗೆ ಬಂದಿದೆ.

ಈ ವಿಷಪುರುಷನ ಅಂತ್ಯವೂ ವಿಶಿಷ್ಟದ್ದಾಗಿತ್ತು. ತನ್ನ 51ನೇ ವಯಸ್ಸಿನಲ್ಲಿ ಪೋಲಿಯೊ ಕಾಯಿಲೆಗೆ ತುತ್ತಾಗಿ ಈತ ಹಾಸಿಗೆ ಹಿಡಿದ. ಆಗಾಗ ಎದ್ದು ಗಾಲಿಕುರ್ಚಿಯ ಮೇಲೆ ಕೂರಲೆಂದು ತಾನೇ ಹಗ್ಗ, ಚಕ್ರ, ಲಿವರ್, ಗಿಯರ್, ದಾರಗಳ ಒಂದು ಕ್ಲಿಷ್ಟ ಸಲಕರಣೆಯನ್ನು ರೂಪಿಸಿಕೊಂಡ. 1944ರ ನವಂಬರ್ 2ರಂದು ಏಳಲು ಯತ್ನಿಸಿದಾಗ ಅವನ ಹಗ್ಗದ ಸೂತ್ರ ಅವನಿಗೇ ಕುಣಿಕೆಯಾಗಿ, ನೇಣು ಬಿಗಿದ ಸ್ಥಿತಿಯಲ್ಲಿ ಸಾವಪ್ಪಿದ. ವಿಧಿಯ ʻಸೂತ್ರʼವೇ ವಿಲಕ್ಷಣ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.