ತ್ರೇತಾಕಾಲ, ದ್ವಾಪರ, ಕಲಿಗಾಲ ಎಲ್ಲಾ ಕೇಳಿದ್ದೇವೆ. ಆದರೆ ಇದ್ಯಾವುದಪ್ಪಾ ಮತ್ತೊಂದು ಇಲಿಗಾಲ ಅಂತ ಭಯಬೀಳೋಕೆ ಮುಂಚೆ ನಾನೇ ಇದರ ವಿಷಯ ಹೇಳುತ್ತೇನೆ ಬಿಡಿ.

ಎರಡು ವರ್ಷದ ಹಿಂದೆ ಯಾವುದೋ ಎಕ್ಸಿಬಿಷನ್‍ಗೆ ಹೋದ ನಮ್ಮ ಮಾವನವರು ಬರುವಾಗ ಒಂದು ಇಲಿ ಕತ್ತರಿಯನ್ನು ತಂದಿದ್ದರು. ಮನೆಗೆ ಎಷ್ಟೊಂದು ಅಗತ್ಯದ ವಸ್ತುಗಳು ಬೇಕಿರುವಾಗ ಯಕಶ್ಚಿತ್ ಒಂದು ಇಲಿಯನ್ನು ಹಿಡಿಯುವ ಸಾಧನವನ್ನು ಕೊಂಡು ತಂದಿರುವರಲ್ಲ ಅಂತ ಇನ್ಯಾರಾದರೂ ಆಗಿದ್ರೆ ಪೆಚ್ಚು ಮೋರೆ ಹಾಕಿ ಬಿಡುತ್ತಿದ್ದರು. ಆದರೆ ನಮಗಂತೂ ಖುಷಿಯೇ ಆಗಿತ್ತು. ಯಾಕೆಂದರೆ ಮನೆಯಲ್ಲಿ ಉಳಿದಿರುವ ವಸ್ತುಗಳನ್ನು ರಕ್ಷಿಸಿಕೊಳ್ಳಲು ಇಲಿಯಿಂದ ಪಾರಾಗಬೇಕಿತ್ತು. ಈ ಕಾಲದಲ್ಲಿ ಇಂತಹ ಸೋಜಿಗ ಉಂಟಾ? ಕೇವಲ ಚಿಟ್ಟಾಣಿ ಚಿಕ್ಕಿಲಿಗಳಿಗಾಗಿ ಇಷ್ಟೊಂದು ಪಡಿಪಾಟಲು ಪಡಬೇಕಾ? ಅಂತ ನೀವ್ಯಾರಾದರೂ ಅಂದುಕೊಂಡರೆ, ನಿಮ್ಮ ಮನೆಯಲ್ಲಿ ಇಲಿಗಳ ಕಾಟವಿಲ್ಲ.

ನೀವೆಲ್ಲಾ ಪುಣ್ಯವಂತರು ಅಂತ ಅಸೂಯೆಯಾಗುತ್ತದೆ. ಸುಮ್ಮನೆ ಅತ್ತಿಂದಿತ್ತ ಓಡಾಡುತ್ತಾ ದಾಂಧಲೆ ಎಬ್ಬಿಸುತ್ತಿದ್ದ ಇಲಿಗಳಿಗಾಗಿ ಮೊದಲು ನನ್ನ ಮಾವನವರು ಅದೆಷ್ಟು ಗಾಢ ನಿದ್ರೆಯಲ್ಲಿದ್ದರೂ ಸದ್ದು ಕೇಳಿದೊಡನೆ ಎಚ್ಚೆತ್ತು ಒಂದು ಸಪೂರದ ಕೋಲು ಹಿಡಿದುಕೊಂಡು , ಇಲಿಯನ್ನು ಹಿಡಿದೇ ಸಿದ್ಧ ಅಂತ ಪಣ ತೊಟ್ಟಂತೆ ಬಾಗಿಲು ಬಂದ್ ಮಾಡಿ ಶೋಧನೆ ನಡೆಸುತ್ತಿದ್ದರು. ಆ ಇಲಿಯೋ ಮತ್ತೂ ಚಾಣಕ್ಷಮತಿ. ಅತ್ತಿಂದಿತ್ತ ಹಾರಿ, ಮೇಲೆ ಹತ್ತಿ ಕೆಳಗೆ ಇಳಿದು, ಎಡೆಯಲ್ಲಿ ನುಸುಳಿ, ಡಬ್ಬಿ ಸಂಧಿ, ಬೀರುವಿನ ಸಂಧಿ, ಹೋದೆಡೆಯಲ್ಲೆಲ್ಲಾ ತನ್ನ ಹಿಡಿ ದೇಹವನ್ನು ಮತ್ತಷ್ಟು ಹಿಡಿಯಾಗಿಸಿ ಅಡಗಿ ಕುಳಿತುಕೊಂಡರೆ, ನನ್ನ ಮಾವನವರೋ ಛಲ ಬಿಡದ ತ್ರಿವಿಕ್ರಮನಂತೆ ಮತ್ತಷ್ಟು ಹುರುಪಿನಿಂದ ಕೋಲುಧಾರಿಯಾಗಿ ಅತ್ತಿಂದಿತ್ತ ಟಕ ಟಕ ಶಬ್ದ ಮಾಡುತ್ತಾ ಸಾಕಷ್ಟು ಬೆವರಿಳಿಸಿಕೊಂಡರೆ, ಇತ್ತ ಇಲಿಯೋ ಅತ್ತಿಂದಿತ್ತ ಕೆರೆ-ದಡ ಆಡಿ ಸುಸ್ತಾಗಿ , ಯಾವುದೋ ಮಾಯಕದಲ್ಲಿ ಎರಗಿದ ಕೋಲಿನ ಅಡಿಯಲ್ಲಿ ಅಪ್ಪಚ್ಚಿಯಾಗಿ ನೆಲಕ್ಕಂಟಿ ಬಿಡುತ್ತಿತ್ತು.

ಎಷ್ಟು ದಿನ ಹೀಗೆ ಒನಕೆ ಓಬವ್ವನಂತೆ ಕಾದು ಕುಳಿತು ಇಲಿಯನ್ನು ಬರೇ ಕೋಲಿನಿಂದ ಸಂಹಾರ ಮಾಡಲು ಸಾಧ್ಯ?. ಹಾಗಂತ ಅದನ್ನು ಸುಮ್ಮಗೆ ಬಿಡುವ ಹಾಗೂ ಇಲ್ಲ. ಅಯ್ಯೋ! ಹೀಗೊಂದು ಇಲಿಗಳ ವಾಸ್ತವ್ಯ ಇರುವ ಇವರ ಮನೆಯೇನು ಗೋದಾಮಾ? ಅಂತ ನೀವ್ಯಾರೂ ಹುಬ್ಬೇರಿಸುವ ಹಾಗಿಲ್ಲ. ಅದಕ್ಕೆ ಪರೋಕ್ಷವಾಗಿ ನೀವೆಲ್ಲ ಕಾರಣರೂ ಹೌದು. ಯಾಕೆಂದರೆ ಯಾರೂ ಈಗ ಬೇಸಾಯದ ಗೋಜಿಗೆ ಹೋಗುತ್ತಿಲ್ಲ. ನಾವು ಕೃಷಿಕರಾದರೂ ಭತ್ತ ಬೆಳೆಯದೆ, ಧವಸ ಧಾನ್ಯ ಕೂಡಿಡದೆ ದಶಕಗಳೇ ಸಂದಿರಬಹುದು. ಬಹುಶ: ಹಾಗೇನಾದ್ರೂ ಇದ್ದಿದ್ದರೆ ಇಲಿ ತನಗೆ ಬೇಕಾದಷ್ಟು ತೆಪ್ಪಗೆ ತಿಂದು ತನ್ನ ಬಿಲ ಸೇರುತ್ತಿತ್ತೋ ಏನೋ. ಈಗಿಲ್ಲಿ ನಾವು ತರುವುದು ಒಂದು ತಿಂಗಳಿಗಾಗುವಷ್ಟು ಸಾಮಾನು.

ಅದನ್ನು ಹುಡುಕಿ, ತಡುಕಿ, ಇಲಿ ಅರೆಕಚ್ಚಿ ತಿಂದು ಅರೆ ಬರೆ ನಮಗೆ ಉಳಿಸಿದ ಮೇಲೆ ವಾರಕ್ಕೊಮ್ಮೆ ಸಾಮಾನು ತರುವ ಪರಿಪಾಠ ಬೆಳೆಸಿಕೊಂಡೆವು. ಈಗ ಇಲಿ ಮತ್ತಷ್ಟು ಚುರುಕಾಗ ತೊಡಗಿತು. ತಂದ ಒಂದು ಕೆ.ಜಿ ಟೋಮೆಟೋ ಹಣ್ಣುಗಳು ಒಂದೊಂದಾಗಿ ಕಾಣೆಯಾಗಲು ತೊಡಗಿದಾಗಲೇ ಗೊತ್ತಾದದ್ದು ಇದು ಇಲಿ ಕಾಟ ಅಂತ. ತಂದ ಅಲಸಂಡೆ ಬೀನ್ಸುಗಳ ಬೀಜ ಹೊರಳಿಸಿ ತಿನ್ನುವುದು, ಬಾಳೆಗೊನೆಯಿಂದಲೇ ಬಾಳೆಹಣ್ಣು ಕಿತ್ತು ಅರ್ಧಕ್ಕೇ ಅದರ ಪುಟಾಣಿ ಹೊಟ್ಟೆ ತುಂಬಿ ಉಳಿದರ್ಧವನ್ನ ಮಹಡಿ ಮೇಲೆ ಹಾಕಿಡುವುದು, ತಿನ್ನಲು ಏನೂ ಸಿಗದೇ ಇದ್ದ ಸಿಟ್ಟಿಗೆ ಒಪ್ಪ ಓರಣವಾಗಿಸಿದ್ದ ಪುಸ್ತಕಗಳನ್ನೆಲ್ಲಾ ಅರೆಬರೆ ತಿಂದದ್ದೂ ಸಾಲದೆ ಅದನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಬೇಕಾದಷ್ಟು ಪಿಟ್ಟೆಗಳನ್ನು ರಾಶಿ ಹಾಕಿ ಹೋಗಿ ಬಿಡುತ್ತಿತ್ತು. ಮಹಡಿ ಶುಚಿಗೊಳಿಸಲು ಹೋದಾಗಲೇ ಇದರ ಕಿತಾಪತಿಗೆ ಸಿಟ್ಟು ನೆತ್ತಿಗೇರುವುದು. ಏನೇ ಅದು ರಾದ್ಧಾಂತ ಮಾಡಿದರೂ ಮೊದಲ ಹೊಡೆತ ಬೀಳುವುದು ಮನೆಯೊಡತಿಯರಿಗೇ ತಾನೇ?

ಮೊದ ಮೊದಲು ಇಲಿ ಹಿಡಿಯುವ ಸಲುವಾಗಿ ಮಾಮೂಲಿಯಂತೆ ಇಲಿ ಬೋನನ್ನು ತಂದು ಇಡುತ್ತಿದ್ದೆವು. ಬೋನಿನೊಳಗೆ ಬಿದ್ದ ಇಲಿಯನ್ನು ನೋಡಿ ಬೇರೆ ಇಲಿಗಳು ಬುದ್ಧಿ ಕಲಿತು ಕಾಲಿಗೆ ಬದ್ಧಿ ಹೇಳಿದ ಮೇಲೆ ಗೊತ್ತಾದದ್ದು, ಮನುಷ್ಯ ಬುದ್ಧಿವಂತ ಪ್ರಾಣಿ ಎಂಬುದು ಶತಸುಳ್ಳು ಅಂತ. ಇದು ಮನುಷ್ಯ ತನ್ನನ್ನು ತಾನು ಮೇಲೇರಿಸಿಕೊಳ್ಳಲು ತಾನೇ ಇಟ್ಟುಕೊಂಡ ಬಿರುದಾಂಕಿತ ಅಷ್ಟೆ. ಆದರೆ ಏನೂ ಮಾಡುವ ಹಾಗಿಲ್ಲ, ಅಕ್ಷರಗಳನ್ನು ತಿಂದು ಜೀರ್ಣಿಸಿಕೊಂಡದ್ದಕ್ಕೇ ಇರಬೇಕು ಅದು ಓದೋಕೆ ಪುರುಸೊತ್ತಿಲ್ಲದ ನಮಗಿಂತ ಹೆಚ್ಚು ಬುದ್ದಿವಂತಿಕೆಯನ್ನು ತೋರಿಸುವುದು.

ಈ ಇಲಿ ಪುರಾಣವನ್ನು ಬಂದವರ ಜೊತೆ, ಹೋದವರ ಜೊತೆ ಕತೆಯಂತೆ ಹೇಳುವುದೇ ಆಯಿತು. ಮುಖ್ಯವಾಗಿ ಇದು ಹೇಳುವುದರ ಉದ್ದೇಶ ಒಂದೇ, ಏಕಾಏಕಿ ನೇರವಾಗಿ ಅವರ ಮನೆಗಳಲ್ಲಿ ಇಲಿ ಉಂಟಾ? ಅಂತ ಕೇಳೋಕೆ ಆಗುತ್ತಾ?. ಅದಕ್ಕೇ ಸುತ್ತು ಬಳಸಿ ನಮ್ಮ ಮನೆಯ ಇಲಿ ಕತೆಯನ್ನು ಹೇಳುವಾಗ ಕೆಲವರು ಹ್ಮೂಂ, ಹೌದಪ್ಪಾ! ನಮ್ಮ ಮನೆಯಲ್ಲೂ ಇದೇ ಕಾಟ ಅಂದಾಗ ಸ್ವಲ್ಪ ಸಮಾಧಾನ. ಇನ್ನು ಕೆಲವರು ನಮ್ಮಲ್ಲಿಯೂ ಇತ್ತು, ಬೆಕ್ಕು ತಂದು ಸಾಕಿದ ಮೇಲೆ ಈಗ ಇಲಿಕಾಟವೇ ಇಲ್ಲ ಅಂತ ನಿರಾಳವಾಗಿ ಹೇಳಿದಾಗಲೇ ಈ ಬೆಕ್ಕಿನ ಕತೆ ನೆನಪಾದದ್ದು. ಅಂದ ಹಾಗೆ ಈ ಬೆಕ್ಕು ತಂದು ಸಾಕಿದ್ದರೆ ಈ ಇಲಿಗಳ ಕಾಟದಿಂದ ಮುಕ್ತಿ ಪಡೆಯ ಬಹುದಾಗಿತ್ತೋ ಏನೋ. ಆದರೆ ಅದನ್ನು ಸಾಕಿದರೆ ಮತ್ತೊಂದಷ್ಟು ರಗಳೆಗಳು . ಮೊದ ಮೊದಲು ಚೆಂದ ಚೆಂದದ ಜೂಲು ಬೆಕ್ಕುಗಳು ನಮ್ಮ ಮನೆಯಲ್ಲೂ ಇದ್ದವು. ಸಮಸ್ಯೆ ಏನೆಂದರೆ, ನಮ್ಮ ಮನೆಯ ಬೆಕ್ಕುಗಳಿಗೂ ನಾಯಿಗಳಿಗೂ ಕೂಡಿ ಬರುತ್ತಲೇ ಇರುತ್ತಿರಲಿಲ್ಲ. ಅದೂ ಅಲ್ಲದೆ ನಮ್ಮ ಮನೆಯ ಹಿಂಬದಿಯಲ್ಲೊಂದು ಅಂಟಿಕೊಂಡಂತೆ ಇರುವ ಸೇದು ಬಾವಿ. ನಮ್ಮ ಬೆಕ್ಕು ಆ ಬಾವಿಕಟ್ಟೆಯ ಮೇಲೆ ಎಳೆ ಬಿಸಿಲಿಗೆ ಮೈಯೊಡ್ಡಿಕೊಂಡು ಮಲಗಿಕೊಂಡು ಚೂಪು ಮೀಸೆ ತುದಿಯಲ್ಲಿ ನಗುತ್ತಾ ಕನಸು ಕಾಣುತ್ತಿರುತ್ತದೆ. ಇದು ಹೀಗೆ ಆರಾಮವಾಗಿ ಮಲಗಿಕೊಂಡಿರುವುದು ನಮ್ಮ ಮನೆಯಲ್ಲಿ ಯಾವಾಗಲೂ ಕಟ್ಟಿ ಹಾಕಿಕೊಂಡಿರುವ ನಾಯಿಗೆ ಸರಿ ಕಾಣುವುದಿಲ್ಲವೇನೋ.

ಅದನ್ನು ಬಿಟ್ಟಾಗಲೆಲ್ಲಾ ಮೆಲ್ಲಗೆ ಬಂದು ಒಮ್ಮಿಂದೊಮ್ಮೆಗೆ ಗಕ್ಕನೆ ಬೊಗಳಿ ಹೆದರಿಸಿ ಬಿಡುತ್ತಿತ್ತು. ಯಾವುದೋ ಒಂದು ಅಪೂರ್ವ ಕನಸಿನ ಲೋಕದಲ್ಲಿ ತೇಲುತ್ತಿದ್ದ ಬೆಕ್ಕು ಒಮ್ಮಿಂದೊಮ್ಮೆಗೆ ಹೆದರಿ ಈಚೆ ಬದಿಯ ಕಟ್ಟೆಯಿಂದ ಆಚೆ ಬದಿಗೆ ಗಡಿ ಬಿಡಿಯಲ್ಲಿ ಹಾರಿ ಮೇಲೇರಲು ಪ್ರಯತ್ನಿಸುವಾಗಲೆಲ್ಲಾ ದೊಪ್ಪನೆ ಆಯತಪ್ಪಿ ಬಾವಿಯೊಳಗೆ ಬಿದ್ದು ಬಿಡುತ್ತಿತ್ತು. ನಮ್ಮ ಗಮನಕ್ಕೆ ಬಂದ ಸಂದರ್ಭದಲ್ಲಾದರೆ ಹೇಗಾದರೂ ಮಾಡಿ ಬುಟ್ಟಿ ಇಳಿಸಿ ಬೆಕ್ಕನ್ನು ಪಾರು ಮಾಡುತ್ತಿದ್ದೆವು. ಕೆಲವೊಮ್ಮೆ ನೋಡದೇ ಅದೆಷ್ಟೋ ಬೆಕ್ಕುಗಳು ಹೀಗೇ ವಿನಾಕಾರಣ ಸಾಯುವುದ ಕಂಡು, ಪರೋಕ್ಷವಾಗಿ ಬೆಕ್ಕು ಕೊಂದ ಪಾಪ ತಟ್ಟುವುದು ಬೇಡವೆಂದು ಯಾಕೋ ಈ ಬೆಕ್ಕಿನ ಸಂತತಿಯ ಮೇಲೆಯೇ ಬೇಸರ ಹುಟ್ಟಿ ಬಿಟ್ಟಿತ್ತು. ಅದೂ ಅಲ್ಲದೇ, ಎಷ್ಟೊತ್ತಿಗೂ ಸೋಂಭೇರಿಯಂತೆ ನಿದ್ರಿಸಿಕೊಂಡೇ ಇರುವ ಬೆಕ್ಕು, ಹಸಿವಾದಾಗ ಮಾತ್ರ ಕಳ್ಳ ಹೆಜ್ಜೆಯಲ್ಲಿ ಬಂದು ಹಾಲು ಪಾತ್ರೆಯ ಮುಚ್ಚಳ ಸರಿಸಿ ಹಾಲು ಕುಡಿಯುವುದು, ಯಾವಾಗಲಾದರು ಒಮ್ಮೆ ನನಗೂ ಬೇಟೆಯಾಡಲು ಗೊತ್ತುಂಟು , ಸೋಂಭೇರಿ ಅಂತ ಜರೆಯಬೇಡಿ ಅಂತ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲೋಸುಗ ಹಲ್ಲಿಯನ್ನು, ಆರಣೆಯನ್ನು ಹಿಡಿದು ತಂದು ಅರೆ ಜೀವ ಮಾಡಿ ಮನೆಯೊಳಗೆ ತಂದು ಹಾಕಿ ಬಿಡುತ್ತಿತ್ತು.

ಹಾಗಾಗಿ ಈ ಬೆಕ್ಕಿನ ಸಹವಾಸವೇ ಬೇಡ ಅಂತ ಹೊಸ ಮನೆ ಕಟ್ಟಿದಾಗಲೂ ಬೇರೆ ಕಳ್ಳ ಬೆಕ್ಕು ಒಳಗಡಿಯಿಡದಂತೆ ಸಣ್ಣ ಸರಳುಗಳ ಕಿಟಕಿಯನ್ನು ಉದ್ದೇಶಪೂರ್ವಕವಾಗಿ ಇಟ್ಟಿದ್ದೆವು. ಈ ಹಿಂದೆ ಬೆಕ್ಕು ಇರುವಾಗ ನಿಶ್ಯಬ್ಧವಾಗಿರುತ್ತಿದ್ದ ಮನೆಯಲ್ಲಿ ಈಗ ರಾತ್ರೆ ಪ್ರೇತ ಹೊಕ್ಕಂತೆ ಸದ್ದುಗಳು ಕೇಳಲಾರಂಭಿಸಿ ನಿದ್ರಾಭಂಗವಾಗ ತೊಡಗಿ ಹಗಲು-ಇರುಳು ನಮಗೆ ಇಲಿಗಳ ಮಟ್ಟ ಹಾಕುವುದೇ ಬಹು ದೊಡ್ಡ ಸಮಸ್ಯೆಯಾಯಿತು. ಇನ್ನೂ ಒಂದು ಗಂಭೀರ ಸಮಸ್ಯೆ ಏನಪ್ಪಾ ಅಂದರೆ ಯಾವುದೇ ಕೋಣೆಯ ಬಾಗಿಲನ್ನು ನಾವು ಮುಚ್ಚುವಂತಿಲ್ಲ. ಹೇಗೋ ಕೋಣೆ ಸೇರಿಕೊಂಡ ಇಲಿ ಬಾಗಿಲಿನ ಮೂಲಕ ಮತ್ತೊಂದು ಕೋಣೆಗೆ ಹೋಗಲಾರದ ಸಿಟ್ಟಿನಲ್ಲಿ ಬಾಗಿಲನ್ನೇ ಹೆರೆಯೋಕೆ ಶುರು ಮಾಡುತ್ತಿತ್ತು. ಕಟ್ಟಿದ ಹೊಸ ಮನೆಯ ಎಲ್ಲಾ ಚಿತ್ತಾರದ ಬಾಗಿಲುಗಳ ಕೊರೆದು ಚಿಕ್ಕಿಲಿ ಹೊಸ ಚಿತ್ತಾರ ಬಿಡಿಸುವಲ್ಲಿ ನಿರತವಾಗಿತ್ತು. ಈ ಪುಟುಗೋಸಿ ಇಲಿಗೂ ಹೆದರುವಂತಾಗಿ ಕೋಣೆಯ ಯಾವ ಬಾಗಿಲನ್ನು ಮುಚ್ಚಲಾಗದ ಪರಿಸ್ಥಿತಿ.

ಈಗೀಗ ಬಹು ಚಾಲ್ತಿಯಲ್ಲಿರುವ ಇಲಿ ಜ್ವರ ಬಂದ ಮೇಲಂತೂ ಈ ಇಲಿಯಪ್ಪನಿಗೆ ಎಷ್ಟು ಹೆದರುವಂತಾಯಿತೆಂದರೆ ಮನೆಯೊಳಗೂ ಧೈರ್ಯವಾಗಿ ಕಾಲಿಡೋಕು ಭಯ. ‘ಸಂಸ್ಕಾರ’ ಕಾದಂಬರಿಯ ಪ್ಲೇಗ್ ಜ್ವರದ ಇಲಿಗಳ ಭೀತಿ ಈಗ ವಾಸ್ತವದಲ್ಲಿ ಎದುರಿಸುವಂತಾಯಿತು. ಹಾಗಂತ ಇಲಿಗಳಿಗೂ ನೀತಿ ನಿಯತ್ತು ಇದೆ. ಮನೆಯೊಳಗೆ ಎಷ್ಟು ಪರಡಿ ಹುಡುಕಿದರೂ ಎಷ್ಟು ಇಲಿಗಳ ಹೊಟ್ಟೆ ತುಂಬಿಸಬಹುದು ಅನ್ನೋ ದೂರದೃಷ್ಠಿಯೂ ಇದೆ. ಅದಕ್ಕೇ ಇರಬೇಕು ಅವು ಮನೆಯೊಳಗೆ ಹೊಕ್ಕುವುದು ಒಂದೋ ಅಥವಾ ಅದಕ್ಕೆ ಸಾಥ್ ಮತ್ತೊಂದು ಇಲಿಯಷ್ಟೆ. ಇಲಿ ಅಷ್ಟೊಂದು ತೀಕ್ಷ್ಣಮತಿಯಾಗಿದ್ದಕ್ಕೇ ಇರಬೇಕು ಅದು ಗಣಪತಿಯ ವಾಹನವಾಗಿರುವುದು. ಶಕ್ತಿಗಿಂತ ಯುಕ್ತಿಯೇ ಅದರ ಬಂಡವಾಳ. ಇಲ್ಲದಿದ್ದರೆ ಡೊಳ್ಳು ಹೊಟ್ಟೆಯ ಗಣಪನ ಭಾರವನ್ನು ಪುಟಾಣಿ ಇಲಿಗೆ ಭರಿಸಲು ಸಾಧ್ಯವೇ? ಇಷ್ಟಾಗಿಯೂ ಗಣಪತಿಯ ವಾಹನವನ್ನು ಗೌರವದಿಂದ, ಭಯ ಭಕ್ತಿಯಿಂದ ಭಜಿಸದ್ದಕ್ಕೇ ಇರಬೇಕು ಅದಕ್ಕೆ ಇಷ್ಟೊಂದು ರೋಷ.

ಕೆಲವು ಕಡೆ ಈ ಇಲಿಗಾಗಿಯೇ ದೇವಸ್ಥಾನ ಕಟ್ಟಿ ಪೂಜೆ ಮಾಡುತ್ತಾರೆಂದರೆ ನೀವು ನಂಬಲೇ ಬೇಕು. ರಾಜಸ್ಥಾನದ ಬಿಕಾನೀರ್ ಎಂಬ ಊರಿನಲ್ಲಿ ‘ಕರ್ಣಿಮಾತಾ’ ಎಂಬ ದೇವಸ್ಥಾನವಿದೆ. ಅದಕ್ಕೊಂದು ದೊಡ್ಡ ಇತಿಹಾಸವೇ ಇದೆ. ಆ ದೇವಸ್ಥಾನದ ತುಂಬಾ ಇಲಿಗಳೇ. ಬಂದವರ್ಯಾರೂ ಬರಿಗೈಯಲ್ಲಿ ಬರುವುದಿಲ್ಲ. ಅದಕ್ಕೆ ಹಾಲು, ಕಾಳುಗಳನ್ನೆಲ್ಲಾ ತರುತ್ತಾರೆ. ದೇವಾಲಯದ ತುಂಬಾ ಇಲಿಗಳು ನಮ್ಮ ಕಾಲಿಗೆ ತೊಡರಿಕೊಂಡಂತೆ ಓಡಾಡಿಕೊಂಡು, ಬೇಕೆನ್ನಿಸಿದಾಗ ಹಾಲು ಕುಡಿಯುತ್ತಾ, ಧಾನ್ಯ ತಿನ್ನುತ್ತಾ ಯಾವುದೇ ದಾಂಧಲೆ ಎಬ್ಬಿಸದೆ ತಮ್ಮಷ್ಟಕ್ಕೆ ಇರುತ್ತವೆ. ವಿಶೇಷವೆಂದರೆ ಅವುಗಳು ಆ ದೇವಾಲದ ಮೆಟ್ಟಿಲಿನಿಂದಾಚೆ ಒಮ್ಮೆಯೂ ಇಳಿದು ಬರೋದಿಲ್ಲವಂತೆ. ತಿನ್ನೋಕೆ ಯಥೇಚ್ಛ ಇದ್ದರೆ ಅದು ಸುಮ್ಮಗೆ ಉಪದ್ರ ಕೊಡೋದಿಲ್ಲ ಅನ್ನುವಂತದ್ದು ಸಾಬೀತಾಯಿತು ನೋಡಿ. ಹಾಗಂತ ನಮ್ಮ ಮನೆಯಲ್ಲಿ ಕಾಟ ಕೊಡುವ ಈ ಇಲಿಯ ವಂಶಸ್ಥರನ್ನು ನೂರೆಂಟು ಸಮರ್ಥನೆಗಳಿಗಾಗಿ ಸುಮ್ಮನೆ ಬಿಟ್ಟು ಬಿಡೋಕಾಗುತ್ತಾ?.

ಒಂದೊಮ್ಮೆ ಎಲ್ಲಿಗೋ ಹೋಗಿದ್ದಾಗ ಚೆಂದದ ಸೋಫಾ ಕುಷನ್ ತಂದಿದ್ದೆವು. ನಮ್ಮ ಕೊಳ್ಳುಬಾಕ ಸಂಸ್ಕೃತಿಗೆ ಇಂತಹ ಎಷ್ಟೋ ಉದಾಹರಣೆಗಳಿವೆ. ಅದಿರಲಿ, ತಂದ ಕುಶನ್ ಅನ್ನು ಒಪ್ಪ ಮಾಡಿ ಸೋಫಾದ ಮೇಲೆ ಹಾಕಿದ್ದರೆ ಆಗುತ್ತಿತ್ತು. ಮಕ್ಕಳು ಕುಂತು, ನಿಂತು, ಮೆಟ್ಟಿ ಹಾಳು ಮಾಡಿ ಬಿಡುತ್ತಾರೆ,ಹೇಗೂ ಹಳತು ಇದೆಯಲ್ಲ ಸಧ್ಯಕ್ಕೆ ಅದೇ ಇರಲಿ, ಅಪರೂಪದ ಅತಿಥಿಗಳು ಬಂದಾಗ ಆಯಿತು ಅಂತ ಅಂದಾಜಿಸಿ ಅದನ್ನು ಕೋಣೆಯೊಳಗೆ ಇಟ್ಟು ಅದಕ್ಕೆ ದೂಳು ತಾಕದಂತೆ ಅದರ ಮೇಲೆ ದೊಡ್ಡ ಜಮಾಖಾನೆ ಹಾಸಿ ಜೋಪಾನ ಮಾಡಿಟ್ಟಿದ್ದೆವು. ಹಾಗೇ ಜೋಪಾನವಾಗಿಯೇ ಇದೆ ಅಂತಾನೇ ಮೊನ್ನೆಯವರೆಗೂ ನಂಬಿ ಕೊಂಡಿದ್ದೆವು. ನಮಗೆ ಒಮ್ಮೊಮ್ಮೆ ಯಾವುದೋ ಒಂದು ಹುಕಿ ಬಂದು ಬಿಡುತ್ತದೆ. ಆಗ ಸೆರಗು ಸೊಂಟಕ್ಕೆ ಬಿಗಿದು, ಮೂಲೆ ಮೂಲೆ ಪರಡಿ ತಡಕಿ ಕೆಲಸ ಶುರು ಹಚ್ಚಿಕೊಳ್ಳುತ್ತೇವೆ. ಮೊನ್ನೆಯೊಮ್ಮೆ ಹಾಗೇ ಮೂಲೆ ಮುಡುಕು ಸ್ವಚ್ಛ ಮಾಡುವ ಉಮೇದಿಗೆ ಬಿದ್ದಾಗ, ಮುಸುಗು ಹಾಕಿ ಮಲಗಿಸಿದ್ದ ಜಮಾಖಾನೆಯ ತೆಗೆದಾಗಲೇ ಗೊತ್ತಾದದ್ದು ಕಿತಾಪತಿ.

ತಿನ್ನುವ ಆಹಾರ, ಬಾಗಿಲು, ಮರಮುಟ್ಟು , ಹಾಸಿಗೆ, ಸೋಫಾ ಕುಷನ್ ಯಾವುದನ್ನೂ ಬಿಡದೇ ಸ್ವಾಹ ಮಾಡಿದ್ದಾಯ್ತಲ್ಲ ಈ ಇಲಿ? ನಾವು ನಿದ್ದೆ ಮಾಡಿದಾಗ ಇನ್ನೇನು ನಮ್ಮ ಕಿವಿಯ ತೂತನ್ನು ಮತ್ತಷ್ಟು ದೊಡ್ಡಕ್ಕೆ ಕೊರೆದು ಅದರೊಳಗೆ ವಾಸ್ತವ್ಯ ಹೂಡಿ ಬಿಡುತ್ತದೆಯೇನೋ ಅನ್ನೋ ಭಯ ಕಾಡಿದ್ದು ಸುಳ್ಳೇನಲ್ಲ. ಇಂತಹ ಹೊತ್ತಿನಲ್ಲಿಯೇ ಇಲಿಕತ್ತರಿ ಆಪತ್ಬಾಂಧವನಂತೆ ಒದಗಿ ಬಂದದ್ದು. ತದನಂತರ ಅದೆಷ್ಟೋ ಇಲಿಗಳು ಈ ಇಲಿ ಕತ್ತರಿಗೆ ಕೊರಳು ಕೊಟ್ಟಿತ್ತೆನ್ನಿ. ಒಮ್ಮೊಮ್ಮೆ ಹೆಗ್ಗಣವೂ. ಈ ಸಂತೋಷದಲ್ಲಿ ಇಲಿ ಕಾಟದಿಂದ ಮುಕ್ತಿ ಹೊಂದಲೇ ಬೇಕು ಎನ್ನೋ ಆತುರಕ್ಕೆ, ಜೊತೆಗೆಂಬಂತೆ ಮತ್ತೊಂದು ಇಲಿ ಕತ್ತರಿ ತಂದದ್ದೂ ಆಯಿತು. ಒಂದೆರಡು ದಿನ ಟಪ್ ಟಪ್ ಅಂತ ಸದ್ದು ಮಾಡಿತ್ತಷ್ಟೆ. ಈಗ ನೋಡಿದರೆ ಆ ಕತ್ತರಿಯ ಕುತಂತ್ರ ಇಲಿಗಳಿಗೂ ಗೊತ್ತಾಗಿ, ಒಂದೇ ಒಂದು ಇಲಿಯೂ ಅದರ ಹತ್ತಿರ ಕೂಡ ಸುಳಿಯದೆ ಒಂದಷ್ಟು ಇಲಿಗಳಿಗೆ ಮುಕ್ತಿ ಕರುಣಿಸಿದ್ದಕ್ಕೆ ಸಾಕ್ಷಿಯೆಂಬಂತೆ ಹಾಗೇ ಒಂದು ಮೂಲೆಯಲ್ಲಿ ತೆಪ್ಪಗೆ ಬಿದ್ದುಕೊಂಡಿದೆ.
ನಾನೋ ಈಗ ಮತ್ತೊಂದು ಇಲಿ ಹಿಡಿಯುವ ಸಲಕರಣೆಗಾಗಿ ತಡಕಾಡಬೇಕೋ?,ಇರುವ ಪುಟ್ಟ ಅಂಗಳದಲ್ಲಿ ಧವಸ ಧಾನ್ಯ ಬೆಳೆಯ ಬೇಕೋ?, ಅಥವಾ ಇಲಿಗೊಂದು ಗುಡಿ ಕಟ್ಟಿ ಪೂಜೆ ಸಲ್ಲಿಸ ಬೇಕೋ? ಎನ್ನುವ ಗೊಂದಲದಲ್ಲಿರುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.