ಗೇಣುದ್ದದ, ಹೆಬ್ಬೆರಳು ಗಾತ್ರದ ಲೋಕವಿಖ್ಯಾತ ‘ಹವಾನಾ ಸಿಗಾರ್’ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಅಮೆರಿಕದ ಪ್ರತಿಷ್ಠಿತರು ಅಲ್ಲೇ ಪಕ್ಕದ ಚಿಕ್ಕ ದ್ವೀಪರಾಷ್ಟ್ರ ಕ್ಯೂಬಾದ ಕಮ್ಯುನಿಸ್ಟರನ್ನು ಎಷ್ಟು ದ್ವೇಷಿಸುತ್ತಿದ್ದರೊ ಅಲ್ಲಿನ ಹವಾನಾ ಸಿಗಾರನ್ನು ಅಷ್ಟೇ ಪ್ರೀತಿಸುತ್ತಿದ್ದರು. ಕಬ್ಬು ಮತ್ತು ತಂಬಾಕಿನ ಕ್ಯೂಬಾ ಅಂದರೆ ಸಿಗಾರ್ ಮತ್ತು ಶುಗರ್ ಎಂತಲೇ ಪ್ರಸಿದ್ಧಿ ಪಡೆದಿತ್ತು. ಉತ್ತಮ ಹವಾಗುಣ, ಫಲವತ್ತಾದ ಮಣ್ಣು, ಒಳ್ಳೇ ಬಿಸಿಲು ಎಲ್ಲ ಸೇರಿದ್ದರಿಂದ ಜಗತ್ತಿನ ಶ್ರೇಷ್ಠ ತಂಬಾಕು ಅಲ್ಲಿ ಬೆಳೆಯುತ್ತಿತ್ತು.

ಸಿಗಾರ್ ಉದ್ಯಮವೇ ಕ್ಯೂಬಾಕ್ಕೆ ಬಹುದೊಡ್ಡ ಆದಾಯವನ್ನು ತರುತ್ತಿತ್ತು. ಆದರೆ ಐವತ್ತು ವರ್ಷಗಳ ಹಿಂದೆ ಕ್ಯೂಬಾದಲ್ಲಿ ಫಿಡೆಲ್ ಕ್ಯಾಸ್ಟ್ರೋ ಅಧಿಕಾರಕ್ಕೆ ಬಂದಿದ್ದೇ ತಡ, ಅಮೆರಿಕ ಸರ್ಕಾರ ಕ್ಯೂಬಾದ ಎಲ್ಲ ಉತ್ಪನ್ನಗಳಿಗೂ ನಿಷೇಧ ಹೇರಿತು. ಅಲ್ಲಿಂದ ಏನನ್ನೂ ತರಿಸುವಂತಿಲ್ಲ; ಅಲ್ಲಿಗೆ ಏನನ್ನೂ ಕಳಿಸುವಂತಿಲ್ಲ. ಈ ವರ್ಷ ದಿಗ್ಬಂಧನವನ್ನು ಹಂತಹಂತವಾಗಿ ಮುಕ್ತಗೊಳಿಸಲಾಗುತ್ತಿದೆ. ವ್ಯಾಪಾರ, ವಹಿವಾಟು, ಜನರ ಓಡಾಟ ಮತ್ತೆ ಆರಂಭವಾಗುತ್ತಿದೆ. ವಿಮಾನಗಳಲ್ಲಿ ಸಿಗಾರ್ ದಲ್ಲಾಳಿಗಳ ನೂಕುನುಗ್ಗಲು ಆರಂಭವಾಗುತ್ತಿದೆ.

ಅದಕ್ಕಿಂತ ವಿಶೇಷವೆಂದರೆ, ಅಮೆರಿಕದ ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗೆಂದು ಕ್ಯೂಬಾ ರಾಜಧಾನಿ ಹವಾನಾಕ್ಕೆ ಸಾಲುಗಟ್ಟಿ ಬರುತ್ತಿದ್ದಾರೆ. ಹೀಗೆ ಹೇಳಿದರೆ ನಮಗೆ ನಮ್ಮದೇ ಆದ ವಿಶೇಷ ‘ಕ್ಯಾನ್ಸರ್ ರೈಲು’ ನೆನಪಿಗೆ ಬರುವುದು ಸಹಜ. ಪಂಜಾಬ್ ರೈತರು ತಮ್ಮ ಫಸಲಿಗೆ ಅದೆಷ್ಟು ವಿಷ ಸಿಂಪಡನೆ ಮಾಡುತ್ತಾರೆಂದರೆ, ಭಟಿಂಡಾ ಜಿಲ್ಲೆಯ ಕೆಲವು ಊರುಗಳಲ್ಲಿ ಮನೆಮನೆಯಲ್ಲಿ ಕ್ಯಾನ್ಸರ್ ರೋಗಿಗಳಿದ್ದಾರೆ.

ಅವರು ಪದೇ ಪದೇ ಚಿಕಿತ್ಸೆಗೆಂದು ಅಮೃತಸರಕ್ಕೆ ಪ್ರಯಾಣ ಮಾಡುವ ರೈಲಿಗೆ ‘ಕ್ಯಾನ್ಸರ್ ಟ್ರೇನ್’ ಎಂದೇ ಹೆಸರು ಬಂದಿದೆ. ಇದೇ ಮಾದರಿಯಲ್ಲಿ ಅಮೆರಿಕದಿಂದ ಕ್ಯೂಬಾಕ್ಕೆ ಹೋಗುವ ವಿಮಾನಕ್ಕೆ ‘ಕ್ಯಾನ್ಸರ್ ಪ್ಲೇನ್’ ಎಂಬ ವಿಶೇಷಣ ಈಗಿನ್ನೂ ಬಂದಿಲ್ಲ ನಿಲ್ಲಿ. ಆದರೆ ಅಮೆರಿಕದಂಥ ಅಮೆರಿಕದಲ್ಲೇ ಸಿಗದ ವಿಶೇಷ ಚಿಕಿತ್ಸೆ ಬಡಪಾಯಿ ಕ್ಯೂಬಾದಲ್ಲಿ ಹೇಗೆ ಸಿಗುತ್ತದೆ?

ಕತೆ 1960ರಿಂದ ಆರಂಭವಾಗುತ್ತದೆ: ಅಮೆರಿಕ ಹಾಕಿದ ಪ್ರತಿಬಂಧದಿಂದಾಗಿ ಕ್ಯೂಬಾ ಎಲ್ಲ ಬಂಡವಾಳಶಾಹಿ ದೇಶಗಳಿಂದಲೂ ತಿರಸ್ಕೃತವಾಗಿ ಪಶ್ಚಿಮ ಗೋಲಾರ್ಧದ ಅನಾಥ ಶಿಶುವೆನಿಸಿತು. ಸೋವಿಯತ್ ಸಂಘದ ವಿಘಟನೆಯಿಂದಾಗಿ ಅದುವರೆಗೆ ಅಲ್ಲಿಂದ ಬರುತ್ತಿದ್ದ ಅಷ್ಟಿಷ್ಟು ನೆರವೂ 1990ರ ನಂತರ ನಿಂತುಹೋಯಿತು. ಆಧುನಿಕ ತಂತ್ರಜ್ಞಾನದಿಂದ ವಂಚಿತವಾಗಿದ್ದರಿಂದ ತನ್ನ ಸಂಕಷ್ಟಗಳಿಗೆಲ್ಲ ತಾನೇ ಚಿಕಿತ್ಸೆ ಹುಡುಕಿಕೊಳ್ಳಬೇಕಾದ ಪರಿಸ್ಥಿತಿ ಕ್ಯೂಬಾಕ್ಕೆ ಬಂತು.

ಈ ಅವಧಿಯಲ್ಲಿ ಅಲ್ಲಿ ರೂಪುಗೊಂಡ ವಿಶಿಷ್ಟ ಬಗೆಯ ತಂತ್ರಜ್ಞಾನ ಮತ್ತು ಚಿಕಿತ್ಸಾ ವಿಜ್ಞಾನಗಳು ಪ್ರಶಂಸೆಗೆ ಪಾತ್ರವಾಗುತ್ತಿವೆ. ವಿಶೇಷವಾಗಿ ಕ್ಯೂಬನ್ನರು ಕಂಡುಕೊಂಡ ಕ್ಯಾನ್ಸರ್ ಚಿಕಿತ್ಸಾ ವಿಧಾನಕ್ಕೆ ಅಮೆರಿಕದ ವಿಜ್ಞಾನಿಗಳೂ ತಲೆದೂಗುತ್ತಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ ವಿರುದ್ಧ ಕ್ಯೂಬನ್ ವಿಜ್ಞಾನಿಗಳು ರೂಪಿಸಿದ ಸಿಮಾವ್ಯಾಕ್ಸ್ ಎಂಬ ಲಸಿಕೆಯನ್ನು ಇದೇ ಮೊದಲ ಬಾರಿ ಅಮೆರಿಕದ ವಿಜ್ಞಾನಿಗಳು ಪರೀಕ್ಷಿಸಲೆಂದು ಎರಡು ದೇಶಗಳ ನಡುವೆ ದ್ವಿಪಕ್ಷೀಯ ಒಪ್ಪಂದವೂ ರೂಪುಗೊಂಡಿದೆ.

ಎಂಥ ಕಠಿಣ ಸವಾಲನ್ನೂ ತನ್ನವರ ಹಿತಸಾಧನೆಗೆ ಬಳಸಿಕೊಳ್ಳುವಲ್ಲಿ ಕ್ಯೂಬಾ ಅನೇಕ ದಾಖಲೆಗಳನ್ನು ನಿರ್ಮಿಸಿದೆ. ಹಿಂದೊಮ್ಮೆ ಹೀಗೇ ಆಗಿತ್ತು. ರಷ್ಯದಿಂದ ಬರುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ 1990ರಲ್ಲಿ ಹಠಾತ್ತಾಗಿ ನಿಂತಿದ್ದರಿಂದ ಕ್ಯೂಬಾದ ಕೃಷಿರಂಗಕ್ಕೆ ಭಾರೀ ಏಟು ಬಿದ್ದಿತ್ತು. ಟ್ರ್ಯಾಕ್ಟರ್, ಟಿಲ್ಲರ್, ಹಾರ್ವೆಸ್ಟರ್ ಯಂತ್ರಗಳೆಲ್ಲ ನಿಂತಲ್ಲೇ ನಿಂತವು. ನೀರೆತ್ತುವ ಪಂಪ್‌ಗೂ ಡೀಸೆಲ್, ಸೀಮೆಎಣ್ಣೆ ಸಿಗುವಂತಿರಲಿಲ್ಲ. ಪೆಟ್ರೋಲಿಯಂ ದ್ರವ್ಯವನ್ನೇ ಆಧರಿಸಿದ್ದ ರಸಗೊಬ್ಬರಗಳೂ ಖರ್ಚಾದವು.

ಕಾರ್ಖಾನೆಗಳು ನೆಲಕಚ್ಚಿದವು. ಹಸಿವೆಯಿಂದ ಇಡೀ ದೇಶವೇ ಕಂಗಾಲಾಗುವ ಸ್ಥಿತಿ ಬಂದಿತ್ತು. ಎಲ್ಲರೂ ಸಾವಯವ ಬೇಸಾಯಕ್ಕೆ ಕೈಜೋಡಿಸುವಂತೆ ಫಿಡೆಲ್ ಕ್ಯಾಸ್ಟ್ರೋ ಆಜ್ಞೆ ಹೊರಡಿಸಬೇಕಾಯಿತು. ನಗರವಾಸಿಗಳು ತಮಗೆ ಬೇಕಾದುದನ್ನೆಲ್ಲ ತಾವೇ ಕಡ್ಡಾಯ ಬೆಳೆಸಬೇಕಾಯಿತು. ರಾಜಧಾನಿ ಹವಾನಾದ ಎಲ್ಲ 26 ಸಾವಿರ ಕೈದೋಟಗಳೂ, ಖಾಲಿ ಸೈಟುಗಳೂ ಬೇಸಾಯದ ತಾಕುಗಳಾದವು. ಹಳ್ಳಿಗಳಲ್ಲಿ ಎಲ್ಲೆಲ್ಲೋ ಮೂಲೆಗುಂಪಾಗಿ ಕೂತಿದ್ದ ಎತ್ತುಗಳು, ಹೋರಿಗಳು ಮತ್ತೆ ನೊಗ ಹೊತ್ತವು.

ಸೆಗಣಿ ಗಂಜಳದ ಕಾಂಪೋಸ್ಟ್ ಮತ್ತು ಎರೆಹುಳು ಸಾಕಣೆಗೆ ಆದ್ಯತೆ ಸಿಕ್ಕಿತು. ಹವಾನಾ ನಗರವೊಂದರಲ್ಲೇ 1996ರ ವೇಳೆಗೆ 30 ಸಾವಿರ ಟನ್ ತರಕಾರಿ, ಹಣ್ಣುಹಂಪಲು, ಗೆಡ್ಡೆಗೆಣಸುಗಳು ಬೆಳೆದವು. 75 ಲಕ್ಷ ಕೋಳಿಮೊಟ್ಟೆಗಳು, ಮೂರೂವರೆ ಟನ್ ಔಷಧೀಯ ಗಿಡಮೂಲಿಕೆಗಳ ಉತ್ಪಾದನೆ ದಾಖಲಾಯಿತು. ಇಂಥ ದೇಸೀ ಕೃಷಿಯಿಂದ ಸಿಕ್ಕ ಇತರ ಫಲಗಳನ್ನು ವಾಣಿಜ್ಯದ ಲೆಕ್ಕಾಚಾರದಲ್ಲಿ ಹೇಳಲು ಬರುವಂತಿಲ್ಲ.

ಬೀಜ, ಎರೆಗೊಬ್ಬರ, ಕೊಳೆ ನೀರಿನ ಸಂಸ್ಕರಣೆ, ಪಂಪ್ ಮತ್ತು ಪೈಪ್‌ಗಳ ನಿರ್ಮಾಣ ಮತ್ತು ಪೂರೈಕೆಯಂಥ ಕೆಲಸಗಳಿಂದಾಗಿ ಲಕ್ಷಾಂತರ ಜನರಿಗೆ ಉದ್ಯೋಗ ಸಿಕ್ಕಿತು. ಜನರ ಜೀವನ ಗುಣಮಟ್ಟ ಸುಧಾರಿಸಿತು. ನಾಲ್ಕೇ ವರ್ಷಗಳಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಾಯಿತು. ಹೃದ್ರೋಗಿಗಳ ಸಂಖ್ಯೆಯಲ್ಲಿ ಶೇ 35ರಷ್ಟು ಇಳಿತ ಹಾಗೂ ಸಕ್ಕರೆ ರೋಗಿಗಳ ಸಂಖ್ಯೆಯಲ್ಲಿ ಶೇ 50ರಷ್ಟು ಇಳಿತ ಕಂಡು ಬಂತು. ಕ್ಯೂಬಾದ ಸಾವಯವ ಬೇಸಾಯ ಸಂಘಕ್ಕೆ 1999ರಲ್ಲಿ ಬದಲೀ ನೊಬೆಲ್ ಪ್ರಶಸ್ತಿ ಕೂಡ ಲಭಿಸಿತು.

ಅಂತರರಾಷ್ಟ್ರೀಯ ವಿಜ್ಞಾನ ತಂತ್ರಜ್ಞಾನದ ಬೆಂಬಲವಾಗಲೀ ಹಣಕಾಸಿನ ನೆರವಾಗಲೀ ಇಲ್ಲದ ಕಾರಣ ಕ್ಯೂಬಾದ ವಿಜ್ಞಾನಿಗಳು ದೇಸೀ ಮಾರ್ಗದಲ್ಲೇ ನಾನಾ ಬಗೆ ಸಂಶೋಧನೆಗಳನ್ನು ಮಾಡತೊಡಗಿದರು. ಸಂಶೋಧನಾ ಸಲಕರಣೆಗಳೆಲ್ಲ ಹಳೇ ಕಾಲದ್ದು. ಇಂಟರ್ನೆಟ್ ತೀರಾ ನಿಧಾನ. ವಿಜ್ಞಾನಿಗಳ ಸಂಬಳವೂ ಕಡಿಮೆ. ಆದರೂ ಅಲ್ಲಿನವರ ಛಲ ನೋಡಿ. ‘ಇತರ ದೇಶಗಳ ಮುಖ್ಯವಾಹಿನಿಯ ವಿಜ್ಞಾನಿಗಳಿಗೆ ಕಾಣದ ಸಣ್ಣ ಸಣ್ಣ ಸಂಗತಿಗಳತ್ತ ಗಮನ ಹರಿಸುವ ನಾವೆಲ್ಲ ಗೆರಿಲ್ಲಾ ವಿಜ್ಞಾನಿಗಳು’ ಎನ್ನುತ್ತಾರೆ ಹವಾನಾ ವಿ.ವಿ.ಯ ಎರ್ನೆಸ್ಟೊ ಆಲ್ಟ್ ಶೂಲರ್.

ಅಮೆರಿಕದಲ್ಲಿ ದಶಲಕ್ಷಾಂತರ ಡಾಲರ್ ವೆಚ್ಚ ಮಾಡಿ ನಡೆಸಿದ ‘ಸೂಕ್ಷ್ಮಗುರುತ್ವ’ದ ಪ್ರಯೋಗಗಳಿಗೆ ಧಾನ್ಯದಂಥ ಕಾಳುಗಳನ್ನು ಬಳಸಿ ಕೇವಲ ನೂರು ಡಾಲರ್‌ಗಳಲ್ಲಿ ಅದಕ್ಕಿಂತ ಉತ್ತಮ ಗುಣಮಟ್ಟದ ಸಂಶೋಧನೆ ನಡೆಸಿದ ಹಿರಿಮೆ ಈತನದು. ಮೆಟ್ಟಿಲಿನ ಇಳಿಜಾರಿನಗುಂಟ ಮರಳು ತುಂಬಿದ ಬಕೆಟ್‌ಗಳನ್ನು ಬೀಳಿಸಿ ಗ್ರಾವಿಟಿ ಸೂತ್ರಗಳನ್ನು ರೂಪಿಸಿದವ. ‘ನಮ್ಮಲ್ಲಿ ಡಾಲರ್ ಇಲ್ಲ; ಆದರೆ ಮರಳು ಹೇರಳ ಇದೆ’ ಎಂದು ಆತ ಈಚೆಗೆ ಹೇಳಿದ್ದನ್ನು ದ ಗಾರ್ಡಿಯನ್ ಪತ್ರಿಕೆ ದಾಖಲಿಸಿದೆ.

ಭೂಕಂಪನ, ಬೆಂಕಿ ಅನಾಹುತದಂಥ ಅನಿರೀಕ್ಷಿತ ಘಟನೆಯಿಂದ ಗಾಬರಿಬಿದ್ದ ಜನಸ್ತೋಮ ಹೇಗೆ ವರ್ತಿಸುತ್ತದೆ ಎಂಬುದನ್ನು ಇರುವೆಗಳ ಸತತ ಅಧ್ಯಯನದ ಮೂಲಕ ವಿವರಿಸಿದ ಇಂಥ ಅಲ್ಪವೆಚ್ಚದ, ಮಹತ್ವದ ಸಂಶೋಧನೆಗಳನ್ನು ನೋಡಿ ‘ನಾವೆಲ್ಲ ನಾಚಿಕೊಳ್ಳಬೇಕು’ ಎಂದು ಜರ್ಮನಿಯ ವಿಜ್ಞಾನಿಗಳು ಶ್ಲಾಘಿಸಿದ್ದಾರೆ. ಫಿಡೆಲ್ ಕ್ಯಾಸ್ಟ್ರೋನ ಮಗ ಫಿಡೆಲ್ ಏಂಜೆಲ್ ಕ್ಯಾಸ್ಟ್ರೋ ಸ್ವತಃ ಭೌತವಿಜ್ಞಾನಿಯಾಗಿದ್ದು ನ್ಯಾನೊ ಟೆಕ್ನಾಲಜಿ ಕ್ಷೇತ್ರದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ.

ಮಿದುಳಿನ ಬಗ್ಗೆ ಯಾವುದೇ ಸಂಶೋಧನೆ ಮಾಡುವುದಾದರೂ ಆಧುನಿಕ ವಿಜ್ಞಾನಕ್ಕೆ ಲಕ್ಷಾಂತರ ಡಾಲರ್ ಮೌಲ್ಯದ ಎಮ್ಆರ್ಐ ಸ್ಕ್ಯಾನರ್ ಬೇಕು. ಅಂಥ ಯಂತ್ರಗಳ ಉಸ್ತುವಾರಿಗೆ ಹಾಗೂ ಅಲ್ಲಿಂದ ಹೊಮ್ಮುವ ಸಂಕೇತಗಳನ್ನು ಓದಬಲ್ಲ ತಜ್ಞನಿಗೆ ಭಾರೀ ವೆಚ್ಚ ಮಾಡಬೇಕು. ಕ್ಯೂಬನ್ನರಿಗೆ ಅದೆಲ್ಲ ಲಭ್ಯವಿರಲಿಲ್ಲ. ಅಮೆರಿಕದ ದಿಗ್ಬಂಧನ ಅದೆಷ್ಟು ಬಿಗಿಯಾದದ್ದೆಂದರೆ, ಜಗತ್ತಿನ ಯಾವುದೇ ದೇಶದಲ್ಲಿ ತಯಾರಾದ ಯಂತ್ರ ಸಾಮಗ್ರಿಯಲ್ಲಾಗಲೀ ದ್ರವ್ಯಗಳಲ್ಲಾಗಲೀ ಶೇ 10ರಷ್ಟು ಅಂಶ ಅಮೆರಿಕದ್ದಾಗಿದ್ದರೂ ಅದನ್ನು ಕ್ಯೂಬಾಕ್ಕೆ ಕಳಿಸುವಂತಿಲ್ಲ.

ಹಾಗಾಗಿ ಟೆಂಪೊ, ಸ್ಕೂಟರು, ಕ್ಯಾಮೆರಾ, ಡಾಕ್ಟರರ ಸ್ಟೆಥಾಸ್ಕೋಪಿನಿಂದ ಹಿಡಿದು ಬಟ್ಟೆಬರೆ, ಬಿಸ್ಕೆಟ್, ಕನ್ನಡಕವೂ ಅಲ್ಲಿನವರಿಗೆ ಸಿಗುತ್ತಿಲ್ಲ. ‘ದಿಗ್ಬಂಧನ ಒಂಥರಾ ದೇವರ ಹಾಗೆ, ಸರ್ವಾಂತರ್ಯಾಮಿ’ ಎಂದು ತಮಾಷೆಯಾಗಿ ಕ್ಯೂಬನ್ನರು ಹೇಳುತ್ತಾರೆ. ಹೀಗಿರುವಾಗ ವೈದ್ಯಕೀಯ ಸಂಶೋಧನೆಗೆ ಎಮ್ಆರ್ಐ ಸ್ಕ್ಯಾನರ್ ಎಲ್ಲಿಂದ ಸಿಕ್ಕೀತು? ತಮ್ಮಲ್ಲಿದ್ದ ಹಳೇ ಕಾಲದ, ಅಗ್ಗದ ಇಇಜಿ ಯಂತ್ರವನ್ನೇ ಆ ಕೆಲಸಕ್ಕೆ ಬಳಸಿದರು. ತಲೆಬುರುಡೆಗೆ ಅಲ್ಲಲ್ಲಿ ಇಲೆಕ್ಟ್ರೋಡ್‌ಗಳನ್ನು ಅಂಟಿಸಿದಾಗ ಮಿದುಳಿನಿಂದ ಹೊಮ್ಮುವ ವಿವಿಧ ತರಂಗಗಳನ್ನು ಆಧುನಿಕ ವಿಜ್ಞಾನಿಗಳು ಎಂದೋ ಬಳಸಿ ಕೈಬಿಟ್ಟಿದ್ದಾರೆ.

ಇವರು ಅಂಥ ಇಲೆಕ್ಟ್ರೋಡ್‌ಗಳದ್ದೇ ಒಂದು ಟೋಪಿಯನ್ನು ರಚಿಸಿ, ಅದನ್ನು ರೋಗಿಯ ತಲೆಯ ಮೇಲೆ ಕೂರಿಸಿ, ಆತ ಅತ್ತಾಗ, ನಕ್ಕಾಗ, ಧ್ಯಾನಸ್ಥನಾದಾಗ ಈ ಅಲೆಗಳು ಹೇಗೆ ಚಲಿಸುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಬಲ್ಲ ಹೊಸಬಗೆಯ ಅಲ್ಗೊರಿದಂ ಸೂತ್ರಗಳನ್ನು ಬರೆದರು. ಟೋಪಿ ಧರಿಸಿದವನ ಮನಸ್ಥಿತಿಯನ್ನೂ, ಅವನನ್ನು ಕಾಡುವ ರೋಗದ ಲಕ್ಷಣಗಳನ್ನೂ ಸಮರ್ಥವಾಗಿ ವಿಶ್ಲೇಷಿಸುವಂಥ ಸಾಫ್ಟ್ ವೇರ್‌ಗಳನ್ನು ಸಿದ್ಧಪಡಿಸಿ ಭಲೇ ಎನ್ನಿಸಿಕೊಂಡರು.

ಈಗ ಕ್ಯಾನ್ಸರಿಗೆ ಬರೋಣ. ಸಿಗಾರ್ ಸೇದುವ ಸಂಸ್ಕೃತಿಯಿಂದಾಗಿ ಸಹಜವಾಗಿ ಅಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪೀಡಿತರ ಸಂಖ್ಯೆ ಸಾಕಷ್ಟಿದೆ. ಆದರೆ ಸಂಶೋಧನೆಗೆ ಸವಲತ್ತುಗಳಿಲ್ಲ. ಇತರೆಲ್ಲ ದೇಶಗಳಿಗಿಂತ ಭಿನ್ನ ದಾರಿಯಲ್ಲಿ ಕ್ಯೂಬಾದ ಮೆಡಿಕಲ್ ವಿಜ್ಞಾನಿಗಳು ಕ್ಯಾನ್ಸರ್ ಕೋಶಗಳನ್ನು ಬೇಟೆಯಾಡಲು ಹೊರಟರು. ಕ್ಯಾನ್ಸರಿಗೆ ಪೋಷಣಶಕ್ತಿ ನೀಡಬಲ್ಲ ಒಂದು ಬಗೆಯ ಪ್ರೊಟೀನ್ ಮನುಷ್ಯನಲ್ಲಿ ಇರುವುದು ಗೊತ್ತಿತ್ತು. ಅದರ ವಿರುದ್ಧವೇ ಒಂದು ಲಸಿಕೆ ತಯಾರಿಸಿದರು.

ಅದು ನೇರವಾಗಿ ಕ್ಯಾನ್ಸರ್ ಕೋಶಗಳಿದ್ದಲ್ಲಿಗೆ ಧಾವಿಸಿ ಅವಕ್ಕೆ ಆಹಾರವೇ ಸಿಗದಂತೆ ಮಾಡಿ ಸಾಯಿಸುತ್ತದೆ. ಅಡ್ಡಪರಿಣಾಮಗಳೇ ಇಲ್ಲ. ಸಿಮಾವ್ಯಾಕ್ಸ್ ಹೆಸರಿನ ಈ ಲಸಿಕೆ ಸಾಕಷ್ಟು ಪರಿಣಾಮಕಾರಿ ಎಂಬುದು ಗೊತ್ತಾಗಿ ಈಗ ಔಷಧ ಕಂಪೆನಿಗಳ ಗಮನ ಅತ್ತ ಹರಿಯತೊಡಗಿದೆ. ಔಷಧ ಮತ್ತು ಜೈವಿಕ ತಂತ್ರಜ್ಞಾನ ರಂಗದಲ್ಲಿ ಕ್ಯೂಬನ್ ವಿಜ್ಞಾನಿಗಳು ಮಾರ್ಗದರ್ಶಿ ಸಂಶೋಧನೆಗಳನ್ನು ಮಾಡಿ ಹೊಸ ಔಷಧಗಳನ್ನು ತಯಾರಿಸುತ್ತಿದ್ದಾರೆ. ಈಗ ಔಷಧಗಳ ರಫ್ತಿನಿಂದಲೇ ಆ ರಾಷ್ಟ್ರಕ್ಕೆ ಅತಿ ಹೆಚ್ಚು ವಿದೇಶಿ ವಿನಿಮಯ ಗಳಿಕೆಯಾಗುತ್ತಿದೆ.

ಮಲೇರಿಯಾ, ಮಿದುಳುಜ್ವರ, ಕಾಮಾಲೆ, ಮಧುಮೇಹಗಳಿಗೆ ಅಲ್ಲಿನವರು ಹುಡುಕಿದ ಔಷಧಗಳ ಹೊಳಹು ಜಪಾನ್ ಮತ್ತು ಐರೋಪ್ಯ ದೇಶಗಳಿಗೆ ಸಿಗತೊಡಗಿದೆ. ಅಮೆರಿಕ ಮಾತ್ರ ತಾನೇ ಹಾಕಿಕೊಂಡ ದಿಗ್ಬಂಧನದಿಂದಾಗಿ ಇಂಥ ಮೆಡಿಕಲ್ ಮಾಹಿತಿಗಳಿಂದ ವಂಚಿತವಾಗಿತ್ತು. ಅದಕ್ಕೇ ಕಳೆದ ವಾರ ಕ್ಯೂಬಾದ ಈಗಿನ ಅಧ್ಯಕ್ಷ ರಾವುಲ್ ಕ್ಯಾಸ್ಟ್ರೋ ಜತೆ ಮಾಹಿತಿ ವಿನಿಮಯ ಒಪ್ಪಂದಗಳಿಗೆ ಸಹಿ ಹಾಕುವುದಾಗಿ ಒಬಾಮಾ ಹೇಳಿದ್ದಾರೆ. ಇದು ಜಾರಿಗೆ ಬರುತ್ತಿದ್ದಂತೆ ಅಮೆರಿಕದ ಸಂಶೋಧಕರು ಕ್ಯೂಬಾಕ್ಕೆ ಬರಬಹುದಾಗಿದೆ.

ಸಂಶೋಧನೆಗೆ ಬೇಕಾದ ಈಚಿನ ಸಲಕರಣೆಗಳನ್ನು ತರಬಹುದಾಗಿದೆ. ಕ್ಯೂಬಾದ ವಿಜ್ಞಾನಿಗಳು ಅಮೆರಿಕಕ್ಕೆ ಭೇಟಿ ನೀಡಬಹುದಾಗಿದೆ. ನಾವು ಭಾರತೀಯರು ಕ್ಯೂಬಾದಿಂದ ಕಲಿಯಬೇಕಾದ ಪಾಠಗಳು ಸಾಕಷ್ಟಿವೆ. ಸಾವಯವ ಕೃಷಿ ವಿಷಯ ಹಾಗಿರಲಿ, ಅದನ್ನು ವಿಜ್ಞಾನವೆಂದು ಯಾರೂ ಪರಿಗಣಿಸುತ್ತಿಲ್ಲ. ಇನ್ನುಳಿದ ಕ್ಷೇತ್ರಗಳಲ್ಲಿ, ಅದು ಎಂಜಿನಿಯರಿಂಗ್ ಇರಲಿ, ಶುದ್ಧ ವಿಜ್ಞಾನವೇ ಇರಲಿ ನಮ್ಮದೆಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಸಂಶೋಧನೆಗಳೇ ಕಾಣುತ್ತಿಲ್ಲ.

ಹಿಂದೊಂದು ಕಾಲದಲ್ಲಿ ಸರ್ ಸಿ.ವಿ.ರಾಮನ್ ತೀರಾ ಸಾಧಾರಣ ಸಲಕರಣೆಗಳನ್ನು ಬಳಸಿ ನೊಬೆಲ್ ಪಡೆದದ್ದೇನೊ ಹೌದು. ಈಗ ನಮ್ಮಲ್ಲಿ ಯಾವ ವಿಜ್ಞಾನ ಸಂಸ್ಥೆಯ ಲ್ಯಾಬೊರೇಟರಿಯನ್ನು ನೋಡಿದರೂ ವಿದೇಶಗಳಲ್ಲಿ ತಯಾರಾದ ಸಲಕರಣೆಗಳು, ಶೋಧಯಂತ್ರಗಳು, ಕೆಮಿಕಲ್ ರೀಏಜೆಂಟ್‌ಗಳು, ಸಂಪರ್ಕ ಸಾಧನಗಳು ಹಾಸು ಹೊಕ್ಕಾಗಿವೆ. ಜಗತ್ತಿನ ಯಾವ ದೇಶದಲ್ಲಿ ಏನೆಲ್ಲ ಸಂಶೋಧನೆಗಳು ನಡೆಯುತ್ತಿವೆ ಎಂಬುದರ ಮಾಹಿತಿ ಸಲೀಸಾಗಿ ಬೆರಳ ತುದಿಯಲ್ಲೇ ಸಿಗುತ್ತದೆ.

ಸಂಬಳ ಸವಲತ್ತುಗಳ ವಿಷಯ ಕೇಳುವುದೇ ಬೇಡ. ಆದರೂ ನಮ್ಮ ಸಂಶೋಧನೆಯ ಗುಣಮಟ್ಟ ಮಾತ್ರ ರಾಷ್ಟ್ರಕ್ಕೆ ಅವಮಾನ ತರುವಷ್ಟು ಕಳಪೆ ಮಟ್ಟದಲ್ಲಿದೆ. ವಿಶ್ವವಿದ್ಯಾಲಯಗಳಲ್ಲಂತೂ ಹಣಕಾಸಿನ ಕೊರತೆ ನೆಪವನ್ನೇ ಮುಂದೊಡ್ಡಿ, ವರ್ಷದಿಂದ ವರ್ಷಕ್ಕೆ ಸಂಶೋಧನೆಗಳ ಗುಣಮಟ್ಟ ತಳಕ್ಕಿಳಿಯುತ್ತಿದೆ. ಕ್ಯೂಬಾದಿಂದ ಕಲಿಯಬೇಕಾದ್ದು ಒಂದೆರಡಲ್ಲ. ತಮಾಷೆಯ ಒಂದು ಸಂಗತಿ ಗಮನಕ್ಕೆ ಬಂತೆ? ತಂಬಾಕಿನಿಂದ ತಯಾರಿಸಿದ ಸಿಗಾರ್‌ಗಳ ರಫ್ತಿನಿಂದ ಹಿಂದೊಮ್ಮೆ ಕ್ಯೂಬಾ ಅಪಾರ ಹಣ ಗಳಿಸುತ್ತಿತ್ತು. ಈಗ ಶ್ವಾಸಕೋಶಗಳ ಕ್ಯಾನ್ಸರಿಗೆ ಔಷಧ ರಫ್ತು ಮಾಡತೊಡಗಿದೆ.
editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.