ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗಪಟ್ಟಣ ದಸರಾ: ಪ್ರಕಾಶಿಸಿದ ‘ವಿಜಯ’ ಗಾಯನ

Published : 6 ಅಕ್ಟೋಬರ್ 2024, 13:49 IST
Last Updated : 6 ಅಕ್ಟೋಬರ್ 2024, 13:49 IST
ಫಾಲೋ ಮಾಡಿ
Comments

ಮಂಡ್ಯ: ಶ್ರೀರಂಗಪಟ್ಟಣ ದಸರಾ ಉತ್ಸವದ ‘ಸಂಗೀತ ಸಂಜೆ’ ಕಾರ್ಯಕ್ರಮದಲ್ಲಿ ಪ್ರಸಿದ್ಧ ಹಿನ್ನೆಲೆ ಗಾಯಕ ವಿಜಯ್‌ ಪ್ರಕಾಶ್‌ ‘ಕಾಂತಾರ’ ಚಿತ್ರದ ‘ಸಿಂಗಾರ ಸಿರಿಯೇ ಅಂಗಾಲಿನಲಿ ಬಂಗಾರ ಅಗೆವ ಮಾಯೆ’ ಹಾಡು ಹಾಡಿ ಕೇಳುಗರ ಮೊಗದಲ್ಲಿ ಮಂದಹಾಸ ಮಿನುಗುವಂತೆ ಮಾಡಿದರು.

‘ಸಾಹಸ ಸಿಂಹ’ ವಿಷ್ಣುವರ್ಧನ್ ಅಭಿನಯದ, ಹಂಸಲೇಖ ರಚಿಸಿರುವ ‘ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಇದರ ಚಾಟಿ ಕಣೋ’ ಹಾಡನ್ನು ವಿಜಯ್‌ ಪ್ರಕಾಶ್‌– ಅನುರಾಧಾ ಭಟ್‌ ಜೋಡಿಯ ಹಾಡಿಗೆ ನೆರೆದಿದ್ದವರು ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟುತ್ತಾ ತಾವೂ ದನಿಗೂಡಿಸಿದರು. 

ಡಾ.ರಾಜ್‌ ಅಭಿನಯದ ‘ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು’ ಮತ್ತು ‘ಮಂಡ್ಯದ ಗಂಡು’ ಅಂಬರೀಶ್‌ ನಟಿಸಿರುವ ‘ಒಲವಿನ ಉಡುಗೊರೆ ಕೊಡಲೇನು, ರಕುತದಿ ಬರೆದೆನು ಇದ ನಾನು’ ಹಾಡು ಮಂಡ್ಯ ಜನರ ಹೃದಯ ತಟ್ಟಿತು.

ಗಾಯಕ ನಿಖಿಲ್‌ ಪಾರ್ಥಸಾರಥಿ ಅವರ ಕಂಠದಿಂದ ಹೊಮ್ಮಿದ, ‘ಕ್ರೇಜಿ ಸ್ಟಾರ್‌’ ರವಿಚಂದ್ರನ್‌ ಅಭಿನಯದ ‘ಕರುನಾಡೇ ಕೈ ಚಾಚಿದೆ ನೋಡೆ’ ಗೀತೆ ಕನ್ನಡದ ಕಂಪನ್ನು ಪಸರಿಸಿತು. ಗಾಯಕಿ ಸುಹಾನಾ ಸಯ್ಯದ್‌ ‘ಬನ್ನಿ ಮುಡಿಯೋಣ ಬಾರಾ ಕೋಲು ಕೋಲಾ’ ಹಾಡಿನ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಅಪ್ಪನ ಮೇಲಿನ ಮಗಳ ಅದಮ್ಯ ಪ್ರೀತಿ ಮತ್ತು ಮಮಕಾರವನ್ನು ‘ಅಪ್ಪ ಐ ಲವ್‌ ಯೂ ಪಾ’ ಹಾಡು ಕಟ್ಟಿಕೊಟ್ಟಿತು. ‘ನಾನು ನೋಡಿದ ಮೊದಲ ವೀರ, ಬಾಳು ಕಲಿಸಿದ ಸಲಹೆಗಾರ, ಬೆರಗು ಮೂಡಿಸೋ ಜಾದೂಗಾರ ಅಪ್ಪ’ ಸಾಲುಗಳಂತೂ ಪ್ರೇಕ್ಷಕರು ಮತ್ತೆ ಮತ್ತೆ ಗುನುಗುವಂತೆ ಮಾಡಿದವು.

ವಿಜಯ್‌ ಪ್ರಕಾಶ್‌ ಮತ್ತು ತಂಡದ ಗಾಯನ ಸಂಗೀತ ರಸಿಕರಿಗೆ ರಸದೌತಣವನ್ನೇ ಉಣಬಡಿಸಿತು. ಹಾಡುಗಳಿಗೆ ಮಕ್ಕಳು, ಯುವಕ ಮತ್ತು ಯುವತಿಯರು ನೃತ್ಯ ಮಾಡಿ ಸಂಭ್ರಮಿಸಿದರೆ ಹಿರಿಯರ ಮೊಗದಲ್ಲಿ ಮಂದಹಾಸ ಮಿನುಗುತ್ತಿತ್ತು. ಶ್ರೀರಂಗಪಟ್ಟಣದಲ್ಲಿ ಸಂಜೆಯಿಂದಲೂ ತುಂತುರು ಮಳೆ ಸುರಿಯುತ್ತಿತ್ತು. ಸಂಗೀತದ ಮೋಡಿಗೆ ವರುಣ ದೇವ ಕೂಡ ತಲೆ ತೂಗುತ್ತಿದ್ದಾನೇನೋ ಎಂಬಂತೆ ಭಾಸವಾಯಿತು.

ವೇದಿಕೆಯಿಂದ ಪ್ರೇಕ್ಷಕರ ಗ್ಯಾಲರಿಯ ಕಡೆಗೆ ಅಲೆ ಅಲೆಯಾಗಿ ತೇಲಿ ಬರುತ್ತಿದ್ದ ಸಂಗೀತ ನೆರೆದಿದ್ದವರನ್ನು ಮೂಕ ವಿಸ್ಮಿತರನ್ನಾಗಿ ಮಾಡಿತು. ಕೆಲವು ಗೀತೆಗಳಂತೂ ಪ್ರೇಕ್ಷಕರನ್ನು ಭಾವಪರವಶಗೊಳಿಸಿದವು. ಸಂಗೀತ ರಸ ಸಂಜೆಯಲ್ಲಿ ತೋಯ್ದ ಜನ, ತುಂತುರು ಹನಿಯಲ್ಲಿ ಮಿಂದು, ಹಾಡುಗಳನ್ನು ಮೆಲುಕು ಹಾಕುತ್ತಾ ಮನೆ ಕಡೆಗೆ ಹೆಜ್ಜೆ ಹಾಕಿದರು.

ಹಿನ್ನೆಲೆ ಗಾಯಕಿ ಅನುರಾಧಾ ಭಟ್‌ ಗಾಯನ ಪ್ರಸ್ತುತಪಡಿಸಿದರು
ಹಿನ್ನೆಲೆ ಗಾಯಕಿ ಅನುರಾಧಾ ಭಟ್‌ ಗಾಯನ ಪ್ರಸ್ತುತಪಡಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT