ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ನಿಂದ ದ್ವೇಷದ ರಾಜಕಾರಣ: ಜಗದೀಶ ಶೆಟ್ಟರ್‌

Published : 20 ಸೆಪ್ಟೆಂಬರ್ 2024, 13:04 IST
Last Updated : 20 ಸೆಪ್ಟೆಂಬರ್ 2024, 13:04 IST
ಫಾಲೋ ಮಾಡಿ
Comments

ಬೆಳಗಾವಿ: ‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಬಿಜೆಪಿ, ಜೆಡಿಎಸ್‌ ನಾಯಕರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಆರೋಪಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣಗಳ ವಿರುದ್ಧ ನಾವು ಹೋರಾಟ ಮಾಡಿದೆವು. ಅದಕ್ಕಾಗಿ ಬಿಜೆಪಿ, ಜೆಡಿಎಸ್‌ ನಾಯಕರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಕಾಂಗ್ರೆಸ್‌ ವಿರುದ್ಧ ನಾವು ಹೇಳಿಕೆ ಕೊಟ್ಟರೆ, ಎಫ್ಐಆರ್ ದಾಖಲಿಸಿ ಹೆದರಿಸುವ ತಂತ್ರ ಅನುಸರಿಸಲಾಗುತ್ತಿದೆ. ಹಳೆಯ ಪ್ರಕರಣಗಳನ್ನೆಲ್ಲ ಮತ್ತೆ ಕೆದಕಿ, ದ್ವೇಷ ಆರಂಭಿಸಲಾಗುತ್ತಿದೆ’ ಎಂದು ದೂರಿದರು.

‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ, ರಾಜ್ಯದಲ್ಲಿ ಕೋಮು ಗಲಭೆ ಹೆಚ್ಚುತ್ತಿವೆ. ಅಲ್ಪಸಂಖ್ಯಾತರ ತುಷ್ಟೀಕರಣವೇ ಕಾಂಗ್ರೆಸ್‌ನ ಗುರಿಯಾಗಿದೆ. ಜನರಿಗೆ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಭಯವಿಲ್ಲ. ದೇಶದ್ರೋಹದ ಕೆಲಸ ಮಾಡುವವರ ವಿರುದ್ಧ ಕ್ರಮವಾಗುತ್ತಿಲ್ಲ. ಹಾಗಾಗಿ ಕೆಲವರು ಕರ್ನಾಟಕದಲ್ಲಿ ಪ್ಯಾಲೆಸ್ಟೀನ್‌ ಧ್ವಜ ಹಾರಿಸುತ್ತಿದ್ದಾರೆ. ಪಾಕಿಸ್ತಾನದ ಧ್ವಜವನ್ನೂ ಹಾರಿಸುತ್ತಾರೆ. ಹೀಗೆ ವಿದೇಶಿ ಧ್ವಜ ಹಾರಿಸುವ ಪ್ರವೃತ್ತಿಗೆ ಕಾಂಗ್ರೆಸ್‌ ಸರ್ಕಾರವೇ ಕಾರಣ’ ಎಂದು ಆಪಾದಿಸಿದರು.

ದಾವಣಗೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಕಲ್ಲುತೂರಾಟ ನಡೆದ ವಿಚಾರವಾಗಿ ಪ್ರತಿಕ್ರಿಯಿಸಿದ ಶೆಟ್ಟರ್, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಈ ರೀತಿಯ ಕೃತ್ಯಗಳು ನಡೆಯುತ್ತಲೇ ಇವೆ’ ಎಂದು ದೂರಿದರು.

‘ಒನ್ ನೇಷನ್‌ ಒನ್ ಚುನಾವಣೆ ಎಂಬುದು ಉತ್ತಮ ಯೋಜನೆ. ಇದರಿಂದಾಗಿ ದೇಶದಲ್ಲಿ ಚುನಾವಣೆ ವೆಚ್ಚಕ್ಕೆ ಕಡಿವಾಣ ಬೀಳುತ್ತದೆ. ಏಕಕಾಲಕ್ಕೆ ಚುನಾವಣೆ ನಡೆಯುವುದು ಸಮಯ, ಹಣದ ಉಳಿತಾಯವಾಗುತ್ತದೆ. ಈ ಯೋಜನೆ ಜಾರಿಯಾದರೆ ದೇಶದಲ್ಲಿ ದೊಡ್ಡ ಬದಲಾವಣೆ ಆಗಲಿದೆ’ ಎಂದರು.

‘ಭಕ್ತರ ನಂಬಿಕೆಗೆ ಚ್ಯುತಿ ತಂದ ಪ್ರಕರಣ’

‘ತಿರುಮಲ ತಿರುಪತಿ ದೇವಸ್ಥಾನದಲ್ಲಿ ಭಕ್ತರಿಗೆ ನೀಡುವ ಪ್ರಸಾದ ಉಂಡಿ ತಯಾರಿಸಲು, ಈ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿತ್ತು’ ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್‌, ‘ಪ್ರಯೋಗಾಲಯದ ವರದಿ ಆಧರಿಸಿ, ಅವರು ಹೀಗೆ ಹೇಳಿದ್ದಾರೆ. ಇದು ಭಕ್ತರ ನಂಬಿಕೆಗೆ ಚ್ಯುತಿ ತರುವ ಗಂಭೀರವಾದ ಪ್ರಕರಣ’ ಎಂದರು.

‘ಆಂಧ್ರಪ್ರದೇಶ ಮಾಜಿ ಸಿ.ಎಂ ಜಗಮೋಹನ್‌ ರೆಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರು. ಅವರಿಗೆ ಹಿಂದೂ ಧರ್ಮದ ಮೇಲೆ ಯಾವುದೇ ರೀತಿಯ ನಂಬಿಕೆ, ವಿಶ್ವಾಸವಿಲ್ಲ. ಅವರ ಅಧಿಕಾರವಧಿಯಲ್ಲಿ ನಡೆದಿರುವ ಈ ಪ್ರಕರಣ ನಿಜವಾಗಿದ್ದರೆ, ರೆಡ್ಡಿ ಹಾಗೂ ಗುತ್ತಿಗೆ ಪಡೆದವರ ಮೇಲೆ ಕಾನೂನು ಕ್ರಮವಾಗಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT