‘ಎರಡು ವರ್ಷದ ಹಿಂದಿನ ದೂರುಗಳಿಗೇ ಪರಿಹಾರ ಸಿಕ್ಕಿಲ್ಲ’
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು 2022ರ ಜುಲೈ ಹಾಗೂ ಆಗಸ್ಟ್‌ನಲ್ಲಿ ನಡೆಸಿದ್ದ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ನೀಡಲಾಗಿದ್ದ ದೂರಿಗೇ ಇನ್ನೂ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ ಅದೇ ಕಾರ್ಯಕ್ರಮದಲ್ಲೇ ಅದೇ ದೂರನ್ನು ನೀಡಬೇಕಾಗಿದೆ ಎಂಬ ಆರೋಪಿಸಲಾಗಿದೆ. ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ 2022ರ ಆಗಸ್ಟ್ 12ರಂದು ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ‘ಲಿಂಗಧೀರನಹಳ್ಳಿಯಲ್ಲಿರುವ ತ್ಯಾಜ್ಯ ಘಟಕದಿಂದ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆ ಆಗುತ್ತಿದೆ. ಅದನ್ನು ನಿಲ್ಲಿಸಬೇಕು’ ಎಂದು ನಾಗರಿಕರು ಆಗ್ರಹಿಸಿದ್ದರು. ‘ತ್ಯಾಜ್ಯ ಸಂಸ್ಕರಣಾ ಘಟಕಗಳಿಂದ ವಾಸನೆ ಬರುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತುಷಾರ್ ಗಿರಿನಾಥ್ ಭರವಸೆ ನೀಡಿದ್ದರು. ಆದರೆ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಶಶಿಕುಮಾರ್ ಹೇಳಿದರು. ರಸ್ತೆ ಚರಂಡಿ ರಾಜಕಾಲುವೆಯಲ್ಲಿ ಹೂಳೆತ್ತಬೇಕು ಎಂದು ಜಯಣ್ಣ ಬಡಾವಣೆಯ ಟಿ.ಇ. ಶ್ರೀನಿವಾಸ್ ದೂರಿದ್ದರು. ಖಾಲಿ ನಿವೇಶನದಲ್ಲಿ ಕಸ ಗಿಡಮರಗಳು ಬೆಳೆದು ಸಮಸ್ಯೆ ಉಂಟಾಗಿದೆ ಎಂದು ಹಲವರು ಹೇಳಿದ್ದರು. ‘ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡದವರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳಬೇಕು. ಚರಂಡಿಗಳಲ್ಲಿ ಹೂಳೆತ್ತಬೇಕು’ ಎಂದು ತುಷಾರ್ ಗಿರಿನಾಥ್ ಎರಡು ವರ್ಷದ ಹಿಂದೆ ಆದೇಶಿಸಿದ್ದರೂ ಅದು ಪಾಲನೆಯಾಗಿಲ್ಲ ದೂರುದಾರ ನಿವಾಸಿಗಳು ಹೇಳಿದರು. ‘2022ರ ಜುಲೈ 12ರಂದು ಪಾದಚಾರಿ ಮಾರ್ಗದ ಒತ್ತುವರಿ ತೆರವಿನ ಬಗ್ಗೆಯೂ ಹೇಳಿದ್ದನ್ನೇ ಮುಖ್ಯ ಆಯುಕ್ತರು ಇಂದೂ ಹೇಳುತ್ತಿದ್ದಾರೆ’ ಎಂದು ಜಯನಗರದ ನಾಗರಾಜ್ ದೂರಿದರು. 2022ರಲ್ಲಿ ನಡೆದ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ಎಷ್ಟು ದೂರುಗಳು ಸಲ್ಲಿಕೆಯಾದವು ಯಾವ ಪರಿಹಾರ ನೀಡಲಾಗಿದೆ ಎಂಬ ಮಾಹಿತಿಯನ್ನೂ ಮುಖ್ಯ ಆಯುಕ್ತ ಕಚೇರಿ ಅಧಿಕಾರಿಗಳು ಹೊಂದಿಲ್ಲ.