ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ ಜಿಲ್ಲೆಯಲ್ಲಿ ಹೆಚ್ಚಿದ ಸೈಬರ್‌ ಅಪರಾಧ

ಒಟಿಪಿ, ಲಿಂಕ್‌, ಬಿಸಿನೆಸ್‌ ವಂಚನೆ ಪ್ರಕರಣಗಳಲ್ಲಿ ಹೆಚ್ಚಳ; ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ದುರ್ಬಳಕೆ
Published : 11 ಡಿಸೆಂಬರ್ 2023, 6:32 IST
Last Updated : 11 ಡಿಸೆಂಬರ್ 2023, 6:32 IST
ಫಾಲೋ ಮಾಡಿ
Comments
ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಂದ ನಂತರ ಸೈಬರ್‌ ಅಪರಾಧಗಳು ಇನ್ನಷ್ಟು ಹೆಚ್ಚಳವಾಗಿವೆ. ನಮ್ಮ ಧ್ವನಿ ಮಾರ್ಫಿಂಗ್‌ ಮಾಡಿ ಜನರನ್ನು ವಂಚಿಸಲಾಗುತ್ತಿದೆ. ತಂತ್ರಜ್ಞಾನವನ್ನು ಬಹಳ ಎಚ್ಚರದಿಂದ ಉಪಯೋಗಿಸಬೇಕು. ಮೊಬೈಲ್‌ಗೆ ಬರುವ ಎಲ್ಲ ಕರೆಗಳನ್ನು ನಂಬಬಾರದು
=ಚನ್ನಬಸವಣ್ಣ ಎಸ್‌.ಎಲ್‌. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬೀದರ್‌
ಮೊದಲ 60 ನಿಮಿಷ ‘ಗೋಲ್ಡನ್‌ ಅವರ್‌’
‘ಒಂದು ವೇಳೆ ಯಾರಾದರೂ ಸೈಬರ್‌ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡರೆ ತಕ್ಷಣವೇ ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ ದೂರು ಸಲ್ಲಿಸಬೇಕು. ನಂತರ ಸಂಬಂಧಿತ ಠಾಣೆಯವರಿಗೆ ಮಾಹಿತಿ ನೀಡಲಾಗುತ್ತದೆ. ಬ್ಯಾಂಕ್‌ನವರನ್ನು ಸಂಪರ್ಕಿಸಲಾಗುತ್ತದೆ. ವಂಚನೆಗೆ ಒಳಗಾದ ಮೊದಲ 60 ನಿಮಿಷಗಳು ಬಹಳ ಮಹತ್ವದ್ದು. ಅಷ್ಟರೊಳಗೆ ದೂರು ಸಲ್ಲಿಸಿದರೆ ಯುಪಿಐ ಇಂಟರ್ನೆಟ್‌ ಬ್ಯಾಂಕಿಂಗ್‌ ಒಟಿಪಿ ಸೇರಿದಂತೆ ಇತರೆ ಸೈಬರ್‌ ವಂಚನೆಗೆ ಒಳಗಾದವರ ಹಣವನ್ನು ಬ್ಯಾಂಕಿನವರು ಮರಳಿ ಪಡೆದು ಸಂಬಂಧಿಸಿದವರ ಖಾತೆಗೆ ಜಮೆ ಮಾಡುವ ಹೆಚ್ಚು ಸಾಧ್ಯತೆ ಇದೆ. ಹೀಗಾಗಿಯೇ ವಂಚನೆಗೆ ಒಳಗಾದ ಮೊದಲ 60 ನಿಮಿಷವನ್ನು ‘ಗೋಲ್ಡನ್‌ ಅವರ್’ ಎಂದು ಕರೆಯಲಾಗುತ್ತದೆ. ಸಮಯ ಮೀರುತ್ತ ಹೋದರೆ ಹಣ ಮರಳಿ ಪಡೆಯಲು ಕಷ್ಟಸಾಧ್ಯವಾಗಬಹುದು’ ಎಂದು ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದರು. ‘ಪೊಲೀಸ್‌ ಸಹಾಯವಾಣಿ 112ಕ್ಕೂ ಕರೆ ಮಾಡಬೇಕು. ಘಟನಾ ಸ್ಥಳಕ್ಕೆ ತಕ್ಷಣವೇ ಪೊಲೀಸರು ಬಂದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲು ಸುಲಭವಾಗುತ್ತದೆ’ ಎಂದು ಹೇಳಿದರು.
ವಿದ್ಯಾರ್ಥಿಯಿಂದ ಶಾಲಾ ಮುಖ್ಯಸ್ಥೆ ‘ಡೀಪ್‌ಫೇಕ್‌’
ಬೀದರ್‌ನ ಜ್ಞಾನಸುಧಾ ವಿದ್ಯಾಲಯ ಶಾಲೆಯ ಮುಖ್ಯಸ್ಥೆ ಪೂರ್ಣಿಮಾ ಜಾರ್ಜ್‌ ಅವರ ‘ಡೀಪ್‌ಫೇಕ್‌’ ಪ್ರಕರಣವನ್ನು ಜಿಲ್ಲಾ ಪೊಲೀಸರು ಭೇದಿಸಿದ್ದಾರೆ. ಈ ಕುರಿತು ಪೂರ್ಣಿಮಾ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಅಮೆರಿಕದಲ್ಲಿರುವ ಇನ್‌ಸ್ಟಾಗ್ರಾಂ ಕೇಂದ್ರ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದಾರೆ. ಅದೇ ಶಾಲೆಯ ಅಪ್ರಾಪ್ತ ವಿದ್ಯಾರ್ಥಿ ತನ್ನ ತಾಯಿಯ ‘ಟ್ಯಾಬ್‌’ ಮೂಲಕ ಕೃತ್ಯ ಎಸಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಸೈಬರ್‌ ಕಾನೂನಿನಡಿ ಕ್ರಮಕ್ಕೆ ಮುಂದಾಗಿದ್ದಾರೆ.
ಸಮಾಜದಲ್ಲಿ ಶಾಂತಿ ಕದಡುವಿಕೆ
ಸೈಬರ್‌ ವಂಚನೆ ಪ್ರಕರಣಗಳು ಕೇವಲ ಹಣ ಲಪಟಾಯಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ಸಮಾಜದಲ್ಲಿ ಶಾಂತಿ ಕದಡುವ ಉದ್ದೇಶದಿಂದಲೂ ಬಳಕೆಯಾಗುತ್ತಿರುವುದು ಕಳವಳಕಾರಿ ಅಂಶ. ಇತ್ತೀಚೆಗೆ ಭಾಲ್ಕಿಯಲ್ಲಿ ನಡೆದ ಘಟನೆಯೇ ಇದಕ್ಕೆ ತಾಜಾ ನಿದರ್ಶನ. ಜಿಲ್ಲೆಯಲ್ಲಿ ಒಟ್ಟು ಮೂರು ಪ್ರಕರಣಗಳಲ್ಲಿ ಅಪ್ರಾಪ್ತರೇ ಶಾಮಿಲಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ‘ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದಲ್ಲಿ ಶಾಂತಿ ಕದಡುವುದು ವೈಯಕ್ತಿಕ ತೇಜೋವಧೆ ಕೂಡ ಮಾಡಲಾಗುತ್ತಿದೆ. 18 ವರ್ಷದೊಳಗಿನವರಿಗೆ ಯಾವುದೇ ಕಂಪನಿಗಳು ಮೊಬೈಲ್‌ ಸಿಮ್‌ ಕಾರ್ಡ್‌ ನೀಡುವುದಿಲ್ಲ. ಆದರೆ ಪೋಷಕರ ಹೆಸರಿನಲ್ಲಿ ಅವರು ಪಡೆದುಕೊಳ್ಳುತ್ತಿದ್ದಾರೆ. ಇದರ ಮೇಲೆ ಪೋಷಕರು ಗಮನ ಹರಿಸಬೇಕು. ಒಂದು ವೇಳೆ ಆ ಸಿಮ್‌ನಿಂದ ಏನಾದರೂ ಅಪಘಾತ ಕೃತ್ಯ ಸಂಭವಿಸಿದರೆ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ’ ಎಂದು ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದ್ದಾರೆ.
ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ಗೂ ಮುಂಚೆ ‘THINK
‘ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವಿಷಯ ಪೋಸ್ಟ್‌ ಮಾಡುವುದಕ್ಕೂ ಮುಂಚೆ ಜನ ‘THINK’ ಮಾಡಬೇಕು. ‘T’-ಇಸ್‌ ದಿಸ್‌ ಟ್ರು ‘H’-ಇಸ್‌ ಇಟ್‌ ಹರ್ಟಫುಲ್‌ ‘I’-ಇಸ್‌ ಇಟ್‌ ಇಲ್ಲಿಗಲ್‌ ‘N’-ಇಸ್‌ ಇಟ್‌ ನೆಸೆಸರಿ ‘K’-ಇಸ್‌ ಇಟ್‌ ಕೈಂಡ್‌ ಎಂಬ ಈ ಐದು ಅಂಶಗಳನ್ನು ಯೋಚಿಸಿ ಪೋಸ್ಟ್‌ ಮಾಡಬೇಕೆಂದು ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯವರ ಹೆಸರಿನಲ್ಲಿ ನಕಲಿ ಅಕೌಂಟ್‌ ತೆಗೆದರೆ ಠಾಣೆಗೆ ದೂರು ಕೊಡಬೇಕು. ಸಾಮಾಜಿಕ ಜಾಲತಾಣದ ರಿಪೋರ್ಟ್‌ ಕಾಲಂನಲ್ಲಿ ಆ ವಿವರ ದಾಖಲಿಸಬೇಕು. ಅಪ್ರಾಪ್ತರು ಸಾಮಾಜಿಕ ಜಾಲತಾಣಗಳ ಮೂಲಕ ಅಪರಾಧವೆಸಗಿದರೆ ಬಾಲ ನ್ಯಾಯ ಕಾಯ್ದೆ ಅನ್ವಯ ಕಠಿಣ ಕ್ರಮ ಜರುಗಿಸಲು ಅವಕಾಶ ಇದೆ. ಹೀಗಾಗಿ ಪೋಷಕರು ಮಕ್ಕಳ ಮೇಲೆ ನಿಗಾ ವಹಿಸಬೇಕು ಎಂದು ತಿಳಿಸಿದ್ದಾರೆ.
‘ಕೋಮು ವಿರೋಧಿ ಪೋಸ್ಟ್‌ ಫಾರ್ವರ್ಡ್‌ ಮಾಡಿದವರಿಗೂ ಶಿಕ್ಷೆ’
ಯಾವುದಾದರೂ ಕೋಮಿನವರ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಅಥವಾ ಸಮುದಾಯದ ಮಹಾಪುರುಷರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ ಮಾಡಿದರೂ ಐ.ಟಿ. ಕಾಯ್ದೆ ಪ್ರಕಾರ ಅದು ಶಿಕ್ಷಾರ್ಹ ಅಪರಾಧ. ಇಷ್ಟೇ ಅಲ್ಲ ಕೋಮುಭಾವನೆ ಕೆರಳಿಸುವ ತೇಜೋವಧೆ ಮಾಡುವ ಪೋಸ್ಟ್‌ಗಳು ಬೇರೆ ಯಾರೇ ಮಾಡಿದರೂ ಅದನ್ನು ಫಾರ್ವರ್ಡ್‌ ಮಾಡುವವರ ವಿರುದ್ಧವೂ ಕಾನೂನಿನಲ್ಲಿ ಕ್ರಮಕ್ಕೆ ಅವಕಾಶ ಇದೆ. ಆದಕಾರಣ ಯಾವುದಾದರೂ ಪೋಸ್ಟ್‌ ಮಾಡುವುದಕ್ಕೂ ಮುನ್ನ ಹಲವು ಸಲ ಯೋಚಿಸಬೇಕು ಎನ್ನುತ್ತಾರೆ ಹಿರಿಯ ಪೊಲೀಸ್‌ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT