ಸೋಮವಾರ, 8 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾದಾಮಿ | ಚಾಲುಕ್ಯರಿಂದ ನಿರ್ಮಾಣ: ಮಳೆಗೆ ಭರ್ತಿಯಾದ ಅಗಸ್ತ್ಯತೀರ್ಥ ಕೆರೆ

Published 5 ಜುಲೈ 2024, 4:51 IST
Last Updated 5 ಜುಲೈ 2024, 4:51 IST
ಅಕ್ಷರ ಗಾತ್ರ

ಬಾದಾಮಿ: ಈಚೆಗೆ ಸುರಿದ ಧಾರಾಕಾರ ಮಳೆಯಿಂದ ಬೆಟ್ಟದ ಸಾಲಿನ ಮಧ್ಯದಲ್ಲಿ ಸರೋವರದಂತೆ ಕಂಗೊಳಿಸುವ ಅಗಸ್ತ್ಯತೀರ್ಥ ಕೆರೆಯು ಸಂಪೂರ್ಣವಾಗಿ ಭರ್ತಿಯಾಗಿದೆ.

ಚಾಲುಕ್ಯರು 6ನೇ ಶತಮಾನದಲ್ಲಿ ದಕ್ಷಿಣದ ಬೃಹತ್ ಬಂಡೆಗಳ ಸಾಲಿನ ರಣಮಂಡಲಕೋಟೆ ಮತ್ತು ಉತ್ತರದ ಬಾವನ್ ಬಂಡೆ ಕೋಟೆ ಕಂದಕದಲ್ಲಿ ವಿಶಾಲವಾದ ಕೆರೆ  ನಿರ್ಮಿಸಿದ್ದಾರೆ. ಸುತ್ತಲಿನ ಬೆಟ್ಟದಿಂದ ಜೋಡಿ ಜಲಧಾರೆಯಾಗಿ ಧುಮ್ಮಿಕ್ಕುತ್ತ ಮತ್ತು ಮಹಾಕೂಟ ಬೆಟ್ಟದ ಗರ್ಭದಿಂದ ನೀರು ಹರಿದು ಅಗಸ್ತ್ಯತೀರ್ಥ ಕೆರೆಗೆ ಸಂಗ್ರಹವಾಗುತ್ತದೆ.

ಕೆರೆಗೆ ನೀರು ಸಂಗ್ರಹವಾಗುವಂತೆ ಬೆಟ್ಟದ ಮೇಲೆ ಕೆಲವೆಡೆ ಅಂದು ಗೋಡೆಗಳನ್ನು ನಿರ್ಮಿಸಿದ್ದಾರೆ. ಸುತ್ತಲಿನ ಬೆಟ್ಟದ ನೀರು ಸಂಪೂರ್ಣವಾಗಿ ಕೆರೆಗೆ ಬರುವಂತೆ ಮಾಡಿರುವುದು ಅವರ ತಾಂತ್ರಿಕ ಜ್ಞಾನ ಮೆಚ್ಚುವಂತಿದೆ.

ಮೇ ತಿಂಗಳಿನಲ್ಲಿ ಭೂತನಾಥ ದೇವಾಲಯದ ಎದುರಿಗೆ 50 ಅಡಿಗಿಂತಲೂ ಅಧಿಕ ನೀರು ಕಡಿಮೆಯಾಗಿತ್ತು. ಮಕ್ಕಳು ಆಟವಾಡುತ್ತಿದ್ದರು. ಈಚೆಗೆ ಸುರಿದ ಮಳೆಯಿಂದ 4 ಅಡಿ ನೀರು ಸಂಗ್ರಹವಾಗಿ ಭೂತನಾಥ ದೇವಾಲಯದ ಸುತ್ತ ಆವರಿಸಿದೆ, ಇನ್ನೂ 8 ಅಡಿ ನೀರು ಬಂದರೆ ಕೆರೆಯ ಕೋಡಿ ಹರಿಯಲಿದೆ.

‘ಈ ವರ್ಷ ಉತ್ತಮ ಮಳೆ ಆರಂಭವಾಗಿದೆ. ಇನ್ನೂ ಅಕ್ಟೋಬರ್‌ವರೆಗೆ ಮಳೆಗಾಲ ಇದೆ. ಕೆರೆಯು ಈ ಬಾರಿ ಕೋಡಿ ಹರಿಯಬಹುದು’ ಎಂದು ಸ್ಥಳೀಯರು ಹೇಳಿದರು.

ಕೆರೆಯ ದಂಡೆಯ ಭೂತನಾಥ ದೇವಾಲಯಗಳು ನೀರಿನಲ್ಲಿ ತೇಲುತ್ತಿರುವಂತೆ ಕಂಗೊಳಿಸುವ ಚಿತ್ರವನ್ನು ಪ್ರವಾಸಿಗರು ಗುರುವಾರ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದರೆ, ಕೆಲವರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಮಹಾರಾಷ್ಟ್ರದ ಮುಂಬಯಿಯ ಕಲ್ಯಾಣದಿಂದ ಬಂದ ಪ್ರವಾಸಿಗ ಕೃಷ್ಣಕಾಂತ  ಸುತ್ತಲಿನ ನಸುಗೆಂಪು ವರ್ಣದ ಬೆಟ್ಟ, ಭೂತನಾಥ ದೇವಾಲಯ, ಭರ್ತಿಯಾದ ಕೆರೆ ವೀಕ್ಷಿಸಿ ಉತ್ತಮ ಪ್ರಶಾಂತ ಪರಿಸರ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT