ಗುಂಡ್ಲುಪೇಟೆ: ಶಾಲಾ ಹಂತದಲ್ಲೇ ಮಕ್ಕಳಿಗೆ ಅರಣ್ಯ, ವನ್ಯಜೀವಿ ಅವುಗಳ ಸಂರಕ್ಷಣೆಯ ಅಗತ್ಯದ ಬಗ್ಗೆ ತಿಳಿ ಹೇಳುವ ಉದ್ದೇಶದಿಂದ ಮಕ್ಕಳನ್ನು ಪ್ರತಿ ದಿನವೂ ಸಫಾರಿಗೆ ಕರೆದೊಯ್ಯುವ ಚಿಂತನೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಆಡಳಿತ ಮಾಡಿದೆ.

ಅದಕ್ಕಾಗಿ ಬಸ್ ಖರೀದಿಸಬೇಕಾಗಿದ್ದು, ಹುಲಿ ಯೋಜನಾ ನಿರ್ದೇಶಕರು ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದು ಜಿಲ್ಲಾ ಖನಿಜ ನಿಧಿಯಿಂದ ಹಣಕಾಸಿನ ನೆರವು ನೀಡುವಂತೆ ಪತ್ರ ಬರೆದಿದ್ದಾರೆ. ಹಿಂದಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿದ್ದಾಗ ಈ ಪತ್ರ ವ್ಯವಹಾರ ನಡೆದಿದೆ. ಹೊಸ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರನ್ನು ಭೇಟಿಯಾಗಿ ಯೋಜನೆ ಬಗ್ಗೆ ವಿವರಿಸುವುದಾಗಿ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್‌ಕುಮಾರ್ ಹೇಳಿದ್ದಾರೆ.

ಸುವರ್ಣ ಸಂಭ್ರಮದ ಕಾರ್ಯಕ್ರಮ: ಈಗಾಗಲೇ ಚಿಣ್ಣರ ವನದರ್ಶನ ಎಂಬ ಕಾರ್ಯಕ್ರಮ ಜಾರಿಯಲ್ಲಿದೆ. ವರ್ಷಕ್ಕೆ ಐದು ಬಾರಿ ಮಾತ್ರ ಮಕ್ಕಳನ್ನು ಅರಣ್ಯದಲ್ಲಿ ಸುತ್ತಾಡಿಸಿ ಕಾಡಿನ ಬಗ್ಗೆ ತಿಳಿಸಿ ಕೊಡಲಾಗುತ್ತಿದೆ.

‘ಬಹುತೇಕ ಮಕ್ಕಳನ್ನು ಈ ಕಾರ್ಯಕ್ರಮದಲ್ಲಿ ತೊಡಗಿಸಲು ಆಗುತ್ತಿಲ್ಲ. ನಮ್ಮ ಜಿಲ್ಲೆಯ ಸಾಕಷ್ಟು ಮಕ್ಕಳು ಇನ್ನೂ ಕಾಡನ್ನು ನೋಡಿಲ್ಲ. ವನ್ಯಜೀವಿಗಳ ಬಗ್ಗೆ ಅವರಿಗೆ ತಿಳಿದಿಲ್ಲ. ಅವರನ್ನು ಖುದ್ದಾಗಿ ಅರಣ್ಯದಲ್ಲಿ ಸುತ್ತಾಡಿಸಿ, ಸಂರಕ್ಷಣೆಯ ಮಹತ್ವವನ್ನು ವಿವರಿಸಿದರೆ ಅದು ಅವರ ಮನಸ್ಸಿಗೆ ನಾಟಲಿದೆ. ಪ್ರತಿ ದಿನವೂ ಒಂದಲ್ಲ ಒಂದು ಶಾಲೆಯ ಮಕ್ಕಳು ಕಾಡು ಸುತ್ತಬೇಕು.ಬಂಡೀಪುರ ಸಂರಕ್ಷಿತ ಪ್ರದೇಶವು 50ನೇ ವರ್ಷದ ಸಂಭ್ರಮಾಚರಣೆಯಲ್ಲಿರುವಾಗ ಈ ಕಾರ್ಯಕ್ರಮ ಜಾರಿಗೊಳಿಸಿದರೆ ಅದಕ್ಕೊಂದು ಮಹತ್ವ ಬರುತ್ತದೆ. ನಮ್ಮಲ್ಲಿರುವ ಸಫಾರಿ ವಾಹನ ಚಿಕ್ಕದು. ಸಫಾರಿಗೆ ಅದು ಬೇಕು. ಹಾಗಾಗಿ, ಇದಕ್ಕಾಗಿ ಬಸ್ ಅಗತ್ಯವಿದೆ. ಡಿಎಂಎಫ್ ನಿಧಿಯಿಂದ ಹಣ ನೀಡಲು ಸಾಧ್ಯವೇ ಎಂದು ಜಿಲ್ಲಾಧಿಕಾರಿ ಅವರನ್ನು ಕೇಳಿದ್ದೇವೆ’ ಎಂದು ರಮೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತರಬೇತಿ: ಸೋಲಿಗರು ಹಾಗೂ ಕಾಡಂಚಿನ ನಿವಾಸಿಗಳಿಗೆ ವಿವಿಧ ಕೌಶಲ ತರಬೇತಿಗಳನ್ನು ನೀಡುವ ಪ್ರಯತ್ನವೂ ಬಂಡೀಪುರದಲ್ಲಿ ನಡೆಯುತ್ತಿದೆ.

‘ಜಿಲ್ಲಾ ಪಂಚಾಯಿತಿಯ ಸಹಯೋಗದಲ್ಲಿ ಲಂಟಾನದಿಂದ ಕರಕುಶಲ ವಸ್ತುಗಳು, ಪೀಠೋಪಕರಣಗಳನ್ನು ತಯಾರಿಸುವ ತರಬೇತಿ ನೀಡಲಾಗುತ್ತಿದೆ. ಇಂತಹ ತರಬೇತಿಗಳನ್ನು ನೀಡುವುದಕ್ಕಾಗಿ ಮೇಲುಕಾಮನಹಳ್ಳಿ ಬಳಿಯ ಸಫಾರಿ ಕ್ಯಾಂಪಸ್ ಬಳಿ ಸಭಾಂಗಣವನ್ನು ನಿರ್ಮಿಸಲು ಮುಂದಾಗಿದ್ದೇವೆ. ಯೋಜನಾ ನಿರ್ದೇಶಕರ ಕಚೇರಿಯೂ ಅಲ್ಲಿಗೇ ಸ್ಥಳಾಂತರ ಗೊಳ್ಳಲಿದೆ’ ಎಂದು ಅವರು ಮಾಹಿತಿ ನೀಡಿದರು.

ವರ್ಷಪೂರ್ತಿ ಕಾರ್ಯಕ್ರಮ

ಬಂಡೀಪುರ ಹುಲಿ ಯೋಜನೆಯ 50ನೇ ವರ್ಷಾಚರಣೆ ಅಂಗವಾಗಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಇಲಾಖೆ ನಿರ್ಧರಿಸಿದೆ.

‘ಸುವರ್ಣ ಸಂಭ್ರಮದ ಅಂಗವಾಗಿ ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಬೇಕು ಎಂಬ ಯೋಚನೆ ಇದೆ. ಐದು ದಶಕಗಳ ಅವಧಿಯಲ್ಲಿ ಹುಲಿ ಯೋಜನೆಯ ಮುಖ್ಯಸ್ಥರಾಗಿದ್ದವರು, ಇಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನು ಕರೆದು ಅವರಿಗೆ ಸನ್ಮಾನ ಮಾಡಲಿದ್ದೇವೆ. ಇಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿಗಳು, ಸಿಬ್ಬಂದಿಯನ್ನು ಕರೆಸಿ, ಬಂಡೀಪುರ ಮುಂದೆ ಹೇಗಿರಬೇಕು ಎಂಬುದರ ಬಗ್ಗೆ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಿದ್ದೇವೆ’ ಎಂದು ರಮೇಶ್‌ಕುಮಾರ್ ತಿಳಿಸಿದರು.

ಅನುದಾನದ ಕೊರತೆ

50ನೇ ವರ್ಷಾಚರಣೆಗಾಗಿ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ವಿಶೇಷ ಅನುದಾನ ಬಿಡುಗಡೆ ಮಾಡಿಲ್ಲ. ಕಾರ್ಯಕ್ರಮದ ರೂಪುರೇಷೆಗಳನ್ನೂ ಹಾಕಿಕೊಂಡಿಲ್ಲ. ಸ್ಥಳೀಯ ಅಧಿಕಾರಿಗಳೇ ಆಸಕ್ತಿಯಿಂದ ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ.

ಬಂಡೀಪುರ ಮಾತ್ರವಲ್ಲದೇ 1973ರಲ್ಲಿ ಆರಂಭಗೊಂಡ ಒಂಬತ್ತು ಹುಲಿಯೋಜನೆಗಳು ಕೂಡ ಈ ವರ್ಷ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿವೆ.

ಸರ್ಕಾರದಿಂದ ಅನುದಾನ ಬಂದಿಲ್ಲ. ತಾತ್ಕಾಲಿಕ ಸಿಬ್ಬಂದಿಯ ವೇತನಕ್ಕೂ ಸ್ಥಳೀಯ ಸಂಪನ್ಮೂಲವನ್ನು ಬಳಸಲಾಗುತ್ತಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಸುವರ್ಣ ವರ್ಷಾಚರಣೆ ಅಂಗವಾಗಿ ಬಂಡೀಪುರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು
-ಡಾ.ರಮೇಶ್‌ಕುಮಾರ್, ಹುಲಿಯೋಜನೆ ನಿರ್ದೇಶಕ

ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಯುತ್ತಿದೆ. ಪರಿಸರಕ್ಕೆ ಹಾನಿ ಇರುವುದು ದೊಡ್ಡವರಿಂದ. ಮಕ್ಕಳೊಂದಿಗೆ, ದೊಡ್ಡವರಲ್ಲೂ ಜಾಗೃತಿ ಮೂಡಿಸಬೇಕು.

-ಆರ್.ಕೆ.ಮಧು, ವನ್ಯಜೀವಿ ಛಾಯಾಗ್ರಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.