ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ(ದೇವನಹಳ್ಳಿ) | ಕಲಿಕೆಗೆ ಮಾದರಿಯಾದ ಸರ್ಕಾರಿ ಶಾಲೆ

ಹೊಲೇರಹಳ್ಳಿ ಸರ್ಕಾರಿ ‌ಶಾಲೆಯಲ್ಲಿ ಉತ್ತಮ ವಾತಾವರಣ
Published : 27 ಸೆಪ್ಟೆಂಬರ್ 2024, 3:56 IST
Last Updated : 27 ಸೆಪ್ಟೆಂಬರ್ 2024, 3:56 IST
ಫಾಲೋ ಮಾಡಿ
Comments

ವಿಜಯಪುರ(ದೇವನಹಳ್ಳಿ): ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ, ಶಾಲಾಭಿವೃದ್ಧಿ ಸಮಿತಿ ಹಾಗೂ ದಾನಿಗಳ ಸಹಕಾರದಿಂದ ಸರ್ಕಾರಿ ಶಾಲೆಯೊಂದರ ಶಿಕ್ಷಕರು ಸುತ್ತಲೂ ಖಾಸಗಿ ಶಾಲೆಗಳಿದ್ದರೂ ತಮ್ಮ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಿಕೊಳ್ಳುವುದರ ಜತೆಗೆ ಖಾಸಗಿ ಶಾಲೆಯನ್ನೂ ಮೀರಿಸುವಷ್ಟರ ಮಟ್ಟಿಗೆ ಅಗತ್ಯ ಮೂಲಸೌಕರ್ಯ ಒದಗಿಸಿದ್ದಾರೆ. ಮಕ್ಕಳಿಗೆ ಉತ್ತಮ ಕಲಿಕೆ ನೀಡುವಲ್ಲಿ ಶ್ರಮಿಸುತ್ತಿದ್ದಾರೆ.

ಹೋಬಳಿ ಬಿಜ್ಜವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲೇರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉತ್ತಮ ವಾತಾವರಣ ಜತೆಗೆ ಹಸಿರು ಹೊದಿಕೆ ನಡುವೆ ಪೋಷಕರನ್ನು ಆಕರ್ಷಿಸುತ್ತಿದೆ.

ಶಾಲೆ ಕಟ್ಟಡ ಹಳೆಯದಾದರೂ ಅದನ್ನು ದಾನಿಗಳ ಸಹಕಾರದಿಂದ ನವೀಕರಣ ಮಾಡಲಾಗಿದೆ. ಇನ್ನರ್ ವೀಲ್ ಕ್ಲಬ್ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಿಕೊಟ್ಟಿದೆ. ದಾನಿಗಳು, ನೆಲಕ್ಕೆ ಟೈಲ್ಸ್, ಮಕ್ಕಳಿಗೆ ಕುಳಿತುಕೊಳ್ಳಲು ಡೆಸ್ಕ್, ಸಮವಸ್ತ್ರ, ಗುರುತಿನ ಚೀಟಿ, ಪುಟ್ಟದಾದ ರಂಗಮಂದಿರ ನಿರ್ಮಿಸಿದ್ದಾರೆ.

ಮಕ್ಕಳಿಗೆ ಪಠ್ಯ ಚಟುವಟಿಕೆ ಜತೆಯಲ್ಲಿ ಪಠ್ಯೇತರ ಚಟುವಟಿಕೆ ಕಲಿಕೆಗೂ ಆದ್ಯತೆ ನೀಡಲು, ಕಂಪ್ಯೂಟರ್ ಕಲಿಕೆ, ಶಾಲೆ ಆವರಣ ಸ್ವಚ್ಚವಾಗಿಟ್ಟುಕೊಳ್ಳುವುದರ ಜತೆಗೆ ಶಾಲೆ ವಿದ್ಯಾರ್ಥಿಗಳು ಶಾಲೆಯೊಳಗೆ ಬರುತ್ತಿದ್ದಂತೆ ತಮ್ಮ ಶೂ ಬಿಚ್ಚಿ, ಅಚ್ಚುಕಟ್ಟಾಗಿ ಹೊರಗೆ ಜೋಡಿಸಿ, ಒಳಗೆ ಹೋಗುವಷ್ಟರ ಮಟ್ಟಿಗೆ ಶಾಲೆ ಕೊಠಡಿ ಸ್ವಚ್ಛವಾಗಿದೆ.

2024-25ನೇ ಸಾಲಿಗೆ 8 ಮಕ್ಕಳ ದಾಖಲು ಮಾಡಿಕೊಂಡಿದ್ದಾರೆ. ಶಾಲೆಯಲ್ಲಿ 30 ಮಂದಿ ಮಕ್ಕಳು ಕಲಿಯುತ್ತಿದ್ದಾರೆ. ಮಕ್ಕಳ ಜಾಗೃತಿ ಸಂಸ್ಥೆಯಿಂದಲೂ ಕಲಿಕೆಗೆ ಅಗತ್ಯವಾಗಿರುವ ಸಲಕರಣೆ ಒದಗಿಸಿ, ಒಬ್ಬ ಶಿಕ್ಷಕಿಯನ್ನು ನೇಮಕ ಮಾಡಲಾಗಿದೆ.

ಮಕ್ಕಳಿಗೆ ಅಗತ್ಯ ಕ್ರೀಡಾ ಸಾಮಗ್ರಿ, ಕಲಿಕೋಪಕರಣ, ಬ್ಯಾಗ್, ಗ್ರಂಥಾಲಯಕ್ಕೆ ಅಗತ್ಯ ಪುಸ್ತಕ, ರಂಗಮಂದಿರಕ್ಕೆ ಅಗತ್ಯವಾಗಿರುವ ಪರದೆ, ಟೇಬಲ್, ಚೇರ್, ಬ್ಯಾಂಡ್ ಸೆಟ್, ಎಲ್ಲವನ್ನೂ ವಿವಿಧ ಸಂಸ್ಥೆಗಳು ಹಾಗೂ ಶಾಲಾಭಿವೃದ್ಧಿ ಸಮಿತಿಯವರೇ ಪೂರೈಕೆ ಮಾಡಿದ್ದಾರೆ.

ಈ ಶಾಲೆ ಮಕ್ಕಳು ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಒಟ್ಟು 22 ಬಹುಮಾನ ಪಡೆದಿದ್ದಾರೆ. ಕ್ರೀಡಾ ಚಟುವಟಿಕೆಗಳಲ್ಲೂ ಲವಲವಿಕೆಯಿಂದ ತೊಡಗಿಸಿಕೊಂಡಿದ್ದಾರೆ. ಪ್ರತಿಯೊಂದು ತರಗತಿ ಮಕ್ಕಳು, ಕಲಿತಿರುವ ಪಠ್ಯೇತರ ಚಟುವಟಿಕೆ ಪ್ರದರ್ಶನ ಮಾಡಲು, ಬೋರ್ಡ್ ಅಳವಡಿಸಲಾಗಿದೆ. ಮಕ್ಕಳಿಂದಲೇ ಅಕ್ಷರಗಳ ವೃಕ್ಷ ಮಾಡಿಸಿದ್ದಾರೆ. ಇದರಿಂದ ಪದಗಳ ಜೋಡಣೆ, ವಾಕ್ಯಗಳ ಬಳಕೆ ಕಲಿಯುವುದಕ್ಕೆ ಅನುಕೂಲವಾಗಿದೆ.

ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪೋಷಕರೇ ಮುಂದೆ ನಿಂತು ರಾಷ್ಟ್ರೀಯ ಹಬ್ಬ ಆಚರಣೆ ಮಾಡಿಸುತ್ತಾರೆ. ಪ್ರತಿಯೊಂದು ಮಗುವಿನ ಕಲಿಕಾ ಸಾಮರ್ಥ್ಯ ಕುರಿತು ತಿಂಗಳಿಗೊಮ್ಮೆ ಪೋಷಕರ ಸಭೆಯಲ್ಲಿ ಚರ್ಚೆ ನಡೆಸುತ್ತಾರೆ. ಕಲಿಕೆಯಲ್ಲಿ ಹಿಂದುಳಿಯುತ್ತಿರುವ ಮಕ್ಕಳಿಗೆ ಅಗತ್ಯ ಪ್ರೋತ್ಸಾಹ ಪೋಷಕರು ಹಾಗೂ ಶಿಕ್ಷಕರು ನೀಡುತ್ತಿದ್ದಾರೆ. ವಿಜ್ಞಾನ ಮೇಳ ಮಾಡುವ ಮೂಲಕ ವೈಜ್ಞಾನಿಕ ಮಾದರಿ ತಯಾರಿಕೆಗೆ ಪ್ರೋತ್ಸಾಹ ನೀಡುತ್ತಿದ್ದು, ಮಕ್ಕಳ ಕಲಿಕೆ ಉತ್ತಮವಾಗಿದೆ.

ತಮ್ಮ ನೆಚ್ಚಿನ ಶಿಕ್ಷಕರೊಂದಿಗೆ ಶಾಲೆಯ ಮಕ್ಕಳು
ತಮ್ಮ ನೆಚ್ಚಿನ ಶಿಕ್ಷಕರೊಂದಿಗೆ ಶಾಲೆಯ ಮಕ್ಕಳು
 ಮಕ್ಕಳ ಪಠ್ಯೇತರ ಚಟುವಟಿಕೆಗಳನ್ನು ಬೋರ್ಡ್ ನಲ್ಲಿ ಪ್ರದರ್ಶಿಸಿರುವುದು
 ಮಕ್ಕಳ ಪಠ್ಯೇತರ ಚಟುವಟಿಕೆಗಳನ್ನು ಬೋರ್ಡ್ ನಲ್ಲಿ ಪ್ರದರ್ಶಿಸಿರುವುದು
ಮಕ್ಕಳು ಇಷ್ಟಪಟ್ಟು ಕಲಿಯುವ ವಾತಾವರಣ ನಿರ್ಮಾಣ ಮಾಡಿಕೊಳ್ಳುತ್ತೇವೆ. ನಾವೂ ಮಕ್ಕಳೊಂದಿಗೆ ಬೆರೆತು ಕಲಿಸುವುದರಿಂದ ಅವರು ಸುಲಭವಾಗಿ ಕಲಿಯುತ್ತಿದ್ದಾರೆ
ಮಂಜುಳಾ ನಲಿಕಲಿ ಶಿಕ್ಷಕಿ
ಹಲವು ಸಂಘ–ಸಂಸ್ಥೆ ದಾನಿಗಳನ್ನು ಭೇಟಿ ಮಾಡಿದಾಗ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದರಿಂದ ಶಾಲೆ ವಾತಾವರಣ ಉತ್ತಮಪಡಿಸಿಕೊಳ್ಳಲು ಸಾಧ್ಯವಾಗಿದೆ
ಮಂಜುನಾಥ್ ಶಾಲೆ ಮುಖ್ಯ ಶಿಕ್ಷಕ ಹೊಲೇರಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT